samachara
www.samachara.com
ಕಾಂಗ್ರೆಸ್ ತಲೆದಂಡಕ್ಕೆ ಮುನ್ನುಡಿ ಬರೆಯುತ್ತಾ 'ಮೇಟಿ ಪ್ರಕರಣ'?
ಸುದ್ದಿ ಸಾಗರ

ಕಾಂಗ್ರೆಸ್ ತಲೆದಂಡಕ್ಕೆ ಮುನ್ನುಡಿ ಬರೆಯುತ್ತಾ 'ಮೇಟಿ ಪ್ರಕರಣ'?

ಕೊನೆಗೂ ಅಬಕಾರಿ ಸಚಿವ, ಸಿಎಂ ಆಪ್ತ ಎಚ್ ವೈ ಮೇಟಿ ರಾಜಿನಾಮೆ ನೀಡಿದ್ದಾರೆ. ಸೆಕ್ಸ್ ಸಿಡಿಯೊಂದು ಅವರ ಸಚಿವ ಸ್ಥಾನವನ್ನು ಕಿತ್ತುಕೊಂಡಿದೆ.

ವಿಧಾನಸಭೆ ಚುನಾವಣೆಗೆ ಸುಮಾರು ಒಂದೂವರೆ ವರ್ಷ ಇದೆ ಎನ್ನುವಾಗ ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳು ಗರಿಗೆದರಿವೆ. ಆಡಳಿತರೂಢ ಕಾಂಗ್ರೆಸ್ ಪಕ್ಷದ ಬಗೆಗಿನ ಅಭಿಪ್ರಾಯ ಬದಲಿಸುವ ಕೆಲಸಗಳು ಮುನ್ನಲೆಗೆ ಬಂದಿದ್ದು, ರಾಷ್ಟ್ರೀಯ ಪಕ್ಷಕ್ಕೆ ರಾಜ್ಯದಲ್ಲಿ ಎಳ್ಳು ನೀರು ಬಿಡುವ ಕೆಲಸ ಆರಂಭವಾಗಿದೆ.

ಯಡಿಯೂರಪ್ಪ ಭವಿಷ್ಯ ನಿಜವಾಗುತ್ತಾ?

ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸದ್ಯದಲ್ಲೇ 3 ರಿಂದ 4 ಸಚಿವರು ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಿದ್ದರು. ಅದರಂತೆ ಈಗ ಲೈಂಗಿಕ ಹಗರಣವೊಂದರಲ್ಲಿ ಸಿಕ್ಕಿ ಹಾಕಿಕೊಂಡು ಸಚಿವ ಎಚ್.ವೈ ಮೇಟಿ ರಾಜಿನಾಮೆ ನೀಡಿದ್ದಾರೆ. ಇದು ಯಡಿಯೂರಪ್ಪ ಮಾತಿನ ನಂತರ ಉರುಳುತ್ತಿರುವ ಮೊದಲ ವಿಕೆಟ್.

ಇನ್ನೊಂದು ಕಡೆಯಲ್ಲಿ ಕಾವೇರಿ ನೀರಾವರಿ ನಿಗಮದ ಕಾರ್ಯ ನಿರ್ವಹಣಾಧಿಕಾರಿ ಎನ್.ಟಿ ಚಿಕ್ಕರಾಯಪ್ಪ ಮತ್ತು ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾರ್ಯಕ್ರಮದ ಮುಖ್ಯ ಕಾರ್ಯಕ್ರಮಾಧಿಕಾರಿ ಎಸ್‌.ಸಿ. ಜಯಚಂದ್ರ ಅಕ್ರಮವಾಗಿ ಹೊಸ ನೋಟುಗಳನ್ನು ಹೊಂದಿದ್ದ ಪ್ರಕರಣದಲ್ಲಿ ಪ್ರಭಾವಿ ಸಚಿವರಿಬ್ಬರ ಹೆಸರು ಬಹಿರಂಗವಾಗಿದೆ ಎನ್ನುವ ಸುದ್ದಿಗಳು ಓಡಾಡುತ್ತಿವೆ. ಈ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆಯನ್ನು ಚುರುಕುಗೊಳಿಸಿದ್ದು ಇಬ್ಬರು ಸಚಿವರೇ ಬಂಧಿತರಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ. ಒಂದೊಮ್ಮೆ ಇದು ನಡೆದಿದ್ದೇ ಆದಲ್ಲಿ ಮತ್ತಿಬ್ಬರು ಸಚಿವರು ರಾಜಿನಾಮೆ ನೀಡಬೇಕಾಗುತ್ತದೆ.

ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಹೇಳಿದ ಭವಿಷ್ಯ ನಿಜವಾಗಿ 3-4 ಸಚಿವರು ಜೈಲು ಪಾಲಾಗುತ್ತಾರಾ ಎಂಬುದು ಕುತೂಹಲ ಹುಟ್ಟಿಸಿದೆ.

ಸಿದ್ದರಾಮಯ್ಯ ಎಡವಿದ್ದೆಲ್ಲಿ?

ಒಂದೊಮ್ಮೆ ಇನ್ನೂ ಒಂದೆರಡು ಸಚಿವರು ರಾಜಿನಾಮೆ ಕೊಡುವ ಪ್ರಸಂಗ ಒದಗಿ ಬಂದರೆ ಬಹುಶಃ ಅದಕ್ಕಿಂತ ದೊಡ್ಡ ಮುಜುಗರದ ಸಂಗತಿ ರಾಜ್ಯ ಸರಕಾರಕ್ಕೆ ಬೇರೊಂದಿಲ್ಲ. ಇದರಿಂದ ಜನಸಾಮಾನ್ಯರ ವಲಯದಲ್ಲಿ ಸರಕಾರದ ಮೇಲಿದ್ದ ಅಲ್ಪ ಸ್ವಲ್ಪ ಒಳ್ಳೆಯ ಅಭಿಪ್ರಾಯವೂ ಕಳೆದುಹೋಗಲಿದೆ.

ಹಾಗೆ ನೋಡಿದರೆ ಮೇಟಿ ವಿಚಾರದಲ್ಲಿ ಇಂಥಹದ್ದೊಂದು ಲೈಂಗಿಕ ಹಗರಣ ನಡೆದಿದೆ ಎಂಬ ವಿಚಾರ ಮುಖ್ಯಮಂತ್ರಿಗಳಿಗೆ ಮೊದಲೇ ಗೊತ್ತಿತ್ತು. ತೆರೆಮರೆಯಲ್ಲಿ ಹಣಕಾಸಿನ ಕೊಡು ಕೊಳ್ಳುವಿಕೆಗಳೂ ನಡೆದಿದ್ದವು. ಆದರೆ ಮೇಟಿ ಸಿಎಂ ಆಪ್ತರು ಎಂಬ ಮಾತುಗಳಾಚೆಯೂ, ಪ್ರಕರಣಕ್ಕೆ ತೆರೆ ಎಳೆಯಲು ಮುಖ್ಯಮಂತ್ರಿಗಳಿಗೆ ಸಾಧ್ಯವಾಗದೇ ಹೋಯಿತು.

ಮೇಟಿ ಹಗರಣ ನಡೆದು ಬಂದ ಬಗೆ:

ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಳ್ಳಾರಿ ಮೂಲದ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮುಲಾಲಿ ಸಚಿವ ಎಚ್.ವೈ ಮೇಟಿ ಸೆಕ್ಸ್ ಸಿಡಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಇದನ್ನು ಅಂದೇ ತಳ್ಳಿ ಹಾಕಿದ್ದ ಮೇಟಿ, ತಾವು ಯಾರೊಂದಿಗೂ ಆ ರೀತಿ ವರ್ತಿಸಿಲ್ಲ ಎಂದು ಹೇಳಿದ್ದರು. ಅದೇ ದಿನ ರಾತ್ರಿ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ವಿಜಯಲಕ್ಷ್ಮೀ ಎಂಬ ಮಹಿಳೆ, “ನನ್ನದು ಮತ್ತು ಮೇಟಿ ನಡುವಿನದು ತಂದೆ ಮಗಳ ಸಂಬಂಧ. ನಮ್ಮ ನಡುವೆ ಏನೂ ನಡೆದೇ ಇಲ್ಲ. ವೀಡಿಯೋದಲ್ಲಿ ಇರುವುದು ನಾನಲ್ಲ,” ಎಂದು ಹೇಳಿದ್ದರು.

ಸೋಮವಾರದ ವೇಳೆಗೆ ಪ್ರಕರಣ ಹಲವು ತಿರುವು ಪಡೆದುಕೊಂಡಿತ್ತು. ಮುಖ್ಯಮಂತ್ರಿಗಳು ಸಿಡಿ ಇದ್ದರೆ ಬಿಡುಗಡೆ ಮಾಡಲಿ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದರು. ಇನ್ನೇನು ಕೊನೆಯ ಕ್ಷಣದಲ್ಲಿ ಟಿವಿ ಮಾಧ್ಯಮಗಳಿಗೆ ಸಿಡಿ ಕೈತಪ್ಪಿತು ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಅವತ್ತೇ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಮೇಟಿ, ಪ್ರಕರಣದ ವಿವರಣೆಯನ್ನೂ ನೀಡಿದ್ದರು. ಹೀಗಿರುವಾಗಲೇ ಅವತ್ತೇ ವಿಜಯಲಕ್ಷ್ಮಿ ಗಂಡ ಮಾತನಾಡಿ, “ವೀಡಿಯೋದಲ್ಲಿ ಇರುವವರು ನನ್ನ ಪತ್ನಿಯೇ ನಿಜ. ಆದರೆ ಅಕ್ರಮ ಸಂಬಂಧ ಇಲ್ಲ,” ಎಂದಿದ್ದರು.

ಮಂಗಳವಾರ ಕಳೆಯುವ ಹೊತ್ತಿಗೆ ಮತ್ತೊಂದು ಸುತ್ತಿನ ಗೊಂದಲ ಪ್ರಕರಣದಲ್ಲಿ ಆವರಿಸಿಕೊಂಡಿತ್ತು. ವೀಡಿಯೋದಲ್ಲಿ ಇದ್ದಾರೆ ಎನ್ನಲಾದ ಮಹಿಳೆ ವಿಜಯಲಕ್ಷ್ಮಿ ತಾವಾಗಿಯೇ ಬಳ್ಳಾರಿ ಪ್ರೆಸ್ ಕ್ಲಬ್ಬಿಗೆ ಬಂದು “ನಮ್ಮ ನಡುವೆ ಸೆಕ್ಸ್ ಆಗಿದೆ,” ಎಂಬುದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರು. ಮಾತ್ರವಲ್ಲ ತಾವು ಜೀವ ಬೆದರಿಕೆಯಿಂದ ಕಳೆದ ಬಾರಿ ಸುಳ್ಳು ಹೇಳಿದ್ದಾಗಿಯೂ ಸ್ಪಷ್ಟನೆ ನೀಡಿದ್ದರು. ಈ ಸಂದರ್ಭ ಲೈಂಗಿಕ ಹಗರಣದ ಆರೋಪ ಸಾಬೀತಾದಲ್ಲಿ ಸಚಿವ ಸ್ಥಾನ ತ್ಯಜಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದ್ದಾರೆ ಎಂಬ ಸುದ್ದಿಯೂ ಹರಡಿತ್ತು. ಆದರೆ ಎಲ್ಲಾ ಬೆಳವಣಿಗೆಗಳ ಹಿನ್ನಲೆಯಲ್ಲಿ ಆರ್ಟಿಐ ಕಾರ್ಯಕರ್ತ ರಾಜಶೇಖರ್ ನಡೆ ಮಾತ್ರ ನಿಗೂಢವಾಗಿತ್ತು.

ಬುಧವಾರದ ದಿಢೀರ್ ಬೆಳವಣಿಗೆಗಳು

ಇದ್ದಕ್ಕಿದ್ದಂತೆ ಬುಧವಾರ ಬೆಳಿಗ್ಗೆ ರಾಜಶೇಖರ್ ದೆಹಲಿಯಲ್ಲಿ ಪ್ರತ್ಯಕ್ಷರಾಗಿದ್ದರು. ಅಲ್ಲೇ ಮಾಧ್ಯಮಗಳಿಗೆ 11.30ರ ಸುಮಾರಿಗೆ 3.10 ನಿಮಿಷಗಳ ಸೆಕ್ಸ್ ಸಿಡಿಯನ್ನು ನೀಡಿದ್ದರು.

ತಕ್ಷಣ ಈ ನೀಲಿಚಿತ್ರ ಎಲ್ಲಾ ಟಿವಿ ಚಾನಲ್ಲುಗಳಲ್ಲಿ ಪ್ರಸಾರವಾಗಿತ್ತು. ಚಾನಲ್ಲುಗಳೇ ಖುದ್ದು ಆಸ್ಥೆ ವಹಿಸಿ ನೀಲಿ ಚಿತ್ರವನ್ನು ಕೆಲವರು ಅಲ್ಪ ಸ್ವಲ್ಪ ಬ್ಲರ್ ಮಾಡಿ, ಇನ್ನು ಕೆಲವರು ಇದ್ದದ್ದನ್ನು ಇದ್ದ ಹಾಗೆ ಕರ್ನಾಟಕದ ಮನೆ ಮನೆಗಳಿಗೆ ತಲುಪಿಸಿದವು. ಇದಕ್ಕೆ ಅಪವಾದವೆಂಬಂತೆ ಉಳಿದುಕೊಂಡಿದ್ದು ಇತ್ತೀಚೆಗೆ ಬಂದ 'ಸುದ್ದಿ ಟಿವಿ' ಹಾಗೂ 'ಈ ಟಿವಿ ನ್ಯೂಸ್ ಕನ್ನಡ' ಮಾತ್ರ. ವೀಡಿಯೊ ಪ್ರಸಾರವಾಗುತ್ತಿದ್ದಂತೆ 12 ಗಂಟೆಗೆ ಸುಮಾರಿಗೆ ಮೇಟಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ರಾಜಿನಾಮೆ ನೀಡಿ ಬಂದಿದ್ದರು ನಂತರ 1:10ಕ್ಕೆ ರಾಜಿನಾಮೆ ರಾಜ್ಯಪಾಲರಿಗೆ ರವಾನೆಯಾಗಿತ್ತು. 2:20ಕ್ಕೆ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿಗಳು ಸಿಐಡಿ ತನಿಖೆಗೆ ಆದೇಶವನ್ನೂ ನೀಡಿದ್ದರು.

ರಾಜಶೇಖರ್ ಮುಲಾಲಿ ಯಾರು?

ಆರ್ಟಿಐ ಕಾರ್ಯಕರ್ತ ರಾಜಶೇಖರ್ ಮೂಲತಃ ದಾವಣಗೆರೆ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ನೀಲಗುಂದ ಗ್ರಾಮದವರು. ಎಂಬಿಎ ವ್ಯಾಸಾಂಗ ಮಾಡಿದ್ದಾರೆ. ಕಳೆದ ಮೂರು ದಶಕಗಳಿಂದ ಅವರು ಬಳ್ಳಾರಿಯನ್ನೇ ತಮ್ಮ ಕಾರ್ಯಕ್ಷೇತ್ರವಾಗಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಉದ್ಯಮ ಒಂದರಲ್ಲಿ ಪಾಲುದಾರರು. ಒಂದಷ್ಟು ರಾಷ್ಟ್ರಮಟ್ಟದ ಸಂಪರ್ಕಗಳು ರಾಜಶೇಖರ್ ಅವರಿಗಿದೆ. ಬಳ್ಳಾರಿ ವಿವಿಯ ಗೌರವ ಡಾಕ್ಟರೇಟನ್ನು ಅಣ್ಣಾ ಹಜಾರೆ ನಿರಾಕರಿಸಿದಾಗ ಅವರನ್ನು ಮನವೊಲಿಸಿ ಕರೆತಂದವರು ಇದೇ ರಾಜಶೇಖರ್. ನಂತರ ಅಣ್ಣಾ ಅವರ ಮನೆಯಲ್ಲೇ ಉಳಿದುಕೊಂಡಿದ್ದರು. ರಾಜಶೇಖರ್‌ ಸಹೋದರ ವಕೀಲ ಮಹೇಶ್ವರಪ್ಪ ಅಪಘಾತದಲ್ಲಿ ನಿಧನರಾದ ಬಳಿಕ ಅಣ್ಣನ ನೆನಪಿನಲ್ಲಿ ಅಣ್ಣಾ ಫೌಂಡೇಶನ್‌ ಸ್ಥಾಪಿಸಿದ್ದಾರೆ. ಇದಕ್ಕೆ ಅಣ್ಣಾ ಹಜಾರೆ ಅವರೇ ಚಾಲನೆ ನೀಡಿದ್ದರು. ಅಣ್ಣಾ ಅವರು ಜನಲೋಕಪಾಲ್‌ ಮಸೂದೆ ಜಾರಿಗೆ ನಡೆಸಿದ ಹೋರಾಟದಲ್ಲೂ ರಾಜಶೇಖರ್ ಪಾಲ್ಗೊಂಡಿದ್ದರು. ಇವರು ಈವರೆಗೆ ಲಂಚದ ಬೇಡಿಕೆ ಪ್ರಕರಣದಲ್ಲಿ 25ಕ್ಕೂ ಹೆಚ್ಚು ಮಂದಿಯನ್ನು ಲೋಕಾ ಬಲೆಗೆ ಕೆಡವಿದ್ದಾರೆ ಎನ್ನಲಾಗಿದೆ. ಕೂಡ್ಲಿಗಿ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ವರ್ಗಾವಣೆ ಪ್ರಕರಣದ ವಿರುದ್ಧ ಧ್ವನಿ ಎತ್ತಿದ್ದರು. ಇವರೇ ಶೆಣೈ ಅವರಿಗೆ ಸಲಹೆಗಳನ್ನು ನೀಡುತ್ತಿದ್ದರು ಎಂಬ ಮಾತೂ ಇದೆ.

‘ಹನಿಟ್ರಾಪ್’ಗೆ ಬಲಿಯಾದ ಮೇಟಿ:

ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿ, ಒಮ್ಮೆ ಸಂಸದರಾಗಿ ಅಧಿಕಾರ ಅನುಭವಿಸಿರುವವರು ಮೇಟಿ. ಮೂರು ಬಾರಿ ಸೋಲುಣ್ಣುವ ಮೂಲಕ ಅವರು ರಾಜಕೀಯ ಏರಿಳಿತಗಳನ್ನೂ ಕಂಡವರು. 71 ವಯಸ್ಸಿನ ಮೇಟಿಗೂ ಈ ಲೈಂಗಿಕ ಹಗರಣಗಳಿಗೂ ಅವಿನಾಭಾವ ಸಂಬಂಧ. ಈ ಹಿಂದೆ ಎರಡು ಲೈಂಗಿಕ ಹಗರಣಗಳು ಮೇಟಿ ವಿರುದ್ಧ ಕೇಳಿ ಬಂದಿದ್ದವು. ಆದರೆ ಅವು ದೊಡ್ಡ ಮಟ್ಟಕ್ಕೆ ಸದ್ದು ಮಾಡದೆ ಚಿಗುರಿನಲ್ಲೇ ಮುರುಟಿ ಹೋಗಿತ್ತು.

ಆದರೆ ಈ ಬಾರಿ ಹಾಗಾಗಲಿಲ್ಲ. ಮೇಟಿ ಮತ್ತು ವಿಜಯಲಕ್ಸ್ಮಿ 'ಸಮ್ಮತಿಯ ಸೆಕ್ಸ್'ನಲ್ಲಿ ಪಾಲ್ಗೊಂಡಿರಬಹುದಾದರೂ, ಸೆಕ್ಸ್ ನಡೆದಿದ್ದು ಬಾಗಲಕೋಟೆ ನಗರಸಭೆ ಮುಖ್ಯಾಧಿಕಾರಿ ಕ್ವಾರ್ಟಸ್‌ನಲ್ಲಿ. ಹೀಗಾಗಿ ಸರಕಾರಿ ಕಚೇರಿ ದುರ್ಬಳಕೆ ವಿಚಾರ ಮೇಟಿಯನ್ನು ಸುತ್ತಿಕೊಂಡಿತು. ಹೀಗೆ ಸುಮಾರು ಆರು ತಿಂಗಳ ಹಿಂದಿನ ಸಿಡಿ ಹುಲ್ಲಪ್ಪ ಯಮನಪ್ಪ ಮೇಟಿ (ಎಚ್‌ ವೈ ಮೇಟಿ) ಸಚಿವ ಸ್ಥಾನಕ್ಕೆ ಕೊನೆಗೂ ಗಂಡಾಂತರ ತಂದಿದೆ.

ಒಂದೆಡೆ ಮೇಟಿ ಸಿಡಿ ಪುರಾಣ, ಇನ್ನೊಂದು ಕಡೆ ಅಧಿಕಾರಿಗಳಿಬ್ಬರ ಕಪ್ಪು ಹಣ ಪ್ರಕರಣದಲ್ಲಿ ಕೇಳಿಬರುತ್ತಿರುವ ಸಚಿವರ ಹೆಸರು; ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಇವೆಲ್ಲಾ ಮುನ್ನುಡಿ ಬರೆಯುತ್ತಾ ಕಾದು ನೋಡಬೇಕು.