samachara
www.samachara.com
‘ಬದನವಾಳು'ವಿನಿಂದ ಬಿಜೆಪಿವರೆಗೆ: ಕುತೂಹಲ ಮೂಡಿಸಿರುವ ದಲಿತ ಹೋರಾಟಗಾರನ 'ಲಿಂಗಾಯತ ಸಮೀಕರಣ'!
ಸುದ್ದಿ ಸಾಗರ

‘ಬದನವಾಳು'ವಿನಿಂದ ಬಿಜೆಪಿವರೆಗೆ: ಕುತೂಹಲ ಮೂಡಿಸಿರುವ ದಲಿತ ಹೋರಾಟಗಾರನ 'ಲಿಂಗಾಯತ ಸಮೀಕರಣ'!

ಸಚಿವ

ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಕಾಂಗ್ರೆಸ್ಗೆ ಗುಡ್ ಬೈ ಹೇಳಿದ್ದ ಮಾಜಿ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಸೋಮವಾರ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಬೆಂಬಲಿಗರನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಪಕ್ಷಕ್ಕೆ ಬರ ಮಾಡಿಕೊಂಡಿದ್ದಾರೆ. ಮುಂದೆ ನಡೆಯಲಿರುವ ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ. ಮೇಲ್ನೋಟಕ್ಕೆ ಇದೊಂದು ಸಾಮಾನ್ಯ ರಾಜಕೀಯ ನಡೆಯಂತೆ ಭಾಸವಾದರೂ, ಆಳದಲ್ಲಿ ಹಳೇ ಮೈಸೂರು ಭಾಗದ ಹೊಸ ರಾಜಕೀಯ ಸಮೀಕರಣದ ಪ್ರಯೋಗಕ್ಕೆ ಇದು ನಾಂದಿ ಹಾಡಿದೆ. ಅದು ದಲಿತ ಮತ್ತು ಲಿಂಗಾಯುತ ಜಾತಿಗಳ ಸಮೀಕರಣ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಬದನವಾಳು ಹೋರಾಟಗಾರನ ಹೊಸ ಸಮೀಕರಣ:

ನಂಜನಗೂಡು ತಾಲೂಕಿನ ಬದನವಾಳು ಗ್ರಾಮದ ದಲಿತರ ನರಮೇಧದ ನಂತರ ರಾಜಕೀಯ ಪ್ರವರ್ಧಮಾನಕ್ಕೆ ಬಂದವರು ಶ್ರೀನಿವಾಸ್ ಪ್ರಸಾದ್. ಹಲವು ಕಾರಣಗಳಿಗೆ ಬದನವಾಳು ಜನಪ್ರಿಯ ಗ್ರಾಮ. ಇಲ್ಲಿಗೆ ಹಿಂದೊಮ್ಮೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಭೇಟಿ ನೀಡಿದ್ದರು. ಇಲ್ಲಿನ ಖಾದಿ ರಾಷ್ಟ್ರಮಟ್ಟದಲ್ಲಿ ಜನಪ್ರಿಯವಾಗಿತ್ತು. ಇದೇ ಗ್ರಾಮದಲ್ಲಿ 2015ರಲ್ಲಿ ರಂಗಕರ್ಮಿ ಪ್ರಸನ್ನ ಸುಸ್ಥಿರ ಬದುಕಿಗಾಗಿ ‘ಬದನವಾಳು ಆಂದೋಲನ’ವನ್ನೂ ಹಮ್ಮಿಕೊಂಡಿದ್ದರು. ಆಗ ಬಾಲಿವುಡ್ ನಟ ಇರ್ಫಾನ್ ಖಾನ್ ಕೂಡಾ ಗ್ರಾಮಕ್ಕೆ ಭೇಟಿ ನೀಡಿ ಹೋಗಿದ್ದರು. ಇದು ಗ್ರಾಮದ ಒಂದು ಚರಿತ್ರೆಯಾದರೆ ಇಲ್ಲಿನ ‘ನರಮೇಧ’ದ್ದು ಇನ್ನೊಂದು ಕತೆ.

ಕೋಲಾರ ಅಂತ ಬಂದಾಗ ಹೇಗೆ ಕಂಬಾಲಪಲ್ಲಿ ನೆನಪಾಗುತ್ತದೋ ಹಾಗೆ ಹಳೇ ಮೈಸೂರು ಭಾಗಕ್ಕೆ ಬಂದಾಗ ಈ ಬದನವಾಳು ನೆನಪಾಗುತ್ತದೆ. 1992ರಲ್ಲಿ ಇಲ್ಲಿ ಭೀಕರ ನರಮೇಧವೊಂದು ನಡೆದು ಹೋಯಿತು.ಇದು ಲಿಂಗಾಯುತ ಮತ್ತು ದಲಿತರ ನಡುವಿನ ಜಾತಿ ವೈಷಮ್ಯದ ಬೆಂಕಿಯಾಗಿತ್ತು.

1992ನೇ ಇಸವಿ. ಬದನವಾಳು ಗ್ರಾಮದ ಎಲ್ಲಾ ಜಾತಿಯವರು ಸೇರಿ ದೇವಸ್ಥಾನದ ಜೀರ್ಣೊದ್ದಾರಕ್ಕೆ ಕೈ ಹಾಕಿದ್ದರು. ಅದಕ್ಕಾಗಿ ಪ್ರತಿಯೊಂದು ಜಾತಿಯವರ ಬಳಿಯೂ ಹಣ ಸಂಗ್ರಹಿಸಿ, ಜೀರ್ಣೊದ್ದಾರದ ಕೆಲಸ ಮುಗಿಸಿದರು. ಆದರೆ ದೇವಸ್ಥಾನದ ಪ್ರವೇಶ ಸಂದರ್ಭ ಬಂದಾಗ ದಲಿತರಿಗೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ಹಣ ನೀಡಿದ್ದ ದಲಿತರು ರೊಚ್ಚಿಗೆದ್ದರು. ಕೊನೆಗೆ ಇದು ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದು, ಅವರೇ ಮುಂದೆ ನಿಂತು ದಲಿತರಿಗೆ ದೇಗುಲ ಪ್ರವೇಶಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ಕೆಂಡ ಮಂಡಲವಾದ ಲಿಂಗಾಯಿತ ಸಮುದಾಯದವರು ದಲಿತರ ಮೇಲೆ ಕತ್ತಿ ಮಸೆಯಲು ಪ್ರಾರಂಭಿಸಿದರು. ದಲಿತರ ಮೇಲಿನ ಈ ಲಿಂಗಾಯತರ ಕೋಪ ಕೊನೆಗೊಂದು ದಿನ ಆಸ್ಪೋಟಗೊಂಡಿತು.

ಅದೊಂದು ದಿನ ಬದನವಾಳು ಗ್ರಾಮಕ್ಕೆ ಸೇರಿದ ದಲಿತ ಯುವಕರು ಪಕ್ಕದ ಊರಿನಿಂದ ಕ್ರಿಕೆಟ್ ಟೂರ್ನಮೆಂಟ್ ಮುಗಿಸಿಕೊಂಡು ಬರುತ್ತಿದ್ದರು. ಆಗ ದಾರಿಯಲ್ಲಿ ಕಾದು ಕುಳಿತಿದ್ದ ಲಿಂಗಾಯಿತರು, ಶಾಲಾ ಶಿಕ್ಷಕ ಸೇರಿದಂತೆ ಮೂವರು ದಲಿತರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ದಲಿತರು ಸಾಮಾಜಿಕ ನ್ಯಾಯಕ್ಕಾಗಿ ಬೀದಿಗಿಳಿದರು. ಅಂದು ಇಡೀ ನಂಜನಗೂಡು ಅಲ್ಲೋಲ ಕಲ್ಲೋಲವಾಗಿ ಹೋಗಿತ್ತು. ಲಿಂಗಾಯಿತರು ಮತ್ತು ದಲಿತರು ಪರಸ್ಪರ ವೈರಿಗಳಾಗಿ ಕಾದಾಡಿದ್ದರು. ಅಷ್ಟೊತ್ತಿಗೆ ಬಲಗೊಂಡಿದ್ದ ಡಿಎಸ್ಎಸ್ ದಲಿತರ ಪರ ಧ್ವನಿ ಎತ್ತಿತು. ಇಷ್ಟಕ್ಕೆ ನ್ಯಾಯ ಸಿಗದ ದಲಿತರು ಅಂದಿನ ಕ್ರಾಂತಿಕಾರಕ ಬರಹಗಾರರಾದ ಮುಳ್ಳೂರ್‍ ನಾಗರಾಜ್ ಅವರ ನೇತೃತ್ವದಲ್ಲಿ ನಂಜನಗೂಡಿನ ಟೌನ್ ನಲ್ಲಿ ಮೆರವಣಿಗೆಯನ್ನು ಹಮ್ಮಿಕೊಂಡರು. ಆ ದಿನ ಇನ್ನೊಂದು ಅವಘಡ ನಡೆದು ಹೋಯಿತು.

ದಲಿತರೆಲ್ಲ ಸೇರಿ ಮೆರವಣಿಗೆಯ ಹಾದಿಯಲ್ಲಿ ದಲಿತ ಯುಕನೊಬ್ಬನನ್ನು ಚಟ್ಟದ ಮೇಲಿಟ್ಟು ಅಣಕು ಶವಯಾತ್ರೆ ಮಾಡುತ್ತಾ ಬರುತ್ತಿದ್ದರು. ಆ ಹುಡುಗನಿಗೆ ಸ್ವತಃ ಪೋಲಿಸ್ ಕಮಿಷನರ್‍ ಗುಂಡಿಟ್ಟು ಕೊಂದು ಹಾಕಿದರು. ಮರು ಕ್ಷಣವೇ ದಲಿತರೆಲ್ಲಾ ಬೀದಿಗೆ ಬಂದರು. ದೊಡ್ಡ ಹೋರಾಟವೇ ಆರಂಭವಾಯಿತು. ಇಷ್ಟೆಲ್ಲಾ ಬೆಳವಣಿಗೆಯನ್ನು ನೋಡಿ ಅಂದಿನ ಚಾಮರಾಜನಗರ ಸಂಸದರಾಗಿದ್ದ ವಿ ಶ್ರೀನಿವಾಸ್ ಪ್ರಸಾದ್ ತಮ್ಮ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಪ್ರತಿಭಟನೆಗೆ ಧುಮುಕಿದರು. ದಲಿತರ ಸಾಮಾಜಿಕ ನ್ಯಾಯಕ್ಕಾಗಿ ಶ್ರೀನಿವಾಸ್ ಪ್ರಸಾದ್ ಅವರು ಮುಂದಾಳತ್ವ ವಹಿಸಿದರೆ, ಕೊಲೆ ಮಾಡಿದ್ದ ಲಿಂಗಾಯುತ ಸಮುದಾಯಕ್ಕೆ ಅಂದಿನ ಶಾಸಕ ಬೆಂಕಿ ಮಹದೇವ ರಕ್ಷಣೆ ನೀಡಿದ್ದರು. ಜತೆಗೆ, ಸುತ್ತೂರು ಮಠ (ಜೆಎಸ್ಎಸ್) ಕೂಡ ರಕ್ಷಣೆಯನ್ನೂ ನೀಡಿತ್ತು ಎಂದು ಬರಹಗಾರ ಹಾರೋಹಳ್ಳಿ ರವೀಂದ್ರ 'ಲಡಾಯಿ ಪ್ರಕಾಶನ' ಬ್ಲಾಗ್ ಬರಹದಲ್ಲಿ ಉಲ್ಲೇಖಿಸುತ್ತಾರೆ.

"ಲಿಂಗಾಯುತರಾಗಿದ್ದರೂ ತಮ್ಮ ಸಂಪಾದಕತ್ವದ 'ಆಂದೋಲನ ಪತ್ರಿಕೆ'ಯಲ್ಲಿ ಪತ್ರಕರ್ತ ರಾಜಶೇಖರ ಕೋಟಿ ದಲಿತರ ಹೋರಾಟದ ಜತೆಗಿದ್ದರು," ಎಂದು ಪತ್ರಕರ್ತರೊಬ್ಬರು ನೆನಪು ಮಾಡಿಕೊಳ್ಳುತ್ತಾರೆ.

ಹೋರಾಟ ಗೋಲಿಬಾರ್ ನಂತರ ತಣ್ಣಗೇನೂ ಆಗಲಿಲ್ಲ. ತದನಂತರ ದಲಿತರೆಲ್ಲ ಸೇರಿ ಸಮಾವೇಶಗೊಳ್ಳಲು ಕೊಳ್ಳೆಗಾಲ, ಸಂತೇಮಾರಹಳ್ಳಿ, ಚಾಮರಾಜನಗರ, ಯಳಂದೂರು ಮುಂತಾದ ಕಡೆಯಿಂದ ಬರುವಾಗ ದಲಿತರು ಬರುತ್ತಿದ್ದ ಲಾರಿಗಳಿಗೆ ಲಿಂಗಾಯಿತರು ಚಪ್ಪಲಿ ಎಸೆದು ಅವಮಾನಿಸಿದರು. ಇದರಿಂದ ಉಮ್ಮತ್ತೂರಿನಲ್ಲಿ ಬಹುದೊಡ್ಡ ಘರ್ಷಣೆ ನಡೆಯಿತು. ಕೊನೆಗೆ ಪ್ರಸಾದ್ ಅವರ ಧೃಢ ನಿರ್ಧಾರದಿಂದ ಈ ಕೇಸನ್ನು ಸಿಬಿಐಗೆ ವಹಿಸಲಾಯಿತು.

ಸಿಬಿಐ ಪ್ರಕರಣದ ತನಿಖೆ ನಡೆಸಿ ತನ್ನ ವರದಿ ಸಲ್ಲಿಸಿತು. ಇದರಲ್ಲಿ 150 ಜನರನ್ನು ಆರೋಪಿಗಳನ್ನಾಗಿ ಹೆಸರಿಸಿತು. 18 ವರ್ಷಗಳ ನಂತರ 2010 ರಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯ 23 ಜನರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿತು. 3 ಜನ ಅದಾಗಲೇ ಮರಣ ಹೊಂದಿದ್ದರಿಂದ ಉಳಿದ 20 ಜನರಿಗೆ ಶಿಕ್ಷೆಯಾಯಿತು. ನಂತರ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿ 20 ಜನರಲ್ಲಿ 7 ಜನರನ್ನು ಖುಲಾಸೆಗೊಳಿಸಿತು. ಉಳಿದ 13 ಜನರಿಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿತು.

ಬಿಜೆಪಿಯೇ ಏಕೆ?

ಹೀಗೆ ದಲಿತ ಚಳವಳಿಯ ಮೂಸೆಯಿಂದ ಹೊರ ಬಂದಿದ್ದ ಶ್ರೀನಿವಾಸ್ ಪ್ರಸಾದ್ ಇವತ್ತು ಹೊಸ ಸಮೀಕರಣದೊಂದಿಗೆ ಚುನಾವಣೆಗೆ ಹೊರಟಿದ್ದಾರೆ. ಅವತ್ತು ಯಾರು ದಲಿತರ ಜತೆ ಕಾದಾಟಕ್ಕಿಳಿದಿದ್ದರೂ ಅದೇ ಸಮುದಾಯದ ಯಡಿಯೂರಪ್ಪನವರ ಜತೆ ತಮ್ಮ ರಾಜಕೀಯ ಜೀವನ ಕೊನೆ ದಿನಗಳ ಚದುರಂಗದಾಟಕ್ಕೆ ಇಳಿದಿದ್ದಾರೆ. ‘ಲಿಂಗಾಯುತ-ದಲಿತ’ ಎನ್ನುವುದು ಅವರ ಚುನಾವಣೆಯ ಹೊಸ ಕೆಮೆಸ್ಟ್ರಿ. ಅವರ ಸ್ಪರ್ಧೆ ಹಿಂದೊಮ್ಮೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಉಪ ಚುನಾವಣೆಯನ್ನು ನೆನಪಿಸುತ್ತಿದೆ. ಅವತ್ತು ಇಡೀ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರವೇ ಸಿದ್ಧರಾಮಯ್ಯರನ್ನು ಮುಗಿಸಲು ಹೊರಟಿತ್ತು. ಆದರೆ ಸಿದ್ದು ಕೂದಲೆಳೆ ಅಂತರದಿಂದ ಗೆದ್ದು ರಾಜಕೀಯ ಪುನರ್ಜನ್ಮ ಪಡೆದಿದ್ದರು. ಇವತ್ತು ಅದೇ ಕಾಂಗ್ರೆಸ್ ಸರಕಾರ ಹೇಗಾದರೂ ಶ್ರೀನಿವಾಸ್ ಪ್ರಸಾದ್ ಗಂಟು ಮೂಟೆ ಕಟ್ಟಿಸಬೇಕು ಎಂದು ಹೊರಟಿದೆ.


       ಶ್ರೀನಿವಾಸ್ ಪ್ರಸಾದ್ ಮತ್ತು ಸಿದ್ದರಾಮಯ್ಯ; ಒಂದೇ ಜಮಾನದ ರಾಜಕಾರಣಿಗಳು
ಶ್ರೀನಿವಾಸ್ ಪ್ರಸಾದ್ ಮತ್ತು ಸಿದ್ದರಾಮಯ್ಯ; ಒಂದೇ ಜಮಾನದ ರಾಜಕಾರಣಿಗಳು

ಇಳಿ ವಯಸ್ಸಲ್ಲೂ ಶ್ರೀನಿವಾಸ್ ಪ್ರಸಾದ್ ಪಟ್ಟು ಬಿಡುತ್ತಿಲ್ಲ. “ನನಗೆ ಒಳ್ಳೆ ರೀತಿಯಲ್ಲಿ ಕಳುಹಿಸಿಕೊಟ್ಟರೂ ಹೋಗುತ್ತಿದೆ. ಆದರೆ ಹೀಗೆ ಅನಾರೋಗ್ಯ ಎಂದೆಲ್ಲಾ ಹೇಳಿ ಕಳುಹಿಸಿದ್ದಾರೆ. ನಾನು ಸಿದ್ಧರಾಮಯ್ಯ ಒಂದೇ ಜಮಾನದವರು. ಅವನು ಇವತ್ತು ಅಧಿಕಾರ ಅನುಭವಿಸುತ್ತಿದ್ದಾನೆ ಅಷ್ಟೆ. ನನಗೀಗ ಬೇರೆ ದಾರಿ ಇಲ್ಲ. ನಾನು ಹೊಸ ಪಕ್ಷ ಕಟ್ಟಿ ಚುನಾವಣೆಗೆ ನಿಲ್ಲುವುದು ಅಸಾಧ್ಯದ ಮಾತು. ಕೊನೆ ದಿನಗಳಲ್ಲಿ ನನ್ನನ್ನು ಸ್ವಾಭಿಮಾನದಿಂದ ನಡೆಸಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಅಷ್ಟು ಸಾಕು. ಹೀಗಾಗಿ ಬಿಜೆಪಿ ಸೇರುತ್ತಿದ್ದೇನೆ. ಉಪ ಚುನಾವಣೆಗೆ ನಿಲ್ಲುತ್ತೇನೆ. ಗೆದ್ದೇ ಗೆಲ್ಲುತ್ತೇನೆ. ಸಾರ್ವತ್ರಿಕ ಚುನಾವಣೆ ಬಗ್ಗೆ ಮುಂದೆ ನೋಡೋಣ,” ಎಂದು ಇತ್ತೀಚೆಗೆ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು.

ಇನ್ನು ಸೋಮವಾರ ಬಿಜೆಪಿ ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಶ್ರೀನಿವಾಸ್ ಪ್ರಸಾದ್, “ನರೇಂದ್ರ ಮೋದಿಯವರ ಆಡಳಿತ ವೈಖರಿಯನ್ನು ಹೊಗಳಿದ್ದೇ ನನ್ನನ್ನು ಸಚಿವ ಸಂಪುಟದಿಂದ ತೆಗೆಯಲು ಕಾರಣ ಅಂತಾ ಹೇಳುತ್ತಿದ್ದಾರೆ. ದಲಿತರು, ಹಿಂದುಳಿದವರು ಬೆಂಬಲಿಸದೇ ಇದ್ದರೆ ಪಾರ್ಲಿಮೆಂಟ್ ನಲ್ಲಿ ಬಿಜೆಪಿ ಅಷ್ಟೊಂದು ಬಹುಮತ ಗಳಿಸಲು ಸಾಧ್ಯವಾಗುತ್ತಿರಲಿಲ್ಲ,” ಎಂದು ಅಭಿಪ್ರಾಯಪಟ್ಟರು.

“ನನಗೆ ರಾಜಕಾರಣ ಸಾಕು. ಇನ್ನು ಎರಡು ವರ್ಷ ರಾಜಕೀಯದಲ್ಲಿರುತ್ತೇನೆ ಅಂತ ಹೇಳಿದ್ದೆ. ಆದರೂ  ನನ್ನನ್ನು ಸಚಿವ ಸ್ಥಾನದಿಂದ ತೆಗೆದುಹಾಕಿದರು. ಸಿದ್ದರಾಮಯ್ಯಗೆ ಅಸೂಯೆ ಬುದ್ಧಿ. ಇದರಿಂದ ನಾನೇನು ಹಿಂದಕ್ಕೆ ಸರಿಯುವುದಿಲ್ಲ. ನಾವು ಪ್ರಪಾತದಿಂದ ಮೇಲೆ ಬಂದ ಸಮುದಾಯದವರು. ಅಂಬೇಡ್ಕರ್ ಅವರಂತೂ ಜರ್ಜರಿತರಾಗಿದ್ದವರು. ಬೆಂಕಿಯ ಜ್ವಾಲೆಗಳಿಂದ ಎದ್ದು ಬಂದವರು. ಅಂತಹಾ ಅಂಬೇಡ್ಕರ್ ನಮಗೆ ಕಲಿಸಿರೋದು ಸ್ವಾಭಿಮಾನ,” ಎಂದು ಹೇಳಿದರು.


       ಸ್ವಾಭಿಮಾನಿ ಸಮಾವೇಶದಲ್ಲಿ ಶ್ರೀನಿವಾಸ್ ಪ್ರಸಾದ್ (ಚಿತ್ರ: ಟೈಮ್ಸ್ ಆಫ್ ಇಂಡಿಯಾ)
ಸ್ವಾಭಿಮಾನಿ ಸಮಾವೇಶದಲ್ಲಿ ಶ್ರೀನಿವಾಸ್ ಪ್ರಸಾದ್ (ಚಿತ್ರ: ಟೈಮ್ಸ್ ಆಫ್ ಇಂಡಿಯಾ)

ಉಪ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಪ್ರಸಾದ್ ಪಣ ತೊಟ್ಟಿದ್ದಾರೆ. ಅದಕ್ಕೆ ಈಗಾಗಲೇ ಸ್ವಾಭಿಮಾನಿ ಸಮಾವೇಶಗಳ ಮೂಲಕ ಸಿದ್ಧತೆ ಮಾಡಿಕೊಂಡಿದ್ದಾರೆ. ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸುವ ಮೂಲಕ ಬಿಜೆಪಿ ಸೇರಬೇಕು ಎಂಬ ಉದ್ದೇಶವನ್ನು ಪ್ರಸಾದ್ ಹೊಂದಿದ್ದರು. ಆದರೆ ಸದ್ಯದಲ್ಲೇ ಚುನಾವಣೆ ಘೋಷಣೆಯಾಗುತ್ತಿದ್ದು, ಆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಕರೆಸಿ ಬೃಹತ್ ಸಭೆ ನಡೆಸುವುದು ಚುನಾವಣೆಗೆ ಅನುಕೂಲವೆಂಬ ಕಾರಣಕ್ಕೆ ಈಗ ಪಕ್ಷದ ಕಚೇರಿಯಲ್ಲಿಯೇ ಔಪಚಾರಿಕವಾಗಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗಿದೆ.

ಸದ್ಯ ಹಳೇ ಮೈಸೂರು ಭಾಗದಲ್ಲಿ ಸಮರ್ಥ ನಾಯಕರೊಬ್ಬರ ಅನಿವಾರ್ಯತೆ ಎದುರಿಸುತ್ತಿದ್ದ ಬಿಜೆಪಿಗೆ ಪ್ರಸಾದ್ ಸೇರ್ಪಡೆ ಬಲ ತುಂಬಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಅದರಾಚೆಗೆ ಬಿಜೆಪಿಯಿಂದ ಮಾರು ದೂರವೇ ಉಳಿದಿದ್ದ ದಲಿತರನ್ನು ಶ್ರೀನಿವಾಸ್ ಪ್ರಸಾದ್ ಪಕ್ಷದತ್ತ ಕರೆತರುತ್ತಾರೋ ಎಂಬುದು ಕುತೂಹಲ ಹುಟ್ಟಿಸಿದೆ. ‘ಲಿಂಗಾಯುತ-ದಲಿತ’ ಜಾತಿ ಸಮೀಕರಣದ ಭವಿಷ್ಯ ಅವರ ಉಪಚುನಾವಣೆಯ ಸೋಲು ಗೆಲುವಿನ ಮೇಲೆ ನಿರ್ಧಾರವಾಗಲಿದೆ.

ಬಿಜೆಪಿಯ ಹಳೆ ನೆಂಟ ಶ್ರೀನಿವಾಸ್ ಪ್ರಸಾದ್:

ಶ್ರೀನಿವಾಸ್ ಪ್ರಸಾದ್ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ 70ರ ದಶಕಕ್ಕೂ ಮೊದಲೇ ಸ್ಪರ್ಧೆ ಮಾಡುವ ಮೂಲಕ ಸಕ್ರಿಯ ರಾಜಕೀಯಕ್ಕೆ ಬಂದವರು. ಬಳಿಕ 1980ರಿಂದ 1991ರ ತನಕ ಕಾಂಗ್ರೆಸ್ನಿಂದ ಸ್ಪರ್ಧಿಸಿ ನಾಲ್ಕು ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 1986ರಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು. ಆದರೆ 1996ರಲ್ಲಿ ಪ್ರಸಾದ್ ಜನತಾದಳದ ಸಿದ್ದರಾಜು ಎದುರು ಸೋಲು ಅನುಭವಿಸಿದರು. ಮುಂದೆ 1999ರಲ್ಲಿ ಕಾಂಗ್ರೆಸ್ ಸಿದ್ದರಾಜು ಅವರಿಗೆ ಟಿಕೆಟ್ ಕೊಟ್ಟಾಗ, ಪ್ರಸಾದ್ ಸಿಡಿದೆದ್ದು ರಾಮಕೃಷ್ಣ ಹೆಗಡೆ ಅವರ ಲೋಕಶಕ್ತಿ ಸೇರ್ಪಡೆಯಾದರು. ನಂತರ ಸಂಯುಕ್ತ ಜನತಾದಳದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಆಗ ಅವರು ವಾಜಪೇಯಿ ಸಂಪುಟದಲ್ಲಿ ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವರಾಗಿದ್ದರು. 2008ರಲ್ಲಿ ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನಸಭೆಗೆ ಆಯ್ಕೆಯೂ ಆದರು. 2013ರಲ್ಲಿ ಪುನಾರಾಯ್ಕೆಯಾಗಿ ಮೂರು ವರ್ಷ ಕಂದಾಯ ಸಚಿವರಾಗಿದ್ದರು.

ಐದು ಬಾರಿ ಸಂಸದರಾಗಿ, ಒಮ್ಮೆ ರಾಜ್ಯಖಾತೆ ಕೇಂದ್ರ ಸಚಿವರಾಗಿ, ಎರಡು ಬಾರಿ ಶಾಸಕರಾಗಿ, ಮೂರು ವರ್ಷ ಕಂದಾಯ ಮಂತ್ರಿಯಾಗಿ ಅಪಾರ ರಾಜಕೀಯ ಅನುಭವ ಉಳ್ಳವರು ಶ್ರೀನಿವಾಸ್ ಪ್ರಸಾದ್. ಅವರನ್ನು ವಯಸ್ಸು ಮತ್ತು ಅನಾರೋಗ್ಯದ ಕಾರಣ ಮುಂದಿಟ್ಟು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಂಪುಟದಿಂದ ಕಿತ್ತು ಹಾಕಿದ್ದರು. ಇದರಿಂದ ನೊಂದ ಪ್ರಸಾದ್ ಕಾಂಗ್ರೆಸ್ಸಿನಿಂದ ಹೊರ ಬಂದಿದ್ದರು. ಸದ್ಯ ಅವರಿಗೆ 67 ವರ್ಷ ವಯಸ್ಸು.