samachara
www.samachara.com
'ಬೆಟ್ಟದ ನೆಲ್ಲಿ- ಸಮುದ್ರದ ಉಪ್ಪು': ಭಾರತ- ಕ್ಯೂಬಾ ನಡುವೆ ಎತ್ತಣದಿಂದೆತ್ತ ಸಂಬಂಧವಯ್ಯಾ?
ಸುದ್ದಿ ಸಾಗರ

'ಬೆಟ್ಟದ ನೆಲ್ಲಿ- ಸಮುದ್ರದ ಉಪ್ಪು': ಭಾರತ- ಕ್ಯೂಬಾ ನಡುವೆ ಎತ್ತಣದಿಂದೆತ್ತ ಸಂಬಂಧವಯ್ಯಾ?

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಎಲ್ಲಿಯ

ಕ್ಯೂಬಾ ಎಲ್ಲಿಯ ಭಾರತ; ಇಬ್ಬರ ನಡುವೆ ಚಾಚಿಕೊಂಡ 14,000 ಕಿಲೋಮೀಟರುಗಳ ಮಹಾ ಸಾಗರ. ಆದರೆ 'ಬೆಟ್ಟದ ನೆಲ್ಲಿಗೂ ಸಮುದ್ರದ ಉಪ್ಪಿಗೂ' ನಡುವೆ ಸಂಬಂಧ ಬೆಸೆಯುವಂತೆ ಕ್ಯೂಬಾ ಭಾರತದ ಸಂಬಂಧ ಮೊಳಕೆಯೊಡೆದಿತ್ತು. ಅದಕ್ಕೆ ಕಾರಣ ಜಗತ್ತು ಕಂಡ ದಂತಕಥೆ- ಫಿಡೆಲ್ ಕ್ಯಾಸ್ಟ್ರೋ.

ಕ್ಯೂಬಾ ಪಾಲಿಗೆ ಭಾರತ ಯಾವತ್ತಿಗೂ ಆಪತ್ಭಾಂಧವ; ತಿನ್ನಲು ಅನ್ನವಿಲ್ಲದ ಹೊತ್ತಲ್ಲಿ ಗೋಧಿ, ಅಕ್ಕಿ ರಫ್ತು ಮಾಡಿದ ದೇಶ; ಫಿಡೆಲ್ ರನ್ನು ಕೇಳುವವರಿಲ್ಲದ ಹೊತ್ತಲ್ಲಿ ಗುರುತಿಸಿ ಧೈರ್ಯ ತುಂಬಿದವರು ಜವಹರ್ಲಾಲ್ ನೆಹರೂ. ಭಾರತ ಮಾಡಿದ ಮಹದುಪಕಾರಗಳನ್ನು ಕ್ಯೂಬಾ ಯಾವತ್ತಿಗೂ ಮರೆತಿಲ್ಲ. ಆ ಗಾಢ ಸಂಬಂಧದ ಬಂಧ ಇವತ್ತಿಗೂ ಗಟ್ಟಿಯಾಗಿ ಉಳಿದು ಬಿಟ್ಟಿದೆ.

ಅಮೆರಿಕಾ ಜತೆ ಗುದ್ದಾಡುತ್ತಿದ್ದ ನಾಯಕನನ್ನು ಭಾರತದ ಕಾಂಗ್ರೆಸ್ ಮತ್ತು ಅವತ್ತಿನ ಎಡಪಕ್ಷಗಳು ಕೆಂಪುಹಾಸು ಹಾಕಿ ಸ್ವಾಗತಿಸಿದವು. ಪರಿಣಾಮ ದೀರ್ಘಕಾಲೀನ ಸಂಬಂಧವೊಂದು ಉಬಯ ದೇಶಗಳ ನಡುವೆ ಬೆಳೆದು ಬಂತು.

ಭಾರತ ಕ್ಯಾಸ್ಟ್ರೊ ನಡುವೆ ಮರೆಯಲಾರದ ಹಲವು ಘಟನಾವಳಿಗಳಿವೆ. ಅವುಗಳಲ್ಲೇ ಒಂದು: ನೆಹರು ಫಿಡೆಲ್ ನಡುವಿನ ಆತ್ಮೀಯ ಸಂಭಾಷಣೆ. ಸೆಪ್ಟೆಂಬರ್ 1960ರಲ್ಲಿ ಅಮೆರಿಕಾದಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಆಯೋಜನೆಯಾಗಿತ್ತು. ಹೆಚ್ಚಿನ ವಿಶ್ವ ನಾಯಕರ ಪಾಲಿಗೆ ಅಸ್ಪೃಷ್ಯರಾಗಿದ್ದವರು ಕ್ಯಾಸ್ಟ್ರೋ. ಅವತ್ತು 34 ವರ್ಷದ ಕ್ಯಾಸ್ಟ್ರೋ ಉಳಿದುಕೊಂಡಿದ್ದ ಹೊಟೆಲಿಗೆ ಮೊದಲು ಭೇಟಿ ನೀಡಿದವರು ಜವಹರ್ ಲಾಲ್ ನೆಹರೂ. ರಾಜಕೀಯ ಅನುಭವದಿಂದ ಮಾಗಿದ್ದ ನಾಯಕರೊಬ್ಬರು ಯುವ ನಾಯಕನನ್ನು ಭೇಟಿಯಾಗಲು ತಾವಾಗಿಯೇ ಹೋಗಿದ್ದು ಕ್ಯಾಕ್ಯಾಸ್ಟ್ರೋಗೆ ಮರೆಯಲಾರದ ನೆನಪಾಗಿತ್ತು. ಅವತ್ತು ಇಬ್ಬರ ನಡುವೆ ಗಂಟೆಗಟ್ಟಲೆ ಚರ್ಚೆಗಳು ನಡೆದಿತ್ತು. “ನನ್ನನ್ನು ನೋಡಲು ಬಂದ ಮೊದಲ ವ್ಯಕ್ತಿ ಪ್ರಧಾನಿ ನೆಹರೂ. ಅವರ ಆ ಅಯಸ್ಕಾಂತೀಯ ನಡತೆಯನ್ನು ನಾನು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ. ನನಗಾಗ 34 ವರ್ಷ ವಯಸ್ಸು, ಹೆಚ್ಚಾಗಿ ಯಾರಿಗೂ ಪರಿಚಯವಿರಲಿಲ್ಲ. ನಾನು ಒತ್ತಡಕೊಳಗಾಗಿದ್ದೆ. ನೆಹರೂ ನನ್ನ ಆತ್ಮವಿಶ್ವಾಸವನ್ನು ವೃದ್ಧಿಸಿದರು. ನನ್ನ ಒತ್ತಡ ಮರೆಯಾಯಿತು,” ಎಂದು ಮುಂದೊಮ್ಮೆ ಸ್ವತಃ ಕ್ಯಾಕ್ಯಾಸ್ಟ್ರೋ ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಬಳಿ ಹೇಳಿಕೊಂಡಿದ್ದರು.


    ನೆಹರೂ-ಫಿಡೆಲ್ ಭೇಟಿಯ 50 ವರ್ಷದ ಸಂಭ್ರಮಕ್ಕೆ ಕ್ಯೂಬಾ ಅಂಚೆ ಇಲಾಖೆ ಹೊರತಂದ ಅಂಚೆಚೀಟಿ
ನೆಹರೂ-ಫಿಡೆಲ್ ಭೇಟಿಯ 50 ವರ್ಷದ ಸಂಭ್ರಮಕ್ಕೆ ಕ್ಯೂಬಾ ಅಂಚೆ ಇಲಾಖೆ ಹೊರತಂದ ಅಂಚೆಚೀಟಿ

ಇಂದಿರಾ-ಫಿಡೆಲ್ ಆತ್ಮೀಯತೆಯ ದ್ಯೋತಕ:

ಮಾರ್ಚ್ 1983ರಲ್ಲಿ ನವದೆಹಲಿಯಲ್ಲಿ ನಡೆದ 7ನೇ ನ್ಯಾಮ್ (Non-Aligned Movement: NAM) ಸಮಾವೇಶದಲ್ಲಿ ಕ್ಯಾಸ್ಟ್ರೋ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇದರಲ್ಲಿ ಇಂದಿನ ಉಪರಾಷ್ಟ್ರಪತಿ ಹಮೀದ್ ಹನ್ಸಾರಿ (ಆಗ ರಾಯಭಾರಿಯಾಗಿದ್ದರು) ಕೂಡಾ ಭಾಗವಹಿಸಿದ್ದರು. ಆಗ ಅವರಿಬ್ಬರ ನಡುವೆ ಆತ್ಮೀಯ ಮಾತುಕತೆಗಳು ನಡೆದಿತ್ತು. ಕ್ಯಾಸ್ಟ್ರೋಗೆ ವಿಶೇಷ ಆದ್ಯತೆ ನೀಡುವಂತೆ ಅಂದಿನ ಪ್ರಧಾನಿ ಇಂಧಿರಾ ಗಾಂಧಿ, ಅನ್ಸಾರಿಗೆ ಹೇಳಿದ್ದರು.


    1983ರ ಅಲಿಪ್ತ ರಾಷ್ಟ್ರಗಳ 7ನೇ ಸಮಾವೇಶದಲ್ಲಿ ಕ್ಯಾಸ್ಟ್ರೋ ಮತ್ತು ಇಂದಿರಾ
1983ರ ಅಲಿಪ್ತ ರಾಷ್ಟ್ರಗಳ 7ನೇ ಸಮಾವೇಶದಲ್ಲಿ ಕ್ಯಾಸ್ಟ್ರೋ ಮತ್ತು ಇಂದಿರಾ

ಹಿಂದೆ 1979ರ ನ್ಯಾಮ್ ಸಮಾವೇಶ ಹವಾನದಲ್ಲಿ ನಡೆದಿತ್ತು. ಅವತ್ತು ಈ ಸಭೆಯಲ್ಲಿ ಕ್ಯಾಸ್ಟ್ರೋ ಅಧ್ಯಕ್ಷ ಪದವಿಯನ್ನು ಶ್ರೀಮತಿ ಗಾಂಧಿಗೆ ಹಸ್ತಾಂತರಿಸಬೇಕಾಗಿತ್ತು.  ಬ್ಯಾಟನ್ (ದಂಡ) ಹಸ್ತಾಂತರಿಸಲು ಹೊರಟ ಕ್ಯಾಸ್ಟ್ರೋ ಇಂದಿರಾ ಗಾಂಧಿಯನ್ನು ಅಪ್ಪಿಕೊಳ್ಳಲು ಮುಂದೆ ಬಾಗಿದರು. ಇದರಿಂದ ತಕ್ಷಣ ಅವಕ್ಕಾದ ಇಂದಿರಾ ಗಾಂಧಿ ಕೆಲವು ಸೆಕೆಂಡುಗಳ ಕಾಲ ವಿಚಿಲಿತರಾಗಿದ್ದರು. ಆದರೆ ಹಿಂದಿನಿಂದ ಕಿವಿಗಡಚಿಕ್ಕುವ ಚಪ್ಪಾಳಿ ಕೇಳಿ ಬರುತ್ತಿದ್ದಂತೆ ಇಬ್ಬರೂ ಪರಸ್ಪರ ಅಪ್ಪಿಕೊಂಡು ಫೊಟೋ ಫೋಸ್ ಕೊಟ್ಟಿದ್ದರು. ಈ ಸಮಾವೇಶಕ್ಕೆ ಸೋವಿಯತ್ ಒಕ್ಕೂಟದಿಂದ ತೀವ್ರ ಟೀಕೆಗಳು ಕೇಳಿ ಬಂದಿತ್ತು. ಆದರೆ ಕ್ಯಾಸ್ಟ್ರೋ ಮಾತ್ರ ಸಮಾವೇಶದ ಪರವಾಗಿ ದೃಢ ನಿಲುವು ವ್ಯಕ್ತಪಡಿಸಿದ್ದರು.

ಈ ಸಮಾವೇಶದಲ್ಲಿ ಕ್ಯಾಸ್ಟ್ರೋ ನಡೆದುಕೊಂಡ ರೀತಿ ದೀರ್ಘ ಕಾಲ ನೆನಪಿನಲ್ಲಿ ಉಳಿಯುವಂತದ್ದು. ಅವತ್ತು ಸಮಾವೇಶಕ್ಕೆ ಬಂದಿದ್ದ ಪ್ಯಾಲೆಸ್ಟೀನ್ ನಾಯಕ ಯಾಸೀರ್ ಅರಾಫತ್ ಮಾತನಾಡದೇ ವಾಪಸ್ಸು ಹೋಗಬೇಕು ಎಂದು ಜೋರ್ಡಾನ್ ಪ್ರತಿನಿಧಿಗಳು ಹಾಗೂ ಇತರರು ಬೆದರಿಕೆ ಹಾಕಿದ್ದರು. ಕಂಗೆಟ್ಟ ಅರಾಫತ್ ಹೋಗಲು ಅನುವಾಗಿದ್ದರು. ಸಂಜೆ ಹೊರಡಲು ತಮ್ಮ ಸಿಬ್ಬಂದಿಗಳಿಗೆ ಸಿದ್ಧವಾಗಿರಲು ಸೂಚನೆ ನೀಡಿದರು. ಆಗ ಅವರನ್ನು ಉಳಿಸಿಕೊಳ್ಳಲು ಇಂದಿರಾ ಗಾಂಧಿ ಭಾರತದ ಪ್ರತಿನಿಧಿಯಾಗಿದ್ದ ನಟವರ್ ಸಿಂಗ್ ಅವರಿಗೆ ಹೇಳಿದ್ದರು. ಅರಾಫತ್ ಜತೆ ಕ್ಯಾಸ್ಟ್ರೋ ಮಾತನಾಡಿಸಿ; ಹೋಗಲು ಬಿಡಬೇಡಿ ಎಂದು ತಿಳಿಸಿದ್ದರು. ಅವತ್ತು ಕ್ಯಾಸ್ಟ್ರೋ ಮತ್ತು ಅರಾಫತ್ ನಡುವೆ ನಡೆದ ಮಾತುಕತೆಯನ್ನು ಹಿರಿಯ ರಾಜಕಾರಣಿ ನಟವರ್ ಸಿಂಗ್ ‘ದಿ ಹಿಂದೂ’ಗೆ ಬರೆದ ಅಂಕಣದಲ್ಲಿ ಹೀಗೆ ನೆನಪಿಸಿಕೊಂಡಿದ್ದರು:

ಕ್ಯಾಸ್ಟ್ರೋ: ನೀವು ಇಂದಿರಾ ಗಾಂಧಿಯ ಸ್ನೇಹಿತರೋ?

ಅರಾಫತ್: ಸ್ನೇಹಿತ, ಸ್ನೇಹಿತ, ಅವರು ನನ್ನ ಹಿರಿಯಕ್ಕ ಇದ್ದ ಹಾಗೆ. ಮತ್ತು ನಾನು ಆಕೆಗಾಗಿ ಏನೂ ಮಾಡಲು ಸಿದ್ದ.

ಕ್ಯಾಸ್ಟ್ರೊ: ಹಾಗಿದ್ದರೆ ಸಣ್ಣ ತಮ್ಮನಾಗಿ ನಡೆದುಕೊಳ್ಳಿ ಮತ್ತು ಮಧ್ಯಾಹ್ನ ನಂತರ ಅಧಿವೇಶನದಲ್ಲಿ ಭಾಗವಹಿಸಿ.

ಕೊನೆಗೆ ಅರಾಫತ್ ಸಮಾವೇಶದಲ್ಲಿ ಉಳಿದುಕೊಂಡಿದ್ದರು. ಈಗ ಕ್ಯಾಸ್ಟ್ರೋ ಸಾವಿನ ಬೆನ್ನಲ್ಲಿ ತಮ್ಮ ನೆನಪಿನ ಬುತ್ತಿ ತೆರೆದಿಟ್ಟಿರುವ ನಟವರ್ ಸಿಂಗ್, “ದೆಹಲಿ ಮತ್ತು ಹವಾನದಲ್ಲಿ ಅವರನ್ನು 6-7 ಬಾರಿ ಭೇಟಿಯಾಗುವ ಸದಾವಕಾಶ ನನಗೆ ಸಿಕ್ಕಿತ್ತು. ಅವರು ಭಾರತದ ಅತ್ಯುತ್ತಮ ಗೆಳೆಯರಾಗಿದ್ದರು,'' ಎನ್ನುತ್ತಾರೆ ಸಿಂಗ್.


    ನೋಬೆಲ್ ವಿಜೇತ ಖ್ಯಾತ ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಹಾಗೂ ನಟವರ್ ಸಿಂಗ್ ಜತೆ ಕ್ಯಾಸ್ಟ್ರೊ
ನೋಬೆಲ್ ವಿಜೇತ ಖ್ಯಾತ ಸಾಹಿತಿ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಹಾಗೂ ನಟವರ್ ಸಿಂಗ್ ಜತೆ ಕ್ಯಾಸ್ಟ್ರೊ

ಕ್ಯಾಸ್ಟ್ರೋ ಸಾವಿಗೆ ಪ್ರಧಾನಿ ನರೇಂದ್ರ ಮೋದಿಯೂ ಟ್ವೀಟ್ ಮಾಡಿದ್ದು, “ಫಿಡೆಲ್ ಕ್ಯಾಸ್ಟ್ರೊ 20 ಶತಮಾನದ ದೃವತಾರೆ. ತನ್ನ ಆತ್ಮೀಯ ಗೆಳೆಯನೊಬ್ಬನನ್ನು ಕಳೆದುಕೊಂಡಿದ್ದಕ್ಕೆ ಭಾರತ ಮರುಕ ವ್ಯಕ್ತಪಡಿಸುತ್ತದೆ,” ಎಂದಿದ್ದಾರೆ.

ದ್ವಿಪಕ್ಷೀಯ ಸಂಬಂಧ:

ಭಾರತ ಕ್ಯೂಬಾ ನಡುವೆ ಹಲವು ದ್ವಿಪಕ್ಷೀಯ ಒಪ್ಪಂದಗಳು ನಡೆದಿವೆ. ಡಿಸೆಂಬರ್ 1992ರಲ್ಲಿ ಕ್ಯೂಬಾ ಗಂಭೀರ ಆರ್ಥಿಕ ಹಿಂಜರಿತಕ್ಕೆ ಗುರಿಯಾಗಿದ್ದಾಗ ಭಾರತ 10,000 ಟನ್ ಗೋಧಿ ಮತ್ತು 10,000 ಟನ್ ಅಕ್ಕಿಯನ್ನು ನೆರವಿನ ರೂಪದಲ್ಲಿ ನೀಡಿತ್ತು. ಇದನ್ನು ಫಿಡೆಲ್ ‘ಭಾರತದ ಬ್ರೆಡ್’ ಎಂದು ಕರೆದಿದ್ದರು.

2008ರಲ್ಲಿ ಕ್ಯೂಬಾಗೆ ನೀಡಿದ್ದ ಸುಮಾರು 1280 ಕೋಟಿ ಸಾಲ ಮತ್ತು ಬಡ್ಡಿಯನ್ನು ಭಾರತ ಮನ್ನಾ ಮಾಡಿತ್ತು. ಗುಸ್ತಾವ್, ಐಕ್, ಪಲೋಮ ಚಂಡಮಾರುತಗಳು 2008ರ ಏಪ್ರಿಲ್ ಮತ್ತು ಆಗಸ್ಟ್ ನಲ್ಲಿ ಕ್ಯೂಬಾಗೆ ಅಪ್ಪಳಿಸಿದಾಗ ಭಾರತ 14 ಕೋಟಿ ರೂಪಾಯಿ ನೆರವು ನೀಡಿತು.

ದಶಕಗಳಿಂದ ಭಾರತ ಮತ್ತು ಕ್ಯೂಬಾದ ನಡುವೆ ವ್ಯಾಪಾರ ಸಂಬಂಧವಿದೆ. 2014-15ರಲ್ಲಿ ಭಾರತ ಸುಮಾರು 255 ಕೋಟಿ ಮೌಲ್ಯದ ವಸ್ತುಗಳನ್ನು ಕ್ಯೂಬಾಗೆ ರಫ್ತು ಮಾಡಿದ್ದರೆ, 11 ಕೋಟಿ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದೆ. ವೈದ್ಯಕೀಯ ವಸ್ತುಗಳು, ರಾಸಾಯನಿಕ ಪದಾರ್ಥಗಳು, ರಬ್ಬರ್ ಉತ್ಪನ್ನಗಳು, ಕೆಲವು ಯಂತ್ರಗಳನ್ನು ಭಾರತ ರಫ್ತು ಮಾಡಿದ್ದರೆ, ಕ್ಯೂಬಾದಿಂದ ಸಿಗರೇಟು, ಚರ್ಮದ ಉತ್ಪನ್ನಗಳು, ವೈದ್ಯಕೀಯ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ.

ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ್ ಟಾಗೋರ್ ಎಂದರೆ ಕ್ಯೂಬನ್ನಿರಿಗೂ ಎಲ್ಲಿಲ್ಲದ ಪ್ರೀತಿ. ಟಾಗೋರ್ ಹುಟ್ಟುಹಬ್ಬವನ್ನು ಹವಾನಾದಲ್ಲಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಅಲ್ಲಿನ 'ಕ್ಯಾಸ ಡೆ ಏಷ್ಯಾ' ಲೈಬ್ರರಿಗೆ ಟಾಗೋರ್ ಹೆಸರನ್ನು ಇಡಲಾಗಿದೆ.

ಕತೆ ಹೇಳುವ ಚಿತ್ರಗಳು:


    ದೆಹಲಿಯ ಪಿಲಾನ ಬ್ಲಾಕಿನಲ್ಲಿರುವ ಸಮುದಾಯ ಯೋಜನೆ ಪ್ರದೇಶಕ್ಕೆ ಚೆ ಭೇಟಿ ನೀಡಿದಾಗ ಮಾಲಾರ್ಪಣೆ ಮಾಡುತ್ತಿರುವ ಗ್ರಾಮಸ್ಥರು.
ದೆಹಲಿಯ ಪಿಲಾನ ಬ್ಲಾಕಿನಲ್ಲಿರುವ ಸಮುದಾಯ ಯೋಜನೆ ಪ್ರದೇಶಕ್ಕೆ ಚೆ ಭೇಟಿ ನೀಡಿದಾಗ ಮಾಲಾರ್ಪಣೆ ಮಾಡುತ್ತಿರುವ ಗ್ರಾಮಸ್ಥರು.

ಕ್ಯೂಬಾ ಪರವಾಗಿ ಭಾರತಕ್ಕೆ ಮೊದಲ ಭೇಟಿ ನೀಡಿದವರು ಎರ್ನೆಸ್ಟೊ ಚೆ ಗುವೆರಾ. 1960ರಲ್ಲಿ ಸ್ವತಂತ್ರ ವಿದೇಶಾಂಗ ನೀತಿ ಹೊಂದಿರುವ ದೇಶಗಳ ಜತೆ ಸಂಬಂಧ ಕುದುರಿಸುವ ಉದ್ದೇಶದಿಂದ ಅವರು ಭಾರತದವರೆಗೂ ಬಂದಿದ್ದರು. ಕ್ಯೂಬಾ ಸರಕಾರದ ಬಗ್ಗೆ ಉತ್ತಮ ಅಭಿಪ್ರಾಯ ಸೃಷ್ಟಿಸುವ ಗುರಿಯೂ ಚೆಗುವೆರಾ ಮೇಲಿತ್ತು.

ಭಾರತಕ್ಕೆ ಬಂದಿದ್ದ ಚೆ, ಕೃಷಿಕರು, ಫ್ಯಾಕ್ಟರಿ ಕೆಲಸಗಾರರನ್ನು ಭೇಟಿಯಾಗಿದ್ದರು. ಅವತ್ತು ಕ್ಯೂಬಾಗೆ ವಾಪಾಸಾಗಿದ್ದ ಚೆ, "ಭಾರತದಲ್ಲಿ ಕೆಲವರ ಬಳಿ ತುಂಬಾ ಇದೆ, ಹಲವರ ಬಳಿ ಏನೂ ಇಲ್ಲ," ಎಂದು ಬರೆದಿದ್ದರು. ನೆಹರೂ ಸಮಾಜವಾದಕ್ಕೆ ಸಮ್ಮತಿ ಸೂಚಿಸಿದ್ದ ಚೆ, ಕ್ಯೂಬಾಗೆ ಮರಳಿದ ನಂತರ "ನೆಹರೂ ನಮ್ಮನ್ನು ಕುಟುಂಬ ಸದಸ್ಯರಂತೆ, ಸಾಂಪ್ರದಾಯಿಕ ಅಜ್ಜನಂತೆ ಸ್ವಾಗತಿಸಿದರು," ಎಂದು ಬರೆಯುತ್ತಾರೆ. ಚೆ ಭೇಟಿಯ ನಂತರ ಭಾರತ ಕ್ಯೂಬಾದಲ್ಲಿ ರಾಜತಾಂತ್ರಿಕ ಕಚೇರಿ ತೆರೆಯಿತು.


    ತಮ್ಮ ತೀನ್ ಮೂರ್ತಿ ಕಚೇರಿಯಲ್ಲಿ ಚೆಗುವೆರಾರನ್ನು ಸ್ವಾಗತಿಸುತ್ತಿರುವ ನೆಹರೂ
ತಮ್ಮ ತೀನ್ ಮೂರ್ತಿ ಕಚೇರಿಯಲ್ಲಿ ಚೆಗುವೆರಾರನ್ನು ಸ್ವಾಗತಿಸುತ್ತಿರುವ ನೆಹರೂ

    ವಿಯೆಟ್ನಾಂ ಪ್ರವಾಸದ ದಾರಿಯಲ್ಲಿ ಸೆಪ್ಟೆಂಬರ್ 17, 1973 ರಂದು ದೆಹಲಿಯಲ್ಲಿಳಿದ ಕ್ಯಾಸ್ಟ್ರೊರನ್ನು ಬರಮಾಡಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ.
ವಿಯೆಟ್ನಾಂ ಪ್ರವಾಸದ ದಾರಿಯಲ್ಲಿ ಸೆಪ್ಟೆಂಬರ್ 17, 1973 ರಂದು ದೆಹಲಿಯಲ್ಲಿಳಿದ ಕ್ಯಾಸ್ಟ್ರೊರನ್ನು ಬರಮಾಡಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಇಂದಿರಾ ಗಾಂಧಿ.

ಇದೇ ಭೇಟಿಯ ತೀರಾ ಅಪರೂಪದ ಎರಡು ವೀಡಿಯೋಗಳು,

https://www.youtube.com/watch?v=eL_XpFflzJ0

https://www.youtube.com/watch?v=e-LN1Ffm2A4


    ಗ್ಯಾನಿ ಜೇಲ್ ಸಿಂಗ್, ಇಂದಿರಾ ಗಾಂಧಿ ಮತ್ತು ಕ್ಯಾಸ್ಟ್ರೊ ಅಪರೂಪದ ಕಲರ್ ಚಿತ್ರ
ಗ್ಯಾನಿ ಜೇಲ್ ಸಿಂಗ್, ಇಂದಿರಾ ಗಾಂಧಿ ಮತ್ತು ಕ್ಯಾಸ್ಟ್ರೊ ಅಪರೂಪದ ಕಲರ್ ಚಿತ್ರ

    1985ರಲ್ಲಿ ರಾಜೀವ್ ಗಾಂಧಿ ಕ್ಯೂಬಾ ರಾಜಧಾನಿ ಹವಾನಾಗೆ ಭೇಟಿ ನೀಡಿದಾಗ ಉಭಯ ನಾಯಕರ ಮಧ್ಯೆ ಬರೋಬ್ಬರಿ 6 ಗಂಟೆಗಳ ಸುದೀರ್ಘ ಮಾತುಕತೆ ನಡೆದಿತ್ತು.
1985ರಲ್ಲಿ ರಾಜೀವ್ ಗಾಂಧಿ ಕ್ಯೂಬಾ ರಾಜಧಾನಿ ಹವಾನಾಗೆ ಭೇಟಿ ನೀಡಿದಾಗ ಉಭಯ ನಾಯಕರ ಮಧ್ಯೆ ಬರೋಬ್ಬರಿ 6 ಗಂಟೆಗಳ ಸುದೀರ್ಘ ಮಾತುಕತೆ ನಡೆದಿತ್ತು.

    1973ರಲ್ಲಿ ಕೊಲ್ಕೊತ್ತಾದ ಡಂ ಡಂ ವಿಮಾನ ನಿಲ್ದಾಣಕ್ಕೆ ಕ್ಯಾಸ್ಟ್ರೊ ಬಂದಿಳಿದಾಗ ಬರಮಾಡಿಕೊಳ್ಳುತ್ತಿರುವ ಜ್ಯೋತಿ ಬಸು
1973ರಲ್ಲಿ ಕೊಲ್ಕೊತ್ತಾದ ಡಂ ಡಂ ವಿಮಾನ ನಿಲ್ದಾಣಕ್ಕೆ ಕ್ಯಾಸ್ಟ್ರೊ ಬಂದಿಳಿದಾಗ ಬರಮಾಡಿಕೊಳ್ಳುತ್ತಿರುವ ಜ್ಯೋತಿ ಬಸು

1973ರಲ್ಲಿ ಭೇಟಿಯಾದ 20 ವರ್ಷಗಳ ತರುವಾಯ 1993ರಲ್ಲಿ ಪ್ರಖ್ಯಾತ ಮಾವೋವಾದಿ ನಾಯಕ ಜ್ಯೋತಿ ಬಸು ಹವಾನಾಗೆ ಭೇಟಿ ನೀಡಿದ್ದರು. ಕ್ಯೂಬಾ ಕ್ರಾಂತಿಗೆ ಬೆಂಬಲಿಸುವ ಉದ್ದೇಶದಿಂದ ನೀಡಿದ್ದ ಭೇಟಿ ಅದಾಗಿತ್ತು. ಅವತ್ತು ಬಸು, ಹಾಗೂ ಇನ್ನೊಬ್ಬ ಕಮ್ಯೂನಿಷ್ಟ್ ನಾಯಕ ಸೀತಾರಾಂ ಯಚೂರಿ ಜತೆ ಕ್ಯಾಸ್ಟ್ರೋ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಆಗ ಭಾರತದ ಬಗ್ಗೆ ಪ್ರಶ್ನೆಗಳನ್ನು ಕೇಳಿ ವಿವರಣೆಗಳನ್ನು ಪಡೆದುಕೊಂಡಿದ್ದ ಕ್ಯಾಸ್ಟ್ರೊ “ಸಮಾಜವಾದ ಇಲ್ಲವೇ ಸಾವು” ಎನ್ನುವುದೇ ಹೋರಾಟ ಎಂದು ಬಸು ಬಳಿ ಹೇಳಿಕೊಂಡಿದ್ದರು. ಯಚೂರಿ ಬಳಿ ಪ್ರಶ್ನೆಗಳನ್ನು ಕೇಳಿ ಭಾರತದ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಂಡಿದ್ದರು.

ಭೇಟಿ ನಡೆದ ಮರುದಿನ ನೇರವಾಗಿ ಕ್ಯಾಸ್ಟ್ರೋ ಬಸು ಇದ್ದು ಅತಿಥಿ ಗೃಹಕ್ಕೆ ನಡೆದು ಬಂದಿದ್ದರು. ಈ ಬಗ್ಗೆ ಮುಂದೊಂದು ದಿನ ಪ್ರಸ್ತಾಪಿಸಿದ್ದ ಬಸು, “ಕ್ಯಾಸ್ಟ್ರೊ ಹೇಳದೆ ಕೇಳದೆ ನೇರವಾಗಿ ನಾವಿದ್ದ ಕೋಣೆಗೇ ಬಂದಿದ್ದು ನನಗೆ ಪರಮಾಶ್ಚರ್ಯ. ಅವರು ನಮ್ಮನ್ನು ಬೀಳ್ಕೊಡಲು ವಿಮಾನ ನಿಲ್ದಾಣದ ತನಕವೂ ಬಂದರು. ಇದು ನನಗೆ ಮರೆಯಲು ಸಾಧ್ಯವೇ ಇಲ್ಲ,” ಎಂದು ಬರೆದುಕೊಂಡಿದ್ದರು.


    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಕ್ಯಾಸ್ಟ್ರೊ 2003ರಲ್ಲಿ ಮಲೇಷ್ಯಾದ ಕೌಲಾಲಾಂಪುರದಲ್ಲಿ ಗಂಭೀರ ಚರ್ಚೆಯಲ್ಲಿ ತೊಡಗಿರುವುದು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಕ್ಯಾಸ್ಟ್ರೊ 2003ರಲ್ಲಿ ಮಲೇಷ್ಯಾದ ಕೌಲಾಲಾಂಪುರದಲ್ಲಿ ಗಂಭೀರ ಚರ್ಚೆಯಲ್ಲಿ ತೊಡಗಿರುವುದು

    2006ರಲ್ಲಿ ಹವಾನದಲ್ಲಿ 'ನ್ಯಾಮ್' ಸಮಾವೇಶಕ್ಕೂ ಮುನ್ನ ಮನ್ ಮೋಹನ್ ಸಿಂಗ್ ಕ್ಯಾಸ್ಟ್ರೊ ಮುಖಾಮುಖಿ
2006ರಲ್ಲಿ ಹವಾನದಲ್ಲಿ 'ನ್ಯಾಮ್' ಸಮಾವೇಶಕ್ಕೂ ಮುನ್ನ ಮನ್ ಮೋಹನ್ ಸಿಂಗ್ ಕ್ಯಾಸ್ಟ್ರೊ ಮುಖಾಮುಖಿ

    ಅನಾರೋಗ್ಯ ಕಡೆಗಣಿಸಿ ಅಕ್ಟೋಬರ್ 2013ರಲ್ಲಿ ಅನ್ಸಾರಿಯನ್ನು ಹವಾನದಲ್ಲಿ ಭೇಟಿಯಾದ ಕ್ಯಾಸ್ಟ್ರೊ
ಅನಾರೋಗ್ಯ ಕಡೆಗಣಿಸಿ ಅಕ್ಟೋಬರ್ 2013ರಲ್ಲಿ ಅನ್ಸಾರಿಯನ್ನು ಹವಾನದಲ್ಲಿ ಭೇಟಿಯಾದ ಕ್ಯಾಸ್ಟ್ರೊ

ಚಿತ್ರ ಕೃಪೆ:

ದಿ ಹಿಂದೂ, ಹಿಂದೂಸ್ಥಾನ್ ಟೈಮ್ಸ್, ಎಪಿ, ಪಿಐಬಿ, ಫೋಟೋ ಡಿವಿಜನ್, ಇಂಡಿಯನ್ ಎಕ್ಸ್ ಪ್ರೆಸ್