samachara
www.samachara.com
ಮಾಸಾಂತ್ಯದ 'ಪಟ್ಟಾಭಿಷೇಕ': ದತ್ತಾ ನೇಮಕಾತಿಗೆ ಇಲಾಖೆಯೊಳಗೇ ಅಸಮಾಧಾನ
ಸುದ್ದಿ ಸಾಗರ

ಮಾಸಾಂತ್ಯದ 'ಪಟ್ಟಾಭಿಷೇಕ': ದತ್ತಾ ನೇಮಕಾತಿಗೆ ಇಲಾಖೆಯೊಳಗೇ ಅಸಮಾಧಾನ

ರಾಜ್ಯ

ಪೊಲೀಸ್ ಮಹಾನಿರ್ದೇಶಕ ಹಾಗೂ ನಿರೀಕ್ಷಕ (ಡಿಜಿ- ಐಜಿ) ಹುದ್ದೆಗೆ ಅಧಿಕಾರಿಗಳ ಹೆಸರು ಶಿಫಾರಸು ಆಗುತ್ತಿದ್ದಂತೆ ಕೊನೆಯ ಹಂತದ ಕಸರತ್ತುಗಳಿಗೆ ಇಲಾಖೆಯೊಳಗೆ ಚಾಲನೆ ಸಿಕ್ಕಿದೆ.

ಗಣಿ ಹಗರಣದ ತನಿಖೆ ತನಿಖೆ ಸಮಯದಲ್ಲಿ ಲೋಕಾಯುಕ್ತದಲ್ಲಿ ಎಡಿಜಿಪಿ ಆಗಿದ್ದ, ಹಾಲಿ ಕೇಂದ್ರ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿ ಆಗಿರುವ ರೂಪಕ್ ಕುಮಾರ್ ದತ್ತಾ ರಾಜ್ಯ ಸೇವೆಗೆ ವಾಪಾಸಾಗದಂತೆ ತಡೆಯುವ ನಿಟ್ಟಿನಲ್ಲಿ ಇಲಾಖೆಯೊಳಗಿನ ಒಂದು ಬಣ ಕಸರತ್ತು ನಡೆಸುತ್ತಿದೆ. ಅದಕ್ಕೆ ಇರುವ ಪ್ರಮುಖ ಕಾರಣಗಳು, ಹಿಂದೆ ಲೋಕಾಯುಕ್ತದಲ್ಲಿದ್ದ ಸಮಯದಲ್ಲಿ ದತ್ತಾ, ಪೊಲೀಸ್ ಅಧಿಕಾರಿಗಳ ಮೇಲೆ ನಡೆಸಿದ ದಾಳಿಗಳು ಎನ್ನುತ್ತವೆ ಮೂಲಗಳು.

'ಸಮಾಚಾರ'ಕ್ಕೆ ಅನೌಪಚಾರಿಕವಾಗಿ ಸಿಕ್ಕಿರುವ ಅಂಕಿ ಅಂಶಗಳೂ ಕೂಡ ಇದನ್ನೇ ಹೇಳುತ್ತಿವೆ. ರೂಪಕ್ ಕುಮಾರ್ ದತ್ತಾ, ಲೋಕಾಯುಕ್ತದಲ್ಲಿದ್ದ ಸಮಯದಲ್ಲಿ ಸುಮಾರು 284 ದಾಳಿಗಳನ್ನು ನಡೆಸಿದ್ದರು. ವಿಶೇಷ ಎಂದರೆ, ಇದರಲ್ಲಿ 90ಕ್ಕೂ ಹೆಚ್ಚು ದಾಳಿಗಳು ನಡೆದಿದ್ದು ಪೊಲೀಸ್ ಅಧಿಕಾರಿಗಳ ಮೇಲೆ. ಸದ್ಯ 30ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳ ಮೇಲಿನ ಪ್ರಕರಣಗಳಲ್ಲಿ ಬಿ- ರಿಪೋರ್ಟ್ ಸಲ್ಲಿಸಲಾಗಿದೆ. 10ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಸಿಕ್ಕಿದೆ. ಇವತ್ತಿಗೂ ರೂಪಕ್ ಕುಮಾರ್ ದತ್ತಾ ಸಮಯದಲ್ಲಿ ದಾಳಿಗೆ ಒಳಗಾದ ಅಧಿಕಾರಿಗಳ ಪೈಕಿ 50ಕ್ಕೂ ಹೆಚ್ಚು ಮಂದಿ ನ್ಯಾಯಾಲಯದಲ್ಲಿ ಬಡಿದಾಡುತ್ತಿದ್ದಾರೆ.

ದತ್ತಾ ಬಗ್ಗೆ ಅಸಮಾಧಾನ:

ರೂಪಕ್ ಕುಮಾರ್ ದತ್ತಾ ಪ್ರಮಾಣಿಕತೆ ವಿಚಾರಕ್ಕೆ ಬಂದರೆ ಎಲ್ಲಿಯೂ ಹೆಸರು ಕೆಡಿಸಿಕೊಳ್ಳದ ಅಧಿಕಾರಿ. ಲೋಕಾಯುಕ್ತದಲ್ಲಿದ್ದ ಸಮಯದಲ್ಲಿ ಗಣಿ ಹಗರಣವನ್ನು ಬಲಿಗೆಳೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೇಂದ್ರ ಸೇವೆಗೆ ಹೋದ ನಂತರ ಸಿಬಿಐನಲ್ಲಿಯೂ ಕಲ್ಲಿದ್ದಲು, 2 ಜಿ ಹಗರಣಗಳ ತನಿಖೆಯ ಹೊಣೆಯನ್ನು ಹೊತ್ತುಕೊಂಡಿದ್ದರು. ಸೇವಾ ಹಿರಿತನದ ಆಧಾರದ ಮೇಲೆ ದತ್ತಾ ಸಿಬಿಐ ನಿರ್ದೇಶಕರಾಗುವ ಸಾಧ್ಯತೆಯೂ ಇತ್ತು. ಆದರೆ, ಕೊನೆಯ ಕ್ಷಣದಲ್ಲಿ ಅವರನ್ನು ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ದತ್ತಾ ಮತ್ತೆ ರಾಜ್ಯ ಸೇವೆಗೆ ವಾಪಾಸಾಗುವ ಮನಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಹಿಂದೆ, ಅವರು ಸೇವೆಯಲ್ಲಿರುವಾಗಲೇ ಕಾನೂನು ಪದವಿ ಪಡೆದ ಆರೋಪ ನ್ಯಾಯಾಲಯದ ಮೆಟ್ಟಿಲೇರಿತ್ತು. ಅದನ್ನು ಸುಪ್ರಿಂ ಕೋರ್ಟ್ ರದ್ದುಗೊಳಿಸಿರುವುದರಿಂದ ತೊಡಕುಗಳು ನಿವಾರಣೆಯಾಗಿವೆ. 'ಈಗಾಗಲೇ ಅವರನ್ನು ಸಂಪರ್ಕಿಸುವ ಸರಕಾರ, ರಾಜ್ಯದ ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಆಸಕ್ತಿ ಹೊಂದಿದ್ದೀರಾ ಎಂದು ಕೇಳಿದೆ' ಎಂದು ವರದಿಗಳು ಹೇಳುತ್ತಿವೆ. ಸೋಮವಾರ ನಡೆದ ಉನ್ನತಾಧಿಕಾರ ಸಮಿತಿ ಪೊಲೀಸ್ ಮಹಾನಿರ್ದೇಶಕರ ಹುದ್ದೆಗಾಗಿ ಅವರ ಹೆಸರಿಗೆ ಮೊದಲ ಮನ್ನಣೆ ನೀಡಿ, ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದೆ. ಹೀಗಾಗಿ, ದತ್ತಾ ರಾಜ್ಯಕ್ಕೆ ಮರಳುವ ಸಾಧ್ಯತೆಗಳು ಹೆಚ್ಚಿವೆ.

ಆದರೆ, ಪೊಲೀಸ್ ಇಲಾಖೆಯೊಳಗೆ ದತ್ತಾ ಅವರ ನೇಮಕದ ಕುರಿತು ಅಸಮಾಧಾನಗಳಿವೆ. ಅದಕ್ಕೆ ಪ್ರಮುಖ ಕಾರಣವಾಗಿರುವುದು ಮೇಲಿನ ಅಂಕಿ ಅಂಶಗಳು. "ತಾವು ಪ್ರಾಮಾಣಿಕರು ಎಂದು ತೋರಿಸಿಕೊಳ್ಳುವ ಭರಾಟೆಯಲ್ಲಿ ದತ್ತಾ ಇಲಾಖೆಯ ಅಧಿಕಾರಿಗಳ ಮೇಲೆಯೇ ದಾಳಿ ನಡೆಸಿದ್ದರು. ಅವುಗಳಲ್ಲಿ ಅರ್ಧದಷ್ಟು ಪ್ರಕರಣಗಳು ಇವತ್ತು ಬಿದ್ದು ಹೋಗಿವೆ. ಆದರೆ ಅದರಿಂದ ಅನುಭವಿಸಿದ ಹಿಂಸೆಗಳಿಗೆ ಬೆಲೆ ಇಲ್ಲವಾ?'' ಎನ್ನುತ್ತಾರೆ ಹಿಂದೊಮ್ಮೆ ಲೋಕಾಯುಕ್ತ ದಾಳಿಗೆ ಒಳಗಾದ ಅಧಿಕಾರಿಯೊಬ್ಬರು.

ಈ ಬೆಳವಣಿಗೆಗಳ ಕುರಿತು ಪ್ರತಿಕ್ರಿಯೆಗಾಗಿ ದಿಲ್ಲಿಯಲ್ಲಿರುವ ದತ್ತಾ ಅವರ ಕಚೇರಿಯನ್ನು 'ಸಮಾಚಾರ' ಸಂಪರ್ಕಿಸಿತಾದರೂ ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಸಾಧ್ಯಾಸಾಧ್ಯತೆಗಳು:

ದತ್ತಾ ಅವರ ನಂತರ ಸ್ಥಾನದಲ್ಲಿ ನೀಲಮಣಿ ರಾಜು ಮತ್ತು ಕಿಶೋರ್ ಚಂದ್ರ ಅವರ ಹೆಸರುಗಳಿವೆ. ಒಂದು ವೇಳೆ ದತ್ತಾ ಡಿಜಿ ಐಜಿ ಹುದ್ದೆಗೆ ಬಾರದಿದ್ದರೆ ಮಹಿಳಾ ಅಧಿಕಾರಿ ನೀಲಮಣಿ ಅಥವಾ ಕರ್ನಾಟಕ ಮೂಲದ ಕಿಶೋರ್ ಚಂದ್ರ ಅವರಿಗೆ ಅವಕಾಶ ಸಿಗಲಿದೆ.

ಮುಂದಿನ ಸಂಪುಟ ಸಭೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯ ದಂಡನಾಯಕನ ಸ್ಥಾನಕ್ಕೆ ಶಿಫಾರಸು ಮಾಡಿರುವ ಹೆಸರುಗಳು ಔಪಚಾರಿಕವಾಗಿ ಚರ್ಚೆಗೆ ಬರಲಿವೆ. ಅಂತಿಮವಾಗಿ ಸಿಎಂ ಸಿದ್ದರಾಮಯ್ಯ ತೆಗೆದುಕೊಳ್ಳುವ ತೀರ್ಮಾನ ನೇಮಕಾತಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿಲಿದೆ.

ಈ ನಡುವೆ, ಸದ್ಯ ಡಿಜಿ ಐಜಿ ಆಗಿರುವ ಓಂ ಪ್ರಕಾಶ್ ತಮ್ಮನ್ನು ಇನ್ನೂ ಮೂರು ತಿಂಗಳ ಅವಧಿಗೆ ಮುಂದುವರಿವಂತೆ ಕೋರಿದ್ದಾರೆ ಎಂದು ಅವರ ಹತ್ತಿರದ ಮೂಲಗಳು ಹೇಳುತ್ತವೆ. ಅದನ್ನು ಸರಕಾರ ಅಂಗೀಕರಿಸುವ ಸಾಧ್ಯತೆಗಳು ಕಡಿಮೆ ಇದೆಯಾದರೂ, ಕಾಂಗ್ರೆಸ್ನ ಕೇಂದ್ರ ನಾಯಕರೊಬ್ಬರ ಮಧ್ಯಪ್ರವೇಶಿಸುವ ಸಾಧ್ಯತೆಗಳೂ ಇವೆ.

ಒಟ್ಟಾರೆ, ಈ ಎಲ್ಲಾ ಬೆಳವಣಿಗಳ ಹಿನ್ನೆಲೆಯಲ್ಲಿ ತಿಂಗಳ ಅಂತ್ಯಕ್ಕೆ ಪೊಲೀಸ್ ಇಲಾಖೆಯ ಅತ್ಯುನ್ನತ ಸ್ಥಾನಕ್ಕೆ ನಡೆಯಲಿರುವ 'ಪಟ್ಟಾಭಿಷೇಕ' ಸಹಜವಾಗಿಯೇ ಕುತೂಹಲ ಮೂಡಿಸಿದೆ.