ಸುದ್ದಿ ಸಾಗರ

'ಕ್ರೀಡಾ ರಾಜಕೀಯ': ಕರ್ನಾಟಕದ ಮಹಿಳಾ ಕ್ರೀಡಾಪಟುಗಳ ಮೇಲೆ ದಿಲ್ಲಿಯಲ್ಲಿ ಹಲ್ಲೆ

ಬೆಂಗಳೂರಿನಲ್ಲಿ

ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಚಾರದಲ್ಲಿ ದಿಲ್ಲಿ ಕೇಂದ್ರಿತ ರಾಷ್ಟ್ರೀಯ ಮಾಧ್ಯಮಗಳು 'ಸುದ್ದಿ ಗದ್ದಲ'ವನ್ನು ಎಬ್ಬಿಸಿವೆ. ಅದೇ ವೇಳೆ, ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಕ್ರೀಡಾಕೂಟದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರ ಮೇಲೆ ಹಲ್ಲೆ ನಡೆದಿದೆ. ಘಟನೆ ನಡೆದು 24 ಗಂಟೆಗಳು ಕಳೆದಿದ್ದರೂ, ಈವರೆಗೆ ತಮಿಳುನಾಡಿನ ವಾಹಿನಿಗಳನ್ನು ಹೊರತು ಪಡಿಸಿ, ರಾಷ್ಟ್ರೀಯ ಮಾಧ್ಯಮಗಳಾಗಲೀ, ಕರ್ನಾಟಕದ ಮಾಧ್ಯಮಗಳಲ್ಲಿ 'ಗದ್ದಲ' ಹಾಳಾಗಿ ಹೋಗಲೀ, ಸುದ್ದಿಯೂ ಪ್ರಸಾರವಾಗಿಲ್ಲ.

ಈ ಸಮಯದಲ್ಲಿ ದಿಲ್ಲಿಯಲ್ಲಿ ನಡೆದ ಘಟನೆಯ ಕುರಿತು 'ಸಮಾಚಾರ'ಕ್ಕೆ ಸಿಕ್ಕಿರುವ ಚಿತ್ರಗಳು, ವಿಡಿಯೋಗಳನ್ನು ಒಳಗೊಂಡ ವಿಸ್ತೃತ ವರದಿಯನ್ನು ಇಲ್ಲಿ ನೀಡುತ್ತಿದೆ.

ನಡೆದಿದ್ದೇನೆ?:

‘ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ’ ವತಿಯಿಂದ ಶಾಲಾ ಮಕ್ಕಳಿಗಾಗಿಯೇ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತದೆ. ಪ್ರತಿ ಕ್ರೀಡಾ ವಿಭಾಗದಿಂದ ದೇಶದ ನಾನಾ ಕಡೆಗಳಲ್ಲಿ ಈ ಕೂಟಗಳು ಜರುಗುತ್ತವೆ. ಅದರ ಭಾಗವಾಗಿ ಈ ಬಾರಿ ದಿಲ್ಲಿಯ ರೋಹಿಣಿ ನಗರದಲ್ಲಿರುವ ಯುವ ಶಕ್ತಿ ಮಾಡೆಲ್ ಶಾಲೆಯಲ್ಲಿ ರಾಷ್ಟ್ರೀಯ ಥ್ರೋ ಬಾಲ್ ಚಾಂಪಿಯನ್ಶಿಪ್ ಆಯೋಜಿಸಲಾಗಿತ್ತು. ಇದರಲ್ಲಿ ಕರ್ನಾಟಕದ ನಾನಾ ಶಾಲೆಗಳ ಆಯ್ದ ವಿದ್ಯಾರ್ಥಿನಿಯರನ್ನು ಒಳಗೊಂಡ ತಂಡವೂ ಭಾಗವಹಿಸಿತ್ತು.

ಗುರುವಾರ ನಡೆದ ಸೆಮಿ ಫೈನಲ್ ಪಂದ್ಯದ ಮೇಲೆ ಕರ್ನಾಟಕದ ತಂಡ ಚತ್ತೀಸ್‍ಗಢ ತಂಡವನ್ನು ಎದುರಿಸಿತು. “ಆರಂಭದಿಂದಲೂ ಅವರ ಪರವಾಗಿಯೇ ರೆಫ್ರಿ ನಡೆದುಕೊಂಡರು. ಹೀಗಾಗಿ ನಾವು ಮೊದಲ ಎರಡೂ ಸೆಟ್ ಸೋಲುವಂತಾಯಿತು,’’ ಎಂದು ಮಾಹಿತಿ ನೀಡುತ್ತಾರೆ ಕ್ರೀಡಾಪಟು ಗೌರಿಶ್ರೀ.

ಇವರು ಶಿವಮೊಗ್ಗ ಜಿಲ್ಲೆಯ ಆಗುಂಬೆಯ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಾರೆ. ಚತ್ತೀಸ್‍ಗಢ ಎದುರು ಸೋತ ಕರ್ನಾಟಕದ ವಿದ್ಯಾರ್ಥಿನಿಯರ ತಂಡ ಮೂರನೇ ಸ್ಥಾನಕ್ಕಾಗಿ ತೆಲಂಗಾಣ ವಿರುದ್ಧ ಸೆಣಸಾಟ ನಡೆಸಿತು. “ಮೊದಲ ಸೆಟ್ನಲ್ಲಿ ನಾವು ಗೆದ್ದೆವು. ಎರಡನೇ ಸೆಟ್ನಲ್ಲಿ ತೆಲಂಗಾಣ ತಂಡ ಜಯಗಳಿಸಿತು. ಮೂರನೇ ಸೆಟ್ ಡ್ರಾ ಆಯಿತು. ಈ ಸಮಯದಲ್ಲಿ ಟೆಕ್ನಿಕಲ್ ಥ್ರೋ ಮಾಡುವಾಗ ನಮಗೆ ಮೋಸ ಮಾಡಿದರು. ಹೀಗಾಗಿ ನಾವು ಸೋತು ಹೊರಬಂದೆವು,’’ ಎಂದು ಗೌರಿಶ್ರೀ ವಿವರಿಸಿದರು.

ನಂತರ ನಡೆದ ಫೈನಲ್ ಪಂದ್ಯದಲ್ಲಿ ತೆಲಂಗಾಣ ಮತ್ತು ದಿಲ್ಲಿ ತಂಡಗಳು ಸೆಣಸಿದರು. ಆಗ ದಿಲ್ಲಿ ಪರವಾಗಿ ತೀರ್ಪು ನೀಡಿದರು ಎಂದು ಆರೋಪಿಸಿ ತೆಲಂಗಾಣ ತಂಡದವರು ಕೋರ್ಟ್ ಒಳಗಡೆಯೇ ಪ್ರತಿಭಟನೆ ಶುರುಮಾಡಿದರು. ಜತೆಗೆ ತಮಿಳುನಾಡಿನವರೂ ಸೇರಿಕೊಂಡರು. ಈ ಸಮಯದಲ್ಲಿ ಕರ್ನಾಟಕದ ವಿದ್ಯಾರ್ಥಿನಿಯರೂ ತಮಗೆ ಅನ್ಯಾಯವಾಗಿದೆ ಎಂದು ಘೋಷಣೆಗಳನ್ನು ಕೂಗತೊಡಗಿದರು.

ಕೋರ್ಟ್ ಒಳಗೇ ಪ್ರತಿಭಟನೆ ನಡೆಸುತ್ತಿರುವ ಕ್ರೀಡಾಪಟುಗಳು.

“ಈ ಸಮಯದಲ್ಲಿ ನಮಗೆ ದಿಲ್ಲಿ ಹುಡುಗರು ಹೊಡೆಯಲು ಬಂದರು. ಅವರನ್ನು ತಡೆದ ಕ್ರೀಡಾಕೂಟದ ಆಯೋಜಕರು ಹುಡುಗಿಯರನ್ನು ಬಿಟ್ಟು ಹೊಡೆಸಿದರು,’’ ಎಂದು ಗೌರಿಶ್ರೀ ಮತ್ತು ಸ್ನೇಹಿತೆಯರು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು. ಇದಕ್ಕೆ ಸಾಕ್ಷಿ ಎಂಬಂತೆ ವಿಡಿಯೋವನ್ನು ಹಂಚಿಕೊಂಡರು.

ವಿಡಿಯೋದಲ್ಲಿ ಸ್ಪಷ್ಟವಾಗಿ ದಿಲ್ಲಿಯ ಯುವತಿಯರು ಕರ್ನಾಟಕದ ವಿದ್ಯಾರ್ಥಿನಿರ ಮೇಲೆ ಹಲ್ಲೆಗೆ ಮುಂದಾಗುತ್ತಾರೆ. ಈ ಸಮಯದಲ್ಲಿ ಕ್ರೀಡಾಕೂಟದ ಆಯೋಜಕರು ತಡೆಯಲು ಮುಂದಾಗುವುದಿಲ್ಲ. ಕೊನೆಗೆ ಅದು ಎರಡೂ ತಂಡಗಳ ನಡುವೆ ಮಾರಾಮಾರಿಯಲ್ಲಿ ಕೊನೆಯಾಗುತ್ತದೆ. ಇದಾದ ತಕ್ಷಣವೇ ತಮಿಳುನಾಡಿನ ವಾಹಿನಿಗಳು ಸ್ಥಳಕ್ಕೆ ಬಂದು ವರದಿ ಮಾಡಿವೆ. "ಕರ್ನಾಟಕದ ತಂಡದ ಮ್ಯಾನೇಜರ್ ಸಿಗಲಿಲ್ಲ. ನಾವು ತಮಿಳುನಾಡಿನ ತಂಡದ ಜತೆ ಸೇರಿ ಲಿಖಿತ ದೂರು ನೀಡಿದೆವು,'' ಎಂದು ವಿದ್ಯಾರ್ಥಿನಿಯೊಬ್ಬರ ತಂದೆ ಬಸವಾನಿ ಸುರೇಶ್ ಮಾಹಿತಿ ನೀಡಿದರು.

ತಮಿಳುನಾಡಿನ ವಾಹಿನಿಗಳಲ್ಲಿ ದಿಲ್ಲಿಯ ಕ್ರೀಡಾಕೂಟದ ಮಾರಾಮಾರಿಯ ವರದಿ. 

ಘಟನೆ ಕುರಿತು ಥ್ರೋ ಬಾಲ್ ಇಂಡಿಯಾ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ನರೇಶ್ ಮಾನ್ ಅವರನ್ನು ಸಂಪರ್ಕಿಸಿದಾಗ, “ಗಲಾಟೆ ಏನೂ ನಡೆದಿಲ್ಲ. ಕರ್ನಾಟಕ, ತಮಿಳುನಾಡು ತಂಡಗಳು ತಗಾದೆ ತೆಗೆದು ರೆಫ್ರೀಗಳಿಗೆ ಹೊಡೆಯಲು ಹೋದರು. ಅದು ಬಿಟ್ಟರೇ ಇನ್ನೇನೂ ನಡೆದಿಲ್ಲ,’’ ಎಂದರು.

ನಂತರ ಅವರು ತೆಲಂಗಾಣ ತಂಡ ತರಬೇತುದಾರ ಜಗನ್ ಅವರಿಗೆ ದೂರವಾಣಿಯನ್ನು ಹಸ್ತಾಂತರಿಸಿದರು. “ಗಲಾಟೆ ಏನೂ ನಡೆದಿಲ್ಲ. ಕರ್ನಾಟಕದ ತಂಡದವರು ಮೋಸವಾಗಿದೆ ಎಂದು ಕೋರ್ಟ್ ಬಿಟ್ಟು ಹೊರ ಹೋಗಲು ನಿರಾಕರಿಸಿದರು. ಈ ಸಮಯದಲ್ಲಿ ಆಯೋಜಕರು ಅವರನ್ನು ಹೊರಕ್ಕೆ ಕಳುಹಿಸಿದರು,’’ ಎಂದು ಎಂದವರು ಪ್ರತಿಕ್ರಿಯೆ ನೀಡಿದರು. ಜತೆಗೆ, ಈ ಕುರಿತು ರಾಷ್ಟ್ರೀಯ ಫೆಡರೇಶನ್ಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.

ಕ್ರೀಡಾ ರಾಜಕೀಯ:

ಕ್ರೀಡೆಗಳ ವಿಚಾರಕ್ಕೆ ಬಂದರೆ ದೇಶ, ರಾಷ್ಟ್ರಾಭಿಮಾನದ ಪ್ರಶ್ನೆ ಮೇಲ್ನೋಟಕ್ಕೆ ಇರುತ್ತದೆ. ಆದರೆ ಆಳದಲ್ಲಿ ಪ್ರಾದೇಶಿಕ ರಾಜಕೀಯ ಇಲ್ಲಿ ಮನೆಮಾಡಿದೆ. “ಥ್ರೋ ಬಾಲ್ ವಿಚಾರಕ್ಕೆ ಬಂದರೆ ದಿಲ್ಲಿ ಯಾವಾಗಲೂ ಮೋಸದಾಟವನ್ನೇ ನೆಚ್ಚಿಕೊಂಡಿದೆ. ಇದು ಮೊದಲ ಬಾರಿ ಏನಲ್ಲ. ಇಂತಹ ಹಲವು ಘಟನೆಗಳು ನಡೆದಿವೆ. ದಿಲ್ಲಿಯಲ್ಲಿ ಕ್ರೀಡಾಕೂಟಗಳು ಆಯೋಜನೆಯಾದಾಗ ಅವರಿಗೆ ಬೇಕಾದ ರೆಫ್ರೀಗಳನ್ನೇ ಹಾಕಿಕೊಂಡು ನಡೆಸಲಾಗುತ್ತದೆ. ಈ ಸಮಯದಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುತ್ತಲೇ ಬಂದಿದೆ,’’ ಎನ್ನುತ್ತಾರೆ ಕರ್ನಾಟಕ ಮೂಲದ ಥ್ರೋ ಬಾಲ್ ರೆಫ್ರೀ ಒಬ್ಬರು.

ಭವಿಷ್ಯದ ಹಿನ್ನೆಲೆಯಲ್ಲಿ ತಮ್ಮ ಗುರುತನ್ನು ಹಂಚಿಕೊಳ್ಳಲು ನಿರಾಕರಿಸಿದ ಅವರು, ಫೆಡರೇಶನ್ನಿನಲ್ಲಿ ದಿಲ್ಲಿ ಕೇಂದ್ರಿತ ರಾಜಕೀಯ ಹೇಗೆಲ್ಲಾ ನಡೆಯುತ್ತದೆ ಎಂದು ವಿವರಿಸಿದರು. “ಥ್ರೂ ಬಾಲ್ ವಿಚಾರಕ್ಕೆ ಬಂದರೆ ಕರ್ನಾಟಕ ಮತ್ತು ತಮಿಳುನಾಡಿನ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಾರೆ. ಪ್ರಾಮಾಣಿಕವಾಗಿ ಆಡುತ್ತಾರೆ. ಆದರೆ, ದಿಲ್ಲಿಯಲ್ಲಿ ಅವರು ಗೆಲ್ಲುವುದು ಕಷ್ಟ. ನೀವು ಕಳೆದ ಐದು ವರ್ಷಗಳ ಅಂತರದಲ್ಲಿ ದಿಲ್ಲಿಯಲ್ಲಿ ನಡೆದ ಕ್ರೀಡಾಕೂಟಗಳ ಮಾಹಿತಿಯನ್ನು ತೆಗೆದು ನೋಡಿ. ದಿಲ್ಲಿಯೇ ಪ್ರತಿ ಬಾರಿಯೂ ಗೆಲ್ಲುವಂತೆ ಮೊದಲಿನಿಂದಲೂ ವೇಳಾಪಟ್ಟಿಯಲ್ಲಿ ರೂಪಿಸಲಾಗುತ್ತದೆ,’’ ಎಂದವರು ವಿವರಿಸುತ್ತಾರೆ.

ಮರಳಿ ಮನೆಗೆ:

ಸದ್ಯ ಗೊಂದಲದಲ್ಲಯೇ ಮುಕ್ತಾಯಗೊಂಡಿರುವ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ರಾಜ್ಯಕ್ಕೆ ವಾಪಾಸಾಗುತ್ತಿದ್ದಾರೆ. "ಮಕ್ಕಳಿಗೆ ಪರೀಕ್ಷೆ ಬಿಡಿಸಿ ಕ್ರೀಡೆ ಕಾರಣಕ್ಕೆ ಅಷ್ಟು ದೂರು ಕರೆದುಕೊಂಡು ಹೋಗಿದ್ದೆವು. ಆದರೆ ರಾಜಕೀಯ ಕಾರಣಕ್ಕೆ ಅನ್ಯಾಯವಾಗಿದೆ. ಅದು ಅವರ ಮೇಲೆ ಎಂತಹ ಪರಿಣಾಮ ಬೀರಬಹುದು ಎಂದು ಊಹಿಸಿ. ನಮಗೆ ಹೊರರಾಜ್ಯದಲ್ಲಿ ಅನ್ಯಾಯವಾಗಿದೆ ಎಂದು ಜನರಿಗೆ ಗೊತ್ತಾಗಬೇಕು. ಆ ಕಾರಣಕ್ಕಾಗಿಯಾದರೂ ವರದಿ ಪ್ರಕಟಿಸಿ,'' ಎಂದು ನೋವನ್ನು ತೋಡಿಕೊಂಡರು ಪೋಷಕರಾದ ಸುರೇಶ್.

ಇದೇ ಜ. 11ರ ಸಂಜೆ 7 ಗಂಟೆಗೆ ಕರ್ನಾಟಕದ ವಿದ್ಯಾರ್ಥಿನಿಯ ತಂಡ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ಅವರ ಬಳಿ ಮೆಡಲ್, ಪಾರಿತೋಷಕಗಳಿಲ್ಲ, ಬದಲಿಗೆ, ಕ್ರೀಡಾ ಉತ್ಸಾಹ ಮತ್ತು ಅದರ ಸುತ್ತಲಿನ ರಾಜಕೀಯದ ದಟ್ಟ ಅನುಭವಗಳನ್ನು ಹೊತ್ತುಕೊಂಡು ಅವರು ಮನೆಗೆ ಮರಳುತ್ತಿದ್ದಾರೆ.