samachara
www.samachara.com
ಸುದ್ದಿ ಸಾಗರ

ಕ್ಯೂಬಾ ಕ್ರಾಂತಿಯ ದೃವತಾರೆ- ಫಿಡಲ್ ಕ್ಯಾಸ್ಟ್ರೋ ಇನ್ನಿಲ್ಲ...

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕ್ಯೂಬಾ ಗಡಿಯಾರದ ಮುಳ್ಳು ಸ್ಥಬ್ಧವಾಗಿದೆ. ಕಮ್ಯೂನಿಸ್ಟ್ ಚಿಂತನೆಗಳ ತಳಪಾಯದ ಮೇಲೆ ಸ್ವಾಭಿಮಾನದ ಕ್ಯೂಬಾವನ್ನು ಕಟ್ಟಿ ನಿಲ್ಲಿಸಿದ್ದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೋ ಅಸ್ತಂಗತರಾಗಿದ್ದಾರೆ.

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಭಾರತೀಯ ಕಾಲಮಾನ ಶನಿವಾರ ಇಹಲೋಕ ತ್ಯಜಿಸಿದ್ದು, ಜಗತ್ತಿನಾದ್ಯಂತ ಹರಡಿಕೊಂಡಿರುವ ಅಪಾರ ಅಭಿಮಾನಿಗಳನ್ನು ಅವರು ಅಗಲಿದ್ದಾರೆ. ಇದೇ ವರ್ಷದ ಏಪ್ರಿಲ್ 20 ರಂದು ತಮ್ಮ ಕೊನೆಯ ವಿದಾಯ ಭಾಷಣ ಮಾಡಿದ್ದ ಫಿಡೆಲ್ ಕ್ಯಾಸ್ಟ್ರೋ, 'ಕೊನೆಗಾಲ ಸಮೀಪಿಸುತ್ತಿದೆ' ಎಂದಿದ್ದರು. ಅದು ಶನಿವಾರ ನಿಜವಾಗಿದೆ.

ಅವರು ಸ್ಥಳೀಯ ಶುಕ್ರವಾರ ಸಂಜೆ 6. 49ಕ್ಕೆ ಗಂಟೆಗೆ ಸಾವನ್ನಪ್ಪಿದ್ದಾರೆ ಎಂದು ಕ್ಯೂಬಾದ ಸರಕಾರಿ ಚಾನಲ್ ವರದಿ ಮಾಡಿದೆ. ಫಿಡೆಲ್ ಕ್ಯಾಸ್ಟ್ರೋ ಸಹೋದರ ಮತ್ತು ಹಾಲಿ ಅಧ್ಯಕ್ಷ ರೌಲ್ ಕ್ಯಾಸ್ಟ್ರೋ ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ.

ಅಮೆರಿಕಾ ಸರಕಾರ ಫಿಡೆಲ್ ಕ್ಯಾಸ್ಟ್ರೋರನ್ನು ಕೊಲ್ಲಬೇಕು, ಹತ್ತಿಕ್ಕಬೇಕು, ಅಧಿಕಾರದಿಂದ ಕಿತ್ತೊಯಬೇಕು ಎಂದು ಸುಮಾರು 68 ಸಾವಿರ ಕೋಟಿ ಸುರಿದಿತ್ತು. ಆದರೆ ಮುಪ್ಪು ಮತ್ತು ರೋಗಗಳಿಗೆ ಮಾತ್ರ ಅವರನ್ನು ಬಲಿ ಪಡೆಯಲು ಸಾಧ್ಯವಾಗಿದೆ.

ಹವಾನದಲ್ಲಿರುವ ಬೆಂಬಲಿಗರು ಅವರನ್ನು ‘ದಣಿವರಿಯದ ಬಡವರ ಬಂಧು’ ಎಂದೇ ಇಂದಿಗೂ ವ್ಯಾಖ್ಯಾನಿಸುತ್ತಾರೆ. ಕ್ಯಾಸ್ಟ್ರೋ ‘ತೃತೀಯ ಜಗತ್ತಿನ ದೈತ್ಯ’ ಎಂದು ನೆನಪಿಸಿಕೊಳ್ಳುತ್ತಾರೆ. ಹಾಗಂತ ಕ್ಯಾಸ್ಟ್ರೋ ಜತೆ 1953ರ ಕ್ರಾಂತಿಯಲ್ಲಿ ಭಾಗವಹಿಸಿದ್ದ 85 ವರ್ಷದ ಅಗಸ್ಟಿನ್ ಡಯಾಜ್ ಕಾರ್ಟಯಾ ಮೆಲುಕು ಹಾಕುತ್ತಾರೆ. “ತೃತೀಯ ಜಗತ್ತಿಗೆ ಕ್ಯಾಸ್ಟ್ರೋರಷ್ಟು ಕೊಡುಗೆ ನೀಡಿದ ಇನ್ನೊಬ್ಬರಿಲ್ಲ,” ಎನ್ನುತ್ತಾರೆ ಅವರು.

ಆದರೆ, ಕ್ಯಾಸ್ಟ್ರೋ ವಿರೋಧಿಗಳು, ದೇಶವನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿದರು, 1.1 ಕೋಟಿ ಜನರ ಮೂಲಭೂತ ಸ್ವಾತಂತ್ರ್ಯವನ್ನು ಕಸಿದುಕೊಂಡರು. ಮಾತ್ರವಲ್ಲ, ಸುಮಾರು 50 ಲಕ್ಷ ಜನರ ಗಡಿಪಾರು ಮಾಡಿದರು ಎಂದು ಆರೋಪಿಸುತ್ತಾರೆ.

“ಕಳೆದ 55 ವರ್ಷಗಳಲ್ಲಿ ಕ್ಯೂಬಾ ಜನರಿಗೆ ಮಾನವ ಹಕ್ಕುಗಳ ವಿಚಾರದಲ್ಲಿ ಕ್ಯೂಬಾ ಸರಕಾರ ಏನೂ ಮಾಡಲೇ ಇಲ್ಲ,” ಎನ್ನುತ್ತಾರೆ 72 ವರ್ಷದ ಹೆಕ್ಟರ್ ಮಸದಾ. ರಾಜಕೀಯ ಬಂಧಿಯಾಗಿ ಹಿಂದೊಮ್ಮೆ ಇವರು ಹವಾನದ ಜೈಲುಗಳಲ್ಲಿ ಕಳೆದವರು. “ನನಗೆ ಈ ರೀತಿಯ ಆಡಳಿತದಲ್ಲಿ ಭರವಸೆಯಿಲ್ಲ. ನಾನು ನಂಬುವುದಿಲ್ಲ,” ಎಂಬುದು ಅವರ ಖಚಿತ ಮಾತುಗಳು.

ಇಂತಹ ಪರ- ವಿರೋಧದ ಅಭಿಪ್ರಾಯಗಳ ಆಚೆಗೆ, ಕ್ಯಾಸ್ಟ್ರೋ ಕ್ರಾಂತಿಕಾರಿ ಹೋರಾಟದ ದೊಡ್ಡ ಪರಂಪರೆಯನ್ನೇ ಬಿಟ್ಟು ಹೋಗಿದ್ದಾರೆ. ನಿಸ್ಸಂಶಯವಾಗಿ ಇದು ವರ್ಷಗಟ್ಟಲೆ ಚರ್ಚೆಯ ವಸ್ತುವಾಗಲಿದೆ.

ಸುಮಾರು ಐದು ದಶಕಗಳ ಕಾಲ ಒಂದು ದ್ವೀಪ ರಾಷ್ಟ್ರವನ್ನು ಸಮಾನತೆ, ಸಾಮಾಜಿಕ ನ್ಯಾಯದ ತೋಟವಾಗಿಸಲು ಫಿಡಲ್ ಕಾಸ್ಟ್ರೋ ಶ್ರಮಿಸಿದ್ದಾರೆ. ಅವರ ಸರಕಾರ ಸಾವಿರಾರು ಡಾಕ್ಟರುಗಳನ್ನು, ಪ್ರಾಧ್ಯಾಪಕರನ್ನು ಸೃಷ್ಟಿಸಿದೆ. ಇಡೀ ಪಾಶ್ಚಿಮಾತ್ಯ ದೇಶಗಳಲ್ಲೇ ಅತೀ ಕಡಿಮೆ ಅನಕ್ಷರತೆ, ಶಿಶು ಮರಣ ಪ್ರಮಾಣ ಕ್ಯೂಬಾದಲ್ಲಿರುವುದು ಆ ದೇಶದ ಹೆಗ್ಗಳಿಕೆ.

ಆದರೆ ಕ್ಯೂಬಾ ವಿದೇಶಿ ಡಾಲರುಗಳ ಅವಲಂಬನೆಯಿಂದ ಮಾತ್ರ ಹೊರಗೆ ಬರಲೇ ಇಲ್ಲ. ಸರಕಾರಿ ಸ್ವಾಮ್ಯದ ಆರ್ಥಿಕತೆ ಕ್ಯೂಬಾದ ಹೆಚ್ಚಿನ ಜನರಿಗೆ ಸಮೃದ್ಧಿಯನ್ನು ತರಲೇ ಇಲ್ಲ. 2010ರಲ್ಲಿ ಅಮೆರಿಕಾದಿಂದ ಬಂದ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಕ್ಯಾಸ್ಟ್ರೋ, “ಕ್ಯೂಬಾದ ಮಾದರಿ ನಮಗೆ ಇನ್ನು ಮುಂದೆ ಉಪಯೋಗಕ್ಕೆ ಬರಲಾರದು,” ಎಂದು ಹೇಳಿದ್ದರು.

ಸೋವಿಯತ್ ಯೂನಿಯನ್ ಪತನವಾಗುತ್ತಿದ್ದಂತೆ ಕ್ಯೂಬಾ ಕುಸಿದು ಹೋಗಿತ್ತು. ಕ್ಯೂಬಾ ಸರಕಾರವನ್ನು ಹೊಡೆದುರುಳಿಸಲು ಅಮೆರಿಕಾ ಸರಕಾರ ವರ್ಷಗಟ್ಟಲೆ ಪ್ರಯತ್ನಪಟ್ಟಿತ್ತು. ಅಮೆರಿಕಾದ ಸಿಐಎ, ಕ್ಯೂಸ್ಟ್ರೋ ಕೊಲ್ಲಲು ಶೆಲ್ ಸ್ಪೋಟದಿಂದ ಹಿಡಿದು ಫಂಗಸ್ ಬಳಕೆಯನ್ನೂ ಮಾಡಿತ್ತು. ಅಮೆರಿಕಾದ ಗುಪ್ತಚರ ಇಲಾಖೆ ಅಧಿಕಾರಿಗಳು ಕ್ಯೂಬಾದೊಂದಿಗಿನ ಹೆಚ್ಚು ಕಡಿಮೆ ಎಲ್ಲಾ ವ್ಯಾಪಾರ ವ್ಯವಹಾರಗಳನ್ನೂ ಬಂದ್ ಮಾಡಿದ್ದರು. ಬಂಡಾಯ ಏಳುವ, ಸರಕಾರ ವಿರೋಧಿ ಹೋರಾಟಗಳನ್ನು ಪ್ರಾಯೋಜಿಸಿದರು. ಆದರೆ ಅಮೆರಿಕಾದಲ್ಲಿ ಡ್ವೈಸ್ ಐಸೆನ್ ಹೋವರ್ ನಿಂದ ಬರಾಕ್ ಒಬಾಮವರೆಗೆ 11 ಅಧ್ಯಕ್ಷರು ಬದಲಾದರೂ ಕ್ಯೂಬಾವನ್ನು, ಫಿಡೆಲ್ ಕ್ಯಾಸ್ರೋರನ್ನು ಅಲ್ಲಾಡಿಸಲು ಸಾಧ್ಯವಾಗಿರಲಿಲ್ಲ. ಬದಲಿಗೆ ಬಹಿರಂಗ ವಿರೋಧವನ್ನು ಅವರೆಲ್ಲರೂ ಎದುರಿಸಿದ್ದರು.

ಡಿಸೆಂಬರ್ 17, 2014ರಲ್ಲಿ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ, 'ಕ್ಯೂಬಾ ಜತೆಗೆ ಅಮೆರಿಕಾ ರಾಜತಾಂತ್ರಿಕ ಸಂಬಂಧವನ್ನು ಪುನರ್ ಆರಂಭಿಸಲಿದೆ ಮತ್ತು ವ್ಯಾಪಾರ ಮತ್ತು ಸಾರಿಗೆಗೆ ಇದ್ದ ಕಲವು ನಿಬಂಧನೆಗಳನ್ನು ತೆಗೆದುಹಾಕಲಾಗುವುದು' ಎಂದು ಘೋಷಿಸಿದ್ದರು. ಆಗ ಒಬಾಮಾ ವಿರೋಧಿಗಳು ಎಚ್ಚೆತ್ತುಕೊಂಡು, 'ಒಬಾಮ ನಡೆ ಸಮಾಜವಾದಿ ಆಡಳಿತವೊಂದಕ್ಕೆ ಜೀವಜಲ ನೀಡುವಂತದ್ದು' ಎಂದು ದೂರಿದ್ದರು.

ಆದರೆ ಪ್ರಜಾಪ್ರಭುತ್ವಪರ ಹೋರಾಟಗಾರರಿಗೆ ತಮ್ಮ ಬೆಂಬಲ ಮುಂದುವರಿಸಿದ ಒಬಾಮ, ಕೊನೆಗೆ ಕಾನೂನು ರಚಿಸುವವರೇ ಕ್ಯೂಬಾ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು ಎಂದು ಕೈ ಚೆಲ್ಲಿದರು. ಒಪ್ಪಂದದ ಪ್ರಕಾರ ಬಂಧನದಲ್ಲಿದ್ದ ಮೂರು ಕ್ಯೂಬಾ ಗುಪ್ತಚರರನ್ನು ವಾಪಸ್ಸು ಕಳುಹಿಸಲು ಅಮೆರಿಕಾ ಒಪ್ಪಿಕೊಂಡಿತ್ತು. ಪ್ರತಿಯಾಗಿ ಕ್ಯೂಬಾ ಕೂಡ ಅಮೆರಿಕಾದ ಅಭಿವೃದ್ಧಿ ಅಧಿಕಾರಿಗಳಾದ ಅಲನ್ ಗರಾಸ್ ಮತ್ತು ಅಮೆರಿಕಾದ ಸಿಐಎಗಾಗಿ ಗೂಢಚರ್ಯೆ ನಡೆಸಿದ ಕ್ಯೂಬಾದ ರೊಲ್ಯಾಂಡೋ ಸರಾಫ್ ಟ್ರುಜಿಲ್ಲೊರನ್ನು ಬಿಡಿಗಡೆ ಮಾಡಿತ್ತು.

ದಶಕಗಳ ಆಡಳಿತದಲ್ಲಿ ಇದು ಕ್ಯೂಬಾ ಸರಕಾರ ಪಡೆದ ದೊಡ್ಡ ಗೆಲುವಾಗಿತ್ತು. ಆದರೆ ಆಗಲೂ ಫಿಡೆಲ್ ಕ್ಯಾಸ್ಟ್ರೋ ಮೌನವಾಗಿದ್ದರು. ಕ್ಯೂಬಾದ ಗೂಢಚರ್ಯರನ್ನು ಹಿಂದಕ್ಕೆ ಕಳಿಸುತ್ತಿರುವುದು ‘ಅಂತರಾಷ್ಟ್ರೀಯ ದಾಳಿ’ ಎಂದು ಕರೆದಿದ್ದರು ಕ್ಯಾಸ್ಟ್ರೋ. ಆದರೆ ಫಿಡೆಲ್ ಜೀವನದುದ್ದಕ್ಕೂ ನೆರಳಿನಂತೆ ಹಿಂಬಾಲಿಸಿದ ಅವರ ತಮ್ಮ ರೌಲ್, ಈ ಸುದ್ದಿಯನ್ನು ಕ್ಯೂಬಾದ ಜನತೆಯ ಮುಂದೆ ಆಗಲೇ ಘೋಷಿಸಿಯಾಗಿತ್ತು.

ಡಿಸೆಂಬರ್ 20, 2014ರಲ್ಲಿ ಮಾತನಾಡಿದ್ದ 83 ವಯಸ್ಸಿ ರೌಲ್ ಕ್ಯಾಸ್ಟ್ರೋ “ನಾವು ಈಗ ಯುದ್ಧ ಗೆದ್ದಿದ್ದೇವೆ ಎಂದು ಘೋಷಿಸಿದರು. ಕ್ಯೂಬಾದ ಸೇನೆಯ ಮುಖ್ಯಸ್ಥರಾಗಿದ್ದ ಕ್ಯಾಸ್ಟ್ರೋ, 2006ರಲ್ಲಿ ಅನಾರೋಗ್ಯಕ್ಕೆ ಒಳಗಾದ ನಂತರ ಅವರ ತಮ್ಮ ರೌಲ್ ಕ್ಯಾಸ್ಟ್ರೋ ಅಧಿಕಾರ ವಹಿಸಿಕೊಂಡಿದ್ದರು. ರೌಲ್ ಅಧಿಕಾರಕ್ಕೇರುತ್ತಿದ್ದಂತೆ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿದ್ದರು. ಖಾಸಗಿ ವಲಯವನ್ನು ವಿಸ್ತರಿಸಿದ್ದರು. ಕ್ಯೂಬಾದ ಜನರಿಗೆ ಮನೆ, ಕಾರುಗಳ ಮಾರಾಟ ಮತ್ತು ಖರೀದಿಗೆ ಅನುವು ಮಾಡಿಕೊಟ್ಟಿದ್ದರು. ಆದರೆ ಅಣ್ಣ ಫಿಡೆಲ್ ಗೆ ಇದ್ದ ಜನಪ್ರಿಯತೆ, ಅಭಿಮಾನಿಗಳು ರೌಲ್ ಗೆ ದಕ್ಕಲಿಲ್ಲ. ಫಿಡೆಲ್ ಹಲವು ಕ್ಯೂಬನ್ನರ ಕಣ್ಣಲ್ಲಿ ಇವತ್ತಿಗೂ ಕ್ರಾಂತಿಯ ನಕ್ಷತ್ರವೇ.

ಫಿಡೆಲ್ ಅಲೆಜಾಂಡ್ರೋ ಕ್ಯಾಸ್ಟ್ರೋ ರುಜ್ ಹುಟ್ಟಿದ್ದು ಆಗಸ್ಟ್ 13, 1926ರಲ್ಲಿ. ಪೂರ್ವ ಕ್ಯೂಬಾದ ನಗರ ಬಿರಾನ್ ನಲ್ಲಿದ್ದ ಸಕ್ಕರೆ ಪ್ಲಾಂಟೇಷನ್ನಿನಲ್ಲಿ ಕೆಲಸ ಮಾಡುತ್ತಾ ಫಿಡೆಲ್ ಬೆಳೆದವರು. ಅವರ ತಂದೆ ಆಂಜೆಲ್ ಕ್ಯಾಸ್ಟ್ರೋ ಸ್ಪೇನ್ ಆಕ್ರಮಿಸಿಕೊಂಡಿದ್ದ ಗಾಲಿಸಿಕಾ ಪ್ರಾಂಥ್ಯದವರು. ನಂತರ ಕ್ಯೂಬಾಗೆ ವಲಸೆ ಬಂದವರು, ಅಲ್ಲೇ ನೆಲೆ ನಿಂತು ಲಿನಾ ರುಜ್ ಗೊನ್ಜಾಲೆಜ್ ಎಂಬಾಕೆಯನ್ನು ಮದುವೆಯಾದರು.

ಕ್ಯಾಸ್ರೋ ಜೆಸೂಟ್ ಶಾಲೆಗೆ ಸೇರಿಕೊಂಡರು. ನಂತರ ಹವಾನಾ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಾಂಗ ಮಾಡಿ ವಕೀಲರಾದರು. ಕ್ಯಾಸ್ಟ್ರೋ ಕಾಲೇಜು ದಿನಗಳಲ್ಲೇ ವಿದ್ಯಾರ್ಥಿ ನಾಯಕ. ವಕೀಲರಾದ ಕಾಸ್ಟ್ರೋ ರಾಜಕೀಯ ಕಾರಣವೊಂದಕ್ಕೆ ಬಂಧನಕ್ಕೆ ಗುರಿಯಾದರು. ಸರ್ವಾಧಿಕಾರಿ ಫುಲ್ಗೆನ್ಕಿಕೋ ಬಟಿಸ್ಟಾ ವಿರುದ್ಧ ದಂಗೆ ಎಬ್ಬಿಸಿದ ಆರೋಪ ಅವರ ಮೇಲೆ ಹೊರಿಸಲಾಗಿತ್ತು.

ಜುಲೈ 26, 1953ರಲ್ಲಿ ಕ್ಯೂಬಾದಲ್ಲಿದ್ದ ಮೊಂಕಾಡಾ ಬ್ಯಾರಕ್ ಮೇಲೆ ಕ್ಯಾಸ್ಟ್ರೋ ನೇತೃತ್ವದಲ್ಲಿ ದೊಡ್ಡ ದಾಳಿ ನಡೆಸಲಾಗಿತ್ತು. ಇದರಲ್ಲಿ ಕ್ಯಾಸ್ಟ್ರೋ ಪಡೆಯ ಅರ್ಧಕರ್ಧ ಜನರು ಹತ್ಯೆಯಾಗಿದ್ದರು. ಕ್ಯಾಸ್ಟ್ರೋರನ್ನು ನೇರವಾಗಿ ಜೈಲಿಗಟ್ಟಲಾಗಿತ್ತು. ವಿಚಾರಣೆಯ ವೇಳೆ ಕ್ಯಾಸ್ಟ್ರೋ, ಬಟಿಸ್ಟಾನ ಆಡಳಿತವನ್ನು ಟೀಕಿಸಿದ್ದರು; ಹೀಗಳೆದಿದ್ದರು. ಅವರ ಮಾತಿನಲ್ಲಿ ಅನುರಣಿಸಿದ “ಇತಿಹಾಸ ನನ್ನನ್ನು ಕಬ್ಜ ಮಾಡುತ್ತದೆ,” ಎಂಬುದು ಕ್ರಾಂತಿಕಾರಿಗಳ ಪ್ರಣಾಳಿಕೆಯಾಗಿತ್ತು. ಇದು ಭ್ರಷ್ಟ, ಬಟಿಸ್ಟಾನ ದುರಾಡಳಿತದ ವಿರುದ್ಧ ಸಾಮಾನ್ಯ ಕ್ಯೂಬಾ ಜನರನ್ನು ಬಡಿದೆಬ್ಬಿಸಿತ್ತು.

ಅವತ್ತು ಈ ಕ್ರಾಂತಿಯ ಆರಂಭಿಕ ದಿನಗಳನ್ನು ವರದಿ ಮಾಡಿದ್ದ ಪತ್ರಕರ್ತೆ ಮಾರ್ಟಾ ರೋಜಸ್ "ಕ್ಯಾಸ್ಟ್ರೋ ಒಬ್ಬ ಕಲಾತ್ಮಕ ವಾಗ್ಮಿ ಮತ್ತು ರಣತಂತ್ರ ಹೆಣೆಯುವ ಚಾಣಾಕ್ಯ," ಎಂದು ಬಣ್ಣಿಸುತ್ತಾರೆ. ಅವತ್ತು ಕ್ಯಾಸ್ಟ್ರೋ ಮತ್ಯು ರೌಲ್ರನ್ನು 13 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು.

ಮುಂದೆ ಕ್ಯಾಸ್ಟ್ರೋ ಸಹೋದರರನ್ನು ಮೇ 16, 1955ರಲ್ಲಿ ಬಿಡುಗಡೆ ಮಾಡಲಾಯಿತು. ಮಂಕಾಡಾ ದಾಳಿಯ ಎರಡು ವರ್ಷಗಳ ನಂತರ ಬಿಡುಗಡೆಯಾದ ಇಬ್ಬರೂ ತಲೆಮರೆಸಿಕೊಳ್ಳಲು ಮೆಕ್ಸಿಕೋಗೆ ಪ್ರಯಾಣ ಬೆಳೆಸಿದರು. ಅವತ್ತು ಫಿಡೆಲ್ ಬಳಿಯಲ್ಲಿ ಹಣವಿರಲಿಲ್ಲ. ಫಿಗುಯೆರಾ ಎಂಬ ಮಹಿಳಾ ಪತ್ರಕರ್ತೆಯ ಬಳಿಯಲ್ಲಿ ದುಡ್ಡು ಸಂಗ್ರಹಿಸಿಕೊಡುವಂತೆ ಕೇಳಿಕೊಂಡಿದ್ದರು. ಅವತ್ತು ಕ್ಯಾಸ್ಟ್ರೋ ಮಾತುಗಳನ್ನು ನೆನಪಿಸಿಕೊಳ್ಳುವ 96 ವರ್ಷದ ಫಿಗುಯೆರಾ, “ನೋಡು, ನನಗೆ ರಾಜಕಾರಣಿಗಳಿಂದ ಮಿಲಯಾಂತರ ಹಣ ಬೇಡ. ಶ್ರೀಮಂತರು ಹಾಗೂ ಲಕ್ಷಾಧಿಪತಿಗಳ ಹಣ ದೋಷಪೂರಿತವಾದುದು. ನಾನು ಕಡುಬಡವರಿಂದ, ಪೇಪರ್ ಹಾಕುವವರಿಂದ, ಸ್ಯಾಂಟಿಯಾಗೋದಲ್ಲಿ ತರಕಾರಿ, ಹಣ್ಣು ಮಾರುವವರಿಂದ ಪೈಸೆ ಪೈಸೆ ಹಣ ನಿರೀಕ್ಷಿಸುತ್ತೇನೆ. ಅದು ಅವರನ್ನು ಒಗ್ಗಟ್ಟಾಗಿಸುತ್ತದೆ. ಅವರು ನಾನೂ ಕ್ರಾಂತಿ ಮಾಡುತ್ತೇನೆ ಎಂದು 10 ಪೈಸೆ ನೀಡಿದರೂ ಸಾಕು. ಅವರ ಆಹಾರ ಅವರ ಮಕ್ಕಳ ಆಹಾರ ಹೊಂದಿಸಿಕೊಂಡು ಕ್ರಾಂತಿಯಲ್ಲಿ ಭಾಗವಹಿಸಿದರೆ ಅದೇ ಖುಷಿ,” ಎಂದಿದ್ದರು ಎನ್ನುತ್ತಾರೆ ಪತ್ರಕರ್ತೆ.

ಇದೇ ಹೋರಾಟಕ್ಕೆ ಮುಂದೆ ಚೆಗುವೆರಾ ಕೂಡಾ ಸೇರಿಕೊಂಡರು. 1955ರ ನವೆಂಬರ್ 25 ರಂದು  ಗ್ರಾನ್ಮಾ ಎಂಬ ಯಾಚ್ (ಹಾಯಿದೋಣಿ) ಏರಿ ಫಿಡೆಲ್ ಕ್ಯಾಸ್ಟ್ರೋ ಮತ್ತು ತಂಡ ಕ್ಯೂಬಾಗೆ ಪ್ರಯಾಣ ಹೊರಟಿತ್ತು. ಅವರ ಜತೆಗಿದ್ದ 82 ಜನರಲ್ಲಿ ಒಬ್ಬರಾದ ಆರ್ಸೆನಿಯೋ ಗಾರ್ಸಿಯಾ ಆ ನೆನಪುಗಳನ್ನು ಹಂಚಿಕೊಳ್ಳುತ್ತಾರೆ. ಅವತ್ತು ಅವರ ಬಳಿ 3,000 ಕಿತ್ತಳೆಗಳು ಜತೆಗೆ ಸ್ವಲ್ಪ ಆಹಾರ ಇತ್ತು ಅಷ್ಟೆ. ಆದರೆ ಅದರಲ್ಲಿದ್ದ ಹೆಚ್ಚಿನವರಿಗೆ ಸಮುದ್ರ ಪ್ರಯಾಣ ಹೊಸದು. ಇದರಿಂದ ಹೊಟ್ಟೆ ತೊಳೆಸಿ ವಾಂತಿಯಾಗಿ, ಕೆಲವು ದಿನಗಳ ಮಟ್ಟಿಗೆ ಆಹಾರ ಸೇವಿಸಲು ಸಾಧ್ಯವೇ ಆಗಿರಲಿಲ್ಲ. ಕ್ಯೂಬಾ ತೀರಾಕ್ಕೆ ಹತ್ತಿರ ಬರುತ್ತಿದ್ದಂತೆ ರೋಬೆರ್ಟೋ ರೊಕ್ಯೂ ನ್ಯೂನೆಜ್ ಎಂಬಾಂತ ಆಂಟೆನಾ ತೆಗೆದುಕೊಡು ನೆಡಲು ಪ್ರಯತ್ನಪಡುತ್ತಿದ್ದ. ಆದರೆ ನೀರಿಗೆ ಬಿದ್ದು ಬಿಟ್ಟ. ಅಲ್ಲಿ ತುಂಬಾ ಅಲ್ಪ ಸಮಯ ಇತ್ತು. ಮತ್ತು ಅದು ತೀರಾ ಎಚ್ಚರಿಕೆಯಿಂದಿರಬೇಕಾದ ಕಾಲವಾಗಿತ್ತು.

ಆದರೆ ಫಿಡೆಲ್ ಆ ಸಮಯದಲ್ಲಿಯೂ ಬೋಟ್ ಹಿಂತಿರುಗಿಸಿ ಆತನನ್ನು ಒಟ್ಟಿಗೆ ಕರೆದೊಯ್ಯುವಂತೆ ಆದೇಶ ನೀಡಿದ್ದರು. ಫಿಡೆಲ್ ಕ್ಯಾಸ್ಟ್ರೋ ತಮ್ಮ ಅನುಯಾಯಿಗಳ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ತೆಗೆದುಕೊಳ್ಳುತ್ತಿದ್ದರು ಎಂಬುದಕ್ಕೆ ಇದು ಉದಾಹರಣೆ ಎನ್ನುತ್ತಾರೆ ಗಾರ್ಸಿಯಾ. ಡಿಸೆಂಬರ್ 2ರಂದು ಕಾಸ್ಟ್ರೋ ಮತ್ತು 81 ಕ್ರಾಂತಿಕಾರಿಗಳು ಕ್ಯೂಬಾ ತಲುಪಿದ್ದರು. ಅವರಲ್ಲಿ 61 ಜನರನ್ನು ಬಟಿಸ್ಟಾನ ಸೈನಿಕರು ಕೊಂದು ಹಾಕಿದರು. ಕ್ಯಾಸ್ಟ್ರೋ ಮತ್ತು ಇಬ್ಬರು ಹೋರಾಟಗಾರರು ಜೀವ ಉಳಿಸಿಕೊಳ್ಳಲು ಕಬ್ಬಿನ ಗದ್ದೆಗೆ ನುಗ್ಗಿದ್ದರು. ಅವರ ಬಳಿ ಎರಡು ಬಂದೂಕಿತ್ತು ಅಷ್ಟೆ. ಉಳಿದವರು ಏನಾದರು ಎಂಬ ಮಾಹಿತಿಯೂ ಇರಲಿಲ್ಲ. ಹೀಗಿದ್ದೂ ಅವತ್ತು ಕ್ಯಾಸ್ಟ್ರೋ ಹೇಳಿದ್ದು ಒಂದೇ ಮಾತು. “ನಾವು ಜಯಶಾಲಿಯಾಗುತ್ತೇವೆ. ಗೆಲುವು ಏನಿದ್ದರೂ ನಮ್ಮದೇ" ಎಂದು. ಅವತ್ತು ಬಟಿಸ್ಟಾನ ಕೈಯಿಂದ ಬದುಕುಳಿದವರೆಲ್ಲಾ ಅಮೆರಿಕಾ ಪ್ರಾಯೋಜಿತ ಬಟಿಸ್ಟಾನ 10,000 ಸೈನಿಕರ ವಿರುದ್ಧ ಹೋರಾಡಲು ಕ್ಯೂಬಾಕ್ಕೆ ಪೂರ್ವದಲ್ಲಿದ್ದ ಬೆಟ್ಟಗುಡ್ಡಗಳ ಜನರನ್ನು ಸಂಘಟಿಸತೊಡಗಿದರು.

1958, ಮೇ 20ರಂದು ಕ್ಯೂಬಾವನ್ನು ಆಳುತ್ತಿದ್ದ ಸರ್ವಾಧಿಕಾರಿ ಬಟಿಸ್ಟಾ ‘ಎಂಡ್ ಆಫ್ ಕಾಸ್ಟ್ರೊ’ ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದ್ದ. ಗೆರಿಲ್ಲಾ ಹೋರಾಟದ ನಾಯಕನನ್ನು ಕೊಲ್ಲಲು ಸುಮಾರು 76 ದಿನಗಳ ಕಾಲ ಕಾರ್ಯಾಚರಣೆ ಮುಂದುವರಿದಿತ್ತು. ಈ ಸಮಯದಲ್ಲಿ ಕಾಸ್ಟ್ರೋ ರಹಸ್ಯ ಬೆಟ್ಟದಲ್ಲಿ 'ಲಾ ಪ್ಲಾಟೋ' ಹೆಸರಿನಲ್ಲಿ ಅಡಗುತಾಣವೊಂದನ್ನು ನಿರ್ಮಿಸಿಕೊಂಡರು. ಅಲ್ಲಿಯೇ ಅವರು ಸೇರಿದಂತೆ ಇತರೆ ಗೆರಿಲ್ಲಾ ನಾಯಕರು ತಲೆ ಮರೆಸಿಕೊಂಡಿದ್ದರು. 1958ರ ಜೂನ್ ತಿಂಗಳಿನಲ್ಲಿ, ಕ್ಯೂಬಾದ ಕ್ರಾಂತಿಕಾರಿಗಳ ಮೇಲೆ ಅಮೆರಿಕಾ ಕಳುಹಿಸಿದ್ದ ವಿಮಾನಗಳು ಬಾಂಬಿನ ಮಳೆಯನ್ನು ಸುರಿದಿದ್ದವು. ಈ ಕುರಿತು ತಮ್ಮ ಸ್ನೇಹಿತರೊಬ್ಬರಿಗೆ ಪತ್ರದಲ್ಲಿ ವಿವರಿಸುವ ಕಾಸ್ಟ್ರೋ, “ಅಮೆರಿಕಾದವರು ಇದಕ್ಕೆ ಬೆಲೆ ತೆರಲೇಬೇಕಾಗುತ್ತದೆ. ಒಮ್ಮೆ ಯುದ್ಧ ಮುಗಿದ ನಂತರ ನನ್ನ ಯುದ್ಧ ಅವರ ವಿರುದ್ಧ ಆರಂಭವಾಗುತ್ತದೆ. ಅದೇ ನನ್ನ ನಿಜವಾದ ಬದುಕಿನ ಗುರಿಯಾಗುತ್ತದೆ ಎಂದು ಅನ್ನಿಸುತ್ತದೆ,’’ ಎಂದು ಬರೆದಿದ್ದರು. ಬಟಿಸ್ಟಾ ಸೇನೆ ಕೊನೆಗೂ ಕಾಸ್ಟ್ರೋ ಹುಡುಕಾಟದಲ್ಲಿ ಸೋತು ಹೋಗಿತ್ತು. ಕ್ರಾಂತಿಕಾರಿಗಳ ಯುದ್ಧ ಜಯಗಳಿಸಿತು. ಸರ್ವಾಧಿಕಾರಿ ದೇಶವನ್ನು ಬಿಟ್ಟು ಓಡಿಹೋಗಿದ್ದ. ಕೊನೆಗೆ, 1959ರ ಜನವರಿ 1ರಂದು ಕ್ಯೂಬಾದಲ್ಲಿ ಕಾಸ್ಟ್ರೋ ನೇತೃತ್ವದಲ್ಲಿ ಕಮ್ಯುನಿಸ್ಟ್ ಸರಕಾರ ಅಧಿಕಾರಕ್ಕೆ ಬಂದಿತ್ತು.

ಕಾಸ್ಟ್ರೋ ಜತೆ ಯುದ್ಧದಲ್ಲಿ ಪಾಲ್ಗೊಂಡ ಹಲವರು ಅಧಿಕಾರಕ್ಕೇರಿದ ನಂತರವೂ ತಮ್ಮ ನಿಷ್ಟೆಯನ್ನು ಪಕ್ಷಕ್ಕಾಗಿ ಉಳಿಸಿಕೊಂಡಿದ್ದರು. “ಫಿಡಲ್ ಅವತ್ತು ಊರಿದ ಬೀಜ ಇಂದು ಮರವಾಗಿ ಬೆಳೆದು ಫಲ ನೀಡುತ್ತಿದೆ,’’ ಎನ್ನುತ್ತಾರೆ ಕಾಸ್ಟ್ರೋ ಜತೆ ಗೆರಿಲ್ಲಾ ಯುದ್ಧದಲ್ಲಿ ಪಾಲ್ಗೊಂಡಿದ್ದ ಒಸ್ಮಾನಿ ಡಿಯಾಸ್. ಅವರು ಮತ್ತು ಕಾಸ್ಟ್ರೋ ಗೆರಿಲ್ಲಾ ಯುದ್ಧದ ಸಮಯದಲ್ಲಿ ಅಡಗಿಕೊಂಡಿದ್ದ ರಹಸ್ಯ ಬೆಟ್ಟವೀಗ ಪ್ರವಾಸಿ ತಾಣವಾಗಿ ಬದಲಾಗಿದೆ. “ಫಿಡಲ್ ಲ್ಯಾಟಿನ್ ಅಮೆರಿಕಾ ಮತ್ತು ಬಡವರ ದೃವತಾರೆ. ಭವಿಷ್ಯದ ಆಶಾಕಿರಣ. ನನ್ನ ಹಾಗೆಯೇ ಅನೇಕ ಕ್ಯೂಬನ್ನರು ಈ ಕ್ರಾಂತಿ ಚಿರಾಯುವಾಗಿರಲಿದೆ ಎಂದು ನಂಬಿದ್ದಾರೆ,’’ ಎನ್ನುತ್ತಾರೆ ಅವರು.

“ಇವತ್ತು ಕ್ಯೂಬಾದಲ್ಲಿ ಕಾಣುತ್ತಿರುವ ಇಂಚಿಂಚೂ ಫಿಡಲ್ ಕೆಲಸದ ಪರಿಣಾಮ,’’ ಎನ್ನುತ್ತಾರೆ ಗೆರಿಲ್ಲಾ ಯುದ್ಧದಲ್ಲಿ ಕಾಸ್ಟ್ರೋಗೆ ಖಜಾಂಚಿಯಾಗಿದ್ದ ಫಿಗರಾವೊ. “ದೇಶದಲ್ಲಿ ನಡೆದ ಕೃಷಿ ಕ್ರಾಂತಿ ಮತ್ತು ಶಿಕ್ಷಣ ಸುಧಾರಣೆಗಳು ಆತ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಿವೆ,’’ ಎನ್ನುತ್ತಾರೆ ಅವರು. ಫಿಟಲ್ ಕಾಸ್ಟ್ರೋವನ್ನು ಆರಾಧಿಸುವ ದೊಡ್ಡ ಜನವರ್ಗ ಅಮೆರಿಕಾದಲ್ಲಿಯೂ ಇದೆ. “ಆತ ಬಿಟ್ಟು ಹೋಗಿರುವ ಶಿಕ್ಷಣ ಕ್ಷೇತ್ರದ ಸುಧಾರಣಾ ಅಭಿಯಾನ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ತಂದ ಬದಲಾವಣೆಗಳು ಮುಂದಿನ ಹಲವು ತಲೆಮಾರುಗಳ ಕಾಲ ಉಳಿದುಕೊಳ್ಳುತ್ತದೆ,’’ ಎನ್ನುತ್ತಾರೆ ಅಮೆರಿಕಾ ಮೂಲದ ಹೋರಾಟಗಾರ ಬಾಬ್ ಶ್ವಾರ್ಟ್. ಇವರು ನ್ಯೂಯಾರ್ಕ್ ಮೂಲದ ‘ಡಿಸಾರ್ಮ್ ಎಜುಕೇಶನ್ ಟ್ರಸ್ಟ್'ನ ನಿರ್ದೇಶಕರು. ಇವರ ಸಂಸ್ಥೆ ಕ್ಯೂಬಾಕ್ಕೆ ಸುಮಾರು 12 ಲಕ್ಷ ಡಾಲರ್ ವೈದ್ಯಕೀಯ ಉಪಕರಣಗಳನ್ನು ನೀಡಿದೆ.

ಕ್ಯೂಬಾದಿಂದ ವಲಸೆ ಬಂದು ಅಮೆರಿಕಾದಲ್ಲಿ ನೆಲೆಸಿರುವ ಅನೇಕರು ಕಾಸ್ಟ್ರೋ ರೂಪಿಸಿದ ಹಲವು ಯೋಜನೆಗಳನ್ನು ವಿರೋಧಿಸುತ್ತಾರೆ. “ಆತ ಒಬ್ಬ ಮಹಾನ್ ಸುಳ್ಳುಗಾರ. ಅಹಂಕಾರಿ ಮತ್ತು ಕ್ಯೂಬಾ ರಾಜಕಾರಣಿಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಅಕೌಂಟ್ ಹೊಂದಿರುವಾತ,’’ ಎನ್ನುತ್ತಾರೆ ಹಮ್ಬೆರ್ಟೋ ಕಾಪ್ರಿಯೋ.

ಹವಾನ ಮೂಲದ ಸಿನೆಮಾ ತಯಾರಕ ರೆಬೆಕೋ ಚಾವೇಸ್ ಮಾತ್ರ ಕಾಸ್ಟ್ರೋ ನಡೆಗಳನ್ನು ಸಮರ್ಥಿಸಿಕೊಳ್ಳುತ್ತಾರೆ. “ಫಿಡಲ್ ಬಗ್ಗೆ ನಿಮಗೆ ಏನು ಬೇಕೊ ಅದನ್ನು ಕೇಳಿಸಿಕೊಂಡು ನಂಬಬಹುದು ಅಥವಾ ಆಲೋಚನೆ ಮಾಡಬಹುದು. ಆದರೆ, 20ನೇ ಶತಮಾನದ ಕ್ಯೂಬಾ ಇತಿಹಾಸ ಕಾಸ್ಟ್ರೋವನ್ನು ಮರೆಯಲು ಸಾಧ್ಯವಿಲ್ಲ. ಆತ ಲ್ಯಾಟಿನ್ ಅಮೆರಿಕಾದ ಪ್ರಮುಖ ದ್ರುವತಾರೆ ಎಂಬುದನ್ನು ಅಲ್ಲಗೆಳೆಯಲು ಆಗಲ್ಲ,’’ ಎನ್ನುತ್ತಾರೆ ಅವರು.

ಸೋವಿಯತ್ ಯೂನಿಯನ್ ಪತನ ನಂತರವೂ ಕ್ಯೂಬಾವನ್ನು ಮುನ್ನಡೆಸಿದ್ದು ಕಾಸ್ಟ್ರೋ. ಮುಖ್ಯವಾಗಿ ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ಯಾಸ್ಟ್ರೋ ತೆಗೆದುಕೊಂಡ ತೀರ್ಮಾನಗಳು ಅವರನ್ನು ಯಾವತ್ತಿಗೂ ನೆನಪಿನಲ್ಲಿ ಉಳಿಸುತ್ತವೆ ಎನ್ನುತ್ತಾರೆ ರೆಬೆಕೋ.