ಸುದ್ದಿ ಸಾಗರ

ಐತಿಹಾಸಿಕ ಬೆಳವಣಿಗೆ: ಪ್ಯಾಲೆಸ್ತೀನ್ ‘ಭಯೋತ್ಪಾದಕ’ನನ್ನು ಕೊಂದ ಇಸ್ರೇಲ್ ಸೈನಿಕನಿಗೆ ಜೈಲು ಶಿಕ್ಷೆ

ಆತನಿಗಿನ್ನೂ

20 ಹರೆಯ. 20 ವರ್ಷಗಳ ಜೈಲು ಶಿಕ್ಷೆಗೆ ತಯಾರಾಗಬೇಕಾಗಿದೆ. ಇದಕ್ಕೆ ಕಾರಣ ಆತ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದಿದ್ದು. ಇಷ್ಟೇ ಆಗಿದ್ದರೆ ಈ ಸುದ್ದಿ ಅಂತರಾಷ್ಟ್ರೀಯ ಸುದ್ದಿಯೇ ಆಗುತ್ತಿರಲಿಲ್ಲ. ಆದರೆ ಕೊಂದಾತ ಮತ್ಯಾರೂ ಅಲ್ಲ; ಆತನೊಬ್ಬ ಇಸ್ರೇಲ್ ಸೈನಿಕ.

ನಕಲಿ ಎನ್ಕೌಂಟರ್ ಪ್ರಕರಣದಲ್ಲಿ ಇಸ್ರೇಲಿನ ಸೈನಿಕ ಜೈಲು ಶಿಕ್ಷೆಗೆ ಗುರಿಯಾಗುತ್ತಿರುವ ಅಪರೂಪದ ಪ್ರಕರಣ ಇದು. ಅದೂ ಭಯೋತ್ಪಾದಕ ಎನ್ನಲಾದ ಪ್ಯಾಲೆಸ್ತೀನ್ ನಾಗರಿಕನ್ನು ಕೊಂದ ಕಾರಣಕ್ಕೆ ಎಂಬುದು ಮತ್ತೊಂದು ವಿಶೇಷ. ಇಸ್ರೇಲ್ ರಾಜಧಾನಿ ಟೆಲ್ ಅವಿವ್ ನಲ್ಲಿರುವ ರಕ್ಷಣಾ ನ್ಯಾಯಾಲಯ ಬುಧವಾರ ಈ ಐತಿಹಾಸಿಕ ತೀರ್ಪು ನೀಡಿದೆ.

ಮಾರ್ಚ್ 24, 2016ರಂದ ಅಬ್ದುಲ್ ಫತಾಹ್ ಅಲ್ ಶರೀಫ್ ಎಂಬ 21 ವರ್ಷದ ತರುಣನ್ನು ಇಸ್ರೇಲಿ ಸೈನಿಕ ಎಲೊರ್ ಅಝಾರಿಯಾ ಗುಂಡಿಕ್ಕಿ ಹತ್ಯೆ ಮಾಡಿದ್ದ. ಇದನ್ನು ಇಸ್ರೇಲಿನ ‘ಬಿ ಟ್ಸೆಲೆಮ್’ ಮಾನವ ಹಕ್ಕು ಸಂಘಟನೆಯ ಕಾರ್ಯಕರ್ತರೊಬ್ಬರು ವೀಡಿಯೋ ರೆಕಾರ್ಡ್ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಾಗಿ ವಿಚಾರಣೆ ರಾಜಧಾನಿ ಟೆಲ್ ಅವಿವ್ ನಲ್ಲಿರುವ ರಕ್ಷಣಾ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿತ್ತು. ಬುಧವಾರ ನ್ಯಾಯಾಲಯದ ಮುಂದೆ ಅಝಾರಿಯಾ ತಪ್ಪೊಪ್ಪಿಕೊಂಡಿದ್ದು, ಇಸ್ರೇಲಿ ಸೈನಿಕ ತಪ್ಪಿತಸ್ಥ ಎಂದು ಕೋರ್ಟ್ ಹೇಳಿದೆ. ಇದೀಗ ಸೈನಿಕ ಎಲೋರ್ ಅಝಾರಿಯಾ ಗರಿಷ್ಠ 20 ವರ್ಷ ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ.

ಇಸ್ರೇಲಿ ಸೈನ್ಯ, ‘ತನ್ನ ಸೈನಿಕನಿಗೆ ಕೋರ್ಟ್ ಒಂದು ವಾರಗಳ ಕಾಲ ಶಿಕ್ಷೆ ನೀಡಬಹುದು, ಜನವರಿ 15ರಂದು ಬಿಡುಗಡೆಯಾಗಬಹುದು,’ ಎಂದುಕೊಂಡಿತ್ತು. ಆದರೆ ನ್ಯಾಯಾಧೀಶರು ಅದಕ್ಕಿಂತ ದೊಡ್ಡ ಶಿಕ್ಷೆ ನೀಡುವ ಸಾಧ್ಯತೆ ಇದೆ. ತೀರ್ಪು ನೀಡಿದ ನ್ಯಾಯಧೀಶರಾದ ಕೊಲೋನೆಲ್ ಮಯ, ಅಝಾರಿಯಾ ವಕೀಲರ ಎಲ್ಲಾ ವಾದಗಳನ್ನು ತಳ್ಳಿ ಹಾಕಿದ್ದಾರೆ. ಅಝಾರಿಯಾಗೆ ಮಾನಸಿಕ ಒತ್ತಡದ ಸಮಸ್ಯೆ ಇದೆ ಎಂದಿದ್ದನ್ನೂ ತೀರ್ಪು ನೀಡುವಾಗ ಪರಿಗಣಿಸಿಲ್ಲ. “ಎದುರಿಗಿದ್ದ ಮನುಷ್ಯ ಭಯೋತ್ಪಾದಕನಾದರೂ, ಸಮಂಜಸವಲ್ಲದ ಪ್ರತಿದಾಳಿ ನಡೆಸಿದ್ದನ್ನು ಸಮರ್ಥಿಸಿಕೊಳ್ಳಲಾಗದು,” ಎಂದು ಮಯ ಖಾರವಾಗಿಯೇ ಹೇಳಿದ್ದಾರೆ.

ವಿಚಾರಣೆ ವೇಳೆ ಅಝಾರಿಯಾ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ. ಮೊದಲಿಗೆ ಅಲ್ ಶರೀಫ್ ಗುಂಡು ಹೊಡೆಯುವ ಮೊದಲೇ ಸತ್ತಿದ್ದ ಎಂದು ವಾದಿಸಿದ್ದ. ನಂತರ ಆತನ ಬಳಿ ಚಾಕು ಇತ್ತು; ನನ್ನ ಜೀವ ಉಳಿಸಿಕೊಳ್ಳಲು ಶೂಟ್ ಮಾಡಿದೆ ಎಂದು ಹೇಳಿದ್ದ. ಆದರೆ ಚೂರಿ ತುಂಬಾ ದೂರದಲ್ಲಿತ್ತು. ಇದಾದ ನಂತರ ಅಝಾರಿಯಾ, ಅಲ್ ಶರೀಫ್ ಬಾಂಬ್ ಬೆಲ್ಟುಗಳನ್ನು ಕಟ್ಟಿಕೊಂಡಿರಬಹುದು ಎಂದುಕೊಂಡು ಗುಂಡು ಹಾರಿಸಿದೆ ಎಂದಿದ್ದ. ಇದೆಲ್ಲಕ್ಕಿಂತ ಮುಖ್ಯವಾಗಿ ಅಝಾರಿಯಾ ಗುಂಡು ಹೊಡೆಯುವುದಕ್ಕೂ ಮೊದಲೇ ಆತನ ಸಹದ್ಯೋಗಿ ಸೈನಿಕ 11 ನಿಮಿಷಗಳ ಮೊದಲೇ ಅಲ್ ಶರೀಫ್ಗೆ ಗುಂಡು ಹೊಡೆದಿದ್ದ. ಇದರಿಂದ ಗಾಯಗೊಂಡು ರಕ್ತ ಸೋರುತ್ತಾ ಅಲ್ ಶರೀಫ್ ನೆಲದ ಮೇಲೆ ನಿಸ್ತೇಜನಾಗಿ ಬಿದ್ದಿದ್ದ. ಮಾತ್ರವಲ್ಲ ಸ್ಥಳಕ್ಕೆ ಬಂದಿದ್ದ ಅಂಬುಲೆನ್ಸ್, ಅಲ್ ಶರೀಫ್ಗೆ ಚಿಕಿತ್ಸೆ ನೀಡುವ ಬದಲು, ಸಣ್ಣ ಗಾಯವಾಗಿದ್ದ ಇಸ್ರೇಲ್ ಸೈನಿಕನಿಗೆ ಚಿಕಿತ್ಸೆ ನೀಡಿತ್ತು. ನೆಲದಲ್ಲಿ ರಕ್ತ ಸೋರುತ್ತಾ ಬಿದ್ದಿದ್ದ ಪ್ಯಾಲೆಸ್ತೀನ್ ಶಂಕಿತ ಭಯೋತ್ಪಾದಕನನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ.

ನಡೆದಿದ್ದೇನು?

ದಾಳಿಯ ದಿನ ಆಕ್ರಮಿತ ವೆಸ್ಟ್ ಬ್ಯಾಂಕ್ ಭಾಗದ ಹೆಬ್ರಾನ್ ಚೆಕ್ ಪೋಸ್ಟ್ ನಲ್ಲಿ ಕೊಲೆಯಾದ ಅಲ್ ಶರೀಫ್ ಮತ್ತು ಆತನದೇ ವಯಸ್ಸಿನ ಇನ್ನೊಬ್ಬ ಸಹಚರ ಇಸ್ರೇಲಿ ಸೈನಿಕನ ಮೇಲೆ ಎರಗಿದ್ದರು ಎನ್ನಲಾಗಿದೆ. ಈ ಕಾರಣಕ್ಕೆ ಅವರಿಬ್ಬರನ್ನೂ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ವೀಡಿಯೋದಲ್ಲಿ ಅಝಾರಿಯಾ ತನ್ನ ಗನ್ ಎತ್ತಿ ಶರೀಫ್ಗೆ ಗುರಿ ಇಡುವುದು ಕಾಣಿಸುತ್ತದೆ. ನಂತರ ಸ್ಪೋಟದ ಸದ್ದೊಂದು ಕೇಳಿಸುತ್ತದೆ. ಆ ಗುಂಡು ಪ್ಯಾಲೆಸ್ಟೀನಿಯನ ತಲೆ ಸೀಳಿಕೊಂಡು ಹೋಗುವುದೂ ವೀಡಿಯೋದಲ್ಲಿ ದಾಖಲಾಗಿದೆ..

ಶಿಕ್ಷೆ ಬೇಕು, ಬೇಡ ವಾಗ್ವಾದ:

ಬುಧವಾರ ಟೆಲ್ ಅವಿವ್ ಕೋರ್ಟ್ ಹಾಲ್ ಹೊರಗಡೆ ದೊಡ್ಡ ಗೊಂದಲವೇ ನಿರ್ಮಾಣವಾಗಿತ್ತು. ಇಸ್ರೇಲಿ ಸೈನಿಕನ ಬೆಂಬಲಿಗರು ಮತ್ತು ಪ್ರತಿಭಟನಾಕಾರರು ಕೋರ್ಟ್ ಹಾಲ್ ಹೊರಗಡೆ ಭಾರಿ ಸಂಖ್ಯೆಯಲ್ಲಿ ಜಮಾವಣೆಯಾಗಿದ್ದರು. ಈ ವೇಳೆ ಘರ್ಷಣೆಯೂ ಸಂಭವಿಸಿ ಹಲವರನ್ನು ಬಂಧಿಸಲಾಗಿದೆ.

ಹೆಬ್ರಾನ್ ನಲ್ಲಿರುವ ಅಲ್ ಶರೀಫ್ ಕುಟುಂಬಸ್ಥರು ಜೀವಾವಧಿ ಶಿಕ್ಷೆಯಲ್ಲದೆ ಬೇರೆ ಯಾವ ಶಿಕ್ಷೆಯನ್ನೂ ನಾವು ಒಪ್ಪಿಕೊಳ್ಳುವುದಿಲ್ಲ. ಇಸ್ರೇಲಿ ಸೈನಿಕನಿಗೆ ಜೀವಾವಧಿ ಶಿಕ್ಷೆಯೇ ಆಗಬೇಕು ಎಂದು ಆಗ್ರಹಿಸಿದ್ದಾರೆ. “ಪ್ಯಾಲೆಸ್ತೇನಿಯರಿಗೆ ಹೇಗೆ ಜೀವಾವಧಿ ಶಿಕ್ಷೆ ನೀಡಿ ಹಿಂಸೆ ಕೊಟ್ಟು ಕೊನೆಗೆ ರೆಫ್ರಜರಿನೇಟರಿನಲ್ಲಿಟ್ಟು ಕೊಲ್ಲುತ್ತಾರೋ, ಅದೇ ರೀತಿ ಈ ಕೋರ್ಟ್ ಹಾಲ್ನಲ್ಲಿ ಆತನಿಗೆ (ಅಝಾರಿಯಾ) ಶಿಕ್ಷೆ ನೀಡಬೇಕು,” ಎಂದು ಅಲ್ ಶರೀಫ್ ತಂದೆ ಯುಸ್ರಿ ಅಲ್ ಶರೀಫ್ ಹೇಳಿದ್ದಾರೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

ಆದರೆ ಅಝಾರಿಯಾ ತಪ್ಪೊಪ್ಪಿಕೊಂಡರೆ ಇಸ್ರೇಲಿ ಸೈನಿಕನನ್ನು ಕ್ಷಮಿಸಬೇಕು ಎಂದು ಅಲ್ಲಿನ ಶಿಕ್ಷಣ ಸಚಿವ ನಫ್ತಾಲಿ ಬೆನೆಟ್ ಹೇಳಿದ್ದರೂ ಕೋರ್ಟ್ ಇದಕ್ಕೂ ಸೊಪ್ಪು ಹಾಕಿಲ್ಲ. ಸೈನಿಕನನ್ನು ಕ್ಷಮಿಸಬೇಕು ಎಂದು ಇಸ್ರೇಲ್ ಪ್ರಧಾನಿ ಮತ್ತು ಅಧ್ಯಕ್ಷರೇ ಅಖಾಡಕ್ಕಿಳಿದಿದ್ದಾರೆ. ಸ್ವತಃ ರಕ್ಷಣಾ ಸಚಿವ ಅವಿಗ್ಡರ್ ಲೆಬರ್ಮನ್ ಕೂಡಾ ಅಝಾರಿಯಾ ಪರವಾಗಿ ಹೋರಾಡುತ್ತಿದ್ದಾರೆ.

ಬುಧವಾರ ಹೇಳಿಕೆ ನಿಡಿರುವ ಪ್ರಧಾನಿ ಬೆಂಜಮಿನ್ ನೇತನ್ಯಾಹು, “ಇದು ಎಲೋರ್, ಆತನ ಕುಟುಂಬ, ಇಸ್ರೇಲಿ ಸೈನಿಕರು, ಅವರ ಕುಟುಂಬಸ್ಥರು, ಅಸಂಖ್ಯಾತ ನಾಗರಿಕರು ಮತ್ತು ನನಗೂ ಇದು ತುಂಬಾ ಸಂಕಷ್ಟದ ಹಾಗೂ ನೋವಿನ ದಿನ. ಎಲೋರ್ ಅಝಾರಿಯಾನನ್ನು ಕ್ಷಮಿಸಬೇಕು ಎಂಬುದರ ಪರವಾಗಿ ನಾನಿದ್ದೇನೆ,” ಎಂದು ತಮ್ ಫೇಸ್ ಬುಕ್ ಪೇಜಿನಲ್ಲಿ ಹೇಳಿದ್ದಾರೆ.

ಉಳಿದ ಕೊಲೆಗಳ ತನಿಖೆಗೆ ಪ್ಯಾಲೆಸ್ತೀನ್ ಒತ್ತಾಯ:

ಇದೀಗ ಅಲ್ ಶರೀಫ್ ಕೊಲೆಯ ಬೆನ್ನಿಗೇ ಇಸ್ರೇಲಿನ ಕಸ್ಟಡಿಗಳಲ್ಲಿ ಸಾವಿಗೀಡಾಗಿರುವ ನಮ್ಮ ನಾಗರಿಗರ ಬಗ್ಗೆಯೂ ವಿಶ್ವಸಂಸ್ಥೆ ತನಿಖೆ ಮಾಡಬೇಕು ಪ್ಯಾಲೆಸ್ಟೀನ್ ಒತ್ತಾಯಿಸಿದೆ. “ಈ ರೀತಿಯ ಘಟನೆಗಳು ನಡೆಯುತ್ತಲೇ ಇರುತ್ತವೆ ಆದರೆ ಅವು ಯಾವುವೂ ವೀಡಯೋಳಾಗುವುದಿಲ್ಲ. ಹಾಗಾಗಿ ಯಾರಿಗೂ ಗೊತ್ತಾಗುವುದಿಲ್ಲ,” ಎಂದು ಪ್ಯಾಲೆಸ್ಟೀನ್ ನಾಯಕ ಅಯ್ಮನ್ ಒದೆಹ್ ಹೇಳಿದ್ದಾರೆ.

ಇದೇ ರೀತಿ ದಾಳಿಕೋರರಲ್ಲದ ಪ್ಯಾಲೆಸ್ತೀನಿಯರನ್ನು ಕೊಂದ ಆರೋಪಗಳೂ ಇಸ್ರೇಲಿ ಸೈನಿಕರ ಮೇಲೆ ಇವೆ. ಇತ್ತೀಚೆಗೆ ಅಂತರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ಕನಿಷ್ಠ ಈ ರೀತಿಯ 20 ಕಾನೂನು ಬಾಹಿರ ಕೊಲೆಗಳನ್ನು ಇಸ್ರೇಲಿ ಸೈನಿಕರು ಮಾಡಿದ್ದಾರೆ ಎಂದು ಹೇಳಿತ್ತು. ಇದರಲ್ಲಿ 15 ಜನ ದಾಳಿ ಮಾಡುವ ಯಾವ ಸಾಧ್ಯತೆಗಳೂ ಇರಲಿಲ್ಲ; ಇದು ಗೊತ್ತಿದೂ ಕೊಲೆ ಮಾಡಲಾಗಿದೆ ಎಂದು ಇಸ್ರೇಲ್ ಸೇನೆಯ ಮೇಲೆ ಆರೋಪ ಹೊರಿಸಿತ್ತು.

ಅಕ್ಟೋಬರ್ 2015ರಿಂದ ಇಲ್ಲೀವರೆಗೆ, ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದ ಪ್ರತಿಭಟನಾಕಾರರು, ಅನುಮಾನಾಸ್ಪದ ದಾಳಿಕೋರರು ಸೇರಿ ಒಟ್ಟು 244 ಪ್ಯಾಲೆಸ್ಟೀನಿಯರನ್ನು ಇಸ್ರೇಲಿ ಸೈನಿಕರು ಕೊಂದಿದ್ದಾರೆ. ಇದೇ ವೇಳೆ 36 ಇಸ್ರೇಲಿ ಸೈನಿಕರು ಪ್ಯಾಲೆಸ್ತೀನಿಯರ ಚಾಕು ದಾಳಿ ಮತ್ತು ಗುಂಡಿಗೆ ಹತರಾಗಿದ್ದಾರೆ.