AOB ಗಡಿಯಲ್ಲಿ ಗುಂಡಿನ ಮೊರೆತ: ಕಮಾಂಡೋಗಳ ಗುಂಡಿಗೆ  24 ನಕ್ಸಲರ ಬಲಿ!
ಸುದ್ದಿ ಸಾಗರ

AOB ಗಡಿಯಲ್ಲಿ ಗುಂಡಿನ ಮೊರೆತ: ಕಮಾಂಡೋಗಳ ಗುಂಡಿಗೆ 24 ನಕ್ಸಲರ ಬಲಿ!

ಆಂಧ್ರ ಪ್ರದೇಶ -ಒಡಿಶಾ ಗಡಿಭಾಗದಲ್ಲಿ 24 ನಕ್ಸಲರನ್ನು ಸೋಮವಾರ ಹತ್ಯೆ ಮಾಡಲಾಗಿದೆ. ದಟ್ಟ ಕಾಡಿನಲ್ಲಿ ಈ ಎನ್ಕೌಂಟರ್ ನಡೆದಿದ್ದು ಘಟನೆಯಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಕ್ಸಲರ ಮೇಲೆ ಪೊಲೀಸರು ನಡೆಸಿದ ಪ್ರಮುಖ ದಾಳಿ ಇದಾಗಿದೆ.ಸೋಮವಾರ ನಸುಕಿನ ವೇಳೆಯಲ್ಲಿ ಈ ಘಟನೆ ನಡೆದಿದೆ.

ಒಡಿಶಾದ ಮಲ್ಕನ್ ಗಿರಿ ಜಿಲ್ಲೆಯ ಜಂತ್ರಿ ಎಂಬ ಗ್ರಾಮೀಣ ಪ್ರದೇಶದಲ್ಲಿ ನಕ್ಸಲರ ತರಬೇತಿ ಶಿಬಿರ ನಡೆಯುತ್ತಿದೆ ಎನ್ನುವ ಖಚಿತ ಮಾಹಿತಿ ಪೊಲೀಸರಿಗೆ ಬಂದಿತ್ತು. ಆಂಧ್ರ ಗಡಿ ಇಲ್ಲಿಂದ ಕೆಲವೇ ಕಿಲೋ ಮೀಟರ್ ದೂರದಲ್ಲಿದೆ.“ನಮಗೆ ಇಲ್ಲಿ ನಕ್ಸಲರ ಪ್ರಮುಖ ತರಬೇತಿ ಶಿಬಿರ ನಡೆಯುತ್ತಿದೆ ಎಂದು ಗುಪ್ತಚರ ಮಾಹಿತಿಗಳು ಬಂದಿದ್ದವು. ಈ ಮಾಹಿತಿಗಳನ್ನು ಇಟ್ಟುಕೊಂಡು ಆಂಧ್ರ ಪ್ರದೇಶ ಕಮಾಂಡೋಗಳು ಮತ್ತು ಒಡಿಶಾದ ಶಸಸ್ತ್ರ ಪೊಲೀಸರು ಸೇರಿಕೊಂಡು ಜಂಟಿ ಕಾರ್ಯಾಚರಣೆಗೆ ಇಳಿದೆವು," ಎಂದು ಮಲ್ಕನ್ಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿತ್ರಭಾನು ಮೊಹಾಪಾತ್ರ ಮಾಹಿತಿ ನೀಡಿದ್ದಾರೆ.

ಪೊಲೀಸ್ ಮೂಲಗಳ ಮಾಹಿತಿ ಪ್ರಕಾರ ಇಲ್ಲಿನ ಬಲಿಮೇಲ ಜಲಾಶಯದ ಬಳಿ ಕೂಬಿಂಗ್ನಲ್ಲಿದ್ದ ಪೊಲೀಸರು ನಕ್ಸಲರನ್ನು ಕಂಡಿದ್ದಾರೆ. ಬೆನ್ನಿಗೇ ಗುಂಡಿನ ಚಕಮಕಿ ಆರಂಭವಾಗಿದೆ. ಘಟನೆಯಲ್ಲಿ 24 ನಕ್ಸಲರನ್ನು ಗುಂಡಿಕ್ಕಿ ಕೊಲ್ಲಲಾಗಿದೆ. "ಇವರಲ್ಲಿ 17 ಪುರುಷರು ಮತ್ತು 7 ಮಹಿಳೆಯರು" ಎಂದು ಮಿತ್ರಭಾನು ಮೊಹಾಪಾತ್ರ ಮಾಹಿತಿ ನೀಡಿದ್ದಾರೆ. ಕೆಲವು ನಕ್ಸಲರು ದಾಳಿಯಲ್ಲಿ ಗಾಯಗೊಂಡಿದ್ದು ದಟ್ಟ ಕಾಡೊಳಕ್ಕೆ ಅವಿತುಕೊಂಡಿರಬಹುದು ಎಂದು ಮೊಹಾಪಾತ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗುಪ್ತಚರ ಮಾಹಿತಿಗಳ ಪ್ರಕಾರ, ಸ್ಥಳದಲ್ಲಿ ಸುಮಾರು 100 ನಕ್ಸಲರು ಸೇರಿದ್ದರು ಎಂದು ಹೇಳಲಾಗಿದೆ. ಈ ನಕ್ಸಲರ ತಂಡ 'ಆಂಧ್ರ-ಒಡಿಶಾ ಗಡಿ ವಿಶೇಷ ವಲಯ ಸಮಿತಿ'ಯ ಭಾಗ ಎಂದು ಹೇಳಲಾಗಿದ್ದು, ರಾಮಕೃಷ್ಣ ಅಲಿಯಾಸ್ ಆರ್.ಕೆ ಇದರ ನೇತೃತ್ವ ವಹಿಸಿದ್ದರು ಎನ್ನಲಾಗಿದೆ. ಆದರೆ ಘಟನೆಯಲ್ಲಿ ರಾಮಕೃಷ್ಣ ತಪ್ಪಿಸಿಕೊಂಡಿದ್ದು, ಅವರ ಮಗ ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳು ಹೇಳುತ್ತಿವೆ.

ಈ ಕುರಿತು ಒಡಿಶಾ ಪೊಲೀಸ್ ಮುಖ್ಯಸ್ಥ ಎ.ಬಿ. ಸಿಂಗ್ ಪ್ರತಿಕ್ರಿಯೆ ನೀಡಿದ್ದು "ಸತ್ತವರಲ್ಲಿ ಪ್ರಮುಖ ನಕ್ಸಲ್ ನಾಯಕರೂ ಸೇರಿರಬಹುದು," ಎಂದು ಹೇಳಿದ್ದಾರೆ. ಪ್ರಮುಖ ನಕ್ಸಲ್ ನಾಯಕ ಉದಯ್ ಈ ಘಟನೆಯಲ್ಲಿ ಸಾವಿಗೀಡಾಗಿರಬಹುದು ಎನ್ನಲಾಗಿದೆ. ಕೆಲವು ಮೋಸ್ಟ್ ವಾಂಟೆಡ್ ನಕ್ಸಲರು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದು ದಟ್ಟ ಕಾಡಿನಲ್ಲಿ ಮರೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಘಟನೆಯಲ್ಲಿ ಇಬ್ಬರು ಪೊಲೀಸರೂ ಗಾಯಗೊಂಡಿದ್ದು ಅವರನ್ನು ವಿಶೇಷ ಹೆಲಿಕಾಪ್ಟರಿನಲ್ಲಿ ವಿಶಾಖಪಟ್ಟಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ."ಘಟನೆ ನಡೆದ ಸ್ಥಳ ತೀರಾ ಗ್ರಾಮೀಣ ಭಾಗವಾದ್ದರಿಂದ, ಅಲ್ಲಿಗೆ ವಾಹನ ತಲುಪಲು ಆಂಧ್ರ ಪ್ರದೇಶದಿಂದ ರಸ್ತೆಗಳ ಮೂಲಕವೇ ಬರಬೇಕು. ಹೀಗಾಗಿ ಹೆಲಿಕಾಪ್ಟರ್ಗಳ ಮೂಲಕ ಮೃತ ದೇಹಗಳನ್ನು ಮಲ್ಕನ್ಗಿರಿ ಜಿಲ್ಲಾ ಕೇಂದ್ರಕ್ಕೆ ತರಲಾಗಿದೆ,” ಎಂದೂ ಎಸ್ಪಿ ಮಾಹಿತಿ ನೀಡಿದ್ದಾರೆ.

ನಕ್ಸಲರಿಗಾಗಿ ಹುಡುಕಾಟ ಇನ್ನೂ ಜಾರಿಯಲ್ಲಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೊಹಾಪಾತ್ರ ಹೇಳಿದ್ದಾರೆ.ನಕ್ಸಲರ ಬಳಿಯಿಂದ ಅಪಾರ ಶಸ್ತ್ರಾಸ್ತ್ರಗಳನ್ನೂ ವಶಕ್ಕೆ ಪಡೆಯಲಾಗಿದೆ. ಇವುಗಳಲ್ಲಿ ನಾಲ್ಕು ಎಕೆ-47 ಬಂದೂಕು, 3 ಸ್ವಯಂಚಾಲಿತ ಬಂದೂಕುಗಳು ಮತ್ತು ಇತರ ಬಂದೂಕುಗಳು ಸೇರಿವೆ.

AOB ಗಡಿಯಲ್ಲಿ ಗುಂಡಿನ ಮೊರೆತ: ಕಮಾಂಡೋಗಳ ಗುಂಡಿಗೆ  24 ನಕ್ಸಲರ ಬಲಿ!

ನಕ್ಸಲರ ಭದ್ರ ಕೋಟೆ ‘ಚಿತ್ರಕೊಂಡ ಜಲಾಶಯ:

ಎನ್ಕೌಂಟರ್ ನಡೆದ ಜಂತ್ರಿ ಗ್ರಾಮ 'ಚಿತ್ರಕೊಂಡ ಜಲಾಶಯ'ದ ವ್ಯಾಪ್ತಿಗೆ ಬರುತ್ತದೆ. ಚಿತ್ರಕೊಂಡ ಜಲಾಶಯ ನಕ್ಸಲರ ಭದ್ರಕೋಟೆ. ಇದೇ ಅಕ್ಟೋಬರ್ 1ರಂದು ನಕ್ಸಲರು ಇಲ್ಲಿನ ಜನರ ಸಂಪರ್ಕಕಿದ್ದ ಬೋಟ್ ಒಂದನ್ನು ಹೈಜಾಕ್ ಮಾಡಿದ್ದರು. ಇಲ್ಲಿನ ಜಂತ್ರಿ ಗ್ರಾಮದಲ್ಲಿ ನಡೆಯಲಿದ್ದ ತಮ್ಮ ತರಬೇತಿ ಶಿಬಿರಕ್ಕೆ ಯಾರೂ ಬರಕೂಡದು ಎಂಬ ಕಾರಣಕ್ಕೆ ನಕ್ಸಲರು ಈ ಕೃತ್ಯ ನಡೆಸಿದ್ದರು.ಈ ಬೋಟ್ ಬಿಟ್ಟರೆ ಈ ಗ್ರಾಮಕ್ಕೆ ಬರಲು ಬೇರೆ ಸುಲಭ ಮಾರ್ಗಗಳಿಲ್ಲ. ಅಷ್ಟರಮಟ್ಟಿಗೆ 'ಚಿತ್ರಕೊಂಡ ಜಲಾಶಯ' ಸುತ್ತ ಮುತ್ತಲಿನ ಪ್ರದೇಶ ದಟ್ಟ ಕಾಡಿನಿಂದ ಆವರಿಸಿಕೊಂಡಿದ್ದು ತೀರಾ ಹಿಂದುಳಿದ ಪ್ರದೇಶವಾಗಿದೆ.

ಈ ಹಿಂದೆ ಇಲ್ಲಿ ಸರಕಾರ ಕಟ್ಟಲು ಹೊರಟಿದ್ದ 'ಗುರುಪ್ರಿಯ ಸೇತುವೆ'ಯ ಕಾಮಕಾರಿಯನ್ನೂ ಇದೇ ನಕ್ಸಲರು ಬೇಕೆಂದೇ ತಡೆದಿದ್ದರು. ಇದರಿಂದ ಸೇತುವೆ ಕಾಮಗಾರಿ ನಿಧಾನವಾಗಿತ್ತು. ಒಂದೊಮ್ಮೆ ಈ ಸೇತುವೆ ಕಾಮಗಾರಿ ಪೂರ್ಣ ಗೊಂಡಿದ್ದೇ ಆದಲ್ಲಿ ಜಲಾಶಯದ ಆಚೆ ಭಾಗದಲ್ಲಿರುವ 150 ಗ್ರಾಮಗಳು ಸುಲಭ ಸಂಪರ್ಕಕ್ಕೆ ಬರುತ್ತವೆ. ಇದರಿಂದ ತಮ್ಮ ನೆಲೆಗೆ ಕುತ್ತು ಬರುತ್ತದೆ ಎಂಬ ಕಾರಣಕ್ಕೆ ಈ ರೀತಿ ಮಾಡಿದ್ದರು.ಸದ್ಯ ಇಲ್ಲಿನ ಸೇತುವೆ ಕಾಮಗಾರಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಬಿರುಸಿನಿಂದ ನಡೆಯುತ್ತಿದೆ.

ನಕ್ಸಲರಿಗೆ ಈದು ತಲೆನೋವು ತಂದಿದೆ. ಹೀಗಾಗಿ ರಾಮಕೃಷ್ಣ ನೇತೃತ್ವದಲ್ಲಿ ಹೇಗಾದರೂ ಮಾಡಿ ಈ ಸೇತುವೆ ಕಾಮಗಾರಿ ನಿಲ್ಲಿಸಿ ತಮ್ಮ ಭದ್ರಕೋಟೆ ಉಳಿಸಲು ನಕ್ಸಲರು ಹೊರಟಿದ್ದರು. ಆದರೆ ಅದು ಎನ್ಕೌಂಟರಿನಲ್ಲಿ ಪರ್ಯಾವಸನವಾಗಿದೆ.2008ರಲ್ಲೊಮ್ಮೆ ಇಲ್ಲಿನ 'ಅಲಂಪಕ ಜಲಾಶಯ'ದಲ್ಲಿ ಬೋಟಿನಲ್ಲಿ ಪ್ರಯಾಣಿಸುತ್ತಿದ್ದ ಆಂಧ್ರ ಪ್ರದೇಶಕ್ಕೆ ಸೇರಿದ ಶ್ವಾನದಳದ ಜವಾನರ ಮೇಲೆ ನಕ್ಸಲರು ಗುಂಡಿನ ಮಳೆಗರೆದಿದ್ದರು. ಪರಿಣಾಮ 35 ಜವಾನರನ್ನು ಸೇರಿ 38 ಜನ ಸಾವನ್ನಪ್ಪಿದ್ದರು.

ಚಿತ್ರ ಕೃಪೆ:  ದಿ ಹಿಂದೂ, ಬಿಬಿಸಿ
ಚಿತ್ರ ಕೃಪೆ: ದಿ ಹಿಂದೂ, ಬಿಬಿಸಿ

ಮಲ್ಕನ್ಗಿರಿ ಭಾಗದಲ್ಲಿ ನಡೆದ ಅತೀ ದೊಡ್ಡ ಎನ್ಕೌಂಟರ್ ಇದಾಗಿದೆ. ಇಲ್ಲಿನ ಪೊಡಿಯಾ ಬ್ಲಾಕಿನಲ್ಲಿ 2013ರ ಸೆಪ್ಟೆಂಬರಿನಲ್ಲಿ ನಡೆದ ಎನ್ಕೌಂಟರಿನಲ್ಲಿ ಒಟ್ಟು 13 ನಕ್ಸಲರು ಸಾವನ್ನಪ್ಪಿದ್ದರು.ಸದ್ಯ ಈ ಕಾರ್ಯಚರಣೆಯನ್ನು ಪೊಲೀಸರಿಗಾದ ಜಯ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಈ ಹಿಂದೆ ಹಲವು ಪೊಲೀಸರು ಇದೇ ಭಾಗದಲ್ಲಿ ತಮ್ಮ ಪ್ರಾಣ ಳೆದುಕೊಂಡಿದ್ದರು ಎಂಬುದು ಗಮನಾರ್ಹ.

2008ರಲ್ಲಿ ಇದೇ ಭಾಗದಲ್ಲಿ ಅರೆಸೇನಾ ಪಡೆಗಳ ವಾಹನದ ಮೇಲೆ ದಾಳಿ ಮಾಡಿದ್ದ ನಕ್ಸಲರು ಎಲ್ಲಾ 18 ಪೊಲೀಸರನ್ನು ಕೊಂದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಲ್ಕನ್ಗಿರಿಯಲ್ಲಿ ನಕ್ಸಲರ ಸಂಖ್ಯೆ ದೊಡ್ಡ ಮಟ್ಟಕ್ಕೆ ಕುಸಿಯುತ್ತಿದೆ. ಆದರೆ ಒಳ್ಳೆಯ ಬೆಳವಣಿಗೆಯೆಂದರೆ ಹೆಚ್ಚಿನವರು ಶರಣಾಗತರಾಗಿ ಮುಖ್ಯವಾಹಿನಿಗೆ ಮರಳುತ್ತಿದ್ದಾರೆ. ನೂರಾರು ನಕ್ಸಲರು ಈಗಾಗಲೇ ಶರಣಾಗಿ ಸಮಾಜದ ಜೊತೆ ಒಂದಾಗಿದ್ದಾರೆ.

ಆದರೆ ಅಳಿದುಳಿದ ನಕ್ಸಲರು ಮಾತ್ರ ಇಲ್ಲಿನ ಗಡಿ ಭಾಗದಲ್ಲಿ ಶಿಬಿರಗಳನ್ನು ನಡೆಸುತ್ತಾ ತಮ್ಮ ಬಲವರ್ಧನೆಗಾಗಿ ಬಡಿದಾಡುತ್ತಿದ್ದಾರೆ.ಒಡಿಶಾ ಮತ್ತು ಆಂಧ್ರ ಪ್ರದೇಶ ಗಡಿಭಾಗದಲ್ಲಿರುವ ಬುಡಕಟ್ಟು ಜನರಿಗೆ ಮತ್ತು ಬಡವರಿಗೆ ಹೆಚ್ಚಿನ ಹಕ್ಕುಗಳನ್ನು ನೀಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಹಲವು ವರ್ಷಗಳಿಂದ ನಕ್ಸಲರು ಇಲ್ಲಿ ಹೋರಾಡುತ್ತಲೇ ಇದ್ದಾರೆ.