samachara
www.samachara.com
ಅಪೋಲೋದಲ್ಲಿ ಮಲಗಿರುವ 'ಅಮ್ಮ'; ಈಗ ಸಚಿವಾಧಿಕಾರ ಇಲ್ಲದ ಮುಖ್ಯಮಂತ್ರಿ!
ಸುದ್ದಿ ಸಾಗರ

ಅಪೋಲೋದಲ್ಲಿ ಮಲಗಿರುವ 'ಅಮ್ಮ'; ಈಗ ಸಚಿವಾಧಿಕಾರ ಇಲ್ಲದ ಮುಖ್ಯಮಂತ್ರಿ!

samachara

samachara

ತಮಿಳುನಾಡಿನಲ್ಲಿ

ಮುಖ್ಯಮಂತ್ರಿ ಜಯಲಲಿತಾ ಅವರ ಕೈಲಿದ್ದ ಸಚಿವಾಲಯಗಳಿಗೆ ಉತ್ತರಾಧಿಕಾರಿ ನೇಮಕ ಪ್ರಕ್ರಿಯೆ ನಡೆದಿದೆ.

ಮಂಗಳವಾರ ನಡೆದ ಪ್ರಮುಖ ಬೆಳವಣಿಗೆಯಲ್ಲಿ, ತಮಿಳುನಾಡಿನ ರಾಜ್ಯಪಾಲ ವಿದ್ಯಾಸಾಗರ್ ರಾವ್, ತಮಗಿರುವ ಅಧಿಕಾರವನ್ನು ಬಳಸಿಕೊಂಡು ತಮಿಳುನಾಡಿನ ಸಂಪುಟ ಹಂಚಿಕೆಯಲ್ಲಿ ಬದಲಾವಣೆ ಮಾಡಿದ್ದಾರೆ. ಮಖ್ಯಮಂತ್ರಿ ಜಯಲಲಿತಾ ಕೈಲಿದ್ದ ಸಚಿವಾಲಯಗಳನ್ನು ಅವರ ಉತ್ತರಾಧಿಕಾರಿ, ರಾಜ್ಯ ಆರ್ಥಿಕ ಸಚಿವ ಓ. ಪನ್ನೀರ್ ಸೆಲ್ವಂ ಅವರಿಗೆ ಹಸ್ತಾಂತರಿಸಿದ್ದಾರೆ. ಜತೆಗೆ, ಸಂಪುಟ ಸಭೆಗಳನ್ನು ನಡೆಸುವ ಅಧಿಕಾರನ್ನು ಸೆಲ್ವಂ ಅವರಿಗೆ ವಹಿಸಲಾಗಿದೆ. ಈ ನಿರ್ಧಾರ ಜೆ. ಜಯಲಿಲಿತಾ ಆರೋಗ್ಯವನ್ನು ಸುಧಾರಿಸಿಕೊಂಡು ಮತ್ತೆ ಅಧಿಕಾರ ನಡೆಸಲು ಮರಳುವವರೆಗೂ ಜಾರಿಯಲ್ಲಿರಲಿದೆ. ಆದರೆ, ಮುಖ್ಯಮಂತ್ರಿ ಸ್ಥಾನದಲ್ಲಿ ಜಯಲಲಿತಾ ಮುಂದುವರಿಯಲಿದ್ದಾರೆ.

ರಾಜ್ಯಪಾಲರು ಸಂವಿಧಾನದ 166 (3) ನೇ ಆರ್ಟಿಕಲ್ ಅಡಿಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಪ್ರತಿಪಕ್ಷದ ನಾಯಕ, ಡಿಎಂಕೆ ಪಕ್ಷ ಖಜಾಂಚಿಯೂ ಆಗಿರುವ, ಎಂ. ಕೆ. ಸ್ಟಾಲಿನ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. "ಪ್ರತಿಪಕ್ಷದ ನಾಯಕನಾಗಿ ನಾನು ರಾಜ್ಯಪಾಲರು ರಾಜ್ಯದ ಆಡಳಿತ ಸುಗಮವಾಗಿ ನಡೆಯಬೇಕು ಎಂಬ ಹಿನ್ನೆಲೆಯಲ್ಲಿ ತೆಗೆದುಕೊಂಡ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ,'' ಎಂದು ಅವರು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರಾದೇಶಿಕ ಪಕ್ಷಗಳ ಸುದೀರ್ಘ ಆಡಳಿತವನ್ನು ಕಂಡ ದಕ್ಷಿಣ ಭಾರತದ, ಕರ್ನಾಟಕದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಹೀಗೊಂದು ಪರಿಸ್ಥಿತಿ ಉದ್ಭವಿಸಲು ಅನೇಕ ಕಾರಣಗಳಿವೆ. ಮೊದಲನೆಯದು ಮತ್ತು ಪ್ರಮುಖವಾದುದು, ಅಲ್ಲಿನ ಮುಖ್ಯಮಂತ್ರಿ ಜಯಲಲಿತಾ ಅವರು ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈನ ಆಪೋಲೋ ಖಾಸಗಿ ಪಂಚತಾರ ಆಸ್ಪತ್ರೆಗೆ ದಾಖಲಾಗಿದ್ದು ಸೆ. 22ರಂದು. ದೇಹದಲ್ಲಿ ನೀರಿನ ಅಂಶ ಕಡಿಮೆಯಾದ ಹಾಗೂ ಜ್ವರ ಹಿನ್ನೆನೆಯಲ್ಲಿ ಜಯಲಲಿತಾ ಆಸ್ಪತ್ರೆಗೆ ದಾಖಲಾದರು. ಅವತ್ತಿಂದ ಇಲ್ಲೀವರೆಗೂ ಅವರು ಅಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಆರೋಗ್ಯದ ಕುರಿತು ಆಸ್ಪತ್ರೆ ಆಗಾಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಿದೆ.

ಅದು 'ಅಮ್ಮ'ನ ನಾಡು:

ಕರ್ನಾಟಕ ಮೂಲದ ಜಯಲಲಿತಾ ತಮ್ಮ ವೃತ್ತಿ ಬದುಕನ್ನು ಆರಂಭಿಸಿದಾಗ ಅವರಿಗೆ ಇನ್ನೂ 13 ವರ್ಷ ವಯಸ್ಸು. ಚಿತ್ರ ನಟಿಯಾಗಿ ಅವರು ಸಾರ್ವಜನಿಕ ಬದುಕಿಗೆ ಪಾದಾರ್ಪಣೆ ಮಾಡಿದರು. ನಂತರ ಅವರು ತಮಿಳುನಾಡಿನ ಅಂದಿನ ರಾಜಕೀಯ ನೇತಾರ ಎಂಜಿಆರ್ ಅವರ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಬಂದರು. ಎಂಜಿಆರ್ ಕಾಲಾ ನಂತರ ಎಐಎಡಿಎಂ ಪಕ್ಷದ ಚುಕ್ಕಾಣಿಯನ್ನು ಹಿಡಿದರು. ಜಯಲಲಿತಾ ಅಧಿಕಾರದಲ್ಲಿ ಇದ್ದಷ್ಟು ದಿನ, ಮಳೆ ಕಡಿಮೆಯಾದ ವರ್ಷಗಳಲ್ಲಿ ಕಾವೇರಿ ವಿವಾದ ಹುಟ್ಟಿಕೊಳ್ಳುತ್ತ ಬಂದಿದ್ದು ಸಂಪ್ರದಾಯ. ಹೀಗಾದಾಗೆಲ್ಲಾ, ಕರ್ನಾಟಕದಾದ್ಯಂತ ಜಯಲಲಿತಾ ಪ್ರತಿಕೃತಿಗಳನ್ನು ದಹಿಸುವುದು, ಅವರ ವಿರುದ್ಧ ಪ್ರತಿಭಟನೆಗಳು ನಡೆಯುವುದು ಸಾಮಾನ್ಯವಾಗಿರುವ ವಿದ್ಯಮಾನಗಳು. ಈ ಬಾರಿಯೂ ಕಾವೇರಿ ವಿವಾದದ ಸಮಯದಲ್ಲಿ ಜಯಲಲಿತಾ ಅವರ ತಿಥಿಯನ್ನೂ ಕೆಲವು ಕನ್ನಡ ಪರ ಸಂಘಟನೆಗಳು ಬೆಂಗಳೂರಿನ ಟೌನ್ ಹಾಲ್ ಮುಂಭಾಗ ನಡೆಸಿದ್ದವು.

ತಮಿಳುನಾಡಿನ ವಿಚಾರಕ್ಕೆ ಬರುವುದಾದರೆ, ಜಯಲಲಿತಾ ಅಧಿಕಾರದಲ್ಲಿ ಇರುವ ದಿನಗಳಲ್ಲಿ ಪ್ರಶ್ನಾತೀತ ನಾಯಕಿ. ಎಲ್ಲರ ಪ್ರೀತಿಯ 'ಅಮ್ಮ'. ಅವರ ಪಿಯೂಸ್ ಗಾರ್ಡನ್ ಮನೆಯ ಮುಂದೆ ಸದಾ ಜನಜಾತ್ರೆ ನೆರೆದಿರುತ್ತಿತ್ತು. ಅವರ ಭಾವ ಚಿತ್ರಗಳಿರುವ ಚೀ ಚೈನ್, ಬಾವುಟ ಮತ್ತಿತರ ಪರಿಕರಗಳನ್ನು ಮಾರಾಟ ಮಾಡಿಯೇ ಬದುಕು ನಡೆಸುವ ಹಲವು ಮಂದಿ ಇದ್ದಾರೆ. ಅವರಿಗೆಲ್ಲಾ 'ಅಮ್ಮ' ಎಂದರೆ ದೇವರ ಸಮಾನ. ಅಷ್ಟರ ಮಟ್ಟಿಗೆ ರಾಜಕೀಯ ನಾಯಕಿಯಾಚೆಗಿನ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ಜನರಲ್ಲಿ, ತಮ್ಮದೇ ಸಹೋದ್ಯೋಗಿಗಳಲ್ಲಿ ಮೂಡಿಸುವಷ್ಟರ ಮಟ್ಟಿಗೆ ಜಯಲಲಿತಾ ಪ್ರಭಾವವನ್ನು ಹೊಂದಿದ್ದವರು.


       ಓ. ಪನ್ನೀರ್ ಸೆಲ್ವಂ ಹಾಗೂ ಜಯಲಲಿತಾ.
ಓ. ಪನ್ನೀರ್ ಸೆಲ್ವಂ ಹಾಗೂ ಜಯಲಲಿತಾ.

ಅವರು ಅಕ್ರಮ ಆಸ್ತಿ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾದ ಸಮಯದಲ್ಲಿ ಮುಖ್ಯಮಂತ್ರಿ ಗಾಧಿಯ ಮೇಲೆ ಇದೇ ಓ. ಪನೀರ್ ಸೆಲ್ವಂ ಕೆಲಕಾಲ ಕುಳಿತಿದ್ದರು. ಜಯಲಲಿತಾ ಜೈಲಿನಿಂದ ಬಿಡುಗಡೆಯಾಗಿ, ಕೇಸಿನ ತಾಂತ್ರಿಕ ಅಡೆತಡಗಳನ್ನು ನಿವಾರಿಸಿಕೊಂಡು ಮತ್ತೆ ರಾಜ್ಯಾಡಳಿತಕ್ಕೆ ಮರಳಿದಾಗ ಸೆಲ್ವಂ ಅವರ ಕಾಲಿಗೆ ಬಿದ್ದು, ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಟ್ಟಿದ್ದರು. ಇಂತಹದೊಂದು ಹಿನ್ನೆಲೆ ಹಾಗೂ 'ಟ್ರಾಕ್ ರೆಕಾರ್ಡ್' ಇಟ್ಟುಕೊಂಡಿರುವ ಜಯಲಲಿತಾ ಇವತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಹಜವಾಗಿಯೇ ಅಲ್ಲಿನ ಇವತ್ತಿನ ಬೆಳವಣಿಗಗಳು ಗಮನ ಸೆಳೆಯುತ್ತಿವೆ.

ಹಿಂದೆಯೇ ವರದಿಯಾಗಿತ್ತು:

ಜಯಲಲಿತಾ ಆರೋಗ್ಯದಲ್ಲಿ ದೊಡ್ಡಮಟ್ಟದ ಏರುಪೇರಾಗಿದೆ ಎಂಬ ಸುದ್ದಿ ಮೊದಲು ಹೊರಬಿದ್ದಿದ್ದು 2015ರಲ್ಲಿ. ಅಂತರ್ಜಾಲ ತಾಣ ರೆಡಿಫ್ ಡಾಟ್ ಕಾಮ್ ಮೊದಲು ಹೀಗೊಂದು ಸುದ್ದಿಯನ್ನು ಪ್ರಕಟಿಸಿತ್ತು. 'ಜಯಲಲಿತಾ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಅಂಗಾಂಗ ಜೋಡಣೆಗಾಗಿ ಸಿಂಗಪೂರ್ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಗುತ್ತದೆ' ಎಂದು ಹೇಳಿತ್ತು. ಇದರ ವಿರುದ್ಧ ಜಯಲಲಿತಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಆದರೆ, ಸುಪ್ರಿಂ ಕೋರ್ಟ್ 'ಸಾರ್ವಜನಿಕ ಜೀವನದಲ್ಲಿರುವವರು ಸುದ್ದಿಯಾಗುವುದು ಸಹಜ' ಎಂದು ತಿಳಿಹೇಳಿ ಕಳುಹಿಸಿತ್ತು.

ಈ ಬಾರಿ ಜಯಲಲಿತಾ ಅನಾರೋಗ್ಯಕ್ಕೆ ಈಡಾಡುತ್ತಿದ್ದಂತೆ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆ ಸೇರಿಕೊಂಡರು. ಅದು ಅಷ್ಟೆ ವೇಗವಾಗಿ ಸುದ್ದಿಯೂ ಆಯಿತು. 'ಜಯಲಲಿತಾ ಆಸ್ಪತ್ರೆಯಿಂದಲೇ ಮುಖ್ಯಮಂತ್ರಿ ಕಚೇರಿಯನ್ನು ನಡೆಸುತ್ತಿದ್ದಾರೆ. ಕಾವೇರಿ ವಿಚಾರದಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ' ಎಂಬ ಸುದ್ದಿಗಳು ಹೊರಬಿದ್ದವು. ಈ ಸಮಯದಲ್ಲಿ ಡಿಎಂಕೆ ನಾಯಕ ಕರುಣಾನಿಧಿ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಆಗ್ರಹಿಸಿದರು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಚೆನ್ನೈ ಹೈ ಕೋರ್ಟ್ನಲ್ಲಿ ದಾಖಲಾಯಿತು. ಈ ಬೆಳವಣಿಗಳ ಹಿನ್ನೆಲೆಯಲ್ಲಿ ಜಯಲಲಿತಾ ಅನಾರೋಗ್ಯದ ಕುರಿತು ಗಾಳಿ ಸುದ್ದಿಗಳು ಹುಟ್ಟಿಕೊಂಡವು. ಅವರಿಗೆ ವಿಷ ಉಣಿಸಲಾಗಿದೆ ಎಂಬರ್ಥದ ಸುದ್ದಿಗಳೂ ಹರಿದಾಡಿದವು. ಆದರೆ, ನಿಜಕ್ಕೂ ಜಯಲಲಿತಾ ಆರೋಗ್ಯದಲ್ಲಿ ಏನಾಗಿದೆ ಎಂಬ ಬಗ್ಗೆ ಹೇಳುವುದಕ್ಕೆ ಆಧಾರಗಳಿಲ್ಲ.

ಈಗಾಗಲೇ ಅಪೋಲೋ ಆಸ್ಪತ್ರೆ ಮುಂಭಾಗ ಕಳೆದ ಹಲವು ದಿನಗಳಿಂದ ಎಐಎಡಿಎಂಕೆ ಕಾರ್ಯಕರ್ತರ ಜಾತ್ರೆಯೇ ನೆರೆದಿದೆ. ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿದೆ. ಆಸ್ಪತ್ರೆಯಿಂದ ಸುಮಾರು ಅರ್ಧ ಕಿ. ಮೀ ದೂರಲ್ಲಿಯೇ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಆಸ್ಪತ್ರೆಯ ಸಿಬ್ಬಂದಿಗಳು, ಆಂಬುಲೆನ್ಸ್ ಹಾಗೂ ತುರ್ತು ಅಗತ್ಯವಿರುವವರಿಗೆ ಬಿಟ್ಟರೆ ಬೇರೆಯವರಿಗೆ ಪ್ರವೇಶ ನಿರಾಕರಿಸಲಾಗಿದೆ. "ಎಷ್ಟರ ಮಟ್ಟಿಗೆ ಎಂದರೆ, ಜಯಲಲಿತಾ ಸಂಪುಟ ಸಚಿವರನ್ನೂ ಕೂಡ ತಪಾಸಣೆ ಮಾಡಿಯೇ ಒಳಗೆ ಬಿಡಲಾಗುತ್ತಿದೆ,'' ಎನ್ನುತ್ತಾರೆ ಸ್ಥಳದಲ್ಲಿರುವ ಪತ್ರಕರ್ತರು.

ಇಂತಹ ಸನ್ನಿವೇಶದಲ್ಲಿ, ತಮಿಳುನಾಡಿನ ರಾಜ್ಯಪಾಲರು ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ಅಪೋಲೋದಲ್ಲಿ ಮಲಗಿರುವ ಅಮ್ಮ ಜಯಲಲಿತಾ ತಮ್ಮ ಸಚಿವಾಲಯಗಳ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಮುಖ್ಯಮಂತ್ರಿ ಪದವಿಯಲ್ಲಿ ಮುಂದುವರಿದ್ದಾರೆ. ಅವರು ಅನಾರೋಗ್ಯದಿಂದ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಚಿತ್ರ ಕೃಪೆ:

ಇಂಡಿಯನ್ ಎಕ್ಸ್ ಪ್ರೆಸ್.