samachara
www.samachara.com
ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: 'ಮೋದಿ ಬ್ರಾಂಡಿಂಗ್'ಗೆ ಹೊರಟವರಿಗೆ ತಾಯಿ ಹೃದಯದ ಸುಷ್ಮಾ ಕಾಣಲಿಲ್ಲ!
ಸುದ್ದಿ ಸಾಗರ

ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯ: 'ಮೋದಿ ಬ್ರಾಂಡಿಂಗ್'ಗೆ ಹೊರಟವರಿಗೆ ತಾಯಿ ಹೃದಯದ ಸುಷ್ಮಾ ಕಾಣಲಿಲ್ಲ!

samachara

samachara

ಸಿಎಂ

ಸಿದ್ದರಾಮಯ್ಯ ಪುತ್ರ ರಾಕೇಶ್ ಸಿದ್ದರಾಮಯ್ಯ ಅನಾರೋಗ್ಯದ ವಿಚಾರದಲ್ಲಿಯೂ 'ಮೋದಿ ಬ್ರಾಂಡಿಗ್' ಇಣುಕುವ ಮೂಲಕ ಅಸಹ್ಯದ ಪರಮಾವಧಿಯೊಂದು ಮತ್ತೊಮ್ಮೆ ದರ್ಶನವಾಗಿದೆ. ಈ ಮೂಲಕ ಪ್ರಧಾನಿ ಮೋದಿ ಅವರ ಹೆಸರಿಗೆ ಕಳಂಕ ತರುವ ಕೆಲಸವೊಂದು ನಡೆಯಿತು.

ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ನಡೆಯುವ ಪ್ರತಿ ಘಟನೆಗೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಜೋಡಿಸುವ ಕೆಲಸ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಇದೇ ಪರಿಪಾಠ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ಅವರ ಅನಾರೋಗ್ಯದ ಸುದ್ದಿಯಲ್ಲಿಯೂ ಮುಂದಿವರಿದಿದೆ. ಶುಕ್ರವಾರ ವೇಳೆಗೆ ಹರಿದಾಡಿದ ವಾಟ್ಸಾಪ್ ಸಂದೇಶಗಳು ಹಾಗೂ ನ್ಯೂಸ್ ಚಾನಲ್ಗಳ ಕಾರ್ಯಕ್ರಮಗಳಲ್ಲಿ ರಾಜ್ಯ ಸಿಎಂ ಸಿದ್ದರಾಮಯ್ಯ ಬೆಲ್ಜಿಯಂಗೆ ತೆರಳಲು ಪ್ರಧಾನಿ ಮೋದಿ ಅವರ ಸಹಾಯವೇ ಪ್ರಮುಖ ಪಾತ್ರವಹಿಸಿತು ಎಂದು ಬಿಂಬಿಸುವ ಕೆಲಸ ನಡೆಯಿತು.

ಇದಕ್ಕೆ ಸಾಕ್ಷಿ ಕೆಳಗೆ ಯಥಾವತ್ ಪ್ರಕಟಿಸಿರುವ ವಾಟ್ಸಾಪ್ ಸಂದೇಶ:

ನರಹಂತಕ ಮೋದಿ ಎಂದಿದ್ದ ಸಿದ್ಧರಾಮಯ್ಯಗೆ ಆತ್ಮಸಾಕ್ಷಿಯೆಂಬುದೊಂದಿದೆಯೆ?

ಪ್ರಧಾನ ಸೇವಕ ನರೇಂದ್ರ ಮೋದಿ ಈ ಭಾರಿ ಸಹಾಯಕ್ಕೆ ನಿಂತಿದ್ದು ಯಾರಿಗೆ ಗೊತ್ತಾ? ಮೋದಿಯ ಕಡುವಿರೋಧಿ ನಮ್ಮ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ..‌ ಹೌದು. ನೋವಿನಲ್ಲಿದ್ದ ಸಿದ್ಧ್ಧರಾಮಯ್ಯರ ಸಹಾಯಕ್ಕೆ ಮೋದಿಜಿ ಧಾವಿಸಿದ ಕಥೆ ಓದಿ..

ಪುತ್ರನಿಗಾಗಿ ಮಿಡಿಯಲೋ, ರಾಜ್ಯಕ್ಕಾಗಿ ತುಡಿಯಲೋ ಎಂದು ಚಿಂತೆಯಲ್ಲಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಸಹಾಯ ಹಸ್ತ ಚಾಚಿ ಅವರ ನೋವನ್ನು ಕಡಿಮೆ ಮಾಡಿದ್ದಾರೆ.

ಹೌದು. ನಾಲ್ಕು ದಿನಗಳಿಂದ ಪುತ್ರನಿಗಾಗಿ ಕೊರಗಿದ ಸಿಎಂ ಸಿದ್ದರಾಮಯ್ಯ ಹಿಂದೆ ನಡೆದ ದೊಡ್ಡ ಕಥೆಯಿದೆ. ಶನಿವಾರ ರಾತ್ರಿ ಸಿದ್ದರಾಮಯ್ಯನವರಿಗೆ ಮಗ ಅನಾರೋಗ್ಯಕ್ಕೆ ತುತ್ತಾಗಿರುವ ವಿಚಾರ ತಿಳಿಯುತ್ತದೆ. ಭಾನುವಾರ ಸಂಜೆ ಪರಿಸ್ಥಿತಿ ಗಂಭೀರವಾಗಿದೆ ಎನ್ನುವುದು ಗೊತ್ತಾಗುತ್ತದೆ. ಸೋಮವಾರವೇ ಬೆಲ್ಜಿಯಂಗೆ ಹೋಗಲು ಸಿದ್ದರಾಮಯ್ಯ ಮುಂದಾದರೂ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಿಂದೇಟು ಹಾಕಿದರು. ಹೀಗಾಗಿ ಕೂಡಲೇ ವಿಧಾನಪರಿಷತ್ ಸದಸ್ಯ ಭೈರತಿ ಸುರೇಶ್‍ರನ್ನು ಬೆಲ್ಜಿಯಂಗೆ ಸಿಎಂ ಕಳಹಿಸಿದರು.

ಸೋಮವಾರವೇ ಆಪ್ತ ವೈದ್ಯರು, ಸೊಸೆಯನ್ನು ಬೆಲ್ಜಿಯಂಗೆ ಕಳುಹಿಸಿಕೊಟ್ಟ ಸಿಎಂ, ಪತ್ನಿ ಪಾವರ್ತಿಯ ಪಾಸ್‍ಪೋರ್ಟ್, ವೀಸಾಗಾಗಿ ಸುಷ್ಮಸ್ವರಾಜ್‍ಗೆ ಫೋನ್‍ನಲ್ಲಿ ಮನವಿ ಮಾಡಿಕೊಂಡರು.

ಈ ವಿದ್ಯಮಾನಗಳು ನಡೆಯುತ್ತಿರುವಾಗ ಅಧಿಕಾರಿಗಳಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಮಾಹಿತಿ ಸಿಗುತ್ತದೆ. ಕೂಡಲೇ ಸಿಎಂಗೆ ಫೋನ್ ಮಾಡಿ ಮೋದಿ ಸಂಪೂರ್ಣವಾಗಿ ಸಹಾಯ ನೀಡುತ್ತೇನೆ ಎಂದು ಭರವಸೆ ನೀಡುತ್ತಾರೆ. ಸಾಮಾನ್ಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರಾಕೇಶ್ ಅವರನ್ನು ಕೂಡಲೇ ಬ್ರಸೆಲ್ಸ್‍ನ ಪ್ರತಿಷ್ಠಿತ ಯೂನಿವರ್ಸಿಟಿ ಆಸ್ಪತ್ರೆಗೆ ದಾಖಲಿಸಲು ಮೋದಿಯಿಂದ ಅಧಿಕಾರಿಗಳಿಗೆ ಕರೆ ಹೋಗುತ್ತದೆ. ಪಾಸ್‍ಪೋರ್ಟ್, ವೀಸಾ, ಧೂತವಾಸ ಕಚೇರಿ ಹೀಗೆ ಎಲ್ಲೆಡೆಗೂ ಮೋದಿ ಕಚೇರಿಯಿಂದಲೇ ಫೋನ್ ಹೋಗುತ್ತದೆ.

ನರೇಂದ್ರ ಮೋದಿ ನೀಡಿದ ಸಾಂತ್ವನ, ಧೈರ್ಯದಿಂದ ನಿರ್ಧಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ಮಂಗಳವಾರ ಬೆಲ್ಜಿಯಂಗೆ ಹೋಗಲು ನಿರ್ಧಾರ ಮಾಡುತ್ತಾರೆ. ಆದರೆ ಈ ವೇಳೆ ಅವರ ಪಾಸ್‍ಪೋರ್ಟ್ ಸಿಗದ ಕಾರಣ ಮತ್ತೊಂದು ಪರದಾಟ ಶುರುವಾಯಿತು.

ಕೊನೆ ಕ್ಷಣದಲ್ಲಿ ಹೊಸ ಪಾಸ್‍ಪೋರ್ಟ್ ಮಾಡಿಸಿಕೊಂಡು ಗುರುವಾರ ಮುಂಜಾನೆ ಬೆಲ್ಜಿಯಂಗೆ ಸಿದ್ದರಾಮಯ್ಯ ಹೊರಟರೆ, ಗುರುವಾರ ಮಧ್ಯಾಹ್ನ ಪತ್ನಿಗೂ ಪಾಸ್‍ಪೋರ್ಟ್, ವೀಸಾ ಸಿಕ್ಕಿದ್ದು ಶುಕ್ರವಾರ ಬೆಳಗ್ಗೆ ಬೆಲ್ಜಿಯಂಗೆ ಹೊರಟಿದ್ದಾರೆ.

ಪ್ರಧಾನಮಂತ್ರಿಗಳ ಕಚೇರಿ, ಸುಷ್ಮಾ ಸ್ವರಾಜ್ ಸ್ಪಂದನೆ ಧೈರ್ಯಕ್ಕೆ ಸಿಎಂ ಮೆಚ್ಚುಗೆಯ ಮಾತನಾಡಿದ್ದು, ಆಪ್ತರ ಬಳಿ ಮೂವರ ಕುರಿತು ಕೃತಜ್ಞತೆಯ ಮಾತುಗಳನ್ನು ಹೇಳಿದ್ದಾರೆ..#

ಹೀಗೆ, ಮುಖ್ಯಮಂತ್ರಿ ಆತ್ಮಸಾಕ್ಷಿಯ ಬಗ್ಗೆ ಪ್ರಶ್ನೆಯನ್ನು ಕೇಳುವ ತಲೆಬರಹದೊಂದಿಗೆ ಆರಂಭವಾಗುವ ಸಂದೇಶ ಹಲವರ ಮೊಬೈಲ್ಗಳಲ್ಲಿ ಹರಿದಾಡಿತು. ಇಷ್ಟಕ್ಕೂ ನಿಜಕ್ಕೂ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹಾಯ ಹಸ್ತ ಚಾಚಿದರಾ? ಎಂಬುದನ್ನು ಹುಡುಕಿಕೊಂಡು ಹೊರಟರೆ ಬೇರೆಯದೇ ಕತೆಯೊಂದು ತೆರೆದುಕೊಳ್ಳುತ್ತದೆ.

'ಸಮಾಚಾರ' ಈ ಕುರಿತು ಅಧಿಕೃತ ಮಾಹಿತಿಗಾಗಿ ಶುಕ್ರವಾರ ಸಂಜೆ ವೇಳೆಗೆ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಿತು. ಅಲ್ಲಿ ನಾಲ್ಕಾರು ಅಧಿಕಾರಿಗಳ ನಂಬರ್ಗಳನ್ನು ನೀಡಲಾಯಿತಾದರೂ ಯಾರಿಗೂ ಈ ಬಗ್ಗೆ ಸುಳಿವೇ ಇರಲಿಲ್ಲ. ನಂತರ, ಕಚೇರಿ ಸಮಯ ಮುಗಿದ ಹಿನ್ನೆಲೆಯಲ್ಲಿ ಅವರ ಗೃಹ ಕಚೇರಿಯನ್ನು ಸಂಪರ್ಕಿಸಿ ಎಂದು ತಿಳಿಸಲಾಯಿತು. ಅಲ್ಲಿಯೂ ಮಾಹಿತಿ ಕೋರಲಾಯಿತಾದರೂ, ಕೊನೆಗೆ "ನೀವೇನು ಹೇಳುತ್ತಿದ್ದಿರೋ ಗೊತ್ತಾಗುತ್ತಿಲ್ಲ. ಸಂಪೂರ್ಣ ಮಾಹಿತಿ ಕೋರಿ ಇ- ಮೇಲ್ ಅಥವಾ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ,'' ಎಂದು ಫೋನಿಟ್ಟರು.

ಹೀಗಿರುವಾಗಲೇ, ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯಾಲಯದಿಂದ ಪ್ರಕಟಣೆಯೊಂದು ಹೊರಬಿತ್ತು:

ರಾಜ್ಯ ಮುಖ್ಯಮಂತ್ರಿಗಳಿಗೆ ಬ್ರುಸೆಲ್ಸ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಿಂದ ಅಭೂತಪೂರ್ವ ಸಹಕಾರ ಸಿಕ್ಕಿತು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಿಎಂ ಜತೆ ಮಾತನಾಡಿ, ಸಹಾಯ ಹಸ್ತವನ್ನು ಚಾಚಿದ್ದಾರೆ. ಪಿಎಂ ಪ್ರ‍ಧಾನ ಕಾರ್ಯದರ್ಶಿ ಕೂಡ ಸಿಎಂ ಜತೆ ಮಾತನಾಡಿದ್ದು, ರಾಯಭಾರಿ ಕಚೇರಿಗೆ ಸಹಕಾರ ನೀಡುವಂತೆ ಸೂಚಿಸುದಾಗಿ ತಿಳಿಸಿದ್ದಾರೆ. ನಮ್ಮ ಸಂಪರ್ಕಗಳು ಕೂಡ ಈ ಸಮಯದಲ್ಲಿ ಸಹಾಯ ಮಾಡಿವೆ.

ಪಾಸ್ಪೋರ್ಟ್ ಗೊಂದಲ:

ಪಾಸ್ಪೋರ್ಟ್ ವಿಚಾರದಲ್ಲಿ ಕೊನೆಯ ಕ್ಷಣಗಳಲ್ಲಿ ನಡೆದ ಗೊಂದಲವನ್ನು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರ ಮುಂದಿಟ್ಟರೆ, "ಸಿಎಂ ಪಾಸ್ಪೋರ್ಟ್ ವಿಚಾರದಲ್ಲಿ ಕೊನೆಯ ಕ್ಷಣದಲ್ಲಿ ಗೊಂದಲವಾಗಿದ್ದು ನಿಜ. ಆದರೆ ಅದು ಅಧಿಕಾರಿಗಳ ಮಟ್ಟದಲ್ಲಿಯೇ ಬಗೆಹರಿಸಿಕೊಳ್ಳಲಾಗಿದೆ. ಇಷ್ಟು ಚಿಕ್ಕದ್ದಕ್ಕೆಲ್ಲಾ ಪ್ರಧಾನಿ ಮೋದಿ ಅವರಿಗೆ ತೊಂದರೆ ನೀಡಲು ಸಾಧ್ಯವಾ?,'' ಎಂದು ಮರು ಪ್ರಶ್ನಿಸಿದರು.

ಒಟ್ಟಿನಲ್ಲಿ, ಸಣ್ಣಪುಟ್ಟ ವಿಚಾರಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ತರುವ ಚಾಳಿ ಇನ್ನೂ ಕಡಿಮೆಯಾದಂತೆ ಕಾಣಿಸುತ್ತಿಲ್ಲ. "ಇದೊಂದು ರೀತಿ ಉತ್ತರಖಾಂಡ್ ಪ್ರವಾಹದಲ್ಲಿ ಮೋದಿ 150 ಜನರ ರಕ್ಷಣೆ ಮಾಡಿದ ಸುದ್ದಿಯಂತೆ,'' ಎನ್ನುತ್ತಾರೆ ಸಿಎಂ ಕಚೇರಿಯ ಐಎಎಸ್ ಅಧಿಕಾರಿಯೊಬ್ಬರು.

ಏನೇ ಇರಲಿ, ಅನಾರೋಗ್ಯದಲ್ಲೂ ಬೇಳೆ ಬೇಯಿಸಲು ಹೊರಟವರು ಪಕ್ಷ ಬೇದ ಮರೆತು  ಸಹಾಯ ಹಸ್ತ ಚಾಚಿದ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರನ್ನು ಮರೆತಿರುವುದು ಮಾತ್ರ ವಿಪರ್ಯಾಸ.