samachara
www.samachara.com
ಪಟಿಯಾಲಾ ಬ್ಯಾಂಕಿನಿಂದ ಅಂತರಾಷ್ಟ್ರೀಯ ಸಿನಿಮಾದವರೆಗೆ; ಬಹುಭಾಷಾ ನಟ ಓಂ ಪುರಿ ಇನ್ನು ನೆನಪು ಮಾತ್ರ
ಸುದ್ದಿ ಸಾಗರ

ಪಟಿಯಾಲಾ ಬ್ಯಾಂಕಿನಿಂದ ಅಂತರಾಷ್ಟ್ರೀಯ ಸಿನಿಮಾದವರೆಗೆ; ಬಹುಭಾಷಾ ನಟ ಓಂ ಪುರಿ ಇನ್ನು ನೆನಪು ಮಾತ್ರ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

“ಧೈರ್ಯ ಮತ್ತು ಪರಿಪೂರ್ಣ ಅಭಿನಯಕ್ಕೆ ನಾನು ಅಸೂಯೆ ಪಡುವ, ಜೀವಂತವಾಗಿರುವ ಏಕೈಕ ನಟ ಓಂ ಪುರಿ,” ಹೀಗಂತ ಭಾರತದ ಖ್ಯಾತ ನಟ ನಾಸೀರುದ್ದೀನ್ ಶಾ ‘ಅನ್ಲೈಕ್ಲೀ ಹೀರೋ ಓಂ ಪುರಿ’ ಪುಸ್ತಕದ ಮುನ್ನುಡಿಯಲ್ಲಿ ಬರೆದುಕೊಂಡಿದ್ದರು. ಆದರೆ ಅದೇ ವ್ಯಕ್ತಿ ಈಗ ನೆನಪು ಮಾತ್ರ.

ಗುರುವಾರ ಸಂಜೆ ಮುಂಬೈನಲ್ಲಿ ಓಂ ಪುರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು. ಶುಕ್ರವಾರ ಬೆಳಿಗ್ಗೆ ಎಂದಿನಂತೆ ಓಂ ಪುರಿ ಮನೆಗೆ ಬಂದು ಅವರ ಕಾರ್ ಡ್ರೈವರ್ ಬಾಗಿಲು ಬಡಿದಿದ್ದಾರೆ. ಆದರೆ ಬಾಗಿಲು ತೆರೆದುಕೊಳ್ಳದಿದ್ದಾಗ, ಡ್ರೈವರ್ ಮಾಹಿತಿ ನೀಡಿದ್ದಾರೆ. ಆಗ ಪುರಿ ಹೃದಯಾಘಾತದಿಂದ ಸಾವನ್ನಪ್ಪಿರುವ ವಿಚಾರ ಗೊತ್ತಾಗಿದೆ.

ಓಂ ಪುರಿ ಹುಟ್ಟಿದ್ದು ಅಕ್ಟೋಬರ್ 18, 1950ರಂದು. ಹರ್ಯಾಣದ ಅಂಬಾಲ ಪುರಿಯ ಹುಟ್ಟೂರು. ತಮ್ಮ ಬಾಲ್ಯವನ್ನೆಲ್ಲಾ ಓಂ ಪುರಿ ಕಳೆದಿದ್ದು ಪಂಜಾಬ್’ನ ಪಟಿಯಾಲಾ ಜಿಲ್ಲೆಯ ಸನೌರ್‌ನಲ್ಲಿದ್ದ ತಮ್ಮ ಸೋದರ ಮಾವನ ಮನೆಯಲ್ಲಿ. ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣ ಸಂಸ್ಥೆ (ಎಫ್.ಟಿ.ಐ.ಐ)ಯಿಂದ ಪದವಿ ಪಡೆದ ಪುರಿ ಮುಂದೆ ರಾಷ್ಟ್ರೀಯ ನಾಟಕ ಶಾಲೆ (ಎನ್.ಎಸ್.ಟಿ) ಸೇರಿಕೊಂಡರು. ಅಲ್ಲಿ ಪುರಿಗೆ ಸಹಪಾಠಿಯಾಗಿ ಸಿಕ್ಕಿದ್ದು ಖ್ಯಾತ ನಟ ನಾಸೀರುದ್ದೀನ್‌ ಷಾ. 1973ರಲ್ಲಿ ನಾಟಕ ಶಾಲೆಯಿಂದ ತೇರ್ಗಡೆಯಾಗಿ ಬಂದ ಪುರಿ, 1976ರಲ್ಲಿ ‘ಘಾಶಿರಾಮ್ ಕೊತ್ವಾಲಾ’ ಎಂಬ ಮರಾಠಿ ಸಿನಿಮಾದ ಮೂಲಕ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು.

ನಾಸಿರುದ್ದೀನ್ ಶಾ ನೆನಪಿನ ಬುತ್ತಿಯಲ್ಲಿ ಓಂ ಪುರಿ:

ಆರಂಭದಲ್ಲಿ ಓಂ ಪುರಿ ‘ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ’ದಲ್ಲಿ ನೌಕರಿಯಲ್ಲಿದ್ದರು. ಅಲ್ಲಿಂದ ಅವರನ್ನು ನಟನಾ ಕ್ಷೇತ್ರಕ್ಕೆ ಎಳೆದು ತಂದವರೇ ನಾಸಿರುದ್ದೀನ್ ಶಾ. ಮುಂಬೈಗೆ ಓಂ ಪುರಿಯನ್ನು ಕರೆಸಿಕೊಂಡು ಶಾ ಸಿನಿಮಾದಲ್ಲಿ ನಟಿಸುವಂತೆ ಸಲಹೆ ನೀಡುತ್ತಾರೆ. ಓಂ ಪುರಿ ಸಿನಿಮಾಗೆ ಪಾದಾರ್ಪಣೆ ಮಾಡುವ ಮೊದಲೇ ಓಂ ಶಿವಪುರಿ ಎಂಬ ನಟ ನಾಟಕಗಳಲ್ಲಿ ಜನಪ್ರಿಯನಾಗಿರುತ್ತಾನೆ. ಆ ನಟನ ಜನಪ್ರಿಯತೆಯಲ್ಲಿ ಎಲ್ಲಿ ನಾನು ಕಳೆದು ಹೋಗುತ್ತೇನೋ ಎಂಬ ಭಯದಲ್ಲಿ ಓಂ ಪುರಿ ಹೆಸರು ಬದಲಾಯಿಸುವ ಯೋಚನೆ ಮಾಡಿದ್ದರು. ಆಗ ನಾಸಿರುದ್ದೀನ್ ಶಾ ವಿನಮ್ರ ಕುಮಾರ್ ಮತ್ತು ಅಂತಿಮ್ ಖನ್ನಾ ಎಂಬ ಎರಡು ಹೆಸರುಗಳನ್ನು ಸೂಚಿಸುತ್ತಾರೆ. ಆದರೆ ಅದಾವುದೂ ಪುರಿಗೆ ಇಷ್ಟವಾಗಲಿಲ್ಲ. ಕೊನೆಗೆ ವಿಲೋಂ ಪುರಿ ಹೆಸರಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಾರೆ. ಆದರೆ ಹೆಸರೂ ಇಷ್ಟವಾಗದೆ ತಂದೆ ತಾಯಿಯೇ ಇಟ್ಟಿದ್ದ ‘ಓಂ ಪುರಿ’ ಹೆಸರಿನಲ್ಲೇ ತಮ್ಮ ನಟನೆ ಮುಂದುವರಿಸುತ್ತಾರೆ.

ಮುಂದೊಂದು ದಿನ ಓಂ ಪುರಿ ಎಷ್ಟು ಜನಪ್ರಿಯರಾಗುತ್ತಾರೆ ಎಂದರೆ ಓಂ ಶಿವಪುರಿಯನ್ನೇ ಮೀರಿ ನಿಲ್ಲುತ್ತಾರೆ. ಅದಕ್ಕೆ ಸಾಕ್ಷಿ ಎಂಬಂತೆ ಖ್ಯಾತ ಸಿನಿಮಾ ನಿರ್ದೇಶಕ ಮೃಣಾಲ್ ಸೇನ್ ಮನೆಯಲ್ಲೊಂದು ಘಟನೆ ನಡೆಯುತ್ತದೆ. ಓಂ ಶಿವಪುರಿ ಮೃಣಾಲ್ ಸೇನ್ ಭೇಟಿಯಾಗಲು ಸಮಯ ಕೇಳಿರುತ್ತಾರೆ. ಆದರೆ ಓಂ ಪುರಿಯೇ ಕೇಳಿದ್ದಾರೆ ಎಂದ ಭಾವಿಸಿ ಮೃಣಾಲ್ ಸೇನ್ ಸಮಯ ನೀಡುತ್ತಾರೆ. ಆದರೆ ಬಂದಿದ್ದು ಮನೆಗೆ ಬಂದೊದ್ದು ಓಂ ಶಿವಪುರಿ. ಹೀಗೆ ಅವತ್ತಿನ ದಿನಗಳ ನೆನಪುಗಳನ್ನು ನಾಸಿರುದ್ದೀನ್ ಶಾ 'ಅನ್ಲೈಕ್ಲೀ ಹೀರೋ' ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ.

ಪುಸ್ತಕದಲ್ಲಿ ಓಂ ಪುರಿ ಬಗ್ಗೆ ಅಭಿಮಾನದಿಂದ ಮಾತನಾಡುವ ಶಾ, “ನನಗೆ ಮತ್ತು ಓಂ ಪುರಿಗೆ ನಟನೆ ರಕ್ತದಲ್ಲಿ ಬಂದಿದ್ದಲ್ಲ. ನಾವು ಕಷ್ಟ ಪಟ್ಟು ನಟನೆ ಕಲಿತವರು. ಆ ಕಾರಣದಿಂದಾಗಿ ನಾವು ಮನರಂಜನೆ ಮತ್ತು ನಟನೆಯ ವಿಚಾರಕ್ಕೆ ಬಂದಾಗ ನಟನೆಗೇ ಪ್ರಾಧಾನ್ಯತೆ ನೀಡುತ್ತೇವೆ,” ಎಂದಿದ್ದಾರೆ.

ಸಿನಿಮಾವೇ ಬದುಕು:

ಒಮ್ಮೆ ನಟನೆಗೆ ಇಳಿದ ನಂತರ ನಂತರ ಓಂ ಪುರಿಯನ್ನು ಸಿನಿಮಾ ರಂಗ ಅಪ್ಪಿಕೊಂಡು ಬಿಟ್ಟಿತು. ಓಂ ಪುರಿ ನಾಯಕ ನಟರಾಗಿ ನಟಿಸಿದ ‘ಅರ್ಧ್ ಸತ್ಯ’, ‘ಜಾನೆ ಭಿ ದೋ ಯಾರೋನ್' ಮತ್ತು ‘ಮಿರ್ಚಿ ಮಸಾಲ’ ದಂಥ ಸಿನಿಮಾಗಳು ಅವರನ್ನು ಅಜರಾಮರವಾಗಿಸಿಬಿಟ್ಟವು. ಹಲವು ಚಿತ್ರಗಳಲ್ಲಿ ನೆನಪಿನಲ್ಲುಳಿಯುವ ನಟನೆ ನೀಡಿದವರು ಓಂ ಪುರಿ. ಇತ್ತೀಚೆಗೆ ಬಿಡುಗಡೆಯಾಗಿದ್ದ ‘ಭಜರಂಗಿ ಭಾಯಿಜಾನ್’ ಮತ್ತು ‘ಘಾಯಲ್ ಒನ್ಸ್ ಅಗೇನ್’ ಚಿತ್ರಗಳಲ್ಲೂ ಅವರು ನಟಿಸಿದ್ದರು.

ಓಂ ಪುರಿ ಹಿಂದಿಯಲ್ಲದೆ ಹಲವು ಭಾಷೆಗಳಲ್ಲೂ ನಟಿಸಿದ್ದಾರೆ. ಹಾಲಿವುಡ್ನ ‘ಸಿಟಿ ಆಫ್ ಜಾಯ್’, ‘ಗಾಂಧಿ’, ‘ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್’ ಚಿತ್ರಗಳಲ್ಲಿ ಪುರಿ ಅದ್ಭುತವಾಗಿ ನಟಿಸಿದ್ದಾರೆ. ಇದು ಅವರಿಗೆ ಇಂಗ್ಲೀಷ್ ಭಾಷೆಯಲ್ಲೂ ಜನಪ್ರಿಯತೆಯನ್ನು ತಂದುಕೊಟ್ಟಿತು 2014ರಲ್ಲಿ ಅಮೆರಿಕಾದಲ್ಲಿ ಬಿಡುಗಡೆಯಾದ ಸ್ಟೀವಲ್ ಸ್ಪಿಲ್ ಬರ್ಗ್’ರ ಖ್ಯಾತ ಹಾಸ್ಯ ನಾಟಕ ‘ದಿ ಹಂಡ್ರೆಡ್ ಫೂಟ್ ಜರ್ನಿ,’ಯಲ್ಲಿ ಪುರಿ ಖಳನಟನ ಪಾತ್ರ ಮಾಡಿದ್ದರು. ಭಾರತ, ಪಾಕಿಸ್ತಾನ, ಬ್ರಿಟಿಷ್ ಸಿನಿಮಾಗಳಲ್ಲೂ ನಟಿಸಿದ ಹೆಗ್ಗಳಿಗೆ ಪುರಿಯದ್ದು.

ತಮ್ಮ ಅಮೋಘ ನಟನೆಯ ಮೂಲಕ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲೂ ಛಾಪೊತ್ತಿದವರು ಓಂ ಪುರಿ. 1980ರ ದಶಕದಲ್ಲಿ ಯಶಸ್ವಿ ಪಂಜಾಬಿ ಚಿತ್ರಗಳಾಗಿದ್ದ ‘ಛನ್‌ ಪರದೇಸಿ’ ಮತ್ತು ‘ಲಾಂಗ್‌ ದಾ ಲಿಷ್ಕಾರಾ’ ಚಲನಚಿತ್ರಗಳಲ್ಲಿ ಪುರಿ ನಟಿಸಿದ್ದರು. ಮೊದಲ ಬಾರಿಗೆ ಕನ್ನಡದಲ್ಲಿ ಓಂ ಪುರಿ 1999ರಲ್ಲಿ ತೆರೆಕಂಡ ‘ಎಕೆ-47’ ಚಿತ್ರದಲ್ಲಿ ನಟಿಸಿದ್ದರು. ಶಿವರಾಜ್ ಕುಮಾರ್‌ ನಾಯಕ ನಟರಾಗಿದ್ದ ಈ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ ಅವರದಾಗಿತ್ತು. ಕನ್ನಡದಲ್ಲಿ ನೀಡಬೇಕಾದ ಸಂಭಾಷಣೆಗಳಿಗೆ ಸ್ವತಃ ಅವರೇ ಕಂಠದಾನವನ್ನೂ ಮಾಡಿದ್ದರು. 1977ರಲ್ಲಿ ಬಿ. ವಿ. ಕಾರಂತ್‌ ಮತ್ತು ಗಿರೀಶ್ ಕಾರ್ನಾಡ್ ನಿರ್ದೇಶನದ ‘ಗೋಧೂಲಿ’ ಹಿಂದಿ ಚಿತ್ರದಲ್ಲಿಯೂ ಓಂ ಪುರಿ ನಟಿಸಿದ್ದರು. ಕಾರ್ನಾಟ್ ಜತೆಗೆ ಅವರಿಗೆ ಆಪ್ತ ಒಡನಾಟಗಳೂ ಇತ್ತು.

ವಿವಾದಾತ್ಮಕ ವ್ಯಕ್ತಿ:

ನಟನೆಯಾಚೆಯೂ ಓಂ ಪುರಿ ವಿವಾದಗಳ ಮೂಲಕ ಜನಪ್ರಿಯರು. 'ಪುರಿ ತಮಗೆ ಕೋಲಿನಿಂದ ಹೊಡೆದರು,' ಎಂದು ಅವರ ಎರಡನೇ ಪತ್ನಿ ನಂದಿತಾ ಪುರಿ 2013ರ ಆಗಸ್ಟ್ ನಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಆಗ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324, 504, 506 ಅಡಿಯಲ್ಲಿ ದೂರು ದಾಖಲಾಗಿತ್ತು. ಓಂ ಪುರಿಯನ್ನು ಬಂಧಿಸುವ ಸಾಧ್ಯತೆಗಳೂ ಇತ್ತು. ಕೊನೆಗೆ ಕೋರ್ಟಿನಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡ ಪುರಿ ಬಂಧನದಿಂದ ಪಾರಾಗಿದ್ದರು.

ತಮ್ಮ ಗಂಡನ ಜೀವನದ ಕುರಿತು ನಂದಿತಾ ಪುರಿ ಬರೆದ ‘ಅನ್ಲೈಕ್ಲೀ ಹೀರೋ ಓಂ ಪುರಿ’ ಪುಸ್ತಕ ವಿವಾದದ ಗಾಳಿ ಎಬ್ಬಿಸಿತ್ತು. ಈ ಪುಸ್ತಕದಲ್ಲಿ ‘ಓಂ ಪುರಿ ತಮ್ಮ 14 ನೇ ವಯಸ್ಸಿನಲ್ಲೇ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದರು,’ ಎಂಬುದಾಗಿ ನಂದಿತಾ ಬರೆದಿದ್ದರು.

ಈ ಘಟನೆಯ ನಂತರ 2013ರಲ್ಲೇ ನಂದಿತಾ ಪುರಿ ಮತ್ತು ಓಂ ಪುರಿ ದಾಂಪತ್ಯ ಮುರಿದು ಬಿದ್ದಿತ್ತು. ಇದಕ್ಕೂ ಮೊದಲು 1991ರಲ್ಲೇ ಮೊದಲ ಪತ್ನಿ ಸೀಮಾ ಕಪೂರ್ ರಿಂದ ಓಂ ಪುರಿ ವಿಚ್ಛೇದನ ಪಡೆದುಕೊಂಡು, ನಂದಿತಾರನ್ನು ವರಿಸಿದ್ದರು.


       ಕಾರ್ಯಕ್ರಮವೊಂದರಲ್ಲಿ ತಮ್ಮ ಎರಡನೇ ಹೆಂಡತಿ ನಂದಿತಾ ಪುರಿ ಜತೆ ಓಂ ಪುರಿ (ಚಿತ್ರ: ಹಫಿಂಗ್ಟನ್ ಪೋಸ್ಟ್)
ಕಾರ್ಯಕ್ರಮವೊಂದರಲ್ಲಿ ತಮ್ಮ ಎರಡನೇ ಹೆಂಡತಿ ನಂದಿತಾ ಪುರಿ ಜತೆ ಓಂ ಪುರಿ (ಚಿತ್ರ: ಹಫಿಂಗ್ಟನ್ ಪೋಸ್ಟ್)

ಕೌಂಟುಂಬಿಕ ವಿವಾದಗಳಲ್ಲದೇ ಓಂ ಪುರಿ ಹಲವು ವಿವಾದಗಳನ್ನೂ ಮೈಮೇಳೆ ಎಳೆದುಕೊಂಡವರೇ. 2011ರಲ್ಲಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ್ದ ಓಂ ಪುರಿ ಸಂಸದರನ್ನು ‘ನಿರಕ್ಷರಿಗಳು ಮತ್ತು ಅಸಮರ್ಥರು’ ಎಂದು ನಿಂದಿಸಿದ್ದರು. ಇದು ವಿವಾದಕ್ಕೆ ಕಾರಣವಾದ ನಂತರ ಕ್ಷಮೆ ಕೇಳಬೇಕಾಗಿ ಬಂದಿತ್ತು. ಇದೇ ರೀತಿ ಕಳೆದ ವರ್ಷ ಅಕ್ಟೋಬರಿನಲ್ಲಿ ‘ಉರಿ’ ಸೇನಾ ನೆಲೆಯ ಮೇಲೆ ದಾಳಿ ನಡೆದಾಗಲೂ ಓಂ ಪುರಿ ಲಘುವಾಗಿ ಮಾತನಾಡಿ ವಿವಾದಕ್ಕೆ ಸಿಲುಕಿದ್ದರು. ‘ಯುವಕರಿಗೆ ಯಾರು ಸೈನ್ಯಕ್ಕೆ ಸೇರುವಂತೆ ಹೇಳಿದ್ದು,’ ಎಂಬ ಅವರ ಸಾಲುಗಳು ಕಿಚ್ಚೆಬ್ಬಿಸಿತ್ತು. ನಂತರ ತನ್ನ ತಪ್ಪನ್ನು ಅರಿತುಕೊಂಡು ಓಂ ಪುರಿ, ಜನರ ಕೋಪ ನ್ಯಾಯ ಸಮ್ಮತವಾಗಿಯೇ ಇದೆ. ಹೀಗಾಗಿ, ನಾನು ಕ್ಷಮೆ ಕೇಳುತ್ತಿಲ್ಲ, ಶಿಕ್ಷೆಯನ್ನು ಕೇಳುತ್ತಿದ್ದೇನೆ ಎಂದು ಪಶ್ಚಾತ್ತಾಪ ಪಟ್ಟಿದ್ದರು.

ಪ್ರಶಸ್ತಿಗಳ ಸರಮಾಲೆ:

ಇಷ್ಟೆಲ್ಲಾ ಜನಪ್ರಿಯ ನಟ ಓಂ ಪುರಿಯವರಿಗೆ ಅಸಂಖ್ಯಾತ ಪ್ರಶಸ್ತಿಗಳೂ ಸಂದಿವೆ. 1982ರಲ್ಲಿ ‘ಆರೋಹಣ್‌’ ಹಾಗೂ 1984ರಲ್ಲಿ ‘ಅರ್ಧ್ ಸತ್ಯ’ ಚಿತ್ರಕ್ಕಾಗಿ ಅವರು ಎರಡು ಬಾರಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಬ್ರಿಟಿಷ್‌ ಚಲನಚಿತ್ರರಂಗಕ್ಕೆ ನೀಡಿದ ಅಮೂಲ್ಯ ಸೇವೆಗಾಗಿ ‘ಆರ್ಡರ್‌ ಆಫ್‌ ದಿ ಬ್ರಿಟಿಷ್‌ ಎಂಪೈರ್‌’ ಪ್ರಶಸ್ತಿಯನ್ನು 2004ರಲ್ಲಿ ಓಂ ಪುರಿಯವರಿಗೆ ಪ್ರಧಾನ ಮಾಡಲಾಗಿದೆ. ಸಿನಿಮಾ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ  ಭಾರತದ ನಾಲ್ಕನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ ‘‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಪದ್ಮಶ್ರೀ’ಯನ್ನು 1990ರಲ್ಲಿ ಓಂ ಪುರಿಯವರಿಗೆ ನೀಡಲಾಗಿದೆ. ಇದಿಷ್ಟಲ್ಲದೆ ಹಲವು ಫಿಲಂಫೇರ್ ಪ್ರಶಸ್ತಿಗಳೂ, ಅಸಂಖ್ಯಾತ ಪುರಸ್ಕಾರಗಳೂ ಅವರಿಗೆ ಸಂದಿವೆ.