samachara
www.samachara.com
ರಿಲಯನ್ಸ್ ಜಿಯೋ v/s ಭಾರ್ತಿ ಏರ್ಟೆಲ್: ಈ 4ಜಿ ಸಮರದಿಂದ ನಮಗೇನು ಲಾಭ?
ಸುದ್ದಿ ಸಾಗರ

ರಿಲಯನ್ಸ್ ಜಿಯೋ v/s ಭಾರ್ತಿ ಏರ್ಟೆಲ್: ಈ 4ಜಿ ಸಮರದಿಂದ ನಮಗೇನು ಲಾಭ?

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ದೇಶದ

ಅಂತರ್ಜಾಲ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಹೊಸ ಅಲೆ ಎಬ್ಬಿಸಿದೆ.

ಅತ್ಯಂತ ಕಡಿಮೆ ದರಕ್ಕೆ ಡೇಟಾ ಪ್ಲಾನ್ ಗಳನ್ನು ಬಿಡುಗಡೆ ಮಾಡುವ ಮುನ್ಸೂಚನೆಯೊಂದಿಗೆ ಭಾರ್ತಿ ಏರ್ಟೆಲ್ ಸೇರಿದಂತೆ ಹಲವು ಕಂಪೆನಿಗಳಿಗೆ ನಡುಕ ಹುಟ್ಟಿಸಿದೆ. ಇದಕ್ಕೆ ದರ ಸಮರ ಮಾದರಿಯಲ್ಲಿಯೇ ಪ್ರತಿಕ್ರಿಯೆ ನೀಡಿರುವ ಏರ್ಟೆಲ್ ಕೂಡ, ತನ್ನ ಮಾಸಿಕ ಡಾಟಾ ಪ್ಲಾನ್ಗಳನ್ನು ಕಡಿಮೆ ಬೆಲೆ ನೀಡುವುದಾಗಿ ಆಫರ್ ಘೋಷಿಸಿದೆ. ಈ ಮೂಲಕ ದೇಶದ ಅತಿ ದೊಡ್ಡ ಸಂಪರ್ಕ ಜಾಲವನ್ನು ಹೊಂದಿರುವ ಏರ್ಟೆಲ್, ಮುಖೇಶ್ ಅಂಬಾನಿ ಒಡೆತನದ ಜಿಯೋಗೆ ಪೈಪೋಟಿ ಕೊಡಲು ಮುಂದಾಗಿದೆ. ಒಟ್ಟಾರೆ, ಮುಂದಿನ ಮೂರು ತಿಂಗಳು ದೇಶದಲ್ಲಿ ನಾಲ್ಕನೇ ತಲೆಮಾರಿನ ಅಂತರ್ಜಾಲ ಮತ್ತು ದೂರಸಂಪರ್ಕ ಕ್ಷೇತ್ರದ ಬೆಳವಣಿಗೆಗೆ ಎರಡು ದೈತ್ಯ ಕಂಪನಿಗಳ ಸಮರ ಕೊಡುಗೆ ನೀಡಲಿದೆ.

ಭವಿಷ್ಯದ ಸಮರ: 

ಒಂದು ಅಸ್ತಿತ್ವದಲ್ಲಿರುವ ಬೃಹತ್ ನೆಟ್ವರ್ಕ್, ಇನ್ನೊಂದು ಇನ್ನೂ ಅಂಬೆಗಾಲಿಡುತ್ತಿರುವ, ಆದರೆ ಹಣ ಮತ್ತು ಅಧಿಕಾರದ ಬಲವನ್ನು ಹೊಂದಿರುವ ಕಂಪೆನಿ. ಇದರಲ್ಲಿ ಉಳಿಯೋರು ಯಾರು? ಕಳೆದುಕೊಳ್ಳುವುದು ಯಾರು? ಎಂಬ ಸಹಜ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ.

ಇಲ್ಲೀವರೆಗೆ ದೇಶದ ಮೊಬೈಲ್ ಕ್ಷೇತ್ರವನ್ನು ಆಳುತ್ತಿದ್ದ ಕಂಪೆನಿ ಏರ್ಟೆಲ್. ಒಂದು ಅಂದಾಜಿನ ಪ್ರಕಾರ ದೇಶದ ಶೇಕಡಾ 40ರಷ್ಟು ಬಳೆಕಾದಾರರು ಏರ್ಟೆಲನ್ನು ನೆಚ್ಚಿಕೊಂಡಿದ್ದಾರೆ. ಅತ್ಯುತ್ತಮ ಸೇವೆ, ಗುಣಮಟ್ಟದ ನೆಟ್ವರ್ಕ್, ಸ್ಟಾಂಡರ್ಡ್ ಕರೆ ಮತ್ತು ಡೇಟಾ ದರಗಳಿಂದ ಒಂದು ವರ್ಗ ಯಾವತ್ತೂ ಏರ್ಟೆಲ್ ಜೊತೆಗಿದೆ. ಭಾರತದಲ್ಲಿ ಸೇವೆ ಆರಂಭಿಸದ ಏರ್ಟೆಲ್ ನಿಧಾನವಾಗಿ ವಿಶ್ವದಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚಿ ಇವತ್ತಿಗೆ ಒಟ್ಟು 20 ದೇಶಗಳಲ್ಲಿ ತನ್ನ ಜಾಲವನ್ನು ಹರಡಿದೆ. ಆಫ್ರಿಕಾದ 17 ದೇಶಗಳಲ್ಲಿ ತನ್ನ ಸೇವೆ ನೀಡುತ್ತಿರುವ ಭಾರ್ತಿ ಏರ್ಟೆಲ್, ಪಕ್ಕದ ಬಾಂಗ್ಲಾ ಮತ್ತು ಶ್ರೀಲಂಕಾದಲ್ಲಿಯೂ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ.

ಆದರೆ ಜಿಯೋದ ಕತೆಯೇ ಬೇರೆ. ಜಿಯೋ ಭಾರತದಂತಹ ಬೃಹತ್ ಗಾತ್ರದ ಗ್ರಾಹಕರನ್ನು ಹೊಂದಿರುವ ದೇಶದ ಮೂಲಕ ತನ್ನ ಖಾತೆ ತೆರಯಬೇಕಷ್ಟೆ. ಡಿಸೆಂಬರ್ 27ರಂದು ಜಿಯೋ ಸೇವೆ ದೇಶದಲ್ಲಿ ಆರಂಭವಾಗಲಿದೆ. ಪ್ರಾಯೋಗಿಕ ಹಂತದಲ್ಲಿ ಒಂದಷ್ಟು ಸಿಮ್ ಕಾರ್ಡುಗಳನ್ನು ಈಗಾಗಲೇ ವಿತರಿಸಲಾಗಿದೆ. ಸದ್ಯ ಮಾರುಕಟ್ಟೆಯನ್ನು ಕೈವಶ ಮಾಡಿಕೊಳ್ಳಲು ರಿಲಯನ್ಸ್ ಭಾರಿ ದರ ಕಡಿತಕ್ಕೆ ಮುಂದಾಗಿದೆ. ದೊಡ್ಡ ಮಟ್ಟದ ಜಾಹೀರಾತು, ಮಾರ್ಕೆಟಿಂಗ್ ಮೂಲಕ ಮಾರುಕಟ್ಟೆಯನ್ನು ತನ್ನತ್ತ ಸೆಳೆದುಕೊಳ್ಳುವ ಯೋಜನೆ ಹಾಕಿಕೊಂಡಿದೆ. ಅದಕ್ಕೆ ಬೇಕಾದ ಭರಪೂರ ಸಂಪನ್ಮೂಲವೂ ಜಿಯೋ ಮಾತೃ ಸಂಸ್ಥೆ ರಿಲಾಯನ್ಸ್ ಬಳಿ ಇದೆ. ಈಗಾಗಲೇ ತಂತ್ರಜ್ಞಾನ ಅಭಿವೃದ್ಧಿಯ ಮೇಲೆ ಹೇರಳ ಸಂಪನ್ಮೂಲವನ್ನೂ ಸುರಿದಿದೆ. ಈಗಾಗಲೇ 'ಮೈ ಜಿಯೋ' ಎಂಬ ಆಪ್ಗಳ ಗುಚ್ಚವೊಂದನ್ನು ಬಿಡುಗಡೆ ಮಾಡಿದೆ.

ಆದರೆ ಕೇವಲ ಮೊಬೈಲ್ ಮುಂತಾದ ಸಂಪರ್ಕ ಸೇವೆಗಳನ್ನು ನೀಡುತ್ತಲೇ ಪಳಗಿರುವ ಬೃಹತ್ ಸಂಸ್ಥೆ ಏರ್ಟೆಲ್ ಇದನ್ನೆಲ್ಲಾ ನೋಡಿಕೊಂಡು ಸುಮ್ಮನಿರುತ್ತದೆ ಎಂಬ ಭಾವಿಸಬೇಕಿಲ್ಲ.

ಸದ್ಯ ಮೊದಲ ಮೂರು ತಿಂಗಳು ಉಚಿತ ಡೇಟಾ ಸೇವೆ ಮತ್ತು ಅದಾದ ನಂತರ ಅತ್ಯಂತ ಕಡಿಮೆ ದರ ಅಂದರೆ 50 ರೂಪಾಯಿಗೆ 10 ಜಿಬಿ 4ಜಿ ಡೇಟಾ ನೀಡುವ ಆಕ್ರಮಣಕಾರಿ ನಿರ್ಧಾರಕ್ಕೆ ಜಿಯೋ ಕೈ ಹಾಕಿದೆ ಎಂಬ ಸುದ್ದಿಗಳಿವೆ. "ಕೇವಲ 400 ರೂಪಾಯಿಗೆ 60 ಜಿಬಿ ಡೇಟಾ ಮತ್ತು 2500 ಕರೆ ನಿಮಿಷಗಳನ್ನು ನೀಡಲಿದೆ,'' ಎಂದು ಜಿಯೋದಲ್ಲಿ ಕೆಲಸ ಮಾಡುವ ತಂತ್ರಜ್ಞರೊಬ್ಬರು ಹೇಳುತ್ತಾರೆ.

ಈ ಸುದ್ದಿ ಹೊರ ಬೀಳುತ್ತಿದ್ದಂತೆ ಅತ್ತ ಏರ್ಟೆಲ್ ಕೂಡ ತನ್ನ ದರದಲ್ಲಿ ಇಳಿಕೆ ಮಾಡಲು ಶುರುಮಾಡಿದೆ. ತನ್ನ ಡೇಟಾ ದರಗಳನ್ನು ಏರ್ಟೆಲ್ ದೊಡ್ಡ ಮಟ್ಟಕ್ಕೆ ಈಗಾಗಲೇ ಕಡಿತಗೊಳಿಸಿದೆ. 12 ತಿಂಗಳ ಅವಧಿಗೆ 1,498 ರೂಪಾಯಿ ಕಟ್ಟಿದರೆ ಒಂದು ಜಿಬಿ ಡೇಟಾ; ನಂತರ ಕೇವಲ 51 ರೂಪಾಯಿಗೆ 1 ಜಿಬಿ ಡೇಟಾ ನೀಡುವುದಾಗಿ ಹೇಳಿದೆ. ಸದ್ಯದ ಪರಿಸ್ಥಿತಿಯಲ್ಲಿ ಏರ್ಟೆಲ್ ಇಲ್ಲಿಗೇ ನಿಲ್ಲುವಂತೆಯೂ ಕಾಣಿಸುತ್ತಿಲ್ಲ. ಒಂದೊಮ್ಮೆ ಈ ದರ ಕಡಿತ ಸಾಲದಿದ್ದಲ್ಲಿ ಮತ್ತಷ್ಟು ದರ ಕಡಿತ ಮಾಡುವ ಸಾಧ್ಯತೆಯೂ ಇದೆ. ಅದಕ್ಕೆ ಬೇಕಾದ ಸಂಪನ್ಮೂಲವೂ ಅದರ ಬಳಿ ಈಗಾಗಲೇ ಇದೆ ಎನ್ನುವುದು ಗಮನಾರ್ಹ ವಿಷಯ.

ದರ ಸಮರದ ಕತೆ ಇದಾದರೆ ಅತ್ತ ತಂತ್ರಜ್ಞಾನದಲ್ಲೂ ಏರ್ಟೆಲ್ ಗಟ್ಟಿಯಾಗಿದೆ. ಯಾವುದೇ ಮೊಬೈಲ್ ಕಂಪೆನಿ ಜನರಿಗೆ ಸೇವೆ ನೀಡಲು ‘ಬಿಟಿಎಸ್’ (ಟವರಿನಲ್ಲಿರುತ್ತದೆ) ಎಂಬ ತಂತ್ರಜ್ಞಾನವನ್ನು ಹಾದು ಹೋಗಬೇಕು. ಅದನ್ನು ನೀಡುವ ಕಂಪೆನಿಗಳು ಬೇರೆಯೇ ಇವೆ. ಭಾರತದಲ್ಲಿ ಎರಿಕ್ಸನ್, ಹುವಾಯ್ ಮುಂತಾದ ಕಂಪೆನಿಗಳು ‘ಬಿಟಿಎಸ್’ ಸೇವೆ ನೀಡುತ್ತವೆ. ಇವೆಲ್ಲಾ ದೊಡ್ಡ ಮಟ್ಟದ ಸಂಪರ್ಕ ಜಾಲವನ್ನು ಹೊಂದಿರುವ ಕಂಪೆನಿಗಳಾಗಿದ್ದು, ಹುವಾಯ್ ಜೊತೆ ಏರ್ಟೆಲ್ ದೀರ್ಘ ಕಾಲದಿಂದ ಒಪ್ಪಂದ ಮಾಡಿಕೊಂಡು ಬಂದಿದೆ. ಆದರೆ ರಿಲಯನ್ಸ್ ಚಾಲ್ತಿಯಲ್ಲಿರುವ ಕಂಪೆನಿಗಳನ್ನು ಬಿಟ್ಟು, ಬಿಟಿಎಸ್ ತಂತ್ರಜ್ಞಾನಕ್ಕಾಗಿ ಸ್ಯಾಮ್ಸಂಗ್ ಕಂಪನಿಯನ್ನು ನೆಚ್ಚಿಕೊಂಡಿದೆ. ಸ್ಯಾಮ್ಸಂಗ್ ಈ ‘ಬಿಟಿಎಸ್’ ಸಂಪರ್ಕ ಕ್ಷೇತ್ರಕ್ಕೆ ಇನ್ನೂ ಹೊಸ ಕಂಪೆನಿ. ಇದರ ವ್ಯಾಪ್ತಿ ದೇಶದ ಎಷ್ಟು ಭಾಗದಲ್ಲಿದೆ ಎಂದು ಇನ್ನೂ ಗೊತ್ತಿಲ್ಲ. “ನಿಜವಾದ ಸೇವೆ ಆರಂಭವಾದ ನಂತರ ರಿಲಯನ್ಸ್ ತಂತ್ರಜ್ಞಾನದ ಶಕ್ತಿ ಎಷ್ಟಿದೆ ಎಂಬುದನ್ನು ನೋಡಬಹುದು,” ಎನ್ನುತ್ತಾರೆ ಜಿಯೋದ ತಂತ್ರಜ್ಞರೊಬ್ಬರು. ರಿಲಯನ್ಸ್ ತನ್ನ ದರ ಸಮರದಾಚೆಗೆ ಜನರನ್ನು ಯಾವ ಮಟ್ಟಕ್ಕೆ ತಲುಪಲಿದೆ ಎಂಬುದು ಈ ತಂತ್ರಜ್ಞಾನಗಳೂ ನಿರ್ಧರಿಸಲಿವೆ.

ಒಟ್ಟಿನಲ್ಲಿ ಜಿಯೋಗೆ ಹೊಸ ಗ್ರಾಹಕರನ್ನು ಸೆಳೆಯುವ ಚಿಂತೆಯಾದರೆ, ಏರ್ಟೆಲ್ಗೆ ಇರುವ ಗ್ರಾಹಕರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ. ಇವರಿಬ್ಬರ ಕಾಳಗದಲ್ಲಿ ಗ್ರಾಹಕರಿಗೆ ಮಾತ್ರ ಬಿಟ್ಟಿ ಡೇಟಾ, ದರ ಕಡಿತದ ಸುಗ್ಗಿಯೋ ಸುಗ್ಗಿ. ಜತೆಗೆ, ಅಂತರ್ಜಾಲ ಬಳಕೆಯ ವಿಚಾರದಲ್ಲಿ ಜನಸಾಮಾನ್ಯರ ಅಭಿರುಚಿಯನ್ನೇ ಈ ಔದ್ಯಮಿಕ ಸಮರ ಬದಲಿಸುದಂತೂ ಸುಳ್ಳಲ್ಲ.