‘ಪ್ರತಿಭಟನೆಯಿಂದ ಮಸಣಕ್ಕೆ’: ಬಾಂಬ್ ದಾಳಿಗೆ ಗುರಿಯಾದ ನತದೃಷ್ಟ ಅಲ್ಪಸಂಖ್ಯಾತರು
ಸುದ್ದಿ ಸಾಗರ

‘ಪ್ರತಿಭಟನೆಯಿಂದ ಮಸಣಕ್ಕೆ’: ಬಾಂಬ್ ದಾಳಿಗೆ ಗುರಿಯಾದ ನತದೃಷ್ಟ ಅಲ್ಪಸಂಖ್ಯಾತರು

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಶನಿವಾರ ನಡೆದ ಐಸಿಲ್ ಉಗ್ರರ ದಾಳಿಗೆ 80ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ರಾಜಧಾನಿಯಲ್ಲಿ 'ಹಜಾರಾ' ಸಮುದಾಯದ ಜನರ ಪ್ರತಿಭಟನೆ ಮೇಲೆ ಈ ದಾಳಿ ನಡೆದಿದೆ.

ಭಯೋತ್ಪಾದನೆಯ ಕರಾಳ ಇತಿಹಾಸದಿಂದ ನಿಧಾನಕ್ಕೆ ಹೊರಬರುತ್ತಿದ್ದ ಅಫ್ಘಾನಿಸ್ತಾನದಲ್ಲಿ ಈ ಘಟನೆ ಆಘಾತ ಮೂಡಿಸಿದೆ.ಕಾಬೂಲಿನಲ್ಲಿ ಶನಿವಾರ ಸಾಂಪ್ರದಾಯಿಕ 'ಹಜಾರಾ' ಅಲ್ಪಸಂಖ್ಯಾತ ಗುಂಪಿಗೆ ಸೇರಿದ ಜನರು ರಾಜಧಾನಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು.

ತಾವು ವಾಸಿಸುವ ಪ್ರದೇಶದಲ್ಲಿ ಹಾದು ಹೋಗುಲಿರುವ ವಿದ್ಯುತ್ ಲೈನಿನ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಇಬ್ಬರು ಆತ್ಮಹುತಿ ಬಾಂಬರುಗಳು ತಮ್ಮನ್ನು ತಾವು ಸ್ಫೋಟಿಸಿಕೊಂಡ ಪರಿಣಾಮ 80 ಜನ ಸಾವಿಗೀಡಾಗಿದ್ದು 230ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಘಟನೆಯ ಹೊಣೆಯನ್ನು ಭಯೋತ್ಪಾದಕ ಸಂಘಟನೆ 'ಐಸಿಲ್' ಹೊತ್ತುಕೊಂಡಿದೆ. ಹಿಂದೆ ಇದನ್ನು ಐಸಿಸ್ ಎಂದು ಕರೆಯಲಾಗುತ್ತಿತ್ತು.

ಕಾಬೂಲಿನಲ ಪ್ರತಿಭಟನೆ ನಡೆಸುತ್ತಿರುವ ಹಜಾರ ಸಮುದಾಯಿಗರು
ಕಾಬೂಲಿನಲ ಪ್ರತಿಭಟನೆ ನಡೆಸುತ್ತಿರುವ ಹಜಾರ ಸಮುದಾಯಿಗರು

ರಾಜಧಾನಿಯ ಜನಜಂಗುಳಿಯ ಪ್ರದೇಶವನ್ನೇ ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ. “ಇಸ್ಲಾಮಿಕ್ ಸ್ಟೇಟಿಗೆ ಸೇರಿದ ಇಬ್ಬರು ಬೆಲ್ಟಿನಲ್ಲ ಬಾಂಬ್ ಕಟ್ಟಿಕೊಂಡು ಅಫ್ಗಾನಿಸ್ತಾನದ ಕಾಬೂಲ್ ನಗರದಲ್ಲಿ ತಮ್ಮನ್ನು ತಾವು ಸ್ಪೋಟಿಸಿಕೊಂಡಿದ್ದಾರೆ,” ಎಂದು ಐಸಿಲ್ ಜತೆ ಸಂಪರ್ಕವಿರುವ 'ಅಮಾಕ್' ವೆಬ್ಸೈಟ್ ಹೇಳಿಕೊಂಡಿದೆ.ಆದರೆ ಅಫ್ಘಾನಿಸ್ತಾನದ ಅಧಿಕಾರಿಗಳು ಮಾತ್ರ ಮೂವರು ದಾಳಿ ನಡೆಸಿರುವುದಾಗಿ ಹೇಳಿದ್ದಾರೆ.

ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಪ್ರತಿಭಟನಾಕಾರರು ಕಾಲು ಕಿತ್ತಿದ್ದು, ದೇಹ್ ಮಜಾಂಗ್ ಸರ್ಕಲ್ ಸುತ್ತ ಮುತ್ತ ಚೆಲ್ಲಿದ ರಕ್ತದ ಕಲೆಗಳು, ಅನಾಥ ಚಪ್ಪಲಿಗಳು ಅಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿ ನಿಂತಿದ್ದವು. ಇಲ್ಲೇ ಪಕ್ಕದಲ್ಲಿ ಸಾವಿರಾರು ಹಜಾರಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇದು ಇತ್ತೀಚೆಗೆ ಕಾಬೂಲಿನಲ್ಲಿ ನಡೆದ ಭಯಾನಕ ದಾಳಿ ಎಂದು ಹೇಳಲಾಗಿದೆ.

ಘಟನೆಯಿಂದ ಕಾಬುಲ್ ನಗರ ಆಘಾತಕ್ಕೆ ಒಳಗಾಗಿದ್ದು, ಇಡೀ ನಗರ ಸ್ಮಶಾನ ಮೌನವಾಗಿದೆ.ಈ ಕುರಿತು ಹೇಳಿಕೆ ನೀಡಿರುವ ಅಫ್ಘನ್ ಅಧ್ಯಕ್ಷ ಅಶ್ರಫ್ ಘನಿ, “ಈ ದಾಳಿಗಳ ಹಿಂದೆ ಐಸಿಲ್ ಇರುವುದು ಸತ್ಯ. ಇದು ಸಂಘಟನೆಯಾಗಿ ಅದು ಬಲಗೊಳ್ಳುತ್ತಿರುವುದರ ಸೂಚನೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಕಾಬೂಲ್ ನಗರಿದಿಂದ ಉತ್ತರ ಭಾಗಕ್ಕಿರುವ ಸಲಾಂಗ್ ಪಾಸ್ ಬೆಟ್ಟ ಗುಡ್ಡಗಳ ಮೂಲಕ 500 ಕಿಲೋ ವ್ಯಾಟಿನ ವಿದ್ಯುತ್ ಲೈನ್ ಹಾದು ಹೋಗಲಿದೆ.

ಇವು ಮಧ್ಯ ಏಷ್ಯಾದ ರಾಷ್ಟ್ರಗಳಾದ ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ತಜಕಿಸ್ತಾನಗಳಿಂದ ಕರೆಂಟಿನ ಬರಗಾಲ ಅನುಭವಿಸುತ್ತಿರುವ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಕ್ಕೆ ವಿದ್ಯುಚ್ಛಕ್ತಿ ಪೂರೈಕೆ ಮಾಡಲಿದೆ. ಇದು ಹತ್ತಿರದ ದಾರಿ ಎಂಬ ಕಾರಣಕ್ಕೆ ಸರಕಾರ ಈ ಮಾರ್ಗ ಆಯ್ಕೆ ಮಾಡಕೊಂಡಿದೆ. ಆದರೆ ಹೆಚ್ಚಾಗಿ ಇಲ್ಲಿ 'ಹಜಾರ'ಗಳೇ ಬದುಕುವ ಕಾರಣಕ್ಕಾಗಿ, ಲೈನ್ ಮೇಲಿಂದ ಹಾದು ಹೋಗಬಾರದು ಎಂಬುದು ಅವರ ಒತ್ತಾಯವಾಗಿದೆ.

ಇದೊಂದು ಸರಕಾರದ ಪೂರ್ವ ಯೋಜಿತ ನಿರ್ಧಾರವಾಗಿದ್ದು, ಹಜಾರ ಸಮುದಾಯದವರನ್ನು ಗುರಿಯಾಗಿಸಿ ಈ ಯೋಜನೆ ಜಾರಿ ತರಲಾಗುತ್ತಿದೆ ಎಂದು ಆ ಸಮುದಾಯದ ನಾಯಕರು ಆಪಾದಿಸಿದ್ದಾರೆ. ಸುಮಾರು ಮೂವತ್ತು ಲಕ್ಷ ಇರುವ ಹಜಾರಾ ಸಮುದಾಯ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಒಂದು. ಪರ್ಷಿಯನ್ ಮತ್ತು ಮಂಗೋಲಿಯನ್ ಈ ಜನರ ಆಡುಭಾಷೆ. ಅಫ್ಘಾನಿಸ್ತಾನ ಮತ್ತು ಇದರ ಗಡಿಗೆ ಹೊಂದಿಕೊಂಡಿರುವ ಪಾಕಿಸ್ತಾನದ ಭಾಗಗಳಲ್ಲಿ ಈ ಜನರು ವಾಸಿಸುತ್ತಾರೆ.

ಈ ಸಮುದಾಯದ ಮೇಲೆ ಪದೇ ಪದೇ ಅಫ್ಘಾನಿಸ್ತಾನದಲ್ಲಿ ದಾಳಿಗಳಾಗುತ್ತಿವೆ. ಹಾಗೆ ನೋಡಿದರೆ ಹಜಾರಾ ಒಂದು ರೀತಿಯಲ್ಲಿ ನತದೃಷ್ಠ ಸಮುದಾಯ. 1990ರಿಂದ ಅಲ್ ಖೈದಾ ಮತ್ತು ತಾಲಿಬಾನ್ ಸಂಘಟನೆಗಳು ಕಿರುಕುಳಕ್ಕೆ ಸಮುದಾಯದ ಸುಮಾರು ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಸದ್ಯ ಅಫ್ಘಾನಿಸ್ತಾನ ನೆಲದಲ್ಲಿ ಅಲ್ಖೈದಾ ಮತ್ತು ತಾಲಿಬಾನ್ ಗೆ ಸಡ್ಡು ಹೊಡೆಯುತ್ತಿರುವ ಐಸಿಲ್ ಕೂಡಾ ಇದೇ ಸಮುದಾಯವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಮೊದಲೇ ಹಜಾರಾ ಅಲ್ಪ ಸಂಖ್ಯಾತ ಸಮುದಾಯವಾಗಿದ್ದು, ದಶಕಗಳ ಕಾಲ ಸತತ ದಾಳಿಗಳಿಂದ ಜರ್ಝರಿತವಾಗಿವೆ.