samachara
www.samachara.com
ನರೇಂದ್ರ ಮೋದಿ ಮೇಲೆ 25 ಕೋಟಿ ಲಂಚ ಸ್ವೀಕಾರ ಆರೋಪ: ಸುಪ್ರಿಂ ಅಂಗಳದಲ್ಲಿ 'ಬಿರ್ಲಾ ಚೆಂಡು'!
ಸುದ್ದಿ ಸಾಗರ

ನರೇಂದ್ರ ಮೋದಿ ಮೇಲೆ 25 ಕೋಟಿ ಲಂಚ ಸ್ವೀಕಾರ ಆರೋಪ: ಸುಪ್ರಿಂ ಅಂಗಳದಲ್ಲಿ 'ಬಿರ್ಲಾ ಚೆಂಡು'!

‘ಸಹರಾ’ ಮತ್ತು ‘ಬಿರ್ಲಾ’

ಕಂಪೆನಿಗಳಿಂದ ವಶಪಡಿಸಿಕೊಂಡ ದಾಖಲೆಗಳಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿ ಹಲವು ಮುಖ್ಯಮಂತ್ರಿಗಳಿಗೆ ಹಣ ಸಂದಾಯವಾಗಿರುವ ಗಂಭೀರ ಆರೋಪಗಳು ಕೇಳಿ ಬಂದಿವೆ. ಇದರ ಜಾಡು ಹಿಡಿದು ತನಿಖೆ ನಡೆಸುವಂತೆ ಸಿಬಿಐ, ಆದಾಯ ತೆರಿಗೆ ಇಲಾಖೆ, ಕೇಂದ್ರ ಜಾಗೃತ ಆಯೋಗಗಳಿಗೆ ದೂರು ಸಲ್ಲಿಸಿದ್ದರೂ ಅವು ತನಿಖೆ ನಡೆಸಲು ನಿರಾಕರಿಸಿವೆ. ಇದೀಗ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸುಪ್ರಿಂ ಕೋರ್ಟ್ ಮೊರೆ ಹೋಗಿದ್ದಾರೆ.

ಸದ್ಯ ಕೇಳಿ ಬಂದಿರುವ ಆರೋಪದ ಪ್ರಕಾರ 2012 ಹಾಗೂ 2013-14ರಲ್ಲಿ ‘ಸಹರಾ ಗ್ರೂಪ್’ ಹಾಗೂ ‘ಆದಿತ್ಯ ಬಿರ್ಲಾ ಗ್ರೂಪ್’ ಬಿಜೆಪಿ ಹಾಗೂ ಕಾಂಗ್ರೆಸ್ಸಿನ ಪ್ರಮುಖ ನಾಯಕರಿಗೆ ದೊಡ್ಡ ಮಟ್ಟದಲ್ಲಿ ಹಣ ಸಂದಾಯ ಮಾಡಿವೆ. ಇದಕ್ಕೆ ಲಭ್ಯವಾಗಿರುವ ಒಂದಷ್ಟು ದಾಖಲೆಗಳನ್ನು ಇಟ್ಟುಕೊಂಡು ‘ಕಾಮನ್ ಕಾಸ್’ ಸಂಸ್ಥೆ ಮಂಗಳವಾರ ಸುಪ್ರಿಂ ಕೋರ್ಟಿಗೆ ರಿಟ್ ಪಿಟಿಷನ್ ಸಲ್ಲಿಸಿದೆ. ಇದನ್ನು ಪ್ರಶಾಂತ್ ಭೂಷಣ್ ಮುನ್ನಡೆಸುತ್ತಿದ್ದಾರೆ.

ರಾಜಕಾರಣಿಗೆಲ್ಲಾ ಹಣದ ಪಾವತಿ?:

ಸಹರಾ ಕಂಪೆನಿ ಹಣ ಪಾವತಿ ಮಾಡಿದೆ ಎಂಬ ಆರೋಪ ಕೇಳಿ ಬಂದಿರುವ ದಾಖಲೆಗಳಲ್ಲಿ ಗುಜರಾತ್, ದೆಹಲಿ, ಛತ್ತೀಸ್ ಘಡ ಮತ್ತು ಮಧ್ಯ ಪ್ರದೇಶ ‘ಸಿಎಂ’ಗಳಿಗೆ ಎಂದು ಬರೆಯಲಾಗಿದೆ. ಇವೆಲ್ಲಾ ನಡೆದಿದ್ದು 2013-14ರಲ್ಲಿ. ಈ ದಾಖಲೆಗಳನ್ನು ಪ್ರಶಾಂತ್ ಭೂಷಣ್ ಸುಪ್ರಿಂ ಕೋರ್ಟಿಗೆ ಸಲ್ಲಿಸಿದ್ದಾರೆ. ಆದರೆ ಈ ದಾಖಲೆಗಳಲ್ಲಿರುವುದನ್ನು ನಾವು ಖಚಿತಪಡಿಸಿಕೊಂಡಿಲ್ಲ ಎಂದು ‘ದಿ ವೈರ್’ ವರದಿ ಮಾಡಿದೆ.

‘ಕಾಮನ್ ಕಾಸ್’ ಕೋರ್ಟಿಗೆ ಸಲ್ಲಿಸಿರುವ ಅರ್ಜಿಯಲ್ಲಿ, ವಶಕ್ಕೆ ಪಡೆದಿರುವ ದಾಖಲೆಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದೆ. 2013ರಲ್ಲಿ ‘ಹಿಂಡಾಲ್ಕೋ ಇಂಡಸ್ಟ್ರೀಸ್’ (ಬಿರ್ಲಾ ಸಹ ಸಂಸ್ಥೆ) ಮತ್ತು 2014ರಲ್ಲಿ ‘ಸಹರಾ ಇಂಡಿಯಾ ಗ್ರೂಪ್’ನ ದೆಹಲಿ ಮತ್ತು ನೋಯ್ಡಾ ಕಚೇರಿಗೆ ಸಿಬಿಐ ಮತ್ತು ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ ವೇಳೆ ಈ ದಾಖಲೆಗಳು ಲಭ್ಯವಾಗಿದ್ದವು.

ಬಿರ್ಲಾ ಪಾವತಿ ಮಾಡಿದ್ದೆಷ್ಟು?:

ಬಿರ್ಲಾದಿಂದ ವಶಕ್ಕೆ ಪಡೆದಿರುವ ದಾಖಲೆಗಳೆಲ್ಲಾ ಎಕ್ಸೆಲ್ ಶೀಟ್ ನಲ್ಲಿದ್ದು ನಂತರ ‘ವರ್ಡ್’ಗೆ ಕಾಪಿ ಮಾಡಿ ‘ಈ-ಮೇಲ್’ ಮಾಡಲಾಗಿದೆ. 2013ರಲ್ಲಿ ಬಿರ್ಲಾದಿಂದ ವಶಕ್ಕೆ ಪಡೆದ ದಾಖಲೆಯಲ್ಲಿ, ‘ಪ್ರಾಜೆಕ್ಟ್ ಜೆ- ಎನ್ವಿರಾನ್ಮೆಂಟ್ & ಫಾರೆಸ್ಟ್’ ತಲೆಬರಹದಲ್ಲಿ 9/01/2012 ಮತ್ತು 02/02/2012ರ ಮಧ್ಯೆ 7.08 ಕೋಟಿ ರೂಪಾಯಿ ಪಾವತಿ ಮಾಡಲಾಗಿದೆ ಎಂಬ ವಿವರಗಳಿವೆ. ಜಯಂತಿ ನಟರಾಜನ್ ಅರಣ್ಯ ಮತ್ತು ಪರಸರ ಸಚಿವೆಯಾಗಿದ್ದಾಗಲೇ 08/11/2011 ಮತ್ತು 17.06.2013ರ ಮಧ್ಯೆ ಬಿರ್ಲಾ ಗ್ರೂಪಿಗೆ ಸೇರಿದ 13 ಫೈಲ್ಗಳನ್ನು ಕ್ಲಿಯರ್ ಮಾಡಲಾಗಿದೆ. ಹೀಗಾಗಿ ಪಾವತಿಗಳ ಬಗ್ಗೆ ಅನುಮಾನಗಳು ಎದ್ದಿವೆ.

ಕಲ್ಲಿದ್ದಲು ಬ್ಲಾಕ್ ಅಲೋಕೇಷನ್ ತನಿಖೆ ವೇಳೆ ಅಕ್ಟೋಬರ್ 15, 2013ರಂದು ನವದೆಹಲಿ, ಮುಂಬೈ, ಸಿಕಂದರಾಬಾದ್ ಮತ್ತು ಭುವನೇಶ್ವರದಲ್ಲಿರುವ ಹಿಂಡಾಲ್ಕೋ ಕಚೇರಿಗಳಲ್ಲಿ ರೈಡ್ ಮಾಡಿದಾಗ ಈ ದಾಖಲೆಗಳನ್ನು ವಶಕ್ಕೆ ಪಡೆದಕೊಳ್ಳಲಾಗಿತ್ತು.

ಆದಿತ್ಯ ಬಿರ್ಲಾ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಶುಭೆಂದು ಅಮಿತಾಬ್ ಲ್ಯಾಪ್ಟಾಪಿನಲ್ಲಿದ್ದ ಮೇಲ್ ನಲ್ಲಿ (16.11.2012) ಗುಜರಾತ್ ಸಿಎಂ-25 ಕೋಟಿ (Gujarat CM- 25 cr (12 Done-rest?)) ಎಂದು ಹೇಳಲಾಗಿದೆ.

ಆದರೆ ಈ ಕುರಿತು ಶುಭೆಂದು ಅಮಿತಾಬ್ರನ್ನು ಐಟಿ ಅಧಿಖಾರಿಗಳು ವಿಚಾರಣೆ ನಡೆಸಿದಾಗ ಅವರು ‘ಗುಜರಾತ್ ಸಿಎಂ’ ಎಂದರೆ ‘ಗುಜರಾತ್ ಆಲ್ಕಲಿ ಕೆಮಿಕಲ್ಸ್’ ಎಂದಿದ್ದಾರೆ. ಹಾಗಾದರೆ ‘ಸಿ’ ಮತ್ತು ‘ಎಂ’ ಎಂದರೆ ಏನು ಎಂದು ಪ್ರಶ್ನಿಸಿದಾಗ, ಅವು ನನ್ನ ವೈಯಕ್ತಿಕ ನೋಟ್ ಗಳು. ನನಗೆ ಅರ್ಥವಾಗುವ ಭಾಷೆಯಲ್ಲಿ ಬರೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಈ ದಾಖಲೆಗಳನ್ನು ನೋಡಿದಾಗ ಕಾರ್ಪೊರೇಟ್ ಕಂಪೆನಿಗಳು ಲಂಚ ನೀಡಿರುವುದು ಕಾಣಿಸುತ್ತದೆ. ಆದರೆ ಸಿಬಿಐ ಮತ್ತು ಐಟಿ ಗಂಭೀರ ದಾಖಲೆಗಳನ್ನೇ ಆಲಕ್ಷಿಸಿವೆ ಎಂದು ಪ್ರಶಾಂತ್ ಭೂಷಣ್ ದೂರಿದ್ದಾರೆ. ಇದೀಗ ಈ ವಿಚಾರದಲ್ಲಿ ಸುಪ್ರಿಂ ಕೋರ್ಟಿನ ಮಧ್ಯ ಪ್ರವೇಶಕ್ಕೆ ಅವರು ಕೋರಿಕೊಂಡಿದ್ದಾರೆ.

ಮಾತ್ರವಲ್ಲ ಸಿವಿಸಿ (ಸೆಂಟ್ರಲ್ ವಿಜಿಲೆನ್ಸ್ ಕಮಿಷನರ್) ಹುದ್ದೆಗೆ ಕೆ.ವಿ ಚೌಧರಿ ನೇಮಕವನ್ನೂ ಪ್ರಶ್ನಿಸಿ ಅವರು ಈ ಹಿಂದೆಯೇ ಒಂದು ಪಿಟಿಷನ್ ಸಲ್ಲಿಸಿದ್ದಾರೆ.

ಸಹರಾ ಪಾವತಿಗಳು:

ನವೆಂಬರ್ 22, 2014ರ ಟ್ಯಾಕ್ಸ್ ರೈಡ್ ವೇಳೆ ಸಹರಾ ಕಂಪೆನಿಯಲ್ಲಿ ಹಲವು ದಾಖಲೆಗಳು ಸಿಕ್ಕಿವೆ. ಮೇ 2013 ರಿಂದ ಮಾರ್ಚ್ 2014ರ ನಡುವಿನ ಹಣ ಪಾವತಿಯ ದಾಖಲೆಗಳು ಇವಾಗಿದ್ದು, ಈ ದಾಖಲೆಗಳನ್ನು ವಶಕ್ಕೆ ಪಡೆಯುವ ವೇಳೆ ಐಟಿ ಅಧಿಕಾರಿ, ಸಹರಾ ಗ್ರೂಪಿನಿಂದ ಒಬ್ಬರು ಹಾಗೂ ಇಬ್ಬರು ಸಾಕ್ಷಿಗಳೂ ಸಹಿ ಹಾಕಿದ್ದಾರೆ. ಇದರಲ್ಲಿ ಕೆಲವು ಖ್ಯಾತನಾಮರಿಗೆ ಹಣ ಪಾವತಿಯಾಗಿರುವ ಮಾಹಿತಿಗಳಿವೆ.


       ಸಹರಾ ಕಂಪೆನಿಯಿಂದ ವಶಪಡಿಸಿಕೊಂಡ ದಾಖಲೆಗಳು
ಸಹರಾ ಕಂಪೆನಿಯಿಂದ ವಶಪಡಿಸಿಕೊಂಡ ದಾಖಲೆಗಳು

ಸೆಪ್ಟೆಂಬರ್ 23, 2013 ರಂದು 1 ಕೋಟಿ ರೂಪಾಯಿ-ದೆಹಲಿ ಸಿಎಂ, ಸೆಪ್ಟೆಂಬರ್ 29, 2013ರಂದು 5 ಕೋಟಿ - ಮಧ್ಯಪ್ರದೇಶ ಸಿಎಂ, ಅಕ್ಟೋಬರ್1, 2013 ರಂದು 4 ಕೋಟಿ ರೂಪಾಯಿಗಳು ಛತ್ತೀಸ್ ಘಡ ಸಿಎಂ, ಹಾಗೂ ಕೊನೆಯದಾಗಿ ಅಕ್ಟೋಬರ್ 30, 2013 ರಂದು 25 ಕೋಟಿ ಹಣವನ್ನು ಗುಜರಾತ್ ಸಿಎಂಗೆ ನೀಡಲಾಗಿರುವುದಾಗಿ ದಾಖಲೆಗಳು ಹೇಳುತ್ತವೆ.

ಅಂದ ಹಾಗೆ ಅವತ್ತು ಗುಜರಾತ್ ಮುಖ್ಯಮಂತ್ರಿಯಾಗಿದ್ದವರು ಇವತ್ತಿನ ಭಾರತದ ಪ್ರಧಾನಿ ನರೇಂದ್ರ ಮೋದಿ.

ಈ ಕುರಿತು ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಎಎಪಿ (ಆಮ್ ಆದ್ಮಿ ಪಾರ್ಟಿ) ‘ಗುಜರಾತ್ ಸಿಎಂ-25 ಕೋಟಿ’ ಎಂದು ಬರೆದ ಚಿತ್ರವನ್ನು ಟ್ವೀಟ್ ಮಾಡಿದ್ದು ಮೋದಿ ವಿರುದ್ಧ ನೇರ ಭ್ರಷ್ಟಾಚಾರದ ಆರೋಪ ಮಾಡಿದೆ.

ಭವಿಷ್ಯದಲ್ಲಿ ಈ ಆರೋಪಗಳು ಪ್ರಧಾನಿ ನರೇಂದ್ರ ಮೋದಿ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಲಿದೆ ಎಂಬುದಕ್ಕೆ ಮುಂದಿನ ದಿನಗಳು ಸಾಕ್ಷಿಯಾಗಲಿವೆ.

ಮಾಹಿತಿ:

ದಿ ವೈರ್.