samachara
www.samachara.com
'ಮೇಲ್ದರ್ಜೆ' ಗ್ರಾಹಕರಿಗಾಗಿ ಪ್ರತ್ಯೇಕ ಸೂರು: ಜಾತಿ ಆಧಾರಿತ 'ವೈದಿಕ್ ವಿಲೇಜ್'ಗೆ ವಿರೋಧ!
ಸುದ್ದಿ ಸಾಗರ

'ಮೇಲ್ದರ್ಜೆ' ಗ್ರಾಹಕರಿಗಾಗಿ ಪ್ರತ್ಯೇಕ ಸೂರು: ಜಾತಿ ಆಧಾರಿತ 'ವೈದಿಕ್ ವಿಲೇಜ್'ಗೆ ವಿರೋಧ!

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಜಾತಿ

ಆಧಾರದ ಮೇಲೆ ತಲೆ ಮೇಲೊಂದು ಸೂರು ಕಟ್ಟಿಸಿಕೊಡುವ ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಯೋಜನೆಯೊಂದು ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರಿನ ಚಿಕ್ಕಬಳ್ಳಾಪುರದಲ್ಲಿ ಬ್ರಾಹ್ಮಣರಿಗಾಗಿಯೇ ಪ್ರತ್ಯೇಕ ಟೌನ್‍ಶಿಪ್ ನಿರ್ಮಾಣ ಯೋಜನೆ ಬಗ್ಗೆ ವಿರೋಧ ವ್ಯಕ್ತವಾಗಿದೆ. ನಗರೀಕರಣದ ಭರಾಟೆಯಲ್ಲಿ ಜಾತಿ ಆಧಾರಿತ ಟೌನ್ಶಿಪ್ ಅಪಾಯಕಾರಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಏನಿದು ಯೋಜನೆ?:

ಬ್ರಾಹ್ಮಣ ಸಮುದಾಯದ ಸಂಪ್ರದಾಯ, ವಾಸ್ತುಶಿಲ್ಪ, ಜೀವನ ಶೈಲಿ, ಸಂಸ್ಕೃತಿಯನ್ನು ಪುನರ್ ಸ್ಥಾಪಿಸುವುದೇ ನಮ್ಮ ಉದ್ದೇಶ ಎಂದು ಹೇಳಿಕೊಂಡು ‘ಸನಾತನ ಧರ್ಮ ಪರಿರಕ್ಷಣಾ ಟ್ರಸ್ಟ್’ ‘ಶಂಕರ್ ಅಗ್ರಹಾರಂ- ದಿ ವೈದಿಕ್ ವಿಲೇಜ್’ ಹೆಸರಿನಲ್ಲಿ ಪ್ರತ್ಯೇಕ ಟೌನ್‍ಶಿಪ್ ನಿರ್ಮಿಸುತ್ತಿದೆ.

‘ದಿ ವೇದಿಕ್ ವಿಲೇಜ್’ ಹೆಸರಿನ ಈ ಟೌನ್‍ಶಿಪ್ ಯೋಜನೆಯನ್ನು 2013ರಲ್ಲಿ ಆರಂಭಿಸಲಾಗಿತ್ತು. ಈ ಯೋಜನೆ ಆರಂಭವಾಗುತ್ತಿದ್ದಂತೆ, ಇಲ್ಲಿನ ನಿಯಮಗಳನ್ನು ನೋಡಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳು ಚರ್ಚೆಯನ್ನು ಕೈಗೆತ್ತಿಕೊಂಡಿದ್ದವು. ಭಾರತದಲ್ಲಿ ಉಳಿದುಕೊಂಡಿರುವ ಅಸಹ್ಯಕರ ‘ಪ್ರತ್ಯೇಕ ಬಡಾವಣೆ’ ಮತ್ತು ‘ವಸತಿ ವರ್ಣಭೇದ’ದ ಬಗ್ಗೆ ಅವು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದವು.

ಸದ್ಯ ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರ ತಂಡವೊಂದು ರಾಜ್ಯ ಸರಕಾರ ಮತ್ತು ಮಾನವ ಹಕ್ಕು ಆಯೋಗಕ್ಕೆ ‘ಯೋಜನೆಯಲ್ಲಿ ಜಾತಿ ತಾರತಮ್ಯ’ ಎಸಗಲಾಗುತ್ತಿರುವುದರಿಂದ ಯೋಜನೆಯನ್ನು ತಕ್ಷಣ ನಿಲ್ಲಿಸಿವಂತೆ ಕೋರಿ ಪತ್ರ ಬರೆದಿದೆ.

ಮೂರು ವರ್ಷಗಳ ಹಿಂದೆ ಆರಂಭವಾದ ವೈದಿಕ ಗ್ರಾಮದ ಯೋಜನೆ ಈಗ ಮುಕ್ತಾಯ ಹಂತಕ್ಕೆ ಬಂದಿದ್ದು, ಕರ್ನಾಟಕ ಸರಕಾರದ ನಗರ ಯೋಜನೆ ಇಲಾಖೆಯಿಂದ ಅಚ್ಚರಿಯ ರೀತಿಯಲ್ಲಿ ಇದು ಮಾನ್ಯತೆಯನ್ನೂ ಪಡೆದುಕೊಂಡಿದೆ. ಸದ್ಯ "ಯೋಜನೆಯ 1800 ಸೈಟುಗಳಲ್ಲಿ 900 ಸೈಟುಗಳು ಮಾರಾಟವಾಗಿವೆ,'' ಎಂದು ಯೋಜನೆ ನಿರ್ದೇಶಕರೇ ಹೇಳುತ್ತಿದ್ದಾರೆ.

ಏಪ್ರಿಲಿನಿಂದ ಸೈಟ್ ಬುಕ್ಕಿಂಗ್ ಕೂಡಾ ಆರಂಭವಾಗಿದೆ. ಬ್ರಾಹ್ಮಣ ಸಮುದಾಯದ ಬೆಂಬಲದೊಂದಿಗೆ ಸನಾತನ ಧರ್ಮ ಪರಿರಕ್ಷಣಾ ಟ್ರಸ್ಟ್ ಈ ಯೋಜನೆಯಲ್ಲಿ ಹಣ ಹೂಡಿದೆ. ‘ಬ್ರಾಹ್ಮಣ ಸಮುದಾಯದ ಜೀವನಮಟ್ಟ ಸುಧಾರಿಸುವ ಮೂಲಕ ಜನಾಂಗದ ಭವಿಷ್ಯದ ತಲೆಮಾರಿಗೆ ನೆರವಾಗುವ ಉದ್ದೇಶದಲ್ಲಿ ನಂಬಿಕೆ ಹೊಂದಿದ್ದೇವೆ' ಎಂದು ಟ್ರಸ್ಟ್ ಹೇಳಿಕೊಂಡಿದೆ.

ಮೇಲ್ದರ್ಜೆ ಬ್ರಾಂಡ್:

ಬ್ರಾಹ್ಮಣರಲ್ಲದವರಿಗೆ ಟೌನ್‍ಶಿಪ್ನಲ್ಲಿ ಅವಕಾಶವಿಲ್ಲದ್ದು ಒಂದು ಕಡೆಯಾದರೆ,

ನಲ್ಲಿ ಸಂಸ್ಥೆ ಪದೇ ಪದೇ ಇದು ಮೇಲ್ದರ್ಜೆಯವರಿಗೆ ಮಾತ್ರ ಎಂದು ಒತ್ತಿ ಒತ್ತಿ ಹೇಳುತ್ತಿದೆ. ಇವತ್ತಿನ ಸಮಾಜದಲ್ಲೂ ‘ಮೇಲ್ವರ್ಗ, ಮೇಲ್ದರ್ಜೆ’ ಎಂಬ ಕಲ್ಪನೆಗಳನ್ನು ಸಂಸ್ಥೆ ಉದ್ದೇಶ ಪೂರ್ವಕವಾಗಿ ಪ್ರಸ್ತಾಪಿಸುತ್ತಿರುವುದಕ್ಕೂ ಆಕ್ಷೇಪ ವ್ಯಕ್ತವಾಗಿದೆ.

ಇಲ್ಲಿನ ಸೈಟ್ ಪಡೆದುಕೊಳ್ಳಬೇಕಾದವರು ವಿವರವಾದ ಅರ್ಜಿಯನ್ನು ಭರ್ತಿ ಮಾಡಬೇಕು. ಇಲ್ಲಿ ಕುಲದ ಹೆಸರಿನ ಜತೆ ಗೋತ್ರವನ್ನೂ ಹೆಸರಿಸಬೇಕು.

'ಮೇಲ್ದರ್ಜೆ' ಗ್ರಾಹಕರಿಗಾಗಿ ಪ್ರತ್ಯೇಕ ಸೂರು: ಜಾತಿ ಆಧಾರಿತ 'ವೈದಿಕ್ ವಿಲೇಜ್'ಗೆ ವಿರೋಧ!

“ಬ್ರಾಹ್ಮಣರಲ್ಲದವರಿಗೂ ಗೆಳೆಯರು, ಸಂಬಂಧಿಕರಾಗಿ (ಟೌನ್‍ಶಿಪ್ ಒಳಗೆ) ಬರಲು ಅವಕಾಶಗಳಿವೆ. ಬ್ರಾಹ್ಮಣರಲ್ಲದವರು ಸಿಬ್ಬಂದಿಗಳಾಗಬಹುದು. ಸೈಟು ಖರೀದಿಸಲು ಮಾತ್ರ ಕುಟುಂಬದಲ್ಲಿ ಒಬ್ಬರು ಬ್ರಾಹ್ಮಣರಾಗಿರಲೇಬೇಕು,” ಎಂಬ ನಿಬಂಧನೆಯನ್ನು ಮಾರಾಟ ವಿಭಾಗದ ನಿತೇಶ್ ‘ದಿ ಕ್ವಿಂಟ್’ಗೆ ಪ್ರತಿಕ್ರಿಯೆ ರೂಪದಲ್ಲಿ ನೀಡಿದ್ದಾರೆ.

ಇಲ್ಲಿ ಸೈಟು ಖರೀದಿಸಲು ನಿಮಗೆ 11 ಕಾರಣಗಳಿವೆ ಎನ್ನುವ ವೆಬ್ಸೈಟ್ ಅನಗತ್ಯವಾಗಿ ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿಯ ಹೆಸರನ್ನೂ ಎಳೆದು ತಂದಿದೆ. ‘ಐಟಿ ಕ್ರಾಂತಿ ಆರಂಭಿಸಿದ

ಬ್ರಾಹ್ಮಣ

ನಾರಾಯಣ ಮೂರ್ತಿಯವರ ಹುಟ್ಟೂರು ಇದು, ಇಲ್ಲಿನ ಭೂಮಿಯನ್ನು ಸದಾವಕಾಶದ ಗಣಿಯಾಗಿ ಬಳಸಿಕೊಳ್ಳಿ,’ ಎಂದು ಅದು ಪ್ರಮೋಷನ್ ವಾಕ್ಯಗಳಲ್ಲಿ ಉಲ್ಲೇಖ ಮಾಡಿದೆ.


       ಕೆ.ವಿ.ಧನಂಜಯ್ ಬರೆದಿರುವ ಪತ್ರದ ಮೊದಲ ಪುಟ. <a href="https://www.scribd.com/document/320046009/Letter-written-by-KV-Dhanajay-requesting-to-stall-the-project#from_embed" shape="rect">ಪತ್ರದ ಪೂರ್ಣ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ</a>.
ಕೆ.ವಿ.ಧನಂಜಯ್ ಬರೆದಿರುವ ಪತ್ರದ ಮೊದಲ ಪುಟ. ಪತ್ರದ ಪೂರ್ಣ ಪಾಠಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

ಇದರ ವಿರುದ್ಧ ಇದೀಗ ಬೆಂಗಳೂರು ಮೂಲದ ವಕೀಲ ಕೆ.ವಿ ಧನಂಜಯ್ ಮೊದಲ ಆಕ್ಷೇಪ ಎತ್ತಿದ್ದು, ತಾರತಮ್ಯ ಹೋಗಲಾಡಿಸಲು ರಾಜ್ಯ ಸರಕಾರ, ಮಾನವ ಹಕ್ಕುಗಳ ಆಯೋಗ, ದೆಹಲಿಯ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಗೃಹ ಇಲಾಖೆ ವಿಷಯವನ್ನು ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಮಂತ್ರಾಲಯಕ್ಕೆ ಹಸ್ತಾಂತರಿಸಿದ್ದು, ಮುಂದಿನ ತೀರ್ಮಾನ ಇನ್ನಷ್ಟೇ ಹೊರಬರಬೇಕಾಗಿದೆ.

ಈ ಯೋಜನೆಗೆ ಬಿಜೆಪಿ ಅಧಿಕಾರವಧಿಯಲ್ಲಿ ಅನುಮತಿ ನೀಡಲಾಗಿದೆ. ಜಾತ್ಯಾತೀತ ಎಂದು ಗುರುತಿಸಿಕೊಂಡಿರುವ, ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಈ ಯೋಜನೆ ಮುನ್ನಡೆದುಕೊಂಡು ಬಂದಿದೆ.

ಇದು ಸಂಪೂರ್ಣವಾಗಿ ಕಾನೂನು ಬಾಹಿರ. ಈ ಟೌನ್‍ಶಿಪ್ ನಿರ್ಮಾಣವನ್ನು ನಿಲ್ಲಿಸುವಂತ ಇಚ್ಛಾಶಕ್ತಿ ಪ್ರದರ್ಶಿಸಲು ಹಿಂದಿನ ಸರಕಾರಕ್ಕೂ ಸಾಧ್ಯವಾಗಿಲ್ಲ, ಈಗಿನ ಸರಕಾರಕ್ಕೂ ಆಗುತ್ತಿಲ್ಲ. ಸರಕಾರಗಳು ಅಷ್ಟರಮಟ್ಟಿಗೆ ಅವಿವೇಕಿಗಳಾಗಿವೆ; ಇದು ದುರದೃಷ್ಟಕರ. ಒಂದು ಜಾತಿಯವರು ಇನ್ನೊಂದು ಜಾತಿಯವರ ಉಪಯೋಗ ಪಡೆದುಕೊಳ್ಳುವುದಿಲ್ಲ ಎಂದರೆ ಈ ಸಮಾಜದಲ್ಲಿ ಬದುಕಲು ಸಾಧ್ಯವೇ ಇಲ್ಲ. ಇವರು ಈ ರೀತಿ ಮಾಡುತ್ತಿದ್ದಾರೆ ಎಂದು ಉಳಿದವರೂ ಈ ರೀತಿ ಗೋಡೆ ಕಟ್ಟಿಕೊಂಡು, ನಮ್ಮ ಸಮಾಜ ನಮಗೆ ಮಾತ್ರ ಸೀಮಿತವಾಗಿರಲಿ ಎಂದು ನಿರ್ಬಂಧ ಹೇರಿದರೆ ಮುಂದೆ ಭಾರತದ ಕತೆ ಏನಾಗುತ್ತೆ? ಟೌನ್‍ಶಿಪ್ ಕಟ್ಟಲು ಹೊರಟವರೇನೋ ವ್ಯವಹಾರಸ್ಥರು, ಅವರಿಗೆ ಪರಿಜ್ಞಾನ ಇಲ್ಲ ಎಂದುಕೊಳ್ಳೋಣ. ಆದರೆ ಇದಕ್ಕೆ ಅನುಮತಿ ನೀಡಿದ ಸರಕಾರಕ್ಕೆ ಆ ಪರಿಜ್ಞಾನ ಬೇಕಲ್ವಾ? ಇಷ್ಟು ರಾಜರೋಷವಾಗಿ ಇದೆಲ್ಲಾ ನಡೆಸುತ್ತಿರುವುದು ನಾಚಿಗೇಡಿನ ಸಂಗತಿ. ಹಾಗಂತ ಇಲ್ಲಿ ತಪ್ಪು ಎಂದು ಹೇಳಲು ಯಾವುದೇ ವರ್ಗವನ್ನು ಟೀಕಿಸುವ ಅಗತ್ಯವೂ ಇಲ್ಲ. ಯಾರೋ ನಾಲ್ಕು ಜನ ಮುಠ್ಠಾಳರು ಮಾಡಿದ ಮಾತ್ರಕ್ಕೆ ಆ ವರ್ಗಕ್ಕೆ ಇದು ಅಂಟಿಕೊಳ್ಳುವುದಿಲ್ಲ. ಇಲ್ಲಿ ಯಾವುದೇ ಸಮುದಾಯವನ್ನು ದೂಷಿಸುವ ಅಗತ್ಯ ಇಲ್ಲ. ಬ್ರಾಹ್ಮಣರಿಗಾಗಿ ಮೀಸಲಾಗಿಟ್ಟರು ಎಂಬುದಕ್ಕೆ ವಿರೋಧ ಮಾಡುತ್ತಿಲ್ಲ. ಒಂದು ಪಂಗಡಕ್ಕಾಗಿ ಮೀಸಲಿಟ್ಟರು ಎಂಬ ಕಾರಣಕ್ಕಾಗಿಯಷ್ಟೇ ವಿರೋಧ. ಇದೇ ಜಾಗದಲ್ಲಿ ಬೇರೆ ವರ್ಗ ಇದ್ದಿದ್ದರೂ ಈ ವಿರೋಧದಲ್ಲಿ ಎಳ್ಳಷ್ಟೂ ಬದಲಾವಣೆಯಾಗುತ್ತಿರಲಿಲ್ಲ. ದಲಿತರಿಗಾಗಿ ಇದೇ ರೀತಿ ಮಾಡುತ್ತಿದ್ದರೂ ತಪ್ಪೇ. ಇದು ಸಮಾಜವನ್ನು ಒಡೆದು ಹಾಕುವ ಪ್ರಯತ್ನ. ಇಲ್ಲಿ ಸರಕಾರಗಳ ವೈಫಲ್ಯ ಎದ್ದು ತೋರುತ್ತದೆ. ಸಮಾಜಿಕ ಕಳಕಳಿ ಕಿಂಚಿತ್ತೂ ಇಲ್ಲದ ಸರಕಾರ ಮಾತ್ರ ಇದಕ್ಕೆ ಅನುಮತಿ ನೀಡುತ್ತದೆ. ಈ ಪರಿಪಾಠವನ್ನ ಮೊಳಕೆಯಲ್ಲೇ ಚಿವುಟಬೇಕು. –ಕೆ.ವಿ.ಧನಂಜಯ್, ದೂರುದಾರ

ಹಾಗಂತ ದೇಶದಲ್ಲಿ ಈ ರೀತಿಯ ಪ್ರತ್ಯೇಕ ನಿವೇಶನಗಳ ಪರಿಪಾಠ ಇತ್ತೀಚೆಗೆ ಕಾಣಸಿಗುತ್ತದೆ. 2002ರ ಗುಜರಾತ್ ಗಲಭೆಯ ನಂತರ ದೆಹಲಿಯಲ್ಲಿ ಮುಸ್ಲಿಮರಿಗಾಗಿ ಪ್ರತ್ಯೇಕ ಬಡಾವಣೆಗಳನ್ನು ನಿರ್ಮಿಸಿದರೆ, ದಲಿತರಿಗಾಗಿ ಅಹಮದಾಬಾದಿನಲ್ಲಿ ಇದೇ ರೀತಿ ಟೌನ್‍ಶಿಪ್ ತಲೆ ಎತ್ತಿದ್ದವು. ನಗರೀಕರಣ ಜಾತಿ ಜಾತಿ ನಡುವೆ ಗೋಡೆಗಳನ್ನು ಹೇಗೆ ಆಧುನಿಕ ಯುಗದಲ್ಲಿಯೂ ಕಟ್ಟಿ ನಿಲ್ಲಿಸುತ್ತದೆ ಎಂಬುದಕ್ಕೆ ಇದೊಂದು ಪ್ರಕರಣ ಉದಾಹರಣೆ.

ಚಿತ್ರ ಕೃಪೆ:

ದಿ ಕ್ವಿಂಟ್ (ಸಾಂದರ್ಭಿಕ ಚಿತ್ರ)