samachara
www.samachara.com
ಜಗತ್ತೇ ಒಂದೇ ಸೂರಿನಡಿ: ಇದು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’!
ಸುದ್ದಿ ಸಾಗರ

ಜಗತ್ತೇ ಒಂದೇ ಸೂರಿನಡಿ: ಇದು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’!

ಭಾರತ

ಪಾಕ್ ವಾಗ್ಯುದ್ಧಕ್ಕೆ ವೇದಿಕೆಯಾಗಿದ್ದು ಇದೇ ಸಭೆ. ಎರಡೂ ರಾಷ್ಟ್ರಗಳು ಜಗತ್ತಿನ ಮುಂದೆ ಪರಸ್ಪರ ರಾಷ್ಟ್ರಗಳ ಕುತಂತ್ರ ಬಯಲು ಮಾಡಲು ತಂತ್ರ ಪ್ರತಿತಂತ್ರ ಹೆಣೆಯುತ್ತಿರುವುದೂ ಇಲ್ಲೇ. ಇದರ ಹೆಸರು ‘ವಿಶ್ವಸಂಸ್ಥೆಯ ಸಾಮಾನ್ಯ ಸಭೆ’.

ಆರರಲ್ಲಿ ಒಂದು

ವಿಶ್ವಂಸ್ಥೆಯ ಆರು ಅಂಗಗಳಲ್ಲಿ ಸಾಮಾನ್ಯ ಸಭೆಯೂ ಒಂದು. ಇದನ್ನು ಸಂಕ್ಷಿಪ್ತವಾಗಿ ‘ಯುಎನ್ಜಿಎ’ ಎಂದು ಕರೆಯುತ್ತಾರೆ. ಇಲ್ಲಿ ಎಲ್ಲಾ ದೇಶಗಳಿಗೂ ಸಮಾನ ಪ್ರಾತಿನಿಧ್ಯವಿದೆ. ಈ ಕಾರಣಕ್ಕೆ ಇದರ ಮೇಲೆ ಎಲ್ಲಾ ರಾಷ್ಟ್ರಗಳಿಗೂ ತುಸು ಗೌರವ ಜಾಸ್ತಿ. ಇಡೀ ವಿಶ್ವಸಂಸ್ಥೆಯ ಆಯವ್ಯಯಗಳನ್ನು ನೋಡಿಕೊಳ್ಳುವುದು, ಭದ್ರತಾ ಸಮಿತಿಗೆ ತಾತ್ಕಾಲಿಕ ಸದಸ್ಯರನ್ನು ನೇಮಿಸುವುದು, ಘೋಷಣೆಗಳನ್ನು ಅನುಮೋದಿಸುವುದೆಲ್ಲಾ ಇದೇ ಸಭೆಯ ಕೆಲಸ.

ಇದೊಂಥರಾ ವಿಶ್ವಸಂಸ್ಥೆಯ ಸಂಸತ್ತು ಇದ್ದ ಹಾಗೆ.

ಈ ಸಾಮಾನ್ಯ ಸಭೆ ದೀರ್ಘ ಕಾಲ ನಡೆಯುತ್ತದೆ. ಪ್ರತಿ ವರ್ಷ ಸಭೆ ಸೇರುವ ಈ ಜಾಗತಿಕ ಸಂಸತ್ತು ಸೆಪ್ಟೆಂಬರಿನಿಂದ ಡಿಸೆಂಬರ್ ವರೆಗೆ ನಡೆಯುತ್ತದೆ. ಈ ಸಭೆ ಹೇಗೆ ನಡೆಯಬೇಕು? ಸಭೆಯಲ್ಲಿ ಏನೆಲ್ಲಾ ವಿಷಯಗಳನ್ನು ಚರ್ಚೆಗೆ ಎತ್ತಿಕೊಳ್ಳಬೇಕು? ಅದನ್ನೆಲ್ಲಾ ನಿರ್ಧಿರಿಸಲು ವಿಶ್ವಸಂಸ್ಥೆಯದ್ದೇ ಆದ ಸಂವಿಧಾನವಿದೆ; ಅದರ ಪ್ರಕಾರ ನಿರ್ಧರಿಸಲಾಗುತ್ತದೆ.

ಇತಿಹಾಸದ ಪುಟಗಳಿಂದ

ಮೊದಲ ಸಾಮನ್ಯ ಸಭೆ ನಡೆದಿದ್ದು 1946 ಜನವರಿ 10 ರಂದು. ಎರಡನೇ ಮಹಾಯುದ್ಧ ಮುಗಿದ ನಂತರ ಲಂಡನ್ನಿನಲ್ಲಿ ಸೇರಿದ್ದ ಸಭೆಯಲ್ಲಿ ಅವತ್ತಿಗೆ ಭಾಗವಹಿಸಿದ್ದ ದೇಶಗಳ ಸಂಖ್ಯೆ 51.

ಅಲ್ಲಿಂದ ಮುಂದೆ ದೇಶಗಳ ಸಂಖ್ಯೆ ಬೆಳೆಯುತ್ತಾ ಹೋಗಿ ಇವತ್ತು 71ನೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಹೊತ್ತಿಗೆ ಒಟ್ಟು 193 ದೇಶಗಳು ಭಾಗವಹಿಸುತ್ತಿವೆ. ಇದಲ್ಲದೆ ಕೆಲವು ಸಂಘಟನೆಗಳು ಮತ್ತು ಸದಸ್ಯರಲ್ಲದ ದೇಶಗಳಿಗೂ ಕೆಲವು ಚೌಕಟ್ಟುಗಳೊಳಗೆ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಏನೇ ಆಗಬೇಕಿದ್ದರೂ ಅದಕ್ಕೆ ಮತದಾನವಾಗಬೇಕು. ಸದಸ್ಯರನ್ನು ಸೇರಿಸಿಕೊಳ್ಳುವುದಾಗಲಿ, ತೆಗೆಯುವುದಾಗಲೀ, ಯಾರದ್ದೇ ವಿರುದ್ಧ ಕ್ರಮ ಜರುಗಿಸುವುದು, ಬಜೆಟ್ ಪಾಸ್ ಮಾಡುವುದು ಎಲ್ಲದಕ್ಕೂ ಮತದಾನ ನಡೆಯಲೇಬೇಕು. ಹಾಗೆ ಮತದಾನ ನಡೆದಾಗ ಅರ್ಧಕ್ಕಿಂತ ಹೆಚ್ಚಿನ ಸದಸ್ಯರ ಮತಗಳು ಪ್ರತಿ ನಿರ್ಧಾರಕ್ಕೂ ಅವಶ್ಯವಾಗಿರುತ್ತವೆ.

ಅಭಿವೃದ್ಧಿ ಶೀಲ ದೇಶಗಳ ಪಾರುಪತ್ಯ

ವಿಶ್ವಸಂಸ್ಥೆಯ ಉಳಿದೆಲ್ಲಾ ಅಂಗ ಸಂಸ್ಥೆಗಳನ್ನು ಬಲಾಢ್ಯ ದೇಶಗಳದ್ದೇ ಪ್ರಾಭಲ್ಯ. ಆದರೆ ಸಾಮಾನ್ಯ ಸಭೆಯಲ್ಲಿ ಮಾತ್ರ ಅಭಿವೃದ್ಧಿ ಶೀಲ ದೇಶಗಳೇ ನಿರ್ಣಾಯಕವಾಗಿವೆ. ಇದಕ್ಕೆ ಕಾರಣ ಇಲ್ಲಿನ ಸದಸ್ಯರಲ್ಲಿ ಅಭಿವೃದ್ಧಿ ಶೀಲ ದೇಶಗಳ ಸಂಖ್ಯೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಈ ಸಭೆಯನ್ನು ಅಭಿವೃದ್ಧಿ ಶೀಲ ದೇಶಗಳು ತಮ್ಮ ಆಡೊಂಬೊಲವಾಗಿಸಿವೆ. ಈ ಸಾಮಾನ್ಯ ಸಭೆಯನ್ನು ತಮಗೆ ಬೇಕಾದಂತೆ ಬಳಸಿಕೊಂಡು ಹಲವು ಅಭಿವೃದ್ಧಿ ಶೀಲ ದೇಶಗಳು ತಮ್ಮ ಪರವಾಗಿ ಲಾಬಿ ನಡೆಯಲು ಯತ್ನಿಸುತ್ತವೆ. ಸದ್ಯ ಭಾರತ ಮತ್ತು ಪಾಕಿಸ್ತಾನ ಇದೇ ರೀತಿ ರಾಜತಾಂತ್ರಿಕ ತಂತ್ರ ಹೆಣೆಯುತ್ತಾ ತಮ್ಮ ಪರವಾದ ಲಾಬಿಗೆ ಈ ಸಭೆಯನ್ನು ಬಳಸಿಕೊಳ್ಳುತ್ತಿರುವುದನ್ನು ಕಾಣಬಹುದು.

ಸಾಮಾನ್ಯ ಸಭೆಯ ಒಳ ಹೊರಗೆ

ಪ್ರತಿ ಸಾಮಾನ್ಯ ಸಭೆ ನಡೆಯಬೇಕಿದ್ದರೂ ಅದಕ್ಕೂ ಮುಂಚೆ ಆ ಸಭೆಯ ಅಜೆಂಡಾಗಳನ್ನು ನಿರ್ಧರಿಸಲಾಗಿರುತ್ತದೆ. ಹಲವು ಹಂತದ ಸಭೆಗಳನ್ನು ಚರ್ಚೆಗಳನ್ನು ನಡೆಸಿ ಈ ಅಜೆಂಡಾಗಳನ್ನು ಸಿದ್ಧಪಡಿಸಲಾಗುತ್ತದೆ. ಇದೇ ಒಂದು ದೊಡ್ಡ ಕೆಲಸ. ಇನ್ನು ಅಂತಿಮ ಅಜೆಂಡಾವನ್ನು ಸಭೆ ಆರಂಭವಾದ ನಂತರವೇ ನಿರ್ಧರಿಸುತ್ತಾರೆ.

ಒಟ್ಟಾರೆ ಕೊನೆಗೆ ಈ ಸಾಮಾನ್ಯ ಸಭೆ ಮುಗಿಯುವ ಹೊತ್ತಿಗೆ ಬರೋಬ್ಬರಿ ಮೂರು ತಿಂಗಳೇ ಕಳೆದು ಹೋಗಿರುತ್ತದೆ. ಅಷ್ಟು ದೀರ್ಘ ಸಭೆ ಇದು.

ಪ್ರಮುಖ ಅಂಶಗಳು

  1. ಇದೇ ಸಭೆಯಲ್ಲಿ ಹಲವು ಅಂತರಾಷ್ಟ್ರೀಯ ಒಪ್ಪಂದಗಳು, ಘೋಷಣೆಗಳನ್ನು ಅನುಮೋದಿಸಲಾಗುತ್ತದೆ.
  2. ಬಜೆಟ್ಟನ್ನು ಸಮಾನ್ಯ ಸಭೆ ನಿರ್ಧರಿಸುತ್ತದೆ. ಈ ಮೂಲಕ ಪ್ರತೀ ರಾಷ್ಟ್ರ ವರ್ಷಕ್ಕೆ ಎಷ್ಟು ಹಣ ಕಟ್ಟಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಈ ಹಣ ವಿಶ್ವಸಂಸ್ಥೆಯ ನಿರ್ವಹಣೆ ಮತ್ತು ಕೆಲಸ ಕಾರ್ಯಗಳಿಗೆ ಬಳಕೆಯಾಗುತ್ತದೆ.
  3. ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹತ್ತು ತಾತ್ಕಾಲಿಕ ಸದಸ್ಯರನ್ನು ಇದೇ ಸಾಮಾನ್ಯ ಸಭೆ ಚುನಾಯಿಸಿ ಕಳುಹಿಸುತ್ತದೆ. ಇದೇ ರೀತಿ ವಿಶ್ವಸಂಸ್ಥೆಯ ಬೇರೆ ಬೇರೆ ಅಂಗ ಸಂಸ್ಥೆಗಳಿಗೂ ಸದಸ್ಯರನ್ನು ಸಭೆ ಆಯ್ಕೆ ಮಾಡುತ್ತದೆ.
  4. ತುರ್ತು ಸಂದರ್ಭಗಳಿದ್ದಾಗ ವಿಶೇಷ ಅಧಿವೇಶನ ಕರೆಯುವುದೂ ಇದೆ. 1995ರಲ್ಲಿ ವಿಶ್ವಸಂಸ್ಥೆಗೆ 50 ವರ್ಷ ತುಂಬಿದಾಗ ಹಾಗೂ ಇನ್ನೂ ಕೆಲವು ಸಂದರ್ಭಗಳಲ್ಲಿ ಈ ರೀತಿ ವಿಶೇಷ ಅಧಿವೇಶನಗಳನ್ನು ಕರೆಯಲಾಗಿತ್ತು.
  5. ಸಾಮಾನ್ಯ ಸಭೆಯ ಅಡಿಯಲ್ಲೇ ಹಲವು ಅಂಗಸಂಸ್ಥೆಗಳನ್ನು ರಚಿಸಲಾಗಿದೆ.
  6. ವಿಶ್ವವನ್ನು ಕಾಡುವ ಘಟನೆಗಳು ಸಂಭವಿಸಿದಾಗ ಘಟನೆಯ ಅಧ್ಯಯನಕ್ಕಾಗಿ ಆಯೋಗಗಳನ್ನು ವಿಶ್ವಸಂಸ್ಥೆ ಕಳುಹಿಸುತ್ತದೆ.
  7. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಎಷ್ಟರ ಮಟ್ಟಿಗೆ ನಿಯಮಗಳಲ್ಲಿ ಮುಳುಗಿದೆ ಎನ್ನುವುದಕ್ಕೆ ಇಲ್ಲಿನ ಆಸನ ವ್ಯವಸ್ಥೆಯೂ ಉದಾಹರಣೆ. ಇಲ್ಲಿ ಉಆವ ಸೀಟಲ್ಲಿ ಯಾರು ಕೂರಬೇಕು ಎನ್ನುವುದಕ್ಕೂ ನಿಯಮಗಳಿವೆ.