samachara
www.samachara.com
'ಬಂಧಿಸುವಾಗ ಗಂಡು- ಜೈಲಿನಲ್ಲಿ ಹೆಣ್ಣು': ವಿಕಿಲೀಕ್ಸ್ ಸೋರಿಕೆ ಪ್ರಕರಣದ ಚೆಲ್ಸಿಯಾಗೆ ಕ್ಷಮಾದಾನ
ಸುದ್ದಿ ಸಾಗರ

'ಬಂಧಿಸುವಾಗ ಗಂಡು- ಜೈಲಿನಲ್ಲಿ ಹೆಣ್ಣು': ವಿಕಿಲೀಕ್ಸ್ ಸೋರಿಕೆ ಪ್ರಕರಣದ ಚೆಲ್ಸಿಯಾಗೆ ಕ್ಷಮಾದಾನ

samachara

samachara

ಜ್ಯೂಲಿಯನ್

ಅಸಾಂಜೆ ನೇತೃತ್ವದ 'ವಿಕಿಲೀಕ್ಸ್'ಗೆ ಸುಮಾರು 7 ಲಕ್ಷ ಸೇನಾ ದಾಖಲೆಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ 35 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಚೆಲ್ಸಿಯಾ ಮ್ಯಾನಿಂಗ್ ಕೆಲವೇ ದಿನಗಳಲ್ಲಿ ಹೊರಬರಲಿದ್ದಾಳೆ.

ಅಮೆರಿಕಾದ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆಡಳಿತಾವಧಿಯನ್ನು ಕೊನೆಗೊಳಿಸುವ ಮೊದಲು ಚೆಲ್ಸಿಯಾ ಸೇರಿದಂತೆ ಸುಮಾರು 209 ಜನರ ಜೈಲು ಶಿಕ್ಷೆಯನ್ನು ಮೊಟಕುಗೊಳುಸುವ ಅಚ್ಚರಿಯ ತೀರ್ಮಾನವನ್ನು ಪ್ರಕಟಿಸಿದ್ದಾರೆ. ಹೀಗಾಗಿ, ಅಮೆರಿಕಾ ಇತಿಹಾಸದಲ್ಲಿಯೇ ಅತಿ ದೊಡ್ಡ ಮಾಹಿತಿ ಸೋರಿಕೆ ಎಂದು ಕರೆಸಿಕೊಂಡಿದ್ದ ಪ್ರಕರಣದ ಆರೋಪಿಗೆ ಕ್ಷಮಾದಾನ ದೊರಕಿದಂತಾಗಿದೆ.

ಜಗತ್ತಿನಾದ್ಯಂತ ಸರಕಾರಿ ದಾಖಲೆಗಳು ಸೋರಿಕೆ ವಿಚಾರ ಮತ್ತು ಸರಕಾರಗಳ ಪಾರದರ್ಶಕತೆ ಚರ್ಚೆ ಬಂದಾಗಲೆಲ್ಲಾ ಚೆಲ್ಸಿಯಾ ಮ್ಯಾನಿಂಗ್ ಹೆಸರು ಕೇಳಿಬರುತ್ತಿತ್ತು. ಈಕೆ ಅಮೆರಿಕಾ ಸೇನೆಯ ವಿಶ್ಲೇಷಕಿಯಾಗಿ ಕೆಲಸ ಮಾಡುತ್ತಿದ್ದಳು. ಈ ಸಮಯದಲ್ಲಿ ಸುಮಾರು 7 ಲಕ್ಷ ರಹಸ್ಯ ದಾಖಲೆಗಳನ್ನು ವಿಕಿಲೀಕ್ಸ್ ವೆಬ್ ತಾಣಕ್ಕೆ ಹಸ್ತಾಂರಿಸಿದ್ದಳು. ಅವುಗಳಲ್ಲಿ ಇರಾಕಿನಲ್ಲಿ ಅಮೆರಿಕಾ ಸೇನೆ ಶಾಲಾ ಮಕ್ಕಳ ಮೇಲೆ ಗುಂಡಿನ ದಾಳಿ ನಡೆಸಿದ ವಿಡಿಯೋ ಕೂಡ ಇತ್ತು. ಅಂತಹ ದಾಖಲೆಗಳನ್ನು ಪ್ರಕಟಿಸಿದ್ದ ವಿಕಿಲೀಕ್ಸ್ ಭಾರಿ ಸುದ್ದಿಯನ್ನು ಮಾಡಿತ್ತು.

ಕೊನೆಯ ಕ್ಷಣದಲ್ಲಿ ಒಬಾಮ ತೆಗೆದುಕೊಂಡ ತೀರ್ಮಾನದಿಂದಾಗಿ ಚೆಲ್ಸಿಯಾ ಜೈಲುವಾಸ 35 ವರ್ಷದಿಂದ 7 ವರ್ಷಕ್ಕೆ ಇಳಿದಿದೆ. ಹೀಗಾಗಿ ಕೆಲವು ತಿಂಗಳುಗಳಲ್ಲಿ ಆಕೆ ಸ್ವತಂತ್ರ ನಾಗರಿಕಳಾಗಿ ಬದುಕುವ ಅವಕಾಶ ಹೊರಕಿದಂತಾಗಿದೆ.

ವೈಟ್ ಹೌಸಿನಿಂದ ಹೊರಹೋಗುತ್ತಿರುವ ಒಬಾಮ ತೆಗೆದುಕೊಂಡ ಈ ತೀರ್ಮಾನ ರಿಪಬ್ಲಿಕನ್ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದೆ. "ಇದರಿಂದ ಇನ್ನಷ್ಟು ಸರಕಾರಿ ದಾಖಲೆಗಳು ಸೋರಿಕೆಯಾಗುವ ಸಾಧ್ಯತೆ ಇದೆ. ಅಂತವರಿಗೆ ಪ್ರೇರಣೆ ನೀಡದಂತೆ ಆಗುತ್ತದೆ,'' ಎಂದು ಪಕ್ಷದ ವಕ್ತಾರ ಪೌಲ್ ರೇಯನ್ ಆರೋಪಿಸಿದ್ದಾರೆ.

ಗಂಡು ಅಲ್ಲ ಹೆಣ್ಣು: 

ಗಮನಾರ್ಹ ಅಂಶ ಏನೆಂದರೆ, 2007ರಲ್ಲಿ ಬ್ರಾಡ್ಲಿ ಮ್ಯಾನಿಂಗ್ ಆಗಿದ್ದ ಚೆಲ್ಸಿಯಾ ವಿಕಿಲೀಕ್ಸ್ಗೆ ದಾಖಲೆಗಳನ್ನು ಸೋರಿಕೆ ಮಾಡುವ ಮೂಲಕ ಬಂಧನಕ್ಕೆ ಒಳಗಾಗಿದ್ದ. ಜೈಲಿಗೆ ಹೋದ ನಂತರ ಆತ ತಾನು ಹೆಣ್ಣು ಎಂಬುದನ್ನು ಬಹಿರಂಗಗೊಳಿಸಿದ್ದ. ಜತೆಗೆ, ಬ್ರಾಡ್ಲಿ ಮ್ಯಾನಿಂಗ್ ಆಗಿದ್ದ ಹೆಸರನ್ನು ಚೆಲ್ಸಿಯಾ ಮ್ಯಾನಿಂಗ್ ಎಂದು ಬದಲಾಯಿಸಿಕೊಂಡಿದ್ದಳು. ಸದ್ಯ ಆಕೆಯ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿರುವುದರಿಂದ ಇದೇ ಮೇ. 17ಕ್ಕೆ ಜೈಲಿನಿಂದ ಹೊರಬರಲಿದ್ದಾಳೆ.

ತನ್ನಿಂದ ಆದ ತಪ್ಪನ್ನು ಚೆಲ್ಸಿಯಾ ಒಪ್ಪಿಕೊಂಡಿದ್ದಳು. ಕಳೆದ ವರ್ಷ ಎರಡು ಬಾರಿ ಜೈಲಿನಲ್ಲಿಯೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು ಕೂಡ. ಅಮೆರಿಕಾರ ಕನ್ಸಾಸ್ ಪುರುಷರ ಜೈಲಿನಲ್ಲಿ ಸಲಿಂಗಿಗಳ ಜತೆ ಆಕೆ ಹೊಂದಿಕೊಳ್ಳಲು ಒದ್ದಾಡುತ್ತಿದ್ದಳು. ಆಕೆಯ ಮಾನಸಿಕ ಸ್ಥಿತಿ ತೀರ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಒಬಾಮ ಆಕೆಗೆ ಕ್ಷಮಾದಾನ ನೀಡುವ ತೀರ್ಮಾನ ತೆಗೆದುಕೊಂಡಿರಬಹುದು ಎನ್ನಲಾಗುತ್ತಿದೆ. ಜತೆಗೆ, ಆಕೆಯಂತೆಯೇ ಅಪರಾಧ ಎಸಗಿದವರಿಗೆ ನೀಡಿದ ಶಿಕ್ಷೆಗೆ ಆಕೆಗೆ ನೀಡಿದ್ದ ಶಿಕ್ಷೆಯ ಪ್ರಮಾಣ ಅಧಿಕವಾಗಿತ್ತು. ಶುಕ್ರವಾರ ಒಬಾಮ ತಮ್ಮ ಕಚೇರಿಯನ್ನು ತೊರೆಯಲಿದ್ದಾರೆ. ಬುಧವಾರ ಅವರ ಕೊನೆಯ ಪತ್ರಿಕಾಗೋಷ್ಠಿ ನಡೆಯಲಿದೆ. ಇಲ್ಲಿ ಈ ಕುರಿತು ಇನ್ನಷ್ಟು ವಿವರಗಳನ್ನು ಅವರು ನೀಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಸ್ವಾಗತಾರ್ಹ ಕ್ರಮ:

ಚೆಲ್ಸಿಯಾ ಪ್ರಕರಣ ಅಮೆರಿಕಾದಲ್ಲಿ ಸಾಮಾಜಿಕವಾಗಿ ಭಿನ್ನ ಅಭಿಪ್ರಾಯಗಳನ್ನು ಮೂಡಿಸಿತ್ತು. ಸುಮಾರು 1 ಲಕ್ಷ ಜನ ಆಕೆಯನ್ನು ಬಿಡುಗಡೆ ಮಾಡುವಂತೆ ಕೋರಿ ವೈಟ್ ಹೌಸ್ಗೆ ಬರೆದ ಪತ್ರಕ್ಕೆ ಸಹಿ ಹಾಕಿದ್ದರು. ಕೆಲವರು ಆಕೆಗೆ ಉಗ್ರ ಶಿಕ್ಷೆಯೇ ಆಗಬೇಕು ಎಂದು ವಾದಿಸಿದ್ದರು. ಒಬಾಮಾರ ಈ ಕ್ರಮವನ್ನು ಅಮ್ನೆಸ್ಟಿ ಸೇರಿದಂತೆ ಮಾನವ ಹಕ್ಕು ಸಂಘಟನೆಗಳು ಸ್ವಾಗತಿಸಿವೆ. ಸರಕಾರಗಳು ಪಾರದರ್ಶಕವಾಗಿಬೇಕು ಎಂದು ಎಂದು ಬಯಸುವವರಿಗೆ ಶಿಕ್ಷೆ ನೀಡುವುದು ಸರಿಯಾದ ಕ್ರಮವಲ್ಲ ಎಂದು ಅವು ಹೇಳಿವೆ.