samachara
www.samachara.com
ರಾಘವೇಶ್ವರ ಸ್ವಾಮಿ ರಕ್ಷಣೆಗೆ 'ವಾರೆಂಟ್' ಬಳಕೆ: ದಲಿತ ಮುಖಂಡನ ಬಂಧನ ಗುರುವಾರವೇ ಯಾಕಾಯ್ತು?
ಸುದ್ದಿ ಸಾಗರ

ರಾಘವೇಶ್ವರ ಸ್ವಾಮಿ ರಕ್ಷಣೆಗೆ 'ವಾರೆಂಟ್' ಬಳಕೆ: ದಲಿತ ಮುಖಂಡನ ಬಂಧನ ಗುರುವಾರವೇ ಯಾಕಾಯ್ತು?

ಶಿವಮೊಗ್ಗ

ಜಿಲ್ಲೆ ಸಾಗರ ತಾಲೂಕಿನಲ್ಲಿ ಗುರುವಾರ ಸಂಜೆ ನಡದ ಬೆಳವಣಿಗೆಗಳು ಅಚ್ಚರಿಗೆ ಕಾರಣವಾಗಿವೆ.

ತಾಲೂಕಿನ ಡಿಎಸ್ಎಸ್ ಮುಖಂಡ ಹಾಗೂ ಚಳವಳಿಗಳ ಜತೆ ಗುರುತಿಸಿಕೊಂಡಿದ್ದ ಪರಮೇಶ್ವರ ದೂಗೂರು ಅವರನ್ನ ಸಾಗರ ಗ್ರಾಮಾಂತರ ಪೋಲಿಸರು ನ್ಯಾಯಾಲಯದ ಆದೇಶದ ಮೇರೆಗೆ ಬಂಧಿಸಿದ್ದಾರೆ. ಶುಕ್ರವಾರ ನಡೆಯಲಿರುವ ಸಾಗರದ ಹೆಗ್ಗೊಡಿನ ವಿದ್ಯಾಭಿವೃದ್ಧಿ ಸಂಘ ಪ್ರೌಢಶಾಲೆಯ ಸುವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮಿ ಅತಿಥಿಯಾಗಿ ಭಾಗವಹಿಸುತ್ತಿದ್ದಾರೆ. ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದವರು ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳುವುದಕ್ಕೆ ರಾಘವೇಶ್ವರ ಶ್ರೀ ವಿರುದ್ಧ ಇರುವ ಸಮುದಾಯದಿಂದ ವಿರೋಧ ವ್ಯಕ್ತವಾಗಿತ್ತು. 'ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾಮಿ ಪಾಲ್ಗೊಳ್ಳದಂತೆ ನಿರ್ಬಂಧ ಹೇರಬೇಕು ಎಂದು ಒತ್ತಾಯಿಸಿ ಕೆಲವರು ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿಯನ್ನೂ ಸಲ್ಲಿಸಿದ್ದರು.

ಈ ಸಂದರ್ಭ ಮಾತನಾಡಿದ್ದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು "ಒಂದು ನ್ಯಾಯಾಲಯದಲ್ಲಿ ರಾಘವೇಶ್ವರ ಸ್ವಾಮಿಗಳು ಆರೋಪದಿಂದ ಮುಕ್ತರಾಗಿದ್ದೇವೆ ಎಂದು ಬೀಗುತ್ತಿದ್ದಾರೆ. ಪ್ರಕರಣದ ವಿಚಾರಣೆಯನ್ನು ರಾಜ್ಯ ಸರ್ಕಾರ ಹೈಕೋರ್ಟ್‌, ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದೆ. ಇನ್ನೂ ರಾಘವೇಶ್ವರ ಸ್ವಾಮಿಗಳು ಪೂರ್ಣದೋಷಮುಕ್ತರಾಗಿಲ್ಲ. ಯಾವುದೇ ಕಾರಣಕ್ಕೂ ವಿದ್ಯಾಭಿವೃದ್ಧಿ ಸಂಘದ ಕಾರ್ಯಕ್ರಮದಲ್ಲಿ ರಾಘವೇಶ್ವರ ಸ್ವಾಮಿಗಳು ವೇದಿಕೆ ಏರಲು ನಾವು ಬಿಡುವುದಿಲ್ಲ," ಎಂದು ಎಚ್ಚರಿಕೆ ನೀಡಿದ್ದರು. ಇದು ಅಕ್ಟೋಬರ್ 30ರ ಉದಯವಾಣಿ ಪತ್ರಿಕೆಯಲ್ಲಿ ವರದಿಯೂ ಆಗಿದೆ.

ಇದೀಗ ಕಾರ್ಯಕ್ರಮದ ಸಂದರ್ಭ ಪರಮೇಶ್ವರ್ ದೂಗೂರು ನೇತೃತ್ವದಲ್ಲಿ ರಾಘವೇಶ್ವರ ಶ್ರೀ ವಿರುದ್ಧ ಇರುವ ಹವ್ಯಕರ ದೊಡ್ಡ ಸಮೂಹ  ಪ್ರತಿಭಟನೆ ನಡೆಸಬಹುದು ಎಂಬುದು ಅವರ ಬಂಧನಕ್ಕೆ ಕಾರಣ ಎಂಬ ಮಾತುಗಳು ಸ್ಥಳೀಯ ಮಟ್ಟದಲ್ಲಿ ಕೇಳಿ ಬರುತ್ತಿವೆ.

ಹಿನ್ನೆಲೆ:

ಪರಮೇಶ್ವರ್ ದೂಗೂರು ಹಿಂದಿನಿಂದಲೂ ಇದೇ ರಾಘವೇಶ್ವರ ಸ್ವಾಮಿಯ ವಿರುದ್ಧ ಪ್ರತಿಭಟನೆ ನಡೆಸುತ್ತಾ ಬಂದಿದ್ದದವರು. 2014 ಡಿಸೆಂಬರ್ 29ರಂದು ತಮ್ಮ ಪರ ಇರುವ ಬಣದವರ ಸಭೆಯನ್ನು ಇದೇ ರಾಘವೇಶ್ವರ ಸ್ವಾಮಿ ನಡೆಸುತ್ತಿದ್ದಾಗ ಪರಮೇಶ್ವರ ದೂಗೂರು ಅಲ್ಲಿಗೆ ಕಪ್ಪು ಬಾವುಟ ಹಿಡಿದು ತೆರಳಿದ್ದರು. ಈ ಸಂದರ್ಭ ರಾಘವೇಶ್ವರ ಬೆಂಬಲಿಗರು ಮತ್ತು ಪರಮೇಶ್ವರ ದೂಗೂರು ನಡುವೆ ಜಗಳಗಳಾಗಿ ಹಲ್ಲೆಯಲ್ಲಿ ಪರ್ಯಾವಸನ ಕಂಡಿತ್ತು. ನಂತರ ದೂಗೂರು ಹಾಗೂ ರಾಘವೇಶ್ವರ ಬೆಂಬಲಿಗರು ಇಬ್ಬರ ಮೇಲೆಯೂ ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ದೂಗೂರು ಜೈಲಿಗೂ ಹೋಗಿ ಜಾಮೀನು ಪಡೆದು ಹೊರ ಬಂದಿದ್ದರು. ಆದರೆ 2009ರ ಪ್ರಕರಣವೊಂದರಲ್ಲಿ (ಕೇಸ್ ಸಂಖ್ಯೆ 313/2009) ವಿಚಾರಣೆಗೆ ಹಾಜರಾಗದ ಹಿನ್ನಲೆಯಲ್ಲಿ ಅವರ ಮೇಲೆ ಗುರುವಾರವೇ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಅವರ ಬಂಧನ ನಡೆಸಲಾಗಿದೆ ಎಂದು ಸಾಗರ ಉಪವಿಭಾಗದ ಡಿವೈಎಸ್ಪಿ ನಿಶಾ 'ಸಮಾಚಾರ'ಕ್ಕೆ ಸ್ಪಷ್ಟಪಡಿಸಿದರು.

“ಇಲ್ಲಿ ಎಲ್ಲರ ಮೇಲೆಯೂ ವಾರಂಟ್ ಇದೆ. ಬಹುತೇಕ ಶ್ರೀಮಂತರ ಮೇಲೆ ವಾರಂಟ್ಗಳಿವೆ. ಅದನ್ನು ಬೇಕಾದಾಗ ಪೊಲೀಸರು ಬಳಸಿಕೊಳ್ಳುತ್ತಾರೆ. ದೂಗೂರು ಹಿಂದಿನಿಂದಲೂ ಈ ವಿಚಾರವಾಗಿ (ರಾಘವೇಶ್ವರ ಶ್ರೀ ಅತ್ಯಾಚಾರ ಪ್ರಕರಣ) ಪ್ರತಿಭಟನೆ ಮಾಡಿಕೊಂಡು ಬಂದವರು. ಅವರಿಗೆ ಹಿಂದೊಮ್ಮೆ ಇದೇ ರಾಘವೇಶ್ವರ ಬೆಂಬಲಿಗರು ಹೊಡೆದಿದ್ದರೂ ಕೂಡ. ನಾಳೆ ಸಾಗರಕ್ಕೆ ಆತ (ರಾಘವೇಶ್ವರ ಸ್ವಾಮಿ) ಬರಲಿದ್ದಾರೆ; ಈ ಕಾರಣಕ್ಕೆ ರಾಘವೇಶ್ವರ ಬ್ರಿಗೇಡಿನವರು ಮತ್ತು ಪೊಲೀಸರು ಹೊಂದಾಣಿಕೆ ಮಾಡಿಕೊಂಡು ಯಾವುದೋ ಹಳೇ ಕೇಸಿನಲ್ಲಿ ನೆಪದಲ್ಲಿ ಬಂಧಿಸಿದ್ದಾರೆ,” ಎನ್ನುತ್ತಾರೆ ಸ್ಥಳೀಯ ‘ಚಾರ್ವಾಕ’ ವಾರ ಪತ್ರಿಕೆಯ ಸಂಪಾದಕ ಮತ್ತು ವಕೀಲ ಎಚ್.ಬಿ. ರಾಘವೇಂದ್ರ.

ಆದರೆ ಈ ಆರೋಪಕ್ಕೆ ವಿರುದ್ಧವಾಗಿ ಸಾಗರ ಸಬ್ ಡಿವಿಷನ್ ಡಿವೈಎಸ್ಪಿ ನಿಶಾ ಜೇಮ್ಸ್, “ಅವರ (ಪರಮೇಶ್ವರ ದೂಗೂರು) ವಿರುದ್ಧ ಕೋರ್ಟಿನಿಂದ ಇಂದು ಸಂಜೆ ನಾನ್ ಬೇಲೇಬಲ್ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಬಂಧಿಸಿದ್ದೇವೆ,” ಎಂದು ಸಮಜಾಯಿಷಿ ನೀಡುತ್ತಾರೆ.

ಮಠಾಧೀಶರು ಮತ್ತು ನ್ಯಾಯಾಂಗದ ನಡುವಿನ ಸಖ್ಯದ ಕುರಿತು ರಾಜ್ಯದಲ್ಲಿ ಹಿಂದೆಯೂ ಸಾಕಷ್ಟು ವಿವಾದಗಳು ಆಗಿದ್ದವು. ಇದೀಗ ಸಾಗರದಲ್ಲಿ ದಲಿತ ಸಂಘಟನೆಯ ಮುಂದಾಳು ಒಬ್ಬರನ್ನು ಬಂಧಿಸುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಲಾಗಿದೆ.

"ನ್ಯಾಯಾಲಯದಿಂದ ವಾರೆಂಟ್ ಜಾರಿಯಾದ ಎಲ್ಲರನ್ನೂ ಪೊಲೀಸರು ಬಂಧಿಸಲು ಹೋಗುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ಪರಮೇಶ್ವರ್ ಅವರನ್ನು ಬಂಧಿಸಿರುವುದು ಸಹಜವಾಗಿಯೇ ಅನುಮಾನಕ್ಕೆ ಕಾರಣವಾಗಿದೆ. ಪ್ರತಿ ಸಾರಿಯೂ ರಾಮಚಂದ್ರಾಪುರ ಮಠದ ವಿಚಾರ ಬಂದಾಗಲೆಲ್ಲಾ ನ್ಯಾಯಾಲಯದ ನೆಪವನ್ನು ಮುಂದಿಟ್ಟು, ನ್ಯಾಯದ ಪರವಾಗಿರುವವರ ಮೇಲೆ ಪ್ರಹಾರ ನಡೆಸಲಾಗುತ್ತಿದೆ,'' ಎನ್ನುತ್ತಾರೆ ಸ್ವರಾಜ್ ಅಭಿಯಾನ್ ಜತೆ ಗುರುತಿಸಿಕೊಂಡಿರುವ ಶಿವಾನಂದ ಕುಗ್ವೆ. 80ರ ದಶಕದಲ್ಲಿ ಸಾಗರ ತಾಲೂಕಿನಲ್ಲಿ ದಲಿತ ಸಂಘಟನೆಯನ್ನು ಕಟ್ಟುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದವರು.

ಪರಮೇಶ್ವರ ದೂಗೂರ ಬಂಧನದ ನಂತರ ರಾಘವೇಶ್ವರ ಸ್ವಾಮಿ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗುವ ಸಾಧ್ಯತೆ ಕಡಿಮೆ ಎಂಬುದು ಅವರ ಮಾತು. "ನಾಳೆ (ಶುಕ್ರವಾರ) ಹೆಗ್ಗೋಡಿನ ಸರಕಾರಿ ಶಾಲೆಯಲ್ಲಿ ಸ್ವಾಮಿಯನ್ನು ಕರೆಸಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದರು. ಅತ್ಯಾಚಾರ ಪ್ರಕರಣವನ್ನು ಎದುರಿಸುತ್ತಿರುವ ಮಠಾಧೀಶರನ್ನು ಕರೆಸಿ ಮಕ್ಕಳಿಗೆ ಬೋಧನೆ ಮಾಡಿಸುವುದು ಸರಿಯಲ್ಲ. ಇದಕ್ಕೆ ಪರಮೇಶ್ವರ್ ಸೇರಿದಂತೆ ಹಲವು ವಿರೋಧ ವ್ಯಕ್ತಪಡಿಸಿದ್ದರು. ಅವರನ್ನೇ ಬಂಧಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಾಡಲಾಗುತ್ತಿದೆ,'' ಎಂದು ಅವರು ಆರೋಪಿಸುತ್ತಾರೆ.

'ಸಮಾಚಾರ'ಕ್ಕೆ ಲಭ್ಯ ಮಾಹಿತಿ ಪ್ರಕಾರ, ಗುರುವಾರ ಸಂಜೆ ಸಾಗರದ ಗ್ರಾಮಾಂತರ ಠಾಣೆಗೆ ಕುಟುಂಬವೊಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿ ವಿರುದ್ಧ ದೂರು ದಾಖಲಿಸಲು ತೆರಳಿತ್ತು. ಈ ಸಮಯದಲ್ಲಿ ಅವರ ಜತೆಯಲ್ಲಿ ಪರಮೇಶ್ವರ್ ದೂಗೂರ್ ಕೂಡ ತೆರಳಿದ್ದರು. ನಂತರ ಅವರನ್ನು ಬಂಧಿಸಲಾಗಿದೆ. "ಶಿವಮೊಗ್ಗ ಉಸ್ತವಾರಿ ಸಚಿವ, ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸ್ಥಳೀಯ ಮಟ್ಟದಲ್ಲಿ ತಪ್ಪನ್ನು ಎಸಗುತ್ತಿದ್ದಾರೆ. ಹವ್ಯಕರಲ್ಲೊ ಒಂದು ಗುಂಪನ್ನು ಓಲೈಸುವ ನಿಟ್ಟಿನಲ್ಲಿ ರಾಘವೇಶ್ವರ ಸ್ವಾಮಿಯನ್ನು ರಕ್ಷಿಸಲು ಹೊರಟಿದ್ದಾರೆ. ಇದರ ಪರಿಣಾಮ ಪರಮೇಶ್ವರ್ ದೂಗೂರ ಅವರ ಬಂಧನ ಅಷ್ಟೆ,'' ಎನ್ನುತ್ತಾರೆ ಸಾಗರ ಮೂಲದ ಪತ್ರಕರ್ತರೊಬ್ಬರು.

ಇದರಲ್ಲಿ ಎಷ್ಟು ಪ್ರಮಾಣದ ಸತ್ಯ ಏನಿದೆ ಎಂಬುದನ್ನು ಪರಿಶೀಲಿಸಬೇಕಿದೆ. ಆದರೆ, ಮಠಾಧೀಶರೊಬ್ಬರ ಆಣತಿಗೆ ತಕ್ಕಂತೆ ಶಾಸಕಾಂಗ ಮತ್ತು ನ್ಯಾಯಾಂಗಳು ಕುಣಿಯುತ್ತಿವೆ ಎಂಬ ಆರೋಪ ತಾಲೂಕು ಕೇಂದ್ರದಲ್ಲಿ ಕೇಳಿಬರುತ್ತಿರುವುದನ್ನು ಸಂಬಂಧಪಟ್ಟವರು ಗಮನಿಸಬೇಕಿದೆ.