samachara
www.samachara.com
ಆದಾಯ ನಮಗಿರಲಿ; ಸೇವೆ ಖಾಸಗಿಯವರು ನೀಡಲಿ: ಆರೋಗ್ಯ ಸೇವೆಯಲ್ಲಿ ಏನಿದು 'ಜನ ವಿರೋಧಿ' ಧೋರಣೆ?
ಸುದ್ದಿ ಸಾಗರ

ಆದಾಯ ನಮಗಿರಲಿ; ಸೇವೆ ಖಾಸಗಿಯವರು ನೀಡಲಿ: ಆರೋಗ್ಯ ಸೇವೆಯಲ್ಲಿ ಏನಿದು 'ಜನ ವಿರೋಧಿ' ಧೋರಣೆ?

ಚಿಕಿತ್ಸೆ

ವೆಚ್ಚವನ್ನು ಭರಿಸಲಾಗದ ಬಡ ಕುಟುಂಬ ಆಸ್ಪತ್ರೆಯಿಂದ ಹೊರಕ್ಕೆ, ಪತ್ನಿ ಶವವನ್ನು ಸಾಗಿಸಲು ಹಣವಿಲ್ಲದೆ ಹೆಗಲ ಮೇಲೆ ಹೊತ್ತ ಮಾಂಜಿ, ಬಡವರಾದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದೊರೆಯದ ಚಿಕಿತ್ಸೆ...

ಹೀಗೆ ಇವತ್ತು ಆರೋಗ್ಯ ಸೇವೆಗೆ ಸಂಬಂಧಿಸಿದಂತೆ ಒಂದಿಲ್ಲೊಂದು ವರದಿಗಳು ರಾಜ್ಯವೂ ಸೇರಿದಂತೆ ದೇಶದ ಮೂಲೆಮೂಲೆಗಳಿಂದ ಕೇಳಿ ಬರುತ್ತಲೇ ಇರುತ್ತವೆ. ಇದಕ್ಕೆ ಪ್ರಮುಖ ಕಾರಣ, ಆರೋಗ್ಯ ಸೇವೆಯಿಂದ ಸರಕಾರದ ಒಂದೊಂದೆ ಹೆಜ್ಜೆಯನ್ನು ಹಿಂದಿಡುತ್ತಿರುವುದು, ಹೆಸರಿಗೆ ಇರುವ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಯೋಜನೆ ಅಡಿ ಸರಿಯಾದ ಚಿಕಿತ್ಸೆಗಳು ದೊರೆಯದೇ ಇರುವುದು. ಹೀಗಾರುವಾಗಲೇ, ಆಸ್ಪತ್ರೆಗಳ ನಿರ್ವಹಣೆಯನ್ನಷ್ಟೇ ಖಾಸಗಿಯವರಿಗೆ ಬಿಟ್ಟುಕೊಡುತ್ತಿದ್ದ ರಾಜ್ಯ ಸರಕಾರ, ಇದೀಗ ಪೂರ್ತಿ ಆಸ್ಪತ್ರೆಯನ್ನೇ ಬಿಟ್ಟುಕೊಡುವ ತೀರ್ಮಾನಕ್ಕೆ ಮುಂದಾಗಿದೆ. ಉಡುಪಿ ಜಿಲ್ಲಾ ಕೇಂದ್ರದಲ್ಲಿ ಯಾವುದೇ ಸರಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಮಹಾವಿದ್ಯಾಲಯಗಳಿಲ್ಲ ಎಂಬ ಕಾರಣ ಮುಂದಿಟ್ಟು ಖಾಸಗಿಯವರಿಗೆ ನೀಡಲು ಸಿದ್ಧತೆ ನಡೆದಿದೆ.

ಈ ಹಿಂದೆ ಹಲವು ಆಸ್ಪತ್ರೆಗಳನ್ನು ಸರಕಾರೇತರ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ನೀಡಿ ಅಧ್ವಾನಗಳು ಸೃಷ್ಟಿಯಾದ ಇತಿಹಾಸವಿರುವುದರಿಂದ ಸರಕಾರದ ಈ ನಿರ್ಧಾರದ ವಿರುದ್ಧ ಟೀಕೆಗಳು ಕೇಳಿ ಬಂದಿವೆ.

ಉಡುಪಿಯಲ್ಲಿ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಪಕ್ಕದಲ್ಲಿರುವ ಮಣಿಪಾಲ, ವೈದ್ಯಕೀಯ ಕ್ಷೇತ್ರದಲ್ಲಿ ಹೆಸರುವಾಸಿ. ಹೀಗಿದ್ದೂ ಕೃಷ್ಣನ ನಾಡಲ್ಲಿ ‘ಸರಕಾರಿ’ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಾಗಲೀ, ವೈದ್ಯಕೀಯ ಮಹಾವಿದ್ಯಾಲಯಗಳಿಲ್ಲ. ಈ ಕಾರಣ ನೀಡಿ, ಖಾಸಗಿಯವರಿಗೆ ಈಗಿರುವ ಸರಕಾರಿ ಜಿಲ್ಲಾಸ್ಪತ್ರೆ ಜಾಗದಲ್ಲೇ ಹೊಸ ಆಸ್ಪತ್ರೆ ನಿರ್ಮಿಸಿ, ನಿರ್ವಹಣೆಗೆ ಅವಕಾಶ ಮಾಡಿಕೊಡಲು ಇಲಾಖೆ ಮುಂದಾಗಿದೆ.

ಕರಾವಳಿ ಮೂಲದ ಉದ್ಯಮಿ, ಬಿ. ಆರ್. ಎಸ್. ವೆಂಚರ್ಸ್ ಅಧ್ಯಕ್ಷ ಬಿ. ಆರ್. ಶೆಟ್ಟಿ ಈ ಆಸ್ಪತ್ರೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಈಗಿರುವ ಸರಕಾರಿ ಜಿಲ್ಲಾಸ್ಪತ್ರೆ ಜಾಗದಲ್ಲಿ ದಿವಂಗತ ಶಂಭುಶೆಟ್ಟಿ ಚಾರಿಟೇಬಲ್ ಅಥವಾ ಅವರಿಗಿಚ್ಛಿಸಿದ ಹೆಸರಿನಲ್ಲಿ 200 ಬೆಡ್ಡುಗಳ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, 400 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಸೌಲಭ್ಯಗಳನ್ನು ಒಳಗೊಂಡ ಕೇಂದ್ರವನ್ನು BOOT (Build own operate and transfer) ಆಧಾರದಲ್ಲಿ ನಿರ್ಮಿಸಿ, ನಿರ್ವಹಣೆ ಮಾಡುವ ಯೋಜನೆಯನ್ನು ಅವರು ಸರಕಾರದ ಮುಂದಿಟ್ಟಿದ್ದರು. ಈಗಿರುವ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೆಡವಿದ 15 ತಿಂಗಳ ಒಳಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು 24 ತಿಂಗಳ ಒಳಗಾಗಿ ಸಮುದಾಯ ಆರೋಗ್ಯ ಸೌಲಭ್ಯಗಳನ್ನು ಒಳಗೊಂಡ ಕೇಂದ್ರವನ್ನು ನಿರ್ಮಿಸುವುದಾಗಿ ಉದ್ಯಮಿ ಶೆಟ್ಟಿ, ತಿಳಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದಾಖಲೆಗಳು ಹೇಳುತ್ತಿವೆ. ಇದಕ್ಕಾಗಿ ಉಡುಪಿ ತಾಲ್ಲೂಕು ಮೂಡನಿಡುಂಬೂರು ಗ್ರಾಮದ ಕೆ. ಎಂ. ಮಾರ್ಗದಲ್ಲಿರುವ ಇಲಾಖೆಗೆ ಸೇರಿದ 3 ನಿವೇಶನಗಳ ಜಾಗವನ್ನು ಬಿ. ಆರ್. ಶೆಟ್ಟಿ 60 ವರ್ಷಗಳ ಗುತ್ತಿಗೆಗೆ ಕೇಳಿದ್ದಾರೆ.

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಿ ನಿರ್ವಹಣೆ ಮಾಡಲು ಇಲಾಖೆಗೆ ಹಣಕಾಸಿನ ಕೊರತೆ ಇರುವುದರಿಂದ ಈ ಯೋಜನೆಗೆ ಮುಂದಾಗಿದ್ದೇವೆ. ಈ ಆಸ್ಪತ್ರೆಯಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಕನಿಷ್ಠ ದರವನ್ನು ಅವರಿಂದಲೇ ನಿಗದಿ ಪಡಿಸಲಾಗುತ್ತದೆ. ಪ್ರಯೋಗ ಶಾಲೆ, ವೈದ್ಯರ ಖರ್ಚು, ಮೂಲಭೂತ ಖರ್ಚುಗಳಲ್ಲಿ ರಿಯಾಯಿತಿ ನೀಡಲು ಒಪ್ಪಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ದುಬಾರಿ ಖರ್ಚನ್ನು ಭರಿಸಲು ಅವಕಾಶವಿಲ್ಲ ಎಂದು ಇಲಾಖೆ ದಾಖಲೆಗಳು ಹೇಳುತ್ತಿವೆ.

ಈ ಯೋಜನೆಗೆ ಸಚಿವ ಸಂಪುಟದ ಅನುಮತಿ ಬೇಕಾಗಿರುವುದರಿಂದ ಅನುಮೋದನೆಗಾಗಿ ಕಳಿಸಿಕೊಡಲಾಗಿದೆ. ಅದಕ್ಕೂ ಮೊದಲು ಕರಡು ಮಸೂದೆಗೆ ಇಲಾಖೆ ಒಪ್ಪಿಗೆ ನೀಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಸಹಿಯನ್ನೂ ಹಾಕಿದ್ದಾರೆ.  ಆರ್ಥಿಕ ಇಲಾಖೆಯೂ ಇದಕ್ಕೆ ಒಪ್ಪಿಗೆ ಸೂಚಿಸಿದೆ.

ಇಷ್ಟರವರೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತಿತ್ತು. ಆದರೆ ಇಲ್ಲಿ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆಗಾಗಿ ಕನಿಷ್ಠ ದರ ಹಾಗೂ ಉಳಿದ ವೆಚ್ಚಗಳಲ್ಲಿ ರಿಯಾಯಿತಿ ಎಂದು ಮಾತ್ರ ಹೇಳಲಾಗಿದ್ದು, ದರಗಳ ಬಗ್ಗೆ ಸ್ಪಷ್ಟವಾದ ಉಲ್ಲೇಖಗಳಿಲ್ಲ ಎಂದು ಟೀಕೆಗಳು ಕೇಳಿ ಬಂದಿವೆ.

ಹಾಗಂತ ಖಾಸಗಿಯವರಿಗೆ ಆಸ್ಪತ್ರೆಗಳನ್ನು ಹಸ್ತಾಂತರಿಸುವುದು ಇದೇ ಮೊದಲೇನೂ ಅಲ್ಲ. ಈ ಹಿಂದೆಯೂ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‍ಸಿ) ಗಳನ್ನು ಮಾತ್ರವಲ್ಲದೇ, ಜಿಲ್ಲಾ ಮಟ್ಟದಲ್ಲಿದ್ದ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನೂ ಖಾಸಗಿಯವರಿಗೆ ವಹಿಸಲಾಗಿತ್ತು. ಎನ್‍ಜಿಓಗಳಿಗೆ ರಾಜ್ಯದ ವಿವಿಧ ವಿಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ‘ಆರೋಗ್ಯ ಬಂಧು’ ಯೋಜನೆಯಡಿ ವಹಿಸಿಕೊಡಲಾಗಿತ್ತು. ಆದರೆ, “ಅಂತಿಮವಾಗಿ ಸಮೀಕ್ಷೆ ನಡೆದಾಗ ಹೆಚ್ಚಿನ ಅಂಶಗಳಲ್ಲಿ ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸರಕಾರಿ ಕೇಂದ್ರಗಳಿಗಿಂತ ಯಾವ ರೀತಿಯಲ್ಲೂ ಉತ್ತಮವಾಗಿ ಇರಲಿಲ್ಲ. ಕೆಲವು ಅಂಶಗಳಲ್ಲಿ ಇನ್ನೂ ಕಳಪೆಯಾಗಿದ್ದವು. ಸದರಿ ಎನ್‍ಜಿಓ ಯಾರೇ ಬಂದರೂ ತೋರಿಸಲು ಒಂದು ‘ಮಾದರಿ ಆಸ್ಪತ್ರೆ’ಯನ್ನು ಚೆನ್ನಾಗಿ ನಡೆಸುತ್ತಾ, ಉಳಿದವನ್ನು ಕಳಪೆಯಾಗಿ ನಡೆಸುತ್ತಿತ್ತು. ಇವೆಲ್ಲಕ್ಕೂ ಸರ್ಕಾರದ ಹಣ ಮತ್ತು ಮೂಲಭೂತ ಸೌಕರ್ಯಗಳು ಬಳಕೆಯಾಗುತ್ತಿತ್ತು,” ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಡಾ. ವಾಸು.

ಹಿಂದೊಮ್ಮೆ ಬೆಂಗಳೂರಿನಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರದ ಆಸ್ಪತ್ರೆಯನ್ನು ಸರಕಾರೇತರ ಸಂಸ್ಥೆಯೊಂದಕ್ಕೆ ನಿರ್ವಹಣೆಗೆ ನೀಡಿ, ಸಾಲು ಸಾಲು ಹೆಣಗಳು ಬಿದ್ದುದನ್ನು ಅವರು ಪ್ರಸ್ತಾಪಿಸುತ್ತಾರೆ.

ಪರಿಸ್ಥಿತಿ ಹೀಗಿದ್ದಾಗ ಸರಕಾರ ನಂತರ ‘ಆರೋಗ್ಯ ಬಂಧು’ ಯೋಜನೆಯನ್ನೇ ಹಿಂತೆಗೆದುಕೊಂಡಿತ್ತು. ‘ಪಿಎಚ್‍ಸಿ’ಗಳನ್ನು ಕಳಪೆಯಾಗಿ ನಡೆಸುತ್ತಿದ್ದ ಖಾಸಗಿ ಸೇವಾ ಕೇಂದ್ರಗಳು ಹೈಕೋರ್ಟಿಗೆ ಹೋದರೂ, ಕೋರ್ಟ್ ಅದಕ್ಕೆ ತಡೆ ನೀಡಿರಲಿಲ್ಲ ಎಂಬುದು ಗಮನಾರ್ಹ. “ಈಗ ಮತ್ತೊಂದು ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಲು ಹೊರಟಿರುವುದು ಏತಕ್ಕಾಗಿ? ರಾಯಚೂರಿನ ಒಪೆಕ್ ಆಸ್ಪತ್ರೆಯನ್ನು ದೇಶದ ಅತೀ ದೊಡ್ಡ ಕಾರ್ಪೊರೇಟ್ ಶೈಲಿಯ ವೈದ್ಯ ಸಂಸ್ಥೆಗಳಲ್ಲೊಂದಾದ ಅಪೊಲೋದವರಿಗೇ ವಹಿಸಿಕೊಡಲಾಗಿತ್ತು. ಅವರು ಅದನ್ನು ಸರಕಾರಿ ಜಿಲ್ಲಾಸ್ಪತ್ರೆಗಿಂತ ಕಳಪೆಯಾಗಿ ನಿರ್ವಹಿಸಿದರು. ಮಾತ್ರವಲ್ಲ ಇರುವ ವ್ಯವಸ್ಥೆಯನ್ನೂ ಕೆಡಿಸಿದರು. ಇಡೀ ರಾಯಚೂರು ಜಿಲ್ಲೆಯ ಜನರಷ್ಟೇ ಅಲ್ಲದೇ, ಸರ್ಕಾರಿ ಕಡತಗಳೂ ಇದನ್ನು ಸ್ಪಷ್ಟಪಡಿಸುತ್ತವೆ. ಖಾಸಗಿಯವರ ಸಾಮರ್ಥ್ಯ ಈ ರೀತಿ ಪದೇ ಪದೇ ಸಾಬೀತಾದ ನಂತರವೂ ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆಯನ್ನು ವಹಿಸುವ ಉಮೇದು ನಮ್ಮ ಆಳುವವರಲ್ಲಿ ಏಕಿದೆ?,” ಎಂದು ಪ್ರಶ್ನೆ ಮಾಡುತ್ತಾರೆ ವಾಸು.

ಉಡುಪಿಯ ಆಸ್ಪತ್ರೆಯನ್ನೇ ಉದ್ಯಮಿ ನಿರ್ಮಿಸುವುದರಿಂದ ಆತನಿಗೆ ನಗರದ ಕೇಂದ್ರ ಭಾಗದಲ್ಲಿ ಜಾಗ ಸಿಗುತ್ತದೆ. ಮಾತ್ರವಲ್ಲ ಸರಕಾರಿ ಆಸ್ಪತ್ರೆಯಿಂದ ಶೇಕಡಾ 50 ರೆಫರೆನ್ಸ್ ಸಿಕ್ಕಿದರೂ ಸಾಕು ಬೇಕಾದಷ್ಟು ಪೇಷೆಂಟ್ಗಳೂ ಸಿಗುತ್ತಾರೆ. ರಿಯಾಯತಿ ಎಂದರೆ ಸರಕಾರಿ ದರದಲ್ಲಿ ಸೇವೆ ನೀಡುವುದಿಲ್ಲ ಎನ್ನುವುದು ವಾಸು ಅವರ ಅಭಿಮತ.

ಈ ಕುರಿತು ‘ಸಮಾಚಾರ’ದ ಜೊತೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, “ಈ ಯೋಜನೆ ಇನ್ನೂ ಪ್ರಸ್ತಾವನೆ ಹಂತದಲ್ಲಿದೆ. ರಿಯಾಯಿತಿ ದರಗಳನ್ನು ಎಂಒಯು (memorandum of understanding) ನಲ್ಲಿ ದಾಖಲಿಸಲಾಗುತ್ತದೆ. ಇಷ್ಟ ಬಂದ ಹಾಗೆ ದರ ವಿಧಿಸಲು ಅವಕಾಶ ಇರುವುದಿಲ್ಲ. ಈ ಹಿಂದಿನ ಯೋಜನೆಗಳು ವಿಫಲವಾಗಿರಬಹುದು. ರಾಯಚೂರು ಘಟನೆಯೂ ನಮ್ಮ ಮುಂದಿದೆ. ಆದರೆ ಅದರಿಂದ ಎಂಒಯು ಮಾಡುವಾಗ ಪಾಠ ಕಲಿಯಬೇಕಾಗಿದೆ. ಜನರಿಗೆ ಅತೀ ಕಡಿಮೆ ದರಕ್ಕೆ ಆರೋಗ್ಯ ಸೇವೆ ನೀಡಬೇಕು ಎಂಬುದು ಸಚಿವರ (ರಮೇಶ್ ಕುಮಾರ್) ಆಶಯವೂ ಆಗಿದೆ,” ಎಂದರು.

ಒಟ್ಟಾರೆ, ಆರೋಗ್ಯ ಸೇವೆ ದಿನದಿಂದ ದಿನಕ್ಕೆ ಸಾಮಾನ್ಯ ಜನರಿಂದ ದೂರವಾಗುತ್ತಿದೆ ಎಂಬುದಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತಿರುವ ಹೊತ್ತಿನಲ್ಲಿ ರಾಜ್ಯ ಸರಕಾರ ಉಡುಪಿಯ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರಿಗೆ ವಹಿಸಲು ಮುಂದಾಗಿದೆ. ಈ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಈಗಾಗಲೇ ಪ್ರತಿಭಟನೆಗಳು ಶುರುವಾಗಿವೆ. ಜನಪರ ಕಾಳಜಿಯಿಂದ ಮಾತನಾಡುವ ಸಚಿವ ರಮೇಶ್ ಕುಮಾರ್ ಅವರ ಮುಂದಿನ ತೀರ್ಮಾನ ಏನಾಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.