samachara
www.samachara.com
‘ಕತ್ತಲೆ ಕರಗಿಸಲು ಹಣತೆ ಹಿಡಿದು ಬಂದವರು’ ಮತ್ತು ‘ದೇಶದ್ರೋಹ’ ಆರೋಪಕ್ಕೆ ತುತ್ತಾದ ಅಮ್ನೆಸ್ಟಿ!
ಸುದ್ದಿ ಸಾಗರ

‘ಕತ್ತಲೆ ಕರಗಿಸಲು ಹಣತೆ ಹಿಡಿದು ಬಂದವರು’ ಮತ್ತು ‘ದೇಶದ್ರೋಹ’ ಆರೋಪಕ್ಕೆ ತುತ್ತಾದ ಅಮ್ನೆಸ್ಟಿ!

1965ರ ಹೊತ್ತಿಗೆ ಅಂತರಾಷ್ಟ್ರೀಯವಾಗಿ ಆಂದೋಲನ ಮುಂದುವರಿದಾಗ ವಿದೇಶಗಳಲ್ಲಿ ಕಾರ್ಯದರ್ಶಿಗಳನ್ನು, ಸಮಿತಿಗಳನ್ನು, ಘಟಕಗಳನ್ನು ತೆರೆಯಲಾಯಿತು.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಆಗಸ್ಟ್ 13, ರಾತ್ರಿ ಬೆಂಗಳೂರಿನಲ್ಲಿ ‘ಅಮ್ನೆಸ್ಟಿ ಇಂಟರ್ನ್ಯಾಷನಲ್ ಇಂಡಿಯಾ’ ಸಂಸ್ಥೆ ಸಹಯೋಗದಲ್ಲಿ 'ಯುನೈಟೆಡ್ ಥಿಯೋಲಾಜಿಕಲ್ ಕಾಲೇಜ್' ಆಯೋಜಿಸಲಾಗಿದ್ದ ಕಾರ್ಯಕ್ರಮ ಅದು. ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ಕಾರ್ಯಾಗಾರದಲ್ಲಿ 'ದೇಶದ್ರೋಹ'ದ ಘೋಷಣೆ ಕೂಗಲಾಗಿದೆ ಎಂಬ ವಿಚಾರ ಕಳೆದ 24 ಗಂಟೆಗಳ ಅಂತರದಲ್ಲಿ ಗದ್ದಲವನ್ನು ಸೃಷ್ಟಿ ಮಾಡಿದೆ. ಈಗಾಗಲೇ ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ಸೆಡಿಷನ್ ಕೇಸ್ ಹಾಕಿದೆ. ಜೆಸಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಥಮ ಮಾಹಿತಿ ವರದಿಯಲ್ಲಿ ಸಂಸ್ಥೆ ವಿರುದ್ಧ ಐಪಿಸಿ ಸೆಕ್ಷನ್ 142 (ಕಾನೂನು ಬಾಹಿರ ಸಭೆ ನಡೆಸುವುದು), 143, 147 (ಕೋಮ ಗಲಭೆಗೆ ಪ್ರಚೋದನೆ), 124 ಎ (ದೇಶದ್ರೋಹ), 153ಎ (ವಿವಿಧ ಕೋಮಿನ ನಡುವೆ ವೈರತ್ವ ಬೆಳೆಸಲು ಪ್ರಚೋದನೆ) ಅಡಿಯಲ್ಲಿ ದೂರು ದಾಖಲಾಗಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ಸಂಸ್ಥೆ ನಡೆಸುತ್ತಿರುವ ಆಂದೋಲನದ ಭಾಗವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಕಾರ್ಯಾಗಾರದಲ್ಲಿ ಪ್ರಚೋದನಾತ್ಮಕ ಭಾಷಣ, ಆಜಾದಿ ಪರ ಘೋಷಣೆ ಮತ್ತು ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ಆರೋಪ 'ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ' ಸಂಸ್ಥೆ ಮೇಲಿದೆ. ಅಲ್ಲದೇ ಕಾರ್ಯಗಾರದಲ್ಲಿ ಭಾಗವಹಿಸಿದ್ದ ಕಾಶ್ಮೀರಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಆದರೆ ಕಾಶ್ಮೀರ ವಿಚಾರ ಚರ್ಚೆ ವೇಳೆ ನಮ್ಮ ಯಾವುದೇ ಸಿಬ್ಬಂದಿ ದೇಶ ವಿರೋಧಿ ಘೋಷಣೆ ಕೂಗಿಲ್ಲ ಎಂದು 'ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ' ಮಂಗಳವಾರ ಸ್ಪಷ್ಟಪಡಿಸಿದೆ. ಸಂಸ್ಥೆ ಯಾರ ಪರವಾಗಿಯೂ ಇಲ್ಲ ಎಂದು ಸಂಘಟನೆಯ ವೆಬ್ಸೈಟಿನಲ್ಲಿ ಹೇಳಲಾಗಿದೆ.

ಸ್ವತಃ ಪ್ರಧಾನಿ ನರೇಂದ್ರ ಮೋದಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತಿತರ ಗಣ್ಯರು ಭಾಗವಹಿಸಿದ್ದ, ಯಮುನಾ ನದಿ ತಟದಲ್ಲಿ ಪರಿಸರ ಕಾನೂನುಗಳನ್ನು ಗಾಳಿಗೆ ತೂರಿ ರವಿಶಂಕರ್ ಆಯೋಜಿಸದ್ದ ದುಬಾರಿ ವಿಶ್ವ ಸಾಂಸ್ಕೃತಿಕ ಉತ್ಸವದಲ್ಲಿಯೂ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಲಾಗಿತ್ತು. ನರೇಂದ್ರ ಮೋದಿ ವಿದೇಶಿ ಭೇಟಿ ವೇಳೆಯೂ ಹಲವು ಕಡೆಗಳಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲು ಎದ್ದು ನಿಂತಾಗ ‘ಭಾರತ್ ಮಾತಾ ಕೀ ಜೈ’ ಘೋಷಣೆಗಳು ಮೊಳಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಯಾರಿವರು ಅಮ್ನೆಸ್ಟಿ ಇಂಟರ್ನ್ಯಾಷನಲ್?:

‘ಅಮ್ನೆಸ್ಟಿ ಇಂಟರ್ನ್ಯಾಷನಲ್’ ಹೀಗೊಂದು ಹೆಸರನ್ನು ಮಾನವ ಹಕ್ಕುಗಳ ಪಠ್ಯದಲ್ಲಿ ಕಾಲೇಜು ದಿನಗಳಲ್ಲೇ ಓದಿದ ನೆನಪು ನಿಮಗೂ ಇರಬಹುದು. ಮಾನವ ಹಕ್ಕುಗಳ ವಿಚಾರದಲ್ಲಿ ಜಾಗತಿಕವಾಗಿ ಹೋರಾಡುವ ಸಂಸ್ಥೆಗಳಲ್ಲಿ ಅಮ್ನೆಸ್ಟಿ ಇಂಟರ್ನ್ಯಾಷನಲ್ನದ್ದು ದೊಡ್ಡ ಹೆಸರು. ಸುಮಾರು 160 ದೇಶಗಳಲ್ಲಿ 70 ಲಕ್ಷದಷ್ಟು ಸದಸ್ಯರಿರುವ, ದೀರ್ಘ ಇತಿಹಾಸ ಉಳ್ಳ ಸಂಘಟನೆ ಅಮ್ನೆಸ್ಟಿ. ಹಲವು ಸಂಘಟನೆಗಳು ಇದನ್ನು ತಮ್ಮ ಮಾದರಿ ಎಂದೂ ಪರಿಗಣಿಸಿವೆ. ಅಷ್ಟರ ಮಟ್ಟಿಗೆ ಇದು 'ಫೇಮಸ್'. 1977ರಲ್ಲಿ ನೋಬೆಲ್ ಶಾಂತಿ ಪ್ರಶಸ್ತಿಯನ್ನೂ ಈ ಸಂಘಟನೆ ಪಡೆದುಕೊಂಡಿದೆ.

ಅಮ್ನೆಸ್ಟಿಯ ಹುಟ್ಟು:

1961ರ ಲಂಡನ್ ಪತ್ರಿಕೆ ‘ದಿ ಅಬ್ಸರ್ವರ್’ನಲ್ಲಿ ‘ದಿ ಫಾರ್ಗಾಟನ್ ಪ್ರಿಸನರ್’ ಹೆಸರಿನ ಲೇಖನವೊಂದು ಪ್ರಕಟವಾಗಿತ್ತು. ಜೈಲಿನಲ್ಲಿರುವ ಕೈದಿಗಳ ಕುರಿತಾದ ಲೇಖನವದು. ಇದನ್ನು ನೋಡಿದ ಲಂಡನ್ ಕಾರ್ಮಿಕ ವಕೀಲ ಪೀಟರ್ ಬೆನೆನ್ಸನ್ ‘ಅಪೀಲ್ ಫಾರ್ ಅಮ್ನೆಸ್ಟಿ-1961’ ಎಂಬ ಆಂದೋಲನವನ್ನು ಹುಟ್ಟು ಹಾಕಿದರು. ಅವರಿಗೆ ಜೊತೆಯಾದವರು ಸಾಮಾಜಿಕ ಕಾರ್ಯಕರ್ತ ಎರಿಕ್ ಬೇಕರ್.

ಆರಂಭದಲ್ಲಿ ಅಹಿಂಸಾತ್ಮಕ ಪ್ರತಿಭಟನೆ ನಡೆಸಿದವರನ್ನು ಸೇರಿದಂತೆ, ವಿನಾಕಾರಣ ಜೈಲು ಪಾಲದವರ ಪರವಾಗಿ ಆರಂಭವಾದ ತಾತ್ಕಾಲಿಕ ಆಂದೋಲನವಿದು. ಮುಂದೆ ಇದು ಖೈದಿಗಳ ಹಕ್ಕುಗಳ ಪರ ವ್ಯವಸ್ಥಿತ ಹೋರಾಟ ನಡೆಸುವ ಶಾಶ್ವತ ಆಂದೋಲನವಾಗಿ ಜನಮನ್ನಣೆ ಪಡೆಯಿತು.

1965ರ ಹೊತ್ತಿಗೆ ಅಂತರಾಷ್ಟ್ರೀಯವಾಗಿ ಆಂದೋಲನ ಮುಂದುವರಿದಾಗ ವಿದೇಶಗಳಲ್ಲಿ ಕಾರ್ಯದರ್ಶಿಗಳನ್ನು, ಸಮಿತಿಗಳನ್ನು, ಘಟಕಗಳನ್ನು ತೆರೆಯಲಾಯಿತು. ‘ಅಮ್ನೆಸ್ಟಿ ಇಂಟರ್ನ್ಯಾಷನಲ್’ ಹೆಸರಿನಲ್ಲಿ ಸರಾಕರೇತರ ಸಂಸ್ಥೆಯಾಗಿ ಅದು ಗುರುತಿಸಿಕೊಂಡಿತು. ಹಲವು ಖೈದಿಗಳ ಪಾಲಿಗೆ ನೆರವಾಗಿದ್ದಷ್ಟೇ ಅಲ್ಲ, ಖೈದಿಗಳ ಕುಟುಂಬಸ್ಥರಿಗೂ ನೆರವಾಗುತ್ತಾ ಭದ್ರ ನಂಬಿಕೆ ಮತ್ತು ಭರವಸೆಯ ಭದ್ರ ತಳಪಾಯದ ಮೇಲೆ ಅಮ್ನೆಸ್ಟಿ ಬೆಳೆದು ಬಂತು.

ಎಲ್ಲೆಲ್ಲಿ ಸರಕಾರಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆಯೋ ಅಲ್ಲೆಲ್ಲಾ ಜನರಲ್ಲಿ ಅಭಿಪ್ರಾಯ ರೂಪಿಸಿ ಸರಕಾರದ ಮೇಲೆ ಒತ್ತಡ ಹೇರುವಂತ ಕೆಲಸವನ್ನು ಅಮ್ನೆಸ್ಟಿ ನಡೆಸುತ್ತಾ ಬಂದಿದೆ. ಹಲವು ಆಂದೋಲಗಳನ್ನು ಸಂಘಟಿಸಿದ ಸಂಸ್ಥೆ ಇದಕ್ಕೆಲ್ಲಾ ‘ಜಾಗತಿಕ ಮಾನವ ಹಕ್ಕುಗಳ ಘೋಷಣೆ’ಯನ್ನು ಅದು ಆಧಾರವಾಗಿ ಪರಿಗಣಿಸಿದೆ.

1970ರಲ್ಲಿ ಬ್ರಿಟನಿನ ಗುಪ್ತಚರ ದಳ ಸಂಘಟನೆಯೊಳಕ್ಕೆ ಮೂಗುತೂರಿಸಿದಾಗ ಪೀಟರ್ ಬೆನ್ಸನ್ ರಾಜೀನಾಮೆ ನೀಡಿ ಹೊರ ನಡೆದರು. ಮುಂದೆ ಅಮ್ನೆಸ್ಟಿ ಯಾರೂ ಅಂದುಕೊಳ್ಳದ ರೀತಿಯಲ್ಲಿ ಬೆಳೆದು ನಿಂತಿತು. 1969ರ ಹೊತ್ತಿಗೆ 15 ಸಾವಿರ ಇದ್ದ ಸದಸ್ಯರ ಸಂಖ್ಯೆ, 1979 ರ ವೇಳೆಗೆ 2 ಲಕ್ಷ ಗಡಿ ದಾಟಿತು. ಜೈಲಿನಲ್ಲಿರುವ ಖೈದಿಗಳ ಪಾಲಿನ ಹೋರಾಟದ ಜೊತೆಗೆ ಇತರ ಹೋರಾಟಗಳಿಗೂ ಅಮ್ನೆಸ್ಟಿ ಕೈ ಹಾಕಿತು.

1976ರಲ್ಲಿ ಬ್ರಿಟಿಷ್ ಅಮ್ನೆಸ್ಟಿ ಘಟಕ ನಾಟಕ, ಸಂಗೀತ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ದೊಡ್ಡ ಮೊತ್ತದ ಹಣ ಸಂಗ್ರಹಿಸುವ ಕೆಲಸಕ್ಕೆ ಮುಂದಾಯಿತು. ಭರಪೂರ ನೆರವೂ ಹರಿದು ಬಂತು. ಕೈದಿಗಳ ಹಕ್ಕುಗಳ ಪರವಾದ ಹೊರಾಟಕ್ಕೇ ಮುಂದಿನ ವರ್ಷವೇ ನೊಬೆಲ್ ಪ್ರಶಸ್ತಿಯೂ ಅಮ್ನೆಷ್ಟಿ ಪಾಲಾಯಿತು.

1980ರ ಹೊತ್ತಿಗೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ವಿರುದ್ಧ ಸರಕಾರಗಳು ಅಪಸ್ರ ಎತ್ತಲು ಆರಂಭಿಸಿದವು. ರಷ್ಯಾ, ಮೊರಾಕ್ಕೋ, ಅರ್ಜೆಂಟೀನಾ ಸರಕಾರಗಳು ಅಮ್ನೆಸ್ಟಿ ಸಂಸ್ಥೆಯನ್ನು ಟೀಕಿಸಲು ಆರಂಭಿಸಿದವು. 1995ರಲ್ಲಿ ಸಂಸ್ಥೆಯ ಕಾರ್ಯಕರ್ತರ ಸಂಖ್ಯೆ 70 ಲಕ್ಷ ದಾಟಿತು. ಅವತ್ತಿಗೆ ಅಮ್ನೆಸ್ಟಿ 150 ದೇಶಗಳಲ್ಲಿ ತನ್ನ ಕಾರ್ಯಕರ್ತರನ್ನು ಹೊಂದಿತ್ತು.

ಮುಂದೆ ಅಮ್ನೆಸ್ಟಿ ಕಾರ್ಯ ಚಟುವಟಿಕೆಗಳಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾದವು. ಜಾಗತೀಕರಣದಿಂದಾದ ಉಂಟಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಕ್ಕುಗಳ ದಮನದ ಬಗ್ಗೆ ಹೋರಾಟ ಶುರುವಿಟ್ಟುಕೊಂಡಿತು. ‘ಶೆಲ್ ಆಯಿಲ್ ಕಂಪೆನಿ’ ಸೇರಿದಂತೆ ಹಲವು ಬಹು ರಾಷ್ಟ್ರೀಯ ದೈತ್ಯ ಕಂಪೆನಿಗಳನ್ನು ಎದುರು ಹಾಕಿಕೊಂಡು ತನ್ನ ಮಾನವ ಹಕ್ಕುಗಳ ಪರವಾದ ಹೋರಾಟವನ್ನು ಮುಂದುವರಿಸಿತು. ನಿರಾಶ್ರಿತರ ಪರವಾಗಿ ಬೀದಿಗಿಳಿಯಿತು.

ಮಹಿಳೆಯರ ಹಕ್ಕುಗಳ ಪರ ಹೋರಾಟದಲ್ಲಿ ಅತ್ಯಗತ್ಯ ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಅವಕಾಶ ನೀಡಬೇಕು ಎಂಬ ಆಂದೋಲನ ಹಮ್ಮಿಕೊಂಡಿತು. ಮರಣ ದಂಡನೆಯನ್ನು ರದ್ದು ಪಡಿಸಬೇಕು ಎಂಬುದು ಅಮ್ನೆಸ್ಟಿಯ ಬಹುಕಾಲದ ಬೇಡಿಕೆಗಳಲ್ಲಿ ಒಂದು. 2011ರಲ್ಲಿ ಜಾರ್ಜ್ ಡಬ್ಲ್ಯೂ ಬುಷ್ ರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಸಂಸ್ಥೆ ಒತ್ತಾಯಿಸಿದ್ದು ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು.

ಸದ್ಯ ಭಾರತದವರೇ ಆದ ಸಲಿಲ್ ಶೆಟ್ಟಿ ಅಮ್ನೆಷ್ಟಿಯ ಅಂತರಾಷ್ಟ್ರೀಯ ನಿರ್ದೇಶಕರಾಗಿದ್ದಾರೆ. ಜಗತ್ತಿನಾದ್ಯಂತ ಹರಡಿಕೊಂಡಿರುವ ತನ್ನ ಸದಸ್ಯರ ಮೂಲಕವೇ ಅದು ತನಗೆ ಬೇಕಾದ ಹೆಚ್ಚಿನ ಹಣವನ್ನು ಸಂಗ್ರಹಿಸುತ್ತದೆ. ಅಮೆರಿಕಾ, ಯೂರೋಪಿಯನ್ ಕಮಿಷನ್, ಬ್ರಿಟನ್ ಸೇರಿದಂತೆ ಕೆಲವು ಸರಕಾರಿ ಸಂಸ್ಥೆಗಳೂ ಇದಕ್ಕೆ ಹಣ ನೀಡುತ್ತವೆ. ಭಾರತದಲ್ಲೇ ಅಮ್ನೆಸ್ಟಿ 64,599 ಸದಸ್ಯರನ್ನು ಹೊಂದಿದೆ.

“ಕತ್ತಲೆಗಾಗಿ ಕೊರಗುವುದಕ್ಕಿಂತ; ಹಣತೆ ಹಚ್ಚುವುದು ಲೇಸು,” ಎಂಬುದು ಅಮ್ನೆಷ್ಟಿಯ ಘೋಷ ವಾಕ್ಯ.