samachara
www.samachara.com
ತೆರಿಗೆ ಕಳ್ಳರಿಗೆ ಮಗ್ಗಲು ಮುಳ್ಳಾದವರು; ಯಾರಿವರು 'ಇಡಿ'ಯವರು?
ಸುದ್ದಿ ಸಾಗರ

ತೆರಿಗೆ ಕಳ್ಳರಿಗೆ ಮಗ್ಗಲು ಮುಳ್ಳಾದವರು; ಯಾರಿವರು 'ಇಡಿ'ಯವರು?

ಜಾರಿ ನಿರ್ದೇಶನಾಲಯ

ಅಥವಾ ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ ಅಥವಾ ಶಾರ್ಟ್ ಅಂಡ್ ಸ್ವೀಟ್ ಆಗಿ ಇಡಿ...

ಹೀಗೊಂದು ಹೆಸರು ಈಗ ಮೇಲಿಂದ ಮೇಲೆ ಕೇಳಿ ಬರುತ್ತಿದೆ. ಹಿಂದೊಮ್ಮೆ ಜಗನ್ ಮೋಹನ್ ರೆಡ್ಡಿ, ಜನಾರ್ಧನ್ ರೆಡ್ಡಿ, ವಿಜಯ್ ಮಲ್ಯ ಪ್ರಕರಣಗಳಲ್ಲಿ ಸುದ್ದಿಕೇಂದ್ರಕ್ಕೆ ಬಂದಿದ್ದ ‘ಇಡಿ’ (ED - Directorate of Enforcement) ಅನಾಣ್ಯೀಕರಣದ ನಂತರ ಮಾಧ್ಯಮಗಳಿಗೆ ಭರಪೂರ ಸುದ್ದಿಯ ಮೂಲವಾಗಿ ಪರಿವರ್ತನೆಯಾಗಿದೆ. ಅಲ್ಲಲ್ಲಿ ರೈಡು ಮಾಡಿದ ಸುದ್ದಿಗಳು ಕಿವಿಗಪ್ಪಳಿಸುತ್ತಲೇ ಇವೆ. ಹಾಗಾದರೆ ಇಡಿ ಎಂದರೇನು? ಜಾರಿ ನಿರ್ದೇಶನಾಲಯ ಏನು ಮಾಡುತ್ತದೆ? ಈ ಎಲ್ಲಾ ಪ್ರಶ್ನೆಗಳಿಗೆ ‘ಸಮಾಚಾರ’ ಇಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿದೆ.

ಜಾರಿ ನಿರ್ದೇಶನಾಲಯ; ಹೆಸರೇ ಹೇಳುವಂತೆ ಇದರ ಕೆಲಸ ಕಾನೂನನ್ನು ಜಾರಿಗೆ ತರುವುದು. ಆದರೆ ಎರಡು ಕಾನೂನುಗಳ ಜಾರಿಯ ಹೊಣೆಯನ್ನಷ್ಟೆ ಜಾರಿ ನಿರ್ದೇಶನಾಲಯಕ್ಕೆ ನೀಡಲಾಗಿದೆ. ‘ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ -1999’ ಮತ್ತು ‘ಲೇವಾದೇವಿ ಕಾಯ್ದೆ- 2002’ ಇದರ ಪರಿಧಿಗೆ ಒಳಪಡುತ್ತದೆ. ಒಟ್ಟಾರೆ ದೇಶ ಮತ್ತು ದೇಶದ ಹೊರಗೆ ನಡೆಯುವ ಹಣಕಾಸು ವ್ಯವಹಾರಗಳ ಮೇಲೆ ಕಣ್ಣಿಟ್ಟು ಕೆಲಸ ಮಾಡುತ್ತದೆ ಈ ‘ಇಡಿ’.

ಕಾನೂನು ಜಾರಿಗಾಗಿ ಸಂಸ್ಥೆಯ ಬಳಿ ಒಂದಷ್ಟು ಸಿಬ್ಬಂದಿಗಳಿದ್ದಾರೆ. ಒಂದೊಮ್ಮೆ ಈ ಸಿಬ್ಬಂದಿಗಳು ಸಾಕಾಗದೇ ಹೋದಾಗ ಸಂಸ್ಥೆ ಬೇರೆ ಬೇರೆ ತನಿಖಾ ಸಂಸ್ಥೆಗಳಿಂದ ಸಿಬ್ಬಂದಿಗಳನ್ನು ಎರವಲು ತೆಗೆದುಕೊಳ್ಳುತ್ತದೆ. ಇವರೆಲ್ಲಾ ಕಸ್ಟಮ್ಸ್ ಮತ್ತು ಕೇಂದ್ರೀಯ ಅಬಕಾರಿ ಇಲಾಖೆ, ಆದಾಯ ತೆರಿಗೆ ಇಲಾಖೆ, ಪೊಲೀಸ್ ಮೊದಲಾದ ಸಂಸ್ಥೆಗಳ ಸಿಬ್ಬಂದಿಗಳಾಗಿರುತ್ತಾರೆ. ಹಿಂದೆ ಸಂಸ್ಥೆಯಲ್ಲಿ ಕೇವಲ 758 ಸಿಬ್ಬಂದಿಗಳಿದ್ದರು. 2011ರ ಮಾರ್ಚ್ 11ರಂದು ಸಂಸ್ಥೆಯನ್ನು ಪುನರುಜ್ಜೀವನಗೊಳಿಸಲಾಯಿತು. ಅಲ್ಲಿಂದ ಈಗ 2064 ಸಿಬ್ಬಂದಿಗಳು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ವೇಳೆಗೆ ವಿದೇಶಗಳಲ್ಲಿದ್ದ ಸಂಸ್ಥೆಯ ಅಧಿಕಾರಿಗಳ ಸಂಖ್ಯೆಯನ್ನೂ 21ರಿಂದ 49ಕ್ಕೆ ಹೆಚ್ಚಿಸಲಾಯಿತು.

ಹೀಗಿರುವ ಜಾರಿ ನಿರ್ದೇಶನಾಲಯ ಹುಟ್ಟಿಕೊಂಡಿದ್ದು ಸ್ವಾತಂತ್ರ್ಯ ಬಂದ ಹೊಸತರಲ್ಲಿ. ‘ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ - 1947’ನ್ನು ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳಲು ಹಣಕಾಸು ಇಲಾಖೆ ಅಡಿಯಲ್ಲಿ ‘ಜಾರಿ ಘಟಕ’ವನ್ನು ಮೇ 1, 1956ರಲ್ಲಿ ಸ್ಥಾಪನೆ ಮಾಡಲಾಯಿತು. ಕಾನೂನು ಸಂಬಂಧಿತ ಸೇವೆಯಲ್ಲಿದ್ದ ಅಧಿಕಾರಿಯನ್ನು ಇದರ ನಿರ್ದೇಶಕರಾಗಿ ಆಯ್ಕೆ ಮಾಡಲಾಗುತ್ತದೆ. ಸದ್ಯ ಕರ್ನಲ್ ಸಿಂಗ್ ಎಂಬ ಐಪಿಎಸ್ ಅಧಿಕಾರಿ ಇದರ ನಿರ್ದೇಶಕರಾಗಿದ್ದಾರೆ. ಇವರ ಕೈಕೆಳಗೆ, ಪೊಲೀಸ್, ಆರ್ಬಿಐನಿಂದ ಎರವಲು ಸೇವೆ ಮೇಲೆ ಕರೆತಂದ ಅಧಿಕಾರಿಗಳಿರುತ್ತಾರೆ. ಬೇರೆ ಬೇರೆ ಕ್ಷೇತ್ರದಲ್ಲಿ ಪರಿಣತರು ಬೇಕು ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.

ಸಂಸ್ಥೆ ಆರಂಭವಾದ ಹೊಸತರಲ್ಲಿ ನವದೆಹಲಿಯಲ್ಲಿ ಮಾತ್ರ ಕೇಂದ್ರ ಕಚೇರಿ ಇತ್ತು. ಮುಂದೆ ನಿಧಾನಕ್ಕೆ ಮುಂಬೈ, ಕಲ್ಕತ್ತಾದಲ್ಲಿ ಜಾರಿ ನಿರ್ದೇಶನಾಲಯದ ಪ್ರಾದೇಶಿಕ ಕಚೇರಿಗಳನ್ನು, ವಲಯ ಕಚೇರಿಗಳನ್ನು, ಉಪ ವಲಯ ಕಚೇರಿಗಳನ್ನು ತೆರೆಯಲಾಯಿತು. ನಮ್ಮ ಬೆಂಗಳೂರಿನಲ್ಲಿರುವುದು ವಲಯ ಕಚೇರಿ; ಮತ್ತು ಚೆನ್ನೈನಲ್ಲಿ ನಮಗೆ ಹತ್ತಿರದ ಪ್ರಾದೇಶಿಕ ಕಚೇರಿ ಇದೆ.

1957ರಲ್ಲಿ ಸಂಸ್ಥೆಗೆ ಜಾರಿ ನಿರ್ದೇಶನಾಲಯ ಎಂದು ಮರು ನಾಮಕರಣ ಮಾಡಲಾಯಿತು. ಮಾತ್ರವಲ್ಲ ಸಂಸ್ಥೆಯ ನಿಯಂತ್ರಣವನ್ನು ಹಣಕಾಸು ಇಲಾಖೆಯಿಂದ ಕಂದಾಯ ಸಚಿವಾಲಯಕ್ಕೆ 1960ರಲ್ಲಿ ವರ್ಗಾವಣೆ ಮಾಡಲಾಯಿತು. ಅಷ್ಟೇ ಅಲ್ಲ ಮೂಲ ವಿದೇಶಿ ವಿನಿಮಯ ಕಾಯ್ದೆಗೂ 1973ರಲ್ಲಿ ತಿದ್ದುಪಡಿಯನ್ನು ತರಲಾಯಿತು. 1999ರಲ್ಲಿ ಇದನ್ನೇ ‘ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ’ ಎಂದು ಬದಲಾಯಿಸಲಾಯಿತು. ಜತೆಗೆ ‘ಲೇವಾದೇವಿ ಕಾಯ್ದೆ - 2002’ನ್ನು ಜಾರಿಗೆ ತಂದು ಅದರ ಹೊಣೆಯನ್ನೂ ಜಾರಿ ನಿರ್ದೇಶನಾಲಯದ ಹೆಗಲಿಗೇರಿಸಲಾಯಿತು. ಲೇವಾದೇವಿ ಕಾಯ್ದೆಯಲ್ಲಿ 28 ಬೇರೆ ಬೇರೆ ಕಾಯ್ದೆಗಳ ಒಟ್ಟು 156 ಅಪರಾಧಗಳ ತನಿಖೆಯ ಹೊಣೆಯನ್ನು ಜಾರಿ ನಿರ್ದೇಶನಾಲಯಕ್ಕೆ ನೀಡಲಾಗಿದೆ. ಸದ್ಯ ಸಂಸ್ಥೆ ಈ ಕಾನೂನುಗಳ ಅನ್ವಯ ಕೆಲಸ ಮಾಡುತ್ತದೆ. ಸಂಸ್ಥೆಯ ಬಳಿ ಸುಸಜ್ಜಿತ ಹಣಕಾಸು ಗುಪ್ತಚರ ತಂಡವೂ ಇದ್ದು, ದೇಶದಲ್ಲಿ ನಡೆಯುವ ಎಲ್ಲಾ ವ್ಯವಹಾರಗಳ ಮೇಲೆಯೂ ಒಂದು ಕಣ್ಣಿಟ್ಟಿರುತ್ತದೆ.

ಸಂಸ್ಥೆಗೆ ನ್ಯಾಯದಾನದ ಕೆಲವು ಅಧಿಕಾರಗಳಿವೆ. ತನಿಖೆ ನಡೆಸಿ, ವಿಚಾರಣೆ ಮಾಡಿ ಹಗರಣದ ಮೂರು ಪಟ್ಟು ದಂಡ ಹಾಕಬಹುದು. ಆದರೆ ವಶಕ್ಕೆ ಪಡೆಯಬೇಕಾದರೆ ಅದಕ್ಕೂ ಮೊದಲು ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಗಳನ್ನು ನೀಡಬೇಕಾಗುತ್ತದೆ. ಇನ್ನು ಶೋಕಾಸ್ ನೋಟಿಸ್ ನೀಡುವ, ಸಮನ್ಸ್ ನೀಡುವ ಪವರ್ ಕೂಡ ಸಂಸ್ಥೆಗಿದೆ. ಒಂದೊಮ್ಮೆ ಅಗತ್ಯ ಬಿದ್ದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಜಾರಿ ನಿರ್ದೇಶನಾಲಯಕ್ಕೆ ವಿಶೇಷ ನ್ಯಾಯಾಲಯವನ್ನೂ ಸ್ಥಾಪಿಸಬಹುದು.

ನಿರ್ದೇಶನಾಲಯ ಹಲವು ವಿದೇಶಿ ತನಿಖಾ ಸಂಸ್ಥೆಗಳು ಹಾಗೂ ಸಂಸ್ಥೆಗಳ ಒಕ್ಕೂಟಗಳೊಂದಿಗೆ ಕೈಜೋಡಿಸಿದ್ದು, ಒಂದೊಮ್ಮೆ ಪ್ರಕರಣಗಳು ಅಂತರಾಷ್ಟ್ರೀಯ ಆಯಾಮ ಪಡೆದುಕೊಂಡಾಗ ಇವುಗಳ ಸಹಾಯವನ್ನು ಪಡೆಯಲಾಗುತ್ತದೆ.

ಅಂಕಿ-ಅಂಶ

2015 ಮಾರ್ಚ್ 31ರ ಅಂತ್ಯಕ್ಕೆ ಸಂಸ್ಥೆಯು ವಿದೇಶಿ ವಿನಿಮಯ ನಿರ್ವಹಣೆ ಕಾಯ್ದೆ ಅಡಿಯಲ್ಲಿ 4776 ಮತ್ತು ಲೇವಾದೇವಿ ಕಾಯ್ದೆಯಡಿಯಲ್ಲಿ 1326 (9,000 ಕೋಟಿ ಮೊತ್ತದ) ಕೇಸುಗಳನ್ನು ಬಾಕಿ ಉಳಿಸಿಕೊಂಡಿದ್ದು, ತನಿಖೆ ನಡೆಸುತ್ತಿದೆ. ಸದ್ಯ ಅನಾಣ್ಯೀಕರಣದ ನಂತರ ಜಾರಿ ನಿರ್ದೇಶನಾಲಯ ಅಸಂಖ್ಯಾತ ಪ್ರಕರಣಗಳ ತನಿಖೆಯನ್ನು ಕೈಗೆತ್ತಿಕೊಂಡಿದೆ.

ಇನ್ಯಾವಾಗಾದ್ರೂ ಇಡಿ ದಾಳಿ ಎಂದು ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ನಿಮಗೊಂದು ಜಾರಿ ನಿರ್ದೇಶನಾಲಯದ ಕುರಿತು ಒಂದು ಚಿತ್ರಣ ಲಭ್ಯವಾಗಲಿ ಎಂಬ ಕಾರಣಕ್ಕೆ ಈ ವರದಿ.

ಚಿತ್ರ ಕೃಪೆ:

ಇಂಡಿಯನ್ ಎಕ್ಸ್ ಪ್ರೆಸ್, ಫಸ್ಟ್ ಪೋಸ್ಟ್