‘ನೋಟು ನಿಷೇಧ ಪ್ರಕ್ರಿಯೆ’: ದೇಶದಾದ್ಯಂತ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’!
ಸುದ್ದಿ ಸಾಗರ

‘ನೋಟು ನಿಷೇಧ ಪ್ರಕ್ರಿಯೆ’: ದೇಶದಾದ್ಯಂತ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’!

ನೋಟು ನಿಷೇಧದಿಂದ ಉಂಟಾದ ಪರಿಣಾಮವನ್ನು ಈ ವರದಿಯಲ್ಲಿ ವಿವರಿಸಲಾಗಿದೆ. ಇಲ್ಲಿ ಅನೇಕರು ನೋಟು ನಿಷೇಧ ತಮ್ಮ ವ್ಯಾಪಾರದ ಮೇಲೆ ಹಾಗೂ ದೈನಂದಿನ ಬದುಕಿನ ಮೇಲೆ ಹೇಗೆ ಪರಿಣಾಮ ಬೀರಿತು ಎಂದು ವಿವರಿಸಿದ್ದಾರೆ.

ತಳ್ಳು ಗಾಡಿಯಲ್ಲಿ ಮನೆ ಮನೆಗೆ ಬಾಳೆಹಣ್ಣು ಮಾರುತ್ತಿದ್ದ ರಾಮಣ್ಣರಿಗೆ ಇವತ್ತು ವ್ಯಾಪಾರವಿಲ್ಲ. “ನಿನ್ನೆ ಒಂದಷ್ಟು ಜನರಾದರೂ ಖರೀದಿಸಿದ್ದಾರೆ. ಇವತ್ತು ಇಡೀ ಬೆಳಗ್ಗೆಯಿಂದ ಒಬ್ಬರೇ ಒಬ್ಬರು ಪರ್ಚೇಸ್ ಮಾಡಿದರು ನೋಡಿ. ಬೇರೆ ಯಾರ ಹತ್ರನೂ ದುಡ್ಡಿಲ್ಲ,” ಎಂದವರು ಗಾಡಿ ಮುಂದಕ್ಕೆ ತಳ್ಳುತ್ತಾ ಹೋದರು. 11 ಗಂಟೆ ಸುಮಾರಿಗೆ ಮಾತಿಗೆ ಸಿಕ್ಕ ಅವರ ಮುಖದಲ್ಲಿ ಮುಂದೇನು ಎಂಬ ಆತಂಕವಿತ್ತು.

ಅಂಗಡಿ ನಡೆಸುತ್ತಿರುವ ಗಣೇಶ್ 
ಅಂಗಡಿ ನಡೆಸುತ್ತಿರುವ ಗಣೇಶ್ 

“ಈಗ ನಿದ್ದೆ ಮಾಡುವುದೇ ಕೆಲಸ. ಅಂಗಡಿಗೆ ಯಾರೂ ಬರುತ್ತಿಲ್ಲ. ಸುಮ್ಮನೆ ಇಲ್ಲಿರುವುದು ವೇಸ್ಟ್. ನಾನು ಒಂದು ವಾರ ಊರಿಗೆ ಹೋಗಿ ಬಿಡುತ್ತೇನೆ,” ಎನ್ನುತ್ತಾರೆ ಗಣೇಶ್. ಅಂಗಡಿಯ ಮುಂದೆ 500 & 1000 ನೋಟು ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ತಗುಲಿ ಹಾಕಿಕೊಂಡು ಅವರು ಆರಾಮವಾಗಿ ಕಾಲ ಕಳೆಯುತ್ತಿದ್ದರು. ಅವರ ಅಂಗಡಿಗೆ ಸಾಮಾನು ಖರೀದಿಸಲು ಬರುವವರು ಯಾರೂ ಇರಲಿಲ್ಲ. ಅಂಗಡಿಗಳ ಪರಿಸ್ಥಿತಿ ಹೀಗಾದರೆ ಇನ್ನು ರಿಕ್ಷಾ ಓಡಿಸುವವರೂ ಸಮಸ್ಯೆಗೆ ಸಿಲುಕಿದ್ದಾರೆ.

“ಬೆಳಿಗ್ಗೆಯಿಂದ ಇಬ್ಬರು ಗಿರಾಕಿಗಳು ಸಿಕ್ಕಿದ್ದಾರೆ ಅಷ್ಟೆ. ಬಹುಶಃ ಇನ್ನು ಇಡೀ ದಿನ ಜನ ಸಿಕ್ಕುವುದು ಕಷ್ಟ. ಹೀಗಾದರೆ ಮುಂದೆ ಊಟಕ್ಕೂ ಕಷ್ಟ,” ಎಂದು ಹಳೇ ರಿಕ್ಷಾ ಓಡಿಸುತ್ತಿದ್ದ ವಸಂತ್ ನಿರಾಶರಾದರು. ಮಾತ್ರವಲ್ಲ ಪಟ್ರೋಲ್ ಪಂಪ್ಗಳ ಸಮಸ್ಯೆಯತ್ತಲೂ ಅವರು ಬೆಳಕು ಚೆಲ್ಲಿದರು.

500/1000 ಕ್ಕಿಂತ ಕಡಿಮೆ ಬೆಲೆಯ ಪೆಟ್ರೋಲ್ ಹಾಕುವಂತಿಲ್ಲ. ಯಾಕೆಂದರೆ ಪೆಟ್ರೋಲ್ ಪಂಪಿನಲ್ಲಿಯೂ ಕೊಡಲು ಚಿಲ್ಲರೆ ಇಲ್ಲ. ಒಂದೊಮ್ಮೆ ನಿಮ್ಮ ಗಾಡಿಗೆ 400 ರೂಪಾಯಿ ಪೆಟ್ರೋಲ್ ಹಾಕಿದರೆ ನೀವು 500 ರೂಪಾಯಿಯೇ ನೀಡಬೇಕು. ಚಿಲ್ಲರೆ ವಾಪಸ್ಸು ನೀಡುವುದಿಲ್ಲ ನೋಡಿ,” ಎನ್ನುತ್ತಾರೆ ಅವರು.

ಇದೇ ಕಾರಣದಿಂದ ರಸ್ತೆಗಳಲ್ಲಿ ವಾಹನಗಳ ಓಡಾಟ ಪೂರ್ತಿ ನಿಂತು ಹೋಗಿದೆ. ಎಂದಿನ ಬಂದ್ ದಿನಗಳಂತೆ ಬ್ಯಾಟು ಬಾಲು ಹಿಡಿದು ಮಕ್ಕಳು ಬೀದಿಗಳಲ್ಲಿ ಪ್ರತ್ಯಕ್ಷರಾಗಿದ್ದಾರೆ.ಇದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 500 ಮತ್ತು 1,000 ಮುಖಬೆಲೆಯ ನೋಟುಗಳನ್ನು ಮಂಗಳವಾರ ಮಧ್ಯರಾತ್ರಿಯಿಂದ ಬ್ಯಾನ್ ಮಾಡಿದ್ದರ ಒಂದು ಮಟ್ಟದ ಪರಿಣಾಮಗಳು. ಆದರೆ ಆಳದಲ್ಲಿ ಇದಕ್ಕಿಂತಲೂ ಗಂಭೀರ ಸಮಸ್ಯೆಗಳನ್ನು ಅನಾಣ್ಯೀಕರಣ ತಂದೊಡ್ಡಿದೆ.

‘ನೋಟು ನಿಷೇಧ ಪ್ರಕ್ರಿಯೆ’: ದೇಶದಾದ್ಯಂತ ‘ಅಘೋಷಿತ ಆರ್ಥಿಕ ತುರ್ತು ಪರಿಸ್ಥಿತಿ’!

ನಿತ್ಯ ಜನಜೀವನ ಏರು ಪೇರು:

ಇಡೀ ದೇಶದ ಅರ್ಥ ವ್ಯವಸ್ಥೆಯೇ ತಟಸ್ಥ ಸ್ಥಿತಿಗೆ ಬಂದು ನಿಂತಿದೆ. ಹಣವಿಲ್ಲದೆ ಅರ್ಧಕರ್ಧ ಜನರ ಜನಜೀವನವೇ ಏರುಪೇರಾಗಿದೆ. ಯಾವತ್ತೂ ಗಿಜಿಗುಡುತ್ತಿದ್ದ ಜಯನಗರ ಫೊರ್ಥ್ ಬ್ಲಾಕ್ ಬಿಕೋ ಎನ್ನುತ್ತಿದೆ. ಸಾಲು ನಿಲ್ಲುತ್ತಿದ್ದ ವೈದ್ಯರ ಕ್ಲಿನಿಕ್ ಮುಂದೆ ಜನರೇ ಇಲ್ಲ. ಚಿಕಿತ್ಸೆ ನೀಡಲು ಸಿದ್ದರಿದ್ದರೂ ಜನರೇ ಮುಂದೆ ಬರುತ್ತಿಲ್ಲ. ಮೆಡಿಕಲ್ ಗಳಲ್ಲಿ ಹಳೆ ನೋಟು ಸ್ವೀಕರಿಸಬೇಕು ಎಂದು ಕೇಂದ್ರದ ಆದೇಶವಿದೆ.

ಆದರೆ ಕೊಡಲು ಚಿಲ್ಲರೆ ಅವರ ಬಳಿಯಲ್ಲಿಲ್ಲ. ಕೆ.ಎಸ್.ಆರ್.ಟಿ.ಸಿ, ಬಿಎಂಟಿಸಿ ಕಂಡಕ್ಟರ್ ಗಳ ಬಳಿ ಚಿಲ್ಲರೆ ಇಲ್ಲ. “ಆದಷ್ಟು 1,000 ಮತ್ತು 500 ನೋಟಗಳನ್ನು ಅವಾಯ್ಡ್ ಮಾಡಿ,” ಎಂದು ಅವರಿಗೆ ಮೇಲಿನಿಂದ ಬಾಯಿ ಮಾತಿನ ಆದೇಶ ಬಂದಿದೆ. ಬೀದಿ ವ್ಯಾಪಾರಿಗಳು ದಿನದ ಗಳಿಕೆಯಿಲ್ಲದೆ ಹೈರಾಣಾಗಿ ಹೋಗಿದ್ದಾರೆ. ಮನೆಯಲ್ಲಿ ಅಡುಗೆ ಮಾಡದವರಿಗೆ ಹೊಟೇಲ್ ಊಟ ಕೈಗೆಟುಕದಾಗಿದೆ.

ಹೀಗೆ ತಳಮಟ್ಟದ ಪರಿಸ್ಥಿತಿಗಳು ಗಂಭೀರ ಸಮಸ್ಯೆಯತ್ತ ಮುಖ ಮಾಡಿವೆ. ಇದರ ಪರಿಣಾಮ ಎಂಬಂತೆ ದೆಹಲಿ, ಉತ್ತರ ಪ್ರದೇಶ ಭಾಗದಲ್ಲಿ ಉಪ್ಪಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಪರಿಣಾಮ ಉಪ್ಪಿನ ಬೆಲೆ 250 ರಿಂದ 400 ರೂಪಾಯಿ ಮುಟ್ಟಿದೆ.ಕೆಲವರು ಇದೇ ಸಂದರ್ಭವನ್ನು ಬಳಕೆ ಮಾಡಿಕೊಂಡು ದೋಚಲು ಆರಂಭಿಸಿದ್ದಾರೆ. “ಒಬ್ಬರಿಗೆ 2.50 ಲಕ್ಷ ರೂಪಾಯಿ ಡೆಪಾಸಿಟ್ ಮಾಡಲು ಅವಕಾಶ ನೀಡಿದ್ದಾರೆ. ನಾನು ಅಷ್ಟು ದುಡ್ಡಿನ ವ್ಯಾಪಾರ ಸ್ವೀಕರಿಸುತ್ತೇನೆ. ಆದರೆ 1000ದ ವಸ್ತುಗಳಿಗೆ 1100 ರೂಪಾಯಿ ನೀಡಬೇಕು,” ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಂಗಡಿ ಮಾಲಿಕರೊಬ್ಬರು. ಇದೇ ರೀತಿ ಪೆಟ್ರೋಲ ಪಂಪ್ಗಳೂ ಸುಲಿಗೆಗೆ ಇಳಿದಿವೆ.

ಅನಾಣ್ಯೀಕರಣ (ಚಲಾವಣೆ ರದ್ಧತಿ) ದೊಡ್ಡ ಹಗರಣ: ಕೇಜ್ರಿವಾಲ್

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಶನಿವಾರ ಬೆಳಿಗ್ಗೆ ದೆಹಲಿಯಲ್ಲಿ ಲೈವ್ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನಾಣ್ಯೀಕರಣ ‘ಎನ್ ಡಿಎ’ ಸರಕಾರದ ಬಹುದೊಡ್ಡ ಹಗರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. “ಅನಾಣ್ಯೀಕರಣ ವಿಚಾರ ಬಿಜೆಪಿಯ ಹಾಗೂ ಇತರ ಕೆಲವರಿಗೆ ಮೊದಲೇ ತಿಳಿದಿತ್ತು.

ಪತ್ರಿಕಾಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ 
ಪತ್ರಿಕಾಗೋಷ್ಠಿ ನಡೆಸಿದ ಅರವಿಂದ್ ಕೇಜ್ರಿವಾಲ್ 

ಮೋದಿ ಕಪ್ಪು ಹಣ ಇರುವ ತಮ್ಮ ಗೆಳೆಯರಿಗೆ ಇದನ್ನು ನಿಷೇಧಕ್ಕೂ ಮೊದಲು ಹೇಳಿದ್ದರು. ಈ ಕಾರಣಕ್ಕೆ ಎರಡನೇ ತ್ರೈಮಾಸಿಕದಲ್ಲಿ ಕುಸಿತವಾಗಿದ್ದ ಬ್ಯಾಂಕುಗಳ ಠೇವಣಿ, ಅನಾಣ್ಯೀಕರಣದ ಸ್ವಲ್ಪ ಮೊದಲು ಅಂದರೆ ಜುಲೈನಿಂದ ಸೆಪ್ಟೆಂಬರ್ ತಿಂಗಳಲ್ಲಿ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ದೊಡ್ಡ ಮಟ್ಟಕ್ಕೆ ಹಣವನ್ನು ಬ್ಯಾಂಕುಗಳಲ್ಲಿ ಜಮೆ ಮಾಡಲಾಗಿದೆ. ಈ ಹಣ ಯಾರಿಗೆ ಸೇರಿದ್ದು? ಇದು ಬಹುದೊಡ್ಡ ಹಗರಣ,” ಎಂದು ಕಿಡಿಕಾರಿದ್ದಾರೆ.

ಮಾತ್ರವಲ್ಲ “ಈಗಿರುವ ಎಟಿಎಂಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರಕ್ಕೆ ಜುಲೈನಲ್ಲೇ ಗೊತ್ತಿತ್ತು. ಹೀಗಿದ್ದೂ ಬೇಕೆಂದೇ ಈ ಕೆಲಸ ಮಾಡುತ್ತಿದೆ,” ಎಂದು ಆರೋಪಿಸಿದ್ದಾರೆ. ಮಾತ್ರವಲ್ಲ ಇದು ಸಾಮಾನ್ಯ ಜನರ ಮೇಲೆ ಕೇಂದ್ರ ಸರಕಾರ ಮಾಡಿರುವ 'ಸರ್ಜಿಕಲ್ ಸ್ಟ್ರೈಕ್' ಎಂದು ಹರಿಹಾಯ್ದಿದ್ದಾರೆ.

ಕಾರ್ಯನಿರ್ವಹಿಸದ ‘ಎಟಿಎಂ’ಗಳು:

ಅರವಿಂದ್ ಕೇಜ್ರಿವಾಲ್ ಹೇಳಿದಂತೆಯೇ ಎಟಿಎಂಗಳು ಗಂಭೀರ ಸಮಸ್ಯೆ ಎದುರಿಸುತ್ತಿವೆ. ಚಲಾವಣೆಯಲ್ಲಿರುವ ಎಟಿಎಂಗಳಲ್ಲಿ 2000 ನೋಟುಗಳು ಕಾರ್ಯ ನಿರ್ವಹಿಸುತ್ತಿಲ್ಲ. ಅವುಗಳ ಗಾತ್ರದಲ್ಲಿನ ಬದಲಾವಣೆ ಸಮಸ್ಯೆಯಾಗಿದೆ. ಇನ್ನು ಕೆಲವು ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು ಬಾಗಿಲು ಮುಚ್ಚಿಕೊಂಡಿವೆ. ಹಾಗಂತ ಬ್ಯಾಂಕುಗಳು ಅಂಚೆ ಕಚೇರಿಗಳ ಪರಿಸ್ಥಿತಿ ಉತ್ತಮವಾಗೇನೂ ಇಲ್ಲ.

ಹೆಚ್ಚಿನ ಎಲ್ಲಾ ಬ್ಯಾಂಕುಗಳಲ್ಲಿ ಉದ್ದುದ್ದ ಕ್ಯೂ ನಿಂತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಹೀಗೆ ರಾತೋರಾತ್ರಿ ಜನರನ್ನು ದುಡ್ಡಿದ್ದೂ, ಬರಿಗೈ ಫಕೀರನ್ನಾಗಿಸಿ ಪರದಾಡುವ ಸ್ಥಿತಿಗೆ ನರೇಂದ್ರ ಮೋದಿಯ ಅನಾಣ್ಯೀಕರಣ ತಂದು ನಿಲ್ಲಿಸಿದೆ. ಇದರ ಬೆನ್ನಿಗೆ ಅರವಿಂದ ಕೇಜ್ರಿವಾಲ್ ಹಗರಣದ ಆರೋಪ ಮಾಡಿದ್ದಾರೆ. ಅಂತಿಮವಾಗಿ ಈ ನೋಟು ಬದಲಾವಣೆಯ ಪರಿಣಾಮಗಳು ಏನಿರಬಹುದು ಎಂಬುದನ್ನು ತಿಳಿದುಕೊಳ್ಳಲು ಇನ್ನೂ ಒಂದಷ್ಟು ದಿನ ಕಾಯಬೇಕಾಗಬಹುದು.