samachara
www.samachara.com
‘ದಿ ಸ್ಟೋರಿ ಆಫ್ ಸುನೀಲ್ ಬೋಸ್’: ಅಪ್ಪ ಸಚಿವ ಮಹದೇವಪ್ಪ; ಮಗ ‘ಗುದ್ದಲಿ ಪೂಜೆ’ ಸರದಾರ!
ಸುದ್ದಿ ಸಾಗರ

‘ದಿ ಸ್ಟೋರಿ ಆಫ್ ಸುನೀಲ್ ಬೋಸ್’: ಅಪ್ಪ ಸಚಿವ ಮಹದೇವಪ್ಪ; ಮಗ ‘ಗುದ್ದಲಿ ಪೂಜೆ’ ಸರದಾರ!

ಹೀಗೆ ಧುತ್ತೆಂದು ಪ್ರತ್ಯಕ್ಷ ಆಗಿರುವ ಸುನೀಲ್ ಬೋಸ್ ಯಾರು? ಅವರ ಇತಿಹಾಸ ಏನು ಹೇಳುತ್ತೆ ಅನ್ನೋದರ ಸಂಪೂರ್ಣ ವಿವರಗಳ ವರದಿಗೆ ಇದಿಷ್ಟು ಮುನ್ನುಡಿ.

ಹೆಸರು ಸುನೀಲ್ ಬೋಸ್; ಮೈಸೂರು ಸುತ್ತ ಮುತ್ತ ಈತನನ್ನು ‘ಚಿಕ್ಕವರು’ ಎಂದು ಕರೆಯುವುದು ರೂಢಿ. ಕರ್ನಾಟಕ ಸರಕಾರದ ಲೋಕೋಪಯೋಗಿ ಸಚಿವ, ಕಾಂಗ್ರೆಸ್ ಪಕ್ಷದ ‘ಆರ್ಥಿಕ ಶಕ್ತಿ’ ಡಾ. ಎಚ್. ಸಿ ಮಹದೇವಪ್ಪ ಕುಲಪುತ್ರ.

ಮಾಜಿ ಕಂದಾಯ ಮಂತ್ರಿ ಶ್ರೀನಿವಾಸ್ ಪ್ರಸಾದ್ ರಾಜೀನಾಮೆಯಿಂದ ತೆರವಾಗಿರುವ ನಂಜನಗೂಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸುನೀಲ್ ಬೋಸ್ ಓಡಾಡುತ್ತಿದ್ದಾರೆ. ಅಪ್ಪ, ಮಗ ಇಬ್ಬರೂ ನಂಜನಗೂಡಿನಲ್ಲಿಯೇ ಬೀಡು ಬಿಟ್ಟು ಈಗಾಗಲೇ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.

ಹೀಗೆ ಧುತ್ತೆಂದು ಪ್ರತ್ಯಕ್ಷ ಆಗಿರುವ ಸುನೀಲ್ ಬೋಸ್ ಯಾರು? ಅವರ ಇತಿಹಾಸ ಏನು ಹೇಳುತ್ತೆ ಅನ್ನೋದರ ಸಂಪೂರ್ಣ ವಿವರಗಳ ವರದಿಗೆ ಇದಿಷ್ಟು ಮುನ್ನುಡಿ.

ಸುನೀಲ್ ಬೋಸ್ ಹೆಸರನ್ನು 9 ವರ್ಷ ಹಿಂದೆ ಕೇಳಿದವರ ಸಂಖ್ಯೆ ಕಡಿಮೆ ಇತ್ತು. ಆದರೆ ಇವತ್ತಿಗೆ ರಾಜ್ಯ ರಾಜಕಾರಣದಲ್ಲಿ ಬೋಸ್ ತಮ್ಮ ಛಾಪನ್ನು ಒತ್ತಿದ್ದಾರೆ. ಅದಕ್ಕೆ ಸುನೀಲ್ ಬೋಸ್ ಸಮಸ್ತ ಚಟುವಟಿಕೆಗಳು, ಲಂಚ ಪ್ರಕರಣಗಳು, ಪೊಲೀಸರೇ ಹೊತ್ತು ತಿರುಗಾಡಿದ ಪ್ರಸಂಗಗಳ ಕೊಡುಗೆ ಅಪಾರವಾಗಿದೆ.

ಇಂಥಹ ಸುನೀಲ್ ಬೋಸ್ ಹೆಸರು ಮುನ್ನೆಲೆಗೆ ಬಂದಿದ್ದು 8 ವರ್ಷ ಹಿಂದಿನ ಕತೆ. ಅಷ್ಟರಲ್ಲಾಗಲೇ ಮಹದೇವಪ್ಪ ಜೆಡಿಎಸ್‌ನಿಂದ ಗೆದ್ದು ಮತ್ತೆರಡು ಬಾರಿ ಸೋತು, ಮಗದೊಮ್ಮೆ ಗೆದ್ದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಮಂತ್ರಿಯಾಗಿ ಅಧಿಕಾರ ಕಳೆದುಕೊಂಡಿದ್ದರು. ಸಿದ್ದರಾಮಯ್ಯ ಜತೆ ಅವರೂ ಜೆಡಿಎಸ್ ಬಿಟ್ಟು ಕಾಂಗ್ರೆಸಿಗೆ ವಲಸೆ ಬಂದಿದ್ದವರು, 2008ರ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿದ್ದರು. ಬಾಯಿ ತುಂಬಾ ಸಮಾಜವಾದಿ, ಜನಸಾಮಾನ್ಯರ ಕಲ್ಯಾಣದ ಮಾತುಗಳಿದ್ದವು. ಆದರೆ ಚುನಾವಣೆಗೆ ಬೇಕಾದ ಹಣ ಕೈಯಲ್ಲಿರಲಿಲ್ಲ. ದುಡ್ಡು ಹೊಂದಿಸಲು ಅವತ್ತು ಮೊದಲ ಬಾರಿಗೆ ಸುನೀಲ್ ಬೋಸ್, ಅಪ್ಪನ ಹೆಸರು ಹೇಳಿಕೊಂಡು ಬೀದಿಗೆ ಕಾಲಿಟ್ಟಿದ್ದರು. “ಮಹದೇವಪ್ಪ ಚುನಾವಣೆಗೆ ಬೇಕಾದ ಎಲ್ಲಾ ಹಣವನ್ನು ಸುನೀಲ್ ಮುಂದೆ ನಿಂತು ಸಂಗ್ರಹಿಸಿ ಕೊಟ್ಟರು,” ಎನ್ನುತ್ತವೆ ಟಿ. ಸರಸೀಪುರದ ಮೂಲಗಳು.

ಮಹದೇವಪ್ಪ ಗೆದ್ದರೂ 2008ರ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಯಡಿಯೂರಪ್ಪ ಸರಕಾರ ಆಡಳಿತಕ್ಕೆ ಬಂತು.

ಲಂಚ ಪ್ರಕರಣದಲ್ಲಿ ಆರೋಪಿ:

ಈ ಅವಧಿಯಲ್ಲಿ ಶಾಸಕರ ಮಗನಾಗಿದ್ದ ಸುನೀಲ್ ಬೋಸ್ ಮೊದಲ ಎಡವಟ್ಟು ಮಾಡಿಕೊಂಡರು.

2010ರಲ್ಲಿ ಗುತ್ತಿಗೆದಾರ ಬಸವರಾಜುರವರು ಮರಳು ಗಣಿಗಾರಿಕೆಗೆಯ ಗುತ್ತಿಗೆ ಅರ್ಜಿ ಹಾಕಿದ್ದ ಸಂದರ್ಭದಲ್ಲಿ ಅವರಿಂದ ಒಂದು ಲಕ್ಷ ರೂಪಾಯ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಕೈಗೆ ಹಿರಿಯ ಭೂವಿಜ್ಞಾನಿ ಅಲ್ಫೋನ್ಸಿಸ್ ಸಾಕ್ಷಿ ಸಮೇತ ಸಿಕ್ಕಿಹಾಕಿಕೊಂಡಿದ್ದರು. ಪ್ರಕರಣ ಕುರಿತು ಆಲ್ಫೋನ್ಸಿಸ್ ಲೋಕಾಯುಕ್ತ ಪೊಲೀಸರಿಗೆ ಹೇಳಿಕೆ ನೀಡುವ ವೇಳೆಯಲ್ಲಿ "ಲಂಚ ಪಡೆಯುವ ಇರಾದೆ ನನಗೆ ಇರಲಿಲ್ಲ. ಆದರೆ ಅಂದು ಶಾಸಕರಾಗಿದ್ದ ಮಹದೇವಪ್ಪನವರ ಪುತ್ರ ಸುನೀಲ್ ಬೋಸ್ ತನ್ನ ಮೇಲೆ ಒತ್ತಡ ಹೇರಿ, ನನ್ನ ಬೆಂಬಲಿಗನಿಗೆ ತಲುಪಿಸುವಂತೆ ಪೀಡಿಸಿದ್ದರಿಂದ ಲಂಚ ಪಡೆಯಬೇಕಾಯಿತು," ಎಂದು ಹೇಳಿಕೆ ನೀಡಿದರು. ಅಲ್ಲಿಗೆ ಸುನೀಲ್ ಬೋಸ್ ಆರೋಪಿ ಸ್ಥಾನದಲ್ಲಿ ಬಂದು ನಿಲ್ಲಬೇಕಾಯಿತು.

ಈ ಪ್ರಕರಣವನ್ನು ಮೂರು ವರ್ಷಗಳ ಕಾಲ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ, 2013ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುವಾಗ ಸುನೀಲ್ ಬೋಸ್ ಹಾಗೂ ಬೆಂಬಲಿಗ ರಾಜು ಹೆಸರನ್ನು ಕೈಬಿಟ್ಟಿದ್ದರು. ಇದನ್ನು ಪ್ರಶ್ನಿಸಿ ದೂರುದಾರ ಬಸವರಾಜು ಮತ್ತೆ ನ್ಯಾಯಾಲಯಕ್ಕೆ ಪ್ರತ್ಯೇಕ ಅರ್ಜಿ ಸಲ್ಲಿಸಿ, ಮಹದೇವಪ್ಪನ ಮಗ ಸುನೀಲ್ ಬೋಸ್ ಹಾಗೂ ರಾಜು ಅವರನ್ನು ಕೂಡ ಪ್ರಕರಣದಲ್ಲಿ ಆರೋಪಿಯನ್ನಾಗಿ ಪರಿಗಣಿಸುವಂತೆ ಮೈಸೂರು ನಗರ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದರು.

ಇದೇ ಸೆ.7 ರಂದು ಮೈಸೂರಿನ 3ನೇ ಜೆಎಂಎಫ್ ನ್ಯಾಯಾಲಯವು ಬಸವರಾಜು ಅವರ ಅರ್ಜಿಯನ್ನು ಪುರಸ್ಕರಿಸಿ ವಿಚಾರಣೆ ಆರಂಭಿಸಿತ್ತು. ನಂತರ ನ್ಯಾಯಾಧೀಶರು ಸೆಪ್ಟಂಬರ್ 27 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಆದೇಶ ನೀಡಿದ್ದರು. ಆದರೆ ಸುನೀಲ್ ಬೋಸ್ ಹಾಗೂ ಅವರ ವಕೀಲರು ಗೈರಾದ ಹಿನ್ನಲೆಯಲ್ಲಿ ಜಾಮೀನು ರಹಿತ ವಾರೆಂಟ್ ಹೊರಡಿಸಿ ವಿಚಾರಣೆಯನ್ನು ಅಕ್ಟೋಬರ್ 18ಕ್ಕೆ ಮುಂದೂಡಿದ್ದರು. ಸದ್ಯ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡ ಬೋಸ್, ಉಪಚುನಾವಣೆಯ ಟಿಕೆಟ್ ಹವಣಿಕೆಯಲ್ಲಿ ಓಡಾಡುತ್ತಿದ್ದಾರೆ. ಈ ಪ್ರಕರಣದಿಂದ ವಿನಾಯಿತಿ ಕೋರಿ ಬೋಸ್ ಹೈಕೋರ್ಟ್ ಮೊರೆ ಹೋಗಿದ್ದರಾದರೂ ಅದಕ್ಕೆ ಕೋರ್ಟ್ ಸಮ್ಮತಿಸಿಲ್ಲ.

ಅಪ್ಪನ ‘ಪವರ್’ ಮಗನದ್ದೇ ಕಾರುಬಾರು:

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಮೈಸೂರಿನಲ್ಲಿ ಮಹದೇವಪ್ಪ ಆಗಲಿ, ಸುನೀಲ್ ಬೋಸ್ ಆಗಲಿ ತಲೆ ಎತ್ತುವಂತೆ ಇರಲಿಲ್ಲ. ಯಾವಾಗ 2013ರ ಚುನಾವಣೆ ಬಂತೋ ಮಹದೇವಪ್ಪ ಪ್ರಯಾಸದಿಂದ (ಇದರ ಬಗ್ಗೆಯೂ ಕೋರ್ಟ್ ಕೇಸು ದಾಖಲಾಗಿ ದೂರುದಾರ ಹಾಗೂ ಜೆಡಿಎಸ್ ಅಭ್ಯರ್ಥಿ ಸುಂದರೇಶ್ ಕೋರ್ಟ್ ಕಲಾಪಕ್ಕೆ ಸತತ ಗೈರು ಹಾಜರಾಗಿ ಕೇಸು ಬಿದ್ದು ಹೋಗಿತ್ತು) ಗೆದ್ದು ಬಂದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದರು; ಮಹದೇವಪ್ಪಗೆ ಪ್ರಭಾವಿ ಖಾತೆಯೂ ಸಿಕ್ಕಿತು. ಸುನೀಲ್ ಬೋಸ್ ಮತ್ತೆ ಎದ್ದು ಕುಳಿತರು. ಯಾರೆಲ್ಲಾ ಬಿಜೆಪಿ ಅಧಿಕಾರದಲ್ಲಿ ತಂದೆಗೆ ತೊಂದರೆ ತಂದೊಡ್ಡಿದ್ದರೋ, ಅವರೆಲ್ಲರ ಪಟ್ಟಿ ತಯಾರಿ ಮಾಡಿಕೊಂಡು ಬೋಸ್ ಅಖಾಡಕ್ಕೆ ಇಳಿದಂತಿತ್ತು.

ಸೋಸಲೆಯ ಪರಶಿವಮೂರ್ತಿ, ಕೆಂಪಯ್ಯನ ಹುಂಡಿಯ ರಾಜು, ಬಸವರಾಜು, ಮೈಸೂರಿನ ರೇವಣ್ಣ, ಕಾಪು ಸಿದ್ದಲಿಂಗಸ್ವಾಮಿ ಶಿಷ್ಯ ನೂತನ್ ಸೇರಿದಂತೆ ಹಲವರನ್ನು ಇನ್ನಿಲ್ಲದಂತೆ ಕಾಡಿದರು. ಇವರೆಲ್ಲರ ಮೇಲೆ ಸುಳ್ಳು ಕೇಸುಗಳನ್ನು ಇದೇ ಸುನೀಲ್ ಬೋಸ್ ದಾಖಲಿಸಿ ಕೆಲವರನ್ನು ಜೈಲಿಗೂ ಅಟ್ಟಿಸಿದರು ಎಂಬ ಆರೋಪಗಳಿವೆ. ರಾಜು ಬಿಟ್ಟು ಉಳಿದವರ ಮೇಲೆಲ್ಲಾ ಹಾಕಿದ್ದು ಮರಳು ಕೇಸುಗಳನ್ನು. ಸುನೀಲ್ ಬೋಸ್ ಕಾಲಿಡುವ ಹೊತ್ತಿಗೆ ಮರಳು ದಂಧೆ ನಿಂತಿತ್ತಾದರೂ ಹಳೆ ಕೇಸುಗಳು ಬಾಕಿ ಉಳಿದುಕೊಂಡಿದ್ದವು. ಅದನ್ನೆ ಬಳಸಿಕೊಂಡು ತಮ್ಮ ಕೆಲಸ ಮುಗಿಸಿದರು ಎನ್ನುತ್ತಾರೆ ಟಿ. ನರಸೀಪುರದ ಪತ್ರಕರ್ತರೊಬ್ಬರು.

ಸುನೀಲ್ ಬೋಸ್ ಹೊತ್ತು ಎಸಿಬಿ ಅಧಿಕಾರಿಗಳ ಮೋಜು ಮಸ್ತಿ!


       ಅಧಿಕಾರಿಗಳ ಭುಜದ ಮೇಲೆ ಸುನೀಲ್ ಬೋಸ್.
ಅಧಿಕಾರಿಗಳ ಭುಜದ ಮೇಲೆ ಸುನೀಲ್ ಬೋಸ್.

ಕಳೆದ ಜೂನಿನಲ್ಲಿ ಈ ಪ್ರಕರಣ ಹೊರಗೆ ಬಂದಿತ್ತು; ಸುನೀಲ್‌ ಬೋಸ್‌ ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ಹಾಗೂ ಪೊಲೀಸ್‌ಅಧಿಕಾರಿಗಳೊಂದಿಗೆ ಮೋಜು ಮಸ್ತಿ ಮಾಡಿದ್ದರು. ಈ ಫೊಟೋ ಮಾಧ್ಯಮಗಳಿಗೆ ಲಭ್ಯವಾಗಿತ್ತು. ಬರ್ಮುಡಾ ಧರಿಸಿ, ಕೈಯಲ್ಲಿ ಸಿಗರೇಟ್‌ ಹಚ್ಚಿಕೊಂಡಿರುವ ಸುನೀಲ್‌ ಬೋಸ್‌ರನ್ನು ಟಿ. ನರಸೀಪುರದ ಠಾಣೆಯ ಪಿಎಸ್‌ಐ ಶಿವಣ್ಣ ಹಾಗೂ ಚಾಮರಾಜನಗರ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿ ರಾಘವೇಂದ್ರ ಗೌಡ ಎಂಬುವವರು ಹೊತ್ತುಕೊಂಡು ಮೋಜು ಮಸ್ತಿ ನಡೆಸಿದ್ದರು.

“ಅವರಿಬ್ಬರಿಗೂ (ಶಿವಣ್ಣ ಮತ್ತು ರಾಘವೇಂದ್ರ) ಸುನೀಲ್ ಬೋಸ್ ಆ (ಸದರಿ) ಹುದ್ದೆ ಕೊಡಿಸಿದ್ದರು. ಆ ಹುದ್ದೆಯಲ್ಲಿ ಅವರಿಬ್ಬರಿಗೆ ದುಡ್ಡು ಹುಟ್ಟುತ್ತಿತ್ತು. ತಮ್ಮ ತಂಟೆಗೆ ಬರದಿರಲಿ ಎಂದು ಅವರು ಹಾಗೆ (ಹೊತ್ತುಕೊಂಡಿದ್ದರು) ಮಾಡಿದ್ದರು. ಆದರೆ ಈ ವಿಚಾರ ಮಾಧ್ಯಮಗಳಲ್ಲಿ ಬರುತ್ತಲೇ ಅಧಿಕಾರಿಗಳಿಬ್ಬರು ಕೆಲಸದಿಂದ ಸಸ್ಪೆಂಡ್ ಆಗಿದ್ದರು,” ಎನ್ನುತ್ತಾರೆ ಮೈಸೂರು ಮೂಲದ ಪತ್ರಕರ್ತರೊಬ್ಬರು.

ಮಹದೇವಪ್ಪ ಸಾಮ್ರಾಜ್ಯಕ್ಕೆ ಮಗನೇ ಅಧಿಪತಿ:

ಟಿ. ನರಸೀಪುರ ಹಾಗೂ ಮೈಸೂರು ಜಿಲ್ಲೆ ಸುತ್ತ ಮುತ್ತ ಆಡಳಿತ ನಡೆಸುತ್ತಿದ್ದುದು ಇದೇ ಸುನೀಲ್ ಬೋಸ್ ಹಾಗೂ ದಿವಂಗತ ರಾಕೇಶ್ ಸಿದ್ಧರಾಮಯ್ಯ. ರಾಕೇಶ್ ಮತ್ತು ಸುನೀಲ್ ಒಬ್ಬರಿಗೊಬ್ಬರು ತುಂಬಾ ಆಪ್ತರು. ಇತ್ತೀಚೆಗೆ ಮೈಸೂರು ಉಸ್ತುವಾರಿಯೂ ಮಹದೇವಪ್ಪ ಪಾಲಾದ ನಂತರ, ಅತ್ತ ರಾಕೇಶ್ ತೀರಿಕೊಂಡ ಮೇಲೆ ಎಲ್ಲವೂ ಸುನೀಲ್ ಕೈವಶವಾಗಿದೆ. ತಿಂಗಳ ತಿಂಗಳ ಕಲೆಕ್ಷನ್, ಇನ್ನುಳಿದ ಗುದ್ದಲಿ ಪೂಜೆ, ಉದ್ಘಾಟನೆಗೆಲ್ಲ ಅಪ್ಪನ ಪರವಾಗಿ ಮಗನೇ ಹಾಜರಾಗುತ್ತಾ ಬಂದಿದ್ದಾರೆ. ಆದರೆ ಬೋಸ್ ಗ್ರಾಮ ಪಂಚಾಯತ್ ಸದಸ್ಯರೂ ಅಲ್ಲ. ಹೀಗಿರುವಾಗ ಸರಕಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನೀವು ಯಾರು ಎಂದು ಹಲವರು ಪ್ರಶ್ನಿಸಿದ್ದೂ ಇದೆ. ಹೀಗೆ ಪ್ರಶ್ನಿಸಿದವರನ್ನು ಶಾಂತಿಭಂಗದ ಹೆಸರಿನಲ್ಲಿ ಬೋಸ್ ಜೈಲಿಗೆ ಅಟ್ಟಿದ ಪ್ರಕರಣಗಳು ನಡೆದಿವೆ.


       ಗೆಳೆತನ ಮತ್ತು ಮಕ್ಕಳ ದರ್ಬಾರಿಗೆ ಸಾಕ್ಷಿಯಾಗಿ ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ರಾರಾಜಿಸುತ್ತಿರುವುವ ರಾಕೇಶ್ ಸಿದ್ಧರಾಮಯ್ಯ ಮತ್ತು ಸುನಿಲ್ ಬೋಸ್
ಗೆಳೆತನ ಮತ್ತು ಮಕ್ಕಳ ದರ್ಬಾರಿಗೆ ಸಾಕ್ಷಿಯಾಗಿ ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ರಾರಾಜಿಸುತ್ತಿರುವುವ ರಾಕೇಶ್ ಸಿದ್ಧರಾಮಯ್ಯ ಮತ್ತು ಸುನಿಲ್ ಬೋಸ್

ಟಿ. ನರಸೀಪುರ ವ್ಯಾಪ್ತಿಯ ಕುಕ್ಕೂರು ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆ ನೆರವೇರಿಸಲು ಅಪ್ಪನ ಬದಲಿಗೆ ಮಗ ಸುನೀಲ್ ಬೋಸ್ ತೆರಳಿದ್ದಾಗ ಆ ಗ್ರಾಮದ ಯುವಕರಾದ ‘ಪ್ರವೀಣ್ ಮತ್ತು ಶಿವಮೂರ್ತಿ ಸುನೀಲ್ ಬೋಸ್ ಅವರ ಬಳಿ ತೆರಳಿ ನಮ್ಮೂರಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅದನ್ನು ಹೇಳಿಕೊಳ್ಳಲು ಸಚಿವರು ಬರುತ್ತಾರೆಂದು ನಾವೆಲ್ಲಾ ಕಾದಿದ್ದೆವು. ಅವರು ಬರದೆ ನಿಮ್ಮನ್ನು ಕಳುಹಿಸಿದ್ದಾರೆ. ನೀವ್ಯಾಕೆ ಗುದ್ದಲಿಪೂಜೆ ಮಾಡುತ್ತಿದ್ದೀರಿ, ನಿಮ್ಮ ತಂದೆಯವರನ್ನೇ ಕಳುಹಿಸಿ,’ ಅಂತ ಹೇಳಿದ್ದರು. ಅದಕ್ಕೆ ಕೋಪಗೊಂಡ ಸುನೀಲ್ ಬೋಸ್ ಸ್ಥಳದಲ್ಲಿದ್ದ ಪೊಲೀಸರಿಗೆ ಇಬ್ಬರೂ ಯುವಕರನ್ನು ಕಸ್ಟಡಿಗೆ ತೆಗೆದುಕೊಳ್ಳುವಂತೆ ಸೂಚಿಸಿ ಅಲ್ಲಿಂದ ನಿರ್ಗಮಿಸಿದ್ದರು. ಸಚಿವರ ಪುತ್ರನ ಆದೇಶವನ್ನು ಪಾಲಿಸಿದ ತಲಕಾಡು ಪೊಲೀಸರು ಇಬ್ಬರೂ ಯುವಕರನ್ನು ಸೆಕ್ಷನ್ 107ರಡಿ ಕೇಸು ಹಾಕಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಬಳಿಕ ಅವರಿಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಇದೇ ರೀತಿ ಹಿಂದೊಮ್ಮೆ ಲೋಕೋಪಯೋಗಿ ಇಲಾಖೆಯಲ್ಲಿ ಸಚಿವ ಹೆಚ್. ಸಿ. ಮಹದೇವಪ್ಪ ಪುತ್ರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮರಳು ಲಾರಿ ಮಾಲೀಕರು ಟಿ. ನರಸೀಪುರ ಪಿಡಬ್ಲ್ಯೂಡಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು. “ಸುನೀಲ್ ಬೋಸ್ ಅವರಿಗೂ ಲೋಕೋಪಯೋಗಿ ಇಲಾಖೆಗೂ ಸಂಬಂಧವಿಲ್ಲದಿದ್ದರೂ, ಇಲಾಖೆ ಅಧಿಕಾರಿಗಳು ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ ಮಾನ್ಯತೆ ನೀಡುತ್ತಿದ್ದಾರೆ. ಸುನೀಲ್ ಹೇಳಿದ ವ್ಯಕ್ತಿಗಳಿಗೆ ಮರಳು ಸಾಗಣೆ ಪರವಾನಗಿ ನೀಡುತ್ತಿದ್ದಾರೆ. ಪರವಾನಗಿ ಕೇಳಲು ಹೋದರೆ ‘ಚಿಕ್ಕವರ’ ಕೈಯ್ಯಲ್ಲಿ ಹೇಳಿಸಿ ಎಂದು ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆ ಮೂಲಕ ತಮ್ಮ ಹಿಂಬಾಕರಿಗೆ ಹೆಚ್ಚಿನ ಪರವಾನಿಗೆ ದೊರೆಯುವಂತೆ ಸುನೀಲ್ ನೋಡಿಕೊಳ್ಳುತ್ತಿದ್ದಾರೆ,” ಎಂದು ಪ್ರತಿಭಟನಾಕಾರರು ಆರೋಪಿಸಿದ್ದರು.

ಇವಿಷ್ಟು ಸುನೀಲ್ ಬೋಸ್ ಕೆಲವು ಮುಖಗಳಷ್ಟೆ. ಅವರ ರಾತ್ರಿ ಕಾರ್ಯಾಚರಣೆಗೆಳು, ತಹಶೀಲ್ದಾರ್ ಜತೆಗಿನ ಸಂಬಂಧಗಳದ್ದು ಇನ್ನೊಂದು ಕತೆ.

ಕಾಂಗ್ರೆಸ್ ಮತ್ತು ಜನ ಸಾಮಾನ್ಯರಿಂದಲೇ ವಿರೋಧ:


       ತಂದೆ ಸ್ಥಾನದಲ್ಲಿ ಯೋಜನೆಯೊಂದಕ್ಕೆ ಚಾಲನೆ ನೀಡುತ್ತಿರುವ ಸುನಿಲ್ ಬೋಸ್
ತಂದೆ ಸ್ಥಾನದಲ್ಲಿ ಯೋಜನೆಯೊಂದಕ್ಕೆ ಚಾಲನೆ ನೀಡುತ್ತಿರುವ ಸುನಿಲ್ ಬೋಸ್

ಚುನಾವಣೆಗೆ ಮತ್ತು ಗುದ್ದಲಿ ಪೂಜೆಗೆ ಮಾತ್ರ ನರಸೀಪುರದಲ್ಲಿ ಹಾಜರಿ ಹಾಕಿ ಬರುವ ಅಪ್ಪ ಮಕ್ಕಳನ್ನು ಅಲ್ಲಿನ ಸಾಮಾನ್ಯ ಜನ ಇಲ್ಲೀ ತನಕ ಹುಡುಕಾಡಿ ಹುಡುಕಾಡಿ ಸೋತಿದ್ದಾರೆ. “ನಮ್ಮ ಸಮಸ್ಯೆ ಕೇಳೋರು ಯಾರೂ ಇಲ್ಲ. ಪೂಜೆ ಮುಗಿಸಿ ಕಾರು ಹತ್ತಿ ಹೊರಟರೆ ಮತ್ತೆ ಇನ್ನೊಂದು ಕಾರ್ಯಕ್ರಮದಲ್ಲೇ ಅವರು ಕಾಣಸಿಗುವುದು,” ಎನ್ನುವುದು ಇಲ್ಲಿನ ಮತದಾರರ ಗೋಳು. ಹೀಗಿರುವವರಿಗೆ ಏಕಾ ಏಕಿ ನಂಜನಗೂಡು ವಿಧಾನಸಭೆ ಕ್ಷೇತ್ರ (ಪರಿಶಿಷ್ಟ ಜಾತಿ ಮೀಸಲು) ನೆನಪಾಗಿದೆ. ಮಗನನ್ನು ಚುನಾವಣೆಯಲ್ಲಿ ಗೆಲ್ಲಿಸಲು ಮಹದೇವಪ್ಪ ಹೊರಟಿದ್ದಾರೆ. ಇಬ್ಬರೂ ಎರಡು ಮೂರು ದಿನಕ್ಕೊಮ್ಮೆ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ‘ನನ್ನ ಮಗನಿಗೆ ಆಶೀರ್ವಾದ ಮಾಡಿ’ ಎಂದು ಮಹದೇವಪ್ಪ ಸಿಕ್ಕವರಿಗೆಲ್ಲ ಮನವಿ ಮಾಡುತ್ತಿದ್ದಾರೆ.

ಇವರ ತಯಾರಿಗಳು ಜೋರಾಗಿರುವಾಗಲೇ ಕಾಂಗ್ರೆಸ್ಸಿನಿಂದಲೇ ಅಪಸ್ವರಗಳು ಕೇಳಿ ಬರುತ್ತಿವೆ. ಮೈಸೂರು ಭಾಗದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರುವ ಸುನೀಲ್‌ ಬೋಸ್‌, ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ಬೇಡ ಎಂದು ಕೆಲವು ಕಾಂಗ್ರೆಸ್‌ ಮುಖಂಡರೇ ವಿರೋಧ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಅವರ ಮೇಲಿರುವ ಆರೋಪಗಳು, ಹಗರಣಗಳೂ ಕಾರಣ. ಇವತ್ತು ‘ಸಮಾಜವಾದಿ’ ಸಿದ್ದರಾಮಯ್ಯನವರು ಶ್ರೀನಿವಾಸ್ ಪ್ರಸಾದ್ ವಿರುದ್ಧ ಸುನೀಲ್ ಬೋಸ್ರನ್ನು ಕಣಕ್ಕಿಳಿಸಲು ಹೊರಟಿದ್ದಾರೆ. ಜೆಡಿಎಸ್ ಕುಟುಂಬ ರಾಜಕಾರಣಕ್ಕೆ ಬೈಯುತ್ತಲೇ ಸಿದ್ಧರಾಮಯ್ಯ ಅದನ್ನೇ ಬೆಂಬಲಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ಈ ಮಧ್ಯೆ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ, ‘ನಂಜನಗೂಡಿನಲ್ಲಿ ಬೋಸ್ ಸ್ಪರ್ಧಿಸಲು ಸಾಧ್ಯವಿಲ್ಲ. ಏಕೆ ಎಂದು ಸದ್ಯದಲ್ಲೇ ನಿಮಗೆ ಗೊತ್ತಾಗಲಿದೆ’ ಎಂದು ಬಾಂಬ್ ಸಿಡಿಸಿದ್ದಾರೆ. ಯಡಿಯೂರಪ್ಪ ಏಕೆ ಹೀಗೆ ಹೇಳುತ್ತಿದ್ದಾರೆ ಎಂದು ಬಹುತೇಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಅಕ್ರಮ ಆಸ್ತಿ ಕಾರಣಕ್ಕೆ ಬಂಧನಕ್ಕೆ ಒಳಗಾಗಿರುವ ಅಧಿಕಾರಿಗಳಾದ ಜಯಚಂದ್ರ ಮತ್ತು ಚಿಕ್ಕರಾಯಪ್ಪ ಪ್ರಕರಣದಲ್ಲಿ ಬೋಸ್ ಹೆಸರು ಕೇಳಿಬಂದಿದೆ. ಇದೇ ವಿಚಾರವನ್ನು ಯಡಿಯೂರಪ್ಪ ಪ್ರಸ್ತಾಪಿಸುತ್ತಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ರಾಜಕೀಯದಲ್ಲಿ ಏನಾಗುತ್ತದೆ ಎಂದು ಊಹಿಸುವುದು ಕಷ್ಟ. ಆದರೆ, ತಂದೆಯ ಅಧಿಕಾರವನ್ನು ತಲೆಯ ಮೇಲೆ ಇಟ್ಟುಕೊಂಡು ನಡೆದಾಡುತ್ತಿರುವ ಸುನೀಲ್ ಬೋಸ್ ಹಳೇ ಮೈಸೂರು ಭಾಗದಲ್ಲಿ ಅಪಖ್ಯಾತಿಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು, ಅಕ್ರಮಗಳಲ್ಲಿ ಭಾಗಿಯಾಗುತ್ತಿರುವುದು ಮತ್ತು ಇದೀಗ ಚುನಾವಣೆಯ ಅಖಾಡಕ್ಕೆ ಬಂದು ನಿಂತಿರುವುದು ಸಹಜವಾಗಿಯೇ ಕುತೂಹಲ ಮೂಡಿಸಿರುವ ಬೆಳವಣಿಗೆಯಾಗಿದೆ.