'LOVE in ಮಂಡ್ಯ': ಕೈಕೊಟ್ಟ ಹುಡುಗಿಯ ಮೇಲೆ ಕೇಸು ದಾಖಲಿಸಿ ಕಾಯುತ್ತಿರುವ ಪ್ರೇಮಿ!
ಸುದ್ದಿ ಸಾಗರ

'LOVE in ಮಂಡ್ಯ': ಕೈಕೊಟ್ಟ ಹುಡುಗಿಯ ಮೇಲೆ ಕೇಸು ದಾಖಲಿಸಿ ಕಾಯುತ್ತಿರುವ ಪ್ರೇಮಿ!

ಇದೊಂದು

ಅಪರೂಪದಲ್ಲಿ ಅಪರೂಪದ ಪ್ರೇಮ ಪ್ರಕರಣದ ಕತೆ.

ಐದು ವರ್ಷಗಳ ಕಾಲ ಪ್ರೇಮಿಸಿ, ಇನ್ನೇನು ಮದುವೆಯಾಗಬೇಕು ಎಂಬ ಸಮಯದಲ್ಲಿ ಹುಡುಗಿ ಉಲ್ಟಾ ಹೊಡೆದಳು. ಸದ್ಯ ಆಕೆಯ ಮೇಲೆ ವಂಚನೆ, ಕೊಲೆ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣಗಳ ಅಡಿಯಲ್ಲಿ ದೂರು ದಾಖಲಿಸಿರುವ ಪ್ರೇಮಿ, ಆಕೆಯ ಬರುವಿಕೆಗಾಗಿ ಕಾಯುತ್ತಾ ಕುಳಿತಿದ್ದಾನೆ.

ಪ್ರಕರಣ ನಡೆದಿರುವುದು ಮಂಡ್ಯದಲ್ಲಿ. ಕಾವೇರಿ ವಿವಾದ ಕಾವು ಪಡೆದುಕೊಳ್ಳುವುದಕ್ಕೆ ಕೆಲವು ದಿನಗಳ ಹಿಂದಷ್ಟೆ ಮಂಡ್ಯ ಜಿಲ್ಲಾ ಪೊಲೀಸರಿಗೆ ಹೀಗೊಂದು ವಿಚಿತ್ರ ದೂರು ಬಂದಿತ್ತು. "ಆಕೆ ಐದು ವರ್ಷಗಳ ಈತನನ್ನು ಪ್ರೇಮಿಸಿದ್ದಳು. ಅದಕ್ಕೆ ಸಾಕ್ಷಿಗಳೂ ಇದ್ದವು. ಕೊನೆಗೆ ಎರಡು ಮನೆಯಲ್ಲಿ ಮದುವೆ ಮಾತುಕತೆಗೆ ಮುಂದಾದ ಸಮಯದಲ್ಲಿ ಸಮಸ್ಯೆಯಾಯಿತು. ಅದಕ್ಕೆ ಪ್ರಮುಖ ಕಾರಣವಾಗಿದ್ದು ಜಾತಿ,'' ಎನ್ನುತ್ತಾರೆ ಮಂಡ್ಯದ ಪೊಲೀಸ್ ಅಧಿಕಾರಿಯೊಬ್ಬರು. ಈ ಪ್ರಕರಣದಲ್ಲಿ ಹೆಸರನ್ನು ದಾಖಲಿಸಬೇಡಿ ಎಂಬ ವಿನಂತಿಯ ಜತೆಗೆ 'ಸಮಾಚಾರ'ಕ್ಕೆ ಮಾಹಿತಿ ನೀಡಿದ ಅವರು ವಿಚಿತ್ರ ತಿರುವು ಪಡೆದುಕೊಂಡಿರುವ ಅಪರೂಪದ ಪ್ರೇಮ ಕತೆಯನ್ನು ಬಿಚ್ಚಿಟ್ಟರು.

ಹಿನ್ನೆಲೆ:

ಆತ ಮಂಡ್ಯ ಜಿಲ್ಲಾ ಕೇಂದ್ರದ ಕೊಳೆಗೇರಿಯಲ್ಲಿ ಹುಟ್ಟಿ ಬೆಳೆದ ಸ್ಪುರದೃಪಿ ತರುಣ ರವಿ (ಹೆಸರು ಬದಲಾಯಿಸಲಾಗಿದೆ). ಆಗಷ್ಟೆ ಕಾಲೇಜು ಮುಗಿಸಿ, ಸ್ಪರ್ಧಾತ್ಮಕ ಪರೀಕ್ಷೆಗೆ ಗ್ರಂಥಾಲಯದಲ್ಲಿ ಓದುತ್ತಿದ್ದ. ಈ ಸಮಯದಲ್ಲಿ ಆತನಿಗೆ ಪರಿಚಯವಾಗಿದ್ದು ಗ್ರಂಥಾಲಯ ಪಕ್ಕದಲ್ಲಿಯೇ ಮನೆ ಮಾಡಿಕೊಂಡಿದ್ದ ಶೃಂಗೇರಿ ಮೂಲದ ಅರ್ಚಕರೊಬ್ಬರ ಮಗಳು ಚೇತನ (ಹೆಸರು ಬದಲಾಯಿಸಲಾಗಿದೆ). "ಗ್ರಂಥಾಯಲ ತೆರೆಯುವ ಮುನ್ನವೇ ಬರುತ್ತಿದ್ದ ಮ್ಯಾಗ್ಸಿನ್ಗಳನ್ನು ಚೇತನ ಮನೆಯಲ್ಲಿ ಹಾಕಿ ಹೋಗುತ್ತಿದ್ದರು. ಅದನ್ನು ಆಕೆ ತಂದು ಲೈಬ್ರರಿಗೆ ಕೊಡುತ್ತಿದ್ದಳು. ಅಂತಹ ಸಮಯದಲ್ಲಿ ನಾನು ಆಕೆಯನ್ನು ನೋಡಿದ್ದು. ಮೊದಲ ಮಾತಿನಲ್ಲಿಯೇ ಮದುವೆ ಪ್ರಪೋಸಲ್ ಇಟ್ಟಿದ್ದೆ. ಮನೆಯಲ್ಲಿ ಬಂದು ಕೇಳು ಎಂದು ಹೋಗಿದ್ದಳು. ಅದಾದ ನಂತರ ಐದು ವರ್ಷ, ಆಕೆಯ ಎಂಜಿನಿಯರಿಂಗ್ ಮುಗಿಸಿ, ಮೈಸೂರಿನಲ್ಲಿ ಕೆಲಸ ಕೊಡಿಸುವವರೆಗೂ ನಮ್ಮಿಬ್ಬರ ನಡುವೆ ಪ್ರೀತಿ ಉಸಿರಾಡುತ್ತಿತ್ತು. ನನಗೂ ಸರಕಾರಿ ನೌಕರಿ ಸಿಕ್ಕಿತು. ಹೀಗಾಗಿ ಮದುವೆ ಪ್ರಸ್ತಾಪವನ್ನು ಮನೆಯ ಹಿರಿಯರ ಮುಂದೆಟ್ಟೆವು. ಈ ಸಮಯದಲ್ಲಿ ಆಕೆಯನ್ನು ಮನೆಯವರು ಅಜ್ಞಾನ ಸ್ಥಳಕ್ಕೆ ಕರೆದುಕೊಂಡು ಹೋಗಿ, ತಲೆ ತೊಳೆದರು,'' ಎಂದು ವಿವರಿಸುತ್ತಾರೆ ರವಿ.

ರವಿ ಅಂಬೇಡ್ಕರ್ ಅಭಿಮಾನಿ. ಜತೆಗೆ, ಒಂದಷ್ಟು ಓದು ಇದೆ. ಅಲ್ಲಿನ ಸರಕಾರಿ ಕಚೇರಿಯೊಂದರಲ್ಲಿ ಕೆಲಸ ಮಾಡುತ್ತಿರುವ ಆತ ದಲಿತ ಸಮುದಾಯಕ್ಕೆ ಸೇರಿದವನು. ಚೇತನ ಅರ್ಚಕರ ಮಗಳು. ಸಹಜವಾಗಿಯೇ ಇದು ಮನೆಯವರಲ್ಲಿ, ವಿಶೇಷವಾಗಿ ಚೇತನ ಮನೆಯಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. "ಐದು ವರ್ಷ ನಾವು ಸುತ್ತಾಡುವುದು ಎಲ್ಲಾ ಗೊತ್ತಿತ್ತು. ಆದರೆ ಮದುವೆ ವಿಚಾರ ಬರುತ್ತಲೇ ಆಕೆಯ ಮನೆಯವರು ಉಲ್ಟಾ ಹೊಡೆದರು. ನಾನು ಬೇರೆ ದಾರಿ ಕಾಣದೆ ಪೊಲೀಸ್ ಠಾಣೆ ಮಟ್ಟಿಲೇರಿದೆ,'' ಎನ್ನುತ್ತಾನೆ ರವಿ.

ಠಾಣೆಯಲ್ಲಿ ಸಂಧಾನ:

ಕೊನೆಗೆ ಎರಡೂ ಕಡೆಯವರನ್ನು ಪೊಲೀಸರು ಕರೆಸಿದರು. "ಆಕೆ ತನ್ನ ತಂದೆ ಹಾಗೂ ತಾಯಿಯ ಜತೆ ಬಂದಿದ್ದಳು. ಆ ಸಮಯದಲ್ಲಿ ಪೋಷಕರು ನೀನು ಮದುವೆಯಾದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸೀನ್ ಕ್ರಿಯೇಟ್ ಮಾಡಿದ್ದರು. ಇದರಿಂದ ಆಕೆ, ನನಗೆ ಮನಸ್ಸಿಲ್ಲ ಎಂದು ಹೇಳಿ ಹೊರಟು ಹೋದಳು. ಇದಾದ ನಂತರ ರವಿ ಬಂದು ದೂರು ದಾಖಲಿಸಿದ,'' ಎನ್ನುತ್ತಾರೆ ಪೊಲೀಸ್ ಅಧಿಕಾರಿ.

ವಂಚನೆ, ಕೊಲೆ ಬೆದರಿಕೆ (ಬೇರೆಯವರನ್ನು ಮದುವೆಯಾದರೆ ನಿನ್ನ ಕೊಂದು ಬಿಡುತ್ತೇನೆ ಎಂದು ಚೇತನ ರವಿಗೆ ಕಳುಹಿಸಿದ್ದ ಎಸ್ಎಂಎಸ್ ಕಾರಣ) ಹಾಗೂ ಜಾತಿ ನಿಂದನೆ ಪ್ರಕರಣಗಳನ್ನು ಆಕೆಯ ವಿರುದ್ಧ ದಾಖಲಿಸಲಾಗಿದೆ. ಇದೀಗ ಪ್ರಕರಣ ದಾಖಲಾಗಿ ಮೂರು ತಿಂಗಳು ಕಳೆಯುತ್ತ ಬಂದಿದೆ. ಮಂಡ್ಯ ಜಿಲ್ಲೆ ಕಾವೇರಿ ಬಿಸಿಯಲ್ಲಿ ಬೇಯುತ್ತಿದೆ. ಪ್ರೇಮಿ ರವಿ ಮಾತ್ರ ಇವತ್ತಲ್ಲಾ ನಾಳೆ ಚೇತನ ಜಾಮೀನು ತೆಗೆದುಕೊಳ್ಳಲು ಬಂದೇ ಬರುತ್ತಾಳೆ ಎಂಬ ನಂಬಿಕೆಯಲ್ಲಿದ್ದಾನೆ.

"ನಾವು ಗಂಡಸರು. ನಮಗೂ ಶೀಲ ಇಲ್ವಾ ಹೇಳಿ? ಇದೇ ಅನ್ಯಾಯ ಹುಡುಗಿಗೆ ಆಗಿದ್ದರೆ ಇಷ್ಟೊತ್ತಿಗೆ ಹುಡುಗ ಜೈಲಿನಲ್ಲಿ ಇರುತ್ತಿದ್ದ. ನನಗೆ ಆಕೆಯನ್ನು ಜೈಲಿಗೆ ಕಳುಹಿಸಬೇಕು ಎಂಬ ಉದ್ದೇಶ ಇಲ್ಲ. ಆಕೆ ಬಂದಾಗ ನಾನು ಹೋಗುತ್ತೇನೆ. ಖಂಡಿತಾ ಹಳೆಯದ್ದನ್ನು ನೆನಪಿಸಿಕೊಂಡು ಆಕೆ ನನ್ನ ಜತೆಗೆ ಬಂದೇ ಬರುತ್ತಾಳೆ ಎಂಬ ವಿಶ್ವಾಸ ಇದೆ,'' ಎನ್ನುವುದು ರವಿ ಮಾತುಗಳು.

ಸದ್ಯ ಎಂಜಿನಿಯರ್ ಚೇತನ ಹಾಗೂ ಆಕೆಯ ಮನೆಯವರು ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಾರೆ. ಜಾತಿ ಆಚೆಗೆ ಬೆಳೆದ ಪ್ರೇಮವೊಂದು ಈಗ ಕಾನೂನಿನ ಬಲೆಯಲ್ಲಿ ಸಿಲುಕಿಕೊಂಡಿದೆ. ಮುಂದೇನಾಗುತ್ತೆ ಎಂಬ ಕುತೂಹಲ ಮಂಡ್ಯ ಪೊಲೀಸ್ ಇಲಾಖೆಯಲ್ಲಿ ಹಾಗೂ ಇವರಿಬ್ಬರನ್ನೂ ಹತ್ತಿರದಿಂದ ಬಲ್ಲವರಲ್ಲಿದೆ.