samachara
www.samachara.com
‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’: ಇಂದಿರಾ ಗಾಂಧಿಯಿಂದ ಮೋದಿವರೆಗೆ...!
ಸುದ್ದಿ ಸಾಗರ

‘ದಿ ಪ್ರೈಮ್ ಮಿನಿಸ್ಟರ್ಸ್ ಆಫ್ ರಿಲಯನ್ಸ್ ಇಂಡಿಯಾ’: ಇಂದಿರಾ ಗಾಂಧಿಯಿಂದ ಮೋದಿವರೆಗೆ...!

ನರೇಂದ್ರ ಮೋದಿ, ರಿಲಯನ್ಸ್ ಕಂಪನಿ ಜೊತೆಗೆ ವಿಶೇಷ ಸಂಬಂಧ ಹೊಂದಿರುವ ಮೊದಲ ಭಾರತದ ಪ್ರಧಾನಿ ಏನಲ್ಲ ಎನ್ನುತ್ತದೆ ಇತಿಹಾಸ. 

  ದಿನ ಪತ್ರಿಕೆಗಳ ಮುಖಪುಟದಲ್ಲಿ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಜಿಯೋ’ ಜಾಹೀರಾತಿನಲ್ಲಿ ಮೋದಿ ಫೋಟೋ ಅಚ್ಚಾಗಿದ್ದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಸರಕಾರದ ಅಧಿಕೃತ ಪ್ರತಿನಿಧಿಯೊಬ್ಬರ ಫೊಟೋ ಕಾರ್ಪೋರೇಟ್ ಕಂಪೆನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು ಸಹಜವಾಗಿಯೇ ಕುತೂಹಲ ಮೂಡಿಸಿದೆ. ಮೋದಿ ಸರಕಾರದ ಜೊತೆ ರಿಲಯನ್ಸ್ ಹೊಂದಿರಬಹುದಾದ ‘ವಿಶೇಷ ಸಂಬಂಧ'ವೂ ಈ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದೆ.

ಹಾಗೆ ನೋಡಿದರೆ ನರೇಂದ್ರ ಮೋದಿ, ರಿಲಯನ್ಸ್ ಕಂಪನಿ ಜೊತೆಗೆ ವಿಶೇಷ ಸಂಬಂಧ ಹೊಂದಿರುವ ಮೊದಲ ಭಾರತದ ಪ್ರಧಾನಿ ಏನಲ್ಲ ಎನ್ನುತ್ತದೆ ಇತಿಹಾಸ. ಇಂದಿರಾಗಾಂಧಿ ಹಾಗೂ ಅವರ ನಂತರ ಅಧಿಕಾರಕ್ಕೇರಿದ ಹೆಚ್ಚು ಕಡಿಮೆ ಎಲ್ಲಾ ಪ್ರಧಾನಿಗಳ ಜೊತೆಗೂ ‘ರಿಲಯನ್ಸ್ ಕುಟುಂಬ’ ಹತ್ತಿರದ ಒಡನಾಟ ಇಟ್ಟುಕೊಂಡೇ ಬಂದಿದೆ ಎಂಬುದಕ್ಕೆ ಹೇರಳ ಸಾಕ್ಷಿಗಳು ಸಿಗುತ್ತವೆ.

ಪ್ರಧಾನಿಗಳ ಜೊತೆಗಿನ ರಿಲಯನ್ಸ್ ಸಂಬಂಧ ಆರಂಭವಾಗುವುದಕ್ಕೂ ಮೊದಲು ನಮ್ಮದೇ ಮಣಿಪಾಲದ ಟಿ. ಎ. ಪೈ ಜೊತೆ ಅಂಬಾನಿ ತಂದೆ ಧೀರೂಭಾಯಿ ಅಂಬಾನಿ ಆಪ್ತರಾಗಿದ್ದರು. ರಿಲಯನ್ಸ್ ಕಂಪನಿಗೆ ಆರಂಭಿಕ ಸಾಲ ನೀಡಿದ್ದೂ ಇದೇ ಟಿ. ಎ. ಪೈ ಕುಟುಂಬದ, ಮಂಗಳೂರು ಮೂಲದ ಸಿಂಡಿಕೇಟ್ ಬ್ಯಾಂಕ್. ಮುಂದೆ ಇಂದಿರಾಗಾಂಧಿ 1969ರಲ್ಲಿ ಸಿಂಡಿಕೇಟ್ ಬ್ಯಾಂಕನ್ನು ರಾಷ್ಟ್ರೀಕರಣ ಮಾಡಿದಾಗ, ಬ್ಯಾಂಕ್ ಮುಖ್ಯಸ್ಥರಾಗಿದ್ದ ಟಿ. ಎ. ಪೈ ಅವರನ್ನು 1972ರಲ್ಲಿ ಕೇಂದ್ರ ಸಚಿವರನ್ನಾಗಿ ನೇಮಕ ಮಾಡಿದರು. 1973ರಲ್ಲಿ ಇವರಿಗೆ ಕೈಗಾರಿಕಾ ಮಂತ್ರಿ ಹುದ್ದೆ ನೀಡುತ್ತಿದ್ದಂತೆ ಧೀರೂಭಾಯಿ ಆಪ್ತ, ಆಯಕಟ್ಟಿ ಜಾಗದಲ್ಲಿ ಬಂದು ಕುಳಿತಂತಾಗಿತ್ತು. ಹೀಗೆ ಸರಕಾರವೊಂದರ ಜೊತೆ, ಇವತ್ತು ದೇಶದ ಬಹುದೊಡ್ಡ ಉದ್ಯಮ ಸಂಸ್ಥೆ ರಿಲಯನ್ಸ್ ಕಂಪನಿಯ ಆತ್ಮೀಯ ಸಂಬಂಧ ಆರಂಭವಾಯಿತು.

ಮುಂದೆ ತುರ್ತು ಪರಿಸ್ಥಿತಿ ಜಾರಿಯಾಗಿ, 1977ರಲ್ಲಿ ಜನತಾ ಸರಕಾರ ಅಧಿಕಾರಕ್ಕೆ ಬಂದಾಗ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿ ಜೊತೆಗೆ ಧೀರೂಭಾಯಿ ಅಂಬಾನಿಗೆ ನೇರ ಸಂಬಂಧಗಳಿರಲಿಲ್ಲ. ಆದರೆ ಸರಕಾರದಲ್ಲಿ ಪ್ರಭಾವಿಯಾಗಿದ್ದ ಕಾಂತಿಲಾಲ್ ದೇಸಾಯಿ ಕಡೆಯಿಂದ ರಿಯಲನ್ಸ್ ಸಹಾಯ ಪಡೆದುಕೊಂಡಿತ್ತು. ಅವರು ‘ಓವರ್’ ಸಹಾಯ ಮಾಡಲು ಹೋಗಿ ವಿವಾದ ಮಾಡಿಕೊಂಡಾಗ ಧೀರೂಭಾಯಿಗೆ ಸಾಕೆನಿಸಿತು. ಇಂದಿರಾ ಗಾಂಧಿ ಜೊತೆ ಸೇರಿ ಚರಣ್ ಸಿಂಗ್ಗೆ ಬೆಂಬಲ ನೀಡಿದರು. ಸಿಂಗ್ ಎತ್ತಿ ಕಟ್ಟಿ ಜನತಾ ಪರಿವಾರ ಉರುಳಿಸಿದರು. ಅವತ್ತು ಬಂಡಾಯ ಎದ್ದ ಎಂಪಿಗಳಿಗೆ, ಇಂದಿರಾ ಗಾಂಧಿ ಪರವಾಗಿ ಮುಂಬೈ ಉದ್ಯಮ ದೊರೆ ಅಂಬಾನಿ, ಕಾಳಹಣವನ್ನು ಹರಿಸಿದ್ದರು ಎಂಬುದು ಸುದ್ದಿ.

ಮುಂದೆ 1979ರಲ್ಲಿ ಜನತಾ ಪರಿವಾರದಿಂದ ಸಿಡಿದೆದ್ದ ಚರಣ್ ಸಿಂಗ್ ಗುಂಪು ಇಂದಿರಾ ಗಾಂಧಿ ಬೆಂಬಲದೊಂದಿಗೆ ಸರಕಾರ ರಚಿಸಿತು; ಚರಣ್ ಸಿಂಗ್ ಪ್ರಧಾನಿಯಾದರು. ಇದರ ಹಿಂದೆ ಇದ್ದವರು ಅಂಬಾನಿ ಎಂಬುದು ಬಹಿರಂಗವಾಗಿತ್ತು. ಇದಾದ ನಂತರ 1980ರಲ್ಲಿ ಮತ್ತೆ ಚುನಾವಣೆ ನಡೆದಾಗ ಇಂದಿರಾ ಗಾಂಧಿ ಮತ್ತೆ ಅಧಿಕಾರಕ್ಕೆ ಬಂದರು. ಅವತ್ತು ದೆಹಲಿಯ ಅಶೋಕ ಹೊಟೇಲಿನಲ್ಲಿ ಹೊಸದಾಗಿ ಚುನಾಯಿತರಾದ ಸಂಸತ್ ಸದಸ್ಯರಿಗೆ ಸ್ವಾಗತ ಕಾರ್ಯಕ್ರಮ ಆಯೋಜನೆಯಾಗಿತ್ತು. ಅವತ್ತು ಶ್ರೀಮತಿ ಇಂದಿರಾ ಗಾಂಧಿ ಪಕ್ಕದಲ್ಲಿ ಕುಳಿತಿದ್ದ ಧೀರೂಭಾಯಿ ಅಂಬಾನಿ ಎಲ್ಲರಿಗೂ ಸ್ವಾಗತ ಕೋರಿದ್ದರು.

ಈ ಬಾರಿ ಅಂಬಾನಿಗೆ ಬೇಕಾದವರೆಲ್ಲರೂ ಆಯಕಟ್ಟಿನ ಜಾಗದಲ್ಲಿದ್ದರು.  ಅವತ್ತಿಗೆ ಇದೇ ಇಂದಿರಾ ಗಾಂಧಿ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದವರು ಇವತ್ತಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ. ಪ್ರಣಬ್ ಮುಖರ್ಜಿ ಹೊಸ ಹೊಸ ಪಾಲಿಸಿಗಳನ್ನು ಘೋಷಣೆ ಮಾಡುತ್ತಿದ್ದರೆ, ಇದೆಲ್ಲಾ ಅಂಬಾನಿಗಾಗಿಯೇ ಮಾಡಿದ ಕಾನೂನುಗಳು ಎಂಬ ಆರೋಪಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿತ್ತು; ಕಾನೂನುಗಳೂ ಅಂಬಾನಿಗೆ ಪೂರಕವಾಗಿಯೇ ರಚನೆಯಾಗುತ್ತಿದ್ದವು. ಹೆಡ್ಲೈನ್ ನೀಡುವುದರಲ್ಲಿ ಜನಪ್ರಿಯವಾಗಿರುವ ಕೊಲ್ಕೊತ್ತಾ ಮೂಲದ ‘ದಿ ಟೆಲಿಗ್ರಾಫ್’ Pranab Mukherjee: Minister of Finance or Reliance? ಎನ್ನುವ ತಲೆಬರಹದಲ್ಲಿ ಸುದ್ದಿ ಪ್ರಕಟಿಸುವ ಮೂಲಕ, ಉದ್ಯಮಿ ಮತ್ತು ರಾಜಕಾರಣದ ನಡುವಿನ ಅನೈತಿಕ ಸಂಬಂಧವನ್ನು ಟೀಕಿಸಿತ್ತು.

ಕಾಂಗ್ರೆಸ್ ಪಕ್ಷದ ಜೊತೆಗಿನ ರಿಲಯನ್ಸ್ ಸಂಬಂಧ ಮಿತಿ ಮೀರಿದಾಗ ಬಿಜೆಪಿಯ ಜಸ್ವಂತ್ ಸಿಂಗ್, ಕಮ್ಯೂನಿಸ್ಟ್ ಪಾರ್ಟಿಯ ಸೋಮನಾಥ್ ಚಟರ್ಜಿ, ಜನತಾ ಪಕ್ಷದ ಮಧು ದಂಡಾವತೆ ಬಹಿರಂಗವಾಗಿ ಕೆಂಡಕಾರಲು ಆರಂಭಿಸಿದ್ದರು. ಇಂದಿರಾಗಾಂಧಿ 1984ರಲ್ಲಿ ಕೊಲೆಯಾಗುವ ಹೊತ್ತಿಗೆ 1979ರಲ್ಲಿ ಇಂಡಿಯಾದ ಟಾಪ್ 50 ಕಂಪನಿಗಳ ಸಾಲಿನಿಂದ, ಟಾಪ್ 5ಕ್ಕೆ ರಿಲಯನ್ಸ್ ಬಂದು ಕುಳಿತಿತ್ತು. 1979ರಿಂದ 1984ರ ಐದು ವರ್ಷಗಳ ಅವಧಿ ರಿಲಯನ್ಸ್ ಪಾಲಿನ ಸುವರ್ಣ ಯುಗವಾಗಿತ್ತು.

ಮುಂದೆ ರಾಜೀವ್ ಗಾಂಧಿ ಸಮಯದಲ್ಲಿ ಮಾತ್ರ ರಿಲಯನ್ಸ್ ಕಷ್ಟದ ದಿನಗಳನ್ನು ಕಾಣಬೇಕಾಯಿತು. ಸರಕಾರವನ್ನು ಸ್ವಚ್ಛವಾಗಿಡಬೇಕು ಎಂಬ ರಾಜೀವ್ ಸೂತ್ರ ಹಲವು ಕಂಪೆನಿಗಳಿಗೆ ಕುತ್ತು ತಂದರೂ ಧೀರೂಭಾಯಿ ಮಾತ್ರ ಹಾಗೂ ಹೀಗೂ ಉಳಿದುಕೊಂಡು ಬಿಟ್ಟಿದ್ದರು. ಪ್ರಧಾನಿ ಜೊತೆಗೆ ಸಂಬಂಧ ಇಲ್ಲದಿದ್ದರೂ, ಉಳಿದವರ ಜೊತೆಗಿದ್ದ ಉತ್ತಮ ಸಂಬಂಧ ಅವರನ್ನು ಬದುಕಿಸಿತ್ತು. ಆದರೆ ಯಾವಾಗ ವಿ. ಪಿ. ಸಿಂಗ್ ಅಧಿಕಾರಕ್ಕೆ ಬಂದರೋ, ಆಗ ನಿಜವಾಗಿಯೂ ಸಮಸ್ಯೆ ಆರಂಭವಾಯಿತು. ಆದರೆ ಒಂದೇ ವರ್ಷದಲ್ಲಿ ಸರಕಾರ ಬದಲಾಯಿತಲ್ಲಾ, ಧೀರೂಭಾಯಿ ನಿಟ್ಟಿಸಿರು ಬಿಟ್ಟರು. ಇನ್ನು ಚಂದ್ರಶೇಖರ್ ಹಾಗೆ ಬಂದು ಹೀಗೆ ಹೋಗಿದ್ದು ಯಾರಿಗೂ ಗೊತ್ತಾಗಲಿಲ್ಲ. ಪ್ರಧಾನ ಮಂತ್ರಿಗಳಾಚೆಗೆ ಸಚಿವರು ಮತ್ತು ಅಧಿಕಾರಿಗಳ ವಲಯದಲ್ಲಿ ಹೊಂದಿದ್ದ ಆಳದ ಸಂಬಂಧಗಳ ಮುಂದೆ ಪ್ರಧಾನಿಗಳು ಬದಲಾಗಿದ್ದು ರಿಲಯನ್ಸ್ ಪಾಲಿಗೆ ಮುಖ್ಯವಾಗಲಿಲ್ಲ. ಮುಂದೆ ಬಂದವರು ಜಾಗತೀಕರಣದ ಹರಿಕಾರ ಪಿ.ವಿ. ನರಸಿಂಹ ರಾವ್.

ರಾಜೀವ್ ಮತ್ತು ಇಂದಿರಾ ಕಾಲದಿಂದಲೇ ಕಾಂಗ್ರೆಸ್ ಒಳಗಡೆ ಗೆಳೆಯರನ್ನೆಲ್ಲಾ ಸಾಕುತ್ತಾ ಬಂದಿದ್ದ ಧೀರೂಭಾಯಿಗೆ ಈಗ ನಿಜವಾದ ಸಮಸ್ಯೆ ಎದುರಾಯಿತು. ಏಕೆಂದರೆ ಆರ್ಥಿಕ ಸಚಿವ ಮನಮೋಹನ್ ಸಿಂಗ್ ಮತ್ತು ಪಿ.ವಿ ನರಸಿಂಹರಾವ್ ಇಬ್ಬರೂ ತೀರಾ ಜಾಗರೂಕರಾಗಿದ್ದರು. ಆದರೆ ‘ಲೈಸನ್ಸ್ ರಾಜ್’ ಪದ್ಧತಿಯ ನಿರ್ಮೂಲನೆ ಮತ್ತು ನವ ವಸಾಹತುಶಾಹಿ ಪಾಲಿಸಿಗಳನ್ನು ಸರಕಾರ ಜಾರಿಗೆ ತರುತ್ತಿದ್ದಂತೆ, ಅದರ ಲಾಭಗಳನ್ನು ದೈತ್ಯ ಕಂಪೆನಿಯಾಗಿ ಬೆಳೆದಿದ್ದ ರಿಲಯನ್ಸ್ ಬಾಚಿ ಬಾಚಿ ಪಡೆದುಕೊಂಡಿತು. ನರಸಿಂಹರಾವ್ ಅವಧಿ ಮುಗಿದಾಗ ರಿಲಯನ್ಸ್ ಎಗ್ಗಿಲ್ಲದಂತೆ ಬೆಳೆದು ನಿಂತಿತ್ತು.

ಮುಂದೆ 1996ರಲ್ಲಿ ದೇವೇಗೌಡರು ಪ್ರಧಾನಿಯಾದರು. ಆಗ ಮತ್ತೆ ಧೀರೂಭಾಯಿ ಅಂಬಾನಿ ದೆಹಲಿ ವಿಮಾನ ಹತ್ತಿದರು. ಇವರಿಬ್ಬರ ಸ್ನೇಹ ಎಷ್ಟು ಗಾಢವಾಗಿತ್ತೆಂದರೆ ಅವತ್ತಿಗೆ ದೇವೇಗೌಡರು ಕರ್ನಾಟಕ ಮುಖ್ಯಮಂತ್ರಿಯಾಗಿದ್ದವರು ನೇರವಾಗಿ ಪ್ರಧಾನಿಯಾಗಿದ್ದ ಸಮಯ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಬೆಂಗಳೂರಿಗೆ ಬರಬೇಕಾಗಿದ್ದ ದೇವೇಗೌಡರಿಗೆ ತನ್ನ ಖಾಸಗಿ ವಿಮಾನವನ್ನೇ ನೀಡಿದ್ದರು ಧೀರೂಭಾಯಿ ಅಂಬಾನಿ. ಅದಾದ ನಂತರ ಅಟಲ್ ಬಿಹಾರಿ ವಾಜಪೇಯ 1998ರಲ್ಲಿ ಅಧಿಕಾರಕ್ಕೆ ಬಂದರು. ಆಗ ಜಸ್ವಂತ್ ಸಿಂಗ್ ತಿರುಗಿ ಬಿದ್ದ ಪರಿಣಾಮ ರಿಲಯನ್ಸ್ ಮೇಲೆ 29 ಕೇಸುಗಳು ದಾಖಲಾದವು. ಆದರೆ ಅಷ್ಟೊತ್ತಿಗಾಗಲೇ ಧೀರೂಭಾಯಿಗೆ ವಯಸ್ಸಾಗಿತ್ತು. ಅನಿಲ್ ಮತ್ತು ಮುಖೇಶ್ ಅಂಬಾನಿ ಇನ್ನೂ ಕಂಪೆನಿಗಳ ಮೇಲೆ ಪೂರ್ಣ ಹಿಡಿತ ಸಾಧಿಸಿರಲಿಲ್ಲ. ಜೊತೆಗೆ 2002ರಲ್ಲಿ ಧೀರೂಭಾಯಿ ಸಾವನ್ನಪ್ಪಿದ್ದರಿಂದ ಅಟಲ್ ಸರಕಾರದುದ್ದಕ್ಕೂ ರಿಲಯನ್ಸ್ ಉಪಸ್ಥಿತಿ ಢಾಳಾಗಿಯೇನೂ ಕಾಣಿಸುವುದಿಲ್ಲ.


       ಅವತ್ತಿನ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿಯನ್ನು ಭೇಟಿಯಾಗಿ ಹೊರ ಬರುತ್ತಿರುವ ಮುಖೇಶ್ ಅಂಬಾನಿ (ಚಿತ್ರ: ಡೆಕ್ಕನ್ ಕ್ರಾನಿಕಲ್)
ಅವತ್ತಿನ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿಯನ್ನು ಭೇಟಿಯಾಗಿ ಹೊರ ಬರುತ್ತಿರುವ ಮುಖೇಶ್ ಅಂಬಾನಿ (ಚಿತ್ರ: ಡೆಕ್ಕನ್ ಕ್ರಾನಿಕಲ್)

ಮತ್ತೆ ರಿಲಯನ್ಸ್ ಕೇಂದ್ರ ಸರಕಾರದ ಮಟ್ಟದಲ್ಲ ಮುಖ್ಯ ಭೂಮಿಕೆಗೆ ಬಂದಿದ್ದು 2004ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾದ ಬಳಿಕ. ಈ ಸಂದರ್ಭ ಪೆಟ್ರೋಲಿಯಂ ಮಂತ್ರಿ ವೀರಪ್ಪ ಮೊಯ್ಲಿ ಹಾಗೂ ಹಣಕಾಸು ಸಚಿವ ಪಿ. ಚಿದಂಬರಂ ಜೊತೆಗಿನ ಮುಖೇಶ್ ಅಂಬಾನಿಯ ಗೆಳೆತನಗಳು, ಉದ್ಯಮದಾಚೆಗಿನ ಸಂಬಂಧ ಚರ್ಚೆಗೆ ಗ್ರಾಸವಾಗಿತ್ತು. ಗ್ಯಾಸ್ ದರ ಏರಿಕೆ ವಿಚಾರದಲ್ಲಿ ರಿಲಯನ್ಸ್ ಕಂಪೆನಿಗೆ ಸಹಾಯ ಮಾಡಿದ್ದಾರೆ ಎಂಬ ಆರೋಪದಲ್ಲಿ 2014ರಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಎಎಪಿ ಸರಕಾರದ ಅವಧಿಯಲ್ಲಿ ಮುಖೇಶ್ ಅಂಬಾನಿ, ಅವತ್ತಿನ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ, ಮಾಜಿ ಸಚಿವ ಮುರಳಿ ದೆವೋರಾ, ಹೈಡ್ರೋಕಾರ್ಬನ್ ಡಿಜಿ ವಿ.ಕೆ ಸಿಬಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಇನ್ನು ಮಹರಾಷ್ಟ್ರ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್, ಗುಜರಾತಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯ ಜೊತೆಗೂ ದೇಶದ ನಂಬರ್ ವನ್ ಸಿರಿವಂತ ಮುಖೇಶ್ ಆಪ್ತ ಒಡನಾಟ ಇಟ್ಟುಕೊಂಡಿದ್ದರು.

ಹೀಗೆ ದೇಶದ ನಂಬರ್ ವನ್ ಕಂಪೆನಿಯ ಸಂಬಂಧ ದೆಹಲಿ ಅಧಿಕಾರ ಕೇಂದ್ರದ ಸುತ್ತ ಕಳೆದ 5 ದಶಕಗಳಿಂದ ನಡೆದು ಬಂದಿದೆ. ನರೇಂದ್ರ ಮೋದಿ ಕಂಪನಿ ಪಾಲಿಗೆ ಇನ್ನೊಬ್ಬ ಪ್ರಧಾನಿ ಅಷ್ಟೆ. ದೆಹಲಿ ದರ್ಬಾರ್ ನಲ್ಲಿ ಕುಳಿತ ವ್ಯಕ್ತಿ ಬದಲಾದರೂ ರಿಲಯನ್ಸ್ ಸಂಬಂಧ ಮಾತ್ರ ಬದಲಾಗುವುದಿಲ್ಲ; ಹಣಕ್ಕೆ, ಪಕ್ಷ ವ್ಯಕ್ತಿ ಸಿದ್ಧಾಂತಗಳ ನಡುವೆ ವ್ಯತ್ಯಾಸ ಕಾಣಿಸುವುದಿಲ್ಲ.