ಮೇಲಾಧಿಕಾರಿಗಳು v/s ಸೈನಿಕರು: ಇದು 'ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್'ನ ಇನ್ನೊಂದು ಮುಖ!
ಸುದ್ದಿ ಸಾಗರ

ಮೇಲಾಧಿಕಾರಿಗಳು v/s ಸೈನಿಕರು: ಇದು 'ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್'ನ ಇನ್ನೊಂದು ಮುಖ!

ಅರೆಸೇನಾ

ಪಡೆಗಳಲ್ಲಿ ಒಂದಾದ ಗಡಿ ರಕ್ಷಣಾ ಪಡೆ (ಬಿಎಸ್ಎಫ್) ಕ್ಯಾಂಪ್ಗಳಲ್ಲಿ ಅಧಿಕಾರಿಗಳು ಇಂಧನ ಮತ್ತು ಆಹಾರವನ್ನು ಸಾರ್ವಜನಿಕರಿಗೆ ಮಾರುಕಟ್ಟೆರ ಅರ್ಧ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಸಂಗತಿಯನ್ನು ‘ದಿ ಎಕಾನಮಿಕ್ ಟೈಮ್ಸ್’ ವರದಿ ಮಾಡಿದೆ.

ಶ್ರೀನಗರ ವಿಮಾನ ನಿಲ್ದಾಣ ಸಮೀಪದ ಹುಮ್ಹಾಮಾ ಬಿಎಸ್ಎಫ್ ಕೇಂದ್ರ ಕಚೇರಿಯ ಪಕ್ಕದಲ್ಲಿರುವ ಅಂಗಡಿಗಳ ಮಾಲಿಕರು ಪೆಟ್ರೋಲ್ ಮತ್ತು ಡೀಸೆಲ್ ಫಲಾನುಭವಿಗಳಾಗಿದ್ದಾರೆ. ಇದೇ ರೀತಿ ಆಹಾರಗಳನ್ನೂ ಮಾರುತ್ತಾರೆ ಎಂದು ಓರ್ವ ಜವಾನ ಹಾಗೂ ನಾಗರಿಕರು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ. “ಅವರು (ಬಿಎಸ್ಎಫ್ ಅಧಿಕಾರಿಗಳು) ಬೇಳೆ, ತರಕಾರಿ ಸೇರಿದಂತೆ ಆಹಾರ ಪದಾರ್ಥಗಳನ್ನು ಕ್ಯಾಂಪ್ ಹೊರಗಿರುವ ನಾಗರಿಕರಿಗೆ ಮಾರುತ್ತಾರೆ. ಈ ಮೂಲಕ ನಮ್ಮ ಸೌಲಭ್ಯಗಳನ್ನು ಕಸಿದುಕೊಳ್ಳುತ್ತಾರೆ. ಇದೇ ರೀತಿ ನಮ್ಮ ದಿನ ಬಳಕೆಯ ವಸ್ತುಗಳನ್ನೂ ಹೊರಗೆ ಮಾರುತ್ತಾರೆ,” ಎಂದು ಜವಾನರೊಬ್ಬರು ಹೇಳಿದ್ದಾರೆ.

ನಾಗರೀಕರೊಬ್ಬರು ಇದಕ್ಕೆ ದನಿಗೂಡಿಸಿದ್ದು, “ಹುಮ್ಹಾಮಾ ಕ್ಯಾಂಪಿನ ಅಧಿಕಾರಿಗಳಿಂದ ಮಾರುಕಟ್ಟೆ ದರದ ಅರ್ಧ ಬೆಲೆಗೆ ನಾವು ಪೆಟ್ರೋಲ್ ಪಡೆಯುತ್ತೇವೆ. ಇದೇ ರೀತಿ ಅಕ್ಕಿ ಮತ್ತು ಸಾಂಬಾರ ಪದಾರ್ಥಗಳೂ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ,” ಎಂದಿದ್ದಾರೆ. ಹಲವರು ಇದೇ ರೀತಿಯ ಮಾತುಗಳನ್ನಾಡಿದ್ದು, ಗೃಹೋಪಯೋಗಿ ವಸ್ತುಗಳ ಡೀಲರ್ ಒಬ್ಬರು “ಫರ್ನಿಚರ್ಗಳಿಗೆ ಆರ್ಡರ್ ಕೊಡುವ ಅಧಿಕಾರಗಳು ನಾವು ತೆಗೆದುಕೊಳ್ಳುವ ಕಮಿಷನ್ನಿಗಿಂತ ಹೆಚ್ಚಿನ ಕಮಿಷನ್ ಹೊಡೆಯುತ್ತಾರೆ,” ಎಂದಿದ್ದಾರೆ. “ಬಿಎಸ್ಎಫ್ ನಲ್ಲಿ ಇ-ಟೆಂಡರಿಂಗ್ ವ್ಯವಸ್ಥೆಯೇ ಇಲ್ಲ. ಅಧಿಕಾರಿಗಳೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಾರೆ, ಕಮಿಷನ್ ಜೇಬಿಗಿಳಿಸಿಕೊಳ್ಳುತ್ತಾರೆ; ಅವುಗಳ ಗುಣಮಟ್ಟದ ಬಗ್ಗೆ ತಲೆಯೂ ಕೆಡಿಸಿಕೊಳ್ಳುವುದಿಲ್ಲ,” ಎಂದಿದ್ದಾರೆ.

ಬಿಎಸ್ಎಫ್ ನ 29ನೇ ಬೆಟಾಲಿಯನ್ನಿನ ಜವಾನ ತೇಜ್ ಬಹದ್ದೂರ್ ಯಾದವ್ ಅರೆಸೇನಾಪಡೆಯ ಅಧಿಕಾರಿಗಳ ಭ್ರಷ್ಟಾಚಾರದ ಕುರಿತು ಮೂರು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಭಾನುವಾರ ಪೋಸ್ಟ್ ಮಾಡಿದ್ದರು. ಇದು ವೈರಲ್ ಆಗುತ್ತಿದ್ದಂತೆ ಬಿಎಸ್ಎಫ್ ಅಧಿಕಾರಿಗಳಿಂದ ಸೈನಿಕರ ಮೇಲಾಗುತ್ತಿರುವ ಅನ್ಯಾಯಗಳ ಪಟ್ಟಿ ಬಯಲಾಗುತ್ತಿದೆ. ಬಿಎಸ್ಎಫ್ ಸೈನಿಕರೊಬ್ಬರು ಗೃಹ ಇಲಾಖೆಗೆ ಸೇನಾ ಪಡೆಯಲ್ಲಿ ನೀಡಲಾಗುತ್ತಿರುವ ಕಳಪೆ ಆಹಾರ, ಶಸ್ತ್ರಾಸ್ತ್ರ ಮತ್ತು ಕರ್ತವ್ಯದ ಸಮಯಗಳ ಕುರಿತು 9 ಪುಟಗಳ ಪತ್ರವನ್ನು ಬರೆದಿದ್ದಾರೆ. ಪತ್ರವನ್ನು 'ಇಂಡಿಯ ಟುಡೆ' ಬಯಲಿಗೆಳೆದಿದೆ.

ಜನರ ತೆರಿಗೆ ಹಣದಲ್ಲಿ ವಾರ್ಷಿಕ ಸುಮಾರು 14 ಸಾವಿರ ಕೋಟಿ ರೂಪಾಯಿಗಳನ್ನು ಗಡಿ ರಕ್ಷಣಾ ಪಡೆಗೆ ವಿನಿಯೋಗಿಸಲಾಗುತ್ತಿದೆ. ಆದರೆ, ಮೇಲಾಧಿಕಾರಿಗಳ ವ್ಯಾಪಕ ಭ್ರಷ್ಟಾಚಾರದಿಂದಾಗಿ ಸೈನಿಕರಿಗೆ ಕಳಪೆ ಆಹಾರ ಮತ್ತು ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪಗಳು ಈಗ ಸುದ್ದಿಕೇಂದ್ರದಲ್ಲಿ ಸದ್ದು ಮಾಡುತ್ತಿವೆ. ತೇಜ್ ಬಹದ್ದೂರ್ ವಿಡಿಯೋ ಹೊರಬೀಳುತ್ತಿದ್ದಂತೆ ಬಿಎಸ್ಎಪ್ ವೈಯಕ್ತಿಕ ತೇಜೋವಧೆಗೆ ಇಳಿಯಿತು. .ಸದ್ಯ ಗೃಹ ಇಲಾಖೆ ವರದಿನೀಡುವಂತೆ ಸೂಚಿಸಿದೆ.

ಈ ಹಿನ್ನೆಲೆಯಲ್ಲಿ ಬಿಎಸ್ಎಫ್ ಒಳಗಿನ ಭ್ರಷ್ಟಾಚಾರದ ಕುರಿತು ಮಾಹಿತಿಯನ್ನು ಹುಡುಕಿಕೊಂಡು ಹೊರಟರೆ, ಸ್ಮಗ್ಲಿಂಗ್ ದಂಧೆ, ಗೋ ಸಾಗಣೆ ಸೇರಿದಂತೆ ಹತ್ತು ಹಲವು ಅಂಶಗಳು ಬೆಳಕಿಗೆ ಬರುತ್ತವೆ.

ಲಾರಿಗಳಿಂದ ಹಫ್ತಾ ವಸೂಲಿ:

2012 ಅಕ್ಟೋಬರಿನಲ್ಲಿ ಭಾರತ ಪಾಕಿಸ್ತಾನ ಗಡಿಯಲ್ಲಿ ಸರಕು ಸಾಗಣೆ ಮಾಡುವ ಲಾರಿಗಳ ಚಾಲಕರು ಪಂಜಾಬಿನ ಅಟ್ಟಾರಿಯಲ್ಲಿ ಪ್ರತಿಭಟನೆಗೆ ಇಳಿದಿದ್ದರು. ಬಿಎಸ್ಎಫ್ ಮತ್ತು ಚೆಕ್ ಪೋಸ್ಟ್ ಅಧಿಕಾರಿಗಳು ಲಂಚ ತೆಗೆದುಕೊಳ್ಳುತ್ತಾರೆ ಎಂಬುದು ಅವರ ಆರೋಪವಾಗಿತ್ತು. “ಲಂಚ ನೀಡದಿದ್ದಲ್ಲಿ 5-6 ದಿನ ಟ್ರಕ್ಕುಗಳನ್ನು ಸಾಲಾಗಿ ನಿಲ್ಲಿಸಿಟ್ಟುಕೊಳ್ಳುತ್ತಾರೆ. ಹಸಿ ತರಕಾರಿಗಳು ಮತ್ತು ಟೋಮೊಟೋಗಳನ್ನು ಸಾಗಿಸುವ ನಮ್ಮ ಟ್ರಕ್ಕುಗಳ ಗತಿ ಏನಾಗಬೇಕು,” ಎಂದು ಅವರೆಲ್ಲಾ ಪ್ರಶ್ನಿಸಿದ್ದರು. ಲಂಚ ನೀಡಿದರೆ ಮಾತ್ರ ಗಾಡಿಗಳನ್ನು ಬಿಡುತ್ತಾರೆ. ಲಂಚ ನೀಡಿ ನೀಡಿ ಸಾಕಾಗಿದೆ ಎಂದು ಅವರು ಅವತ್ತು ದೂರಿದ್ದರು.

ರೈಡ್ ವೇಳೆ ಸಿಕ್ಕ ವಸ್ತುಗಳ ಸ್ವಂತಕ್ಕೆ:

1992ರಲ್ಲಿ ಕಾಶ್ಮೀರದ ಕೆಲವು ಬಂಡುಕೋರರ ಮನೆಗಳ ಮೇಲೆ ಬಿಎಸ್ಎಫ್ ಯೋಧರು ದಾಳಿ ಮಾಡಿದ್ದರು. ಡಿಐಜಿ ಅಶೋಕ್ ಕುಮಾರ್ ಈ ದಾಳಿಯ ಮುಂದಾಳತ್ವ ವಹಿಸಿದ್ದರು. ಈ ದಾಳಿಗಳಲ್ಲಿ ದೊಡ್ಡ ಮಟ್ಟಕ್ಕೆ ಶಸ್ತ್ರಾಸ್ತ್ರ, ಮದ್ದು ಗುಂಡುಗಳು, ಚಿನ್ನ ಸೇರಿದಂತೆ ಮನೆ ಬಳಕೆಯ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ ಉನ್ನತ ಅಧಿಕಾರಿಗಳಿಗೆ ವಶ ಪಡಿಸಿಕೊಂಡ ವಸ್ತುಗಳ ಪಟ್ಟಿ ಕೊಡುವಾಗ ಇವು ಯಾವುದೂ ಪಟ್ಟಿಯಲ್ಲಿ ಇರಲೇ ಇಲ್ಲ. 31 ಶಸ್ತ್ರಾಸ್ತ್ರಗಳ ಜಾಗದಲ್ಲಿ 22 ಮಾತ್ರ ಇತ್ತು. ಇನ್ನು 2 ಪಿಸ್ತೂಲ್, 5 ಎಕೆ-56 ಗನ್, 1 ರಾಕೆಟ್ ಲಾಂಚರ್, 1 ದೂರದರ್ಶಕ ಇರುವ ರೈಫಲ್ ಗಳು ಪಟ್ಟಿಯಲ್ಲಿ ಇರಲೇ ಇಲ್ಲ. 31 ಚಿನ್ನದ ಆಭರಣಗಳ ಜಾಗದಲ್ಲಿ 6ನ್ನು ಮಾತ್ರ ಪಟ್ಟಿಯಲ್ಲಿ ತೋರಿಸಲಾಗಿತ್ತು. ಅದನ್ನೆಲ್ಲಾ ಕಾಳ ಸಂತೆಯಲ್ಲಿ ಮಾರಿದ ಆರೋಪ ಅಧಿಕಾರಿಯ ಮೇಲೆ ಕೇಳಿ ಬಂದಿತ್ತು. ಇತ್ತೀಚೆಗಷ್ಟೆ ಅಶೋಕ್ ಕುಮಾರ್ ಸುಪ್ರಿಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಹುದ್ದೆಯಿಂದ ವಜಾ ಆದರು.

ಮಾದಕ ವಸ್ತು ಜಾಲದಲ್ಲಿ ಬಿಎಸ್ಎಫ್:

ಮೇಲಾಧಿಕಾರಿಗಳು v/s ಸೈನಿಕರು: ಇದು 'ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್'ನ ಇನ್ನೊಂದು ಮುಖ!

'ಮಾದಕ ವಸ್ತು ಕಳ್ಳ ಸಾಗಣೆದಾರರ ಜತೆ ಬಿಎಸ್ಎಫ್ ಕೈ ಜೋಡಿಸಿದೆ' ಎಂದು ಆರೋಪ ಮಾಡಿದವರು ಮತ್ಯಾರೂ ಅಲ್ಲ; ಬಿಜೆಪಿಯ ಮಿತ್ರ ಪಕ್ಷ ಮತ್ತು ಪಂಜಾಬಿನಲ್ಲಿ ಅಧಿಕಾರದಲ್ಲಿರುವ ಶಿರೋಮಣಿ ಅಕಾಲಿದಳ ಸೇನೆಯ ಮೇಲೆ ಇಂಥಹದ್ದೊಂದು ಗಂಭೀರ ಆರೋಪವೊಂದನ್ನು ಮಾಡಿತ್ತು. ಬಿಎಸ್ಎಫ್ ಪಾಕಿಸ್ತಾನದಿಂದ ಭಾರತಕ್ಕೆ ಹರಿದು ಬರುವ ಮಾದಕ ವಸ್ತು ಜಾಲದಲ್ಲಿ ಕೈಜೋಡಿಸಿದೆ ಎಂಬುದು ಆರೋಪದ ತಿರುಳಾಗಿತ್ತು. ‘ಉಡ್ತಾ ಪಂಜಾಬ್’ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ನಡೆದ ವಾದ ವಿವಾದಗಳಲ್ಲಿ ಪಂಜಾಬ್ ಮಾದಕ ಲೋಕದ ಸುತ್ತ ನಡೆದ ಚರ್ಚೆಗಳು ಬಿಎಸ್ಎಫ್ ಅಧಿಕಾರಿಗಳನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದವು.

ಇದಕ್ಕೆಲ್ಲಾ ಸಾಕ್ಷಿ ಎಂಬಂತೆ ವರ್ಷದಿಂದ ವರ್ಷಕ್ಕೆ ಬಿಎಸ್ಎಫ್ ನಿಂದ ವಶ ಪಡಿಸಿಕೊಂಡ ಮಾದಕ ವಸ್ತುಗಳ ಪ್ರಮಾಣವೂ ಹೆಚ್ಚಾಗುತ್ತಲೇ ಸಾಗಿರುವುದನ್ನು ಗಮನಿಸಬಹುದು. 2011ರಲ್ಲಿ 67 ಕೆಜಿ, 2012ರಲ್ಲಿ 288 ಕೆಜಿ, 2013ರಲ್ಲಿ 322 ಕೆಜಿ, 2014ರಲ್ಲಿ 361 ಕೆಜಿ, 2015ರಲ್ಲಿ 344 ಕೆಜಿ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಕೊಕೇನ್ ಮತ್ತು ಹೆರಾಯಿನ್ ಹೆಚ್ಚಿನ ಪ್ರಮಾಣದಲ್ಲಿವೆ.

ಹಾಗೆ ನೋಡಿದರೆ ಭಾರತ ಪಾಕಿಸ್ತಾನ ಗಡಿಯನ್ನು 24×7 ಯೋಧರು ಕಾಯುತ್ತಲೇ ಇರುತ್ತಾರೆ. ಎಲ್ಲಾ ಕಡೆಗಳಲ್ಲೂ ಚೆಕ್ ಪೋಸ್ಟ್ ಗಳಿವೆ; ಸಿಸಿ ಕ್ಯಾಮೆರಾಗಳಿವೆ. ಹೀಗಿದ್ದೂ ಡ್ರಗ್ಸ್ ಪಾಕಿಸ್ತಾನದಿಂದ ದೇಶಕ್ಕೆ ಗಡಿ ಮೂಲಕವೇ ಬರುವುದು ಅಚ್ಚರಿ ಮೂಡಿಸುತ್ತದೆ. ಈ ಕುರಿತಂತೆ 2015ರಲ್ಲಿ ಬಿಎಸ್ಎಫ್ ಗೃಹ ಇಲಾಖೆಗೆ ವರದಿಯೊಂದನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ತನ್ನ ಮೇಲಿನ ಆರೋಪಗಳನ್ನೆಲ್ಲಾ ಅಲ್ಲಿನ ಸ್ಥಳೀಯ ನಾಗರಿಕರ ಹೆಗಲಿಗೆ ದಾಟಿಸಿ ಕೈ ತೊಳೆದುಕೊಂಡಿತ್ತು. “ಸ್ಥಳೀಯ ಹಳ್ಳಿಗಳ ನಾಗರಿಕರು ತಲೆತಲಾಂತರದಿಂದ ಮಾದಕ ವಸ್ತುಗಳ ಕಳ್ಳ ಸಾಗಣೆ ಮಾಡಿಕೊಂಡು ಬಂದಿದ್ದಾರೆ. ಈಗ ಮಾಡುತ್ತಿರುವವರು ಮೂರನೇ ತಲೆಮಾರು. ಹೀಗಾಗಿ ಇವರನ್ನು ಹಿಡಯುವುದು ಕಷ್ಟ,” ಎಂದು ವರದಿ ನೀಡಿತ್ತು. ಅಲ್ಲದೆ ಗಡಿಯಲ್ಲಿ ಭತ್ತದ ಗದ್ದೆಗಳೆಲ್ಲಾ ಇದ್ದು ಮಳೆ ಗಾಳಿಗೆಲ್ಲಾ ಸಿಸಿ ಕ್ಯಾಮೆರಾಗಳು ಆಗಾಗ ಕೆಟ್ಟು ಹೋಗುತ್ತಿರುತ್ತವೆ. ಇದರಿಂದ ಕಳ್ಳ ಸಾಗಣೆದಾರರನ್ನು ಹಿಡಿಯುವುದು ಕಷ್ಟ ಎಂದು ಹೇಳಿ ತಮ್ಮ ಮೇಲಿನ ಆರೋಪಕ್ಕೆ ತಿಪ್ಪೆ ಸಾರಿಸಿತು.

ವಾಸ್ತವದಲ್ಲಿ ಗಡಿಯಲ್ಲಿ ಎರಡೂ ದೇಶಗಳ ನಡುವೆ ವಸ್ತುಗಳ ವಿನಿಮಯ ಮಾಡಲು ಏಜೆಂಟರಿದ್ದಾರೆ. ಇವರನ್ನು ಕೊರಿಯರ್ಗಳು ಎಂದು ಕರೆಯಲಾಗುತ್ತದೆ. ಹೀಗೆ ಪಾಕಿಸ್ತಾನದಿಂದ ಭಾರತಕ್ಕೆ ಬರುವ ಒಂದು ಕೊರಿಯರ್ಗೆ ಅಧಿಕಾರಿಗಳಿಗೆ 60,000 ಹಣ ನೀಡಬೇಕು.

ಇವೆಲ್ಲಾ ಹಳೆ ಕತೆಗಳಾದರೆ ಕಳೆದ ಕೆಲವು ದಿನಗಳ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿಗಳು ಮಾಜಿ ಬಿಎಸ್ಎಫ್ ಅಧಿಕಾರಿಯೊಬ್ಬರನ್ನು ಪಂಜಾಬಿನಲ್ಲಿ ಬಂಧಿಸಿತ್ತು. ಮಾದಕವಸ್ತುಗಳ ಕಳ್ಳ ಸಾಗಣೆಯಲ್ಲಿ ತೊಡಗಿಸಿಕೊಂಡ ಆರೋಪವನ್ನು ಇವರ ಮೇಲೆ ಹೊರಿಸಲಾಗಿದೆ.

ಅಕ್ರಮ ಗೋಸಾಗಟದಲ್ಲೂ ಬಿಎಸ್ಎಫ್ ಕೈವಾಡ:

ಮೇಲಾಧಿಕಾರಿಗಳು v/s ಸೈನಿಕರು: ಇದು 'ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್'ನ ಇನ್ನೊಂದು ಮುಖ!

ಮಾದಕ ವಸ್ತುಗಳ ಕಳ್ಳ ಸಾಗಣೆಯದ್ದು ಒಂದು ಕತೆಯಾದರೆ ಅತ್ತ ಬಾಂಗ್ಲಾದೇಶ ಗಡಿಯಲ್ಲಿ ನಡೆಯುವ ದನ ಸಾಗಣೆಯಲ್ಲಿ ಬಿಎಸ್ಎಫ್ ಪಾತ್ರವಿದೆ. ಇಲ್ಲಿನ ಗಡಿಯಲ್ಲಿ ಒಂದು ದನ ಭಾರತದಿಂದ ಬಾಂಗ್ಲಾದೇಶಕ್ಕೆ ಹೋದರೆ ಬಿಎಸ್ಎಫ್ ಅಧಿಕಾರಿ 5,000 ರೂಪಾಯಿ ಪಡೆಯುತ್ತಾನೆ. ಈ ರೀತಿ ಕಳ್ಳಸಾಗಣೆ ಮಾಡುವ ಜಾಲವೇ ಬಾಂಗ್ಲಾ ಗಡಿಯಲ್ಲಿದ್ದು, ರಾತ್ರಿ ಹೊತ್ತು ಸ್ಥಳೀಯ ಕಾರ್ಮಿಕರು ಈ ಕೆಲಸ ಮಾಡಿಕೊಡುತ್ತಾರೆ. ಹೀಗೆ ಒಂದು ದನ ಗಡಿ ದಾಟಿಸಿದರೆ ಕಾರ್ಮಿಕರು 200 ರೂಪಾಯಿ ಜೇಬಿಗಿಳಿಸಿಕೊಳ್ಳುತ್ತಾರೆ.

ಇದು ಬಿಎಸ್ಎಫ್ ನ ಕಳ್ಳಸಾಗಣೆ ಮತ್ತು ಭ್ರಷ್ಟಚಾರದ ಕತೆಗಳ ಜಸ್ಟ್ ಸ್ಯಾಂಪಲ್ ಅಷ್ಟೆ. ಈ ರೀತಿ ನಡೆಯವ ಕಳ್ಳ ಸಾಗಣೆಯಲ್ಲಿ ತಮಗೆ ಮಾಮೂಲಿ ಕಡಿಮೆಯಾಯಿತು, ಸರಿಯಾಗಿ ಹಫ್ತಾ ಕೊಡಲಿಲ್ಲ ಎಂದು ಬಾಂಗ್ಲಾ ಗಡಿಯಲ್ಲಿ ಜನರನ್ನು ಕ್ರೂರವಾಗಿ ಹಿಂಸಿಸಿದ ಘಟನೆಗಳೂ ನೂರಾರಿವೆ. ಜೂನ್ 2014 ರಲ್ಲಿ ಈ ಕುರಿತು ರಾಷ್ಟ್ರೀಯ ಮಾನವಹಕ್ಕು ಆಯೋಗದಲ್ಲಿ ದೂರು ಕೂಡಾ ದಾಖಲಾಗಿತ್ತು. ಬಿಎಸ್ಎಫ್ ನ ಅತ್ಯಾಚಾರ, ಕಿಡ್ನಾಪ್, ಕೊಲೆ, ದರೋಡೆಯ ಪ್ರಕರಣಗಳದ್ದೇ ಸುದೀರ್ಘ ಕತೆ.

ಇದೇ ರೀತಿಯ ಕತೆಗಳು ಸಿಆರ್ಪಿಎಫ್ ಗೂ ಅನ್ವಯವಾಗುತ್ತದೆ. ಆದರೆ ಎಲ್ಲಾ ಕಡೆಗಳಲ್ಲೂ ಹೀಗೆಯೇ ಇರುವುದಿಲ್ಲ. ಇತ್ತೀಚೆಗೆ ಸಿಆರ್ಪಿಎಫ್ ಐಜಿ ರವೀಂದ್ರ ಸಿಂಗ್ ಸಾಹಿಯಾರನ್ನು ಶ್ರೀನಗರ ಆಡಳಿತ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಸದ್ಯ ಅವರು ಈ ರೀತಿಯ ಕಳ್ಳ ಸಾಗಣೆ ತಡೆಗಟ್ಟಲು ಹೊರಟಿದ್ದಾರೆ. “ಸೇನಾಪಡೆಗಳಿಗೆ ಜವಾನ ತುಂಬಾ ಮುಖ್ಯ. ಆತ ಸೇವೆಯಲ್ಲಿರುವಾಗ ಆತನಿಗೆ ಯಾವುದೇ ಕೊರತೆಯಾಗಬಾರದು,” ಎಂದು ಹೇಳಿದ್ದರು.

ಸದ್ಯ ಬಿಎಸ್ಎಫ್ ಮೇಲಾಧಿಕಾರಿಗಳ ಭ್ರಷ್ಟತೆಯ ಸುತ್ತ ದೇಶದಲ್ಲಿ ಚರ್ಚೆಗಳು ಗರಿಗೆದರಿವೆ. 'ಬಾರ್ಡರ್ ಸ್ಮಗ್ಲಿಂಗ್ ಫೋರ್ಸ್' ಎಂದು ಬಿಎಸ್ಎಫ್ ಹೊತ್ತುಕೊಂಡಿರುವ ಕಳಂಕವನ್ನು ತೊಳೆದುಕೊಳ್ಳಲಾದರೂ ಈ ಬಾರಿ ಸೈನಿಕರ ಆರೋಪಗಳಿಗೆ ದೇಶ ಕಿವಿಯಾಗಬೇಕಿದೆ.