ಟಾಟಾ V/S ಮಿಸ್ತ್ರಿ: 148 ವರ್ಷಗಳ ಕಂಪನಿಯಲ್ಲೀಗ ಅಧ್ಯಕ್ಷ ಸ್ಥಾನದ ವಿವಾದ; ಯಾಕೆ, ಏನು?
ಸುದ್ದಿ ಸಾಗರ

ಟಾಟಾ V/S ಮಿಸ್ತ್ರಿ: 148 ವರ್ಷಗಳ ಕಂಪನಿಯಲ್ಲೀಗ ಅಧ್ಯಕ್ಷ ಸ್ಥಾನದ ವಿವಾದ; ಯಾಕೆ, ಏನು?

ಟಾಟಾ

ಕಂಪೆನಿಯಲ್ಲಿ ಮಾಜಿ ಮತ್ತು ಹಾಲಿ ಅಧ್ಯಕ್ಷರ ನಡುವಿನ ಕಲಹ ತಾರಕಕ್ಕೇರಿದೆ.

ನಿರ್ಗಮಿತ ಅಧ್ಯಕ್ಷ ಸೈರಸ್ ಮಿಸ್ತ್ರಿ, ರತನ್ ಟಾಟಾ ವಿರುದ್ಧ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದಾರೆ. ಈ ಮೂಲಕ ದೇಶದ ದೊಡ್ಡ ಕಂಪೆನಿಯೊಂದರ ಮುಖ್ಯಸ್ಥರ ಸ್ಥಾನದ ಸುತ್ತ ಬಹಿರಂಗ 'ಯುದ್ಧ' ಆರಂಭವಾಗಿದೆ.

‘ಟಾಟಾ ಗ್ರೂಪ್’ನಲ್ಲಿ ಬಂಡವಾಳ ಹೂಡಿರುವ ಪ್ರಮುಖ ಕಂಪೆನಿ ‘ಟಾಟಾ ಸನ್ಸ್’ನಲ್ಲಿ ಇಂಥಹದ್ದೊಂದು ಅಚ್ಚರಿಯ ಬೆಳವಣಿಗೆ ನಡೆದಿದ್ದು, ಗಮನ ಸೆಳೆಯುತ್ತಿದೆ.

ಸೋಮವಾರದ ‘ಟಾಟಾ ಸನ್ಸ್’ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಯನ್ನು ಕೆಳಗಿಳಿಸಿ, ಅವರ ಸ್ಥಾನಕ್ಕೆ ಮಾಜಿ ಅಧ್ಯಕ್ಷ ರತನ್ ಟಾಟಾರನ್ನೇ ಮತ್ತೆ ನೇಮಿಸಲಾಗಿತ್ತು. 'ವಯಸ್ಸಾಗಿದೆ, ನಿವೃತ್ತ ಜೀವನ ಬೇಕು' ಎಂದು ಕಂಪನಿಯಿಂದ ಹೊರಗುಳಿದಿದ್ದ ರತನ್ ಟಾಟಾ, ಮತ್ತೆ ಕಂಪೆನಿಯೊಳಕ್ಕೆ ಕಾಲಿಟ್ಟಿದ್ದು ಹಲವರನ್ನು ಹುಬ್ಬೇರಿಸಿತ್ತು. ರತನ್ ಟಾಟಾ ಅವರ ಪುನರಾಗಮನಕ್ಕೆ ಕಂಪನಿಯ ಕಡೆಯಿಂದ ಯಾವುದೇ ಕಾರಣ ನೀಡಿಲ್ಲ ಎಂಬುದು ಗಮನಾರ್ಹ.

ಬದಲಾವಣೆ; ಮರು ಬದಲಾವಣೆ

148 ವರ್ಷ ಇತಿಹಾಸ ಇರುವ ಟಾಟಾ ಕಂಪೆನಿಗೆ ರತನ್ ಟಾಟಾ ಅವರೇ, 2012ರಲ್ಲಿ ಸೈರಸ್ ಮಿಸ್ತ್ರಿಯನ್ನು ಅಧ್ಯಕ್ಷ ಸ್ಥಾನಕ್ಕೆ ಕರೆತಂದಿದ್ದರು. ಟಾಟಾ ಮನೆತನದ ಹೊರಗಿನವರಾಗಿ ಅಧ್ಯಕ್ಷ ಹುದ್ದೆಗೇರಿದ ಎರಡನೇ ವ್ಯಕ್ತಿ ಮಿಸ್ತ್ರಿಯಾಗಿದ್ದರು. ಹೀಗೊಂದು ಅಪರೂಪದ ನೇಮಕ ಹೊರಬಿದ್ದಾಗ, ಮಿಸ್ತ್ರಿ ಟಾಟಾ ಕಂಪೆನಿಯನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸಲು ಶಕ್ತ ವ್ಯಕ್ತಿ ಒಬ್ಬರು ಸಿಕ್ಕರು ಎಂಬ ಭಾವನೆ ಎಲ್ಲೆಡೆ ಮನೆ ಮಾಡಿತ್ತು.

ಆದರೆ ರತನ್ ಕುರ್ಚಿಗೆ ಬಂದು ಕುಳಿತ ಮಿಸ್ತ್ರಿ ಮ್ಯಾಜಿಕ್ ಮಾಡುವುದು ಹಾಳಾಗಿ ಹೋಗಲಿ, ಕಂಪೆನಿಯನ್ನು ಯಥಾಸ್ಥಿತಿಯಲ್ಲಿ ನಡೆಸಿಕೊಂಡು ಹೋಗುವಲ್ಲಿಯೇ ಎಡವಿದರು ಎಂಬ ಆರೋಪ ಕೇಳಿ ಬಂದಿದೆ. ಮಿಸ್ತ್ರಿ ಬಂದ ಮೇಲೆ ಟಾಟಾ ಕಂಪೆನಿಯ ಸಾಧನೆ ಅಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳವಣಿಗೆ ಕಂಡಲ್ಲ. ಇದೇ ವಿಚಾರಕ್ಕೆ ರತನ್ ಟಾಟಾ ಅಸಮಧಾನಗೊಂಡಿದ್ದರು ಎಂದು ‘ಎಕಾನಾಮಿಕ್ ಟೈಮ್ಸ್’ ವರದಿ ಮಾಡಿದೆ.

ಮೂಲಗಳ ಪ್ರಕಾರ, ಮಿಸ್ತ್ರಿ ಯುರೋಪಿನ ಸ್ಟೀಲ್ ಬಿಸಿನೆಸ್ಸೂ ಸೇರಿದಂತೆ ಲಾಭ ರಹಿತ ಸಂಸ್ಥೆಗಳನ್ನು ಮುಚ್ಚಲು ಹೊರಟಿದ್ದರು; ಲಾಭ ತರುವ ಸಂಸ್ಥೆಗಳ ಬಗ್ಗೆ ಮಾತ್ರ ಗಮನಹರಿಸುತ್ತಿದ್ದರು. ಇದೇ ಕಾರಣಕ್ಕೆ ಬ್ರಿಟನ್ನಿನಲ್ಲಿದ್ದ ಸ್ಟೀಲ್ ಪ್ಲಾಂಟನ್ನು ಮಾರಾಟ ಮಾಡಿದ್ದರು. ಇದು ರತನ್ ಟಾಟಾಗೆ ಇಷ್ಟವಿರಲಿಲ್ಲ. ಇದಲ್ಲದೇ ನಿರ್ದೇಶಕನ ಜವಾಬ್ದಾರಿಗಳು, ಮೌಲ್ಯಗಳು, ತತ್ವಗಳು, ಕಂಪೆನಿಯ ಮುನ್ನೋಟಗಳ ವಿಚಾರಕ್ಕೆ ಬಂದಾಗ, ಇಬ್ಬರ ಆಲೋಚನೆಗಳೂ ಬೇರೆ ಬೇರೆಯಾಗಿದ್ದವು, ಮಿಸ್ತ್ರಿ ಪ್ರತಿ ಹೆಜ್ಜೆಯಲ್ಲೂ ಆಕ್ರಮಣಕಾರಿ ನಡೆ ಕಾಣಿಸುತ್ತಿತ್ತು. ಕೆಲವು ನಿರ್ಧಾರಗಳನ್ನವರು ರತನ್ ಟಾಟಾಗೂ ಹೇಳುತ್ತಿರಲಿಲ್ಲ ಎನ್ನಲಾಗಿದೆ. ಈ ಕಾರಣಕ್ಕೆ ಕಾರ್ಪೊರೇಟ್ ಜಗತ್ತಿನಲ್ಲಿ ಅಪರೂಪ ಎನಿಸುವಂತಹ ನಿರ್ಧಾರವನ್ನು (ಮಿಸ್ತ್ರಿ ಹೊರಗೆ ಕಳುಹಿಸುವ) ಆಡಳಿತ ಮಂಡಳಿ ತೆಗೆದುಕೊಂಡಿದೆ ಎನ್ನಲಾಗಿದೆ.

ಹೀಗಾಗಿ ಸೈರಸ್ ಮಿಸ್ತ್ರಿ ಟಾಟಾ ಕಂಪೆನಿಯಲ್ಲಿ ಚಿಕ್ಕ ಅವಧಿಗೇ ಅಧ್ಯಕ್ಷರಾಗಿ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಮಾತ್ರವಲ್ಲ ಇವರೊಂದಿಗೆ ಕಂಪೆನಿಯ ಕಾರ್ಯಕಾರಿ ಸಮಿತಿಯನ್ನೂ ವಿಸರ್ಜನೆ ಮಡಲಾಗಿದೆ.

ಇನ್ನೂ ನಾಲ್ಕು ತಿಂಗಳೊಳಗೆ ಟಾಟಾ ಕಂಪೆನಿಯ ಆಯ್ಕೆ ಸಮಿತಿ ಶಾಶ್ವತ ಉತ್ತರಾಧಿಕಾರಿಯನ್ನು ನೇಮಿಸಲಿದೆ. ಅಲ್ಲಿವರೆಗೆ 78 ವರ್ಷ ವಯಸ್ಸಿನ ಹಿರಿಯ ಜೀವ ರತನ್ ಟಾಟಾ ಕಂಪೆನಿಯನ್ನು ಮುನ್ನಡೆಸಲಿದ್ದಾರೆ.

ಕೋರ್ಟ್ ಮೆಟ್ಟಿಲೇರಲಿದ್ದಾರೆ ಮಿಸ್ತ್ರಿ?:

ಟಾಟಾ V/S ಮಿಸ್ತ್ರಿ: 148 ವರ್ಷಗಳ ಕಂಪನಿಯಲ್ಲೀಗ ಅಧ್ಯಕ್ಷ ಸ್ಥಾನದ ವಿವಾದ; ಯಾಕೆ, ಏನು?

ಟಾಟಾ ಕಂಪೆನಿಯಲ್ಲಿ ಅತಿ ಹೆಚ್ಚು ಶೇರು ಹೊಂದಿರುವ ಶಾಪೂರ್ಜಿ ಪಲ್ಲೊಂಜೀ ಮಿಸ್ತ್ರಿ (ಶಾಪೂರ್ ಪಲ್ಲೊಂಜಿ ಗ್ರೂಪ್ ಅಧ್ಯಕ್ಷ) ಮಗನೇ ಸೈರಸ್ ಮಿಸ್ತ್ರಿ. ಸೈರಸ್ ಮಿಸ್ತ್ರಿ ಕುಟುಂಬ ಶೇಕಡಾ 17-18 ಶೇರುಗಳನ್ನು ಟಾಟಾ ಸನ್ಸ್ ಮತ್ತು ಟ್ರಸ್ಟ್ ನಲ್ಲಿ ಹೊಂದಿದೆ. ಇದೀಗ ಮಿಸ್ತ್ರಿ ತಮ್ಮನ್ನು ಹುದ್ದೆಯಿಂದ ಕಿತ್ತು ಹಾಕಿದ್ದಕ್ಕೆ ಕೋರ್ಟ್ ಮೆಟ್ಟಿಲೇರಲಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ಸೈರಸ್ ಮಿಸ್ತ್ರಿ ತಳ್ಳಿ ಹಾಕಿದ್ದು ಇಲ್ಲೀವರೆಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಹೇಳಿದ್ದಾರೆ.

ರತನ್ ಟಾಟಾ ರಕ್ಷಣಾ ತಂತ್ರ:

ಸೈರಸ್ ಮಿಸ್ತ್ರಿ ಕೋರ್ಟ್ ಮೆಟ್ಟಿಲೇರುವ ಸೂಚನೆ ಸಿಗುತ್ತಿದ್ದಂತೆ ರತನ್ ಟಾಟಾ ಕಾನೂನು ತಂಡದವರು ನ್ಯಾಯಾಲಯಗಳಲ್ಲಿ ತಡೆ ಅರ್ಜಿ (ಕೇವಿಯೆಟ್) ಸಲ್ಲಿಸಿ ಬಂದಿದ್ದಾರೆ. ಇದರಲ್ಲಿ ‘ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಾಧಿಕರಣ’ವೂ ಸೇರಿದೆ.

ಇದರಿಂದ ಟಾಟಾ ಕಡೆಯಿಂದ ವಾದ ಆಲಿಸದೇ ಕೋರ್ಟ್ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಒಂದೊಮ್ಮೆ ಮಿಸ್ತ್ರಿ ನಿರ್ದೇಶಕರನ್ನೆಲ್ಲಾ ಬದಲಾಯಿಸುವಂತೆ ಕೋರಿದರೆ ಆಗ ಟಾಟಾ ವಾದಕ್ಕೂ ಕೋರ್ಟ್ ಬೆಲೆ ಕೊಡಲೇಬೇಕಾಗುತ್ತದೆ ಎಂಬುದು ಲೆಕ್ಕಾಚಾರ.

ಬುಧವಾರಕ್ಕೆ ಕದನ ಮುಂದೂಡಿಕೆ?

ಮೂಲಗಳ ಮಾಹಿತಿ ಪ್ರಕಾರ ಬುಧವಾರ ಬಾಂಬೆ ಹೈಕೋರ್ಟಿನಲ್ಲಿ ಸೈರಸ್ ಮಿಸ್ತ್ರಿ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಒಂದೊಮ್ಮೆ ಅರ್ಜಿ ಸಲ್ಲಿಸಿದ್ದೇ ಆದಲ್ಲಿ ಟಾಟಾ ಸಂಸ್ಥೆಯ ಅಸೋಸಿಯೇಟ್ಸ್ ಪ್ರತಿವಾದಿಗಳಾಗಲಿದ್ದಾರೆ. ಬಹುಶಃ ಮಿಸ್ತ್ರಿ ಕಡೆಯವರು ‘ಹುದ್ದೆಯಿಂದ ತೆಗೆದು ಹಾಕಿದ್ದು ಕಾನೂನು ಬಾಹಿರ’ ಎಂದು ವಾದಿಸಬಹುದು ಎನ್ನಲಾಗಿದೆ.

‘ಶಾರ್ದುಲ್ ಅಮರ್ ಚಂದ್ ಮಂಗಲ್ ದಾಸ್’ ಕಾನೂನು ಸಂಸ್ಥೆಯ ಇಬ್ಬರು ಪ್ರಮುಖ ಲಾಯರ್ಗಳನ್ನು ಮಿಸ್ತ್ರಿ ಸಂಪರ್ಕಿಸಿದ್ದಾರೆ. ಇತ್ತ ಟಾಟಾ ಪರವಾಗಿ ಹಿರಿಯ ನ್ಯಾಯಾವಾದಿಗಳಾದ ಹರೀಶ್ ಸಾಳ್ವೆ, ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಅಖಾಡಕ್ಕೆ ಇಳಿದಿದ್ದಾರೆ.

ಯಾರು ಈ ರತನ್ ಟಾಟಾ?


       ಜೆಮ್‌ಷೆಟ್‌ಜೀ ಟಾಟಾ
ಜೆಮ್‌ಷೆಟ್‌ಜೀ ಟಾಟಾ

ಜೆಮ್‌ಷೆಟ್‌ಜೀ ಟಾಟಾ ಎಂಬ ಹೆಸರು ಭಾರತದ ಉದ್ಯಮ ವಲಯದಲ್ಲಿ ಒಂಥರಾ ಸರ್ವಾಂತರ್ಯಾಮಿ; ಉಪ್ಪು, ಟೀ ಪುಡಿಯಿಂದ ಹಿಡಿದು ಉಕ್ಕು, ಹೆಲಿಕಾಫ್ಟರ್ ಉತ್ಪಾದನೆವರೆಗೂ ಹಬ್ಬಿಕೊಂಡ ಸಾಮ್ರಾಜ್ಯವಿದು. ದೇಶದ ಜನಜೀವನದಲ್ಲಿ ಟಾಟಾ ಹಾಸು ಹೊಕ್ಕಾದಷ್ಟೂ ಬೇರಾವ ಬ್ರಾಂಡೂ ಇರಲಿಕ್ಕಿಲ್ಲ.

ಇವತ್ತು ಅಧಿಕೃತವಾಗಿ ಟಾಟಾ ಹೆಸರಿನಲ್ಲಿ 90 ಕ್ಕೂ ಹೆಚ್ಚು ಕಂಪನಿಗಳಿವೆ. ಅಲ್ಲದೇ ಸಂಸ್ಥೆ ಮುನ್ನೂರಕ್ಕೂ ಹೆಚ್ಚು ಕಂಪನಿಗಳಲ್ಲಿ ಹಣ ಹೂಡಿದೆ. ಈ 148 ವರ್ಷಗಳ ದೀರ್ಘ ಪಯಣದಲ್ಲಿ 100 ದೇಶಗಳಿಗೆ ಕಂಪೆನಿಗಳಿಗೆ ಸಾಮ್ರಾಜ್ಯ ವಿಸ್ತರಿಸಿಕೊಂಡಿದ್ದು, 150 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇವತ್ತಿಗೆ ಕಂಪೆನಿಯ ಅಂದಾಜು ಮೌಲ್ಯ ಸುಮಾರು 7.9 ಲಕ್ಷ ಕೋಟಿ ರೂಪಾಯಿ. ಸದ್ಯ 6.6 ಲಕ್ಷ ಜನರು ಕಂಪೆನಿಯಲ್ಲಿ ಕೆಲಸಕ್ಕಿದ್ದಾರೆ. ಇದು ಭಾರತದ ಪಾಲಿಗೆ ಅತಿ ಹೆಚ್ಚು ಉದ್ಯೋಗ ಸೃಷ್ಟಿಸಿದ ಕಾರ್ಪೊರೇಟ್ ಸಂಸ್ಥೆ. ಕಳೆದ ವರ್ಷ ಕಂಪೆನಿ ಗಳಿಸಿದ ನಿವ್ವಳ ಲಾಭವೇ 49 ಸಾವಿರ ಕೋಟಿ.

ಇಂಥಹ ಕಂಪೆನಿಯ ಇವತ್ತಿನ ಪ್ರಭಾರ ಅಧಿಪತಿಯೇ ರತನ್ ಟಾಟಾ.

ಟಾಟಾ ಕಂಪನಿಯನ್ನು ಹುಟ್ಟುಹಾಕಿದವರು ಜೆಮ್‌ಷೆಟ್‌ಜೀ ಟಾಟಾ; 1868ರಲ್ಲಿ. ಅದಾದ ನಂತರ ಕಂಪೆನಿಯನ್ನು ಹಲವರು ಮುನ್ನಡೆಸಿ ಕೊನೆಗೆ ಜೆಹಾಂಗಿರ್ ರತನ್ಜೀ ದಾದಾಭಾಯಿ (ಜೆಆರ್.ಡಿ) ಟಾಟಾ ಕೈಗೆ ಬಂತು. ಮುಂದೆ ಇದೇ ಜೆ.ಆರ್.ಡಿ ಕೈಯಿಂದ ಟಾಟಾ ಕಂಪೆನಿ ರತನ್‌ ಟಾಟಾ ಕೈಗೆ ಹಸ್ತಾಂತರವಾಯಿತು.

ಹಾಗೆ ನೋಡಿದರೆ ಟಾಟಾ ಕಂಪೆನಿಗೂ ರತನ್ ಟಾಟಾಗೂ ಸಂಬಂಧವಿಲ್ಲ. ರತನ್ ತಂದೆ ನವಲ್‌ ಹೊರ್ಮುಸ್‌ಜಿ ಟಾಟಾ ಹಾಗೂ ತಾಯಿ ಸೂನೂ ಟಾಟಾ, ಜೆಮ್‌ಷೆಟ್‌ಜೀ ಕುಟುಂಬಕ್ಕೆ ಹತ್ತಿರದ ಸಂಬಂಧಿಗಳು ಅಷ್ಟೇ. ನವಲ್‌ನ ತಂದೆ ತಾಯಿ(ಅಂದರೆ ರತನ್‌ ಅಜ್ಜ-ಅಜ್ಜಿ) ಬೇಗನೆ ತೀರಿಹೋದರು. ನವಲ್‌ ಅನಾಥಾಶ್ರಮದಲ್ಲಿ ಬೆಳೆಯಬೇಕಾಯಿತು.

ಅಷ್ಟೊತ್ತಿಗಾಗಲೇ ಟಾಟಾ ಕಂಪೆನಿಯ ಉತ್ತರದಾಯಿತ್ವವನ್ನು ಜೆಮ್‌ಷೆಟ್‌ಜೀ ತಮ್ಮ ಮಗ ದೊರಾಬ್ಜೀ ಟಾಟಾಗೆ ವಹಿಸಿದ್ದರು. ದೊರಾಬ್ಜಿ ನಿಧರಾದ ನಂತರ ಅದು ಅವರ ಇನ್ನೊಬ್ಬ ಮಗ ಸರ್ ರತನ್ ಟಾಟಾ ಒಡೆತನಕ್ಕೆ ಬಂದಿತ್ತು. ಸರ್ ರತನ್ ಟಾಟಾ ಕೂಡಾ ವಿಧಿವಶರಾದಾಗ ಅವರ ಹೆಂಡತಿ ನವಾಜ್‌ಬಾಯಿ ಟಾಟಾ ತನ್ನ ಆಸ್ತಿಯನ್ನು ನೋಡಿಕೊಳ್ಳಲು ಸುಂದರ ಗಂಡುಮಗುವನ್ನು ದತ್ತು ಸ್ವೀಕರಿಸಲು ಯೋಚಿಸುತ್ತಿದ್ದರು; ಆಗ ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಇದೇ ನವಲ್‌ ಕಣ್ಣಿಗೆ ಬಿದ್ದ. ನವಾಜ್‌ ತಾಯಿಗೆ ಅದೇನೆನಿತೋ ಏನೋ, ಈತನಿಗೇ ತನ್ನೆಲ್ಲ ಆಸ್ತಿ ಬರೆದು ಕೊಟ್ಟರು. ಹೀಗೆ ನವಲ್‌ ಟಾಟಾ ಕಂಪೆನಿಯ ಒಡೆಯರಾದರು.

ನವಲ್‌ ಸಣ್ಣ ಮನಸ್ಸಿನಲ್ಲಿ ಸೂನೂ ಎಂಬಾಕೆಯನ್ನು ಪ್ರೀತಿಸಿ ಮದುವೆಯಾದರು. ಇವರಿಗೆ ಹುಟ್ಟಿದವರೇ ರತನ್‌ ಟಾಟಾ. ರತನ್ ಹುಟ್ಟಿದ್ದು ಡಿಸೆಂಬರ್‌ 28, 1937. ಟಾಟಾ ಹುಟ್ಟಿನೊಂದಿಗೆ ಶ್ರೀಮಂತಿಕೆ ಉಚಿತವಾಗಿ ಬಂದಿತ್ತು. ಬಾಲಕ ರತನ್‌ರನ್ನು ನೋಡಿಕೊಳ್ಳಲೆಂದೇ ನಾಲ್ವರು ಆಳುಗಳಿದ್ದರು. ರೋಲ್ಸ್ ರಾಯ್ಸ್ ಕಾರಿನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು.

ರತನ್ ತಂದೆ ತಾಯಿಯರಾದ ನವಲ್‌-ಸೂನೂ ಸಂಬಂಧ ಸರಿಯಾಗಿರಲಿಲ್ಲ. ಗಂಡ- ಹೆಂಡತಿ ಸಣ್ಣ ಸಣ್ಣ ವಿಷಯಗಳಿಗೂ ಹೊಡೆದಾಡುತ್ತಿದ್ದರು. ಕೊನೆಗೆ ಇಬ್ಬರ ಸಂಬಂಧ ವಿಚ್ಛೇದನದಲ್ಲಿ ಅಂತ್ಯವಾಯಿತು. ಆಗ ರತನ್‌ಗೆ ಏಳು ವರ್ಷ. ತನ್ನಿಬ್ಬರು ಮಕ್ಕಳನ್ನು ಕೊಡುವಂತೆ ಸೂನೂ ಹಠ ಹಿಡಿದಳು. ಆದರೆ ನವಲ್‌ ತಾಯಿ ನವಾಜ್‌ಬಾಯಿ ಬಿಡಲಿಲ್ಲ. ತನ್ನ ಮೊಮ್ಮಗನಿಗೆ ರತನ್‌ ಎಂದೇ ತನ್ನ ಗಂಡನ ಹೆಸರನ್ನೇ ಇಟ್ಟು ಬೆಳೆಸಿದರು. ತಂದೆ-ತಾಯಿಯ ಈ ಮುರುಕಲು ಸಂಬಂಧ ರತನ್‌ ಮೇಲೆ ತೀವ್ರ ಪರಿಣಾಮ ಬೀರಿದ್ದಿರಬಹುದು.

ರತನ್‌ ಟಾಟಾಗೆ ಮದುವೆ ಬಗ್ಗೆ ಅಂಥಹ ಆಸಕ್ತಿ ಇರಲಿಲ್ಲ. ಒಮ್ಮೆ ಮದುವೆಯಾಗಲು ನಿರ್ಧರಿಸಿದ್ದರಾದರೂ ಸಂಬಂಧ ಮುರಿದು ಬಿತ್ತು. ಅನಂತರ ಮದುವೆ ಯೋಚನೆಯನ್ನೇ ತೆಗೆದುಹಾಕಿದರು. ಇವತ್ತಿಗೂ ಟಾಟಾ ಕಂಪನಿಯ ಅಧ್ಯಕ್ಷ ಅರ್ಧಾಂಗಿ; ಮಕ್ಕಳಿಲ್ಲದೇ ಏಕಾಂಗಿ. ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರ ಸಂದರ್ಶನದಲ್ಲಿ “I think I am lonely,” ಎಂದಿದ್ದರು ರತನ್. ನನಗೆ ಕಂಪನಿಯ ಒಡೆತನದಲ್ಲಿ ಸಂಪೂರ್ಣ ಹಕ್ಕಿಲ್ಲ. ನನ್ನ ಸ್ಥಾನಮಾನವನ್ನು ವಿಸ್ತರಿಸಿಕೊಳ್ಳುವ ಅಧಿಕಾರವಿಲ್ಲ. ನಾನ್ಯಾವ ನಿರ್ಧಾರ ತೆಗೆದುಕೊಂಡರೂ ಅದು ಕಂಪನಿಯ ಚೌಕಟ್ಟಿನೊಳಗಿರಬೇಕು. ಅದನ್ನು ಮೀರಿದ ತೀರ್ಮಾನ ತೆಗೆದುಕೊಳ್ಳುವಂತಿಲ್ಲ ಎಂಬುದಾಗಿ ರತನ್ ಟಾಟಾ ಹೇಳಿದ್ದರು.

ಜೆ.ಆರ್.ಡಿ ಟಾಟಾ ಮತ್ತು ರತನ್ ಟಾಟಾ:


       ಜೆ.ಆರ್.ಡಿ ಟಾಟಾ ಮತ್ತು ರತನ್ ಟಾಟಾ
ಜೆ.ಆರ್.ಡಿ ಟಾಟಾ ಮತ್ತು ರತನ್ ಟಾಟಾ

ಜೆಮ್‌ಷೆಟ್‌ಜೀ ಟಾಟಾ ಮಕ್ಕಳು ನಿಧರಾದ ಬಳಿಕ ಕಂಪೆನಿಯ ಉಸ್ತುವಾರಿಯನ್ನು ವಹಿಸಿಕೊಂಡವರು ಜೆ.ಆರ್.ಡಿ ಟಾಟಾ. ಇವರು ಜೆಮ್‌ಷೆಟ್‌ಜೀ ಟಾಟಾ ಸಂಬಂಧಿಯಾಗಿದ್ದರು ಅಷ್ಟೇ. 5 ದಶಕ ಕಂಪೆನಿಯನ್ನು ಮುನ್ನಡೆಸಿ ಭದ್ರ ಬುನಾದಿ ಹಾಕಿದ ಜೆ.ಆರ್.ಡಿಗೆ ಕಂಪೆನಿಯನ್ನು ರತನ್ ಟಾಟಾ ಕೈಯಲ್ಲಿಡಲು ಸಂಪೂರ್ಣ ಮನಸ್ಸಿರಲಿಲ್ಲ. ವಹಿಸಿದರೆ ನಿಭಾಯಿಸಬಹುದಾ ಎಂಬ ಸಂದೇಹ, ಆತಂಕಗಳು ಅವರಿಗಿದ್ದವು.

ಇದಕ್ಕಾಗಿ ರತನ್‌ ಸಾಮರ್ಥ್ಯವಳಿಯಲು ಜೆಆರ್‌ಡಿ, ನೆಲ್ಕೋ ಹಾಗೂ ಸೆಂಟ್ರಲ್‌ ಇಂಡಿಯಾ ಟೆಕ್ಸ್‌ಟೈಲ್ಸ್‌ ಎಂಬ ಎರಡು ರೋಗಗ್ರಸ್ತ ಕಂಪನಿಗಳನ್ನು ಅವರಿಗೆ ಒಪ್ಪಿಸಿದ್ದರು. 7-8 ವರ್ಷಗಳಿಂದ ಇವು ಭಾರಿ ನಷ್ಟದಲ್ಲಿದ್ದವು. ಆದರೆ ರತನ್ ಕಂಪೆನಿ ಕೈಗೆತ್ತಿಕೊಂಡವರೇ ಕೇವಲ ಎರಡು ವರ್ಷಗಳಲ್ಲಿ ಸೆಂಟ್ರಲ್‌ ಇಂಡಿಯಾ ಟೆಕ್ಸ್‌ಟೈಲ್ಸ್‌ನ್ನು ಲಾಭದಾಯಕ ಉದ್ದಿಮೆಯಾಗಿ ಮಾಡಿ ತೋರಿಸಿದರು. ಮುಂದೆ ನೆಲ್ಕೋ ಕೂಡಾ ಇದೇ ಹಾದಿ ಹಿಡಿಯಿತು. ಆ ದಿನಗಳಲ್ಲಿ ಸ್ವತಃ ಸಿಬ್ಬಂದಿ ಜತೆ ಕೆಲಸ, ಊಟ ಮಾಡುತ್ತಾ ರತನ್ ಬೆರೆಯುತ್ತಿದ್ದರು. ಹೀಗೆ ಜೆಆರ್‌ಡಿ ವಿಶ್ವಾಸ ಗಳಿಸಿ ಕಂಪೆನಿಯ ಅಧ್ಯಕ್ಷರಾಗಿ ಬಂದವರು ರತನ್ ಟಾಟಾ.

1991ರಲ್ಲಿ ಜೆಆರ್‌ಡಿಯಿಂದ ಜವಾಬ್ದಾರಿಯನ್ನು ವಹಿಸಿಕೊಂಡ ರತನ್ ಟಾಟಾ 21 ವರ್ಷಗಳ ಕಾಲ ಕಂಪೆನಿಯನ್ನು ನಿರಾತಂಕವಾಗಿ ಮುನ್ನಡೆಸಿ ತೋರಿಸಿದರು. ರತನ್‌ ಟಾಟಾ ಸಂಕೋಚ, ಹಿಂಜರಿಕೆ ಸ್ವಭಾವದವರು; ಪ್ರಚಾರ ಅಷ್ಟಕ್ಕಷ್ಟೆ. ತಾವಾಯಿತು, ತಮ್ಮ ಕಂಪನಿಯಾಯಿತು ಎನ್ನುವ ಜಾಯಮಾನದವರು. ಇದೀಗ 78ನೇ ವಯಸ್ಸಿನಲ್ಲಿ ಮತ್ತೆ ಕಂಪನಿಗೆ ಕಾಲಿಡುತ್ತಿದ್ದಾರೆ.

ಸ್ವಾತಂತ್ರ್ಯ ನಂತರದ ಭಾರತದ ನಿರ್ಮಾಣದ ಪ್ರತಿ ಮೈಲುಗಲ್ಲಿನಲ್ಲೂ ಟಾಟಾದ ಇಟ್ಟಿಗೆಗಳು ಕಾಣಸಿಗುತ್ತವೆ. ಟಾಟಾ ಇಲ್ಲದ ಭಾರತವನ್ನು ಊಹಿಸುವುದೂ ಅಸಾಧ್ಯ. ಅದೇ ಕಾರಣಕ್ಕೆ ಟಾಟಾದ ಅಧ್ಯಕ್ಷರ ಬದಲಾವಣೆ ದೊಡ್ಡ ಸುದ್ದಿಯಾಗುತ್ತಿದೆ.