samachara
www.samachara.com
'ದಿ ಸ್ಟೋರಿ ಆಫ್ ಬೆಲ್ಜಿಯಂ ವೀಸಾ': ಮಳೆಯ ರಾತ್ರಿ ಮಾನವೀಯತೆ ಮೆರೆದ ಆ ಎರಡು ಗಂಟೆಗಳು!
ಸುದ್ದಿ ಸಾಗರ

'ದಿ ಸ್ಟೋರಿ ಆಫ್ ಬೆಲ್ಜಿಯಂ ವೀಸಾ': ಮಳೆಯ ರಾತ್ರಿ ಮಾನವೀಯತೆ ಮೆರೆದ ಆ ಎರಡು ಗಂಟೆಗಳು!

ಜುಲೈ 27,

ಸಂಜೆ 7 ಗಂಟೆ,

ಬೆಂಗಳೂರು...

'ಬಸ್ ಬಂದ್' ಹಿಂದಕ್ಕೆ ತೆಗೆದುಕೊಳ್ಳುವ ಕುರಿತು ಬೆಳಗ್ಗೆಯಿಂದ ಸರಕಾರ ನಡೆಸಿದ್ದ ಮಾತುಕತೆ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿತ್ತು. ಬೆಂಗಳೂರಿನಲ್ಲಿ ಧಾರಾಕಾರ ಮಳೆ ಶುರುವಾಗಿತ್ತು.

ಅದೇ ವೇಳೆಗೆ ರಾಜ್ಯದ ಮುಖ್ಯಮಂತ್ರಿ ಪುತ್ರ ರಾಕೇಶ್ ಸಿದ್ದರಾಮಯ್ಯ ಬೆಲ್ಜಿಯಂನ ಆಂಟ್ವೆರ್ಪ್ ನಗರದ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪ್ರೀತಿಯ ಮಗನನ್ನು ನೋಡಲು ಹೊರಟು ನಿಂತಿದ್ದರು. ಆದರೆ, ದೇಶದ ಗಡಿದಾಟಿ ಇನ್ನೊಂದು ದೇಶಕ್ಕೆ ಹೋಗುವುದು ಇವತ್ತಿನ ಜಾಗತಿಕರಣದ ದಿನಗಳಲ್ಲೂ ಅಷ್ಟು ಸುಲಭ ಮಾತೇನಲ್ಲ.

ಕೊನೆಯ ಕ್ಷಣದಲ್ಲಿ, ತಾಂತ್ರಿಕ ಮಿತಿಗಳನ್ನು ಮೀರಿ ಸಿದ್ದರಾಮಯ್ಯ ಅಂದುಕೊಂಡ ಹಾಗೆಯೇ ಜು. 28ರ ಬೆಳಗ್ಗಿನ ಜಾವ 2 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ಯಾರಿಸ್ ಕಡೆಗೆ ಪ್ರಯಾಣಿಸಿದರು. ಆದರೆ ಅದಕ್ಕೂ 5 ಗಂಟೆಗಳ ಮೊದಲು ಪಾಸ್ಪೋರ್ಟ್ ಹಾಗೂ ವೀಸಾಗಾಗಿ ಉನ್ನತ ಮಟ್ಟದಲ್ಲಿ ನಡೆದ ಕಸರತ್ತುಗಳು ಇನ್ನೂ ತೆರೆಮರೆಯಲ್ಲಿಯೇ ಇವೆ.

ವಿದೇಶಾಂಗ ಇಲಾಖೆ, ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ, ಫ್ಯಾನ್ಸ್ ರಾಯಭಾರಿ ಕಚೇರಿ ಹಾಗೂ ಮುಖ್ಯಮಂತ್ರಿ ಕಚೇರಿಗಳಲ್ಲಿ ಜು. 27ರ ಸಂಜೆ 7ರಿಂದ 9 ಗಂಟೆ ನಡುವೆ ನಡೆದ ಘಟನಾವಳಿಗಳನ್ನು 'ಸಮಾಚಾರ' ನಿಮ್ಮೆದುರಿಗೆ ಬಿಚ್ಚಿಡುತ್ತಿದೆ. ಇದು ಹಲವು ಕಚೇರಿಗಳ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಸಹಾಯಕರಿಂದ ಪಡೆದ ಮಾಹಿತಿಯ ನಿರೂಪಣೆ ಅಷ್ಟೆ.

ನಡೆದಿದ್ದು ಏನು?:

ಸಾಮಾನ್ಯವಾಗಿ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳಿಗೆ ಡಿಪ್ಲೊಮಾಟಿಕ್ ಪಾಸ್ಪೋರ್ಟ್ ನೀಡಲಾಗಿರುತ್ತದೆ. ಇದನ್ನು ಅಧಿಕಾರಿಗಳು ವಿದೇಶಗಳಿಗೆ ಕೆಲಸದ ನಿಮಿತ್ತ ಭೇಟಿ ವೇಳೆಯಲ್ಲಿ ಮಾತ್ರವೇ ಬಳಸಬೇಕು ಎಂಬ ಷರತ್ತನ್ನು ವಿಧಿಲಾಗಿರುತ್ತದೆ. ಈ ನಿಯಮ ಜನಪ್ರತಿನಿಧಿಗಳಿಗೆ ಅನ್ವಯವಾಗದಿದ್ದರೂ, ಡಿಪ್ಲೊಮಾಟಿಕ್ ಪಾಸ್ಪೋರ್ಟ್ ಅಡಿಯಲ್ಲಿ ವೈಯಕ್ತಿಕ ಕಾರಣಿಗಳಿಗಾಗಿ ವೀಸಾ ನೀಡುವುದಕ್ಕೆ ಕೆಲವು ದೇಶಗಳಲ್ಲಿ ನಿರ್ಬಂಧ ವಿಧಿಸಲಾಗಿದೆ. ಈ ಪಟ್ಟಿಯಲ್ಲಿ ಬೆಲ್ಜಿಯಂ ಕೂಡ ಇದೆ.

ಇದರ ಜತೆಗೆ, ಒಬ್ಬ ವ್ಯಕ್ತಿ ಎರಡೆರಡು ಅಧಿಕೃತ ಪಾಸ್ಪೋರ್ಟ್ಗಳನ್ನು ಹೊಂದುವ ಹಾಗಿಲ್ಲ ಎನ್ನುತ್ತದೆ ನಮ್ಮ ದೇಶದ ಕಾನೂನು. ಹೀಗಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಪ್ಲೊಮಾಟಿಕ್ ಪಾಸ್ಪೋರ್ಟ್ ಪಡೆದುಕೊಂಡ ಸಮಯದಲ್ಲಿಯೇ, ತಮ್ಮ ಸಾಮಾನ್ಯ ಪಾಸ್ಪೋರ್ಟ್ ಪ್ರತಿಯನ್ನು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ಹಿಂತಿರುಗಿಸಿದ್ದರು. ಅದಕ್ಕೆ ಪಡೆದಿದ್ದ ಹಿಂಬರಹವನ್ನು ಅವರು ಕಳೆದುಕೊಂಡಿದ್ದರು.

ಮಗನ ಅನಾರೋಗ್ಯ ವಿಚಾರಿಸಲು ವಿದೇಶಕ್ಕೆ ಹೊರಟು ನಿಂತ ಅವರಿಗೆ ಮೊದಲು ಎದುರಾಗಿದ್ದು ಪಾಸ್ಪೋರ್ಟ್ ಸಮಸ್ಯೆ. ಅವರ ಬಳಿ ಇದ್ದ ಡಿಪ್ಲೊಮಾಟಿಕ್ ಪಾಸ್ಪೋರ್ಟ್ಗೆ ಅಡಿಯಲ್ಲಿ ಮಗನ ಆರೋಗ್ಯ ವಿಚಾರಿಸಲು ವೀಸಾ ನೀಡಲು ಬಿಲ್ಜಿಯಂ ತಯಾರಿರಲಿಲ್ಲ. ಇಷ್ಟಕ್ಕೂ ಬೆಲ್ಜಿಯಂ ರಾಯಭಾರಿ ಕಚೇರಿ ಇರುವುದು ದಿಲ್ಲಿಯಲ್ಲಿ. ಇದೇ ವೇಳೆ ಸಾಮಾನ್ಯ ಪಾಸ್ಪೋರ್ಟ್ ಕೂಡ ಕೈಲಿರಲಿಲ್ಲ. ಹೀಗೊಂದು ಬಿಕ್ಕಟ್ಟು ಎದುರಾದಾಗ ಸಂಜೆ 7 ಗಂಟೆ ಸಮೀಪಿಸಿತ್ತು. ಮಳೆ ಆರಂಭವಾಗಿತ್ತು. ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಬಾಗಿಲು ಮುಚ್ಚಿತ್ತು. ಈ ಸಮಯದಲ್ಲಿ ಶುರುವಾಗಿದ್ದು ಹೊಸತಾಗಿ ಸಾಮಾನ್ಯ ಪಾಸ್ಪೋರ್ಟ್ ನೀಡಲು ಪ್ರಕ್ರಿಯೆಗಳು. ಹೀಗಾಗಿ, ಇದೇ ಮೊದಲ ಬಾರಿಗೆ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಬಾಗಿಲನ್ನು ಅವೇಳೆಯಲ್ಲಿ ತೆರೆಯಲಾಯಿತು. ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳಲಾಯಿತು.

ತಾಂತ್ರಿಕ ವಿವರಗಳು:

ಸಾಮಾನ್ಯವಾಗಿ ಪಾಸ್ಪೋರ್ಟ್ ನೀಡಬೇಕು ಎಂದರೆ ಅರ್ಜಿದಾರರು ಖುದ್ದಾಗಿ ಹಾಜರಾಗಬೇಕು ಎಂಬುದು ನಿಯಮ. ಈ ನಿಯಮ ಹೈಕೋರ್ಟ್ ಮುಖ್ಯನಾಯಮೂರ್ತಿ, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳನ್ನು ಹೊರಗಿಡುತ್ತದೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ಅಂತಹ ಸಮಯದಲ್ಲಿ ಕೋರಮಂಗಲದಲ್ಲಿರುವ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಗೆ ಬರುವ ಅಗತ್ಯ ಬೀಳಲಿಲ್ಲ. ಅದೇ ವೇಳೆಗೆ, ಅವರ ಹಳೆಯ ಪಾಸ್ಪೋರ್ಟ್ ಚಿತ್ರವೊಂದನ್ನು ಸಿಎಂ ಕಚೇರಿ ಪಾಸ್ಪೋರ್ಟ್ ಕಚೇರಿಗೆ ತಲುಪಿಸಿತು. "ಅದರಲ್ಲಿದ್ದ ಕ್ರಮಸಂಖ್ಯೆ ಹಿಂದೆ ನೀಡಿದ್ದ ಪಾಸ್ಪೋರ್ಟ್ ಹುಡುಕಲು ನೆರವಾಯಿತು,'' ಎನ್ನುತ್ತಾರೆ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಅಧಿಕಾರಿಯೊಬ್ಬರು. ಈ ಸಮಯದಲ್ಲಿ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ತಮ್ಮ ಅನುಮತಿ ನೀಡಬೇಕು. ವಿಚಾರ ಗೊತ್ತಾದಾಗ ಆರ್ಪಿಓ, ಐಎಫ್ಎಸ್ ಅಧಿಕಾರಿ ಪಿ. ಎಸ್. ಕಾರ್ತಿಗೇಯನ್ ಮನೆಯಲ್ಲಿದ್ದರು. 'ಅವರು ಮನೆಯಿಂದ ಹೊರಟಾಗ ಮಳೆ; ಹೊರಗೆ ಟ್ರಾಫಿಕ್ ಜಾಮ್. ಕೊನೆಗೆ ಯಾವುದೋ ದ್ವಿಚಕ್ರ ವಾಹನದಲ್ಲಿ ಅರ್ಧ ಹಾದಿಗೆ ಬಂದರು. ಸಮಯ ಮೀರುತ್ತಿದ್ದದರಿಂದ ಅವರು ದಾರಿಯಲ್ಲಿಯೇ ಸಿಕ್ಕ ಕಂಪ್ಯೂಟರ್ ಲಾಗಿನ್ ಆಗಿ, ಪಾಸ್ಪೋರ್ಟ್ ವಿತರಣೆಗೆ ಹಸಿರು ನಿಶಾನೆ ಕೊಟ್ಟರು,'' ಎಂದು ಅಧಿಕಾರಿ ಅಂದು ನಡೆದ ಘಟನೆಗಳನ್ನು ನೆನಪಿಸಿಕೊಂಡರು.

ಅದು ಶಾಂಗ್ಯನ್ ವೀಸಾ:

'ದಿ ಸ್ಟೋರಿ ಆಫ್ ಬೆಲ್ಜಿಯಂ ವೀಸಾ': ಮಳೆಯ ರಾತ್ರಿ ಮಾನವೀಯತೆ ಮೆರೆದ ಆ ಎರಡು ಗಂಟೆಗಳು!

ಪಾಸ್ಪೋರ್ಟ್ ಏನೋ ಸಿಎಂ ಕೈಗೆ ಬಂದಿತ್ತು. ಆದರೆ ಬೆಲ್ಜಿಯಂ ವೀಸಾ? ಆ ಸಮಯದಲ್ಲಿ ನೆರವಿಗೆ ಬಂದಿದ್ದು ಬೆಂಗಳೂರಿನಲ್ಲಿರುವ ಫ್ರೆಂಚ್ ದೂತವಾಸ ಕಚೇರಿ. ಅಂತರಾಷ್ಟ್ರೀಯ ಒಪ್ಪಂದವೊಂದರ ಪ್ರಕಾರ ಯುರೋಪಿನ ದೇಶಗಳ ನಡುವೆ ವೀಸಾ ನೀಡುವ ವ್ಯವಸ್ಥೆಯೊಂದಿದೆ. ಅದನ್ನು ಶಾಂಗ್ಯನ್ (

) ವೀಸಾ ಎಂದು ಕರೆಯುತ್ತಾರೆ. ಅದರ ಮೂಲಕ ಸಿಎಂ ಮೊದಲು ಫ್ರಾನ್ಸ್, ಅಲ್ಲಿಂದ ಬೆಲ್ಜಿಯಂ ಹೋಗಲು ವ್ಯವಸ್ಥೆಯನ್ನು ಮಾಡಲಾಯಿತು.

"ಇಂತಹ ಸಮಯದಲ್ಲಿ ನೆರವಾಗಿದ್ದು ವಿದೇಶಾಂಗ ಇಲಾಖೆ. ಅವರು ಫ್ರಾನ್ಸ್ ರಾಯಭಾರಿ ಕಚೇರಿ ಜತೆ ಮಾತನಾಡಿ ವೀಸಾಗೆ ವ್ಯವಸ್ಥೆ ಮಾಡಿದರು. ಇಂತಹ ಸಮಯದಲ್ಲಿ ಮಾನವೀಯತೆಗೆ ರಾಷ್ಟ್ರೀಯತೆಗಳನ್ನು ಮೀರಿ ಎಲ್ಲರೂ ತುಡಿಯುತ್ತಾರೆ ಎಂಬುದಕ್ಕೆ ಇದೊಂದು ಪ್ರಕರಣ ನಮ್ಮೆದುರಿಗೆ ಉದಾಹರಣೆಯಾಗಿ ನಿಲ್ಲುತ್ತದೆ,'' ಎನ್ನುತ್ತಾರೆ ವಿದೇಶಾಂಗ ಸಚಿವಾಲಯ ಭಾಗವಾಗಿರುವ ಹಿರಿಯ ಅಧಿಕಾರಿಯೊಬ್ಬರು.

ಹೀಗೆ, ಒಂದೊಂದೆ ತಾಂತ್ರಿಕ ತೊಡಕುಗಳನ್ನು ಮೀರಿದ ಸಿಎಂ ಸಿದ್ದರಾಮಯ್ಯ ಸಾಮಾನ್ಯ ಪಾಸ್ಪೋರ್ಟ್ ಜತೆಗೆ ಅಧಿಕೃತ ವೀಸಾ ಪಡೆದು ವಿಮಾನ ಹತ್ತಿದಾಗ ಬೆಳಗ್ಗಿನ ಜಾವ 2 ಗಂಟೆಯಾಗಿತ್ತು. ಹಾಗೆ ಅವರು ಫ್ರಾನ್ಸ್ ಮೂಲಕ ಬೆಲ್ಜಿಯಂ ತಲುಪಿದಾಗ ಅಲ್ಲಿನ ಭಾರತದ ರಾಯಭಾರಿ ಮಂಜೀವ್ ಸಿಂಗ್ ಪುರಿ ಅವರಿಗಾಗಿ ಕಾಯುತ್ತಿದ್ದರು. "ಪುರಿ ಮಾನವೀಯ ಮೌಲ್ಯಗಳನ್ನು ದೊಡ್ಡ ಮಟ್ಟದಲ್ಲಿ ಉಳಿಸಿಕೊಂಡ ಅಪರೂಪದ ಅಧಿಕಾರಿ,'' ಎನ್ನುತ್ತಾರೆ ಕೆಳಗೆ ತರಬೇತಿ ಪಡೆದ ಕಿರಿಯ ಐಎಫ್ಎಸ್ ಅಧಿಕಾರಿಯೊಬ್ಬರು.

ಈ ಸಮಯದಲ್ಲಿ ಬೆಂಗಳೂರಿನ ಸಿಎಂ ಕಚೇರಿ ಕೂಡ ಮಂಜೀವ್ ಪುರಿಯವರ ಸ್ವಾಗತದ ಕುರಿತು ಅಧಿಕೃತ ಪ್ರಕಟಣೆ ನೀಡಿತ್ತು.

ಹೋರಾಟದ ಕೊನೆ:

ಇಷ್ಟೆಲ್ಲಾ ತೊಡಕುಗಳನ್ನು ದಾಟಿ ಆಸ್ಪತ್ರೆಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಕೃತಕ ಉಸಿರಾಟದಲ್ಲಿದ್ದ ಮಗನನ್ನು ನೋಡಿದರು. ಪಕ್ಕದ ಕೋಣೆಗೆ ಬಂದು ಗಳಗಳನೆ ಅತ್ತು ಬಿಟ್ಟರು ಎನ್ನುತ್ತವೆ ಸಿಎಂ ಕಚೇರಿಯ ಮೂಲಗಳು. ತಂದೆಯೊಬ್ಬರು ತಮ್ಮ ಪ್ರೀತಿಯ ಮಗನ ಅನಾರೋಗ್ಯ ವಿಚಾರಿಸಿಕೊಳ್ಳಲು ಸಾಕಷ್ಟು ಅಡೆತಡೆಗಳನ್ನು ದಾಟಿ ಕೊನೆಗೂ ಆಸ್ಪತ್ರೆಯ ಹಾಸಿಗೆ ಪಕ್ಕ ನಿಂತಿದ್ದರು. ಆದರೆ, ಮಗ ಬದುಕಿನ ಹೋರಾಟವನ್ನು ಕೈಚೆಲ್ಲಿಯಾಗಿತ್ತು. ಅದಾಗಿ 48 ಗಂಟೆ ಅಂತರದಲ್ಲಿ ರಾಕೇಶ್ ಸಿದ್ದರಾಮಯ್ಯ ಸಾವನ್ನು ವೈದ್ಯರು ಖಚಿತಪಡಿಸಿದರು. ಜೀವನದ ಒಂದು ಹೋರಾಟ ಅಂತ್ಯವಾಗಿತ್ತು.

ಸಂಬಂಧ, ಅನಾರೋಗ್ಯ ಮತ್ತು ಸಾವಿಗೆ ರಾಷ್ಟ್ರೀಯತೆಗಳನ್ನು ಮೀರಿ ತುಡಿಯುವ ರೀತಿಗೆ ಈ ದೃಶ್ಯಾವಳಿಗಳು ಉದಾಹರಣೆ. ''ತಂತ್ರಜ್ಞಾನ ಈ ಪರಿ ಬೆಳೆದಿರುವ ದಿನಗಳಲ್ಲಿ, ನಮ್ಮನ್ನು ನಾವು ವಿಶ್ವಮಾನವತೆಯ ಮಟ್ಟದಲ್ಲಿ ಇಟ್ಟು ಆಲೋಚಿಸಲು ಭರಪೂರ ಮಾಹಿತಿಗಳು ಸಿಗುವ ಈ ದಿನಗಳಲ್ಲಿ, ನಾವ್ಯಾಕೆ ಮಾನವೀಯತೆ ಮರೆತು ವರ್ತಿಸುತ್ತಿದ್ದೇವೆ?'' ಎಂಬ 'ಸಮಾಚಾರ'ದ ಕೊನೆಯ ಪ್ರಶ್ನೆಗೆ ಹಿರಿಯ ಐಎಫ್ಎಸ್ ಅಧಿಕಾರಿಯ ನಿಟ್ಟುಸಿರೇ ಉತ್ತರವಾಗಿತ್ತು.