samachara
www.samachara.com
‘ಚಲೋ ಮಡಿಕೇರಿ’; ಡಿ.23ರಂದು ಮಂಜಿನ ನಗರಿಯಲ್ಲಿ ಆದಿವಾಸಿಗಳ ಬೃಹತ್ ಸಮಾವೇಶ
ಸುದ್ದಿ ಸಾಗರ

‘ಚಲೋ ಮಡಿಕೇರಿ’; ಡಿ.23ರಂದು ಮಂಜಿನ ನಗರಿಯಲ್ಲಿ ಆದಿವಾಸಿಗಳ ಬೃಹತ್ ಸಮಾವೇಶ

‘ಚಲೋ ಉಡುಪಿ’ ಮಾದರಿಯಲ್ಲಿ ಇದೀಗ ‘ಚಲೋ ಮಡಿಕೇರಿ’ ಸಮಾವೇಶಕ್ಕೆ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಕರೆ ನೀಡಿದೆ.

ಭಾನುವಾರ ಕೊಡಗಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿ ನಡೆದ ಬೃಹತ್ ‘ಸಂಕಲ್ಪ ಸಭೆ’ಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಡಿಸೆಂಬರ್ 22 ರಂದು ದಿಡ್ಡಳ್ಳಿಯಿಂದ ನಿರಾಶ್ರಿತ ಆದಿವಾಸಿಗಳು ಮಡಿಕೇರಿಯತ್ತ ಕಾಲ್ನಡಿಗೆ ಜಾಥಾ ಹೊರಡಲಿದ್ದಾರೆ. 23ರಂದು ನಗರದಲ್ಲಿ ಸಮಾವೇಶ ನಡೆಯಲಿದೆ. ಇಲ್ಲಿಗೆ ರಾಜ್ಯ ಹಾಗೂ ಜಿಲ್ಲೆಯ ಆದಿವಾಸಿಗಳು, ಹೋರಾಟಗಾರರು ಆಗಮಿಸಲಿದ್ದಾರೆ ಎಂದು ಕೇಂದ್ರ ಸಮಿತಿಯ ನೂರ್ ಶ್ರೀಧರ್ ಮಾಹಿತಿ ನೀಡಿದ್ದಾರೆ.

ಸಂಕಲ್ಪ ಸಭೆಯಲ್ಲಿ ಅಧಿಕಾರಿಗಳಿಗೆ ಘೇರಾವ್:

ಭಾನುವಾರ ದಿಡ್ಡಳ್ಳಿಯಲ್ಲಿ ಸಂಕಲ್ಪ ಸಭೆ ನಡೆಯಿತು. ಕಳೆದ 13 ದಿನಗಳಿಂದ ಆದಿವಾಸಿಗಳು ಇಲ್ಲಿನ ಆಶ್ರಮ ಶಾಲೆ ಮುಂಭಾಗ ವಾಸ್ತವ್ಯ ಹೂಡಿ, ತಮ್ಮ ಜಾಗಕ್ಕಾಗಿ ಆಹೋರಾತ್ರಿ ಧರಣಿ ಆರಂಭಿಸಿದ್ದರೂ ಕಿವಿಗೆ ಹಾಕಿಕೊಳ್ಳದ ಸರಕಾರ ತನ್ನ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿತ್ತು. ಈ ಸಂದರ್ಭ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ನಂಜುಂಡೇಗೌಡ, ಐಟಿಡಿಪಿ ಅಧಿಕಾರಿ ಮಾಯದೇವಿ ಗಲಗಲಿ ಹಾಗೂ ವಿರಾಜಪೇಟೆ ತಹಸೀಲ್ದಾರ್‌ ಮಹದೇವ ಅವರನ್ನು ಆದಿವಾಸಿಗಳು ಮತ್ತು ಹೋರಾಟಗಾರರು ತೀವ್ರ ತರಾಟೆಗೆ ತೆಗೆದುಕೊಂಡರು.

ಸ್ಥಳದಲ್ಲಿ ಮಾತನಾಡಿದ ನಂಜುಂಡೇಗೌಡ, “ಆದಿವಾಸಿಗಳು ವಾಸಿಸುತ್ತಿದ್ದ ಜಾಗ ಅರಣ್ಯ ಇಲಾಖೆಗೆ ಸೇರಿದೆ. ಆದ್ದರಿಂದ ಅಲ್ಲಿ ಅವರಿಗೆ ಜಾಗ ನೀಡಲು ಸಾಧ್ಯವಿಲ್ಲ. ಈಗಾಲೇ ಸರ್ಕಾರಿ ಜಾಗದ ಲಭ್ಯತೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. 577 ಆದಿವಾಸಿ ಕುಟುಂಬಗಳ ಪಟ್ಟಿ ಮಾಡಲಾಗಿದ್ದು, ಇನ್ನೊಂದು ತಿಂಗಳೊಳಗಾಗಿ ಪುನರ್ವಸತಿ ಕಲ್ಪಿಸಲಾಗುವುದು,” ಎಂದು ಭರವಸೆ ನೀಡಿದರು.

ಆದರೆ ಇದಕ್ಕೆ ಒಪ್ಪದ ಆದಿವಾಸಿಗಳು ಮತ್ತು ಹೋರಾಟಗಾರರು ಅಧಿಕಾರಿಗಳಿಗೆ ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ. “ಜನರನ್ನು ಮೊದಲು 8 ತಿಂಗಳು ಇರಲು ಅವಕಾಶ ನೀಡಿದ್ದೇಕೆ? ನಂತರ ಯಾವ ನೋಟೀಸ್ ನೀಡದೆ ರಾತ್ರಿ 4 ಗಂಟೆಗೆ ಬಂದು ದಾಳಿ ಮಾಡಿ ಅವರ ಮನೆಗಳನ್ನು ಧ್ವಂಸಗೊಳಿಸಿದ್ದೇಕೆ? ಜನ ಚಳಿಯಲ್ಲಿ, ಮಳೆಯಲ್ಲಿ, ಮಕ್ಕಳು-ವೃದ್ಧರನ್ನು ಕಟ್ಟಿಕೊಂಡು ಬೀದಿಬದಿಯಲ್ಲೇ ಬಿದ್ದಿದ್ದರೂ ಅವರಿಗೆ ಕನಿಷ್ಟ ಆಹಾರ ಒದಗಿಸಲಿಲ್ಲವೇಕೆ? ಜನರ ಮೇಲೆಯೇ ಸುಳ್ಳು ಕೇಸು ಹಾಕಿದ್ದೇಕೆ? ಅರಣ್ಯ ಭೂಮಿಯೇ ಆದರೂ ಅದನ್ನು ಆದಿವಾಸಿಗಳಿಗೆ ಹಂಚಬಾರದು ಎಂದು ಹೇಳಿದವರು ಯಾರು? 2006ರ ಕಾಯ್ದೆಯನ್ನು 10 ವರ್ಷವಾದರೂ ಅನುಷ್ಟಾನಕ್ಕೆ ತಂದಿಲ್ಲವೇಕೆ? ಲೈನು ಮನೆಗಳಲ್ಲೇ ಜೀತ ಮಾಡುತ್ತಿರುವ 48,000 ದಲಿತ ಮತ್ತು ಆದಿವಾಸಿ ಕುಟುಂಬಗಳಿಗೆ ಭೂಮಿ-ವಸತಿ ನೀಡಲು ನಿಮ್ಮ ಯೋಜನೆ ಏನು?” ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ. ಜನರ ಈ ಯಾವ ಪ್ರಶ್ನೆಗಳಿಗೂ ಅಧಿಕಾರಿಗಳ ಬಳಿ ಉತ್ತರವಿರಲಿಲ್ಲ. ಇದಕ್ಕೆ ಕ್ರುದ್ಧರಾದ ಜನ “ನಿಮ್ಮ ಪ್ರಸ್ತಾಪ ಒಪ್ಪಲಾಗದು” ಎಂದು ಹೇಳಿ ಅಧಿಕಾರಿಗಳನ್ನು ಹಿಂದಕ್ಕೆ ಕಳುಹಿಸಿದ್ದಾರೆ.

ಸರಕಾರಕ್ಕೆ ಆದಿವಾಸಿಗಳ ಹಕ್ಕೊತ್ತಾಯ:

ನಂತರ ಸಭೆಯಲ್ಲಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದೆ. ಸಾವಿರಾರು ಸಂಖ್ಯೆಯ ಜನರ ಸಮ್ಮುಖದಲ್ಲಿ ಸರಕಾರಕ್ಕೆ ತನ್ನ ಹಕ್ಕೊತ್ತಾಯಗಳನ್ನು ಮಂಡಿಸಿದೆ.

ಸಮಿತಿ ಹಕ್ಕೊತ್ತಾಯಗಳು,

  1. ಜಿಲ್ಲಾಧಿಕಾರಿ ಮತ್ತು ಉಸ್ತುವಾರಿ ಮಂತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಮಾರ್ಗದ ಕುರಿತು ಚರ್ಚಿಸಬೇಕು.


  2. ಕೊಡಗಿನ ಆದಿವಾಸಿಗಳ ಈ ಸಮಸ್ಯೆ ಕುರಿತು ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆಯನ್ನು ಕರೆಯಬೇಕು. ಅರಣ್ಯ ಮಂತ್ರಿಗಳು, ಕಂದಾಯ ಮಂತ್ರಿಗಳು, ಸಮಾಜ ಕಲ್ಯಾಣ ಮಂತ್ರಿಗಳು, ಸಂಬಂಧಪಟ್ಟ ಅಧಿಕಾರಿಗಳು, ಚಳವಳಿ ಪ್ರತಿನಿಧಿಗಳು ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಆದಿವಾಸಿ ಪ್ರತಿನಿಧಿಗಳ ಸಭೆ ಕರೆಯಬೇಕು.


  3. ಬೀದಿಗೆ ಎಸೆಯಲ್ಪಟ್ಟಿರುವ ದಿಡ್ಡಳ್ಳಿಯ ಆದಿವಾಸಿ ಕುಟುಂಬಗಳಿಗೆ ಅದೇ ಜಾಗದಲ್ಲಿ ಪುನರ್ ವ್ಯವಸ್ಥೆ ಕಲ್ಪಿಸಬೇಕು. ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಎಲ್ಲಾ ನೆರವನ್ನು ಸರ್ಕಾರವೇ ಒದಗಿಸಬೇಕು.


  4. ಈ ವ್ಯವಸ್ಥೆಯಾಗುವವರೆಗೆ ಬೀದಿಪಾಲಾಗಿರುವ ಜನರಿಗೆ ಆಹಾರ ಮತ್ತು ವಸತಿಯ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಬೇಕು.


  5. ಆದಿವಾಸಿಗಳ ಮೇಲೆ ಹಾಕಿರುವ ಎಲ್ಲಾ ಸುಳ್ಳು ಕೇಸುಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು. ಭ್ರಷ್ಟಚಾರ ಮತ್ತು ಕ್ರೌರ್ಯ ಎಸಗಿದ ಪೋಲೀಸ್ ಮತ್ತು ಅರಣ್ಯಾಧಿಕಾರಿಗಳ ಮೇಲೆ ತೀವ್ರ ಕ್ರಮ ಕೈಗೊಳ್ಳಬೇಕು.


  6. ಸರ್ಕಾರವು 2006ರ ಅರಣ್ಯ ಕಾಯ್ದೆಯನ್ನು ಯುದ್ಧೋಪಾದಿಯಲ್ಲಿ ಜಾರಿಗೆ ತಂದು ಎಲ್ಲಾ ಆದಿವಾಸಿಗಳಿಗೂ 5 ಎಕೆರೆ ಭೂಮಿಯನ್ನು ಮಂಜೂರು ಮಾಡಬೇಕು. ಅರಣ್ಯ ಭೂಮಿಯಾಗಿದ್ದರೂ ಅದರಲ್ಲಿ ಮೊದಲ ಹಕ್ಕು ಆದಿವಾಸಿಗಳಿಗಿದೆ ಎಂಬುದನ್ನು ಅರಣ್ಯ ಇಲಾಖೆ ಅರ್ಥಮಾಡಿಕೊಳ್ಳಬೇಕು. ಭೂಮಿ ಹಂಚಿಕೆಗೆ ಕಾಲಮಿತಿ ನಿಗದಿಗೊಳಿಸಬೇಕು.


  7. ಎಲ್ಲರಿಗೂ ಆರ್‍ಟಿಸಿ ನೀಡಬೇಕು; ಹಕ್ಕುಪತ್ರ ನೀಡಬಾರದು. ಸರ್ಕಾರದ ಯೋಜನೆ ಪ್ರಕಾರ ಕಟ್ಟಲಾದ ಮನೆಗಳನ್ನು ಅವರ ಹೆಸರಿಗೇ ಮಾಡಿಕೊಡಬೇಕು.


  8. ಲೈನ್ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೂ 2006ರ ಕಾಯ್ದೆಯ ಅನ್ವಯ ಸ್ವತಂತ್ರ ಭೂಮಿ ಮತು ವಸತಿ ಕಲ್ಪಿಸಬೇಕು.


  9. ಬಲಾಢ್ಯರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಹಾಗೂ ಬೇನಾಮಿ ಹೆಸರಿನಲ್ಲಿ ಕಬಳಿಸಿಟ್ಟಿರುವ ಭೂಮಿಗಳನ್ನು ಮರುವಶಪಡಿಸಿಕೊಂಡು ಬಡಜನರಿಗೆ ಹಂಚಬೇಕು.


  10. ಎಲ್ಲಾ ಅಕ್ರಮ ಭೂಮಿ ಮತ್ತು ವಸತಿಯನ್ನು ಕೂಡಲೇ ಸಕ್ರಮಗೊಳಿಸಿಕೊಡಬೇಕು. ಅದಕ್ಕಾಗಿ ಅರ್ಜಿ ಹಾಕಲು ಅವಕಾಶವನ್ನು ವಿಸ್ತರಿಸಬೇಕು. ಯಾವುದೇ ಕಾರಣಕ್ಕೂ ಯಾವ ಬಡವರನ್ನೂ ಯಾವ ಜಾಗದಿಂದಲೂ ಪರ್ಯಾಯ ವ್ಯವಸ್ಥೆ ಮಾಡದೆ ಒಕ್ಕಲೆಬ್ಬಿಸಬಾರದು.


ದಿಡ್ಡಳ್ಳಿ ಸಮಸ್ಯೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಕೂಡಾ ಧ್ವನಿ ಎತ್ತಿದ್ದು ‘ಕೊಡಗಿನ ಆದಿವಾಸಿಗಳಿಗೆ ಶೀಘ್ರ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಬೇಕು,’ ಎಂದು ಒತ್ತಾಯಿಸಿದ್ದಾರೆ.

‘ಚಲೋ ಮಡಿಕೇರಿ’; ಡಿ.23ರಂದು ಮಂಜಿನ ನಗರಿಯಲ್ಲಿ ಆದಿವಾಸಿಗಳ ಬೃಹತ್ ಸಮಾವೇಶ

ಇನ್ನು ‘ಚಲೋ ಮಡಕೇರಿ’ ಪೂರ್ವಸಿದ್ದತಾ ಚರ್ಚೆಗಾಗಿ ಮಂಗಳವಾರ ಬೆಳಿಗ್ಗೆ 9.30ಕ್ಕೆ ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಸಭೆ ಕರೆಯಲಾಗಿದೆ ಎಂದು ಸಮಿತಿಯ ಸದಸ್ಯರಾದ ಭಾಸ್ಕರ್ ಪ್ರಸಾದ್ ಮಾಹಿತಿ ನೀಡಿದ್ದಾರೆ.