ಹೊಸ ವರ್ಷಕ್ಕೂ ಇಲ್ಲ ಹೊಸ ನೋಟುಗಳ ಪೂರೈಕೆ: ಗಡುವು ಮುಗಿದರೂ ಸಮಸ್ಯೆಗಳ ಮುಂದುವರಿಕೆ?
ಸುದ್ದಿ ಸಾಗರ

ಹೊಸ ವರ್ಷಕ್ಕೂ ಇಲ್ಲ ಹೊಸ ನೋಟುಗಳ ಪೂರೈಕೆ: ಗಡುವು ಮುಗಿದರೂ ಸಮಸ್ಯೆಗಳ ಮುಂದುವರಿಕೆ?

ದೇಶದಲ್ಲಿ

ಘೋಷಣೆಯಾಗಿರುವ 'ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ' ಹೊಸ ವರ್ಷದಲ್ಲಿಯೂ ತಹಬಂದಿಗೆ ಬರುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ಈಗಿನ ವರದಿಗಳ ಪ್ರಕಾರ, ಜನರಿಂದ ಬೇಡಿಕೆ ಇರುವಷ್ಟು ಮೊತ್ತದ ಹೊಸ ನೋಟುಗಳನ್ನು ಆರ್ಬಿಐ ಡಿ. 31ರ ನಂತರವೂ ಪೂರೈಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಬ್ಯಾಂಕುಗಳಿಂದ ಹಣ ಪಡೆಯುವುದಕ್ಕೆ ಮಿತಿಯು ಹೊಸ ವರ್ಷದಲ್ಲಿಯೂ ಮುಂದುವರಿಯಲಿದೆ. ಪ್ರಧಾನಿ ಮೋದಿ ಕೇಳಿರುವ ಗಡುವು ಮುಗಿದ ನಂತರವೂ ದೇಶಾದ್ಯಂತ ಬ್ಯಾಂಕುಗಳ ಮುಂದೆ ಸರತಿ ಸಾಲಿನ ದರ್ಶನವಾಗಲಿದೆ.

ನ. 8ಕ್ಕೆ ಅನಾಣ್ಯೀಕರಣ ಪ್ರಕ್ರಿಯೆಯನ್ನು ಪ್ರಧಾನಿ ಘೋಷಿಸಿದ್ದರು. ರಾತ್ರೋರಾತ್ರಿ ತೆಗೆದುಕೊಂಡಿದ್ದ ಈ ನಿರ್ಧಾರದಿಂದಾಗಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿತ್ತು. ಜನ ಸರತಿ ಸಾಲಿನಲ್ಲಿ ಬ್ಯಾಂಕುಗಳ ಮುಂದೆ ನಿಂತು ನೋಟುಗಳ ಬದಲಾವಣೆ ಮಾಡಿಕೊಳ್ಳುವ ಪ್ರಕ್ರಿಯೆ ಅಂತರಾಷ್ಟ್ರೀಯ ಗಮನ ಸೆಳೆದಿತ್ತು. ಈ ಸಮಯದಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, 50 ದಿನಗಳ ಕಾಲಾವಕಾಶವನ್ನು ಕೋರಿದ್ದರು. ಅವರು ಕೇಳಿಕೊಂಡಿದ್ದ ಗಡುವು ಡಿ. 30ಕ್ಕೆ ಮುಕ್ತಾಯವಾಗಲಿದೆ.

ಪರಿಸ್ಥಿತಿ ಹೀನಾಯ: 

ಈಗಿರುವ ನಿಯಮಗಳು ಪ್ರತಿಯೊಬ್ಬರಿಗೂ ವಾರಕ್ಕೆ 24 ಸಾವಿರ ರೂಪಾಯಿಗಳನ್ನಷ್ಟೆ ಬ್ಯಾಂಕಿನಿಂದ ಪಡೆದುಕೊಳ್ಳಲು ಅವಕಾಶ ನೀಡಿವೆ. ಸದ್ಯದ ಪರಿಸ್ಥಿತಿಯಲ್ಲಿ ಕೆಲವು ಬ್ಯಾಂಕುಗಳು 24 ಸಾವಿರ ರೂಪಾಯಿಗಳನ್ನು ಹಂಚಲು ಶಕ್ತವಾಗಿಲ್ಲ. ಹೊಸ ನೋಟುಗಳ ಕೊರತೆ ಎಲ್ಲೆಡೆ ಎದ್ದು ಕಾಣುತ್ತಿದೆ. 'ಜನವರಿ 2ರಿಂದ ಈ ನಿಯಮವನ್ನು ಸಡಿಲಿಸುವ ಸಾಧ್ಯತೆಗಳಿವೆ. ಆದರೆ, ಜನ ಕೇಳುವಷ್ಟು ನಗದು ಹಣವನ್ನು ಪೂರೈಕೆ ಮಾಡಲು ಸಾಧ್ಯವಾಗುವುದು ಕಷ್ಟ' ಎಂದು ಎನ್ಡಿಟಿವಿ ವರದಿ ಹೇಳುತ್ತಿದೆ.

"ಸದ್ಯಕ್ಕೆ ಹಣ ಪಡೆಯುವುದಕ್ಕೆ ಇರುವ ಮಿತಿಗಳನ್ನು ಸಡಿಲ ಮಾಡಬಾರದು ಎಂಬುದು ನಮ್ಮ ನಿರ್ಧಾರವಾಗಿದೆ. ನೋಟುಗಳ ಮುದ್ರಣ ಒಂದು ಹಂತಕ್ಕೆ ಬಂದ ನಂತರವಷ್ಟೆ ನಗದು ಹಿಂಪಡೆಯುವ ಮೇಲಿನ ಮಿತಿಯನ್ನು ಹೆಚ್ಚು ಮಾಡಬಹುದು,'' ಎಂಬ ಬ್ಯಾಂಕ್ ಅಧಿಕಾರಿಯೊಬ್ಬ ಹೇಳಿಕೆಯನ್ನು ವರದಿ ಪ್ರಸ್ತಾಪಿಸಿದೆ.

ಸದ್ಯ ಸಾಮಾನ್ಯ ಜನರ ಜತೆಗೆ ದೊಡ್ಡ ಕಂಪನಿಗಳು ದೊಡ್ಡ ಪ್ರಮಾಣ ನಗದು ಹಣದ ಬೇಡಿಕೆಯನ್ನು ಬ್ಯಾಂಕುಗಳ ಮುಂದಿಟ್ಟಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳು ಮುಂದಿನ ದಿನಗಳಲ್ಲಿ ಬೇಡಿಕೆಗೆ ತಕ್ಕಷ್ಟು ನಗದು ಹಣವನ್ನು ಪೂರೈಕೆ ಮಾಡಲು ಒದ್ದಾಡುತ್ತಿವೆ. ಇತ್ತೀಚಿನ ಒಂದು ಸಂದರ್ಶನದಲ್ಲಿ ಎಸ್ಬಿಐ ಅಧ್ಯಕ್ಷೆ ಅರುಂದತಿ ಭಟ್ಟಾಚಾರ್ಯ, "ನಗದು ಹಣ ಪೂರೈಕೆ ಮಾಡದೆ ವಿತರಣೆಯ ಮೇಲಿನ ಮಿತಿಯನ್ನು ತೆಗೆದು ಹಾಕುವುದು ಕಷ್ಟ,'' ಎಂದು ತಿಳಿಸಿದ್ದರು.

ನವೆಂಬರ್9 ರಿಂದ ಡಿಸೆಂಬರ್ 19ರ ನಡುವೆ ದೇಶದ ನಾನಾ ಬ್ಯಾಂಕುಗಳಲ್ಲಿ ಜನಸಾಮಾನ್ಯರು ಸುಮಾರು 15. 5 ಲಕ್ಷ ಕೋಟಿ ರೂಪಾಯಿಗಳನ್ನು ಜಮೆ ಮಾಡಿದ್ದಾರೆ. ಇದರಲ್ಲಿ 12. 4 ಲಕ್ಷ ಕೋಟಿ ಅಪಮೌಲ್ಯಗೊಂಡ ನೋಟುಗಳು. ಇದರ ಬದಲಿಗೆ ಆರ್ಬಿಐ ಈವರೆಗೆ ಕೇವಲ 5. 92 ಲಕ್ಷ ಕೋಟಿ ಮೌಲ್ಯದ ಹೊಸ ನೋಟುಗಳನ್ನಷ್ಟೆ ಮುದ್ರಿಸಿ ಚಲಾವಣೆಗೆ ಬಿಟ್ಟಿದೆ.

ಈ ಹಿನ್ನೆಲೆಯಲ್ಲಿ, ಸದ್ಯ ಆರ್ಬಿಐ ಮುದ್ರಿಸುತ್ತಿರುವ ನೋಟುಗಳು ಬೇಡಿಕೆಯ ಅಂತರವನ್ನು ತಗ್ಗಿಸಲು ಇನ್ನಷ್ಟು ದಿನಗಳು ತೆಗೆದುಕೊಳ್ಳುತ್ತವೆ. ಅಷ್ಟೊತ್ತಿಗೆ ಗಡುವು ಮುಗಿದು ಹೊರವರ್ಷ ಬರಲಿದೆ.