ಸುದ್ದಿ ಸಾಗರ

ಕಾಳಧನ, ಕಳ್ಳ ನೋಟು ನಿವಾರಣೆ ಕಾಳಜಿಯೋ? ಗಿಮಿಕ್ಕೋ? ಗೊಂದಲದಲ್ಲಿ ಮೋದಿಯ ‘ಹೊಸ ನೋಟು’!

ಕಾಳ ಧನ ಮತ್ತು ಕಳ್ಳ ನೋಟುಗಳ ಹರಿವು ತಡೆಗೆ ನರೇಂದ್ರ ಮೋದಿ ಸರಕಾರ ಹೊಸ ಕ್ರಮಕ್ಕೆ ಮುಂದಾಗಿದೆ. ನಿನ್ನೆ (ಮಂಗಳವಾರ) ಮಧ್ಯರಾತ್ರಿಯಿಂದ 500 ಮತ್ತು 1000 ಮುಖಬೆಲೆಯ ನೋಟುಗಳ ವ್ಯವಹಾರವನ್ನು ಬಂದ್ ಮಾಡಿದ್ದು ಹೊಸ 500 ಮತ್ತು 2000 ಮುಖಬೆಲೆಯ ನೋಟುಗಳಿಗೆ ಬದಲಾಯಿಸಲು ಆದೇಶ ಹೊರಡಿಸಿದೆ.

ಈ ಹಿಂದೆ ಭಯೋತ್ಪಾದನೆಯಂಥ ದೇಶ ವಿರೋಧಿ ಚಟುವಟಿಕೆಗಳಿಗೆ ಕಳ್ಳ ನೋಟುಗಳ ಮೂಲಕ ಹಣ ಹರಿದು ಹೋಗುತ್ತಿತ್ತು. ಈ ನಿರ್ಧಾರದ ಮೂಲಕ ಶಸ್ತ್ರಾಸ್ತ್ರಗಳ ಕಳ್ಳ ಸಾಗಣೆ, ಗೂಢಚರ್ಯೆ ಮುಂತಾದ ಕೆಲಸಗಳಿಗೆ ಪೂರೈಕೆಯಾಗುತ್ತಿದ್ದ ಹಣದ ಸರಬರಾಜನ್ನು ತಡೆಯಲು ಸಾಧ್ಯವಾಗಲಿದೆ ಎಂದು ಹಣಕಾಸು ಮಂತ್ರಾಲಯ ಕಳುಹಿಸಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಾತ್ರವಲ್ಲ ಇದರಿಂದ ಕಪ್ಪು ಹಣದ ಚಲಾವಣೆಯನ್ನೂ ತಡೆಗಟ್ಟಬಹುದು ಎಂದು ಈ ವರದಿ ಹೇಳುತ್ತಿದೆ.

ಕೇಂದ್ರ ಅರ್ಥ ಸಚಿವಾಲಯ ಹೊರಡಿಸಿರುವ ಪತ್ರಿಕಾ ಹೇಳಿಕೆಯ ಸಾರಾಂಶ ಹೀಗಿದೆ,

 1. ಹಳೆ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಮಂಗಳವಾರಕ್ಕೆ ಅಂತ್ಯ.


 2. ನವೆಂಬರ್ 10 ರಿಂದ ಹೊಸ 500 ಮತ್ತು 2,000 ಮುಖಬೆಲೆಯ ನೋಟುಗಳು ಚಲಾವಣೆಗೆ.


 3. ವಿನ್ಯಾಸ, ಗಾತ್ರ, ನೋಟ, ಬಣ್ಣ ಮತ್ತು ತಂತ್ರಜ್ಞಾನದಲ್ಲಿ ಹಳೆಯ ನೋಟುಗಳಿಗಿಂತ ಹೊಸ ನೋಟುಗಳು ಭಿನ್ನವಾಗಿರಲಿವೆ.


 4. ಜನರು ರಾಷ್ಟ್ರೀಕೃತ ಬ್ಯಾಂಕುಗಳು, ಅಂಚೆ ಕಚೇರಿ ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಚೇರಿಗಳಲ್ಲಿ ಹಳೆಯ ನೋಟುಗಳನ್ನು ನೀಡಿ ಹೊಸ ನೋಟುಗಳನ್ನು ಪಡೆದುಕೊಳ್ಳಬಹುದು.


 5. ಸದ್ಯಕ್ಕೆ ಡಿಸೆಂಬರ್ 30ರವರೆಗೆ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.


 6. ಒಬ್ಬರಿಗೆ ದಿನಕ್ಕೆ 4 ಸಾವಿರ ರೂಪಾಯಿಗಳ ನೋಟುಗಳನ್ನಷ್ಟೇ ಬದಲಾಯಿಸಲು ಮಿತಿ ನಿಗದಿ ಪಡಿಸಿದೆ. 15 ದಿನಗಳ ನಂತರ ಅಗತ್ಯ ಬಿದ್ದಲ್ಲಿ 4,000 ಮಿತಿಯ ಬದಲಾವಣೆ ಮಾಡಲಾಗುತ್ತದೆ. ಹಣ ಬದಲಾವಣೆಗೆ ಯಾವುದಾದರೂ ಅಧಿಕೃತ ಗುರತಿನ ಚೀಟಿ ನೀಡುವುದು ಕಡ್ಡಾಯ.


 7. ಬ್ಯಾಂಕಿನ ಅಕೌಂಟಿಗೆ ಎಷ್ಟು ಬೇಕಾದರೂ ಡೆಪಾಸಿಟ್ ಮಾಡಬಹುದು. ಆದರೆ 50 ಸಾವಿರಕ್ಕಿಂತ ಹೆಚ್ಚಿನ ಹಣ ಜಮೆ ಮಾಡಬೇಕಾದರೆ ಫಾರ್ಮ್ ಒಂದನ್ನು ತುಂಬಿ ಕೊಡಬೇಕು.


 8. ಮೂರನೆಯವರ ಅಕೌಂಟಿಗೆ ಹಣ ಹಾಕಬೇಕಾದರೆ ಅವರು ಸ್ಥಳದಲ್ಲಿ ತಮ್ಮ ಗುರುತಿನ ಚೀಟಿಯೊಂದಿಗೆ ಉಪಸ್ಥಿತರಿರಬೇಕು.


 9. ಮೊದಲ 15 ದಿನ ಅಂದರೆ ಸೆಪ್ಟೆಂಬರ್ 24ರವರೆಗೆ ಕ್ಯಾಶ್ ಕೌಂಟರಿನಿಂದ 10 ಸಾವಿರ ಹಾಗೂ ಒಟ್ಟಾರೆ ವಾರದಲ್ಲಿ 20 ಸಾವಿರ ಡ್ರಾ ಮಾಡಲು ಮಾತ್ರ ಅವಕಾಶವಿದೆ. ನಂತರದ ತೀರ್ಮಾನದ ಬಗ್ಗೆ ಮುಂದಿನ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ.


 10. ಕಾಗದ ರೂಪದ ಹಣ ರಹಿತ ವ್ಯವಹಾರಗಳಾದ ಡಿಮ್ಯಾಂಡ್ ಡ್ರಾಫ್ಟ್, ಚೆಕ್, ಕ್ರೆಡಿಟ್/ಡೆಬಿಟ್ ಕಾರ್ಡ್, ಮೊಬೈಲ್ ವ್ಯಾಲೆಟ್, ಎಲೆಕ್ಟ್ರಾನಕ್ ಹಣ ವರ್ಗಾವಣೆಗಳಿಗೆ ಯಾವುದೇ ನಿಯಂತ್ರಣಗಳಿಲ್ಲ.


 11. ನವೆಂಬರ್ 18ರವರೆಗೆ ಪ್ರತೀ ಕಾರ್ಡಿನಿಂದ ದಿನವೊಂದಕ್ಕೆ ‘ಎಟಿಎಂ’ಗಳಲ್ಲಿ 2,000 ಹಣ ತೆಗೆಯಲು ಮಾತ್ರ ಅವಕಾಶ. ನವೆಂಬರ್ 19 ರಿಂದ 4 ಸಾವಿರದವರೆಗೆ ಡ್ರಾ ಮಾಡಬಹುದು.


 12. ಒಂದೊಮ್ಮೆ ಡಿಸೆಂಬರ್ 30ರವರೆಗೆ ಹಣವನ್ನು ಬದಲಾಯಿಸಕೊಳ್ಳಲು ಸಾಧ್ಯವಾಗದೇ ಹೋದಲ್ಲಿ, ಸೂಕ್ತ ದಾಖಲೆಗಳನ್ನು ಸಲ್ಲಿಸಿ ಮುಂದೆಯೂ ಬದಲಾಯಿಸಿಕೊಳ್ಳಬಹುದು.


 13. ಇದೇ ಬುಧವಾರ ಮತ್ತು ಗುರುವಾರ ಎಲ್ಲಾ ಎಟಿಎಂಗಳು ಕಾರ್ಯನಿರ್ವಹಿಸುವುದಿಲ್ಲ. ಇನ್ನು ಬ್ಯಾಂಕಿಗೂ ಬುಧವಾರ ರಜೆ ನೀಡಲಾಗಿದೆ. ಹಣ ಬದಲಾವಣೆ ವ್ಯವಹಾರಗಳು ಗುರುವಾರದಿಂದ ಆರಂಭವಾಗುತ್ತವೆ.


 14. ಮೊದಲ 72 ಗಂಟೆಗಳ ಕಾಲ ಹಳೆಯ ನೋಟುಗಳನ್ನು ಸರಕಾರಿ ಆಸ್ಪತ್ರೆ, ಫಾರ್ಮಸಿ, ವಿಮಾನ, ರೈಲ್ವೇ, ಸರಕಾರಿ ಬಸ್ಸು ಮತ್ತು ಸಾರ್ವಜನಿಕ ಬಸ್ಸುಗಳಲ್ಲಿ ಟಿಕೆಟ್ ಪಡೆಯಲು ಬಳಸಲು ಅವಕಾಶ ನೀಡಲಾಗಿದೆ. ಗ್ರಾಹಕ ಸಹಕಾರ ಸಂಘಗಳು, ಹಾಲಿನ ಬೂತುಗಳು, ಸ್ಮಶಾನ, ಸಾರ್ವಜನಿಕ ವಲಯದ ಪೆಟ್ರೋಲ್, ಡೀಸೆಲ್, ಗ್ಯಾಸ್ ಸ್ಟೇಷನ್ ಗಳಲ್ಲಿ ಪಡೆದುಕೊಳ್ಳಬಹುದು. ಇದಲ್ಲದೇ ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಮತ್ತು ವಿದೇಶಗಳಿಗೆ ಪ್ರಯಾಣ ಬೆಳಸುವವರಿಗೂ ಹಳೆಯ ನೋಟುಗಳನ್ನು ಬಳಸುವ ವಿಶೇಷ ಅವಕಾಶವಿದೆ. ಇನ್ನು ವಿದೇಶಿ ಪ್ರವಾಸಿಗರಿಗೂ ವಿದೇಶದ ಕರೆನ್ಸಿ ನೀಡಿ ಹೊಸ ನೋಟಿನೊಂದಿಗೆ ನಿಗದಿತ ಮೊತ್ತವನ್ನು ಬದಲಾಯಿಸಲು ಅವಕಾಶವಿದೆ.


ಕಪ್ಪು ಹಣದ ಹರಿವನ್ನು ನಿಯಂತ್ರಿಸಲು ಸಾರ್ವಜನಿಕರಿಗೆ ಕನಿಷ್ಟ ತೊಂದರೆಯನ್ನು ಗಮನದಲ್ಲಿದರಿಸಿಕೊಂಡು ಈ ಯೋಜನೆ ಜಾರಿಗೊಳಿಸುತ್ತಿರುವುದಾಗಿ ಸರಕಾರ ಹೇಳಿಕೊಂಡಿದೆ. ಆದರೆ ವಾಸ್ತವದಲ್ಲಿ ಬುಧವಾರ ದೇಶದ ಹಲವು ವ್ಯವಹಾರಗಳೇ ಸ್ಥಗಿತಗೊಂಡಿದೆ.

ತೊಂದರೆಯಲ್ಲಿ ಸಾಮಾನ್ಯ ಜನ:

 1. ಹಾಲಿನ ಬೂತುಗಳಲ್ಲಿ ಹಣ ಸ್ವೀಕರಿಸುವಂತೆ ಸರಕಾರ ಹೇಳಿದ್ದರೂ ಬೂತು ಮಾಲಿಕರು ಸ್ವೀಕರಿಸಲು ಮುಂದೆ ಬರುತ್ತಿಲ್ಲ. ಹೀಗಾಗಿ ಸಾವಿರ, ಐನೂರರ ನೋಟಿದ್ದವರು ಹಾಲು ಖರೀದಿಸಲಾಗದ ಅನುಭವಗಳನ್ನು ಹಂಚಿಕೊಂಡಿದ್ದಾರೆ.


 2. ಇನ್ನು ಆಸ್ಪತ್ರೆಗಳಲ್ಲಿ ಶುಕ್ರವಾರದವರೆಗೆ ಹಳೆ ನೋಟು ಚಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಮುಂದೆ ಯಾವುದೇ ಪಾವತಿಗಳನ್ನು ಮಾಡಬೇಕಿದ್ದರೂ ಒಂದೋ ಅಕೌಂಟಿಗೆ ಡೆಪಾಸಿಟ್ ಮಾಡಬೇಕು. ಇಲ್ಲದಿದ್ದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಬದಲಾವಣೆ ಮಾಡಿಕೊಂಡರೆ ದೊಡ್ಡ ಮೊತ್ತ ಪಡೆಯುವುದು ಅಸಾಧ್ಯವಾಗಲಿದೆ.


 3. ಸದ್ಯ ಚಿಲ್ಲರೆ ಹಣವಿಲ್ಲದೆ ಹಲವರು ಎರಡು ದಿನ ಪರಿತಪಿಸಲೇಬೇಕಾಗಿದೆ. ಗುರುವಾರ ಬ್ಯಾಂಕ್ ಓಪನ್ ಆದರೂ ಎಲ್ಲರೂ ಹಣ ಬದಲಾವಣೆಗೆ ಮುಗಿ ಬೀಳುವುದರಿಂದ ಬಹುಶಃ ಪ್ರತಿಯೊಬ್ಬರೂ ಹಣ ಬದಲಾಯಿಸಿಕೊಳ್ಳುವುದು ಕಷ್ಟವಾಗಬಹುದು.

ಮೋದಿ ಸರಕಾರದ ಹೊಸ 'ಗಿಮಿಕ್'?

ನರೇಂದ್ರ ಮೋದಿ ಸರಕಾರ ಇಂಥಹದ್ದೊಂದು ನಿರ್ಧಾರಕ್ಕೆ ಬರುತ್ತಿದ್ದಂತೆ ಹಲವು ಪರ ವಿರೋಧ ಪ್ರತಿಕ್ರಿಯೆಗಳು ಬಂದಿವೆ. ನರೇಂದ್ರ ಮೋದಿ ಸರಕಾರದ ನಿರ್ಧಾರವನ್ನು ಅವರ ಅಭಿಮಾನಿಗಳು ಕಾಳಧನದ ವಿರುದ್ಧ ಮೋದಿ ಹೂಡಿದ ಮಹಾ ಸಮರ ಎಂದು ವಿಶ್ಲೇಷಣೆ ಮಾಡುತ್ತಿದ್ದಾರೆ.

ಆದರೆ ಇನ್ನೊಂದು ವರ್ಗ ಇದೊಂದು ಬಾಲಿಶ ನಿರ್ಧಾರ; ಜನ ಸಾಮಾನ್ಯರಿಗೆ ತೊಂದರೆ ಕೊಡುವ ಕ್ರಮವಷ್ಟೇ ಎಂದು ಹೇಳುತ್ತಿದ್ದಾರೆ. ಮಾತ್ರವಲ್ಲ ಇದೊಂದು ಗಿಮಿಕ್ ಎನ್ನುವ ಪ್ರತಿಕ್ರಿಯೆಗಳೂ ಬಂದಿವೆ. ಜನರು ಬ್ಯಾಂಕುಗಳಲ್ಲಿ ಹಣ ಬದಲಾವಣೆ ಮಾಡಿಕೊಂಡಿದ್ದನ್ನೇ ಸರಕಾರ ಕಪ್ಪು ಹಣ ಬಿಳಿಯಾಯಿತು ಎಂದು ವಾದಿಸುತ್ತದೆ. ಹೀಗೆ ದೇಶದ ನೂರಮೂವತ್ತು ಕೋಟಿ ಜನರು ತಮ್ಮಲ್ಲಿದ್ದ ಕನಿಷ್ಠ ಸಾವಿರ ರೂಪಾಯಿಯನ್ನು ಬ್ಯಾಂಕಿನಲ್ಲಿ ಬದಲಾವಣೆ ಮಾಡಿ ಬಂದರೆ ಅನಧಿಕೃತವಾಗಿ ಕೂಡಿಟ್ಟ ಒಂದು ಲಕ್ಷ ಮೂವತ್ತು ಸಾವಿರ ಕೋಟಿ ರೂಪಾಯಿ(1,30,000.00) ಕಪ್ಪು ಹಣ ಬದಲಾವಣೆ ಮಾಡಿದಂತಾಗುತ್ತದೆ. ಆದರೆ ವಾಸ್ತವದಲ್ಲಿ ಒಂದು ರೂಪಾಯಿ ಕಪ್ಪು ಹಣವೂ ಬಿಳಿಯಾಗುದಿಲ್ಲ. ಇದರಿಂದ ಸರಕಾರಕ್ಕಾಗಲಿ ಜನರಿಗಾಗಲಿ ಯಾವುದೇ ಲಾಭವಿರುದಿಲ್ಲ. ಆದರೆ ಪೊಳ್ಳು ಪ್ರಚಾರ ಗಿಟ್ಟಿಸಬಹುದು ಅಷ್ಟೇ ಎನ್ನುತ್ತಿದ್ದಾರೆ.

ಇನ್ನು ದೇಶದಲ್ಲಿ ಕಪ್ಪು ಹಣವನ್ನು ಮನೆಯಲ್ಲಿ ಇಟ್ಟು ಕೊಳ್ಳುವುದು ಕಡಿಮೆ ಎಂಬ ಮಾತೂ ಕೇಳಿ ಬರುತ್ತಿದೆ. ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ತಮ್ಮಲ್ಲಿರುವ ಕಪ್ಪು ಹಣವನ್ನು ಇತರ ಉದ್ದಿಮೆಗಳಲ್ಲಿ ಅಥವಾ ರಿಯಲ್ ಎಸ್ಟೇಟ್ ದಂಧೆಯಲ್ಲಿ ಹೂಡಿಕೆ ಮಾಡಿರುತ್ತಾರೆ. ಯಾರೂ ನೋಟುಗಳ ರೂಪದಲ್ಲಿ ಹಣವಿರಿಸಿಕೊಳ್ಳುವುದಿಲ್ಲ.

ಇದೆಲ್ಲದರ ಜತೆಗೆ ಹಣ ಬದಲಾಯಿಸಿಕೊಳ್ಳಲು ಸರಕಾರ ಐವತ್ತು ದಿವಸ ಕಾಲಾವಕಾಶ ನೀಡಿದೆ. ಈ ಅವಧಿಯಲ್ಲಿ ಕಳ್ಳ ದಾರಿಗಳ ಮೂಲಕ ಕಪ್ಪು ಹಣ ಬಿಳಿ ಮಾಡಿಕೊಡುವ ಒಂದು ದೊಡ್ಡ ಜಾಲವೇ ಹುಟ್ಟಿಕೊಳ್ಳಬಹುದು ಎಂಬ ಅನುಮಾನಗಳನ್ನೂ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆಂದೇ ಮಠಗಳು, ಮಂದಿರಗಳು ಈಗಾಗಲೇ ರಾಜಕಾರಣಿಗಳು ಉದ್ಯಮಿಗಳ ಕೂಗಳೆತೆಯಲ್ಲಿದೆ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ.

ಜತೆಗೆ ದೇಶದ ಭವಿಷ್ಯದಲ್ಲಿ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂಬ ಅಭಿಪ್ರಾಯಗಳನ್ನೂ ಒಂದಷ್ಟು ಆರ್ಥಿಕ ತಜ್ಞರು ಹಂಚಿಕೊಂಡಿದ್ದಾರೆ.

ಆದರೆ ನರೇಂದ್ರ ಮೋದಿಯ ಈ ಅವಸರದ ಮತ್ತು ಅಚ್ಚರಿಯ ನಿರ್ಧಾರ ಯಾವೆಲ್ಲಾ ಪರಿಣಾಮಗಳನ್ನು ಸೃಷ್ಟಿ ಮಾಡಲಿದೆ ಎಂಬುದಕ್ಕೆ ಇನ್ನೂ ಒಂದಷ್ಟು ದಿನ ಕಾಯಬೇಕಷ್ಟೆ.

ದೇಶದ ಹಣಕಾಸು ಇತಿಹಾಸದಲ್ಲಿ ಇದೊಂದು ಮಹತ್ವದ ನಿರ್ಧಾರ. ಇದು ದೀರ್ಘ ಪರಿಣಾಮಗಳನ್ನು ಸೃಷ್ಟಿಸಲಿದೆ. ಅಂದಾಜು ಪ್ರಕಾರ 8-10 ಲಕ್ಷ ಕೋಟಿ ಹಣ ಸರಕಾರದ ಬೊಕ್ಕಸಕ್ಕೆ ಹರಿದು ಬರಲಿದೆ. ಅದರಲ್ಲೂ ಪ್ರಾಪರ್ಟಿಗಳ ಬೆಲೆಯಲ್ಲಿ ಕನಿಷ್ಠ ಶೇಕಡಾ 20 ಕುಸಿತ ಕಾಣಲಿದೆ. ಚಿಟ್ ಫಂಡ್ಗಳು ಕೊನೆಯಾದರೂ ಅಚ್ಚರಿ ಇಲ್ಲ. ಚಿನ್ನದ ಬೆಲಯಲ್ಲಿ ಇಳಿಕೆಯಾಗಲಿದೆ. ಇಲ್ಲೆಲ್ಲಾ ಹಿಂದಿನಿಂದಲೂ ಕಪ್ಪು ಹಣವೇ ಬಳಕೆಯಾಗುತ್ತಿತ್ತು. ಇವತ್ತು ಚಿನ್ನದ ಬೆಲೆ ಏರಿದ್ದು ಅಮೆರಿಕಾ ಚುನಾವಣೆಯ ಕಾರಣಕ್ಕೇ ಹೊರತು ನೋಟ್ ಬ್ಯಾನಿನಿಂದ ಅಲ್ಲ.

ಈ ನಿರ್ಧಾರದಿಂದ ಕಪ್ಪುಹಣ ಇಟ್ಟುಕೊಂಡವರು ನಿಜವಾಗಿಯೂ ಸಮಸ್ಯೆಗೆ ಸಿಲುಕಲಿದ್ದಾರೆ. ಸ್ಥರಾಸ್ತಿಗಳ ರೂಪದಲ್ಲಿ ಬ್ಲಾಕ್ ಮನಿ ಇದ್ದವರು ಮಾತ್ರ ಸ್ವಲ್ಪ ಬಚಾವಾಗಬಹುದು. ಮುಖ್ಯವಾಗಿ ಚುನಾವಣೆಗಳ ಮೇಲೆ ಮಹತ್ವದ ಪರಿಣಾಮ ಬೀರಲಿದೆ. ಕಪ್ಪು ಹಣ ಹಂಚುವುದು ಕಷ್ಟವಾಗಲಿದೆ. ಸಾಮಾನ್ಯ ಜನಕ್ಕೆ ಇದರಿಂದ ಏನೂ ತೊಂದರೆ ಇಲ್ಲ. ಕೆಲವು ಬ್ಯಾಂಕುಗಳು ಬುಧವಾರದಿಂದಲೇ ಹಣ ಬದಲು ಮಾಡಿಕೊಡುತ್ತಿದ್ದಾರೆ. ಡ್ರಾ ಮಾಡಲು ಆಗದಿದ್ದಲ್ಲಿ ಸಮಸ್ಯೆ ಏನಿಲ್ಲ. ದೊಡ್ಡ ಮೊತ್ತ ಕೊಡಬೇಕಾದರೆ ಚೆಕ್, ಕಾರ್ಡ್ ಸ್ವೈಪ್ ಮಾಡಬಹುದು. ಮುಂದಿನ ದಿನಗಳಲ್ಲಿ ದೇಶದಲ್ಲಿ ಟ್ಯಾಕ್ಸ್ ಕಟ್ಟುವವರ ಸಂಖ್ಯೆ ಜಾಸ್ತಿಯಾಗಿ ಟ್ಯಾಕ್ಸ್ ಹೊರೆ ಕಡಿಮೆಯಾಗಲಿದೆ. ಇದೊಂದು ಸೂಕ್ಷ್ಮ, ಪಕ್ಕಾ ಯೋಜನಾಬದ್ಧ ನಿರ್ಧಾರ. ವರ್ಷಕ್ಕೂ ಹಿಂದೆಯೇ ಇಂಥಹದ್ದೊಂದು ಯೋಜನೆ ತಯಾರಿಯಾಗಿ ಈಗ ಜಾರಿಗೆ ತಂದಿದ್ದಾರೆ. - ಸುಧೀರ್, ಇಂಡಿಯನ್ ಮನಿ ಡಾಟ್ ಕಾಂ