ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ 'ಉಕ್ಕಿನ ಮಹಿಳೆ'!
ಸುದ್ದಿ ಸಾಗರ

ಚುನಾವಣಾ ಅಖಾಡಕ್ಕೆ ಶರ್ಮಿಳಾ: 16 ವರ್ಷಗಳ ಉಪವಾಸಕ್ಕೆ ಅಂತ್ಯ ಹಾಡಿದ 'ಉಕ್ಕಿನ ಮಹಿಳೆ'!

  • ಹರ್ಷಕುಮಾರ್ ಕುಗ್ವೆ

ಮಣಿಪುರದ

‘ಐರನ್ ಲೇಡಿ’ ಎಂದೇ ಕರೆಯಲಾಗುವ ಇರೋಮ್ ಶರ್ಮಿಳಾ ಇದೇ ಆಗಸ್ಟ್ 9 ರಂದು ತನ್ನ ಹದಿನಾರು ವರ್ಷಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸುವ ನಿರ್ಧಾರವನ್ನು ಪ್ರಕಟಿಸಿದ್ದಾಳೆ. ಇದು ದೇಶದಲ್ಲಿ; ವಿಶೇಷವಾಗಿ ಮಣಿಪುರದಲ್ಲಿ ಸಂಚಲನ ಮೂಡಿಸಿದೆ. ಯಾಕೆಂದರೆ ತನ್ನ ಈ ಉಪವಾಸದ ಕಾರಣದಿಂದಾಗಿಯೇ ಜಗತ್ತಿನ ಜನರ ಗಮನ ಸೆಳೆದಾಕೆ ಇರೋಮ್ ಶರ್ಮಿಳಾ. ತಾನು ನಡೆಸಿಕೊಂಡು ಬಂದಿದ್ದ ಹೋರಾಟ ತಾರ್ಕಿಕ ಅಂತ್ಯ ಕಾಣುವ ಮೊದಲೇ ಉಪವಾಸ ಸತ್ಯಾಗ್ರಹ ಕೈ ಬಿಡುವ ನಿರ್ಧಾರ ಕೈಗೊಂಡಿರುವುದು ಹಲವರ ಹುಬ್ಬೇರಲು ಕಾರಣವಾಗಿದೆ. ತನ್ನ ಉಪವಾಸ ಸತ್ಯಾಗ್ರಹ ಕೊನೆಗೊಳಿಸಿ ಮುಂದಿನ ವರ್ಷ ಮಣಿಪುರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ತಾನು ಹೊಸ ಬಗೆಯಲ್ಲಿ ತನ್ನ ಹೋರಾಟವನ್ನು ಮುಂದುವರೆಸುವುದಾಗಿಯೂ ತಿಳಿಸಿದ್ದಾಳೆ.

ಏನದು ಹೋರಾಟ?: 

ಅದು 2000ನೇ ಇಸವಿಯ ನವೆಂಬರ್ ತಿಂಗಳು. ಭಾರತ ಸೈನ್ಯದ ಅಸ್ಸಾಂ ರೈಫಲ್ ನ ಸೇನಾಪಡೆಗಳು ಮಣಿಪುರದ ಮಾಲೋಂ ಎಂಬ ಸಣ್ಣ ಪಟ್ಟಣಕ್ಕೆ ನುಗ್ಗಿದ್ದೇ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಮುಗ್ಧ ನಾಗರಿಕರ ಮೆಲೆ ಏಕಾಏಕಿ ಗುಂಡಿನ ಮಳೆ ಸುರಿಸಿ ಮಾರಣಹೋಮವನ್ನೇ ನಡೆಸಿಬಿಟ್ಟವು. 10 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡರು. ಅದರಲ್ಲಿ 1988ರಲ್ಲಿ ರಾಷ್ಟ್ರೀಯ ಬಾಲಶೌರ್ಯ ಪ್ರಶಸ್ತಿ ಪಡೆದಿದ್ದ ವ್ಯಕ್ತಿ ಕೂಡಾ ಇದ್ದರು.

ಈ ಘಟನೆ ಆದ ಕೂಡಲೇ ಇರೋಮ್ ಶರ್ಮಿಳಾ ತಾನು ಆಮರಣಾಂತ ಉಪವಾಸ ಕುಳಿತಿರುವುದಾಗಿ ಘೋಷಿಸಿ ನಿರಶನ ಆರಂಭಿಸಿದರು. ಆಕೆಯ ಒಂದೇ ಬೇಡಿಕೆ ಏನೆಂದರೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (AFSPA) ಯನ್ನು ರದ್ದುಗೊಳಿಸಬೇಕು ಎನ್ನುವುದು.

ಏನದು AFSPA?: 

1958ರಲ್ಲಿ ಸಂಸತ್ತಿನಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಸಪ್ತಸೋದರಿ ರಾಜ್ಯಗಳೆಂದು ಕರೆಯಲಾಗುವ ಈಶಾನ್ಯ ಭಾರತದ ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಗೆ ಬಂದಿತ್ತು. ಈ ಕಾಯ್ದೆ ಸೇನಾ ಪಡೆಗಳಿಗೆ ಯಾರೂ ಅವುಗಳ ಕೃತ್ಯಗಳನ್ನು ಪ್ರಶ್ನಿಸದಂತಹ ವಿಶೇಷ ಅಧಿಕಾರ ನೀಡಿತು. ಪಡೆಗಳು ಯಾರನ್ನು, ಯಾವಾಗ ಬೇಕಾದರೂ ದಸ್ತಗಿರಿ ಮಾಡಬಹುದು, ಯಾರನ್ನು ಬೇಕಾದರೂ ಬಂಧಿಸಬಹುದು, ಹಾಗೆಯೇ ಅನುಮಾನ ಬಂದಲ್ಲಿ ಕೊಲ್ಲಲೂಬಹುದು; ಯಾರೂ ಪ್ರಶ್ನಿಸುವಂತಿಲ್ಲ. ದೇಶದ ಭದ್ರತೆ, ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಇದೆಲ್ಲಾ ಅಧಿಕಾರವನ್ನು AFSPA ಸೇನಾಪಡೆಗಳಿಗೆ ನೀಡಿದ್ದರೂ ಇದರ ದುರ್ಬಳಕೆಯ ಬಗ್ಗೆ ನಾಗರಿಕರಿಗೆ ಯಾವುದೇ ರಕ್ಷಣೆ ಇರದೇ ಹೋದದ್ದು ವಿಷಾಧಕರ. ಪರಿಣಾಮವಾಗಿ ಈ ರಾಜ್ಯಗಳಲ್ಲಿ ಪ್ರತ್ಯೇಕತಾವಾದಿ ಪಡೆಗಳನ್ನು ನಿಗ್ರಹಿಸುವ ಕೆಲಸದಲ್ಲಿ ಸೇನಾ ಪಡೆಗಳು ಸಾಮಾನ್ಯ ಜನರಿಗೆ ಇನ್ನಿಲ್ಲದ ಹಿಂಸೆ ನೀಡತೊಗಿದವು. ಇದು ಈ ಭಾಗಗಳ ಜನರು AFSPA ಕಾಯ್ದೆಯನ್ನು ತೀವ್ರವಾಗಿ ವಿರೋಧಿಸಲು ಕಾರಣವಾಯಿತು. ಈ ಹಿನ್ನೆಲೆಯಲ್ಲಿಯೇ ಇರೋಮ್ ಶರ್ಮಿಳಾ ತಮ್ಮ ಉಪವಾಸ ಸತ್ಯಾಗ್ರಹ ಆರಂಭಿಸಿದ್ದು.

ಉಕ್ಕಿನ ಮಹಿಳೆ: 

ಆಕೆಯ ಪೂರ್ಣ ಹೆಸರು ಇರೋಮ್ ಚಾನು ಶರ್ಮಿಳಾ. 44 ವರ್ಷದ ಇರೋಮ್ ತಾನು ಉಪವಾಸ ಆರಂಭಿಸುವಾಗ 28 ವರ್ಷದ ಯುವತಿ. ಜೀವನದಲ್ಲಿ ವೈದ್ಯೆಯಾಗಬೇಕು ಎಂದು ಕನಸು ಕಂಡಿದ್ದವಳು. ಆದರೆ ಆ ದಿನ ತನ್ನ ನಾಡಿನಲ್ಲಿ ನಡೆದ ಮುಗ್ಧ ಜನರ ಮಾರಣ ಹೋಮ ಈಕೆಯ ಬದುಕನ್ನೇ ಬದಲಿಸಿತು. ವೈದ್ಯೆಯಾಗಿ ಬದುಕು ನಡೆಸುವುದಕ್ಕಿಂತಲೂ ತನ್ನ ನಾಡಿನಲ್ಲಿ ನಡೆಯುತ್ತಿದ್ದ ದೌರ್ಜನ್ಯವ ವಿರುದ್ಧ ಹೋರಾಟ ನಡೆಸುವುದೇ ಆದ್ಯತೆಯಾಗಿ ಮಾಡಿಕೊಂಡಳು. ಆರಂಭದಲ್ಲಿ ಆಕೆಗೂ ಈ ಉಪವಾಸ ಸತ್ಯಾಗ್ರಹ ಈ ಪ್ರಮಾಣದಲ್ಲಿ ಸುದೀರ್ಘವಾಗುತ್ತದೆ ಎನ್ನುವ ಅರಿವಿರಲಿಲ್ಲ. ಉಪವಾಸ ಆರಂಭಿಸಿದ ಕೆಲವೇ ದಿನಗಳಲ್ಲಿ ಅವಳ ಮೇಲಯೇ ಕೇಸು ಹಾಕಿ ಬಂಧಿಸಲಾಯಿತು. ಬಲವಂತವಾಗಿ ಮೂಗಿನ ಮಲಕ ದ್ರವಾಹಾರ ನೀಡಲಾಯಿತು. ಆದರೆ ಅದ್ಯಾವುದಕ್ಕೂ ಆಕೆ ಬಗ್ಗಲಿಲ್ಲ. ತನ್ನ ಜನರ ಬದುಕನ್ನು ನರಕ ಮಾಡುತ್ತಿರುವ ಕಾಯ್ದೆಯನ್ನು ರದ್ದುಗೊಳಿಸದ ಹೊರತು ತಾನು ಏನೂ ತಿನ್ನುವುದಿಲ್ಲ ಎಂದು ಹಠ ಹಿಡಿದಳು. ಅದು ವಾರಗಳನ್ನು ಮುಗಿಸಿ, ತಿಂಗಳುಗಳೂ ದಾಟಿ ಕೊನೆಗೆ ವರುಷಗಳೇ ಕಳೆದರೂ ಈಕೆಯ ಬೇಡಿಕೆಯನ್ನು ಯಾವ ಸರ್ಕಾರಗಳೂ ಕೇಳಿಸಿಕೊಳ್ಳಲಿಲ್ಲ. ಉಕ್ಕಿನ ಮಹಿಳೆ ತನ್ನ ಹೋರಾಟವನ್ನು ನಿಲ್ಲಿಸಲಿಲ್ಲ.

ಇರೋಮ್ ಶರ್ಮಿಳಾರ ಈ ದೃಢ ಹೋರಾಟದಿಂದಾಗಿ ಮಣಿಪುರ ಮತ್ತು ಈಶಾನ್ಯ ಭಾರತದ ಜನರು ದಿನಿನಿತ್ಯ ಅನುಭವಿಸುತ್ತಿರುವ ದಮನ ನೋವುಗಳ ಕುರಿತು ಜಗತ್ತಿಗೇ ತಿಳಿಯಿತು. ಅಂತರರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳೂ ಇತ್ತ ಮುಖಮಾಡಿದವು. ಪರಿಣಾಮವಾಗಿ ಸೇನಾಪಡೆಗಳಿಂದ ಜನರ ಮೇಲಿನ ದಮನ ದೌರ್ಜನ್ಯ ಅತ್ಯಾಚಾರಗಳು ಒಂದಷ್ಟು ಮಟ್ಟಿಗಾದರೂ ಕಡಿಮೆಯಾದವು; ಆದರೆ ನಿಲ್ಲಲಿಲ್ಲ.

 ಉಪವಾಸ ಕೊನೆ:

ಸರ್ಕಾರಗಳು AFSPA ಕಾಯ್ದೆಯನ್ನು ರದ್ದುಗೊಳಿಸುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಈಗಾಗಲೇ ತನ್ನ ಬದುಕಿನ ಅಮೂಲ್ಯ ಯೌವನವನ್ನು ತನ್ನ ನಾಡಿನ ಜನರ ಜ್ವಲಂತ ಸಮಸ್ಯೆಯ ಪರಿಹಾರಕ್ಕಾಗಿನ ಹೋರಾಟದಲ್ಲಿ ಕಳೆದಾಗಿದೆ. ಹಾಗಾದರೆ ಮುಂದೇನು? ಕಳೆದ ಒಂದೆರಡು ವರ್ಷಗಳಲ್ಲಿ ಈ ವಿಷಯದಲ್ಲಿ ಇರೋಮ್ ಶರ್ಮಿಳಾ ತನ್ನ ಹೋರಾಟ ಸ್ವರೂಪವನ್ನು ಬದಲಿಸುವ ಇಂಗಿತ ವ್ಯಕ್ತ ಪಡಿಸಿದ್ದರು. ಆಗ ಆಕೆಯ ಬೆಂಬಲಿಗರಲ್ಲೇ ಮಿಶ‍್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಉಪವಾಸ ಕೊನೆಗೊಳಿಸುವ ದಿನಾಂಕವನ್ನೂ ತಿಳಿಸಿದ್ದಾರೆ. ಈಗಲೂ ಅಷ್ಟೇ ಕೆಲವರು ಆಕೆ ಉಪವಾಸ ಮುಂದುವರೆಸಬೇಕು ಎಂದು ಕೆಲವರೆಂದರೆ ಮತ್ತೆ ಕೆಲವರು ಆಕೆಯ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆಕೆಯ ಬೇಡಿಕೆಯ ವಿಷಯದಲ್ಲಿ ಸರ್ಕಾರವು ಜಾಣ ಕಿವುಡು ಪ್ರದರ್ಶಿಸುತ್ತಿರುವಾಗ ಆಕೆ ಹೀಗೇ ಕೊನೆವರೆಗೂ ಉಪವಾಸ ನಡೆಸಿಯೇ ಸತ್ತುಬಿಡಲಿ ಎಂದು ನಿರೀಕ್ಷಿಸುವುದು ಒಂದು ಬಗೆಯ ಕ್ರೌರ್ಯ ಮತ್ತು ಹಿಪಾಕ್ರಸಿ ಆಗುತ್ತದಷ್ಟೇ. ತನ್ನ ಹೋರಾಟವನ್ನು ಹೊಸ ರೀತಿಯಲ್ಲಿ ನಡೆಸಲು ಹೊರಟಿರುವ  ಇರೋಮ್ ಶರ್ಮಿಲಾಗೆ ಶುಭಹಾರೈಕೆಗಳು.