samachara
www.samachara.com
ದೂರವಾಣಿ ಧ್ವನಿ ಮುದ್ರಿಕೆಗಳ ಜತೆ ಅನುಪಮ ಪ್ರತ್ಯಕ್ಷ: ಸಿದ್ಧತೆ ಮಾಡಿಕೊಂಡೇ ಅಖಾಡಕ್ಕಿಳಿದರಾ ಮಾಜಿ ಅಧಿಕಾರಿ?
ಸುದ್ದಿ ಸಾಗರ

ದೂರವಾಣಿ ಧ್ವನಿ ಮುದ್ರಿಕೆಗಳ ಜತೆ ಅನುಪಮ ಪ್ರತ್ಯಕ್ಷ: ಸಿದ್ಧತೆ ಮಾಡಿಕೊಂಡೇ ಅಖಾಡಕ್ಕಿಳಿದರಾ ಮಾಜಿ ಅಧಿಕಾರಿ?

ಹನಿ ಉಜಿರೆ

ಒಂದಷ್ಟು

ದಿನ ಸದ್ದಿಲ್ಲದೆ ಮೌನವಾಗಿದ್ದ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಮತ್ತೊಮ್ಮೆ ಸುದ್ದಿಕೇಂದ್ರಕ್ಕೆ ಬಂದಿದ್ದಾರೆ.

ಈ ಬಾರಿ ದಾಖಲೆ ಸಮೇತರಾಗಿ ಅಖಾಡಕ್ಕೆ ಇಳಿದಂತೆ ಕಾಣುತ್ತಿರುವ ಅವರು ಆಡಳಿತಾಂಗದಲ್ಲಿ ಒಂದಷ್ಟು ಸಂಚಲನವನ್ನು ಹುಟ್ಟು ಹಾಕುವ ಸಾಧ್ಯತೆಗಳಿವೆ.

ಕೂಡ್ಲಿಗಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಾ ಇದ್ದ ಅನುಪಮಾ ಶೆಣೈರನ್ನುಕಳೆದ ಜನವರಿಯಲ್ಲಿ ಇದ್ದಕ್ಕಿದ್ದಂತೆ ಎತ್ತಂಗಡಿ ಮಾಡಲಾಗಿತ್ತು; ಇದು ಭಾರೀ ಸದ್ದು ಮಾಡಿತ್ತು. ಸಾರ್ವಜನಿಕರಿಂದಲೂ ತೀವ್ರ ಆಕ್ಷೇಪ ಕೇಳಿ ಬಂದಿತ್ತು. ಅನುಪಮಾ ಶೆಣೈ 'ಎತ್ತಂಗಡಿ' ವಿರೋಧಿಸಿ ಪ್ರತಿಭಟನೆಗಳು ನಡೆದಿದ್ದವು. ಈ ವೇಳೆ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಪರಮೇಶ್ವರ್ ನಾಯ್ಕ್ ಅವರು ಅನುಪಮಾ ಶೆಣೈ ವರ್ಗಾವಣೆ ಹಿಂದಿದ್ದಾರೆ ಎಂಬುದು ದೊಡ್ಡ ಸುದ್ದಿಯಾಗಿತ್ತು. ಆ ಸಮಯದಲ್ಲಿ ಮುಗುಮ್ಮಾಗಿಯೇ ಉಳಿದಿದ್ದ ಅನುಪಮ, ಕೊನೆಗೊಮ್ಮೆ ಭಾರಿ 'ಹೈ ಡ್ರಾಮಾ'ದ ನಂತರ ರಾಜೀನಾಮೆ ನೀಡಿ ಇಲಾಖೆಯಿಂದ ಹೊರಬಂದಿದ್ದರು. ಇದಾಗಿ ಎರಡು ತಿಂಗಳು ಕಳೆಯುವುದರೊಳಗಾಗಿ, ಮತ್ತೆ ಅನುಪಮ ಸುದ್ದಿಯಾಗಿದ್ದಾರೆ. ಅವರ ವರ್ಗಾವಣೆ ಸಮಯದಲ್ಲಿ ನಡೆಸಿದ ಐದು ದೂರವಾಣಿ ಕರೆಗಳ ಧ್ವನಿ ಮುದ್ರಿಕೆಯನ್ನು ಅವರು ರಾಷ್ಟ್ರೀಯ ವಾಹಿನಿ 'ಟೌಮ್ಸ್ ನೌ' ಮೂಲಕ ಜನರ ಮುಂದಿಟ್ಟಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಹಿರಿಯ ಅಧಿಕಾರಿಗಳ ಕಿರುಕುಳ, ಪೊಲೀಸರ ಮುಷ್ಕರ, ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಹೀಗೆ ನಿರಂತರ ಘಟನಾವಳಿಗಳ ಪಟ್ಟಿಗೆ ಹೊಸ ಸೇರ್ಪಡೆ 'ಅನುಪಮ ಸೀಡಿ'.

24 ಗಂಟೆಯೊಳಗೆ ವರ್ಗಾವಣೆ:

ಜನವರಿ 18, 2016. ಇಳಿ ಸಂಜೆ ಸುಮಾರು 6ರ ಸಮಯ.  ಅನುಪಮಾ ಶೆಣೈ ಎಂದಿನಂತೇ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದರು. ಅವರ ಮೊಬೈಲ್ಗೆ ಅತ್ತ ಕಡೆಯೊಂದ ಕರೆಯೊಂದು ಬಂತು. ಸಹಜವಾಗಿಯೇ ಕರೆಯನ್ನು ಸ್ವೀಕರಿಸಿದ ಅನುಪಮಾ ಶೆಣೈ ಮಾತನಾಡಲು ಆರಂಭಿಸಿದರು. ಬಳ್ಳಾರಿ ಉಸ್ತುವಾರ ಸಚಿವ ಪರಮೇಶ್ವರ್ ನಾಯ್ಕ ಅವರ ಆಪ್ತ ಕಾರ್ಯದರ್ಶಿ, "ಸಾಹೇಬ್ರು ಮಾತಾಡ್ಬೇಕಂತೆ." ಅಂತ ಸಚಿವ ಪರಮೇಶ್ವರ್ ನಾಯ್ಕ್ ಅವರಿಗೆ ಫೋನ್ ವರ್ಗಯಿಸಿದರು. ಬಳಿಕ ಅತ್ತ ಕಡೆಯಿಂದ ಉತ್ತರವೇ ಇಲ್ಲ. ಸುಮಾರು ಮೂವತ್ತು ಸೆಕಂಡುಗಳ ಕಾಲ ಹಾಗೇ ಸಚಿವರ ಮಾತಿಗಾಗಿ ಕಾದ ಅನುಪಮಾ ಬಳಿಕ ಕರೆಯನ್ನು ಕಟ್ ಮಾಡಿ ತಮ್ಮ ಕಾರ್ಯವನ್ನು ಮುಂದುವರೆಸಿದರು.

ಈ ಮಧ್ಯೆ, ಅನುಪಮಾ ಶೆಣೈ ಸಹೋದ್ಯೋಗಿಯೊಂದಿಗೆ ದೂರವಾಣಿ ಕರೆಯಲ್ಲಿ ನಿರತರಾಗಿದ್ದರು. ಅದೇ ವೇಳೆಗೆ ಮತ್ತೆ ಕರೆ ಮಾಡಿದ ಸಚಿವರು ತಮ್ಮ ಮಾತಿಗಾಗಿ ಕಾಯದೇ ಇದ್ದ ಅನುಪಮಾ ಶೆಣೈ ವಿರುದ್ಧ ಕಿಡಿಯಾದರು. ಒಂದು ನಿಮಿಷ ಫೋನ್ ಹೋಲ್ಡ್ ಮಾಡುವಷ್ಟು ತಾಳ್ಮೆ ಇಲ್ವಾ ಎಂದು ದರ್ಪದ ಮಾತುಗಳನ್ನಾಡಿದರು. ಸಚಿವರ ಮಾತಿಗೆ ಅಷ್ಟೇ ಖಾರವಾಗಿ ಪ್ರತಿಕ್ರಿಯಿಸಿದ ಅನುಪಮಾ ಶೆಣೈ, "ಇಲ್ಲ ತಾನು ತನ್ನ ಕೆಲಸದಲ್ಲಿ ಬ್ಯುಸಿ ಇದ್ದೆ,'' ಎಂದು ಉತ್ತರಿಸಿದ್ದರು.

ಕಾಲಿಂಗ್ ಕಂಟ್ರೋಲ್ ರೂಂ:

ಇದಾಗಿ ಹತ್ತೇ ಹತ್ತು ನಿಮಿಷ. ಅನುಪಮಾ ಶೆಣೈಗೆ ಕಂಟ್ರೋಲ್ ರೂಂ ನಿಂದ ಕರೆಯೊಂದು ಬಂದಿತ್ತು. ಐಜಿಪಿಯೊಂದಿಗೆ ಮಾತನಾಡುವಂತೆ ಸೂಚನೆಯನ್ನು ನೀಡಲಾಗಿತ್ತು.

ಅದಾಗಲೇ ಸಚಿವ ಪರಮೇಶ್ವರ್ ನಾಯ್ಕ್ ಅಧಿಕಾರಿಯಿಂದ ಅವಮಾನವಾಗಿದೆ ಎಂದು ಭಾವಿಸಿಕೊಂಡಾಗಿತ್ತು. ಅದಕ್ಕೆ ಪ್ರತೀಕಾರವನ್ನು ತೆಗೆದುಕೊಳ್ಳಲು ಕಾರ್ಯಪ್ರವೃತ್ತರಾಗಿದ್ದರು. ಇದನ್ನು ಅರಿತ ಐಜಿಪಿ, ಶಣೈಗೆ "ಸಚಿವರ ಜತೆ ಮಾತನಾಡಿ ಸಮಾಧಾನಪಡಿಸಿ. ನಡೆದಿರುವುದನ್ನು ಇಲ್ಲಿಗೆ ಇತ್ಯರ್ಥಪಡಿಸಿಕೊಳ್ಳಿ,'' ಎಂಬಂತೆ ಮಾತನಾಡಿದರು. ಹಿರಿಯ ಅಧಿಕಾರಿಗೆ ಕೊಡ ಬೇಕಾದ ವೃತ್ತಿ ಗೌರವವನ್ನು ನೀಡುತ್ತಲೇ ಅನುಪಮಾ ಎಲ್ಲವನ್ನೂ ಕೇಳಿಸಿಕೊಂಡು, ಪೂರಕವಾಗಿಯೇ ಪ್ರತಿಕ್ರಿಯೆಯನ್ನು ನೀಡಿದರು. ಆದರೆ, "ತನ್ನದೇನೂ ತಪ್ಪಿಲ್ಲವಾದ್ದರಿಂದ ಸಚಿವರಿಗೆ ತಾನು ಮತ್ತೆ ಕರೆ ಮಾಡಲು ಹೋಗಿಲ್ಲ,'' ಎನ್ನುತ್ತಾರೆ ಅನುಪಮಾ.

ವರ್ಗಾವಣೆಯ ‘ಬಹುಮಾನ’:

ಮರು ದಿನ ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದ ಅನುಪಮಾ ಶೆಣೈ ಅವರಿಗೆ ಡಿ.ಜಿ ಕಛೇರಿಯಿಂದ ಕರೆ ಬಂದತ್ತು. ಅತ್ತ ಕರೆ ಮಾಡಿದ್ದ ಡಿಜಿಪಿ ಮುಂದೆ ಎಲ್ಲಿ ಪೋಸ್ಟಿಂಗ್ ಬೇಕು ಎಂಬುದನ್ನು ಕೇಳಿದ್ದರು. ಹಿಂದಿನ ದಿನದ ಘಟನೆಯ ಅರಿವಿದ್ದ ಅನುಪಮಾ ಶೆಣೈ ಅವರಿಗೆ ಪರಿಸ್ಥಿತಿ ಅರ್ಥೈಸುಕೊಳ್ಳಲು ಹೆಚ್ಚಿನ ಸಮಯ ಬೇಕಾಗಿರಲಿಲ್ಲ. ಹೀಗಾಗಿ ‘ಶಿಕ್ಷೆಯ ವರ್ಗಾವಣೆ’ಯಾ ಎಂದು ಕೇಳಿದ್ದರು. ಅದಕ್ಕೆ ಇಲ್ಲ ಇದು "ಬಹುಮಾನದ ವರ್ಗಾವಣೆ, ಹಾಗಾಗಿಯೆ ನಿಮ್ಮಲ್ಲಿಯೇ ಕೇಳುತ್ತಿರುವುದು,'' ಎಂದು ಉತ್ತರಿಸಿದ್ದರು ಡಿಜಿಪಿ.

ಹೀಗೆ, ಅನುಪಮ ವರ್ಗಾವಣೆ ಬೆನ್ನಲ್ಲೇ ಭಾರಿ ಸುದ್ದಿಯಾಗಿತ್ತು. ಅಂದು ಸಚಿವರಾಗಿದ್ದ ಪರಮೇಶ್ವರ ನಾಯ್ಕ ಮಾಧ್ಯಮಗಳಿಗೆ ಮನಬಂದಂತೆ ಹೇಳಿಕೆ ನೀಡಿದರು. ಮುಂದೆ, ಮತ್ತೊಂದು ಪ್ರಕರಣದಲ್ಲಿ ಅನುಪಮ ಇದೇ ರೀತಿಯ ರಾಜಕೀಯ ಒತ್ತಡವನ್ನು ದಾಟಿ, ಕೊನೆಗೆ ರಾಜೀನಾಮೆ ನೀಡಿ ಹೊರಬಂದರು.

ಮುಂದೆ ಅವರು ಸಂಘಪರಿವಾರದ ನಾಯಕರನ್ನು, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದರು. ಆ ಮೂಲಕ ಅನುಪಮ ರಾಜಕೀಯಕ್ಕೆ ಬರಬಹುದು ಎಂಬ ಕುರಿತು ಗುಲ್ಲೆದ್ದಿತ್ತು. ಅದಕ್ಕೆಲ್ಲಾ ತೆರೆ ಎಳೆಯುವವರಂತೆ ಎರಡು ತಿಂಗಳು ಕಾಲ ತೆರೆಮರೆಯಲ್ಲಿಯೇ ಭೂಮಿಕೆ ಸಿದ್ಧ ಮಾಡಿಕೊಂಡ ಅವರು 'ಐದು ದೂರವಾಣಿ ಕರೆ'ಗಳ ಸೀಡಿಯನ್ನು ಇಟ್ಟುಕೊಂಡು ಮತ್ತೆ ಅಖಾಡಕ್ಕೆ ಧುಮುಕಿದ್ದಾರೆ. ಸಹಜವಾಗಿಯೇ, ಅವರ ಮುಂದಿನ ನಡೆಗಳು ಕುತೂಹಲ ಮೂಡಿಸಿವೆ.