'ರಾಮಾ ರಾಮಾ ರೇ..': ಲಂಚ ಪ್ರಕರಣದಲ್ಲಿ ಯಡಿಯೂರಪ್ಪಗೆ ಸಿಬಿಐನಿಂದ ಸಿಕ್ತು 'ವಿಶೇಷ' ಖುಲಾಸೆ!
ಸುದ್ದಿ ಸಾಗರ

'ರಾಮಾ ರಾಮಾ ರೇ..': ಲಂಚ ಪ್ರಕರಣದಲ್ಲಿ ಯಡಿಯೂರಪ್ಪಗೆ ಸಿಬಿಐನಿಂದ ಸಿಕ್ತು 'ವಿಶೇಷ' ಖುಲಾಸೆ!

ಕಾನೂನಿನ

ಅಡಿಯಲ್ಲಿ ಸತ್ಯಕ್ಕೆ ಹಲವು ಆಯಾಮಗಳಿರುತ್ತವೆ ಎಂಬುದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. 'ಯಡಿಯೂರಪ್ಪ v/s ಸಿಬಿಐ' ಪ್ರಕರಣದಲ್ಲಿ ಮತ್ತೊಮ್ಮೆ ಸಾಭೀತಾಗಿದೆ.

ಬುಧವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ತನ್ನಲ್ಲಿ 2012ರಲ್ಲಿ ದಾಖಲಾಗಿದ್ದ 'RC- 8 A' ಪ್ರಕರಣದಲ್ಲಿ ಯಡಿಯೂರಪ್ಪ ಸೇರಿದಂತೆ ಅಷ್ಟೂ ಆರೋಪಿಗಳನ್ನು ದೂಷಮುಕ್ತಗೊಳಿಸಿದೆ.

ಯಡಿಯೂರಪ್ಪ, ಅವರ ಪುತ್ರರಾದ ರಾಘವೇಂದ್ರ ಮತ್ತು ವಿಜೆಯೇಂದ್ರ, ಅಳಿಯ ಆರ್. ಎನ್. ಸೋಹನ್ ಕುಮಾರ್, ಅವರ ಪ್ರೇರಣ ಎಜುಕೇಶನ್ ಟ್ರಸ್ಟ್, ಮಾಜಿ ಸಚಿವ ಎನ್. ಎನ್. ಕೃಷ್ಣಯ್ಯ ಶೆಟ್ಟಿ, ಸೌತ್ ವೆಸ್ಟ್ ಮೈನಿಂಗ್ ಲಿ.ನ ಕಾರ್ಯಾಕಾರಿ ನಿರ್ದೇಶಕ ಅನಿಲ್ ಸೂದ್, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಜ್ಜನ್ ಜಿಂದಾಲ್ ಪ್ರತಿನಿಧಿಸುವ ಜೆಎಸ್ಡಬ್ಲ್ಯೂ ಸ್ಟೀಲ್ಸ್ ಲಿ., ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ನಿರ್ದೇಶಕ ವಿನೋದ್ ನೋವಲ್, ಇದೇ ಕಂಪನಿಯ ಉಪಾಧ್ಯಕ್ಷ ವಿಕಾಶ್ ಶರ್ಮಾ, ರಿಯಲ್ ಟೆಕ್ನಿಕಲ್ ಸಲ್ಯೂಷನ್ಸ್ ಪ್ರೈ ಲಿ.ನ ಶ್ರೀಕಾಂತ್ ಶೆಟ್ಟಿ, ಜೈ ಭಾರತ್ ಟೆಕ್ನಿಕಲ್ ಸರ್ವಿಸಸ್ ಪ್ರೈ. ಲಿ. ನ ಮುರಳೀಧರ್ ದಾಸ್, ಇಂಡಿಸ್ಟ್ರಿಯಲ್ ಟೆಕ್ನೋ ಮ್ಯಾನ್ ಪವರ್ ಸಪ್ಲೈ ಅಂಡ್ ಸರ್ವಿಸಸ್ ಪ್ರೈ. ಲಿ. ನ ನಿರ್ದೇಶಕ ವಿವೇಕಾನಂದ ಕುಲಕರ್ಣಿ ವಿರುದ್ಧ ಸದರಿ ಪ್ರಕರಣದಲ್ಲಿ ಸಿಬಿಐ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು.

ಅಂತರಂಗದ ಸತ್ಯಗಳು:

ಕೆಲವು ವರ್ಷಗಳ ಹಿಂದೆ ರಾಜ್ಯದಲ್ಲಿ ಭಾರಿ ಸುದ್ದಿಯಲ್ಲಿ ಅಕ್ರಮ ಗಣಿ ಹಗರಣದಲ್ಲಿ ಸಿಬಿಐ ಹಲವು ಪ್ರಕರಣಗಳನ್ನು ಪ್ರತ್ಯೇಕವಾಗಿ ಹೈದ್ರಾಬಾದ್ ಮತ್ತು ಬೆಂಗಳೂರಿನಲ್ಲಿ ದಾಖಲಿಸಿತ್ತು. ಅವುಗಳ ಪೈಕಿ ಈ ಪ್ರಕರಣ (ಆರ್ಸಿ 8ಎ) ಹಲವು ಕಾರಣಗಳಿಗಾಗಿ ಕುತೂಹಲ ಮೂಡಿಸಿತ್ತು. ರಾಜ್ಯದ ಮಾಜಿ ಮುಖ್ಯಮಂತ್ರಿ ಮತ್ತವರ ಕುಟುಂಬದ ಜತೆಗೆ, ಬೃಹತ್ ಕಂಪನಿಗಳ ಹಿರಿಯ ಅಧಿಕಾರಿಗಳು ಈ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು ಇದಕ್ಕೆ ಪ್ರಮುಖ ಕಾರಣ. ಜತೆಗೆ, ಕಾರ್ಪೊರೇಟ್ ಸಂಸ್ಥೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಅಧಿಕಾರ ದುರ್ಬಳಿಕೆ ಮತ್ತು ಸ್ವಜನ ಪಕ್ಷಪಾತ ಮಾಡಿದ ಆರೋಪಕ್ಕೆ ಪ್ರಬಲ ಸಾಕ್ಷಿಗಳಿವೆ ಎಂದು ಸಿಬಿಐ ಹೇಳಿಕೊಂಡಿತ್ತು.


       ಸಿಬಿಐ ದೋಷಾರೋಪ ಪಟ್ಟಿಯ ಒಂದು ಪುಟ
ಸಿಬಿಐ ದೋಷಾರೋಪ ಪಟ್ಟಿಯ ಒಂದು ಪುಟ

ಹೀಗೆ, ಯಡಿಯೂರಪ್ಪ ಪುತ್ರರು ಹಾಗೂ ಅಳಿಯ ಸೋಹನ್ ಕುಮಾರ್ ಚೆಕ್ ಮೂಲಕ ಪಡೆದುಕೊಂಡ ಹಣದ ವಿವರಗಳನ್ನು ದೋಷಾರೋಪ ಪಟ್ಟಿ ಒಳಗೊಂಡಿತ್ತು. ಇದೇ ಪ್ರಕರಣದಲ್ಲಿ ರಾಚೇನಹಳ್ಳಿಯಲ್ಲಿ ಡಿ- ನೋಟಿಫಿಕೇಶನ್ ಹಾಗೂ ಅದಿರು ರಫ್ತು ನಿಷೇಧದ ಅಂಶಗಳೂ ಪ್ರಮುಖ ಆರೋಪಗಳಾಗಿದ್ದರೂ, ಅಂತಿಮವಾಗಿ ತನಿಖಾಧಿಕಾರಿಗಳು ಹಣದ ವಹಿವಾಟು ನಡೆದ ಬಗ್ಗೆ ಸೂಕ್ತ ದಾಖಲೆಗಳನ್ನು ಕಲೆ ಹಾಕುವಲ್ಲಿ ನೆರವಾಗಿದ್ದವು.

"ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮೇಲಿನ ಇತರೆ ಆರೋಪಗಳನ್ನು ಸಾಭೀತುಪಡಿಸಲು ಕಷ್ಟವಾಗಬಹುದು. ಆದರೆ, ಚೆಕ್ ಮೂಲಕ ಅವರ ಒಡೆತನದ ಟ್ರಸ್ಟ್ಗೆ ಹಣ ಪಡೆದಿದ್ದನ್ನು ಸಮರ್ಥಿಸಿಕೊಳ್ಳುವುದು ಕಷ್ಟವಾಗಬಹುದು,'' ಎಂದು ಸಿಬಿಐ ಅಧಿಕಾರಿಯೊಬ್ಬರು ಅಂದೇ ಹೇಳಿದ್ದರು.

ಹೀಗಿದ್ದೂ, ಸುಮಾರು ನಾಲ್ಕು ವರ್ಷಗಳ ಕಾಲ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದಲ್ಲಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ. ತೀರ್ಪಿನ ಪೂರ್ಣ ಪ್ರತಿ ಇನ್ನೂ ಲಭ್ಯವಾಗಬೇಕಿದೆ.

ಯಾಕಿರಬಹುದು?:

ಯಡಿಯೂರಪ್ಪ ಪರವಾಗಿ ವಾದ ಮಂಡಿಸಿದ ವಕೀಲ ಸಿ. ವಿ. ನಾಗೇಶ್, ನ್ಯಾಯಾಯಲದ ತೀರ್ಪಿನ ನಂತರ ಟಿವಿ9 ಜತೆ ಆಡಿದ ಕೆಲವು ಮಾತುಗಳು ಪ್ರಕರಣದಲ್ಲಿ ಏನು ನಡೆದಿರಬಹುದು ಎಂಬ ಸುಳಿವನ್ನು ನೀಡಿದೆ. "ಯಡಿಯೂರಪ್ಪ ಮಾತ್ರವಲ್ಲ, ಅವರ ಹಿಂದಿನ ಮುಖ್ಯಮಂತ್ರಿಗಳಾದ ಎಸ್. ಎಂ. ಕೃಷ್ಣಾ, ಧರಂ ಸಿಂಗ್, ಕುಮಾರಸ್ವಾಮಿ ಹಾಗೂ ರಾಜ್ಯಪಾಲರ ಆಡಳಿತದ ಸಮಯದಲ್ಲಿಯೂ ರಾಚೇನಹಳ್ಳಿಯಲ್ಲಿ ಡಿ- ನೋಟಿಫಿಕೇಶನ್ ನಡೆದಿದೆ. ಕೊನೆಗೆ ಉಳಿದ ತುಂಡುಭೂಮಿಯನ್ನು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಡಿ- ನೋಟಿಫೈ ಮಾಡಿದ್ದಾರೆ. ಇನ್ನು, ಅದಿರು ರಫ್ತು ನಿಷೇಧ ರಾಜ್ಯದ ಶಾಸಕರ ಮೇರೆಗೆ ತೆಗೆದುಕೊಂಡ ಸರ್ವಾನುಮತದ ನಿರ್ಣಯ. ಅಂದರೆ, ನಾನು- ನೀವು ಆಯ್ಕೆ ಮಾಡಿ ಕಳುಹಿಸಿದ ಜನಪ್ರತಿನಿಧಿಗಳ ತೀರ್ಮಾನ,'' ಎಂಬರ್ಥದಲ್ಲಿ ನಾಗೇಶ್ ತೀರ್ಪನ್ನು ಬಣ್ಣಿಸಿದರು.

ಚೆಕ್ ಮೂಲಕ ಲಂಚ ಪಡೆದ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಯಡಿಯೂರಪ್ಪ ಅಥವಾ ಅವರ ಪುತ್ರರು ಹಣ ಪಡೆದಿದ್ದು ಟ್ರಸ್ಟ್ಗಾಗಿ ಎಂಬುದನ್ನು ಗಮನಿಸಬೇಕಿದೆ. ಟ್ರಸ್ಟ್ ಹಣವನ್ನು ಅವರು ಸ್ವಂತಕ್ಕೆ ಬಳಸುವುದಿಲ್ಲ. ಒಂದು ಕಡೆ ಯಾವುದೇ ದುರುದ್ದೇಶ ಇಲ್ಲದೆ ಡಿನೋಟಿಫಿಕೇಶನ್ ಮತ್ತು ರಫ್ತು ನಿಷೇಧ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ, ಸ್ವಂತ ಲಾಭಕ್ಕಲ್ಲದ ಟ್ರಸ್ಟ್ಗೆ ಹಣ ಬಂದಿದೆ. ಹೀಗಾಗಿ, ಯಡಿಯೂರಪ್ಪ ಮೇಲೆ ವಿನಾಕಾರಣ ಆರೋಪ ಮಾಡಲಾಗಿತ್ತು,'' ಎಂದರು.

ಎಲ್ಲಾ ಕಾಲಕ್ಕೂ ನಡೆದುಕೊಂಡು ಬಂದ ಡಿ- ನೋಟಿಫಿಕೇಶನ್ ಮತ್ತು ಅದಿರು ರಫ್ತು ನಿಷೇಧ ಹಿಂದಿರುವ ಸಕಾರಣಗಳನ್ನು ಪಕ್ಕಕ್ಕಿಟ್ಟು ನೋಡಿದರೆ, ಎಲ್ಲಾ ಟ್ರಸ್ಟ್ಗಳೂ ಲಾಭರಹಿತ ಉದ್ದೇಶವನ್ನೇ ಹೊಂದಿರುತ್ತವೆ. ಲಾಭದ ಹಣವನ್ನು ಸ್ವಂತಕ್ಕೆ ಬಳಸುವುದಿಲ್ಲ ಎಂದೇ 'ಡೀಡ್' ಮಾಡಿಸಲಾಗುತ್ತದೆ. ಆದರೆ, ಅದಕ್ಕೆ ಬರುವ ಹಣದ ಮೂಲದ ಪ್ರಶ್ನೆಗಳು ಎದ್ದಾಗ ಮಾತ್ರವೇ ಇಂತಹ ಪ್ರಕರಣಗಳು ಸುದ್ದಿಯಾಗುತ್ತವೆ. ಇಷ್ಟಕ್ಕೂ, ಸಿಬಿಐ ವಿಶೇಷ ನ್ಯಾಯಾಲಯದ ಆದೇಶದ ಪ್ರತಿ ಹೊರ ಬಿದ್ದ ನಂತರವಷ್ಟೆ ಪ್ರಕರಣದ ವಿಚಾರಣೆ ಹೂರಣದ ಕುರಿತು ಇನ್ನಷ್ಟು ನಿಖರ ಮಾಹಿತಿ ಸಿಗಲಿದೆ.

ಕನ್ನಡಕ್ಕೆ ತರ್ಜುಮೆ ಪ್ರಸಂಗ:

'ರಾಮಾ ರಾಮಾ ರೇ..': ಲಂಚ ಪ್ರಕರಣದಲ್ಲಿ ಯಡಿಯೂರಪ್ಪಗೆ ಸಿಬಿಐನಿಂದ ಸಿಕ್ತು 'ವಿಶೇಷ' ಖುಲಾಸೆ!

ನ್ಯಾಯಾಲಯ, ತೀರ್ಪು ಮತ್ತು ಖುಲಾಸೆ ಎಂಬ ತಾಂತ್ರಿಕ ಅಂಶಗಳ ಆಚೆಗೆ, ಈ ಪ್ರಕರಣದ ನಾಲ್ಕು ವರ್ಷಗಳ ವಿಚಾರಣೆ ವೇಳೆಯಲ್ಲಿ ಹಲವು ತಮಾಷೆಯ ಪ್ರಸಂಗಗಳು ದಾಖಲಾಗಿವೆ. ಅವುಗಳಲ್ಲಿ ಒಂದು, 'ಸಿಬಿಐ ಮೆರೆದ ಕನ್ನಡ ಪ್ರೇಮ'!. 7ನೇ ಆರೋಪಿಯಾಗಿದ್ದ ಸೌತ್ ವೆಸ್ಟ್ ಮೈನಿಂಗ್ ಕಂಪನಿ, 9ನೇ ಆರೋಪಿಯಾಗಿದ್ದ ಜೆಎಸ್‌ಡಬ್ಲ್ಯೂ ಸ್ಟೀಲ್ಸ್ ಲಿ.ನ ಮುಖ್ಯ ವ್ಯವಸ್ಥಾಪಕ ಅಧಿಕಾರಿ ವಿನೋದ್ ನೋವಲ್ ಹಾಗೂ 10ನೇ ಆರೋಪಿಯಾಗಿರುವ, ಸದ್ಯ ರಾಜಸ್ಥಾನದ ವೇದಾಂತ ಗ್ರೂಪ್‌ನ ಕಂಪನಿಯ ಹಿರಿಯ ಅಧ್ಯಕ್ಷರಾಗಿರುವ ವಿಕಾಸ್ ಶರ್ಮಾ ಪ್ರಕರಣದಲ್ಲಿ ಕನ್ನಡದಲ್ಲಿರುವ ದಾಖಲೆಗಳನ್ನು ಇಂಗ್ಲಿಷ್ಗೆ ತರ್ಜುಮೆ ಮಾಡಿಕೊಡುವಂತೆ ನ್ಯಾಯಾಲಯದ ಮುಂದೆ ಬೇಡಿಕೆ ಇಟ್ಟಿದ್ದರು.

ಇವರುಗಳು 2012ರ ಸೆ. 5ರಂದು ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ, ''ನಮಗೆ ಕನ್ನಡ ಓದಲು ಹಾಗೂ ಬರೆಯಲು ಬರುವುದಿಲ್ಲ. ಹೀಗಾಗಿ, ಸಿಬಿಐ ಸಲ್ಲಿಸಿರುವ ದಾಖಲೆಗಳು ಕನ್ನಡದಲ್ಲಿದ್ದು, ಆರೋಪಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯಮಾಡಿ, ಕನ್ನಡದಲ್ಲಿರುವ ದಾಖಲೆಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿಕೊಡುವಂತೆ ತನಿಖಾ ಸಂಸ್ಥೆಗೆ ಆದೇಶಿಸಿ,'' ಎಂದು ಕೋರಿಕೆ ಸಲ್ಲಿಸಿದ್ದರು.

ಪ್ರಕರಣದಲ್ಲಿ ಸಿಬಿಐ ಸಲ್ಲಿರುವ ದೋಷಾರೋಪ ಪಟ್ಟಿಯ ಭಾಗವಾಗಿ ಒಟ್ಟು 23 ಸಂಪುಟಗಳಲ್ಲಿ ದಾಖಲೆಗಳನ್ನು ಸಲ್ಲಿಸಲಾಗಿತ್ತು. ಇದರಲ್ಲಿ 21 ಸಂಪುಟಗಳ ಸುಮಾರು 115ಕ್ಕೂ ಹೆಚ್ಚು ದಾಖಲೆಗಳು ಕನ್ನಡದಲ್ಲಿದ್ದವು. ಇವುಗಳನ್ನು ಇಂಗ್ಲಿಷ್‌ಗೆ ತರ್ಜುಮೆ ಮಾಡಿಕೊಡಿ ಎಂಬುದು ಆರೋಪಿಗಳ ಬೇಡಿಕೆಯಾಗಿತ್ತು. ಇದಕ್ಕೆ ತಕರಾರು ಸಲ್ಲಿದ್ದ ಸಿಬಿಐ, ಕರ್ನಾಟಕದ ನ್ಯಾಯಾಲಯದಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳನ್ನು ಆಡಳಿತ ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಆರೋಪಿಗಳ ಬೇಡಿಕೆಯನ್ನು ತಿರಸ್ಕರಿಸಬೇಕು ಎಂದಿತ್ತು. 'ಆರೋಪಿಗಳು ಬಳ್ಳಾರಿಯ ತೋರಣಗಲ್ಲಿನ ವಿದ್ಯಾನಗರದ ನಿವಾಸಿಗಳಾಗಿದ್ದವರು. ಇಲ್ಲಿರುವವರೆಗೂ ರಾಜ್ಯ ಸರಕಾರ ನೀಡುವ ಸೇವೆಗಳನ್ನು ಅವರು ಪಡೆದುಕೊಂಡಿದ್ದಾರೆ. ಅದೂ ಅಲ್ಲದೆ, ಆರೋಪಿಗಳು ಸ್ಥಳೀಯ ಜನರ ಜತೆ ಒಡನಾಟ ಹೊಂದಿದ್ದರು. ಜತೆಗೆ, ಆರೋಪಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದಿಸುತ್ತಿರುವ ವಕೀಲರುಗಳಿಗೆ ಕನ್ನಡ ಬರುತ್ತಿರುವುದು ತಿಳಿದುಬಂದಿದೆ. ಹೀಗಾಗಿ, ದಾಖಲೆಗಳನ್ನು ತರ್ಜುಮೆ ಮಾಡಿಕೊಡುವ ಅಗತ್ಯವಿಲ್ಲ,' ಎಂದು ವಾದಿಸಲಾಗಿತ್ತು.

ಉಪಸಂಹಾರ: 

ಸದ್ಯ, ತೀರ್ಪು ಹೊರಬೀಳುತ್ತಲೇ ಯಡಿಯೂರಪ್ಪ "ನನಗೆ ಗೌರವ ಬಂದಿದೆ. ವಿನಾಕಾರಣವಾಗಿ ನನ್ನ ಮೇಲೆ ತಪ್ಪು ಗ್ರಹಿಕೆ ಬರುವಂತೆ ಮಾಡಲಾಗಿತ್ತು. ತೀರ್ಪಿನಿಂದಾಗಿ ನೆಮ್ಮದಿ ಸಿಕ್ಕಿದೆ. ಕೆಲಸ ಮಾಡಲು, ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡುತ್ತೇನೆ,'' ಎಂದಿದ್ದಾರೆ.

ಸಿಬಿಐ ತನಿಖೆಯನ್ನು ಕರ್ನಾಟಕಕ್ಕೂ ವಿಸ್ತರಿಸಬೇಕು ಎಂದು ಮೊದಲ ಬಾರಿಗೆ ಸುಪ್ರಿಂ ಕೋರ್ಟ್ನಲ್ಲಿ ಮಧ್ಯಾಂತರ ಅರ್ಜಿಯನ್ನು ಸಲ್ಲಿಸಿದ್ದ ಧಾರವಾಡ ಮೂಲದ ಸಮಾಜ ಪರಿವರ್ತನ ಸಮುದಾಯ ಪ್ರಕರಣವನ್ನು ಮೇಲಿನ ನ್ಯಾಯಾಲಯಕ್ಕೆ ಒಯ್ಯಲು ತೀರ್ಮಾನಿಸಿದೆ.

ಒಟ್ಟಾರೆ, ನಾಲ್ಕು ವರ್ಷಗಳ ಅಂತರದಲ್ಲಿ ಅಕ್ರಮ ಗಣಿಗಾರಿಕೆ, ನ್ಯಾಯಾಲಯದ ಮಧ್ಯ ಪ್ರವೇಶ, ಸಿಬಿಐ ತನಿಖೆ ಮತ್ತು ಫಲಿತಾಂಶದ ರೂಪದ ಸಂಕೇತವಾಗಿ ಈ ತೀರ್ಪು ಉಳಿದುಕೊಳ್ಳಲಿದೆ.

Read More: