samachara
www.samachara.com
@ಧರ್ಮಸ್ಥಳ @ಹೊಸನಗರ: ಕೈ ಮುಗಿದು ಒಳಗೆ ಬನ್ನಿ; ಇಲ್ಲಿ ‘ಗೋ ವಂಚನೆ’ ನಡೆಯುತ್ತಿದೆ! 
ಸುದ್ದಿ ಸಾಗರ

@ಧರ್ಮಸ್ಥಳ @ಹೊಸನಗರ: ಕೈ ಮುಗಿದು ಒಳಗೆ ಬನ್ನಿ; ಇಲ್ಲಿ ‘ಗೋ ವಂಚನೆ’ ನಡೆಯುತ್ತಿದೆ! 

ಯೋಜನೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ವಂಚನೆ ಎಸಗಿರುವುದನ್ನು ಪತ್ತೆ ಹಚ್ಚಿರುವ ಅಧ್ಯಯನ ತಂಡವು ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಸೂಚಿಸಿದೆ.

samachara

samachara

ಕರ್ನಾಟಕದ ಪ್ರಮುಖ ಮಠ ಹಾಗೂ ದೇವಸ್ಥಾನವೊಂದಕ್ಕೆ ಸಂಬಂಧಿಸಿದ ಸಂಸ್ಥೆಗಳು ಗೋವಿನ ಹೆಸರಲ್ಲಿ ಸರಕಾರಕ್ಕೇ ವಂಚಿಸಿದ ಪ್ರಕರಣವಿದು.

ರಾಘವೇಶ್ವರ ಭಾರತೀ ಸ್ವಾಮೀಜಿಗಳ ನೇತೃತ್ವದ ರಾಮಚಂದ್ರಾಪುರ ಮಠ ಹಾಗೂ 'ಧರ್ಮಾಧಿಕಾರಿ' ಡಾ. ಡಿ ವೀರೇಂದ್ರ ಹೆಗ್ಗಡೆಯ ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ನಡೆಸಲ್ಪಡುತ್ತಿರುವ ಗೋಶಾಲೆಗಳು, ಸರಕಾರದ ಯೋಜನೆಯೊಂದರಿಂದ ‘ಗೋ’ ಅಭಿವೃದ್ಧಿಗಾಗಿ ಹಣ ಪಡೆದು, ಅಭಿವೃದ್ಧಿಯನ್ನೂ ಮಾಡದೇ; ಇತ್ತ ಗೋವುಗಳನ್ನೂ ಬೆಳೆಸದೆ ಹಣ ದುರುಪಯೋಗಪಡಿಸಿಕೊಂಡಿವೆ.

ಇದನ್ನು 'ಕೃಷಿ ತಂತ್ರಜ್ಞರ ಸಮಿತಿ'ಯ ಮೌಲ್ಯಮಾಪನ ವರದಿ ತೆರೆದಿಟ್ಟಿದೆ.

ನಡೆದಿರುವುನು?:

ಕರ್ನಾಟಕದಲ್ಲಿರುವ ಹಳ್ಳಿಕಾರ್, ಅಮೃತ ಮಹಲ್, ದೇವನಿ, ಕೃಷ್ಣ ವ್ಯಾಲಿ, ಖಿಲಾರೆ ಮತ್ತು ಮಲೆನಾಡುಗಿಡ್ಡ ತಳಿಗಳು ಕಾಲಕಳೆದಂತೆ ಹಾಗೂ ವಿದೇಶಿ ತಳಿಗಳ ಜನಪ್ರಿಯತೆಯಿಂದಾಗಿ ವಿನಾಶದ ಅಂಚಿನಲ್ಲಿವೆ.

ಉತ್ತಮ ಸ್ಥಳೀಯ ಗೋತಳಿಗಳು ಮತ್ತು ಅವುಗಳ ಅನುವಂಶಿಕಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಕರ್ನಾಟಕ ಸರ್ಕಾರವು 2006-07 ನೇ ಸಾಲಿನಲ್ಲಿ ‘ಸುವರ್ಣ ಕರ್ನಾಟಕ ಗೋತಳಿ ಸಂರಕ್ಷಣಾ ಯೋಜನೆ’ ಆರಂಭಿಸಿತು.

ಪ್ರಸಿದ್ಧ ತಳಿಗಳನ್ನು ಸಂವರ್ಧನೆಗೊಳಿಸಲು ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸಲು ಅರ್ಹ ಸರ್ಕಾರೇತರ ಸಂಸ್ಥೆಗಳಿಗೆ ಆರ್ಥಿಕ ಸಹಾಯವನ್ನು ನೀಡಲು ಯೋಜನೆ ರೂಪುಗೊಂಡಿತ್ತು.

ಈ ಯೋಜನೆಯಲ್ಲಿ ಕೃತಕ ಗರ್ಭಧಾರಣೆಯ ಮೂಲಕ ತಳಿ ಸಂವರ್ಧನೆ ಮತ್ತು ಸರ್ಕಾರ ನಿಗದಿಪಡಿಸಿದ ದರದಲ್ಲಿ ಕರುಗಳನ್ನು ಮಾರಾಟ ಮಾಡಬೇಕು ಎಂದು ಹೇಳಲಾಗಿತ್ತು.

ಮೌಲ್ಯಮಾಪನ ಕ್ರಿಯೆ:

ಒಂದು ವರ್ಷಗಳ ಕಾಲ ಓದಿದ ಪಾಠವನ್ನು ಪರೀಕ್ಷೆಗಳ ಮೂಲಕ ಮೌಲ್ಯಮಾಪನಕ್ಕೆ ಒಳಪಡಿಸುವುದು ನಡೆದುಕೊಂಡು ಬಂದಿರುವ ಪದ್ಧತಿ. ಈ ವಿಚಾರದಲ್ಲಿಯೂ ಕೂಡ, ಸರಕಾರ ತನ್ನದೇ ಯೋಜನೆ ಕಾಲಾನಂತರದಲ್ಲಿ ಏನಾಯಿತು ಎಂದು ಮೌಲ್ಯ ಮಾಪನ ನಡೆಸಲು ಮುಂದಾಯಿತು.

ಪಶುಸಂಗೋಪನೆ ಹಾಗು ಪಶುವೈದ್ಯಕೀಯ ಸೇವಾ ಇಲಾಖೆಯು ಈ ಪ್ರಕ್ರಿಯೆಯನ್ನು ತಜ್ಞರನ್ನು ಒಳಗೊಂಡ ಬೆಂಗಳೂರು ಮೂಲದ 'ಕೃಷಿ ತಂತ್ರಜ್ಞರ ಸಮಿತಿ'ಗೆ ವಹಿಸಿತ್ತು.

ಅದರ ಭಾಗವಾಗಿ ಅಧ್ಯಯನ ನಡೆಸಿದ ಡಾ. ಕೆ. ಎಸ್. ಸುಬ್ರಹ್ಮಣ್ಯ, ಡಾ. ಟಿ. ಸಿ. ಚನ್ನಕೃಷ್ಣಯ್ಯ, ಡಾ. ವಿ. ಎಲ್. ಮಧುಪ್ರಸಾದ್ ಅವರಿದ್ದ ತಂಡ, 30 ಪುಟಗಳ ದೀರ್ಘ ವರದಿಯನ್ನು ಮುಖ್ಯ ಮೌಲ್ಯಮಾಪನಾಧಿಕಾರಿಗಳು, ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ, ಬೆಂಗಳೂರು ಇವರ ಮೂಲಕ ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಗೆ 2016 ಮೇ 31 ರಂದು ಸಲ್ಲಿಸಿತು.

ವರದಿಯ ಮಾನದಂಡಗಳು:

2006-07 ನೇ ಸಾಲಿನಿಂದ 2013-14ನೇ ಸಾಲಿನವರೆಗೆ, ದೇಶೀ ತಳಿಗಳ ಸಂರಕ್ಷಣೆಯ ಸಲುವಾಗಿ ಒಟ್ಟು 47 ಆಯ್ದ ಸ್ವಯಂ ಸೇವಾ ಸಂಸ್ಥೆಗಳು / ವಿಶ್ವಸ್ಥ ಮಂಡಳಿಗಳಿಗೆ ಆರ್ಥಿಕ ಅನುದಾನವನ್ನು ನೀಡಲಾಗಿತ್ತು.ಈ ಸ್ವಯಂಸೇವಾ ಸಂಸ್ಥೆಗಳು / ವಿಶ್ವಸ್ಥ ಮಂಡಳಿಗಳು ಹೆಚ್ಚಾಗಿ ಧಾರ್ಮಿಕ ಸಂಸ್ಥೆಗಳಾಗಿದ್ದು, ರಾಸುಗಳ ತಳಿ ಮತ್ತು ಉತ್ಪಾದಕತೆಗಳನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ಬದಲಿಗೆ ಅವುಗಳನ್ನು ತಾವು ನಡೆಸುವ ಗೋಶಾಲೆಗಳು, ಗೋಸದನಗಳು ಮತ್ತು ಪಿಂಜ್ರಾಪೋಲುಗಳಲ್ಲಿ ಸಲಹುವ ಕಾರ್ಯದಲ್ಲಿ ತೊಡಗಿಕೊಂಡಿದ್ದವು.ಇವುಗಳ ಮೌಲ್ಯಮಾಪನಕ್ಕೆ ಉದ್ದೇಶಿತ ಮಾದರಿ (ಪರ್ಪಸಿವ್ ಸ್ಯಾಂಪ್ಲಿಂಗ್) ರೀತಿಯಲ್ಲಿ, ರಾಜ್ಯದ ನಾಲ್ಕು ವಿಭಾಗಗಳಲ್ಲಿ ಒಂದೊಂದು ಸ್ವಯಂಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು.

ಮೈಸೂರು ವಿಭಾಗದಿಂದ ಮಾತ್ರ ಎರಡು ಸಂಸ್ಥೆಗಳನ್ನು ಆಯ್ಕೆ ಮಾಡಿಕೊಂಡರು. ಆರು ಸ್ಥಳೀಯ ತಳಿಗಳನ್ನು ಇಟ್ಟಿರುವ ಮತ್ತು ಸರ್ಕಾರದ ಅನುದಾನವನ್ನು ಈ ಯೋಜನೆಯಡಿಯಲ್ಲಿ ಪಡೆದು ಸ್ಥಳೀಯ ತಳಿಗಳ ತಳಿವರ್ಧನೆ, ಸಂರಕ್ಷಣೆ, ಮತ್ತು ಪ್ರಸರಣೆ ಕಾರ್ಯದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದ್ದ ಸಂಸ್ಥೆಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಯಿತು.

ಆಯ್ಕೆ ಮಾಡಿಕೊಂಡ ಸಂಸ್ಥೆಗಳು ಹೀಗಿದ್ದವು:

ಬೆಂಗಳೂರು ವಿಭಾಗ – ಅಮೃತಧಾರಾ ಗೋಶಾಲೆ, ಶ್ರೀ ರಾಮಚಂದ್ರಾಪುರ ಮಠ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ.ಮೈಸೂರು ವಿಭಾಗ - (1) ಶ್ರೀ ಕ್ಷೇತ್ರ ಧರ್ಮಸ್ಥಳ ಗೋಶಾಲೆ, ಕೊಕ್ಕಡ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ(2) ನಂದಗೋಕುಲ ಚಾರಿಟೇಬಲ್ ಟ್ರಸ್ಟ್, ಅಮೃತಧಾರಾ ಗೋಶಾಲೆ, ಗೋಳಿಗುಂಡಿ ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ.ಬೆಳಗಾವಿ ವಿಭಾಗ – ಅಮೃತಧಾರಾ ಗೋಶಾಲೆ, ಹೊಸಾಡ ಕುಮಟ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ.ಕಲಬುರಗಿ ವಿಭಾಗ - ಶ್ರೀ ಎಸ್.ಜಿ.ಎಸ್.ಬಿ.ವಿ. ಟ್ರಸ್ಟ್, ಚಿಕ್ಕ ಸೂಗೂರು, ರಾಯಚೂರು ತಾಲ್ಲೂಕು ಮತ್ತು ಜಿಲ್ಲೆ.

ಇವುಗಳಲ್ಲಿ ಒಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತಕ್ಕೆ ಒಳಪಟ್ಟಿದ್ದರೆ, ಇನ್ನು ಮೂರು 'ವಿಶ್ವ ಗೋ ಸಮ್ಮೇಳನ'ದ ರೂವಾರಿ, ಪ್ರೇಮಲತಾ ದಿವಾಕರ್ ಅತ್ಯಾಚಾರ ಪ್ರಕರಣದಲ್ಲಿ ಸುದ್ದಿಯಾದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮಿಗೆ ಸೇರಿದ್ದಾಗಿವೆ.

ಸದರಿ ಮೌಲ್ಯಮಾಪನಕ್ಕಾಗಿ ತಂಡಕ್ಕೆ ಸೂಕ್ತ ತರಬೇತಿ ನೀಡಿ, ಒಟ್ಟು ಐದು ಕಡೆಗಳಿಂದ ಮಾಹಿತಿ ಸಂಗ್ರಹಿಸಲಾಯಿತು. ಅವರು ಪಡೆದುಕೊಂಡ 5 ಮಾಹಿತಿಮೂಲಗಳು ಹೀಗಿವೆ:

  1. ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಆಯುಕ್ತಾಲಯದಿಂದ.
  2. ಸಂಬಂಧಪಟ್ಟ ಜಿಲ್ಲೆಯ, ಉಪನಿರ್ದೇಶಕರುಗಳಿಂದ.
  3. ಸ್ವಯಂಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವ ಪ್ರದೇಶದ ವ್ಯಾಪ್ತಿಯುಳ್ಳ ತಾಲ್ಲೂಕು ಹಾಗೂ ಪ್ರದೇಶದ ಸಹಾಯಕ ನಿರ್ದೇಶಕರು/ ಪಶುವೈದ್ಯಾಧಿಕಾರಿಗಳಿಂದ.
  4. ಆಯ್ಕೆ ಮಾಡಲ್ಪಟ್ಟ ಸ್ವಯಂಸೇವಾ ಸಂಸ್ಥೆಗಳಿಂದ .
  5. ಯೋಜನೆಯಡಿಯಲ್ಲಿ ಸವಲತ್ತು ಪಡೆದ ಫಲಾನುಭವಿ ರೈತರುಗಳಿದ್ದಲ್ಲಿ ಅವರಿಂದ.

ವರದಿಯಲ್ಲೇನಿದೆ?:

ಅಮೃತಧಾರಾ ಗೋಶಾಲೆ, ಶ್ರೀ ರಾಮಚಂದ್ರಾಪುರ ಮಠ, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ. ಇದರ ಬಗ್ಗೆ ಮೌಲ್ಯಮಾಪನ ತಂಡವು ಹೀಗೆ ಬರೆದಿದೆ.

"ಈ ಗೋಶಾಲೆಯಲ್ಲಿ ಅಲ್ಲಿ 402 ದನಗಳಿವೆಯೆಂದು ಸಂಸ್ಥೆ ಹೇಳಿದೆ. ಆದರೆ 120 ರಿಂದ 130 ದನಗಳಿರುವುದು ಕಂಡು ಬಂದಿದೆ. ಇಲ್ಲಿ ಉದ್ದೇಶಿತ ತಳಿ ವೃದ್ಧಿ ಕಾರ್ಯವನ್ನು ಕೈ ಗೊಂಡಿರುವುದಿಲ್ಲ. ಧಾರ್ಮಿಕ ನೀತಿಗೆ ವಿರುದ್ಧ ಎಂದು ಕೃತಕ ಗರ್ಭಧಾರಣೆಯನ್ನು ಅನುಷ್ಠಾನಗೊಳಿಸುತ್ತಿಲ್ಲ. 2006-07 ನೇ ಸಾಲಿನಲ್ಲಿ ರೂ 10.00 ಲಕ್ಷದ ಅನುದಾನವನ್ನು ಪಡೆದಿದ್ದು ದನದ ಕೊಟ್ಟಿಗೆಗಳು, ಕೊಳವೆಬಾವಿಗಳು, ಮುಂತಾದವನ್ನು ನಿರ್ಮಿಸಲಾಗಿದೆ. ಇದೊಂದು ತಳಿವರ್ಧನಾ ಕೇಂದ್ರವಾಗುವ ಬದಲು, ತಳಿಗಳ ಪ್ರಾತ್ಯಕ್ಷಿಕಾ ಕೇಂದ್ರವಾಗಿ ಅಸ್ತಿತ್ವದಲ್ಲಿದೆ. ಕೆಲ ದಾಖಲೆಗಳನ್ನು ಇಡಲಾಗಿದೆಯಾದರೂ, ಅವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಇಟ್ಟಿಲ್ಲ,” ಎಂದು ಹೇಳಲಾಗಿದೆ.

ಇದೇ ರಾಘವೇಶ್ವರ ಸ್ವಾಮಿ ಅಧೀನದಲ್ಲಿರುವ, ನಂದಗೋಕುಲ ಚಾರಿಟೇಬಲ್ ಟ್ರಸ್ಟ್, ಅಮೃತಧಾರಾ ಗೋಶಾಲೆ, ಗೋಳಿಗುಂಡಿ ಕುಂದಾಪುರ ತಾಲ್ಲೂಕು, ಉಡುಪಿ ಜಿಲ್ಲೆ, ಹಾಗೂ ಅಮೃತಧಾರಾ ಗೋಶಾಲೆ, ಹೊಸಾಡ ಕುಮಟ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆಯ ಪರಿಸ್ಥಿಗಳೂ ಸರಿ ಸುಮಾರು ಇದೇ ರೀತಿಯಾಗಿವೆ. ಇಲ್ಲ ಮತ್ತಷ್ಟು ಕಳಪೆಯಾಗಿದೆ ಎಂದು ಈ ವರದಿ ಹೇಳುತ್ತದೆ.

ಇನ್ನೊಂದು ಪ್ರಮುಖ ಸಂಸ್ಥೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ, ಶ್ರೀ ಕ್ಷೇತ್ರ ಧರ್ಮಸ್ಥಳ ಗೋಶಾಲೆ, ಕೊಕ್ಕಡ, ಬೆಳ್ತಂಗಡಿ ತಾಲ್ಲೂಕು, ದಕ್ಷಿಣ ಕನ್ನಡ ಜಿಲ್ಲೆ, ಇದರ ಬಗ್ಗೆ ಅಧ್ಯಯನ ತಂಡವು ಹೀಗೆ ಬರೆದಿದೆ.

"ಈ ಸಂಸ್ಥೆಗೆ 8.00 ಎಕರೆ ಮಾತ್ರ ಜಮೀನಿದ್ದುಇದು ನಿಗದಿಪಡಿಸಲ್ಪಟ್ಟ ಪ್ರದೇಶಕ್ಕಿಂತಲೂ 2.00 ಎಕರೆ ಕಡಿಮೆ ಇರುತ್ತದೆ. ಗಂಡು ಮತ್ತು ಹೆಣ್ಣು ದನಗಳನ್ನು ಒಟ್ಟಾಗಿಯೇ ಮೇಯಲು ಬಿಡಲಾಗುತ್ತಿದೆ. ಕೃತಕ ಗರ್ಭಧಾರಣೆಯನ್ನೂ ಅನುಸರಿಸುತ್ತಿಲ್ಲ. 2008-09ನೇ ಸಾಲಿನಲ್ಲಿ ರೂ.3.33 ಲಕ್ಷಗಳ ಅನುದಾನ ಬಿಡುಗಡೆಯಾಗಿದ್ದು, ಅದನ್ನು 3 ಕೊಟ್ಟಿಗೆಳನ್ನು ಕಟ್ಟಲು ಉಪಯೋಗಿಸಿಕೊಳ್ಳಲಾಗಿದೆ. ಯಾವುದೇ ಸಮುಚಿತ ದಾಖಲೆಗಳನ್ನಿಟ್ಟಿಲ್ಲದಿರುವುದರಿಂದ ಹೆಚ್ಚುವಿಕೆ ತಳಿ ಅಭಿವದ್ಧಿ ಕ್ರಿಯೆಯಿಂದ ಆಗಿದೆಯೇ ಎಂದು ತಿಳಿಯುವುದು ಕಷ್ಟಕರವಾಗಿದೆ," ಎಂದು ಅಧ್ಯಯನ ವರದಿ ಹೇಳುತ್ತದೆ.

ಉಪ ಸಂಹಾರ:

ಇದೆಲ್ಲವನ್ನೂ ನೋಡಿ ಅಧ್ಯಯನ ತಂಡವೂ ತನ್ನ ವರದಿಯಲ್ಲಿ ಗಂಭೀರ ಶಿಫಾರಸ್ಸುಗಳನ್ನು ಮಾಡಿದೆ. ಅವುಗಳ ಪ್ರಮುಖ ಅಂಶಗಳು ಹೀಗಿವೆ.

  1. ಎಲ್ಲಾ ಸಂಸ್ಥೆಗಳೂ, ಸಮಾಜಕ್ಕೆ ಬೇಡದ, ಅನುತ್ಪಾದಕ ಹಾಗೂ ಅನಾರೋಗ್ಯ ಪೀಡಿತ ರಾಸುಗಳನ್ನು ಇಟ್ಟುಕೊಂಡು ಮಾನವೀಯತೆಯ ಮೇರೆಗೆ ಸಾಕುತ್ತಿರುವ ಮೂಲಕ ಗೋಶಾಲೆ, ಗೋಸದನ ಹಾಗೂ ಪಿಂಜ್ರಾಪೋಲ್‍ಗಳಂತೆ ಕಾರ್ಯ ನಿರ್ವಹಿಸುತ್ತಿವೆ.
  2. ಎಲ್ಲಾ ಸಂಸ್ಥೆಗಳ ತಳಿ ಅಭಿವೃದ್ಧಿ ಜ್ಞಾನ ತೀರಾ ಕಡಿಮೆ ಅಲ್ಲದೆ ವೈಜ್ಞಾನಿಕವಂತೂ ಖಂಡಿತ ಅಲ್ಲ.
  3. ಯಾವುದೇ ಸಂಸ್ಥೆ ಸ್ಥಾಪಿತ ತಳಿಯ ದನಗಳನ್ನು ತಳಿ ಅಭಿವೃದ್ಧಿಗಾಗಿ ಇಟ್ಟಿರುವುದಿಲ್ಲ.
  4. ಯಾವುದೇ ಸಂಸ್ಥೆ ತಳಿಅಭಿವೃದ್ಧಿಗಾಗಿ ಕೃತಕಗರ್ಭಧಾರಣೆ ಅನುಸರಿಸಿರುವುದಿಲ್ಲ ಮತ್ತು ತಳಿ ಅಭಿವೃದ್ಧಿಯಲ್ಲಿ ಪ್ರಮುಖಾಂಶವಾದ ಕೃತಕ ಗರ್ಭಧಾರಣೆ ವಿಧಾನಕ್ಕೆ ಅವರು ವಿರೋಧಿಗಳೆಂದು ಹೇಳಿದ್ದಾರೆ, ತನ್ಮೂಲಕ ಯೋಜನೆಯ ಉದ್ದೇಶವನ್ನೇ ವಿಫಲಗೊಳಿಸಿರುತ್ತಾರೆ.
  5. ಯಾವುದೇ ಸಂಸ್ಥೆ ತಾವು ಪಡೆದ ಅನುದಾನಕ್ಕೆ ಪರಿಪೂರ್ಣ ಸದ್ವಿನಿಯೋಗ ದಾಖಲೆ ಒದಗಿಸಿರುವುದಿಲ್ಲ. ಸದರಿ ಸಂಸ್ಥೆಗಳು ಈಗಿರುವ ಕಟ್ಟಡಗಳು/ ಮೇವಿನ ತಾಕುಗಳು ಇತ್ಯಾದಿಗಳಿಗೆ ಈ ಅನುದಾನದೊಂದಿಗೆ ಇತರೇ ಸಂಸ್ಥೆ ಅಥವಾ ದಾನಿಗಳಿಂದಲೂ ಹಣ ಪಡೆದಿರುವ, ಯೋಜನೆಗೂ ಮೊದಲೇ ಇದ್ದಿರಬಹುದಾದ ಸಾಧ್ಯತೆ ಎಂದು ಅನುಮಾನ ವ್ಯಕ್ತಪಡಿಸಿದೆ.

ಈ ರೀತಿ ಯೋಜನೆಯಲ್ಲಿ ಪಾರದರ್ಶಕತೆ ಕೊರತೆ ಮತ್ತು ವಂಚನೆ ಎಸಗಿರುವುದನ್ನು ಪತ್ತೆ ಹಚ್ಚಿರುವ ಅಧ್ಯಯನ ತಂಡವು ಯೋಜನೆಯನ್ನು ಸ್ಥಗಿತಗೊಳಿಸಬೇಕೆಂದು ಸೂಚಿಸಿದೆ.

'ಸುವರ್ಣ ಕರ್ನಾಟಕ ಗೋತಳಿ ಸಂರಕ್ಷಣಾ ಯೋಜನೆ'ಯ ಸರ್ಕಾರೀ ಆದೇಶ ಉಲ್ಲಂಘಿಸಿ ಅನುಷ್ಠಾನಗೊಳಿಸಲಾಗಿದೆ. ಹೀಗಾಗಿ ಸಂಸ್ಥೆಗಳ ಆಸ್ತಿಗಳನ್ನು (ಯೋಜನೆಯಡಿಯಲ್ಲಿ ಪಡೆದಿದ್ದಲ್ಲಿ) ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ.

ಐದೂ ಸಂಸ್ಥೆಗಳು, ನಿರ್ದಿಷ್ಟಪಡಿಸಲಾದ ಅನೇಕ ಷರತ್ತು ಹಾಗೂ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಆದುದರಿಂದ ಈ ಸಂಸ್ಥೆಗಳಿಗೆ ಕೊಡಲಾದ ಅನುದಾನಗಳನ್ನು ಸರ್ಕಾರೀ ಆದೇಶದ ಪ್ರಕಾರ ವಸೂಲಾತಿ ಮಾಡಲು ಶಿಫಾರಸು ಮಾಡಿದೆ. ಜೊತೆಗೆ ಇತರ ಸಂಸ್ಥೆಗಳ ಬಗ್ಗೆಯೂ ಮೌಲ್ಯಮಾಪನ ಮಾಡಲು ಹೇಳಿದೆ. ಸಮಿತಿ ಈ ಶಿಫಾರಸ್ಸನ್ನು ಮಾಡಿ ನಾಲ್ಕು ತಿಂಗಳು ಕಳೆದಿದೆ.

ಆದರೆ ಈ ಬಗ್ಗೆ ಇಲಾಖೆ ಕ್ರಮ ಕೈಗೊಂಡಿದ್ದು ವರದಿಯಾಗಿಲ್ಲ. ಈ ಬಗ್ಗೆ ಪಶು ಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯನ್ನು ‘ಸಮಾಚಾರ’ ಸಂಪರ್ಕಿಸಲು ಯತ್ನಿಸಿತಾದರೂ ಕರೆ ಸ್ವೀಕರಿಸಲಿಲ್ಲ. ಇನ್ನು ರಾಮಚಂದ್ರಾಪುರ ಮಠವನ್ನು ಸಂಪರ್ಕಿಸಲು ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.

ಚಿತ್ರ ಕೃಪೆ: ಸೌಮ್ಯಭಟ್ ಡಾಟ್ ವಿಕ್ಸ್ ಡಾಟ್ ಕಾಂ, ವೀರೇಂದ್ರಹೆಗ್ಗಡೆ ಡಾಟ್ ಇನ್