samachara
www.samachara.com
ಪರಮ ಗುರು; ಪ್ರಚಂಡ ಶಿಷ್ಯ: ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮನ ಮನಸ್ಸಿನಲ್ಲೇನಿದೆ?
ಸುದ್ದಿ ಸಾಗರ

ಪರಮ ಗುರು; ಪ್ರಚಂಡ ಶಿಷ್ಯ: ಕೊನೆಗೂ ಮೌನ ಮುರಿದ ಬಿಜೆಪಿ ಭೀಷ್ಮನ ಮನಸ್ಸಿನಲ್ಲೇನಿದೆ?

ಹಿರಿಯ ರಾಜಕಾರಣಿ, ಬಿಜೆಪಿಯ ಭೀಷ್ಮ ಎಲ್.ಕೆ ಅಡ್ವಾಣಿ ಅನಾಣ್ಯೀಕರಣದ ನಂತರ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ತೆರೆ ಮರೆಗೆ ಸರಿದಿದ್ದ ಅಡ್ವಾಣಿ ಇದೀಗ ಮತ್ತೆ ಪ್ರತ್ಯಕ್ಷರಾಗಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಚರ್ಚೆಗಳಿಲ್ಲದೆ ಪ್ರತಿ ದಿನ ಮುಂದೂಡಲ್ಪಡುತ್ತಿದೆ. ಇಂದೂ ಕೂಡಾ ಸ್ಪೀಕರ್ ಸುಮಿತ್ರಾ ಮಹಾಜನ್ ದಿನದ ಮಟ್ಟಿಗೆ ಕಲಾಪ ಮುಂದೂಡುತ್ತಿದ್ದಂತೆ ಅಡ್ವಾಣಿ ಬೇಸರಗೊಂಡಿದ್ದಾರೆ. “ನಾನು ರಾಜಿನಾಮೆ ಕೊಡಬೇಕು ಎಂದೆನಿಸುತ್ತಿದೆ,” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ. ಸಂಪುಟ ಸಚಿವೆ ಸ್ಮೃತಿ ಇರಾನಿ ಮತ್ತು ರಾಜನಾಥ್ ಸಿಂಗ್ ಬಳಿ ಅವರು ಅಸಮಾಧಾನ ತೋಡಿಕೊಂಡಿದ್ದಾರೆ. ಮಾತ್ರವಲ್ಲ ರಾಜನಾಥ್ ಬಳಿ, ನಾಳೆ ಲೋಕಸಭೆಯಲ್ಲಿ ನೋಟ್ ಬ್ಯಾನ್ ವಿಚಾರವಾಗಿ ಚರ್ಚೆ ನಡೆಯುಬೇಕು. ಈ ಭರವಸೆಯನ್ನು ಸುಮಿತ್ರಾ ಮಹಾಜನ್ ರಿಂದ ಪಡೆಯುವಂತೆ ಕೇಳಿಕೊಂಡಿದ್ದಾರೆ.

500 ಹಾಗೂ 1,000 ಮುಖಬೆಲೆಯ ನೋಟ್ ಬ್ಯಾನ್ ಆದ ನಂತರ ಪ್ರತಿಪಕ್ಷಗಳು ಎರಡೂ ಮನೆಯ ಕಲಾಪಗಳಲ್ಲಿ ಪ್ರಧಾನಿ ಪ್ರತಿಕ್ರಿಯೆಗಾಗಿ ಒತ್ತಾಯಿಸುತ್ತಾ ಬಂದಿವೆ. ಆದರೆ ಹಠಮಾರಿ ಧೋರಣೆ ತಳೆದಿರುವ ಪ್ರಧಾನಿ ಮಾತ್ರ ಪ್ರತಿಕ್ರಿಯೆ ನೀಡುತ್ತಿಲ್ಲ. ಇದರಿಂದ ಆಡಳಿತ ಮತ್ತು ವಿಪಕ್ಷಗಳ ನಡುವೆ ಸದಾ ಗದ್ದಲ ಏರ್ಪಟ್ಟು ಇಲ್ಲಿವರೆಗೆ ಒಮ್ಮೆಯೂ ಚರ್ಚೆ ನಡೆದಿಲ್ಲ.

ಸದ್ಯ ಅಡ್ವಾಣಿ ಪರೋಕ್ಷವಾಗಿ ಮೋದಿ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರತಿಪಕ್ಷಗಳಿಗೆ ಮತ್ತೊಂದು ಅಸ್ತ್ರ ಎತ್ತಿಕೊಟ್ಟಂತಾಗಿದೆ.

ಗುರು-ಶಿಷ್ಯರ ಸಂಬಂಧ ಬಿರುಕು ಬಿಟ್ಟ ಕತೆ:

ಬಿಜೆಪಿಯನ್ನು ಕಟ್ಟಿ ಬೆಳೆಸಿದವರಲ್ಲಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌.ಕೆ.ಅಡ್ವಾಣಿ ಇಬ್ಬರಿಗೂ ಸಮಾನ ಪಾಲಿದೆ. ಒಂದು ಕಡೆ ಎಲ್ಲರಿಗೂ ಇಷ್ಟವಾಗುತ್ತಿದ್ದ ವಾಜಪೇಯಿ; ಮತ್ತೊಂದು ಕಡೆ ಹಿಂದುತ್ವವಾದಿ ದನಿಯಾಗಿ ಅಡ್ವಾಣಿ ಕಾಣಿಸಿಕೊಳ್ಳುತ್ತಿದ್ದರು.

ವಾಜಪೇಯಿ ತೆರೆ ಮರೆಗೆ ಸರಿದ ನಂತರ ಪ್ರಧಾನಿಯಾಗುವ ಕನಸು ಕಂಡವರು ಎಲ್.ಕೆ.ಅಡ್ವಾಣಿ. 2009ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಲಾಲ್ ಕೃಷ್ಣ ಅಡ್ವಾಣಿ ಮೂಡಿ ಬಂದರಾದರೂ, ಪಕ್ಷಕ್ಕೆ ಜಯ ದಕ್ಕಲಿಲ್ಲ. ಪ್ರಧಾನಿ ಪಟ್ಟ ಮರೀಚಿಕೆಯಾಗಿಯೇ ಉಳಿಯಿತು.

2014ರ ಚುನಾವಣೆ ವೇಳೆಗೆ ಅಡ್ವಾಣಿ ವಯಸ್ಸು 86ಕ್ಕೆ ಬಂದು ತಲುಪಲಿತ್ತು. ಆದರೆ ಅವರ ಉತ್ಸಾಹ ಮಾತ್ರ ಕಡಿಮೆಯಾಗಿರಲಿಲ್ಲ. ಮತ್ತೆ ಪ್ರಧಾನಿಯಾಗುವ ಹಂಬಲ ಅವರಲ್ಲಿತ್ತು. ಇದಕ್ಕೆ ಅಡ್ಡಗಾಲಾಗಿದ್ದು ಮತ್ಯಾರೂ ಅಲ್ಲ ಒಂದು ಕಾಲದ ಅಡ್ವಾಣಿ ಪಟ್ಟ ಶಿಷ್ಯರಾಗಿದ್ದ ನರೇಂದ್ರ ಮೋದಿ.

ಹಾಗೆ ನೋಡಿದರೆ ಅಡ್ವಾಣಿ ಮತ್ತು ನರೇಂದ್ರ ಮೋದಿ ಸಂಬಂಧ ಚೆನ್ನಾಗಿಯೇ ಇತ್ತು. ಬಿಜೆಪಿಯನ್ನು ಅಧಿಕಾರಕ್ಕೆ ತಂದ ಅಡ್ವಾಣಿಯ ಐತಿಹಾಸಿಕ ರಥಯಾತ್ರೆಗಳನ್ನು ರೂಪಿಸಿದ್ದರಲ್ಲಿ ನರೇಂದ್ರ ಮೋದಿ ಪಾಲು ದೊಡ್ಡದಿತ್ತು. ಅಡ್ವಾಣಿ, ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದ ಗುಜರಾತಿನ ಗಾಂಧಿನಗರದಿಂದ ಲೋಕಸಭೆಗೆ ಆರಿಸಿಯೂ ಬರುತ್ತಿದ್ದರು.

2002ರಲ್ಲಿ ನಡೆದ ಗಲಭೆ ನಂತರ, ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಉಳಿಯಲೂ ಇದೇ ಅಡ್ವಾಣಿ ಕಾರಣರಾಗಿದ್ದರು. ಮೋದಿ ಬದಲಾವಣೆಗೆ ವಾಜಪೇಯಿ ಇಂಗಿತ ವ್ಯಕ್ತಪಡಿಸಿದ್ದರೂ, ಅಡ್ವಾಣಿ ಅದನ್ನು ಒಪ್ಪದ ಕಾರಣ ಮೋದಿ ಮುಂದುವರಿಯುವಂತಾಗಿತ್ತು. ಅಂದು ಅಡ್ವಾಣಿ ತೆಗೆದುಕೊಂಡ ನಿಲುವು ಮೋದಿ ಪಾಲಿಗೆ ವರದಾನವಾಯಿತು. ಮುಂದೆ ಬೆಳೆಯುತ್ತಾ ಹೋದ ನರೇಂದ್ರ ಮೋದಿ, ಅಡ್ವಾಣಿ  ದಾರಿಗೇ ಮುಳ್ಳಾಗಿದ್ದು ಮಾತ್ರ  ವಿಪರ್ಯಾಸ.

ಪ್ರಧಾನಿ ಪಟ್ಟಕ್ಕೆ ಹಗ್ಗಜಗ್ಗಾಟ:

ಅದು 2014ರ ಲೋಕಸಭೆ ಚುನಾವಣೆ ಸಂದರ್ಭ. ಪ್ರಧಾನಿ ಪಟ್ಟಕ್ಕೆ ನರೇಂದ್ರ ಮೋದಿ ಮತ್ತು ಅಡ್ವಾಣಿ ನಡುವೆ ಯಾವಾಗ ಸ್ಪರ್ಧೆ ಆರಂಭವಾಯಿತೋ ಆಗ ಇಬ್ಬರ ಸಂಬಂಧವೂ ಹಳಸಲು ಶುರುವಾಯಿತು. ಅಡ್ವಾಣಿ ಬಹಿರಂಗವಾಗಿ ಛತ್ತೀಸ್ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ರನ್ನು ಹೊಗಳಿದರು. ಅದರಲ್ಲೂ ಚೌಹಾಣ್ರನ್ನು ವಾಜಪೇಯಿಗೆ ಹೋಲಿಸಿದರು.


       ಮೋದಿ-ಅಡ್ವಾಣಿ-ವಾಜಪೇಯಿ
ಮೋದಿ-ಅಡ್ವಾಣಿ-ವಾಜಪೇಯಿ

ಮುಂದೆ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕಾದ ಸಮಯ ಹತ್ತಿರ ಬಂತು. ಈ ವೇಳೆ ಅಡ್ವಾಣಿಯವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಯಿತು.

ಗೋವಾ ರಾಜಧಾನಿ ಪಣಜಿಯಲ್ಲಿ 2013ರ ಜೂನಿನಲ್ಲಿ ನಡೆದಿದ್ದ ಬಿಜೆಪಿ ಪದಾಧಿಕಾರಿಗಳ ಸಭೆಗೆ ಎಲ್.ಕೆ. ಅಡ್ವಾಣಿ ಗೈರು ಹಾಜರಾಗಿದ್ದರು. ಈ ಮೂಲಕ ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಆದರೆ, ಬಿಜೆಪಿ ಹಿರಿಯ ನಾಯಕರು ಅಡ್ವಾಣಿ ವೈಯಕ್ತಿಕ ಕಾರಣಕ್ಕೆ ಪದಾಧಿಕಾರಿಗಳ ಸಭೆಗೆ ಗೈರು ಹಾಜರಾಗಿದ್ದಾರೆಂದು ಬಿಂಬಿಸುವ ಕಸರತ್ತು ಮಾಡಿದ್ದರು. ಈ ಮೂಲಕ ಹಿರಿಯ ನಾಯಕರಿಗೆ ಬೆಲೆಯನ್ನೇ ಕೊಟ್ಟಿರಲಿಲ್ಲ.

ಕೊನೆಗೆ ಅಡ್ವಾಣಿಯನ್ನು ಕಡೆಗಣಿಸಿ ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು.

2014ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯ ಮೇಲಿನ ಮುನಿಸಿಗೆ ಗುಜರಾತಿನ ಗಾಂಧಿನಗರದ ಬದಲಿಗೆ ಭೋಪಾಲಿನಿಂದ ಸ್ಪರ್ಧಿಸಲು ಅಡ್ವಾಣಿ ಇಚ್ಛಿಸಿದರು. ಅದಕ್ಕೂ ಮೋದಿ ಮತ್ತವರ ತಂಡ ಸೊಪ್ಪು ಹಾಕದೆ ಗಾಂಧಿ ನಗರದಿಂದಲೇ ಅಡ್ವಾಣಿಯನ್ನು ಕಣಕ್ಕಿಳಿಸಿತ್ತು.

ಕೊನೆಯ ಕ್ಷಣದ ಕಸರತ್ತು:

ಚುನಾವಣೆ ನಡೆದ ನಂತರವೂ ಅಡ್ವಾಣಿಗೆ ಕ್ಷೀಣ ಆಸೆಯೊಂದು ಉಳಿದುಕೊಂಡಿತ್ತು. ಒಂದೊಮ್ಮೆ ಲೋಕಸಭೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗದೇ ಹೋದಲ್ಲಿ ಇತರೆ ಪಕ್ಷಗಳ ನೆರವು ಕೇಳಬೇಕಾಗುತ್ತಿತ್ತು. ಅಂತಹ ಸನ್ನಿವೇಶದಲ್ಲಿ ಮೋದಿಗಿಂತಲೂ ಅಡ್ವಾಣಿಯವರನ್ನೇ ಪ್ರಧಾನಿಯಾಗಿಸಲು ಆ ಪಕ್ಷಗಳು ಆಗ್ರಹಿಸಬಹುದು ಎಂಬ ನಿರೀಕ್ಷೆ ಅಡ್ವಾಣಿಗಿತ್ತು. ಬಿಜೆಪಿಯಲ್ಲೇ ಅಡ್ವಾಣಿ ಮತ್ತು ಅವರ ಬೆಂಬಲಿಗರ ಗುಂಪು ಇಂತಹ ಸನ್ನಿವೇಶಕ್ಕಾಗಿ ಕಾಯುತ್ತಿತ್ತು ಆದರೆ ಮೋದಿ ಅಲೆಯಲ್ಲಿ, ಕಾಂಗ್ರೆಸ್ ಪಕ್ಷದ ಜೊತೆಗೇ ಅಡ್ವಾಣಿಯವರಿಗಿದ್ದ ಪ್ರಧಾನಿಯಾಗುವ ಕನಸೂ ಕೊಚ್ಚಿ ಹೋಗಿತ್ತು.

ಸುಧಾರಿಸಿದ ಸಂಬಂಧ:

ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದು ನರೇಂದ್ರ ಮೋದಿ ಪ್ರಧಾನಿಯಾಗುತ್ತಿದ್ದಂತೆ ನಿಧಾನವಾಗಿ ಸಂಬಂಧ ಸ್ವಲ್ಪಮಟ್ಟಿಗೆ ಸುಧಾರಣೆಯಾಯಿತು. ಏಪ್ರಿಲ್ 4, 2014ರಂದು ಸಂಸತ್ ಭವನದ ಸೆಂಟ್ರಲ್ ಹಾಲ್ ನಲ್ಲಿ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಮೋದಿ ಮತ್ತು ಅಡ್ವಾಣಿ ನಡುವೆ ಭಾವುಕ ಕ್ಷಣಗಳು ಹಾದು ಹೋಗಿದ್ದವು.

ಸಭೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ನಾಯಕರು ಸರ್ವಾನುಮತದಿಂದ ಮೋದಿಯನ್ನು ಪ್ರಧಾನಿಯಾಗಿ ಆಯ್ಕೆ ಮಾಡುತ್ತಿದ್ದಂತೆ ಎಲ್.ಕೆ.ಅಡ್ವಾಣಿ ಅವರ ಕಾಲಿಗೆರಗಿ ನಮಸ್ಕರಿಸಿದ್ದರು. ಅದೇ ವೇಳೆ ಮಾತನಾಡಿದ್ದ ಅಡ್ವಾಣಿ, “ಮೋದಿ ಅವರ ಕೃಪೆಯಿಂದ, ಬಿಜೆಪಿಗೆ ಸರ್ಕಾರ ರಚಿಸುವ ಸುದಿನ ಬಂದಿದೆ. ಇದು ದೇಶ ಮತ್ತು ಪಕ್ಷದ ಐತಿಹಾಸಿಕ ಕ್ಷಣಗಳು,” ಎಂದು ಕ್ಷಣಕಾಲ ಭಾವುಕರಾಗಿದ್ದರು. ಈ ಸಂದರ್ಭದಲ್ಲಿ ಮೋದಿ ಸಹ, “ನೀವು ಹಿರಿಯರು. ನನ್ನ ಬಗ್ಗೆ ಮಾತನಾಡುವಾಗ ಕೃಪೆ ಅನ್ನೋ ಪದ ಬಳಸಬಾರದು,” ಎಂದು ಗದ್ಗದಿತರಾಗಿದ್ದರು.ಮುಂದಿನ ರಾಷ್ಟ್ರಪತಿ ಅಡ್ವಾಣಿಯಾಗಲಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು.

ಮತ್ತೆ ಮೂಲೆಗುಂಪಾದ ಭೀಷ್ಮ:


       ಮೋದಿ-ಅಮಿತ್ ಶಾ ದರ್ಬಾರ್
ಮೋದಿ-ಅಮಿತ್ ಶಾ ದರ್ಬಾರ್

ಆದರೆ ಮತ್ತೆ ಅಡ್ವಾಣಿಯನ್ನು ಮೂಲೆಗುಂಪು ಮಾಡುವ ಕೆಲಸ ಆರಂಭವಾಯಿತು. ಮೇ 2014ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿಯೂ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿಯವರನ್ನು ಬೇಕೆಂದೇ ಕಡೆಗಣಿಸಲಾಯಿತು. ಅವತ್ತು ಅಡ್ವಾಣಿ ಕಾರ್ಯಕಾರಿಣಿಯಲ್ಲಿ ಭಾಗವಹಿಸಿಯೂ ಭಾಷಣ ಮಾಡದೇ ವಾಪಾಸಾಗಿದ್ದರು.

ಮೋದಿ-ಅಮಿತ್ ಷಾ ಜೋಡಿಯ ದರ್ಬಾರ್ ಆರಂಭವಾದ ನಂತರ, ಬಿಜೆಪಿ ಸ್ಥಾಪನೆಯಾದಾಗಿನಿಂದಲೂ ಅದರ ಸಂಸದೀಯ ಮಂಡಳಿ ಸದಸ್ಯರಾಗಿದ್ದ ಅಡ್ವಾಣಿಯವರನ್ನು ಅಲ್ಲಿಂದ ಹೊರಹಾಕಲಾಗಿತ್ತು.

ಒಂದು ಕಾಲದಲ್ಲಿ ಬಿಜೆಪಿಯ ಉಕ್ಕಿನ ಮನುಷ್ಯ ಎಂದೇ ಕರೆಯಲ್ಪಡುತ್ತಿದ್ದ ಎಲ್. ಕೆ. ಅಡ್ವಾಣಿ ಈಗ ಮೂಲೆಗುಂಪಾಗಿದ್ದಾರೆ. ದೊಡ್ಡ ದೊಡ್ಡ ಸಮಾವೇಶಗಳಲ್ಲಿ ಗುಡುಗು ಸಿಡಿಲಿನಂತೆ ಭಾಷಣ ಮಾಡುತ್ತಿದ್ದ ಅಡ್ವಾಣಿ, ಮೌನಕ್ಕೆ ಶರಣಾಗಿದ್ದಾರೆ. ವಯಸ್ಸು, ಮೂಲೆಗುಂಪಾದ ನೋವು ಅವರನ್ನು ಬಾಧಿಸುತ್ತಿದೆ.

ಅನಾಣ್ಯೀಕರಣದ ನಂತರ ದೇಶದಲ್ಲಿ ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ ಜಾರಿಯಾದಾಗಲೂ ಮೌನವಾಗಿಯೇ ಇದ್ದ ಅಡ್ವಾಣಿ ಮೊದಲ ಬಾರಿಗೆ ಮಾತನಾಡಿದ್ದಾರೆ. ಮುಂದೆ ಇದು ಯಾವ ಹಂತಕ್ಕೆ ಹೋಗಲಿದೆ ಎಂಬುದನ್ನು ನೋಡಲು ಒಂದೆರಡು ದಿನ ಕಳೆಯಬೇಕು.