samachara
www.samachara.com
ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ 'ದಿಡ್ಡಳ್ಳಿ' ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ
ಸುದ್ದಿ ಸಾಗರ

ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ 'ದಿಡ್ಡಳ್ಳಿ' ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ದಿಡ್ಡಳ್ಳಿಗೆ ನಡೆಯೋಣ…

ಹೀಗಂತ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ಯ ಹೋರಾಟಗಾರರು ಮತ್ತು ಸಮಾನ ಮನಸ್ಕರು ಇವತ್ತು ಮಂಜಿನ ನಾಡು ಕೊಡಗಿನ ದಿಡ್ಡಳ್ಳಿಯ ಸೇರಿದ್ದಾರೆ.

ಕಳೆದ ಡಿಸೆಂಬರ್ 7ರ ಮುಂಜಾನೆ ಇಲ್ಲಿನ ವಿರಾಜಪೇಟೆ ತಾಲೂಕಿನ ದಿಡ್ಡಳ್ಳಿಯಲ್ಲಿದ್ದ 577 ಕುಟುಂಬಗಳನ್ನು ಅರಣ್ಯ ಇಲಾಖೆ ಬೀದಿಪಾಲು ಮಾಡಿತ್ತು. ಕಳೆದ 6 ತಿಂಗಳಿನಿಂದ ಈ ಕುಟುಂಬಗಳು ಇಲ್ಲಿನ ಸರಕಾರಿ ಭೂಮಿಯಲ್ಲಿ ಕಟ್ಟಿಕೊಂಡಿದ್ದ ಮನೆಯನ್ನು ಕೆಡವಿ, ಲಾಠಿ ಬೀಸಿ ಅವರನ್ನೆಲ್ಲಾ ಅಲ್ಲಿಂದ ಓಡಿಸಲಾಗಿತ್ತು. ಇದೀಗ ಈ ವಸತಿ ವಂಚಿತರಿಗೆ ಮೂಲಭೂತ ಸೌಲಭ್ಯ ಕೊಡಬೇಕು, ಮನೆ ಮತ್ತು ಭೂಮಿ ನೀಡಬೇಕು ಎಂಬ ಬೇಡಿಕೆಯೊಂದಿಗೆ ಹೋರಾಟ ಆರಂಭಿಸಿದ್ದಾರೆ.

ಭಾನುವಾರದ ಹೋರಾಟ:

ಬೀದಿಪಾಲಾದ ಆದಿವಾಸಿಗಳ ಪರವಾಗಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ನೇತೃತ್ವದಲ್ಲಿ ಹೋರಾಟಗಳು ನಡೆಯಲಿವೆ. ಇದರ ರೂಪು ರೇಷೆ ನಿರ್ಧರಿಸಲು ಕೊಡಗಿನಲ್ಲಿ ಮಹತ್ವದ ಸಭೆ ನಡೆಯುತ್ತಿದೆ.

ಭಾನುವಾರ ಹಿರಿಯ ಹೋರಾಟಗಾರ ಎ.ಕೆ. ಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ 'ಸಂಕಲ್ಪ ಸಭೆ' ನಡೆಯುತ್ತಿದ್ದು, ಕೊಡಗಿನ ಹಾಗೂ ನಾಡಿನ ನೂರಾರು ಹೋರಾಟಗಾರರು ಭಾಗವಹಿಸಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಹೋರಾಟ ನಡೆಯಲಿದ್ದು, ಆರೋಗ್ಯ ಸಮಸ್ಯೆಯಿಂದ ಅವರು ಕೊಡಗಿಗೆ ತೆರಳಿಲ್ಲ.

ಬೀದಿಗೆ ಬಿದ್ದಿದ್ದು ಹೇಗೆ?

ಕೊಡಗು ಎಂದರೆ ಕಾಫಿ ತೋಟಗಳ ನಾಡು. ಇಲ್ಲಿ ಹಲವು ಬುಡಕಟ್ಟು ಸಮುದಾಯಗಳು ಅನಾದಿ ಕಾಲದಿಂದ ವಾಸಿಸುತ್ತಾ ಬಂದಿವೆ. ಇದೇ ಬುಡಕಟ್ಟು ಕುಟುಂಬಗಳನ್ನು ಕಾಫಿ ತೋಟದ ಭೂಮಾಲಿಕರು ಜೀತಕ್ಕೂ ಬಳಸಿಕೊಳ್ಳುತ್ತಾ ಬಂದಿದ್ದಾರೆ. ಕೊನೆಗೊಂದು ದಿನ ಈ ಜನರು ಜೀತದಿಂದ ಬೇಸತ್ತು ಹೊರಗೆ ಬಂದು ಸ್ವತಂತ್ರವಾಗಿ ಜೀವಿಸಲು ಪ್ರಾರಂಭಿಸಿದ್ದವು. ಅದರಂತೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕು, ಮಾಲ್ದಾರಿ ಹತ್ತಿರದ ಅಮ್ಮತ್ತಿ ಹೋಬಳಿಯ ದಿಡ್ಡಳ್ಳಿಯೆಂಬ ಕಾಡು ಪ್ರದೇಶದಲ್ಲಿ ಕಳೆದ 6 ತಿಂಗಳಿಂದ ಇವರೆಲ್ಲಾ ವಾಸ ಮಾಡುತ್ತಿದ್ದರು. ಇದರಲ್ಲಿ ಸುಮಾರು 577 ಕುಂಟುಂಬಗಳು ಮತ್ತು ಮೂರು ಸಾವಿರ ಜನರಿದ್ದರು.

ಸಾಮಾಜಿಕವಾಗಿ ತೀರಾ ಹಿಂದುಳಿದ ಕುಟುಂಬಗಳಿವು. ಇಲ್ಲೇ ಸಮೀದಲ್ಲಿರುವ ಗಿರಿಜನರ ‘ಆಶ್ರಯ ಶಾಲೆ’ಯಲ್ಲಿ ಇತ್ತೀಚಿನ ಮಕ್ಕಳು ಏಳನೇ ತರಗತಿ ಕಲಿತಿದ್ದೇ ಹೆಚ್ಚು. “ಇಡೀ 577 ಕುಟುಂಬಗಳಲ್ಲಿ 10 ಜನರು ಮಾತ್ರ 10ನೇ ತರಗತಿ ವ್ಯಾಸಾಂಗ ಮಾಡಿದ್ದಾರೆ. ಇವರಲ್ಲಿ ಐವರು ಯುವತಿಯರು. ಇವರು ಯಾರಿಗೂ ರೇಷನ್ ಕಾರ್ಡ್ ಇಲ್ಲ. ಕೆಲವರ ಬಳಿ ವೋಟರ್ ಐಡಿ ಕಾರ್ಡ್ ಇದೆ. ಹೆಚ್ಚಿನವರು ಆಧಾರ ಕಾರ್ಡ್ ಮಾಡಿಸಿದ್ದಾರಷ್ಟೆ. ಇವರಿಗೆ ಮತದಾನದ ಹಕ್ಕು ಇಲ್ಲದ ಕಾರಣಕ್ಕೆ ರಾಜಕಾರಣಿಗಳು, ಅಧಿಕಾರಿಗಳು ಯಾರೂ ಇತ್ತ ತಲೆ ಹಾಕುವುದಿಲ್ಲ,” ಎಂದು ಮಾಹಿತಿ ನೀಡುತ್ತಾರೆ ಹೋರಾಟ ಸಮಿತಿಯ ಕಾರ್ಯದರ್ಶಿ ಹೇಮಂತ್ ಕುಮಾರ್.

ಈ ಕುಟುಂಬಗಳು ವಾಸ ಮಾಡುತ್ತಿದ್ದ ಕಾಡು ಅರಣ್ಯ ಇಲಾಖೆಗೆ ಒಳಪಟ್ಟಿತ್ತು. ಆದಿವಾಸಿಗಳು ವಾಸವಿದ್ದ 50 ಎಕರೆ, ಮರಗಿಡಗಳನ್ನು ಬೆಳೆಸಲಾಗದ ಕಾರಣ ಅರಣ್ಯ ಇಲಾಖೆಗೆ ಬೇಡವಾದ (ಪೈಸಾರೆ ಜಮೀನು) ಜಮೀನು ಎಂದು ಗುರುತಿಸಲಾಗಿತ್ತು.

ಈ ಭೂಮಿಯನ್ನು ಈಗಾಗಲೆ ಸುತ್ತಮುತ್ತ ಇರುವ ಕೆಲ ಕಾಫಿ ಎಸ್ಟೇಟ್ ಮಾಲೀಕರು ಒಂದಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ. ಈ ವಿಷಯ ಇಲ್ಲಿನ ಮೂಲ ನಿವಾಸಿಗಳಿಗೆ ತಿಳಿದಿದೆ. ನಂತರ ಮೊದಲಿಗೆ ಎರಡು ಕುಟುಂಬಗಳು ಇಲ್ಲಿಗೆ ನೆಲೆಸಲು ಬಂದಿದ್ದವು. ಯಾವಾಗ ಇದು ಸರ್ಕಾರದ ಪೈಸಾರೆ ಜಮೀನು ಎಂಬುದು ಅವರ ಗಮನಕ್ಕೆ ಬಂತೋ, ಆಗ ತಮ್ಮದೇ ಆದಿವಾಸಿ ಸಮುದಾಯದ ಮತ್ತಷ್ಟೂ ಕುಟುಂಬಗಳು ಬಂದು ಬದುಕು ಕಟ್ಟಿಕೊಂಡಿದ್ದವು. ಇಲ್ಲಿನ ಮನೆಗಳ ಸಂಖ್ಯೆ 577ಕ್ಕೆ ತಲುಪಿತ್ತು.

ಇಲ್ಲಿಗೆ ಜಿಲ್ಲಾಧಿಕಾರಿಗಳೂ ಭೇಟಿ ನೀಡಿ ಹೋಗಿದ್ದರು. ಜತೆಗೆ ಮನೆಗಳಿಗೆ ಸರ್ಕಾರದ ನಿಯಗಳ ಪ್ರಕಾರ ಮನೆ ನಂಬ್ರಗಳನ್ನು ನೀಡಿ, ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿತ್ತು.

ಡಿಸೆಂಬರ್ 7 ನಡೆದಿದ್ದೇನು?

ಈ ತಿಂಗಳ 7ನೇ ತಾರೀಖು ಬೆಳಗಿನ ಜಾವ ನಾಲ್ಕು ಗಂಟೆಗೆ ಪೊಲೀಸರು ಮತ್ತು ಸಿಆರ್ಪಿಫ್ 300 ಸಿಬ್ಬಂದಿಗಳ ತಂಡ 2 ಜೆಸಿಬಿಗಳೊಂದಿಗೆ ಮುನ್ಸೂಚನೆ ಇಲ್ಲದೆ ಈ ಮನೆಗಳ ಮೇಲೆ ದಾಳಿ ಮಾಡಿತ್ತು. ಮಾತ್ರವಲ್ಲ ಎಲ್ಲಾ ಮನೆಗಳನ್ನೂ ತೆರವು ಮಾಡಿ, 3 ಸಾವಿರ ಆದಿವಾಸಿಗಳು ರಾತ್ರಿ ಕಳೆದು ಬೆಳಗಾಗುವಾಗ ಬೀದಿಪಾಲಾಗುವಂತೆ ಮಾಡಿದ್ದರು.

ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ 'ದಿಡ್ಡಳ್ಳಿ' ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

‘ನಮ್ಮ ಮನೆಗಳನ್ನು ತೆರವು ಮಾಡಬೇಡಿ’ ಎಂದು ಈ ಸಂದರ್ಭ ಕೆಲವು ಮಹಿಳೆಯರು ಬೆತ್ತಲೆ ಪ್ರತಿಭಟನೆ ಮಾಡಿದ್ದರು. ಆದರೆ ಪೊಲೀಸರು ಅದಕ್ಕೂ ಸೊಪ್ಪು ಹಾಕದೆ ಲಾಠಿ ಚಾರ್ಜ್ ಮಾಡಿ ಅವರನ್ನೆಲ್ಲಾ ಅಲ್ಲಿಂದ ಓಡಿಸಿದ್ದರು. ತೆರವಿಗೆ ಅಡ್ಡಿ ಮಾಡಿದ್ದ 8 ಜನರನ್ನು ಬಂಧಿಸಿ ಸುಳ್ಳು ಕೇಸೂ ಹಾಕಲಾಗಿತ್ತು.

ಹೋರಾಟಕ್ಕೆ ಮುನ್ನುಡಿ:

ಆದಿವಾಸಿಗಳ ಕುಟುಂಬಗಳು ಬೀದಿಗೆ ಬಿದ್ದ ವಿಚಾರ ಗೊತ್ತಾಗಿ ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಸ್ಥಳಕ್ಕೆ ಭೇಟಿ ನೀಡಿತ್ತು. ಕೂಡಲೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿದ್ದ ಸಿರಿಮನೆ ನಾಗರಾಜ್ ನೇತೃತ್ವದ ತಂಡ,

  1. ಎಲ್ಲಾ ಕುಟುಂಬಗಳಿಗೂ ತಕ್ಷಣ ವಸತಿ ಸೌಲಭ್ಯ ಕಲ್ಪಿಸಬೇಕು.
  2. ಎಲ್ಲಾ ಮುಟ್ಟುಗೋಲು ಹಾಕಿಕೊಂಡ ಕಾರಣ ಆಹಾರದ ವ್ಯವಸ್ಥೆ ಒದಗಿಸಬೇಕು.
  3. 2006 ಅರಣ್ಯ ಕಾಯ್ದೆ ಕಾನೂನಿನ ಪ್ರಕಾರ ಜಮೀನಿನ ಮಂಜೂರಾತಿ ಪ್ರಕ್ರಿಯೆ ನಡೆಸಬೇಕು.
  4. ದೌರ್ಜನ್ಯ ಎಸಗಿರುವ ಅಧಿಕಾರಿಗಳ ಮೇಲೆ (ಜಿಲ್ಲಾಧಿಕಾರಿಯನ್ನು ಒಳಗೊಂಡಂತೆ) ಕ್ರಿಮಿನಲ್ ಮೊಕದ್ದಮೆ ಹಾಕಬೇಕು.

ಎಂಬ ಬೇಡಿಕೆಗಳನ್ನು ಇಡಲಾಗಿತ್ತು. ಆದರೆ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಪರಿಹರಿಸಿಲ್ಲ.

ನಂತರ ಬಿಡ್ಡಳ್ಳಿ ಆದಿವಾಸಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ‘ಚಲೋ ಉಡುಪಿ’ ಮತ್ತು ‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ಹಾಗೂ ಇತರ ಹಲವಾರು ಸಂಘಟನೆಗಳು ಸೇರಿ ಶುಕ್ರವಾರ ಸಭೆ ಕರೆದಿದ್ದವು. ಇದರಲ್ಲಿ ಮೊದಲ ಹಂತದ ಹೋರಾಟದ ರೂಪುರೇಷೆ ಸಿದ್ಧ ಮಾಡಲಾಗಿತ್ತು.

ಕೂಡಲೇ ಸಂತ್ರಸ್ತರಿಗೆ ಅಗತ್ಯವಾದ ಊಟ, ವಸತಿ, ನೀರಿನ ವ್ಯವಸ್ಥೆ ಕಲ್ಪಿಸಲು ಸಂಬಂಧಪಟ್ಟ ಮಂತ್ರಿಗಳು ಮತ್ತು ಇಲಾಖೆಯ ಕಾರ್ಯದರ್ಶಿಗಳನ್ನು ಬೇಟಿ ಮಾಡುವುದು. ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನು ಬೇಟಿ ಮಾಡುವುದು. ಮತ್ತು ದಿಡ್ಡಳ್ಳಿ ವಿಚಾರ ಸುದ್ದಿ ಕೇಂದ್ರಕ್ಕೆ ಬರಲು ಎಲ್ಲ ಟಿವಿ ಮಾಧ್ಯಮಗಳ ಮುಖ್ಯಸ್ಥರನ್ನು ಬೇಟಿ ಮಾಡುವುದು ಎಂದು ನಿರ್ಧರಿಸಲಾಯಿತು. ಈ ಮೂಲಕ ಆಗಿರುವ ಅನ್ಯಾಯದ ಬಗ್ಗೆ ರಾಜ್ಯದ ಜನತೆ ಗಮನ ಸೆಳೆಯಲು ಯೋಜನೆ ರೂಪಿಸಲಾಯಿತು.

ಈಗಾಗಲೇ ರಾಜ್ಯ ಮಾನವಹಕ್ಕು ಆಯೋಗದ ಅಧ್ಯಕ್ಷೆ ಮೀರಾ ಸಕ್ಸೇನಾ, ಅರಣ್ಯ ಇಲಾಖೆಯ ಕಾರ್ಯದರ್ಶಿ ವಿಜಯ ಭಾಸ್ಕರ್, ಕೊಡಗು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಸೀತಾರಾಮ್, ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಗಳಾದ ಎಚ್. ಆಂಜನೇಯ, ಕಂದಾಯ ಮಂತ್ರಿಗಳಾದ ಕಾಗೋಡು ತಿಮ್ಮಪ್ಪ ಮೊದಲಾದವರನ್ನು ಫೋನ್ ಮೂಲಕ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮಣಿವಣ್ಣನ್ ಹಾಗೂ ಹಲವು ಟಿವಿ ಚಾನೆಲ್ಗಳ ಮುಖ್ಯಸ್ಥರನ್ನು ಬೇಟಿಯಾಗಿ ಮಾತನಾಡಲಾಗಿದೆ. ಅಧಿಕಾರಿಗಳು ಮತ್ತು ಸಚಿವರು ಭರವಸೆ ನೀಡಿದ್ದಾರೆಯೇ ಹೊರತು ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.

ಎಲ್ಲಿದೆ ದಿಡ್ಡಳ್ಳಿ?

ದಿಡ್ಡಳ್ಳಿ ಮೈಸೂರು-ಮಡಿಕೇರಿ ಹೆದ್ದಾರಿಯಲ್ಲಿ ಬರುವ ಪಿರಿಯಾಪಟ್ಣದಿಂದ 21 ಕಿಲೋಮೀಟರ್ ದೂರದಲ್ಲಿದೆ. ಪಿರಿಯಾಪಟ್ಟಣ-ಸಿದ್ಧಾಪುರ ಮಾರ್ಗದಲ್ಲಿ 21 ಕಿಲೋಮೀಟರ್ ಹೋದರೆ ಸಿಗುವ ‘ಮಾಲ್ದಾರೆ ಚೆಕ್ ಪೋಸ್ಟ್’ನಲ್ಲಿ ಇಳಿದರೆ, ಅಲ್ಲೇ ಸರಕಾರಿ ಆಸ್ಪತ್ರೆ ಪಕ್ಕದ ರಸ್ತೆಯಲ್ಲಿ ಎರಡೂವರೆ ಕಿಲೋ ಮೀಟರ್ ಒಳಗೆ ಹೋದರೆ 'ಆಶ್ರಮ ಶಾಲೆ' ಸಿಗುತ್ತದೆ. ಅದೇ ದಿಡ್ಡಳ್ಳಿ. ಅಲ್ಲೇ ಇವತ್ತು 577ಕ್ಕೂ ಹೆಚ್ಚು ಕುಟುಂಬಗಳು ಟೆಂಟ್ ಹಾಕಿಕೊಂಡು ರಾತ್ರಿ ಹಗಲು ಕಳೆಯುತ್ತಿವೆ.

ರಮಾನಾಥ ರೈ ಪ್ರತಿಕ್ರಿಯೆ:

ಬೀದಿಗೆ ತಳ್ಳಲಾಗಿರುವ ದಿಡ್ಡಳ್ಳಿಯ ಆದಿವಾಸಿಗಳ ಕುರಿತು ಸಚಿವ ರಾಮನಾಥ್ ರೈರನ್ನು ‘ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ’ಯ ಪರವಾಗಿ ಉಮರ್ ಯು.ಎಚ್., ಸುರೇಶ್ ಭಟ್ ಬಾಕ್ರಬೈಲ್, ಗೌರಿ ಲಂಕೇಶ್, ಶಬ್ಬೀರ್ ಮತ್ತು ಕೆ.ಎಲ್.ಅಶೋಕ್ ಶನಿವಾರ ಭೇಟಿಯಾಗಿದ್ದರು. ಈ ಸಂದರ್ಭ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ ಮತ್ತು ದಿಡ್ಡಳ್ಳಿಯ ಮೂರು ಸಾವಿರ ಜನರ ಎತ್ತಂಗಡಿಯನ್ನು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಲಾಯಿತು.

ಭೂಮಿ, ವಸತಿ ಹಕ್ಕು ವಂಚಿತರ ನಡಿಗೆ 'ದಿಡ್ಡಳ್ಳಿ' ಕಡೆಗೆ; ಕೊಡಗಿನಲ್ಲಿಂದು ಸಿದ್ದು ಸರಕಾರಕ್ಕೆ ಛೀಮಾರಿ

“ಅಲ್ಲಿನ ಜನರು ಬೇರೆ ಊರಿನಿಂದ ಬಂದು ನೆಲೆಸಿದ್ದಾರೆಂಬ ಮಾಹಿತಿಯೂ ಬರುತ್ತಿದೆ. ಅರಣ್ಯ ಇಲಾಖೆಗೆ ಸೇರಿದ ಭೂಮಿಯಾಗಿದ್ದರೆ ಯಾವುದೇ ಕಾರಣಕ್ಕೂ ಆ ಜಾಗದಲ್ಲಿ ವಸತಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಆದರೆ ಬೇರೆ ಜಾಗದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಿದೆ. ಎಲ್ಲವನ್ನೂ ಕೂಲಂಕುಷವಾಗಿ ಪರಿಶೀಲಿಸಬೇಕಿದೆ. ಅರಣ್ಯ ಇಲಾಖೆಯ ಭೂಮಿಗೆ ಅತಿಕ್ರಮ ಪ್ರವೇಶವನ್ನು ನಾನು ವಿರೋಧಿಸುತ್ತೇನೆ.” -

ರಮಾನಾಥ ರೈ, ಅರಣ್ಯ ಸಚಿವ

ಸದ್ಯ ಈ ಕುಟುಂಬಗಳು ಊಟಕ್ಕೂ ಗತಿ ಇಲ್ಲದೆ ಬೀದಿ ಬದಿಯಲ್ಲಿ ಬದುಕುತ್ತಿವೆ. ಅವರೆಲ್ಲಾ ಇವತ್ತು ಕಾಡಿನ ಗೆಡ್ಡೆ ಗೆಣಸು ತಿಂದು ವಾಸಿಸುತ್ತಿದ್ದಾರೆ. ಸರಕಾರ ಕನಿಷ್ಠ ಗಂಜಿ ಕೇಂದ್ರವೂ ತೆರೆದಿಲ್ಲ ಎಂಬುದು ವಿಷಾದದ ಸಂಗತಿ.

‘ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ’ ತನ್ನ ಹೋರಾಟಗಳನ್ನು ಕಳೆದ ಆರು ತಿಂಗಳಿನಿಂದ ಇಲ್ಲಿವರೆಗೆ ಪರಿಣಾಮಕಾರಿಯಾಗಿ ನಡೆಸುತ್ತಾ ಬಂದಿದೆ. ಆದರೆ ಇದೀಗ ಸಮಿತಿಗೆ ನೈಜ ಸವಾಲು ಎದುರಾಗಿದೆ. ಇದನ್ನು ಸಮಿತಿ ಹೇಗೆ ತಾರ್ಕಿಕ ಅಂತ್ಯಕ್ಕೆ ತಲುಪಿಸುತ್ತೆ ಎನ್ನುವುದು ಕರ್ನಾಟಕ ಭೂರಹಿತರ ಹೋರಾಟಕ್ಕೆ ಸ್ಪಷ್ಟತೆಯನ್ನಂತೂ ನೀಡಲಿದೆ.

'ಜನನುಡಿ' ಕೊಡಗಿಗೆ ಶಿಫ್ಟ್?

ಅತ್ತ ಕೊಡಗಿನ ದಿಡ್ಡಳ್ಳಿಯಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಆದಿವಾಸಿಗಳ ಪರವಾಗಿ ಹೋರಾಟಕ್ಕೆ ಇಳಿದಿದೆ. ಇದೇ ಸಮಯದಲ್ಲಿ ಮಂಗಳೂರಿನಲ್ಲಿ ಡಿಸೆಂಬರ್ 24 ಮತ್ತು 25ರಂದು ಆಯೋಜನೆಯಾಗಿದ್ದ ಜನನುಡಿ ಕಾರ್ಯಕ್ರಮ ಕೊಡಗಿಗೆ ಶಿಫ್ಟ್ ಆಗಲಿದೆ ಎಂಬ ಸುದ್ದಿ ಕೇಳಿ ಬಂದಿದೆ. ಜನನುಡಿ ನಿಜವಾದ ಜನರ ಮಧ್ಯೆ ನಡೆಯಬೇಕು ಎಂಬ ಕಾರಣಕ್ಕೆ, ಕೊಡಗಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಇದನ್ನು ಆಯೋಜಕರು ತಳ್ಳಿ ಹಾಕಿದ್ದಾರೆ. ಆಯೋಜಕರಲ್ಲಿ ಒಬ್ಬರಾದ ಕಾವ್ಯ ಅಚ್ಚುತ್ "ಜನನುಡಿ ಮಂಗಳೂರಿನಲ್ಲೇ ನಡೆಯಲಿದೆ. ಇದರಲ್ಲಿ ಏನೂ ಬದಲಾವಣೆ ಇಲ್ಲ," ಎಂದು ಹೇಳಿದ್ದಾರೆ.