‘ಸುಬೋಧ್ ಯಾದವ್ ವರ್ಗಾವಣೆ ಮಾಡಿಲ್ಲ ಅಂದ್ರೆ ಸಿದ್ಧರಾಮಯ್ಯನ ಜೈಲಿಗೆ ಕಳಿಸ್ತೇನೆ ಅಂದಿದ್ರಂತೆ ಶ್ಯಾಮ್ ಭಟ್’!
ಸುದ್ದಿ ಸಾಗರ

‘ಸುಬೋಧ್ ಯಾದವ್ ವರ್ಗಾವಣೆ ಮಾಡಿಲ್ಲ ಅಂದ್ರೆ ಸಿದ್ಧರಾಮಯ್ಯನ ಜೈಲಿಗೆ ಕಳಿಸ್ತೇನೆ ಅಂದಿದ್ರಂತೆ ಶ್ಯಾಮ್ ಭಟ್’!

ನಾಲ್ಕುವರೆ ತಿಂಗಳ ಹಿಂದೆ ಕರ್ನಾಟಕ ಲೋಕ ಸೇವಾ ಆಯೋಗದ ಕಾರ್ಯರ್ದರ್ಶಿಯಾಗಿ ಹೊಣೆ ವಹಿಸಿಕೊಂಡಿದ್ದ ಸುಬೋಧ್ ಯಾದವ್ ವರ್ಗಾವಣೆಯಾಗಿದ್ದಾರೆ.

ಈ ಹಿಂದೆ ಆದಾಯ ತೆರಿಗೆ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕೃಷಿ ಇಲಾಖೆಗಳ ನಾನಾ ಹುದ್ದೆಗಳನ್ನು ನಿರ್ವಹಿಸಿದ್ದ ದಕ್ಷ ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಪಾಲಿಗೆ ಇಂತಹ ಅಕಾಲಿಕ ವರ್ಗಾವಣೆಗಳು ಹೊಸದಲ್ಲ. ಆದರೆ ಈ ಬಾರಿ ನಾಲ್ಕುವರೆ ತಿಂಗಳಿನಲ್ಲಿಯೇ ಕೆಪಿಎಸ್ಸಿಯಿಂದ ಅವರನ್ನು ಹೊರಹಾಕಿರುವುದು ಸಿದ್ದರಾಮಯ್ಯ ಸರಕಾರದ ನೈತಿಕತೆಯ ಕುರಿತು ಒಂದಷ್ಟು ಚರ್ಚೆಯನ್ನು ಹುಟ್ಟು ಹಾಕುವ ಸಾಧ್ಯತೆ ಇದೆ.

ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸುಬೋಧ್ ಯಾದವ್ ವಾಪಾಸ್ ಕರೆಸಿಕೊಳ್ಳಬೇಕು ಎಂಬ ಅಭಿಯಾನಗಳು ಆರಂಭವಾಗಿವೆ. ಕೆಪಿಎಸ್ಸಿಯಲ್ಲಿ ಪಾರದರ್ಶಕತೆಯನ್ನೂ, ಪರೀಕ್ಷಾ ವಿಧಾನಗಳಲ್ಲಿ ಬದ್ಧತೆಯನ್ನೂ ತರಲು ಹಾದಿಯಲ್ಲಿ ಅವರನ್ನು ಹೊರಹಾಕಿರುವುದು ಸರಿಯಲ್ಲ ಎಂದು ಯುವಕ ಯುವತಿಯರು ಸರಕಾರದ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಅದು ಶನಿವಾರದ ಮೀಟಿಂಗ್?

ಹೀಗೆ ಹಠಾತ್ ಆಗಿ ಸುಬೋಧ್ ಯಾದವ್ ಅವರನ್ನು ಕೆಪಿಎಸ್ಸಿಯಿಂದ ವರ್ಗಾವಣೆ ಮಾಡಿರುವುದರ ಹಿಂದೆ ಹಲವು ಕಾರಣಗಳಿವೆ. ತಕ್ಷಣದ ಕಾರಣ ಶನಿವಾರ ನಡೆದ ಮಂಡಳಿ ಸಭೆ ಎನ್ನುತ್ತವೆ ಕೆಪಿಎಸ್ಸಿಯ ಉನ್ನತ ಮೂಲಗಳು.

“ವಾರಕ್ಕೊಮ್ಮೆ ಮಂಡಳಿಯ ಸಭೆ ನಡೆಯುತ್ತದೆ. ಸಂಸ್ಥೆಯಲ್ಲಿ ತರಬೇಕಾದ ಬದಲಾವಣೆಗಳ ಬಗ್ಗೆ ಕಾರ್ಯದರ್ಶಿ ಶಿಫಾರಸು ಮಾಡುತ್ತಾರೆ. ಸದಸ್ಯರ ಜತೆ ಚರ್ಚೆ ನಡೆಸಿ ಅಧ್ಯಕ್ಷರು ಒಪ್ಪಿಗೆ ಸೂಚಿಸುತ್ತಾರೆ. ಶನಿವಾರ ಕೆಎಎಸ್ ಆಯ್ಕೆ ವಿಚಾರದಲ್ಲಿ ಮಹತ್ವದ ಬದಲಾವಣೆ ತರುವ ನಿಟ್ಟಿನಲ್ಲಿ ಸುಬೋಧ್ ಯಾದವ್ ಶಿಫಾರಸ್ಸೊಂದನ್ನು ಮಂಡಿಸಿದ್ದರು. ಆ ವಿಚಾರದಲ್ಲಿ ಸದಸ್ಯರು ಭಾರಿ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಜೋರು ದನಿಯಲ್ಲಿ ಮಾತುಕತೆ ನಡೆದಿತ್ತು,’’ ಎಂದು ‘ಸಮಾಚಾರ’ಕ್ಕೆ ಕೆಪಿಎಸ್ಸಿ ಅಧಿಕಾರಿಯೊಬ್ಬರು ‘ಸಮಾಚಾರ’ಕ್ಕೆ ಮಾಹಿತಿ ನೀಡಿದರು.

ಬಹುಶಃ ಇದೇ ಸಭೆಯ ನಂತರ ಸುಬೋಧ್ ಯಾದವ್ ತಮ್ಮ ಟ್ವಿಟರ್ ಖಾತೆಯಲ್ಲಿ ಅಸಹಾಯಕತೆ ಹೊರಹಾಕಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಸುಬೋಧ್ ಯಾದವ್ ವರ್ಗಾವಣೆ ಆದೇಶ ಸರಕಾರದ ಕಡೆಯಿಂದ ಹೊರಬಿದ್ದಿತ್ತು.

ತೆರೆಮರೆಯ ಆಟಗಳು:

ಕೆಪಿಎಸ್ಸಿ ಸದಸ್ಯರ ನಿಕಟವರ್ತಿಯೊಬ್ಬರ ಪ್ರಕಾರ, ಸುಬೋಧ್ ಯಾದವ್ ಅವರ ವರ್ಗಾವಣೆಗಾಗಿ ಖುದ್ದು ಶಾಮ್ ಭಟ್ ಮುಖ್ಯಮಂತ್ರಿ ಜತೆ ಮಾತನಾಡಿದ್ದಾರೆ. ಅವರ ಒತ್ತಡದ ಹಿನ್ನೆಲೆಯಲ್ಲಿ ಸಿಎಂ ಕೆಪಿಎಸ್ಸಿ ಕಾಯಕಲ್ಪಕ್ಕೆ ಮುಂದಾಗಿದ್ದ ಯಾದವ್ ಅವರನ್ನು ಬೇರೆಡೆ ಸ್ಥಳಾಂತರಿಸಲು ಒಪ್ಪಿಕೊಂಡಿದ್ದರು. “ಈ ಹಿಂದೆ ಸಿಎಂ ಪುತ್ರ ಡಾ. ಯತೀಂದ್ರ ಲ್ಯಾಬ್ ಗುತ್ತಿಗೆ ಹಗರಣ ಹೊರಬಿದ್ದಿದ್ದು ಶಾಮ್ ಭಟ್ ಕಡೆಯಿಂದಲೇ ಎಂಬ ಸುದ್ದಿ ನಿಮಗೂ ಗೊತ್ತಿರಬಹುದು. ಅದಾದ ನಂತರವೇ ಸಿಎಂ ಕೆಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ಶಾಮ್ ಭಟ್ ಹೆಸರನ್ನು ಶಿಫಾರಸು ಮಾಡಿದ್ದರು. ಅದೇ ರೀತಿ ಸಿಎಂ ಹಲವು ಹಗರಣಗಳ ದಾಖಲೆಗಳನ್ನು ಶಾಮ್ ಭಟ್ ಇಟ್ಟುಕೊಂಡಿದ್ದಾರೆ. ಅವರ ಮಾತಿಗೆ ಸಿಎಂ ಬೆಲೆ ನೀಡುತ್ತಾರೆ,’’ ಎಂಬುದಾಗಿ ನಿಕಟವರ್ತಿ ಹೇಳುತ್ತಾರೆ.

ಕೆಲವು ದಿನಗಳ ಹಿಂದೆ ಕೆಪಿಎಸ್ಸಿ ಸದಸ್ಯರು ಸುಬೋಧ್ ಯಾದವ್ ಕುರಿತು ಅಧ್ಯಕ್ಷ ಶಾಮ್ ಭಟ್ ಜತೆ ಖಾಸಗಿ ಸ್ಥಳವೊಂದರಲ್ಲಿ ಮಾತುಕತೆಗೆ ನಡೆಸಿದಾಗ, “ನೀವು ತಲೆ ಕೆಡಿಸಿಕೊಳ್ಳಬೇಡಿ. ಸಮಯ ಬಂದಾಗ ಹೊರಗೆ ಕಳುಹಿಸುತ್ತೇನೆ. ವರ್ಗಾವಣೆ ಮಾಡದೆ ಇದ್ರೆ ಸಿದ್ರಾಮಯ್ಯನನ್ನೇ ಜೈಲಿಗೆ ಕಳುಹಿಸೋಣ ಬಿಡಿ,’’ ಎಂದು ತಮಾಷೆಯ ದನಿಯಲ್ಲಿ, ಏಕವಚನದಲ್ಲಿ ಭಟ್ ಪ್ರಸ್ತಾಪಿಸಿದ್ದರು ಎಂದು ಸಭೆಯ ಆಯೋಜಕರ ಸಮೀಪವರ್ತಿ ಮಾಹಿತಿ ನೀಡುತ್ತಾರೆ.

ಸದ್ಯ ಕೆಪಿಎಸ್ಸಿಯಲ್ಲಿ ನಡೆದ ಬೆಳವಣಿಗೆಯನ್ನು ನೋಡಿದರೆ, ತಮಾಷೆಯ ಮಾತು ನಿಜವಾಯಿತಾ ಎಂಬ ಅನುಮಾನ ಮೂಡಿಸುತ್ತಿದೆ. ಈ ಮೂಲಕ, ರಾಜ್ಯದ ಸರಕಾರಿ ಆಡಳಿತಕ್ಕೆ ಯುವ ರಕ್ತದ ಅಭ್ಯರ್ಥಿಗಳನ್ನು ತರುವ ಸಂಕಲ್ಪವನ್ನು ಇಟ್ಟುಕೊಂಡಿರುವ ಕೆಪಿಎಸ್ಸಿ ಸುಧಾರಣೆಯ ಕೊನೆಯ ಸಾಧ್ಯತೆಯೂ ಕೈ ತಪ್ಪಿದೆ.

ಬಳ್ಳಾರಿ ಭ್ರಷ್ಟರ ಬಗ್ಗೆ ಭಯಂಕರ ಭಾಷಣಗಳ ಮೂಲಕ, ಅಕ್ಷರಶಃ ತೊಡೆ ತಟ್ಟಿದ್ದ ಸಿದ್ದರಾಮಯ್ಯ ನೇತೃತ್ವದ ಸರಕಾರ ದಿನದಿಂದ ದಿನಕ್ಕೆ ಬೆತ್ತಲಾಗಿದೆ. ಪ್ರತಿಪಕ್ಷ ಬಿಜೆಪಿ, ಜೆಡಿಎಸ್ಗಳು ಕೆಪಿಎಸ್ಸಿ ಕಾಯಕಲ್ಪದ ಕುರಿತು ಮಾತನಾಡುವ ನೈತಿಕತೆಯನ್ನು ಹಿಂದೆಯೇ ಕಳೆದುಕೊಂಡಿವೆ. ‘ಉದ್ಯೋಗ ಸೌಧ’ ಸದ್ಯದಲ್ಲಿಯೇ ಜಾಬ್ ಬಿಕರಿ ಮಾಡುವ ಅಡ್ಡೆಯಾಗಿ ಬದಲಾಗುವುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ.