samachara
www.samachara.com
ಗೋವಾ RSSನಲ್ಲಿ ತಾರಕ್ಕೇರಿದ ಭಿನ್ನಮತ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಲಾತಾ?
ಸುದ್ದಿ ಸಾಗರ

ಗೋವಾ RSSನಲ್ಲಿ ತಾರಕ್ಕೇರಿದ ಭಿನ್ನಮತ: ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಲಾತಾ?

ಶಿಸ್ತಿನ

ಸಂಘಟನೆ 'ರಾಷ್ಟ್ರೀಯ ಸ್ವಯಂ ಸೇವಕ ಸಂಘ' (ಆರ್ಎಸ್ಎಸ್)ದ ಗೋವಾ ಪ್ರಾಂತ್ಯದಲ್ಲಿ ಭಿನ್ನಮತ ತಾರಕ್ಕೇರಿದ.

ಗೋವಾ ರಾಜ್ಯದ 'ಸಂಘ'ದ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ಅವರನ್ನು ಬುಧವಾರ ರಾತ್ರಿ ಉಚ್ಛಾಟಿಸುತ್ತಿದ್ದಂತೆ, 400ಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರು ಸಿಡಿದೆದ್ದಿದ್ದಾರೆ; ಸಂಘಟನೆ ತೊರೆಯುವ ಬೆದರಿಕೆ ಹಾಕಿದ್ದಾರೆ. ಈ ಮೂಲಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆಂತರಿಕ ಬೆಳವಣಿಗೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಹಾಗೆ ನೋಡಿದರೆ, ಆರ್ಎಸ್ಎಸ್ ಇತಿಹಾಸದಲ್ಲಿ ನಡೆದ ದೊಡ್ಡ ಮಟ್ಟದ ಆಂತರಿಕ ಬೆಳವಣಿಗೆ ಇದು ಎನ್ನಲಾಗುತ್ತಿದೆ.

ಏನಿದು ಹೊಸ ಬೆಳವಣಿಗೆ? ಸಂಪೂರ್ಣ ವಿವರ ಇಲ್ಲಿದೆ.

ಗೋವಾದ ಬಿಜೆಪಿ ವಿರುದ್ಧ ಆರ್.ಎಸ್.ಎಸ್ ಮುಖ್ಯಸ್ಥ ಸುಭಾಷ್ ವೆಲಿಂಗ್ಕರ್ ಕೆಲಸ ಮಾಡುತ್ತಿದ್ದಾರೆ ಎಂಬ ಆರೋಪದಲ್ಲಿ ಬುಧವಾರ ರಾತ್ರಿ ಅವರನ್ನು ಸಂಘಟನೆಯಿಂದ ಉಚ್ಛಾಟಿಸಲಾಗಿತ್ತು. ಬಿಜೆಪಿಯ ಮಾತೃ ಸಂಸ್ಥೆ ಆರ್.ಎಸ್.ಎಸ್ ನಲ್ಲಿ ಈ ಹಿಂದೆಯೂ ಕಿತ್ತುಹಾಕುವ ಬೆಳವಣಿಗೆಗಳು ನಡೆದಿವೆ. ಆದರೆ ಈ ಬಾರಿ ಮುಖ್ಯಸ್ಥರ ಉಚ್ಛಾಟನೆಯನ್ನು ವಿರೋಧಿಸಿ, ಗೋವಾ ಆರ್.ಎಸ್.ಎಸ್ ನ 400ಕ್ಕೂ ಹೆಚ್ಚು ಕಾರ್ಯಕರ್ತರು ರಾಜೀನಾಮೆ ನೀಡುವ ಮಾತುಗಳನ್ನಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಣಜಿ ಸಮೀಪದ ಶಾಲೆಯೊಂದರಲ್ಲಿ ಬುಧವಾರ ಸಂಜೆ ರಾಜ್ಯ ಆರ್.ಎಸ್.ಎಸ್ನ ಹಲವಾರು ನಾಯಕರು 6 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಸಿ ಕೊನೆಗೆ ವೆಲಿಂಗ್ಕರ್ ಉಚ್ಛಾಟನೆ ನಿರ್ಧಾರಕ್ಕೆ ಬಂದಿದ್ದಾರೆ. ಇದಾದ ಬೆನ್ನಿಗೆ ಕಾರ್ಯಕರ್ತರು ತಮ್ಮ ರಾಜೀನಾಮೆ ನಿರ್ಧಾರ ಹೊರಹಾಕಿದ್ದಾರೆ.

ಸಭೆಯ ನಂತರ ಮಾತನಾಡಿದ ರಾಜ್ಯ ಘಟಕದ ನಾಯಕರೊಬ್ಬರು “ಜಿಲ್ಲಾ ಘಟಕ, ಉಪ ಘಟಕ ಮತ್ತು ಶಾಖೆಗೆ ಸೇರಿದ ಪ್ರಚಾರಕರು ಮತ್ತು 100 ಕ್ಕೂ ಹೆಚ್ಚು ಕಾರ್ಯಕರ್ತರು ವೆಲಿಂಗ್ಕರ್ ಮರಳಿ ಬರುವವರೆಗೆ ಸಂಘಟನೆ ತೊರೆಯಲು ನಿರ್ಧರಿಸಿದ್ದೇವೆ,” ಎಂದು ತಿಳಿಸಿದ್ದಾರೆ.

ಆರ್.ಎಸ್.ಎಸ್ ಅಲ್ಲದೇ ವೆಲಿಂಗ್ಕರ್ ‘ಭಾರತೀಯ ಭಾಷಾ ಸುರಕ್ಷಾ ಮಂಚ್’ ಸಂಘಟನೆಯ ಮುಖ್ಯಸ್ಥರೂ ಆಗಿದ್ದರು. ಸ್ಥಳೀಯ ಕೊಂಕಣಿ ಮತ್ತು ಮರಾಠಿ ಭಾಷೆ ಮೇಲೆ ರಾಜ್ಯ ಬಿಜೆಪಿ ಸರಕಾರ ಇಂಗ್ಲೀಷ್ ಭಾಷೆಯನ್ನು ಹೇರುತ್ತಿದೆ ಎಂದು ವೆಲಿಂಗ್ಕರ್ ಈ ಹಿಂದಿನಿಂದಲೂ ಟೀಕಿಸುತ್ತಾ ಬಂದಿದ್ದರು. ಸೋಮವಾರ ಮಾತನಾಡಿದ್ದ ವೆಲಿಂಗ್ಕರ್, “ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಕಾಣಲಿದೆ. ಬಿಜೆಪಿಯನ್ನು ಸೋಲಿಸಲು ಬೇರೆ ಪಕ್ಷಕ್ಕೆ ಬೆಂಬಲ ನೀಡಲಿದ್ದೇವೆ,” ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಕಳೆದ ವಾರ ಗೋವಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿ ಸಂದರ್ಭ ಕಪ್ಪು ಧ್ವಜ ಪ್ರದರ್ಶನದ ವೇಳೆ ವೆಲಿಂಗ್ಕರ್ ಉಪಸ್ಥಿತರಿದ್ದರು ಎಂಬುದೂ ಗಮನಾರ್ಹ.

“ಅವರು ತಮ್ಮ ಜವಾಬ್ದಾರಿಗಳಿಂದ ಹಿಮ್ಮುಖರಾಗಿದ್ದರು. ಅವರು ರಾಜಕೀಯ ಚಟುವಟಿಕೆಗಳಿಗೆ ಧುಮುಕಲು ಬಯಸಿದ್ದರು. ಸಂಘದ ನಾಯಕರಾಗಿ ಅವರು ಹಾಗೆ ಮಾಡಲು ಸಾಧ್ಯವಿಲ್ಲ,” ಎಂದು ವೆಲಿಂಗ್ಕರ್ ಉಚ್ಛಾಟನೆ ವೇಳೆ ಆರ್.ಎಸ್.ಎಸ್ ನಾಯಕ ಮನ್ ಮೋಹನ್ ವೈದ್ಯ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಗೋವಾ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್, ಇದು ಆರ್.ಎಸ್.ಎಸ್ “ಆಂತರಿಕ ವಿಚಾರ” ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಗೋವಾ ಮುಖ್ಯಮಂತ್ರಿಯಾಗಿದ್ದ, ಸದ್ಯ ರಕ್ಷಣಾ ಮಂತ್ರಿಯಾಗಿರುವ

ಅವರನ್ನೂ ವೆಲಿಂಗ್ಕರ್ ಟೀಕಿಸುತ್ತಲೇ ಬಂದಿದ್ದರು. ಶಾಲೆಗಳಲ್ಲಿ ಸ್ಥಳೀಯ ಭಾಷೆಯನ್ನು ಮಾಧ್ಯಮವಾಗಿ ಮುಂದುವರೆಸುವ ಬಗ್ಗೆ ಚುನಾವಣಾ ಸಮಯದಲ್ಲಿ ಬಿಜೆಪಿ ಭರವಸೆ ನೀಡಿತ್ತು. ಆದರೆ ಇಂಗ್ಲೀಷ್ ಶಾಲೆಗಳಿಗೆ ಅನುಮತಿ ನೀಡುವ ಮೂಲಕ 'ಜನರ ನಂಬಿಕೆಗೆ ವಂಚನೆ' ಮಾಡಿದೆ ಎಂದು ದೂರುತ್ತಾ ಬಂದಿದ್ದರು. ಕ್ರಿಶ್ಚಿಯನ್ ಓಟ್ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣಿಟ್ಟು ಇಂಗ್ಲೀಷ್ ಭಾಷೆಯನ್ನು ಬೆಂಬಲಿಸುತ್ತಿದೆ ಎಂಬುದು ಅವರ ಗಂಭೀರ ಆರೋಪವಾಗಿತ್ತು.

ಇದೀಗ ವೆಲಿಂಗ್ಕರ್ ಉಚ್ಛಾಟನೆಯಲ್ಲಿ ಬಿಜೆಪಿಯ ಕೈವಾಡ ಇದೆ ಎಂಬ ಆರೋಪಗಳನ್ನು ಅವರ ಬೆಂಬಲಿಗರು ವ್ಯಕ್ತಪಡಿಸುತ್ತಿದ್ದಾರೆ. ಕೊಂಕಣಿ ಸಮುದಾಯದವರೇ ಹೆಚ್ಚಾಗಿರುವ ಗೋವಾ ಬಿಜೆಪಿ ಮತ್ತು ಆರ್.ಎಸ್.ಎಸ್ ಭದ್ರಕೋಟೆಯಾಗಿದ್ದು, ಪಕ್ಷ ಮತ್ತು ಸಂಘಟನೆಗೆ ದೊಡ್ಡ ಮಟ್ಟದ ನಿಧಿ ಇಲ್ಲಿಂದಲೇ ಹರಿದು ಬರುತ್ತದೆ ಎಂಬುದು ಗಮನಾರ್ಹ.

ಸದ್ಯ ವೆಲಿಂಗ್ಕರ್ ಉಚ್ಛಾಟನೆ ಮತ್ತು ಕಾರ್ಯಕರ್ತರ ರಾಜೀನಾಮೆ ‘ಶಿಸ್ತಿನ’ ಸಂಘಟನೆ ಆರ್.ಎಸ್.ಎಸ್’ನಲ್ಲಿ ತಳಮಳ ಹುಟ್ಟಿಸಿದೆ. ರಾಜೀನಾಮೆ ನೀಡುತ್ತಿರುವ ಕಾರ್ಯಕರ್ತರ ಸಂಖ್ಯೆ ಹೆಚ್ಚುತ್ತಿದ್ದು ಇದು ಎಲ್ಲಿಗೆ ಹೋಗಿ ತಲುಪಲಿದೆಯೋ ಗೊತ್ತಿಲ್ಲ. ಆದರೆ ಒಂದಂತೂ ಸತ್ಯ, ಇದು ಗೋವಾದಲ್ಲಿ 2017ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯವನ್ನಂತೂ ನಿರ್ಧರಿಸಲಿದೆ.

ಚಿತ್ರ ಕೃಪೆ:

ದಿ ಹಿಂದೂ, ಲೈವ್ ಮಿಂಟ್