samachara
www.samachara.com
ಕಾಶ್ಮೀರ ಕಣಿವೆಯಲ್ಲಿ 2 ದಶಕಗಳ ಅಂತರದಲ್ಲಿ ಸೇನೆ ಮೇಲೆ ಭೀಕರ ದಾಳಿ: 17 ಯೋಧರ ಸಾವು
ಸುದ್ದಿ ಸಾಗರ

ಕಾಶ್ಮೀರ ಕಣಿವೆಯಲ್ಲಿ 2 ದಶಕಗಳ ಅಂತರದಲ್ಲಿ ಸೇನೆ ಮೇಲೆ ಭೀಕರ ದಾಳಿ: 17 ಯೋಧರ ಸಾವು

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಭಾನುವಾರ

 ಮುಂಜಾನೆ ವೇಳೆಯಲ್ಲಿ ಉತ್ತರ ಕಾಶ್ಮೀರದ ಉರಿ (Uri) ಬಳಿ ಭಾರತೀಯ ಸೇನೆಯ ಮೇಲೆ ಭಾರಿ ಪ್ರಮಾಣದ ದಾಳಿ ನಡೆದಿದ್ದು, 17 ಸೈನಿಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೂ 30 ಜನ ಸೈನಿಕರು ಗಾಯಗೊಂಡಿದ್ದಾರೆ.

"ನಗರದ ಹೊರಭಾಗದಲ್ಲಿ ಕೇಳಿ ಬರುತ್ತಿದ್ದ ಗುಂಡಿನ ಮೊರೆತ, ಸ್ಫೋಟದ ಸದ್ದು ಹಾಗೂ ಏಳುತ್ತಿದ್ದ ಹೊಗೆಯನ್ನು ನೋಡುತ್ತಿದ್ದ ಸ್ಥಳೀಯರು ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಆರಂಭವಾಯಿತು ಎಂದು ಶಂಕೆಯನ್ನು ವ್ಯಕ್ತಪಡಿಸಿದ್ದರು,'' ಎಂದು 'ಕಾಶ್ಮೀರಿ ರೀಡರ್ ಡಾಟ್ ಕಾಮ್' ವರದಿ ಮಾಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಆರಂಭದ ಸಮಯದಲ್ಲೇ ಭಾರತೀಯ ಸೇನೆ ಮೇಲೆ ಭಾರಿ ದಾಳಿ ನಡೆದಿದೆ. ಈ ಬಾರಿಯ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರ ಪ್ರಮುಖ ಚರ್ಚೆಯ ವಿಷಯವಾಗಿತ್ತು. ಈಗಾಗಲೇ ಕಾಶ್ಮೀರ ಕಣಿವೆಯಲ್ಲಿ ಜನ ಮತ್ತು ಸೇನೆ ನಡುವೆ ಸಂಘರ್ಷದಿಂದಾಗಿ 87 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿನ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತ್ತು. ಇದಕ್ಕೆ ಈ ದಾಳಿ ಹೊಸದಾಗಿ ಸೇರ್ಪಡೆಯಾಗಿದೆ.

ದಾಳಿ ನಡೆದ ಬೆನ್ನಲ್ಲೇ ಭಾರತೀಯ ಸೇನೆಯ ಡೈರೆಕ್ಟರ್ ಜನರಲ್ ಲೆ. ರಣಬೀರ್ ಸಿಂಗ್ ಪಾಕಿಸ್ತಾನದ ಸಹೋದ್ಯೋಗಿಗೆ ಕರೆ ಮಾಡಿ ಗಂಭೀರ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ಎರಡು ದಶಕಗಳ ಅಂತರದಲ್ಲಿ ದೇಶದಲ್ಲಿಯೇ ಅತೀ ಹೆಚ್ಚು ಮಿಲಿಟರಿ ಪಡೆಯನ್ನು ಹೊಂದಿರುವ ಕಾಶ್ಮೀರದಲ್ಲಿ ಸೇನೆ ಮೇಲೆ ನಡೆದ ಬಹುದೊಡ್ಡ ದಾಳಿ ಇದಾಗಿದೆ.

ಎಲ್ಲಿ ನಡೆಯಿತು ದಾಳಿ?: 

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ 102 ಕಿಲೋಮೀಟರ್ ದೂರದ ಉರಿ ಪ್ರದೇಶದಲ್ಲಿರುವ ಸೇನೆಯ 12 ಇನ್ಫೆಂಟ್ರಿ ಬ್ರಿಗೇಡ್ ಕೇಂದ್ರ ಕಚೇರಿ ಮತ್ತು ನೆಲೆಯ ಮೇಲೆ ಭಾನುವಾರ ಬೆಳಿಗ್ಗೆ 5:30ರ ಸುಮಾರಿಗೆ ಶಸ್ತ್ರ ಸಜ್ಜಿತರು ದಾಳಿ ನಡೆಸಿದ್ದಾರೆ. ಪರಿಣಾಮ 17 ಸೈನಿಕರು ಸಾವನ್ನಪ್ಪಿದ್ದರೆ, 30 ಜವಾನರು ಗಾಯಗೊಂಡಿದ್ದಾರೆ. "ಘಟನೆಯಲ್ಲಿ ನಾಲ್ವರು ಉಗ್ರರೂ ಸಾವನ್ನಪ್ಪಿದ್ದಾರೆ," ಎಂದು ಸೇನೆಯ ಉತ್ತರ ಕಮಾಂಡ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿರುವ ಸೇನೆಯ ಆಪರೇಷನ್ ಡಿಜಿ ಲೆಫ್ಟಿನೆಂಟ್ ರಣಬೀರ್ ಸಿಂಗ್, “ಆರಂಭಿಕ ವರದಿಗಳ ಪ್ರಕಾರ ಉಗ್ರರು ಜೈಶ್ -ಎ- ಮೊಹಮ್ಮದ್ ಉಗ್ರ ಸಂಘಟನೆಗೆ ದಾಳಿ ಹಿಂದಿದೆ. ಉಗ್ರರ ಬಳಿಯಿಂದ 4 ಎಕೆ-47 ರೈಫಲ್ಸ್, 4 ಗ್ರೆನೇಡ್ ಲಾಂಚರ್ಸ್, ಜೊತೆಗೆ ದೊಡ್ಡ ಸಂಖ್ಯೆಯಲ್ಲಿ ಯುದ್ದೋಪಕರಣಗಳಿದ್ದವು,” ಎಂದು ತಿಳಿಸಿದ್ದಾರೆ. ದಾಳಿಯಲ್ಲಿ ಇನ್ನೂ ಹೆಚ್ಚಿನ ಭಯೋತ್ಪಾದಕರು ಪಾಲ್ಗೊಂಡಿರುವ ಶಂಕೆ ಇದ್ದು, ಅವರಿಗಾಗಿ ಹುಡುಕಾಟ ಮುಂದುವರಿದಿದೆ ಎಂದು ಸೇನೆ ತಿಳಿಸಿದೆ.

ಆರಂಭದಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವಿನ ‘ಲೈನ್ ಆಫ್ ಕಂಟ್ರೋಲ್’ಗೆ ಸಮೀಪದಲ್ಲಿರುವ ಸೇನಾ ನೆಲೆಯ ಮುಂಭಾಗದ ಮೇಲೆ ಶಸ್ತ್ರ ಸಜ್ಜಿತರು ದಾಳಿ ನಡೆಸಿದ್ದಾರೆ. ನಂತರ, "ಕೇಂದ್ರ ನೆಲೆ ಒಳಗೆ ನುಗ್ಗಿದ್ದಾರೆ," ಎಂದು ಕೊಲೋನೆಲ್ ಎಸ್.ಡಿ ಗೋಸ್ವಾಮಿ ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳು ಹೇಳಿರುವ ಮಾಹಿತಿಯಂತೆ ಭಾನುವಾರ ಮುಂಜಾನೆ ಇಲ್ಲಿನ ಕೇಂದ್ರ ನೆಲೆಯಿಂದ ಭಾರಿ ಹೊಗೆ ಮೇಲೇಳುತ್ತಿರುವುದು ಕಾಣಿಸಿದೆ. ಇದಾದ ಬೆನ್ನಿಗೆ ಸರಣಿ ಗುಂಡಿನ ಶಬ್ದಗಳು ಕೇಳಿಸಿವೆ. ಸ್ಪೋಟ ಮತ್ತು ಗುಂಡಿನ ಶಬ್ದಗಳು ಗಂಟೆಗಳ ಕಾಲ ಕೇಳಿ ಬರುತ್ತಲೇ ಇತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ದಾಳಿಯ ಸಂದರ್ಭ ಸೇನಾ ನೆಲೆಯಲ್ಲಿದ್ದ ತಾತ್ಕಾಲಿಕ ಟೆಂಟ್ ಮತ್ತು ಆಶ್ರಯ ತಾಣಗಳು ಬೆಂಕಿಗೆ ಆಹುತಿಯಾಗಿದ್ದು ಹಿನ್ನೆಲೆಯಲ್ಲಿ ಭಾರಿ ಹೊಗೆ ಮೇಲೆದ್ದಿತ್ತು.

12 ಸೈನಿಕರು ಬೆಂಕಿಯಿಂದಲೇ ಸಾವಿಗೀಡಾಗಿದ್ದರೆ, ಉಳಿದಿಬ್ಬರು ಗುಂಡಿನ ಚಕಮಕಿ ವೇಳೆ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣ ಸೇನೆಯ ಹೆಲಿಕಾಪ್ಟರ್ಗಳಲ್ಲಿ ಶ್ರೀನಗರದ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಟ್ವಿಟ್ಟರಿನಲ್ಲಿ ಪ್ರಧಾನಿ ಗುಡುಗು:

ಈ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕಟು ಶಬ್ದಗಳಲ್ಲಿ ಖಂಡಿಸಿದ್ದು, “ಉಗ್ರರ ಹೇಡಿಯುತ ದಾಳಿ,” ಎಂದು ಜರೆದಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಮೋದಿ, ಈ ಘಟನೆ ಹಿಂದಿರುವವರನ್ನು ಶಿಕ್ಷಿಸದೆ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ 2 ದಶಕಗಳ ಅಂತರದಲ್ಲಿ ಸೇನೆ ಮೇಲೆ ಭೀಕರ ದಾಳಿ: 17 ಯೋಧರ ಸಾವು

ದಾಳಿ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅಲ್ಲಿನ ಮಿಲಿಟರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಜತೆ ಮಾತನಾಡಿದ್ದೇನೆ ಎಂದಿದ್ದಾರೆ. “ಉರಿ ಮೇಲಿನ ದಾಳಿ ನಡೆಸಿದವರು ಅತ್ಯುತ್ತಮ ತರಭೇತಿ ಪಡೆದ, ಹೆಚ್ಚಿನ ಶಸ್ತ್ರಾಸ್ತ್ರ ಮತ್ತು ವಿಶೇಷ ಸಾಧನೆಗಳೊಂದಿಗೆ ಬಂದ ಉಗ್ರರು ಎನ್ನುವ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ,” ಎಂದಿದ್ದಾರೆ. “ಭಯೋತ್ಪಾದಕರು ಮತ್ತು ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ನೀಡುತ್ತಿರುವ ನೇರ ಮತ್ತು ನಿರಂತರ ಬೆಂಬಲದಿಂದ ನಾನು ನಿರಾಶನಾಗಿದ್ದೇನೆ,” ಎಂದು ತಮ್ಮ ಸರಣಿ ಟ್ವೀಟ್ಗಳಲ್ಲಿ ಹೇಳಿದ್ದಾರೆ. ಘಟನೆ ಬೆನ್ನಲ್ಲೇ ನಿಗದಿಯಾಗಿದ್ದ ರಷ್ಯಾ ಮತ್ತು ಅಮೆರಿಕಾ ಪ್ರವಾಸವನ್ನೂ ಸಿಂಗ್ ಕ್ಯಾನ್ಸಲ್ ಮಾಡಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ 2 ದಶಕಗಳ ಅಂತರದಲ್ಲಿ ಸೇನೆ ಮೇಲೆ ಭೀಕರ ದಾಳಿ: 17 ಯೋಧರ ಸಾವು

ಪಾಕಿಸ್ತಾನ ಹೊಣೆ?:

ಒಂದೆಡೆ ರಾಜನಾಥ್ ಸಿಂಗ್ ಪಾಕಿಸ್ತಾನದತ್ತ ಬೆರಳು ತೋರಿಸುತ್ತಿದ್ದರೆ, ಈ ವರೆಗೆ ಯಾವುದೇ ಭಯೋತ್ಪಾದಕ ಸಂಘಟನೆಯೂ ಘಟನೆಯ ಹೊಣೆ ಹೊತ್ತುಕೊಂಡಿಲ್ಲ. ರಾಜನಾಥ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಿದೇಶಾಗ ವಕ್ತಾರ ನಫೀಜ್ ಝಕಾರಿಯಾ, “ಇದು ಭಾರತದ ಹಳೇ ಚಾಳಿ. ತನಿಖೆ ನಡೆಸದೆ, ಪಾಕಿಸ್ತಾನದ ಮೇಲೆ ಗೂಬೆ ಕೂರಿಸುತ್ತಾರೆ,” ಎಂದು ಬಿಬಿಸಿಗೆ ಹೇಳಿಕೆ ನೀಡಿದ್ದಾರೆ.

ಇನ್ನು ಸ್ಥಳಕ್ಕೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಭೂ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್ ಭೇಟಿ ನೀಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈಗಾಗಲೇ ಪರಿಕ್ಕರ್ ಶ್ರೀನಗರ ತಲುಪಿದ್ದಾರೆ ಎಂಬ ಮಾಹಿತಿಗಳು ಸಿಕ್ಕಿವೆ.

ಸಾವಿನ ಸರಣಿ

ಜುಲೈ 8ರಂದು

ಸಾವಿನ ಬೆನ್ನಿಗೇ ಆರಂಭವಾದ ಕಾಶ್ಮೀರ ಸಂಘರ್ಷದಲ್ಲಿ ಈ ವರೆಗೆ 87ಕ್ಕೂ ಹೆಚ್ಚು ಜನ ಅಸುನೀಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಕಾಶ್ಮಿರ ಕಣಿವೆಯಲ್ಲಿ ಅಸಹನೆ ಕುದಿಯುತ್ತಿದ್ದು, ನಾಗರಿಕರು ಮತ್ತು ಸೇನೆಯ ನಡುವೆ ತೀವ್ರ ಸಂಘರ್ಷ ಜಾರಿಯಲ್ಲಿದೆ.

ಇದೀಗ ಸೇನೆಯ ಪ್ರಮುಖ ನೆಲೆಗೇ ಉಗ್ರರು ದಾಳಿ ಮಾಡಿದ್ದು, ಇದು ಕಾಶ್ಮೀರದಲ್ಲಿ ನಡೆಯುತ್ತಿರುವ ಸೇನೆ ಮತ್ತು ಜನರ ನಡುವಿನ ಸಂಘರ್ಷದ ಮೇಲೆ ನೇರ ಪರಿಣಾಮ ಬೀರಲಿದೆ. ಜತೆಗೆ, ದೇಶಾದ್ಯಂತ ಜನರಲ್ಲಿ ಸೇನೆಯ ಬಗ್ಗೆ ಇರುವ ಭಾವನೆಗಳನ್ನುಈಗಾಗಲೇ ಕಲುಕಿದೆ.

ಚಿತ್ರ ಕೃಪೆ: 

ಇಂಡಿಯನ್ ಎಕ್ಸ್ ಪ್ರೆಸ್