samachara
www.samachara.com
‘ನೋಟಿನ ಕಂತೆಯೊಳಗೆ’: ಮೋದಿಗೂ ಮೊದಲು 'ಆರ್ಥಿಕ ಸುಧಾರಣೆ'ಗೆ ಮುನ್ನುಡಿ ಬರೆದವರಿವರು!
ಸುದ್ದಿ ಸಾಗರ

‘ನೋಟಿನ ಕಂತೆಯೊಳಗೆ’: ಮೋದಿಗೂ ಮೊದಲು 'ಆರ್ಥಿಕ ಸುಧಾರಣೆ'ಗೆ ಮುನ್ನುಡಿ ಬರೆದವರಿವರು!

ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಸರಕಾರ ಅಚ್ಚರಿಯೆಂಬಂತೆ ರಾತೋ ರಾತ್ರಿ 500 ಮತ್ತು 1,000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು ಮಾಡಿದೆ. ಇದೊಂದು ಐತಿಹಾಸಿಕ ತೀರ್ಮಾನ, ಹಿಂದೆಂದೂ ಇಂಥಹ ತೀರ್ಮಾನಗಳನ್ನು ತೆಗೆದುಕೊಂಡಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ನಿಜವಾಗಿಯೂ ಇದೇ ಸತ್ಯಾನಾ? ಇಲ್ಲ ಎನ್ನುತ್ತಿದೆ ಇತಿಹಾಸ. ಭಾರತದಲ್ಲಿ ಈ ಹಿಂದೆಯೂ ನೋಟುಗಳ ಬದಲಾವಣೆಯಂಥ ಘಟನೆಗಳು ನಡೆದಿವೆ. ಈ ಮೂಲಕ ಆರ್ಥಿಕ ಸುಧಾರಣೆಗೆ ಹಲವು ಪ್ರಧಾನಿಗಳು ಮುಂದಾಗಿದ್ದರು. ಅವುಗಳತ್ತ ಒಂದು ಕಿರು ನೋಟ ಇಲ್ಲಿದೆ.ಸ್ವಾತಂತ್ರ್ಯ ಪೂರ್ವದಲ್ಲೇ ನಡೆದಿತ್ತು ನೋಟು ಬದಲಾವಣೆ!

ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ 1946ರ ಜನವರಿಯಲ್ಲಿ ಇಂತಹ ನೋಟು ಬದಲಾವಣೆ ಕ್ರಮವನ್ನು ಒಮ್ಮೆ ಕೈಗೊಳ್ಳಲಾಗಿತ್ತು. ಆಗ ಚಲಾವಣೆಯಲ್ಲಿದ್ದ 1,000 ಮತ್ತು 10,000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಾಗಿತ್ತು. ಆಗಲೂ ಕಪ್ಪು ಹಣ ತಡೆಯೇ ಈ ನಿರ್ಧಾರದ ಹಿಂದಿದ್ದ ಮೂಲ ಉದ್ಧೇಶವಾಗಿತ್ತು.

ಮುಂದೆ ಮತ್ತೆ 1954ರಲ್ಲಿ 1,000, 5,000 ಮತ್ತು 10,000 ಮುಖಬೆಲೆಯ ನೋಟುಗಳನ್ನು ಪರಿಚಯಿಸಲಾಯಿತು. 1978ರಲ್ಲಿ ಈ ಮುಖಬೆಲೆಯ ನೋಟುಗಳ ಚಲಾವಣೆಗೆ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ಅಂತಿಮ ಮುದ್ರೆ ಒತ್ತಿದ್ದರು.

1978ರ ನೋಟು ಬದಲಾವಣೆ ಪರ್ವ!

ಅವತ್ತು ಪ್ರಧಾನಿಯಾಗಿದ್ದವರು ಇನ್ನೊಬ್ಬ ಗುಜರಾತಿ ಮೊರಾರ್ಜಿ ದೇಸಾಯಿ. ಇವತ್ತು ಹೇಗೆ ನರೇಂದ್ರ ಮೋದಿ ರಾತೋ ರಾತ್ರಿ ದೇಶದ ಜನರಿಗೆ ಶಾಕ್ ನೀಡಿದ್ದರೋ ಅದೇ ರೀತಿ ಮೊರಾರ್ಜಿಯೂ 1,000, 5,000, ಮತ್ತು 10,000 ಮುಖ ಬೆಲೆಯ ನೋಟುಗಳಿಗೆ ತಿಲಾಂಜಲಿ ಇಟ್ಟು ಇಡೀ ದೇಶವನ್ನೇ ಅಚ್ಚರಿಯಲ್ಲಿ ಕೆಡವಿದ್ದರು. ಆದರೆ ಅವತ್ತಿಗೆ ಅಷ್ಟು ದೊಡ್ಡ ಮೊತ್ತದ ನೋಟುಗಳನ್ನು ಹೊಂದಿದವರು ಭಾರಿ ಶ್ರೀಮಂತರು ಮಾತ್ರ ಆಗಿದ್ದರಿಂದ ಬಡ ಜನರ ಬದುಕಿನಲ್ಲಿ ಹೇಳಿಕೊಳ್ಳುವಂಥ ಬದಲಾವಣೆಗಳೇನೂ ಆಗಿರಲಿಲ್ಲ.


    ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ

ಇವತ್ತು ಹೇಗೆ ಮೋದಿ ಬ್ಯಾಂಕುಗಳು ಮುಚ್ಚಿದ ನಂತರ ನೋಟು ಬದಲಾವಣೆ ಘೋಷಣೆ ಮಾಡಿದರೋ ಅದೇ ರೀತಿ ಜನವರಿ 16ರಂದು ಬ್ಯಾಂಕುಗಳು ಬಾಗಿಲೆಳೆದುಕೊಂಡ ನಂತರ ಎಲ್ಲಾ ವ್ಯವಹಾರಗಳೂ ಕಾನೂನು ಬದ್ಧವಾಗಬೇಕು ಎಂದು ಘೋಷಿಸಿದರು ಪ್ರಧಾನಿ ಮೊರಾರ್ಜಿ. ಇಂದಿನ ರೀತಿಯಲ್ಲೇ ಮರುದಿನ ಎಲ್ಲಾ ಬ್ಯಾಂಕುಗಳಿಗೆ ಸಾರ್ವತ್ರಿಕ ರಜೆ ಸಾರಿ ಬಿಟ್ಟರು. ಅವತ್ತು ಅರ್ಥ ಸಚಿವರಾಗಿದ್ದವರು ಗುಜರಾತಿನವರೇ ಆದ ಎಚ್.ಎಂ ಪಟೇಲ್. ಮಾಜಿ ಹಣಕಾಸು ಇಲಾಖೆ ಕಾರ್ಯದರ್ಶಿಯೂ ಆಗಿದ್ದ ಅವರಿಗೆ ಕಪ್ಪು ಹಣದ ಆಳ ಅಗಲಗಳು ತಿಳಿದಿದ್ದವು. ಕಪ್ಪು ಹಣವನ್ನು ಸರಕಾರಿ ಖಜಾನೆಗೆ ಸೇರಿಸುವುದಷ್ಟೇ ಈ ನಿರ್ಧಾರದ ಹಿಂದಿದ್ದ ಉದ್ಧೇಶವಾಗಿತ್ತು. ಹೀಗಿದ್ದೂ ಕಾಂಗ್ರೆಸ್ ಪಕ್ಷದ ‘ಗುಪ್ತ ನಿಧಿ’ಗಳನ್ನು ಬಂದ್ ಮಾಡಲು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿತ್ತು.

ಅವತ್ತು ಆರ್.ಬಿ.ಐ ಗವರ್ನರ್ ಆಗಿದ್ದ ಐ.ಜಿ ಪಟೇಲ್ ಮೊರಾರ್ಜಿಗೆ ತಮ್ಮ ಬೆಂಬಲ ನೀಡಿರಲಿಲ್ಲ. ಆದರೆ ಇವತ್ತು ಉರ್ಜಿತ್ ಪಟೇಲ್ ಮಾತ್ರ ಪ್ರಧಾನಿ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದಾರೆ.

ತನ್ನ ಯೋಜನೆ ಜಾರಿಗೆ ತರಲು ಮೊರಾರ್ಜಿ ದೇಸಾಯಿ ‘ಹೈ ಡೆನಾಮಿನೇಷನ್ ಬ್ಯಾಂಕ್ ನೋಟ್ಸ್ (ಡಿಮೊನಟೈಸೇಷನ್) ಆಕ್ಟ್-1978’ ಜಾರಿಗೆ ತಂದರು. ಈ ಕಾಯಿದೆ ಪ್ರಕಾರ ಹೆಚ್ಚಿನ ಮುಖಬೆಲೆಯ ಹಣವನ್ನು ವರ್ಗಾವಣೆ ಮಾಡುವುದು ಮತ್ತು ಪಡೆಯುವುದು ಅಪರಾಧವಾಗಿತ್ತು. ಸುಳ್ಳು ಘೋಷಣೆಗಳನ್ನು ಮಾಡುವ ಧನಿಕರನ್ನು ಶಿಕ್ಷೆಗೆ ಒಳಪಡಿಸುವ ಅವಕಾಶ ಈ ಕಾಯಿದೆಯಲ್ಲಿತ್ತು. ಅಂಥಹವರನ್ನು ಮೂರು ವರ್ಷ ಜೈಲಿಗೂ ಕಳುಹಿಸಬಹುದಾಗಿತ್ತು.

ಸುಮಾರು 20 ವರ್ಷಗಳ ಕಾಲ ಈ ಕಾಯಿದೆ ಹಾಗೆಯೇ ಇತ್ತು.  1998ರಲ್ಲಿ ಅಧಿಕಾರಕ್ಕೆ ಬಂದ ಎನ್.ಡಿ.ಎ ಈ ಕಾಯಿದೆಯನ್ನು ಹಿಂದಕ್ಕೆ ತೆಗೆದುಕೊಂಡು ಮತ್ತೆ 1,000 ಮುಖಬೆಲೆಯ ನೋಟುಗಳನ್ನೆಲ್ಲಾ ಪರಿಚಯಿಸಿತು.

ಮೊರಾರ್ಜಿ ನಿರ್ಧಾರದಿಂದ ಜನ ಸಾಮಾನ್ಯರಿಗೇನಾಯಿತು?

ಇವತ್ತಿನಂತೆ ಅವತ್ಯಾರೂ ಹೆಚ್ಚಿನ ಮುಖಬೆಲೆಯ ನೋಟುಗಳನ್ನು ಇಟ್ಟುಕೊಂಡಿರಲಿಲ್ಲ. ಇದರಿಂದ ಜನ ಸಾಮಾನ್ಯರಿಗೆ ಅಂಥಹ ಯಾವುದೇ ಪರಿಣಾಮಗಳೂ ಬೀರಲಿಲ್ಲ.  ಈ ನಿರ್ಧಾರದಿಂಧ ವಾರದೊಳಗೆ ಚಿನ್ನ ಮತ್ತು ಸ್ಥಿರಾಸ್ತಿಗಳ ಮೌಲ್ಯ ಮಾತ್ರ ಶೇಕಡಾ 5 ರಿಂದ 10 ರಷ್ಟು ಕುಸಿದು ಹೋಯಿತು.

ಕಪ್ಪು ಹಣದ ವಿಚಾರಕ್ಕೆ ಬಂದಾಗ ಮೊರಾರ್ಜಿಯ ಈ ನಿರ್ಧಾರ ನಿಷ್ಪ್ರಯೋಜಕವಾಗಿತ್ತು ಎನ್ನುತ್ತಾರೆ ‘ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸಿಟ್ಯೂಟ್’ನ ಫ್ರೊಫೆಸರ್ ಅಭಿರೂಪ್ ಸರ್ಕಾರ್. ಇದರಿಂದ ಕಪ್ಪು ಹಣದ ಚಲಾವಣೆಗೆ ಹೆಚ್ಚಿನ ತೊಂದರೆಯೇನೂ ಆಗಲಿಲ್ಲ ಎಂಬುದು ಅವರ ಅಭಿಪ್ರಾಯ.

ಆದರೆ "ಕೆಲವು ದೊಡ್ಡ ಮೊತ್ತದ ಕಫ್ಪು ಹಣ ಇದ್ದವರಿಗೆ ಇದು ಸಮಸ್ಯೆ ತಂದಿದ್ದು ನಿಜ. ಅವತ್ತು ಕಪ್ಪು ಕುಳಗಳು ಜನ ಸಾಮಾನ್ಯರಿಗೆ 1,000 ರೂಪಾಯಿಯ ನೋಟುಗಳನ್ನು 300 ರೂಪಾಯಿಗಿಂತ ಕಡಿಮೆ ದರಕ್ಕೆ ಮುಂಬೈ ಬೀದಿಗಳಲ್ಲಿ ಮಾರುತ್ತಿದ್ದರು," ಎನ್ನುತ್ತಾರೆ ವಕೀಲ ಅನಿಲ್ ಹರೀಶ್.

ನೋಟು ಬದಲಾವಣೆಯ ಪ್ರಮುಖ ಘಟ್ಟಗಳು:

 1. ದೊಡ್ಡ ಮೊತ್ತದ ಮುಖಬೆಲೆಯ ಅಂದರೆ ರೂಪಾಯಿ 500 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳು ಮೊದಲ ಬಾರಿಗೆ 1934ರಲ್ಲಿ ಭಾರತದಲ್ಲಿ ಕಾರ್ಯರೂಪಕ್ಕೆ ಬಂತು.

 2. 10,000 ಮುಖಬೆಲೆಯ ನೋಟನ್ನು ರಿಸರ್ವ್ ಬ್ಯಾಂಕ್ 1938ರಲ್ಲಿ ಪ್ರಿಂಟ್ ಮಾಡಿತು.


 3. 1,000 ಕ್ಕಿಂತ ಹೆಚ್ಚಿನ ಬೆಲೆಯ ನೋಟುಗಳನ್ನು 1946ರಲ್ಲಿ ರದ್ದು ಮಾಡಲಾಯಿತು. ಇದು ಭಾರತದ ಇತಿಹಾಸದಲ್ಲಿ ನೋಟಿನ ಚಲಾವಣೆ ಮೇಲೆ ನಿಷೇಧ ಹೇರಿದ ಮೊದಲ ಘಟನೆ.


 4. 1949ರಲ್ಲಿ ಮತ್ತೆ ದೊಡ್ಡ ಮೊತ್ತದ ನೋಟುಗಳು ಚಲಾವಣೆಗೆ ಬಂದವು.


 5. ಎರಡನೇ ಹಣ ಬದಲಾವಣೆಯ ನಿರ್ಧಾರವನ್ನು 1978ರಲ್ಲಿ ಮೊರಾರ್ಜಿ ದೇಸಾಯಿ ತೆಗೆದುಕೊಂಡರು. ಅವತ್ತು 1,000, 5,000, 10,000 ಬೆಲೆಯ ನೋಟುಗಳ ಚಲಾವಣೆಯನ್ನು ನಿಷೇಧಿಸಲಾಯಿತು.


 6. 1998ರಲ್ಲಿ ಹೆಚ್ಚಿನ ಬೆಲೆಯ ನೋಟುಗಳು ಜನ ಸಾಮಾನ್ಯರ ಕೈ ತಲುಪಲು ಆರಂಭವಾದವು. ಎನ್.ಡಿ.ಎ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿತ್ತು.

ಇಂದಿರಾಗಾಂಧಿಯಿಂದ 'ರೂಪಾಯಿ' ಅಪಮೌಲ್ಯ!


    ಪ್ರಧಾನಿಯಾಗಿ ಇಂದಿರಾ ಗಾಂಧಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು
ಪ್ರಧಾನಿಯಾಗಿ ಇಂದಿರಾ ಗಾಂಧಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು

ಆರ್ಥಿಕ ಸುಧಾರಣೆಗಳಿಗೆ ಬಂದಾಗ ಇಂದಿರಾ ಗಾಂಧಿ ನಡೆಸಿದ ಹಣದ ಅಪಮೌಲ್ಯೀಕರಣವೂ ಮುಖ್ಯವಾಗುತ್ತದೆ. ಅರ್ಧ ಶತಮಾನಗಳ ಹಿಂದೆ ಅಂದರೆ 06/06/1966 ರಂದು ಭಾರತೀಯ ಅರ್ಥ ಶಾಸ್ತ್ರ ಚರಿತ್ರೆಯಲ್ಲಿ ಮಹತ್ವದ ನಿರ್ಧಾರ ಹೊರ ಬಿದ್ದ ದಿನ. 1966 ಜನವರಿ 11ರಂದು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ನಿಧರಾಗುತ್ತಿದ್ದಂತೆ ಆ ಸ್ಥಾನಕ್ಕೆ ಬಂದವರು ಇಂದಿರಾ ಗಾಂಧಿ. ಆ ವರ್ಷ ದೇಶದೆಲ್ಲೆಡೆ ಬರಗಾಲ ಆವರಿಸಿಕೊಂಡು ಆಹಾರವನ್ನು ಹೊರದೇಶಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಭಾರತದ ರಫ್ತು1,264 ಕೋಟಿ ರೂಪಾಯಿಗೆ ಕುಸಿದು, ಆಮದು 2,194 ಕೋಟಿ ಇತ್ತು. ಭಾರತದ ಬಳಿ 930 ಕೋಟಿಗಳ ಋಣಾತ್ಮಕ ವಿದೇಶಿ ವಿನಿಮಯದ ಹೊರೆ ಬಿದ್ದಿತ್ತು. ಕೊನೆಗೆ ವಿಶೇಷ ಒಪ್ಪಂದದ ಮೂಲಕ ನಮ್ಮದೇ ಕರೆನ್ಸಿ ನೋಟುಗಳನ್ನು ನೀಡಿ ಅಮೆರಿಕಾದ ಬಳಿ ನಾವು ಆಹಾರವನ್ನು ಆಮದು ಮಾಡಿಕೊಂಡೆವು.

ಆದರೆ ಮುಂದೆಯೂ ಇದೇ ರೀತಿ ಆಮದು ಮಾಡಿಕೊಳ್ಳಲು ಸಾಧ್ಯವಿರಲಿಲ್ಲ. ಇದಕ್ಕೆ ಬೇರೇನಾದರು ದಾರಿ ಕಂಡುಕೊಳ್ಳಲೇ ಬೇಕಿತ್ತು. ಆಗ ಇಂದಿರಾ ಗಾಂಧಿ ಕಂಡುಕೊಂಡ ದಾರಿಯೇ ಹಣದ ಅಪಮೌಲ್ಯೀಕರಣ. ಜುಲೈ 5ರ ಸಂಜೆ ಇಂದಿರಾ ಗಾಂಧಿ ಈ ಘೋಷಣೆ ಹೊರಡಿಸಿದರು. ರೂಪಾಯಿ ಎದುರು ಡಾಲರ್ ಮೌಲ್ಯವನ್ನು ಶೇಕಡಾ 57.4ರಷ್ಟು (ರೂಪಾಯಿ 4.76 ರಿಂದ 7.5ಕ್ಕೆ ಹೆಚ್ಚಳ) ಹೆಚ್ಚಿಸಿದ ಪ್ರಧಾನಿ ಗಾಂಧಿ, ಹಣದ ಮೌಲ್ಯವನ್ನು ಶೇಕಡಾ 36.5 ರಷ್ಟು ಕಡಿತಗೊಳಿಸಿದರು. ಇದಕ್ಕೆ ತೀವ್ರ ವಿರೋಧವೂ ವ್ಯಕ್ತವಾಯಿತು. ವಿರೋಧಗಳಾಚೆಗೆ ಇಂದಿರಾ ಗಾಂಧಿಯ ಈ ನೀತಿ ದೊಡ್ಡ ಮಟ್ಟಕ್ಕೆ ಕೆಲಸ ಮಾಡಿತು. ಭಾರತವನ್ನು ತಕ್ಷಣದ ಗಂಡಾಂತರದಿಂದ ದೊಡ್ಡ ಮಟ್ಟಕ್ಕೆ ಪಾರು ಮಾಡಿತು.

ಇದಾದ ನಂತರ ದೊಡ್ಡ ಮಟ್ಟಿನ ಬದಲಾವಣೆಗಳಿಗೆ ನಾಂದಿ ಹಾಡಿದವರು ಪಿ.ವಿ ನರಸಿಂಹರಾವ್.

1991ರ ಆರ್ಥಿಕ ಸುಧಾರಣೆ

ಪಿ.ವಿ ನರಸಿಂಹ ರಾವ್‌ 1991ರಲ್ಲಿ ಪ್ರಧಾನಿಯಾದಾಗ ದೇಶದ ಮುಂದೆ ನಾನಾ ಸವಾಲುಗಳು ಎದ್ದು ನಿಂತಿದ್ದವು. ಮನ್ ಮೋಹನ್ ಸಿಂಗ್ ಎಂಬ ಹಣಕಾಸು ತಜ್ಞರನ್ನು ತಂದು ಅರ್ಥ ಸಚಿವರನ್ನಾಗಿ ಮಾಡಿದ ರಾವ್ ಆರ್ಥಿಕ ಸುಧಾರಣೆಗಳ ಮುನ್ಸೂಚನೆ ನೀಡಿದರು. ಅಲ್ಲಿಂದ ರಾವ್- ಸಿಂಗ್‌ ಜೋಡಿ ದೇಶದ ಮುಂದಿದ್ದ ತೀವ್ರ ವಿತ್ತೀಯ ಕೊರತೆ, ಆಮದು - ರಫ್ತು ಬಾಕಿ ಪಾವತಿ ಸಮಸ್ಯೆ ಇತ್ಯಾದಿಗಳನ್ನು ಸಮರ್ಥವಾಗಿ ನಿಭಾಯಿಸಿ ದೇಶವನ್ನು ದಿವಾಳಿಯ ಅಂಚಿನಿಂದ ಪಾರುಗೊಳಿಸಿದರು. ಇದಕ್ಕಾಗಿ ಅತ್ಯವಶ್ಯವಿದ್ದ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರು.


    1991ರಲ್ಲಿ ವಿತ್ತ ಸಚಿವ ಮನ್ ಮೋಹನ್ ಸಿಂಗ್ ಮತ್ತು ಪ್ರಧಾನಿ ಪಿ.ವಿ ನರಸಿಂಹ ರಾವ್
1991ರಲ್ಲಿ ವಿತ್ತ ಸಚಿವ ಮನ್ ಮೋಹನ್ ಸಿಂಗ್ ಮತ್ತು ಪ್ರಧಾನಿ ಪಿ.ವಿ ನರಸಿಂಹ ರಾವ್

1991ರಲ್ಲಿ ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿತ್ತು. ಸಂಕಷ್ಟದ ಸ್ಥಿತಿಯಲ್ಲಿ ಪಿವಿಎನ್ ನಿರ್ಣಾಯಕ ಪಾತ್ರ ವಹಿಸಿದರು. ಕೇವಲ 90 ದಿನಗಳ ಅಂತರದಲ್ಲಿ, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಅವರು, ಪ್ರಬಲ ವಿರೋಧನ್ನೂ ಲೆಕ್ಕಿಸದೇ ಉದಾರೀಕರಣದ ದಿಟ್ಟ ನೀತಿ ನಿರ್ಧಾರಗಳನ್ನು ತೆಗೆದುಕೊಂಡರು. ಅದರಲ್ಲೂ ಕೇವಲ 4 ದಿನಗಳಲ್ಲಿ (ಜುಲೈ 4, 7, 11 ಮತ್ತು 18) ವಿತ್ತ ಸಚಿವರೊಂದಿಗೆ ಚರ್ಚಿಸಿ ಲಿಕ್ವಿಡಿಟಿ ಬಿಕ್ಕಟ್ಟು ನಿವಾರಣೆಗೆ ದೇಶದ 46.91 ಟನ್ ಚಿನ್ನವನ್ನು 'ಬ್ಯಾಂಕ್ ಆಫ್ ಇಂಗ್ಲೆಂಡ್'ಗೆ ವರ್ಗಾಯಿಸಿ ಅದರಿಂದ ಪರಿಹಾರ ಕಂಡುಕೊಂಡಿದ್ದು ಒಂದು ಮಹಾನ್ ಸಾಧನೆ ಎಂದು ಇವತ್ತಿಗೂ ಗುಣಗಾನ ಮಾಡಲಾಗುತ್ತದೆ.

1991ರಲ್ಲಿ ಮನ್ ಮೋಹನ್ ಸಿಂಗ್ ಐತಿಹಾಸಿಕ ಬಜೆಟ್ ಮಂಡಿಸಿದರು. ಬಜೆಟ್ ಮುಂದಿನ ಎರಡು-ಮೂರು ವರ್ಷಗಳಲ್ಲಿ ಮಾಡಬೇಕಾದ ಕೆಲಸಗಳ ನೀಲನಕ್ಷೆಯಾಗಿತ್ತು ಅದೇ ವರ್ಷ ಕೇವಲ ಸಲಹಾ ಸಮಿತಿಯಾಗಿದ್ದ ಸೆಬಿಗೆ ಕಾನೂನಾತ್ಮಕ ಮಾನ್ಯತೆ ನೀಡಲಾಯಿತು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆಗಾಗಿ ನರಸಿಂಹನ್ ಸಮಿತಿಯನ್ನು ರಚಿಸಲಾಯಿತು. ಬಳಿಕ ತೆರಿಗೆ ಸುಧಾರಣೆಗಳನ್ನು ಪ್ರಕಟಿಸಲಾಯಿತು. ಹೊಸ ವಾಣಿಜ್ಯ ನೀತಿಗಳನ್ನು ಕೇವಲ ಎರಡು ದಿನಗಳಲ್ಲಿ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಪಿ. ಚಿದಂಬರಂ ಅವರ ಸಹಕಾರದೊಂದಿಗೆ ಜಾರಿಗೆ ತರಲಾಯಿತು.

ಹೀಗೆ ದೇಶದ ಅರ್ಥ ಶಾಸ್ತ್ರ ಇತಿಹಾಸದಲ್ಲಿ ಆರ್ಥಿಕ ಸುಧಾರಣೆಗಳು ನಡೆದು ಬಂದಿವೆ. ಇದಕ್ಕೆ ನರೇಂದ್ರ ಮೋದಿಯ ನೋಟು ಬದಲಾವಣೆ ಹೊಸ ಸೇರ್ಪಡೆ ಅಷ್ಟೆ. ಇದು ಆರಂಭವೂ ಅಲ್ಲ ಅಂತಿಮವೂ ಅಲ್ಲ.