'ಟಿಪ್ಪು ಜಯಂತಿ Whatsapp ಸ್ಪೆಷಲ್': ಕಂಡಕಂಡಲ್ಲಿ ಸ್ಕ್ರಾಲ್ ಮಾಡಿದ್ರೆ ರಾಜೀನಾಮೆ ಕೇಳ್ತಾರೆ, ತನ್ವೀರ್ ಸೇಠ್!
ಸುದ್ದಿ ಸಾಗರ

'ಟಿಪ್ಪು ಜಯಂತಿ Whatsapp ಸ್ಪೆಷಲ್': ಕಂಡಕಂಡಲ್ಲಿ ಸ್ಕ್ರಾಲ್ ಮಾಡಿದ್ರೆ ರಾಜೀನಾಮೆ ಕೇಳ್ತಾರೆ, ತನ್ವೀರ್ ಸೇಠ್!

ಟಿಪ್ಪು ಜಯಂತಿಯ

ವಿವಾದ, ಸಿನಿಮಾ ನಟರಿಬ್ಬರ ದುರಂತ ಸಾವು, ನೋಟು ಬದಲಾವಣೆಯ ಗೊಂದಲ... ಈ ಎಲ್ಲಾ ಸುದ್ದಿಗಳ ಗಂಭೀರತೆಯ ನಡುವೆ ಟಿವಿ ಮಾಧ್ಯಮಗಳಿಗೊಂದು ರಸವತ್ತಾದ ಸುದ್ದಿ ಕೆಲವೇ ಗಂಟೆಗಳ ಮುಂಚೆ ಸಿಕ್ಕಿದೆ. ಅದು, ರಾಯಚೂರಿನಲ್ಲಿ ತನ್ವೀರ್ ಸೇಠ್ ತಮ್ಮ ವಾಟ್ಸಾಪ್ ಪರದೆಯ ಮೇಲೆ ಅಶ್ಲೀಲವಾಗಿ ಕಾಣಿಸುವ ಚಿತ್ರಗಳನ್ನು ಐದಾರು ಸೆಕೆಂಟುಗಳ ಕಾಲ ಸ್ಕ್ರಾಲ್ ಮಾಡಿರುವ ವಿಡಿಯೋ.

ತನ್ವೀರ್ ಸೇಠ್ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು. ಹೀಗಾಗಿ, ಅವರು ಸಾರ್ವಜನಿಕವಾಗಿ ನಡೆಯುತ್ತಿದ್ದ, ವಿವಾದಕ್ಕೆ ಒಳಗಾಗಿರುವ ಟಿಪ್ಪು ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಕುಳಿತಾಗ ಇಂತಹ ವರ್ತನೆ ಸರಿಯಲ್ಲ ಎಂಬುದು ವಿರೋಧ ಪಕ್ಷದ ನಾಯಕರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವರ ಪರವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.

ಗುರುವಾರ ಕರ್ನಾಟಕ ಸರಕಾರ ರಾಜ್ಯಾದ್ಯಂತ ಅತ್ಯುತ್ಸಾಹದಲ್ಲಿ ಟಿಪ್ಪು ಜಯಂತಿ ಆಚರಣೆ ನಡೆಸಿತು. ಬಹುತೇಕ ಸಾಂಕೇತಿಕವಾಗಿ ನಡೆದ ಆಚರಣೆಯಲ್ಲಿ ಭಾಷಣಗಳೇ ಮೇಳೈಸಿತ್ತು. ಇದೇ ರೀತಿ ರಾಯಚೂರಿನ ಸ್ಟೇಷನ್ ರಸ್ತೆಯಲ್ಲಿರುವ ರಂಗಮಂದಿರದಲ್ಲಿ ಟಿಪ್ಪು ಜಯಂತಿಯ ಸಭಾ ಕಾರ್ಯಾಕ್ರಮ ಆಯೋಜನೆಯಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು, ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಮಂತ್ರಿಗಳು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರೂ ಆದ ಕಾರ್ಯಕ್ರಮದ ಮುಖ್ಯ ಅತಿಥಿ ತನ್ವೀರ್ ಸೇಠ್ ವೇದಿಕೆಯ ಮಧ್ಯದಲ್ಲಿ ಆಸೀನರಾಗಿದ್ದರು. ಈ ಸಂದರ್ಭ ಅವರು ಮೊಬೈಲಿನಲ್ಲಿ ಅರೆನಗ್ನ ಹುಡುಗಿಯ ಚಿತ್ರಗಳನ್ನು ಸ್ಕ್ರಾಲ್ ಮಾಡುವ ದೃಶ್ಯಗಳು ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಈ ದೃಶ್ಯಗಳು ಸಿಗುತ್ತಿದ್ದಂತೆ ಹೆಚ್ಚಿನ ಎಲ್ಲಾ ಸುದ್ದಿ ವಾಹಿನಿಗಳು ಮೋಜಿನ ಸಾಲುಗಳೊಂದಿಗೆ ‘ಎಕ್ಸ್ ಕ್ಲೂಸಿವ್’ ಹೆಸರಿನಲ್ಲಿ ದೃಶ್ಯಾವಳಿಗಳನ್ನು ಪ್ರಸಾರ ಮಾಡುತ್ತಿವೆ.

(ಹೀಗೆ, ಮೊಬೈಲ್ ವಾಟ್ಸಾಪ್ ವರೆಗೆ ಹುಡುಗಿಯರ ಚಿತ್ರಗಳು ಹೇಗೆ ಬಂದು ಬೀಳುತ್ತವೆ ಎಂಬುದನ್ನು 'ಸಮಾಚಾರ' ಈ ಹಿಂದೆಯೇ ತನಿಖಾ ವರದಿಯೊಂದನ್ನು ಪ್ರಕಟಿಸಿತ್ತು: ಗಮನಿಸಿ)

ಒಂದಷ್ಟು ತಮಾಷೆ ಎನಿಸುವ ಸಾಲುಗಳ ಜತೆಗೆ ರಾಜೀನಾಮೆಯಂಥ ಗಂಭೀರ ಪ್ರಶ್ನೆಗಳನ್ನೂ ಸುದ್ದಿ ವಾಹಿನಿಗಳು ಎತ್ತಿವೆ. “ಟಿಪ್ಪು ಜಯಂತಿಯ ಸಂದರ್ಭ ಇದೇನಾ ಸಭ್ಯತೆ? ಇದೇನಾ ಸಂಸ್ಕೃತಿ?” ಅಂತ ಒಂದು ಚಾನಲ್ ತಮ್ಮ ನಿರೂಪಕರ ಬಾಯಲ್ಲಿ ಹೇಳಿಸುತ್ತಿದ್ದರೆ, ಮತ್ತೊಂದು ವಾಹಿನಿ, 'ಕದ್ದು ಮುಚ್ಚಿ ನೋಡೋ ಕಳ್ಳ ಯಾರೋ?' ಅಂತ ಅಕ್ಷರಗಳ ಮೂಲಕ ದಾಳಿಗೆ ಇಳಿದಿದೆ.

ಅಶ್ಲೀಲ ಚಿತ್ರ ವೀಕ್ಷಣೆಯನ್ನು ತಳ್ಳಿ ಹಾಕಿರುವ ಸಚಿವರು, “ತಾವು ಅಶ್ಲೀಲ ಚಿತ್ರ ವೀಕ್ಷಿಸಿಲ್ಲ. ತಾವು ಮೈಸೂರಿನಲ್ಲಿ ನಡೆದ ಟಿಪ್ಪು ಜಯಂತಿಯ ಮಾಹಿತಿಗಳನ್ನು ಪಡೆಯುತ್ತಿದ್ದೆ,” ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ರಾಯಚೂರು ಸಂಸದ ಬಿ.ವಿ.ನಾಯಕ್ “ವಾಟ್ಸಾಪ್ ಗ್ರೂಪಿನಲ್ಲಿ ಬಂದ ಫೋಟೋಗಳನ್ನು ನನಗೆ ತೋರಿಸುತ್ತಿದ್ದರು. ಅಷ್ಟೇ,” ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕಾಂಗ್ರೆಸ್ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕೂಡಾ ಸಚಿವರ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅವರು ಗ್ರೂಪಿನಲ್ಲಿ ಬಂದ ಚಿತ್ರಗಳನ್ನು ನೋಡಿದ್ದಾರೆ. ಜಸ್ಟ್ ಸ್ಕ್ರಾಲ್ ಮಾಡಿದ್ದಾರೆ ಅಷ್ಟೆ. ಅವರೇನೂ ಚಿತ್ರವನ್ನು ಡೌನ್ ಲೋಡ್ ಮಾಡಿಲ್ಲ, ಝೂಮ್ ಮಾಡಿಯೂ ನೋಡಿಲ್ಲ,” ಎಂದು ಹೇಳಿದ್ದಾರೆ.

ಆದರೆ ಇದಕ್ಕೆ ಪ್ರತಿಪಕ್ಷ ಬಿಜೆಪಿ ಮಾತ್ರ ತೀಕ್ಷ ಪ್ರತಿಕ್ರಿಯೆ ನೀಡಿದೆ. “ಸಚಿವರು ಟಿಪ್ಪುವಿನಂತೆ ಕಾಮಾಂಧ ವರ್ತನೆ ತೋರಿದ್ದಾರೆ,” ಎಂದು ಗೋ ಮಧುಸೂದನ್ ಪ್ರತಿಕ್ರಿಯೆ ನೀಡಿದರೆ, “ಇದು ಮೂರು ಬಿಟ್ಟವರು ಮಾಡುವ ಕೆಲಸ,” ಅಂತ ಕೆ.ಜಿ ಬೋಪಯ್ಯ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.

ಇದೇ ವೇಳೆ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಸಮಯದಲ್ಲಿ ಟಿಪ್ಪುವನ್ನು ಹಾಡಿ ಹೊಗಳಿದ್ದ ತೇಜಸ್ವಿನಿ ಈಗ ಬಿಜೆಪಿ ಪರ ನಿಲುವನ್ನು ಮುಂದಿಡುತ್ತಿದ್ದಾರೆ. ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯನವರು 'ಓಟ್ ಬ್ಯಾಂಕ್' ಆಗಿ ಮಾಡಿಕೊಳ್ಳಲು ಕಾರ್ಯಕ್ರಮ ರೂಪಿಸಿದ್ದಾರೆ ಎಂದು ವಾಹಿನಿಯೊಂದರ ಜತೆ ಮಾತನಾಡುವಾಗ ಪ್ರತಿಕ್ರಿಯಿಸಿದ್ದಾರೆ.

ಸದ್ಯ, ಎಲ್ಲಾ ಜಂಜಾಟಗಳ ನಡುವೆ ಗುರುವಾರದ ಸಂಜೆ ಹೊತ್ತಿಗೆ ಮನೆ ಮನೆಯ ಟಿವಿ ಸ್ಕ್ರೀನ್ EXCLUSIVE ವಾಟ್ಸಾಪ್ ಸ್ಕ್ರಾಲಿಂಗ್ ವಿಡಿಯೋಗಳು, ಸಂಬಂಧಪಟ್ಟ ಅಕ್ಷರಗಳು ತುಂಬಿಕೊಂಡಿವೆ. ಹೊಸ ವಿವಾದವೊಂದು ಹುಟ್ಟಿಕೊಳ್ಳೊವ ಸಾಧ್ಯತೆ ಇದೆ. "ಅವರಾಗೇ ರಾಜೀನಾಮೆ ಕೊಟ್ಟರೆ, ನಾವು ಬೀದಿಗೆ ಇಳಿಯುವುದು ತಪ್ಪುತ್ತದೆ,'' ಎಂದು ಬಿಜೆಪಿ ನಾಯಕಿ ತೇಜಸ್ವಿನಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

ಅಧಿವೇಶನದ ವೇಳೆ ನೀಲಿ ಚಿತ್ರ ವೀಕ್ಷಿಸಿ ಇದೇ ಬಿಜೆಪಿಯ ಮೂವರು ಶಾಸಕರು ಮತ್ತು ಸಚಿವರು ಹಿಂದೊಮ್ಮೆ ಸಿಕ್ಕಿ ಬಿದ್ದಿದ್ದರು. 2012ರಲ್ಲಿ ಬಿಜೆಪಿಯ ಲಕ್ಷ್ಮಣ್ ಸವದಿ, ಕೃಷ್ಣ ಪಾಲೇಮಾರ್ ಮತ್ತು ಸಿಸಿ ಪಾಟೀಲ್ ಅಶ್ಲೀಲ ದೃಶ್ಯಾವಳಿಗಳನ್ನು ವೀಕ್ಷಿಸುವ ವೀಡಿಯೋ ಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗಿ ದೊಡ್ಡ ಸುದ್ದಿಯಾಗಿತ್ತು. ನಂತರ ಮೂವರೂ ಮಂತ್ರಿ ಸ್ಥಾನ ಕಳೆದುಕೊಂಡಿದ್ದಲ್ಲದೆ, ಮುಂದೆ ಬಂದ ಚುನಾವಣೆಯಲ್ಲಿ ಸೋಲನ್ನೂ ಅನುಭವಿಸಿದ್ದರು. ಅದನ್ನು ಪುನಾವರ್ತಿಸುವ ಕೆಲಸ ತಾರ್ಕಿಕ ಅಂತ್ಯಕ್ಕೆ ತಲುಪುತ್ತಾ? ಕಾದು ನೋಡಬೇಕಿದೆ.