ಸುದ್ದಿ ಸಾಗರ

ಈಗ ಇವರು 'ಅಧಿಕೃತ ಭಯೋತ್ಪಾದಕರು': ನ್ಯಾಯಾಲಯದ ಆದೇಶದಿಂದ ಖುಷಿ ಪಟ್ಟವರು 'ಇಬ್ಬರೇ'!

ಒಂದು

ಪ್ರಕರಣ, ಅಕ್ಕೊಂದು ವಿಶೇಷ ನ್ಯಾಯಾಲಯ, ಐದು ಸಾವಿರ ಮೀರಿದ ದಾಖಲೆಗಳು, 350 ಸಾಕ್ಷಿಗಳು, 250ಕ್ಕೂ ಹೆಚ್ಚು ವಶಪಡಿಸಿಕೊಂಡಿದ್ದ ವಸ್ತುಗಳು, 13 ಜನ ಆರೋಪಿಗಳು, 10 ಜನ ತಲೆಮರೆಸಿಕೊಂಡಿರುವವರು, ಒಂದು ಪ್ರತಿಷ್ಠಿತ ತನಿಖಾ ಸಂಸ್ಥೆ ಮತ್ತು ಭಾರಿ ಸುದ್ದಿ ಮಾಡಿದ್ದ ಗುರುತರ ಆರೋಪಗಳು...ಕೊನೆಯಲ್ಲಿ, ವಿಚಾರಣೆ ನಡುವೆಯೇ ತಪ್ಪೊಪ್ಪಿಗೆ, ಐದು ವರ್ಷಗಳ ಸಾಮಾನ್ಯ ಜೈಲು ಶಿಕ್ಷೆಯ ತೀರ್ಪು ಮತ್ತು ಇದರಿಂದ ಸಮಾನ ಪ್ರಮಾಣದಲ್ಲಿ ಸಂತುಷ್ಟಗೊಂಡ ಎನ್ಐಎ ಮತ್ತು ಆರೋಪಿಗಳು.

ಶುಕ್ರವಾರ ಬೆಂಗಳೂರಿನ ಸಿಟಿ ಸಿವಿಲ್ ಹಾಗೂ ಸೆಶೆನ್ಸ್ ನ್ಯಾಯಾಲಯದಲ್ಲಿ ನಡೆದ, ಭಾರಿ ಕುತೂಹಲವನ್ನು ಹುಟ್ಟುಹಾಕಿದ್ದ 'ಸಂಚಿನ ಪ್ರಕರಣ'ದ ಕ್ಲೈಮ್ಯಾಕ್ಸ್ ಇದು. ಆರೋಪಿಗಳಾದ ಶೋಯಿಬ್‌ ಅಹ್ಮದ್‌ ಮಿರ್ಜಾ, ಮೊಹ್ಮದ್‌ ಸಾದಿಕ್‌ ಲಷ್ಕರ್‌, ಡಾ.ಇಮ್ರಾನ್‌ ಅಹ್ಮದ್‌, ಸಯ್ಯದ್‌ ತಾಂಜಿಮ್‌ ಅಹ್ಮದ್‌, ಡಾ.ನಯೀಂ ಸಿದ್ದಿಕಿ, ಅಬ್ದುಲ್‌ ಹಕೀಂ ಜಮಾದಾರ್‌, ಉಬೇದುಲ್ಲಾ ಬಹದ್ದೂರ್‌, ವಾಹಿದ್‌ ಹುಸೇನ್‌, ರಿಯಾಜ್‌ ಅಹ್ಮದ್‌ ಬ್ಯಾಹಟ್ಟಿ, ಮಹ್ಮದ್‌ ಅಕ್ರಮ್‌, ಡಾ.ಜಾಫ‌ರ್‌ ಇಕ್ಬಾಲ್, ಶೊಲ್ಲಾಪೂರ್‌, ಮೆಹಬೂಬ್‌ ಬಾಗಲಕೋಟ್‌ ಮತ್ತು ಒಬೈದ್‌ ಉರ್‌ ರೆಹಮಾನ್‌ ಅವರುಗಳಿಗೆ ಎನ್ಐಎ ವಿಶೇಷ ನ್ಯಾಯಾಲಯ ತಲಾ ಐದು ವರ್ಷಗಳ ಶಿಕ್ಷೆ ಮತ್ತು ಒಟ್ಟು 31 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶವನ್ನು ಹೊರಡಿಸಿತು.

ಈ ಸಂದರ್ಭದಲ್ಲಿ ಎಲ್ಲರ ಕುತೂಹಲ ನೆಟ್ಟಿದ್ದ ನ್ಯಾಯಾಲಯದ ಕಟಕಟೆಯ ಸಮೀಪದಲ್ಲಿ ಏನೇನು ನಡೆಯಿತು. ‘ಸಮಾಚಾರ’ ಕಟ್ಟಿಕೊಟ್ಟ ವರದಿ ಇಲ್ಲಿದೆ.

ಸಮಯ ಬೆಳಿಗ್ಗೆ 10:45..

ಹಿಂದಿನ ದಿನ ಮಳೆ ಬಂದಿತ್ತು. ತಣ್ಣನೆ ಗಾಳಿ ನಿಧಾನವಾಗಿ ಬೀಸುತ್ತಿತ್ತು. ಬೆಂಗಳೂರಿನ ಸಿವಿಲ್ ನ್ಯಾಯಾಲಯಗಳ ಸಂಕೀರ್ಣ ಕಟ್ಟಡದ ಎರಡನೇ ಮಹಡಿಯ ರೂಂ ನಂಬರ್ CCH 50ರ ಮುಂದೆ ಬೆರಳೆಣಿಕೆಯ ಪತ್ರಕರ್ತರು ನಿಂತಿದ್ದರು. ಸ್ಥಳ ಶಾಂತವಾಗಿತ್ತು. ಕೋರ್ಟ್ ಹಾಲಿನ ದೀಪಗಳು ಉರಿಯುತ್ತಿದ್ದವು. ಬೆರಳಚ್ಚು ವಿಭಾಗದ ಮಹಿಳೆಯೊಬ್ಬರು ಮತ್ತು ಇನ್ನಿಬ್ಬರು ಸಿಬ್ಬಂದಿ, ಕೆಲವೇ ವಕೀಲರಷ್ಟೇ ಅಲ್ಲಿದ್ದರು.

ಇದೆಲ್ಲಾ ನಡೆಯುವ ಮೊದಲು ಅಂದರೆ ಸೆಪ್ಟೆಂಬರ್ 15ರಂದೇ 13 ಜನರನ್ನು ಅಪರಾಧಿಗಳೆಂದು ಎನ್ಐಎ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬಿ. ಮುರಳೀಧರ ಪೈ ಘೋಷಿಸಿದ್ದರು. ಶಿಕ್ಷೆಯನ್ನು ಇಂದು (ಸೆ.16)ಕ್ಕೆ ಕಾಯ್ದಿರಿಸಿದ್ದರು. ಅಪರಾಧಿಗಳ ಪೆರೇಡಿನ ನಿರೀಕ್ಷೆಯಲ್ಲಿ ನಿಂತಿದ್ದ ಮಾಧ್ಯಮಗಳಿಗೆ ಮೊದಲು ಎದುರಾಗಿದ್ದು ಎನ್ಐಎ (ರಾಷ್ಟ್ರೀಯ ತನಿಖಾ ದಳ) ತಂಡ. ಬೀಡು ಬೀಸಾಗಿ ಹೆಜ್ಜೆ ಹಾಕುತ್ತಾ ಸಂಭ್ರಮದಿಂದ ಎನ್ಐಎ ಎಸ್ಪಿ, ಡಿವೈಎಸ್ಪಿ ಮತ್ತಿತರ ಅಧಿಕಾರಿಗಳು ಆಗಮಿಸಿದರು. ಬಂದವರೇ ಮಾಧ್ಯಮಗಳ ಬಳಿಗೆ ಬಂದು ನಿಮ್ಮ ಮಾಧ್ಯಮ ಸಂಸ್ಥೆ ಯಾವುದು ಎಂದೆಲ್ಲಾ ಕೇಳಿ ತಿಳಿದುಕೊಂಡರು. “ಡಿಜಿ (ಡೈರೆಕ್ಟರ್ ಜನರಲ್) ಹೇಳಿದ್ದಾರೆ, ನ್ಯಾಷನಲ್ ಮೀಡಿಯಾದಲ್ಲೂ ಬರಬೇಕು ಅಂತ. ನಿಮಗೆ ನ್ಯಾಷನಲ್ ಮೀಡಿಯಾದವರ ಸಂಪರ್ಕ ಇದ್ದರೆ ಬರಲು ಹೇಳಿ,” ಎಂದು ಒಬ್ಬರು ಅಧಿಕಾರಿ ಹೇಳಿದರು.

ಅವರಲ್ಲಿ ತುಂಬು ಸಂಭ್ರಮ ಕಾಣುತ್ತಿತ್ತು. ದೇಶದಲ್ಲಿ ಎನ್ಐಎ ಕೈಗೆತ್ತಿಕೊಂಡ ಪ್ರಕರಣಗಳು ದಡ ಮುಟ್ಟುವುದೇ ಅಪರೂಪ. ಅಂಥಹದ್ದರಲ್ಲಿ ಒಂದು ಕೇಸನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋದ ಸಂಭ್ರಮ ಅವರ ಮುಖದಲ್ಲಿತ್ತು. ಸುತ್ತ ಮುತ್ತೆಲ್ಲಾ ಓಡಾಡುತ್ತಿದ್ದರು; ಅಲ್ಲಿದ್ದವರೊಂದಿಗೆಲ್ಲಾ ಮುಕ್ತವಾಗಿ ಮಾತನಾಡುತ್ತಾ, ಹರಟೆ ಹೊಡೆಯುತ್ತಿರಬೇಕಾದರೆ ಅಪರಾಧಿಗಳ ಆಗಮನವಾಯಿತು.

ಸಂಭ್ರಮದ ಗಳಿಗೆ:

ಕೈ ಕೈ ಹಿಡಿದು ಅಪರಾಧಿಗಳನ್ನು ಕರೆದುಕೊಂಡ ಬಂದ ಪೊಲೀಸರು ಎಲ್ಲರನ್ನೂ ಕೋರ್ಟ್ ಕೊಠಡಿಯ ಹೊರಗೆ ಸಾಲಾಗಿ ಜೋಡಿಸಿದ್ದ ಬೆಂಚಿನ ಮೇಲೆ ಕೂರಿಸಿದರು. ಎಲ್ಲರ ಮುಖದಲ್ಲೂ ಒಂಥರಾ ದುಗಡ ಕಾಣಿಸುತ್ತಿತ್ತು. ಯಾರತ್ತಲೂ ನೋಟ ಬೀರುತ್ತಿರಲಿಲ್ಲ. ಅವರವರಲ್ಲೇ ಸಮಾಲೋಚನೆಯಲ್ಲಿ ನಿರತರಾಗಿದ್ದರು. ಕೆಲವರು ಧ್ಯಾನಸ್ಥರಂತೆ ಕುಳಿತಿದ್ದರು. ಮಧ್ಯೆ ತಮ್ಮ ವಕೀಲರು ಬಂದಾಗ ಮಾತನಾಡಿದ್ದು ಬಿಟ್ಟರೆ, 13 ಜನರ ನಡುವೆ ಅವರವರಲ್ಲೇ ಸಂಭಾಷಣೆಗಳು ನಡೆಯುತ್ತಿದ್ದವು.

ಅರೆ ಕ್ಷಣದಲ್ಲಿ ಜಡ್ಜ್ ಆಗಮಿಸಿದರು. ಎಲ್ಲಾ ಆರೋಪಿಗಳನ್ನೂ ಒಳಗೆ ಕರೆದರು. ಕೋರ್ಟ್ ಹಾಲಿನ ಕೊನೆಯಲ್ಲಿ ಗೋಡೆಗೆ ತಾಗಿಕೊಂಡಂತೆ ಮರದ ಉದ್ದನೆಯ ಕಟೆಕಟೆಯೊಳಗೆ ಒಂದಷ್ಟು ಜನರನ್ನೂ, ಅದರಿಂದ ಹೊರಗೆ ಒಂದಷ್ಟು ಜನರನ್ನೂ ಸಾಲಾಗಿ ನಿಲ್ಲಿಸಿದರು. ಒಳಗೆ ಕರೆದುಕೊಂಡು ಹೋಗುವಾಗ ಅವರ ವರ್ತನೆಗಳೂ ವಿಚಿತ್ರವಾಗಿದ್ದವು. ಕೆಲವೇ ಕ್ಷಣದಲ್ಲಿ ಅವರ ಭವಿಷ್ಯ ನಿರ್ಧಾರವಾಗಲಿತ್ತು. ಓರ್ವ ಕೈ ಕೈ ಹಿಸುಕಿಕೊಳ್ಳುತ್ತಿದ್ದರೆ, ಇನ್ನೊಬ್ಬ ಪದೇ ಪದೇ ಮುಖ ಸಿಂಡರಿಸುತ್ತಿದ್ದ. ಮತ್ತಿಬ್ಬರು ಸಣ್ಣಗೆ ಕಿವಿಯಲ್ಲಿ ಮಾತನಾಡುತ್ತಲೇ ಇದ್ದರು.

ಜಡ್ಜ್ ಹಾಳೆ ಕೈಗೆತ್ತಿಕೊಂಡರು. ಅವರ ಭವಿಷ್ಯ ಆ ಒಂದು ರೂಪಾಯಿ ಕಾಗದದಲ್ಲಿತ್ತು. ನ್ಯಾಯಾಧೀಶರು ವೇಗವಾಗಿ ಓದಲು ಆರಂಭಿಸಿದರು. ಸೂಜಿ ಬಿದ್ದರೂ ಕೇಳಿಸುಷ್ಟು ವಾತಾವರಣ ನಿಶಬ್ಧವಾಗಿತ್ತು.

ಒಂದೊಂದೇ ಸೆಕ್ಷನ್ ಹೇಳಿ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣವನ್ನು ಹೇಳುತ್ತಾ ಹೋದರು. ಒಬ್ಬ ಆರೋಪಿ ತಲೆಯನ್ನು ಬದಿಗೆ ತಿರುಗಿಸಿ, ಕಿವಿಯನ್ನು ಮಾತ್ರ ಜಡ್ಜ್ ಕಡೆಗಿಟ್ಟು ನಿಂತಿದ್ದ. ಇನ್ನೊಬ್ಬ ಕಣ್ಣು ಮುಚ್ಚಿ ಕೊಂಡು ಕಿವಿಗೆ ಮಾತ್ರ ಕೆಲಸ ಕೊಟ್ಟಿದ್ದ. ಐಪಿಸಿ, ಶಸ್ತ್ರಾಸ್ತ್ರ ಕಾಯ್ದೆ, ಯುಎಪಿಎ (Unlawful Activities (Prevention) Act) ಅಡಿಯಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು 2-3 ಸಾವಿರ ದಂಡ ಪ್ರಮಾಣವನ್ನು ನ್ಯಾಯಾಧೀಶರು ಆದೇಶಿಸುತ್ತಿದ್ದರೆ, ನಿಧಾನವಾಗಿ ಅಪರಾಧಿಗಳ ಮುಖದಲ್ಲಿ ನಗು ಚೆಲ್ಲಲಾರಂಭಿಸಿತು. ಶಿಕ್ಷೆ ಪ್ರಮಾಣ ಘೋಷಣೆ ಮಾಡಿ ನ್ಯಾಯಾಧೀಶರು ಕೈ ಮುಗಿಯುತ್ತಾ ಮೇಲೆದ್ದರು. ಎಲ್ಲಾ ಆರೋಪಿಗಳು ಅಪರಾಧಿಗಳಾಗಿ ಬದಲಾಗಿದ್ದರು.

ಒಂದೇ ಕ್ಷಣದಲ್ಲಿ ಹಿಂಭಾಗದಲ್ಲಿ ಗುಸು ಗುಸು ಗದ್ದಲ ಜೋರಾಯಿತು. ಆರೋಪಿಗಳು ಅಕ್ಕಪಕ್ಕದವರ ಜೊತೆ ಮಾತನಾಡುತ್ತಿದ್ದರು. ಎಲ್ಲರ ಹಲ್ಲುಗಳೂ ಕಾಣಿಸುತ್ತಿದ್ದವು. ಓರ್ವ ಅಪರಾಧಿಯ ಮುಖ ಕೆಂಪಗಾಗಿದ್ದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಶೋಹೇಬ್ ಅಹ್ಮದ್ ಮಿರ್ಜಾ ಅಲಿಯಾಸ್ ‘ಚೋಟು’ ಎಂಬ ಪ್ರಮುಖ ಅಪರಾಧಿಯ ನರನಾಡಿಗಳಲ್ಲೂ ಸಂಭ್ರಮ ಎದ್ದು ಕಾಣಿಸುತ್ತಿತ್ತು. ಅದುಮಿಟ್ಟ ಭಾವನೆಗಳನ್ನು ಹೊರಹಾಕಲು ಆತ ಜನ ಹುಡುಕುತ್ತಿದ್ದರು. ಸಹವರ್ತಿಗಳು, ಕೊನೆಗೆ ಪೊಲೀಸರನ್ನೂ ಬಿಡದೆ ಅವರೆಲ್ಲಾ ಮಾತನಾಡುತ್ತಿದ್ದರು. ಹೊರಗೆ ಬಂದು ಬೆಂಚಿನ ಮೇಲೆ ಕೂತಾಗ ಆರೋಪಿಗಳ ಮಾತು ಮುಂದುವರಿದಿತ್ತು. ವಕೀಲರು ಪುನಃ ಬಂದರು. ಒಂದಷ್ಟು ಜನ ಹೋಗಿ ಮಾತನಾಡಿದರು; ಬಾಯಿ ತುಂಬಾ ನಕ್ಕರು.

ಕುತೂಹಲದ ದಂಡು:

ಅಲ್ಲೇ ಓಡಾಡುತ್ತಿದ್ದ ದಪ್ಪ ಮೀಸೆಯ ಪೊಲೀಸರೊಬ್ಬರ ಬಳಿ ನ್ಯಾಯಾಲಯದ ಮಹಿಳಾ ಸಿಬ್ಬಂದಿಯೊಬ್ಬರು ಲಿಫ್ಟ್ ಪಕ್ಕ ನಿಂತುಕೊಂಡು "ಏನು ಕೇಸು,?" ಎಂದು ಕೇಳಿದರು. ಪೊಲೀಸ್ "ಟೆರರಿಸ್ಟ್" ಎಂದರು. ಆಕೆ "ಹೌದಾ? ಏನಾಯ್ತು?," ಅಚ್ಚರಿಗೊಂಡು ಕೇಳಿದರು. "5 ವರ್ಷ ಜೈಲು" ಎಂದ ಪೊಲೀಸ್. ‘ಅಷ್ಟೇನಾ?’ ಆಕೆ ನಿರಾಸಕ್ತಿಯಿಂದ ಉದ್ಗರಿಸಿದರು. "ಜೀವಾವಧಿ ಆಗೋದು, ಗಲ್ಲೂ ಆಗ್ತಿತ್ತು..." ಎಂದು ಪೊಲೀಸ್, ಕೋರ್ಟಲ್ಲೇ ಇದ್ದು ಅಲ್ಪ ಸ್ವಲ್ಪ ದೈನಂದಿನ ಅನುಭವ ಗಿಟ್ಟಿಸಿಕೊಂಡಂತೆ ಕಾಣಿಸುತ್ತಿದ್ದ ಆಕೆಗೆ ಬಿಡಿಸಿ ಹೇಳಿದರು. ಆಕೆ ಪುನಃ "ಹೌದಾ..?" ಎಂದರು; ಈ ಬಾರಿ ಉದ್ಘಾರ ವಿಚಿತ್ರವಾಗಿತ್ತು.

ಸಂಬ್ರಮದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಅರ್ಜುನ್ ಮತ್ತು ಎನ್ಐಎ ತಂಡದ ಸದಸ್ಯರು

ಅಲ್ಲಿಂದ ಎನ್ಐಎ ಪಬ್ಲಿಕ್ ಪ್ರಾಸಿಕ್ಯೂಟರ್ ಅರ್ಜುನ್ ಎ. ಮತ್ತವರ ಪೂರ್ತಿ ತನಿಖಾ ತಂಡ ಕೋರ್ಟ್ ಹೊರಗೆ ಬಂದು ಫುಟ್ ಪಾತ್ ಮೇಲೆ ಕಾಯುತ್ತಿದ್ದ ಮಾಧ್ಯಮಗಳಿಗೆ ಬೈಟ್ ನೀಡಿದರು. “ಎಲ್ಇಟಿ (ಲಷ್ಕರ್ ಇ ತೊಯ್ಬಾ) ಸಂಚಿನ ಪ್ರಕರಣದಲ್ಲಿ ಇವತ್ತು ಎನ್ಐಎ ವಿಶೇಷ ಕೋರ್ಟ್ 13 ಜನ ದೋಷಿಗಳಿಗೆ ಶಿಕ್ಷೆ ನೀಡಿದೆ. ಅಪರಾಧಿಗಳ ಕಡೆಯಿಂದ ಇದೊಂದು ಸ್ವಾಗತಾರ್ಹ ನಡೆ. ಯಾಕೆಂದರೆ ತಮ್ಮ ಮೇಲಿನ ಎಲ್ಲಾ ಆರೋಪಗಳ ಬಗ್ಗೆ ಈ ಅಪರಾಧಿಗಳು ತಾವೇ ಮುಂದೆ ಬಂದು ‘ಪ್ಲೀಡೆಡ್ ಗಿಲ್ಟಿ’ (ತಪ್ಪೊಪ್ಪಿಕೊಂಡಿದ್ದಾರೆ). ಇವರೆಲ್ಲಾ ಯುವಕರು, ಕೆಲವು ಕಾರಣದಿಂದಾಗಿ ಇದರಲ್ಲೇ ಸಿಕ್ಕಿ ಹಾಕಿಕೊಂಡು ಈಗ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಅವರ ವಯಸ್ಸು ಸೇರಿದಂತೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟುಕೊಂಡ ಅವರಿಗೆ 5 ವರ್ಷಗಳ ಕನಿಷ್ಠ ಪ್ರಮಾಣದ ಶಿಕ್ಷೆಯನ್ನು ನೀಡಲಾಗಿದೆ. ನಾನು ತುಂಬಾ ಸಂತೋಷಗೊಂಡಿದ್ದೇನೆ, ಕಾರಣ ಪ್ರಾಸಿಕ್ಯೂಷನ್ ಕಡೆಯಿಂದ ತುಂಬಾ ಕೆಲಸಗಳು ಕಡಿಮೆಯಾಯಿತು. ಅವರು ಈಗಾಗಲೇ 3 – 3.5 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಇನ್ನು ಒಂದೂವರೆ ವರ್ಷದಲ್ಲಿ ಅವರೆಲ್ಲಾ ಹೊರ ಬಂದು ಸಮಾಜದಲ್ಲಿ ನಮ್ಮ ರೀತಿಯಲ್ಲೇ ಬದುಕಲಿದ್ದಾರೆ. ಈ ರೀತಿಯ ಚಟುವಟಿಕೆಗಳನ್ನು ಮಾಡುವವರಿಗೆ ಇದೊಂದು ಸಂದೇಶ. ಯಾರದೋ ಸಂಪರ್ಕದಿಂದ ಈ ರೀತಿ ಮಾಡಿ ಕೊನೆಗೆ ಸಮಾಜಕ್ಕೆ ಮರಳಬೇಕು ಎನ್ನುವವರಿಗೆ ಇದೊಂದು ಧನಾತ್ಮಕ ಅಂಶ. ಪ್ರಕರಣದಲ್ಲಿ ಇನ್ನೂ 8 ಜನ ತಪ್ಪಿಸಿಕೊಂಡಿದ್ದು, ನಾವು ಹುಡುಕಾಡುತ್ತಿದ್ದೇವೆ. ಅವರನ್ನು ಆದಷ್ಟು ಬೇಗ ಹಿಡಿದು ಕೋರ್ಟ್ ವಶಕ್ಕೆ ಒಪ್ಪಿಸುತ್ತೇವೆ,” ಎಂದು ಅರ್ಜುನ್ ಮಾತು ಮುಗಿಸಿದರು. ಸಂಭ್ರಮ ಅವರ ಮುಖದಲ್ಲಿ ಮನೆಮಾಡಿತ್ತು; ಅವರ ತಂಡದವರಲ್ಲೂ.

ಇದೆಲ್ಲಾ ಮುಗಿದು ಮಧ್ಯಾಹ್ನ ಕಳೆಯುವಾಗ ಅಪರಾಧಿಗಳನ್ನು ಬಸ್ಸಿನ ಬಳಿಗೆ ಕರೆತರುತ್ತಿದ್ದರು. ಎಲ್ಲಾ ಮಾಧ್ಯಮಗಳ ಕ್ಯಾಮೆರಾಗಳೂ ಅಪರಾಧಿಗಳ ದಾರಿಯನ್ನು ಹಿಂಬಾಲಿಸಿದವು. ಶಾಂತ ಮುಖದಿಂದ ಅವರೆಲ್ಲಾ ರಸ್ತೆ ದಾಟಿ ಬಸ್ಸು ಹತ್ತಿದರು. ಕಿಟಕಿ ಪಕ್ಕ ಕೂತಿದ್ದ ‘ಚೋಟು’ ಮಾಧ್ಯಮಗಳನ್ನು ಪೊಲೀಸ್ ಬಸ್ಸಿನ ಸಣ್ಣ ಕಿಂಡಿಯಿಂದ ನೋಡಿ ನಗುತ್ತಿದ್ದ. ಆಗ ಯಾರೋ ಕ್ಯಾಮೆರಾಮನ್ಗೆ ಹೇಳಿದ, “ಆತನೇ ಎ1, ಅವನದ್ದೇ ವೀಡಿಯೋ ತೆಗೆಯಿರಿ,”. ಕ್ಯಾಮೆರಾ ಆ ಕಡೆ ಟರ್ನ್ ಆಯಿತು. ಬಸ್ಸು ನಿಧಾನಕ್ಕೆ ಚಲಿಸಲು ಆರಂಭಿಸಿತು. ‘ಚೋಟು’ ಮತ್ತಷ್ಟು ಸಂಭ್ರಮದಿಂದ ನಗುತ್ತಿದ್ದ. ಆತನ ಹಿಂದೆ ಕುಳಿತವ ಮುಖಕ್ಕೆ ಕರ್ಚೀಫ್ ಕಟ್ಟಿಕೊಂಡಿದ್ದ. ಮುಖ ಕಾಣುತ್ತಿರಲಿಲ್ಲ. ಆದರೆ ಆತನ ಕಣ್ಣುಗಳಲ್ಲಿ ಸಂಭ್ರಮ ಇಣುಕುತ್ತಿತ್ತು.

ಬಸ್ಸು ಚಲಿಸಿತು. ಚೋಟು, ಕರ್ಚೀಫ್ ಕಟ್ಟಿಕೊಂಡಿದ್ದ ಇನ್ನೊಬ್ಬನೂ ಹಿಂದೆ ತಿರುಗಿ ಮಾಧ್ಯಮಗಳ ಕ್ಯಾಮೆರಾಗಳನ್ನೇ ನೋಡುತ್ತಿದ್ದರು. ಈ ದಿನ ಬಸ್ಸಿನೊಂದಿಗೆ ಅವರ ಬದುಕೂ ನಿರ್ದಿಷ್ಟ ವರ್ಷಗಳ ಜೈಲು ಶಿಕ್ಷೆಯ ಕಡೆಗೆ ಚಲಿಸಿತು.

ಇದೇ ಅಪರಾಧಿಗಳಲ್ಲಿ ಒಬ್ಬ, ಕೆಲವು ದಿನಗಳ ಹಿಂದೆ ಆತನ ಅಮ್ಮನ ಬಳಿ, "ಅಮ್ಮಾ ನನ್ನ ಮೇಲೆ ಗಟ್ಟಿ ಆರೋಪಗಳಿಲ್ಲ. ಆದರೂ ತಪ್ಪೊಪ್ಪಿಕೊಳ್ಳುತ್ತೇನೆ. ಹೇಗೂ ನಾಲ್ಕು ವರ್ಷ ಜೈಲಿನಲ್ಲೇ ಕಳೆದಿದ್ದೇನೆ. ಇನ್ನು ಒಂದು ವರ್ಷ ಅಮ್ಮ. ನಿಮ್ಮನ್ನೆಲ್ಲಾ ಬಂದು ಸೇರಿಕೊಳ್ಳುತ್ತೇನೆ,” ಎಂದಿದ್ದನಂತೆ. ಆತನ ಮಾತುಗಳನ್ನು ಸತ್ಯವಾಗಿಸಿತ್ತು ನ್ಯಾಯಾಲಯ.

ಅದು ಎನ್ಐಎ ತಂಡಕ್ಕೂ ಖುಷಿ ತಂದಿತ್ತು. ಅಪರಾಧಿಗಳಾದವರ ಮುಖದಲ್ಲಿಯೂ ಖುಷಿ ಮೂಡಿಸಿತ್ತು. ನ್ಯಾಯದಾನ ವಿಳಂಬದ ಆರೋಪವನ್ನು ಹೊತ್ತಿಕೊಂಡಿದ್ದು ಮಾತ್ರ ನ್ಯಾಯಾಲಯ ಅಥವಾ ಒಟ್ಟಾರೆ ನ್ಯಾಯಾಂಗ ವ್ಯವಸ್ಥೆ. ಕಣ್ಣು ಕಟ್ಟಿರುವ ನ್ಯಾಯದೇವತೆಯ ಭಾವನೆಗಳೇನಿರಬಹುದು? ಅದು ಊಹೆಗೆ ಬಿಟ್ಟ ವಿಚಾರ.