samachara
www.samachara.com
'ಸ್ಟೀಲಿಂಗ್ ಪ್ಯಾರಡೈಸ್': ತೆರಿಗೆದಾರರ ಸ್ವರ್ಗ; ಈ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷನೇ ಆರೋಪಿ!
ಸುದ್ದಿ ಸಾಗರ

'ಸ್ಟೀಲಿಂಗ್ ಪ್ಯಾರಡೈಸ್': ತೆರಿಗೆದಾರರ ಸ್ವರ್ಗ; ಈ ದ್ವೀಪ ರಾಷ್ಟ್ರದಲ್ಲಿ ಅಧ್ಯಕ್ಷನೇ ಆರೋಪಿ!

ಅಂತರಾಷ್ಟ್ರೀಯ

ಸುದ್ದಿ ವಾಹಿನಿ 'ಅಲ್ ಜಝೀರಾ' ಬಾಯಿಗೆ ಈ ಬಾರಿ ಮಾಲ್ಡಿವ್ಸ್ ಅಧ್ಯಕ್ಷರು ಆಹಾರವಾಗಿದ್ದಾರೆ.

ಪ್ರವಾಸಿಗರ ಸ್ವರ್ಗ, ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳ ಶ್ರೀಮಂತರ ತೆರಿಗೆ ತಪ್ಪಿಸುವ 'ಟ್ಯಾಕ್ಸ್ ಹೆವನ್', ಮಾಲ್ಡೀವ್ಸ್ ದ್ವೀಪ ರಾಷ್ಟ್ರದ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮೋಸದಾಟವನ್ನು ಚಾನಲ್ ತನ್ನ ತನಿಖಾ ವರದಿಯಲ್ಲಿ ಬಯಲುಗೊಳಿಸಿದೆ.

ಪುಟ್ಟ ರಾಷ್ಟ್ರದ ಅಧ್ಯಕ್ಷರ ಸುಮಾರು ಹತ್ತು ಸಾವಿರ ಕೋಟಿ ರೂಪಾಯಿ ಮೊತ್ತದ ಅಕ್ರಮ ಸಂಪಾದನೆ, ಲಂಚ, ವಂಚನೆ, ಮತ್ತು ಕಳ್ಳತನದ ಪ್ರಕರಣವನ್ನು ‘ಸ್ಟೀಲಿಂಗ್ ಪ್ಯಾರಡೈಸ್’ ಹೆಸರಿನ ಮುಕ್ಕಾಲು ಗಂಟೆಯ ಡಾಕ್ಯುಮೆಂಟರಿಯಲ್ಲಿ ಎಳೆ ಎಳೆಯಾಗಿ ಅದು ಬಿಚ್ಚಿಟ್ಟಿದೆ.

ಮಾಲ್ಡೀವ್ಸ್ ಮಾಜಿ ಉಪಾಧ್ಯಕ್ಷ ಅಹ್ಮೆದ್ ಅದೀಬ್ ಅವರ ಸ್ಮಾರ್ಟ್ ಫೋನಿನಿಂದ ಪಡೆದ ಕೆಲವು ದಾಖಲೆಗಳು ಮತ್ತು ಇತರ ಒಂದಷ್ಟು ದಾಖಲೆಗಳ ಗುಚ್ಛವನ್ನು ಇಟ್ಟುಕೊಂಡು ಅಧ್ಯಕ್ಷರ ಭ್ರಷ್ಟಾಚಾರದ ಪ್ರಕರಣವನ್ನು ವಾಹಿನಿ ಭೇದಿಸಿದೆ. ಕತಾರ್ ಮೂಲದ ಚಾನಲಿಗೆ ಸಿಕ್ಕಿರುವ ಕೆಲವು ವಿಡೀಯೋಗಳಲ್ಲಿ, ಸ್ವತಃ ಹಣ ಸಾಗಿಸಿದವರು ಮತ್ತು ಈ ಅಕ್ರಮದಲ್ಲಿ ಪಾಲ್ಗೊಂಡವರು ತಮ್ಮ ಕೃತ್ಯದ ಸವಿವರಗಳನ್ನು ಬಾಯಿ ಬಿಟ್ಟಿದ್ದಾರೆ.

ದಕ್ಷಿಣ ಏಷ್ಯಾ ರಾಷ್ಟ್ರಗಳ ಬ್ಯಾಂಕುಗಳ ಮೂಲಕ ಕಳ್ಳಸಾಗಣೆ ಕೃತ್ಯಗಳು ನಡೆದಿವೆ ಎಂದು ಚಾನಲ್ ಹೇಳಿದೆ. ಸಿಂಗಾಪೂರ್, ಮಲೇಷ್ಯಾ ಮತ್ತು ಇಂಡೋನೇಷ್ಯಾದ ಉದ್ಯಮಿಗಳು ಹಣ ಕಳ್ಳ ಸಾಗಣೆಯಲ್ಲಿ ಕೈ ಜೋಡಿಸಿದ್ದಾರೆ. ಪ್ರತಿ ಬಾರಿ ಮಾಲ್ಡಿವ್ಸ್ಗೆ ಪ್ರಯಾಣ ಬೆಳೆಸುವಾಗಲೂ ಈ ಉದ್ಯಮಿಗಳು 100 ಮಿಲಿಯನ್ ಡಾಲರ್ (666 ಕೋಟಿ) ಹಣವನ್ನು ದೇಶದೊಳಕ್ಕೆ ಸಾಗಿಸುತ್ತಾರೆ. ಅಲ್ಲಿಂದ ಸ್ವತಃ ಮಾಲ್ಡಿವ್ಸ್ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಮನೆಗೆ ಬ್ಯಾಗುಗಳಲ್ಲಿ ತಲಾ 6. 6 ಕೋಟಿಗಳಂತೆ ಹಣ ಸಾಗಣೆಯಾಗುತ್ತದೆ. ಇದನ್ನು ಗುಪ್ತ ಕ್ಯಾಮೆರಾದ ಮುಂದೆ ಕೃತ್ಯ ನಡೆಸಿದವರೇ ಬಾಯ್ಬಿಟ್ಟಿದ್ದಾರೆ. ಬ್ಯಾಗಿನಲ್ಲಿ ಅಷ್ಟೊಂದು ಹಣ ಸಾಗಿಸಲು ಎಷ್ಟೆಲ್ಲಾ ಕಷ್ಟ ಪಟ್ಟೆ ಎಂದುದನ್ನು ರಸವತ್ತಾಗಿ ಹಣ ಸಾಗಿದಾತನೇ ವಿವರಿಸಿದ್ದಾನೆ.

ಇಡೀ ಡಾಕ್ಯುಮೆಂಟರಿಯಲ್ಲಿ ದೇಶದ ಪ್ರಥಮ ಮಹಿಳಾ ಪ್ರಜೆ, ಹಿರಿಯ ನ್ಯಾಯಾಧೀಶರು, ಹಲವಾರು ರಾಜಕಾರಣಿಗಳು ಕೊನೆಗೆ ಇಡೀ ಘಟನೆಯ ಸೂತ್ರದಾರ ಅಧ್ಯಕ್ಷ ಯಮೀನ್ ಬಂದು ಹೋಗುತ್ತಾರೆ.

ಮಾಜಿ ಉಪಾಧ್ಯಕ್ಷರ ಮೊಬೈಲ್ ಫೋನಿನ ಡಾಟಾಗಳು ನೀಡುವ ಮಾಹಿತಿಯಂತೆ, ಇಲ್ಲಿನ ಶಕ್ತಿ ಕೇಂದ್ರ ತನ್ನ ವಿರೋಧಿಗಳನ್ನು ಹತ್ತಿಕ್ಕಲು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದು ಕಾಣಿಸುತ್ತದೆ. ತನ್ನ ವಿರುದ್ಧ ಮಸಲತ್ತು ಮಾಡಿದ ಟಿವಿ ಚಾನಲ್ ಒಂದನ್ನು ಸ್ಪೋಟಿಸುವಂತೆ ಸ್ವತಃ ಉಪಾಧ್ಯಕ್ಷರೇ ಅಲ್ಲಿನ ಪೊಲೀಸ್ ಆಯುಕ್ತರಿಗೆ ನೀಡಿದ ಆದೇಶ ಮೊಬೈಲ್ ಸಂದೇಶಗಳಲ್ಲಿ ದಾಖಲಾಗಿದೆ. ಅಧ್ಯಕ್ಷರ ವಿರುದ್ಧ ತನಿಖೆ ಆರಂಭಿಸಿದ ನಿಯಾಜ್ ಇಬ್ರಾಹಿಂ ಎಂದ ಮಹಾಲೇಖಪಾಲರ ಮೇಲೆ ಸೇಡು ತೀರಿಸಲು, ಅಲ್ಲಿನ ಸರಕಾರಿ ಕಚೇರಿಗೆ ಬೆಂಕಿ ಇಡಲು ಹೇಳಿದ್ದೂ ಈ ಸಂದೇಶಗಳಲ್ಲಿವೆ. ಹೀಗೆ ಅಲ್ಲಿನ ಜನರ ವಿರುದ್ಧ ಸ್ವತಃ ಅಲ್ಲಿನ ಸರಕಾರವೇ ಗೊತ್ತಾಗದಂತೆ ಉಗ್ರವಾದವನ್ನು ಹುಟ್ಟುಹಾಕುತ್ತಿರುವುದು ತನಿಖೆಯಲ್ಲಿ ಬಯಲಾಗಿದೆ.

ಅಲ್ಲಿನ ಮಾಜಿ ಅಧ್ಯಕ್ಷ ಮೊಹಮ್ಮದ್ ನಶೀದ್ರನ್ನೇ ಜೈಲಿಗೆ ಅಟ್ಟಿದ್ದೂ ಈಗಿನ ಅಧ್ಯಕ್ಷ ಯಮೀನ್ ಎಂಬುದನ್ನು ಗಮನಿಸಬೇಕಿದೆ. ನಶೀದ್ರನ್ನು ಜೈಲಿಗಟ್ಟಲು ಹೊಸ ಕಾನೂನುಗಳನ್ನೇ ಈಗಿನ ಅಧ್ಯಕ್ಷ ಯಮೀನ್ ಜಾರಿಗೆ ತಂದಿದ್ದರು.

ಭ್ರಷ್ಟ ನ್ಯಾಯಾಂಗ:

ಮಾಲ್ಡೀವ್ಸ್ ಇವತ್ತಿನ ಪರಿಸ್ಥಿತಿ ಹೇಗಿದೆ ಅಂದರೆ, ಅಲ್ಲಿನ ನ್ಯಾಯಾಂಗವೂ ಸರಕಾರ ಹೇಳಿದಂತೆ ಕೇಳುವ ಸೂತ್ರದ ಬೊಂಬೆಯಾಗಿದೆ. ಲಂಚಕ್ಕಾಗಿ ಕೈಚಾಚುವ ಇಲ್ಲಿನ ನ್ಯಾಯಾಧೀಶರು, ತಮ್ಮನ್ನು ತಾವು ಮಾರಿಕೊಂಡು ಹಣ, ದುಬಾರಿ ಪ್ಲಾಟುಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ಅಧಿಕಾರ ಕೇಂದ್ರದಲ್ಲಿರುವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಕಾಲ ಕಾಲಕ್ಕೆ ಭೇಟಿಯಾಗಿ ಅವರಿಗೆ ಬೇಕಾದ ಕೆಲಸಗಳನ್ನು ಮಾಡಿಕೊಟ್ಟು ತಮ್ಮ ಪಾಲನ್ನು ನ್ಯಾಯಾಧೀಶರು ಜೇಬಿಗಿಳಿಸಿಕೊಳ್ಳುತ್ತಾರೆ. ಅಲ್ಲಿನ ಜಡ್ಜ್ ಒಬ್ಬರ ಸಂದೇಶದಲ್ಲಿಯೇ, ಆತ ಸೆಕ್ಸ್ ಸ್ಕಾಂಡಲ್ ಒಂದರಲ್ಲಿ ಸಿಕ್ಕಿ ಬಿದ್ದಾಗ ಹೇಗೆ ಅಧ್ಯಕ್ಷರು ಆರು ತಿಂಗಳು ಕಷ್ಟ ಪಟ್ಟು ಆತನನ್ನು ಉಳಿಸಿಕೊಂಡರು ಎಂಬ ಉಲ್ಲೇಖಗಳಿವೆ.

ನ್ಯಾಯಾಂಗದ ಅಧಃಪತನ, ಭ್ರಷ್ಟ ವ್ಯವಸ್ಥೆಯ ಸುಳಿಗೆ ಸಿಕ್ಕಿ ಮಾಲ್ಡೀವ್ಸ್ ಗಂಡಾಂತರದ ಕಾಲದಲ್ಲಿದೆ.

“ಇಲ್ಲಿನ ನ್ಯಾಯಾಂಗ ದೇಶದಲ್ಲೇ ಅತ್ಯಂತ ಭ್ರಷ್ಟ ಸಂಸ್ಥೆ,” ಎಂಬುದಾಗಿ 2008ರಿಂದ 2012ರವರಗೆ ದೇಶವನ್ನು ಆಳಿದ ಮಾಜಿ ಅಧ್ಯಕ್ಷ ನಶೀದ್ ಹೇಳುತ್ತಾರೆ. ಸದ್ಯ ಜೈಲಿನಲ್ಲಿರುವ ಇವರು, ತಮ್ಮನ್ನು ಜೈಲಿಗಟ್ಟಿದ್ದನ್ನು ದುಃಖದ ನಿರ್ಧಾರ ಎಂದು ಕರೆಯುತ್ತಾರೆ. ಮಾತ್ರವಲ್ಲ ಈ ರೀತಿಯ ರಾಜಕೀಯ ಪ್ರೇರಿತ ಬಂಧನಗಳನ್ನು ನಿರ್ದೇಶಿಸುತ್ತಿರುವವರು ಅಧ್ಯಕ್ಷ ಯಮೀನ್ ಎಂದು ನೇರ ಆರೋಪ ಮಾಡುತ್ತಾರೆ.

ಹೀಗೆ, ಒಂದು ಇಡೀ ರಾಷ್ಟ್ರದ ಒಳಗಿನ ಹುಳುಕಿನ ಮೂಲವನ್ನು 'ಅಲ್ ಜಝೀರಾ' ತನ್ನ ನ್ಯೂಸ್ ಡಾಕ್ಯುಮೆಂಟರಿಯ ಉದ್ದಕ್ಕೂ ತೆರೆದಿಡುತ್ತದೆ. ತನಿಖಾ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಹೆಸರು ಮಾಡಿರುವ 'ಅಲ್ ಜಝೀರಾ' ಸುಮಾರು 6 ತಿಂಗಳ ಕಾಲಾವಕಾಶ ಇಟ್ಟುಕೊಂಡು ಹೊರ ತಂದಿರುವ ತನಿಖಾ ವರದಿ ಇದು. ಯಾಸರ್ ಅರಾಫತ್ ಸಾವಿನ ಕುರಿತಾದ ಎರಡು ಸರಣಿಗಳ ಡಾಕ್ಯುಮೆಂಟರಿಯ ನಂತರ ಹಲವು ಮಹತ್ವದ ಇನ್ವೆಸ್ಟಿಗೇಷನ್ ಗಳನ್ನು ಚಾನಲ್ ಮಾಡಿತ್ತು. ಅದರ ಮುಂದುವರಿದ ಭಾಗವೇ ಈ ‘ಸ್ಟೀಲಿಂಗ್ ಪ್ಯಾರಡೈಸ್’.

ಒಮ್ಮೆ ನೋಡಿ. ಮಾಲ್ಡೀವ್ಸ್ ದೇಶದ ವ್ಯವಸ್ಥೆಗೂ, ಜಗತ್ತಿನ ಇತರೆ ದೇಶಗಳಿಗೂ ಇರುವ ಸಾಮ್ಯತೆಗಳೇನು ಎಂಬುದು ಢಾಳಾಗಿ ಕಾಣಿಸುತ್ತದೆ.