samachara
www.samachara.com
ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ: ಆರಂಭಿಕ ಸಮೀಕ್ಷೆಗಳು ಹೇಳುತ್ತಿರುವುದೇನು?
ಸುದ್ದಿ ಸಾಗರ

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ನಿಗದಿ: ಆರಂಭಿಕ ಸಮೀಕ್ಷೆಗಳು ಹೇಳುತ್ತಿರುವುದೇನು?

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಪರಿಗಣಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಬುಧವಾರ ಹೊರಬಿದ್ದಿದೆ.

ಪಂಜಾಬ್, ಉತ್ತರ ಪ್ರದೇಶ, ಉತ್ತರಖಂಡ್, ಮಣಿಪುರ ಮತ್ತು ಗೋವಾದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 4ರಿಂದ ಮತದಾನ ಆರಂಭವಾಗಲಿದೆ. ಇನ್ನು ಎಲ್ಲಾ ರಾಜ್ಯಗಳ ಮತ ಎಣಿಕೆ ಮಾರ್ಚ್ 11ರಂದು ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಡಾ. ನಜೀಮ್ ಜೈದಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಎಲ್ಲಾ ಐದು ರಾಜ್ಯಗಳ ತಳಮಟ್ಟದಲ್ಲಿ ಪಕ್ಷಗಳ ಬಲಾಬಲ, ಆರಂಭಿಕ ಹಂತದ ಸಮೀಕ್ಷೆಗಳ ಕುರಿತಾದ ವಿಸ್ತೃತ ವರದಿ ಇಲ್ಲಿದೆ.

ಉತ್ತರ ಪ್ರದೇಶ:

ರಾಜಕೀಯವಾಗಿ ದೇಶದ ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶ, ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ಪ್ರಮುಖವಾಗಿದೆ. ಇಲ್ಲಿ 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 11, 15, 19, 23, 27 ಹಾಗೂ ಮಾರ್ಚ್ 4, 8 ರಂದು ಚುನಾವಣೆ ನಡೆಯಲಿದೆ.

403 ಸದಸ್ಯ ಬಲದ ರಾಜ್ಯದಲ್ಲಿ ಸದ್ಯ ಸಮಾಜವಾದಿ ಪಕ್ಷ ಆಳ್ವಿಕೆ ನಡೆಸುತ್ತಿದ್ದು ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದಾರೆ. 2012ರಲ್ಲಿ ಇಲ್ಲಿ ಚುನಾವಣೆ ನಡೆದಾಗ ಎಸ್ಪಿ 224, ಬಿಎಸ್ಪಿ 80, ಬಿಜೆಪಿ 47, ಕಾಂಗ್ರೆಸ್ 28 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.

ಸದ್ಯದ ಸಮೀಕ್ಷೆಗಳ ಪ್ರಕಾರ ಇಲ್ಲಿ ಬಿಜೆಪಿ, ಎಸ್ಪಿ ಮತ್ತು ಬಿಎಸ್ಪಿಯ ನಡುವೆ ತ್ರಿಕೋನ ಸ್ಪರ್ಧೆ ನಡೆಯಲಿದೆ. ಮುಖ್ಯವಾಗಿ ಎಸ್ಪಿ ಮತ್ತು ಬಿಎಸ್ಪಿ ಅಧಿಕಾರಕ್ಕಾಗಿ ಬಡಿದಾಡುತ್ತಿದ್ದರೆ, ತಮ್ಮ ಬಲ ಹೆಚ್ಚಿಸಿಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ಹೆಣಗಾಡುತ್ತಿವೆ. 2014ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಬಿಜೆಪಿ ಒಂದೊಮ್ಮೆ ಅಧಿಕಾರಕ್ಕೂ ಏರಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಒಂದು ಕಾಲದ ಆಡಳಿತರೂಢ ಪಕ್ಷ ಕಾಂಗ್ರೆಸ್ ಚುನಾವಣಾ ರಣತಂತ್ರಗಾರ ಪ್ರಶಾಂತ್ ಕಿಶೋರ್ ಮಾರ್ಗದರ್ಶನದಲ್ಲಿ ತನ್ನ ಹಳೆಯ ಗತವೈಭವದ ದಿನಗಳಿಗೆ ಮರಳುವ ಕನವರಿಕೆಯಲ್ಲಿದೆ. ಆದರೆ ಆ ಸಾಧ್ಯತೆಗಳು ಸಮೀಕ್ಷೆಗಳಲ್ಲಿ ಕಾಣಿಸುತ್ತಿಲ್ಲ. ಇನ್ನು ಬಿಎಸ್ಪಿ ಒಂದು ಹಂತಕ್ಕೆ ಪ್ರಚಾರ ಮುಗಿಸಿದ್ದು, ಮಾಯವತಿ ಮುಖ್ಯಮಂತ್ರಿಗಾದಿಯ ರೇಸಿನಲ್ಲಿದ್ದಾರೆ.

ಇಲ್ಲಿವರೆಗೆ ತಣ್ಣಗಿದ್ದ ಎಸ್ಪಿ ಇದೀಗ ನಿಧಾನಕ್ಕೆ ಎಚ್ಚೆತ್ತುಕೊಂಡಿದ್ದು, ಪಕ್ಷದೊಳಗಿನ ಹೈಡ್ರಾಮಗಳ ಮೂಲಕ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಬಿಜೆಪಿ ಅದಾಗಲೇ ಒಂದು ಸುತ್ತಿನ ಪ್ರಚಾರ ಮುಗಿಸಿದೆ. ಒಂದೊಮ್ಮೆ ಅತಂತ್ರ ವಿಧಾನಸಭೆ ಸೃಷ್ಟಿಯಾದರೆ ಈ ಮೂರು ಪಕ್ಷಗಳ ನಡುವೆ ಹೊಂದಾಣಿಗೆ ಅನಿವಾರ್ಯ ಆಗಬಹುದು. ಎಸ್ಪಿ ಮತ್ತು ಬಿಎಸ್ಪಿ ಪಾರಂಪರಿಕ ಶತ್ರುಗಳಾದ್ದರಿಂದ ಬಿಜೆಪಿ ಕಿಂಗ್ ಮೇಕರ್ ಆಗುವ ಸಾಧ್ಯತೆ ಹೆಚ್ಚು.

ಪಂಜಾಬ್:

ಎಎಪಿ ಸ್ಪರ್ಧೆಯಿಂದಾಗಿ ಈ ಬಾರಿ ಪಂಜಾಬ್ ಚುನಾವಣೆ ದೇಶದ ಗಮನ ಸೆಳೆದಿದೆ. ಇಲ್ಲಿ ಒಂದೇ ಹಂತದ ಚುನಾವಣೆ ನಡೆಯಲಿದ್ದು ಫೆಬ್ರವರಿ 4ರಂದು ಮತದಾನ ನಡೆಯಲಿದೆ.

ಆರಂಭಿಕ ಸಮೀಕ್ಷೆಗಳ ಪ್ರಕಾರ ಇಲ್ಲಿ ಎಎಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿವೆ. 117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಶಿರೋಮಣಿ ಅಕಾಲಿದಳ 54, ಬಿಜೆಪಿ 12 ಮತ್ತು ಕಾಂಗ್ರೆಸ್ 46 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಇಲ್ಲಿ ಬಿಜೆಪಿ – ಅಕಾಲಿದಳ ಮೈತ್ರಿಕೂಟ ಆಡಳಿತ ನಡೆಸುತ್ತಿದ್ದು, 2007ರಿಂದ ಅಧಿಕಾರದಲ್ಲಿದೆ. ಪ್ರಕಾಶ್ ಸಿಂಗ್ ಬಾದಲ್ ಇಲ್ಲಿ ಮುಖ್ಯಮಂತ್ರಿಯಾಗಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಭಾರಿ ಜನಪ್ರಿಯತೆಯ ಮಧ್ಯೆಯೂ ಇಲ್ಲಿ ಎಎಪಿ 7 ರಲ್ಲಿ 4 ಸ್ಥಾನಗಳನ್ನು ಗೆದ್ದುಕೊಂಡಿತ್ತು. ರಾಜ್ಯದಲ್ಲಿ ಎಎಪಿ ಭದ್ರವಾಗಿ ತಳವೂರಿದ್ದು ಅಧಿಕಾರಕ್ಕೆ ಏರಿಯೇ ಏರುತ್ತದೆ ಎನ್ನಲಾಗುತ್ತಿದೆ. ಇಲ್ಲಿ ದಿನಂಪ್ರತಿ ಅರವಿಂದ್ ಕೇಜ್ರಿವಾಲ್ ರ್ಯಾಲಿಗಳನ್ನು ನಡೆಸುತ್ತಿದ್ದು, ಭರ್ಜರಿ ಪ್ರಚಾರದಲ್ಲಿ ನಿರತರಾಗಿದ್ದಾರೆ. ಎಎಪಿಗೆ ಇಲ್ಲಿ ಬಿಜೆಪಿ ಮತ್ತು ಅಕಾಲಿದಳ ಮೈತ್ರಿಕೂಟ ಸ್ಪರ್ಧೆ ಒಡ್ಡಲಿದೆ.


       ಪಂಜಾಬ್ ಮತ್ತು ಗೋವಾದಲ್ಲಿ ನಿರಂತರ ರ್ಯಾಲಿಗಳನ್ನು ನಡೆಸುತ್ತಾ ಬಂದಿರುವ ಅರವಿಂದ್ ಕೇಜ್ರಿವಾಲ್
ಪಂಜಾಬ್ ಮತ್ತು ಗೋವಾದಲ್ಲಿ ನಿರಂತರ ರ್ಯಾಲಿಗಳನ್ನು ನಡೆಸುತ್ತಾ ಬಂದಿರುವ ಅರವಿಂದ್ ಕೇಜ್ರಿವಾಲ್

ಗೋವಾ:

ದೇಶದ ಅತೀ ಸಣ್ಣ ರಾಜ್ಯ ಗೋವಾ ಚುನಾವಣೆಯೂ ಈ ಬಾರಿ ಕುತೂಹಲ ಕೆರಳಿಸಿದೆ. ಇಲ್ಲಿ ಫೆಬ್ರವರಿ 4ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಬಿಜೆಪಿ ಪಕ್ಷದ ಪಾಲಿಗೆ ಅತಿ ಹೆಚ್ಚಿನ ನಿಧಿ ತಂದು ಕೊಡುವ, ಹಾಗೂ ಮೋದಿ ಸಂಪುಟದ ಪ್ರಭಾವಿ ಮಂತ್ರಿ ಮನೋಹರ್ ಪರಿಕ್ಕರ್ ತವರು ರಾಜ್ಯ ಗೋವಾ ರಾಷ್ಟ್ರ ರಾಜಕಾರಣದ ಗಮನ ಸೆಳೆದಿದೆ. 40 ಸದಸ್ಯ ಬಲದ ಗೋವಾ ವಿಧಾನಸಭೆಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 21 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 9 ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್ ವಿರೋಧ ಪಕ್ಷವಾಗಿ ಹೊರ ಹೊಮ್ಮಿತ್ತು. ಸದ್ಯ ಇಲ್ಲಿ ಬಿಜೆಪಿಯ ಲಕ್ಷ್ಮೀಕಾಂತ್ ಪರ್ಸೇಕರ್ ಮುಖ್ಯಮಂತ್ರಿಯಾಗಿದ್ದಾರೆ.

ಎಎಪಿ ರಾಜ್ಯದಲ್ಲಿ ನಿರಂತರ ಪ್ರಚಾರದಲ್ಲಿ ತೊಡಗಿದ್ದು, ಕ್ರಿಶ್ಚಿಯನ್ ಸಮುದಾಯದ ಎಲ್ವಿಸ್ ಗೋಮ್ಸ್ ರನ್ನು ಈಗಾಗಲೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸಿದೆ. ಸದ್ಯದ ಟ್ರೆಂಡ್ ಪ್ರಕಾರ ಇಲ್ಲಿ ಎಎಪಿ ಅಧಿಕಾರಕ್ಕೇರಲಿದೆ. ಒಂದೊಮ್ಮೆ ಅಧಿಕಾರಕ್ಕೆ ಏರಲು ಸಾಧ್ಯವಾಗದಿದ್ದರೂ ಒಂದೆರಡು ಸ್ಥಾನಗಳ ಕೊರತೆಯಷ್ಟೇ ಕಾಡಬಹುದು ಎಂದು ಸರ್ವೆಗಳು ಹೇಳುತ್ತಿವೆ. ಇನ್ನು ಬಿಜೆಪಿ ಎಎಪಿಗೆ ಭಾರಿ ಸ್ಪರ್ಧೆ ನೀಡಲಿದೆ ಎಂದು ಹೇಳಲಾಗುತ್ತಿದೆ.

ಮಣಿಪುರ:

ಸದ್ಯ ಮಣಿಪುರ ರಾಜ್ಯ ಅರಾಜಕತೆ ಎದುರಿಸುತ್ತಿದೆ. ಕಾನೂನು ಸುವ್ಯವಸ್ಥೆ ಪೂರ್ತಿ ಹದಗೆಟ್ಟಿದೆ. ಈ ಕಾರಣಕ್ಕೆ ಸಣ್ಣ ರಾಜ್ಯವಾದರೂ ಇಲ್ಲಿ ಮಾರ್ಚ್ 4 ಮತ್ತು 8 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ.


       ಸೇನೆಯ ವಿಶೇಷಾಧಿಕಾರ ಕಾಯ್ದೆ (AFSPA) ಯ ವಿರುದ್ಧ 16 ವರ್ಷ ುಪವಾಸ ಸತ್ಯಾಗ್ರಹ ಮಾಡಿದ್ದ ಇರೋಮ್ ಶರ್ಮಿಳಾ
ಸೇನೆಯ ವಿಶೇಷಾಧಿಕಾರ ಕಾಯ್ದೆ (AFSPA) ಯ ವಿರುದ್ಧ 16 ವರ್ಷ ುಪವಾಸ ಸತ್ಯಾಗ್ರಹ ಮಾಡಿದ್ದ ಇರೋಮ್ ಶರ್ಮಿಳಾ

ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕೆಲವೇ ರಾಜ್ಯಗಳಲ್ಲಿ ಮಣಿಪುರ ಕೂಡಾ ಒಂದು. ಓಕ್ರಾಮ್ ಇಬೋಬಿ ಸಿಂಗ್ ಇಲ್ಲಿ ಮುಖ್ಯಮಂತ್ರಿಯಾಗಿದ್ದಾರೆ. ಇವರ ವಿರುದ್ಧ ಇರೋಮ್ ಶರ್ಮಿಳಾ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಸೇನೆಯ ವಿರುದ್ಧ ಹೋರಾಡುತ್ತಿದ್ದ ಅವರು ಸಕ್ರಿಯ ರಾಜಕಾರಣಕ್ಕೆ ಬರುತ್ತಿರುವುದು ವಿಶೇಷ.

ಇನ್ನು ಇತ್ತೀಚೆಗೆ ಇಲ್ಲಿನ ರಾಜ್ಯ ಸರಕಾರ ಏಳು ಹೊಸ ಜಿಲ್ಲೆಗಳನ್ನು ರಚಿಸಿತ್ತು. ಇದನ್ನು ತೀವ್ರವಾಗಿ ವಿರೋಧಿಸುತ್ತಿರುವ ನಾಗಾ ಬಂಡುಕೋರರು ರಾಷ್ಟ್ರೀಯ ಹೆದ್ದಾರಿ-2ನ್ನು ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಬಂದ್ ಮಾಡಿದ್ದಾರೆ. ಇದರಿಂದ ರಾಜ್ಯದ ಜನಜೀವನವೇ ಅಲ್ಲೋಲ ಕಲ್ಲೋಲವಾಗಿದ್ದು, ಚುನಾವಣೆ ಮೇಲೆ ಗಂಭೀರ ಪರಿಣಾಮಗಳನ್ನು ಬೀರುವ ಸಾಧ್ಯತೆ ಇದೆ.

ಆದರೆ 2012ರ ಚುನಾವಣೆಯನ್ನು ನೋಡಿದರೆ ಇಲ್ಲಿ ಕಾಂಗ್ರೆಸ್ಸಿಗೆ ಇತರ ಪಕ್ಷಗಳು ಸ್ಪರ್ಧೆ ನೀಡುವ ಸಾಧ್ಯತೆಗಳು ಕಡಿಮೆ. 60 ಸದಸ್ಯ ಬಲದ ಹಾಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ 47 ಶಾಸಕರನ್ನು ಹೊಂದಿದ್ದರೆ, ವಿರೋಧ ಪಕ್ಷ ತೃಣಮೂಲ ಕಾಂಗ್ರೆಸ್ ಕೇವಲ 7 ಶಾಸಕರನ್ನು ಹೊಂದಿದೆ. ಇಲ್ಲಿ ಈ ಬಾರಿಯೂ ಕಾಂಗ್ರೆಸ್ ನಿರಾಯಾಸವಾಗಿ ಗೆಲ್ಲಬಹುದು ಎಂದು ಆರಂಭಿಕ ಸಮೀಕ್ಷೆಗಳು ಹೇಳುತ್ತಿವೆ. ಆದರೆ ಇನ್ನೊಂದು ಸಮೀಕ್ಷೆಯ ಪ್ರಕಾರ ಬಿಜೆಪಿ ಅಧಿಕಾರಕ್ಕೆ ಏರಲಿದೆ. ಹೀಗಾಗಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಫಲಿತಾಂಶ ಬಂದ ನಂತರವೇ ಗೊತ್ತಾಗಲಿದೆ.

ಉತ್ತರಖಂಡ:

ಕಾಂಗ್ರೆಸ್ ಅಧಿಕಾರದಲ್ಲಿರುವ ಮತ್ತೊಂದು ಪುಟ್ಟ ರಾಜ್ಯ ಉತ್ತರಖಂಡ. ಇಲ್ಲಿಯೂ ಫೆಬ್ರವರಿ 15ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

70 ಸದಸ್ಯ ಬಲದ ಉತ್ತರಖಂಡ ವಿಧಾಸಭೆಗೆ 2012ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 32, ಬಿಜೆಪಿ 31 ಕ್ಷೇತ್ರಗಳಲ್ಲಿ ಗೆದ್ದು ಅತಂತ್ರ ವಿಧಾನಸಭೆ ಸೃಷ್ಟಿಯಾಗಿತ್ತು. ನಂತರ ಕಾಂಗ್ರೆಸ್ ಬಹುಜನ ಸಮಾಜವಾದಿ ಪಕ್ಷದ 3 ಶಾಸಕರು ಮತ್ತು ಇತರ 4 ಜನ ಶಾಸಕರ ಬೆಂಬಲದೊಂದಿಗೆ ಸರಕಾರ ರಚಿಸಿತ್ತು. ಆರಂಭದಲ್ಲಿ ವಿಜಯ್ ಬಹುಗುಣ ಇಲ್ಲಿ ಮುಖ್ಯಮಂತ್ರಿಯಾಗಿದ್ದರು. ಈಗ ಹರೀಶ್ ರಾವತ್ ಆಡಳಿತ ನಡೆಸುತ್ತಿದ್ದಾರೆ.

ಇಲ್ಲಿ ನಡೆದಿರುವ ಒಂದು ಪ್ರಾಥಮಿಕ ಸಮೀಕ್ಷೆಯಲ್ಲಿ ಬಿಜೆಪಿ ಆಡಳಿತಕ್ಕೆ ಬರುತ್ತದೆ ಎಂದಿದ್ದರೆ, ಇನ್ನೊಂದು ಸರ್ವೆ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ಹೇಳಲಾಗಿದೆ. ಏನೇ ಆದರೂ ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಇರಲಿದೆ.

ಒಟ್ಟು 690 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, 16 ಕೋಟಿಗೂ ಹೆಚ್ಚು ಮತದಾರರಿದ್ದಾರೆ. 85,000ಕ್ಕೂ ಹೆಚ್ಚು ಮತದಾನ ಕೇಂದ್ರಗಳನ್ನು ಇವರಿಗಾಗಿ ತೆರೆಯಲಾಗಿದ್ದು, ರಕ್ಷಣೆಗಾಗಿ ಕೇಂದ್ರದ ಕಡೆಯಿಂದ 85 ಸಾವಿರ ಭದ್ರತಾ ಸಿಬ್ಬಂದಿಗಳು ಇರಲಿದ್ದಾರೆ.

ನೋಟ್ ಬ್ಯಾನ್ ನಂತರ ದೇಶದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ಅನಾಣ್ಯೀಕರಣದ ಪರಿಣಾಮಗಳು ಫಲಿತಾಂಶದಲ್ಲಿ ದಾಖಲಾಗಲಿವೆ. ಜತೆಗೆ ಮುಂದಿನ ಲೋಕಸಭಾ ಚುನಾವಣೆಗೆ ಇದು ದಿಕ್ಸೂಚಿಯಾಗಲಿದೆ.