samachara
www.samachara.com
'ಜಿಯೋ' UPDATE: ಟ್ರಾಯ್ ಅಂಗಳದಲ್ಲಿ ‘ಇಂಟರ್ ಕನೆಕ್ಟ್’ ವಿವಾದ; ‘ಫ್ರೀ ಕಾಲಿಂಗ್’ಗೆ ಗಂಡಾಂತರ?
ಸುದ್ದಿ ಸಾಗರ

'ಜಿಯೋ' UPDATE: ಟ್ರಾಯ್ ಅಂಗಳದಲ್ಲಿ ‘ಇಂಟರ್ ಕನೆಕ್ಟ್’ ವಿವಾದ; ‘ಫ್ರೀ ಕಾಲಿಂಗ್’ಗೆ ಗಂಡಾಂತರ?

'ಜಿಯೋ'

ಉದ್ಘಾಟನೆಯ ಬೆನ್ನಿಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ‘ಟೈಮ್ಸ್ ಆಫ್ ಇಂಡಿಯಾ’ಗೆ ಸುದೀರ್ಘ ಎರಡು ಗಂಟೆಗಳ ಸಂದರ್ಶನ ನೀಡಿದ್ದಾರೆ. ನರೇಂದ್ರ ಮೋದಿ ಜಾಹೀರಾತಿನಿಂದ ಹಿಡಿದು ಜಿಯೋದ ಆದಾಯದವರೆಗೆ ರಿಲಯನ್ಸ್ ದಿಗ್ಗಜ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇದಾದ ಬೆನ್ನಿಗೇ 'ಇಂಟರ್ ಕನೆಕ್ಟ್' ವಿವಾದ ‘ಟ್ರಾಯ್’ (ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ) ಮೆಟ್ಟಿಲೇರಿದೆ. ಸದ್ಯ, ಇದನ್ನು ಪರಿಹರಿಸಿಕೊಳ್ಳಲು 'ಟ್ರಾಯ್' ಜಿಯೋಗೆ ಅವಕಾಶ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯ ಜಾಹೀರಾತಿನ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಮುಖೇಶ್, ತಾವು ಪ್ರಧಾನಿಯ ಡಿಜಿಟಲ್ ಇಂಡಿಯಾ ಆಂದೋಲನದಿಂದ ಪ್ರಭಾವಿತರಾಗಿದ್ದಾಗಿ ಹೇಳಿದ್ದಾರೆ. “ನಾವು ನಮ್ಮ ಸೇವೆಯನ್ನು ದೇಶದ ನಾಯಕರ ದೂರದೃಷ್ಠಿಗೆ, ಭಾರತಕ್ಕೆ ಮತ್ತು 120 ಕೋಟಿ ಭಾರತೀಯರಿಗೆ ಸಮರ್ಪಿಸುತ್ತಿದ್ದೇವೆ.. ಇದರಲ್ಲಿ ರಾಜಕೀಯ ಏನೂ ಇಲ್ಲ,” ಎಂದಿದ್ದಾರೆ.

ಇದಕ್ಕಿಂತ ಮುಖ್ಯವಾಗಿ ಶೇರುದಾರರಿಗೆ ರಿಲಯನ್ಸ್ ಮುಖ್ಯಸ್ಥರು ಅಭಯ ನೀಡಿದ್ದಾರೆ. ಜಿಯೋದಲ್ಲಿ ದೊಡ್ಡ ಮಟ್ಟಕ್ಕೆ ಹೂಡಿಕೆ ಮಾಡುತ್ತಿರುವುದು, ಅಗ್ಗದ ದರದ ಡೇಟಾ ಸೇವೆ ಮತ್ತು ಉಚಿತ ಕರೆಗಳನ್ನು ನೀಡುತ್ತಿರುವುದರಿಂದ ಶೇರುದಾರರು ಭಯದಲ್ಲಿದ್ದಾರೆ. ಈ ಕುರಿತು ಭರವಸೆಯ ಮಾತುಗಳನ್ನಾಡಿರುವ ಮುಖೇಶ್, ರಿಲಯನ್ಸ್ ನಷ್ಟ ಅನುಭವಿಸುತ್ತದೆ ಎಂಬ ಭಯ ಬೇಡ, ನಾವು ನಷ್ಟ ಅನುಭವಿಸುವುದಿಲ್ಲ, ಆದರೆ “ಆರೋಗ್ಯಕರ ಮಾರ್ಗದಲ್ಲಿ ನಮ್ಮ ಹೂಡಿಕೆ ಹಿಂಪಡೆಯುತ್ತೇವೆ,” ಎಂದಿದ್ದಾರೆ. ಕೆಲವೇ ವರ್ಷಗಳಲ್ಲಿ ಭಾರತ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್ ಬಳಕೆಯಲ್ಲಿ ವಿಶ್ವದ ಟಾಪ್ 10 ದೇಶಗಳಲ್ಲಿ ಒಂದಾಗಲಿದೆ ಎಂದೂ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ಜಿಯೋಗಾಗಿ ಅಣ್ಣ ಮುಖೇಶ್ ಮತ್ತು ತಮ್ಮ ಅನಿಲ್ ಅಂಬಾನಿ ಒಟ್ಟಾಗಿದ್ದಾರೆ. ಈಗಾಗಲೇ ದೇಶದಾದ್ಯಂತ ಇರುವ ಅನಿಲ್ ಅಂಬಾನಿಯ ರಿಲಯನ್ಸ್ ಟೆಲಿಕಾಮ್ಗೆ ಸೇರಿದ ಟವರುಗಳನ್ನು ಜಿಯೋಗಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಕೌಟುಂಬಿಕವಾಗಿ ದೂರವಾಗಿದ್ದ ದಾಯಾದಿಗಳು, ಶತ್ರುಗಳಾಗಿ ಬದಲಾಗಿದ್ದರು. ಇದೀಗ ಇಬ್ಬರೂ ಬಿಸಿನೆಸ್ನಲ್ಲಿ ಒಂದಾಗಿರುವುದಕ್ಕೆ, “ನಾವು ಹಳೆಯದನ್ನು ಹಿಂದೆ ಬಿಟ್ಟು ಮುಂದೆ ಸಾಗುತ್ತಿದ್ದೇವೆ,” ಎಂದು ಮುಖೇಶ್ ಪ್ರತಿಕ್ರಿಯಿಸಿದ್ದಾರೆ.

'ಇಂಟರ್ ಕನೆಕ್ಟ್' ಮತ್ತು 'ಕಾಲ್ ಡ್ರಾಪ್' ಜಂಗೀ ಕುಸ್ತಿ!

ಇದೇ ಸಂದರ್ಶನದಲ್ಲಿ ಮುಖೇಶ್ ಅಂಬಾನಿ ‘ಇಂಟರ್ ಕನೆಕ್ಟ್’ ಸಮಸ್ಯೆಯ ಬಗ್ಗೆಯೂ ಮಾತನಾಡಿದ್ದಾರೆ.

“ಎಲ್ಲರೂ ನಿಯಮಗಳನ್ನು ಪಾಲಿಸಬೇಕು. ಪ್ರತಿಸ್ಪರ್ಧಿಗಳು ಜನಪ್ರಿಯ ಕಂಪೆನಿಗಳಾಗಿದ್ದು ಅದನ್ನು ಪಾಲಿಸುವ ವಿಶ್ವಾಸವಿದೆ,” ಎಂದು ಮುಖೇಶ್ ಹೇಳಿದ್ದಾರೆ.

ಇದಾದ ಬೆನ್ನಿಗೇ ಇಂಟರ್ ಕನೆಕ್ಟ್ ಸಮಸ್ಯೆ ಹಿಡಿದುಕೊಂಡು ಉಳಿದ ಖಾಸಗಿ ಕಂಪೆನಿಗಳು ಟ್ರಾಯ್ ಮೊರೆ ಹೋಗಿದ್ದವು.

‘ಜಿಯೋದಿಂದ ಉಚಿತ ಕರೆ ಮಾಡಿದರೂ ಕರೆ ಸ್ವೀಕರಿಸುವವರು ನಮ್ಮ ನೆಟ್ವರ್ಕ್ ಬಳಸುತ್ತಾರೆ. ಇದರಿಂದ ನಮಗೆ ನಷ್ಟವಾಗುತ್ತದೆ,’ ಎಂಬ ತಾಂತ್ರಿಕ ಕಾರಣವನ್ನು ಮುಂದಿಟ್ಟು ಐಡಿಯಾ, ವೊಡಾಫೋನ್ ಮತ್ತು ಏರ್ಟೆಲ್ ಕಂಪೆನಿಗಳು ಒಗ್ಗೂಡಿ ಟ್ರಾಯ್ (ದೂರಸಂಪರ್ಕ ನಿಯಂತ್ರ ಪ್ರಾಧಿಕಾರ) ಮೆಟ್ಟಿಲೇರಿದ್ದವು.

ಸದ್ಯದ ಟ್ರಾಯ್ ನಿಯಮಗಳ ಪ್ರಕಾರ, ಇಂಟರ್ ಕನೆಕ್ಟ್ (ಒಂದು ನೆಟ್ವರ್ಕ್ ನಿಂದ ಮತ್ತೊಂದು ನೆಟ್ವರ್ಕ್ ಸಂಪರ್ಕ) ಮಾಡಲು 14 ಪೈಸೆ ದರವಿದೆ. ಆದರೆ ‘ರಿಲಯನ್ಸ್ ಡೇಟಾ' (ನೇರವಾಗಿ ನೆಟ್ವರ್ಕ್ನಿಂದ ಅಲ್ಲ) ಮೂಲಕ ಉಚಿತ ಕರೆ ಮಾಡುವ ಅವಕಾಶ ನೀಡಿರುವುದರಿಂದ, ಕರೆ ಸ್ವೀಕರಿಸುವ ಕಂಪೆನಿಗೆ ಪ್ರತಿ ಕರೆಗೆ 14 ಪೈಸೆ ನಷ್ಟವಾಗುತ್ತದೆ. ಇದು ಸರಿಯಲ್ಲ ಎಂದು 'ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್' ಅಧ್ಯಕ್ಷ ರಂಜನ್ ಮ್ಯಾಥ್ಯೂ ತಿಳಿಸಿದ್ದಾರೆ. ಸದ್ಯ ಅವರು ಪ್ರತಿ ಕರೆಗೆ 30 ಪೈಸೆಗಳ ಬೇಡಿಕೆ ಇಟ್ಟಿದ್ದಾರೆ. ಈ ಹಿಂದೆ ನೇರವಾಗಿ ಡೇಟಾದಿಂದ ಸೆಲ್ಯುಲಾರ್ ಕರೆಗಳಿಗೆ ಕನೆಕ್ಟ್ ಮಾಡುವ ಅವಕಾಶ ಇಲ್ಲದೇ ಇದ್ದುದರಿಂದ ಈ ಸಮಸ್ಯೆ ಉದ್ಭವಿಸರಲಿಲ್ಲ; ಅಥವಾ ಈಗ ಜಿಯೋ ಹಣಿಯಲು ಕಂಪೆನಿಗಳು ಬೇಕೆಂದೇ ಈ ಕಾರಣ ಮುಂದಿಡುತ್ತಿವೆ.

ಈ ಕುರಿತು ಶುಕ್ರವಾರ ಟ್ರಾಯ್, ಜಿಯೋ ಮತ್ತು ಪ್ರತಿಸ್ಪರ್ಧಿ ಐಡಿಯಾ, ವೊಡಾಫೋನ್ ಮತ್ತು ಭಾರ್ತಿ ಏರ್ಟೆಲ್ ಕಂಪೆನಿಗಳನ್ನು ವಿಚಾರಣೆಗೆ ಕರೆಸಿಕೊಂಡಿತ್ತು. ಆದರೆ ಸ್ಪಷ್ಟ ನಿರ್ಧಾರಕ್ಕೆ ಬರದ ಹಿನ್ನಲೆಯಲ್ಲಿ, ಸಮಸ್ಯೆಯನ್ನು ನೀವು ನೀವೇ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದು, ಇದಕ್ಕೆ ಕಂಪೆನಿಗಳು ಸಹಿ ಮಾಡಿವೆ.

ಇದರ ಜೊತೆಗೆ 'ಕಾಲ್ ಡ್ರಾಪ್' ಸಮಸ್ಯೆಯನ್ನೂ ಉಬಯ ಗುಂಪಿನವರು ಮಾತುಕತೆ ಮೂಲಕ ಪರಿಹರಿಸಲು ಟ್ರಾಯ್ ಸಲಹೆ ನೀಡಿದ್ದು, ಒಂದೊಮ್ಮೆ ಸಮಸ್ಯೆ ಬಗೆಹರಿಯದಿದ್ದಲ್ಲಿ, ಗ್ರಾಹಕರಿಗೆ ತೊಂದರೆಯಾದರೆ ಮಧ್ಯಪ್ರವೇಶ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ಅದು ನೀಡಿದೆ.

ಈ ವಿವಾದದ ಆಳ ಗಮನಿಸಿದರೆ ಬಹುಶಃ ಇಡೀ ರಿಲಯನ್ಸ್ ಜಿಯೋ ಭವಿಷ್ಯ ಈ ವಿಚಾರದ ಮೇಲೆ ನಿಂತಂತೆ ಭಾಸವಾಗುತ್ತಿದೆ. ಒಂದೊಮ್ಮೆ ಉಳಿದ ಕಂಪೆನಿಗಳು ಡೇಟಾ ಇಂಟರ್ ಕನೆಕ್ಟ್ ನಿರಾಕರಿಸಿದಲ್ಲಿ, ಜಿಯೋದ ಫ್ರೀ ಕಾಲ್ ಗೆ ಹೊಡೆತ ಬೀಳುವ ಎಲ್ಲಾ ಸಾಧ್ಯತೆಗಳೂ ಇವೆ.