samachara
www.samachara.com
ಸಾಂದರ್ಬಿಕ ಚಿತ್ರ
ಸುದ್ದಿ ಸಾಗರ

ಮುಂಬೈ ಟು ಅಮೆರಿಕಾ: ‘ಕಾಲ್ ಸೆಂಟರ್’ ಹೆಸರಿನಲ್ಲಿ ನಡೆಯುತ್ತಿದ್ದ ಹೈಟೆಕ್ ವಂಚನೆಯ ಜಾಲ ಬಯಲಿಗೆ!

Summary

ತಂತ್ರಜ್ಞಾನದ ಜತೆಗೆ ವಂಚನೆಯ ದಾರಿಗಳೂ ಕೂಡ ಅಪ್ಡೇಟ್ ಆಗುತ್ತಿವೆ. ಇದಕ್ಕೊಂದು ತಾಜಾ ಉದಾಹರಣೆ ಈ ಪ್ರಕರಣ. ಮುಂಬೈನಲ್ಲಿ ಕುಳಿತುಕೊಂಡು ಅಮೆರಿಕಾ ಪ್ರಜೆಗಳಿಂದ ಹಣ ಪೀಕುತ್ತಿದ್ದ ವಿಚಿತ್ರ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ತೆರಿಗೆ ಅಧಿಕಾರಿಗಳ ಎಂದು ಹೇಳಿಕೊಂಡು ಅಮೆರಿಕಾ ಪ್ರಜೆಗಳಿಂದ ಹಣವನ್ನು ಕಟ್ಟಿಸಿಕೊಳ್ಳುತ್ತಿದ್ದ ಮುಂಬೈನ ಕಾಲ್ ಸೆಂಟರ್ಗೆ ಸೇರಿದ ಬರೋಬ್ಬರಿ 772 ಜನರನ್ನು ಬಂಧಿಸಲಾಗಿದೆ.

ಬುಧವಾರ ಮುಂಬೈನ ಥಾಣೆಯಲ್ಲಿ 9 ನಕಲಿ ಕಾಲ್ ಸೆಂಟರ್ ಗಳಿಗೆ ದಾಳಿ ನಡೆಸುವ ಮೂಲಕ ಪ್ರಕರಣ ಬಯಲಿಗೆ ಬಂದಿದೆ. ದಾಳಿ ವೇಳೆಯಲ್ಲಿ ಪೊಲೀಸರು 772 ಜನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಇವರಲ್ಲಿ 70 ಜನರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಉಳಿದವರನ್ನು ಬಿಟ್ಟು ಕಳುಹಿಸಲಾಗಿದೆ. ಈ ಕಾಲ್ ಸೆಂಟರ್ಗಳಿಂದ 851 ಹಾರ್ಡ್ ಡಿಸ್ಕ್, ಹೈ ಎಂಡ್ ಸರ್ವರ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ವಂಚನೆ ಹೇಗೆ?:

“ಹಣ ಗಳಿಸುವ ಉದ್ದೇಶದಿಂದ ಈ ರೀತಿಯ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದರು,” ಎಂದು ಮುಂಬೈ ಪೊಲೀಸ್ ಡಿಸಿಪಿ ಪರಾಗ್ ಮೆನೆರೆ ತಿಳಿಸಿದ್ದಾರೆ. “ಅಮೆರಿಕಾದ ಇಂಟರ್ನಲ್ ರೆವೆನ್ಯೂ ಸೇವೆಯ ಅಧಿಕಾರಿಗಳು ಎಂದು ಹೇಳಿಕೊಂಡು ಇವರೆಲ್ಲಾ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಿದ್ದರು,” ಎಂದು ಹೇಳಿದ್ದಾರೆ.

ಈ ಕೃತ್ಯದಲ್ಲಿ ತೊಡಗಿಸಿಕೊಂಡವರು ಅಮೆರಿಕಾದ ಜನರಿಗೆ ಪ್ರಿಪೇಡ್ ಕ್ಯಾಶ್ ಕಾರ್ಡ್ ಗಳನ್ನು ತೆಗೆದುಕೊಳ್ಳಲು ಹೇಳುತ್ತಿದ್ದರು. ಈ ಮೂಲಕ ತೆರಿಗೆಯಲ್ಲಿ ಭಾರೀ ರಿಯಾಯಿತಿ ಪಡೆದುಕೊಳ್ಳಬಹುದು ಎಂದು ಹೇಳುತ್ತಿದ್ದರು. ಮತ್ತು ಕಾರ್ಡ್ ಗಳನ್ನು ಪಡೆದುಕೊಳ್ಳದವರನ್ನು ಬಂಧಿಸುವುದಾಗಿಯೂ ಬೆದರಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಮೊದಲು ಟ್ಯಾಕ್ಸ್ ಕಟ್ಟದ ಅಮೆರಿಕಾ ನಾಗರಿಕರ ಪಟ್ಟಿ ಪಡೆದುಕೊಂಡು, ಅವರ ಬ್ಯಾಂಕ್ ಮಾಹಿತಿಗಳನ್ನು ಕಲೆ ಹಾಕುತ್ತಿದ್ದರು. ನಂತರ ಅವರ ಅಕೌಂಟ್ ಹ್ಯಾಕ್ ಮಾಡುತ್ತಿದ್ದರು. ಕೆಲವೊಮ್ಮೆ ಇವರು ಅಮೆರಿಕಾದ ತನಿಖಾ ಸಂಸ್ಥೆ FBI ಗೂ ಕರೆ ಮಾಡಿ ಸಹಾಯ ಕೇಳುತ್ತಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ.ಕೆಲವೊಮ್ಮೆ ಅಧಿಕಾರಿಗಳು ಎಂದು ಹೇಳಿ 'ಗಿಫ್ಟ್ ವೋಚರ್ಗಳ' ನಂಬರ್ ಪಡೆದುಕೊಳ್ಳುತ್ತಿದ್ದ ವಂಚಕರು, ನಂತರ ಈ ವೋಚರ್ ಗಳಿಂದ ಹೊರಗೆ ಖರೀದಿಯನ್ನೂ ನಡೆಸುತ್ತಿದ್ದರು.

ಈ ಜಾಲದಲ್ಲಿ ಅಮೆರಿಕನ್ನರೂ ಪಾಲ್ಗೊಂಡಿರುವ ಶಂಕೆ ಇದ್ದು, ಒಟ್ಟು ಆದಾಯದಲ್ಲಿ 70 ಭಾಗ ಭಾರತೀಯರು ಇಟ್ಟುಕೊಂಡರೆ, ಉಳಿದ 30 ಭಾಗ ಅಮೆರಿಕಾದ ವಂಚಕರಿಗೆ ನೀಡುತ್ತಿದ್ದರು.ಈ ವಂಚನೆಯ ಜಾಲದಲ್ಲಿ ಪ್ರತಿ ದಿನ ಸುಮಾರು ಒಂದು ಕೋಟಿ ನಿವ್ವಳ ಆದಾಯ ಗಳಿಸುತ್ತಿದ್ದರು ಎನ್ನಲಾಗಿದೆ. ಇಲ್ಲೀವರೆಗೆ ಒಟ್ಟು 6500 ಜನರು ಸೇರಿ 500ಕ್ಕೂ ಹೆಚ್ಚು ಕೋಟಿ ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.ಆದರೆ, ಇದರ ಮೂಲ ಕಂಪೆನಿಯನ್ನು ಮಾತ್ರ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಈ ಕಾಲ್ ಸೆಂಟರ್ ಜಾಲದ ಹಿಂದಿರುವ 9 ಪ್ರಮುಖ ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಅವರೆಲ್ಲಾ ತಲೆಮರೆಸಿಕೊಂಡಿದ್ದಾರೆ. ಇದೊಂದು ಅಂತರಾಷ್ಟ್ರೀಯ ವಂಚನೆಯ ಜಾಲವಾಗಿರುವುದರಿಂದ ಅಮೆರಿಕಾದ ತನಿಖಾ ಸಂಸ್ಥೆಗಳ ನೆರವು ಪಡೆದುಕೊಳ್ಳುವ ಸಾಧ್ಯತೆಗಳೂ ಇವೆ.ಈ ಕುರಿತು ಅಮೆರಿಕಾದ ಪೊಲೀಸರು ಮಾಹಿತಿ ನೀಡಿ, “ನಾವು ವರದಿಗಳನ್ನು ನೋಡಿದ್ದೇವೆ. ಇದರಲ್ಲಿ ಅಮೆರಿಕನ್ನರು ಭಾಗಿಯಾಗಿದ್ದಾರಾ ಎಂಬ ಬಗ್ಗೆ ಗಮನ ಹರಿಸುತ್ತಿದ್ದೇವೆ. ನಾವು ಭಾರತೀಯ ಇಲಾಖೆಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಿದ್ದೇವೆ,” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವರ್ಷ ಇದೇ ರೀತಿಯ ವಂಚನೆಯಲ್ಲಿ ಭಾರತೀಯರಿಗೆ ಸಹಾಯ ಮಾಡುತ್ತಿದ್ದ ಪೆನ್ಸಿಲ್ವೇನಿಯಾದ ವ್ಯಕ್ತಿಗೆ ಅಮೆರಿಕಾ ನ್ಯಾಯಾಲಯವೊಂದು 14 ವರೆ ವರ್ಷಗಳ ಜೈಲುಶಿಕ್ಷೆ ವಿಧಿಸಲಾಗಿತ್ತು.ಸದ್ಯ ಅಮೆರಿಕಾ ಮತ್ತು ಯುರೋಪಿನ ಕಂಪೆನಿಗಳು ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಕಾಲ್ ಸೆಂಟರ್ಗಳ ಹೊರಗುತ್ತಿಗೆಯನ್ನು ನೀಡಿವೆ. ಭಾರತದಲ್ಲಿ ಕಾಲ್ ಸೆಂಟರ್ಗಳನ್ನು ಇಟ್ಟುಕೊಂಡು ಇವು ಗ್ರಾಹಕರಿಗೆ ಸೇವೆಗಳನ್ನು ನೀಡುತ್ತವೆ. ಇದರಿಂದ ಪಾಶ್ಚಿಮಾತ್ಯ ದೇಶಗಳಿಗೆ ದರ ಕಡಿತ ಮಾಡಲು ಸಾಧ್ಯವಾಗುತ್ತದೆ. ಇದನ್ನೇ ವಂಚನೆಯ ದಾರಿಯನ್ನಾಗಿ ಮಾಡಿಕೊಂಡ ಖದೀಮರು ಇಲ್ಲಿ ಕುಳಿತೇ ಅಮೆರಿಕನ್ನರ ಕಣ್ಣಿಗೆ ಮಣ್ಣೆರಚಿದ್ದಾರೆ.

ಚಿತ್ರ: ವಾಲ್ ಸ್ಟ್ರೀಟ್ ಜರ್ನಲ್