ದಲಿತ ಯುವಕರ ಮೇಲೆ ಹಲ್ಲೆ: ಪ್ರಧಾನಿ ನರೇಂದ್ರ ಮೋದಿ ತವರಲ್ಲಿ ಪ್ರತಿಭಟನೆ ಜ್ವಾಲೆ
ಸುದ್ದಿ ಸಾಗರ

ದಲಿತ ಯುವಕರ ಮೇಲೆ ಹಲ್ಲೆ: ಪ್ರಧಾನಿ ನರೇಂದ್ರ ಮೋದಿ ತವರಲ್ಲಿ ಪ್ರತಿಭಟನೆ ಜ್ವಾಲೆ

ಒಂದು

ಕಾಲದಲ್ಲಿ ದೇಶಕ್ಕೆ 'ಅಭಿವೃದ್ಧಿ ಮಾದರಿ'ಯೊಂದನ್ನು ನೀಡುತ್ತೀವಿ ಎಂದು ಸುದ್ದಿಕೇಂದ್ರಕ್ಕೆ ಬಂದಿದ್ದ ರಾಜ್ಯ ಗುಜರಾತ್; ಈಗ ಮತ್ತೆ ಸುದ್ದಿಯಲ್ಲಿದೆ.

ರಾಜ್ಯದ ಗಿರ್-ಸೋಮನಾಥ್ ಜಿಲ್ಲೆಯಲ್ಲಿ ದನದ ಚರ್ಮ ಸುಲಿದಿದ್ದಾರೆ ಎಂದು ಆಪಾದಿಸಿ ದಲಿತ ಯುವಕರ ಮೇಲೆ ಕಳೆದ ವಾರ ಹಿಂದೂ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಬರ್ಭರವಾಗಿ ನಡೆದ ಈ ಹಲ್ಲೆಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚೆಬ್ಬಿಸಿದ್ದವು. ಸಮುದಾಯದ ಯುವಕರ ಮೇಲೆ ನಡೆದ ಹಲ್ಲೆ ಖಂಡಿಸಿ ದಲಿತ ಸಮುದಾಯಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಅದೀಗ ಹಿಂಸಾರೂಪಕ್ಕೆ ತಿರುಗಿದ್ದು, ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ.

ಹಿನ್ನೆಲೆ:

ಕಳೆದ ವಾರ ಸಮಧಿಯಾಲ ಎಂಬ ಗ್ರಾಮದ ಚರ್ಮ ವ್ಯಾಪಾರಿ ಸಮುದಾಯಕ್ಕೆ ಸೇರಿದ ದಲಿತ ಯುವಕರು ಸಮೀಪದ ಉನಾ ನಗರಕ್ಕೆ ಸತ್ತ ದನಗಳ ಚರ್ಮ ಸುಲಿಯಲು ಬಂದಿದ್ದರು. ಚರ್ಮ ಸುಲಿದು ಅವರು ಬಸ್ ನಿಲ್ದಾಣ ತಲುಪುತ್ತಿದ್ದಂತೆ ಅಲ್ಲಿಗೆ ಬಂದ ಹಿಂದೂ ಸಂಘಟನೆಯ ಕಾರ್ಯಕರ್ತರ ಗುಂಪು, ಯುವಕರನ್ನು ಅರೆಬೆತ್ತಲೆ ಮಾಡಿ ಎಸ್ಯುವಿ ವಾಹನಕ್ಕೆ ಕಟ್ಟಿ ಕಬ್ಬಿಣದ ಪೈಪು ಹಾಗೂ ದೊಣ್ಣೆಗಳಿಂದ ಥಳಿಸಿದ್ದರು.

ಹಲ್ಲೆ ನಡೆಸಿದ ನಂತರ ದಲಿತ ಯುವಕರನ್ನು ಅಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಠಾಣೆಗೆ ಎಳೆದುಕೊಂಡು ಹೋಗಿ ಪೊಲೀಸರಿಗೆ ಒಪ್ಪಿಸಲಾಗಿತ್ತು. ಇವೆಲ್ಲವನ್ನೂ ಗುಂಪು ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿತ್ತು. 24 ಗಂಟೆ ಒಳಗೆ ವೀಡಿಯೋಗಳು ವೈರಲ್ ಆಗಿ ದೇಶದ ಗಮನ ಸೆಳೆದಿದ್ದವು.

ಇದಾದ ನಂತರ ದಲಿತ ಸಮುದಾಯದವರು ಪೊಲೀಸ್ ಠಾಣೆ ಮುಂದೆ ಹಲ್ಲೆ ನಡೆಸಿದವರ ಮೇಲೆ ಕೇಸು ದಾಖಲಿಸುವಂತೆ ಧರಣಿ ಕುಳಿತುಕೊಂಡಿದ್ದರು. ಒತ್ತಡ ಹೆಚ್ಚಾದ ಹಿನ್ನಲೆಯಲ್ಲಿ ಐದು ಜನರ ವಿರುದ್ಧ ಕೊನೆಗೂ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದರಲ್ಲಿ ಶಿವ ಸೇನೆಯ ಜಿಲ್ಲಾ ಅಧ್ಯಕ್ಷ ಪ್ರಮೋದ್ ಗಿರಿ ಗೋಸ್ವಾಮಿ ಎಂಬಾತನೂ ಸೇರಿದ್ದಾನೆ. ಈ ಸಂಘಟನೆ ಗೋ ರಕ್ಷಣೆಗಾಗಿಯೇ ಇದೆ ಎಂದು ಬಿಂಬಿಸಿಕೊಂಡಿದೆ.

ಮುಂದುವರಿದ ಪ್ರತಿಭಟನೆ: 


       ಮುಂದುವರಿದ ದಲಿತರ ಪ್ರತಿಭಟನೆ.
ಮುಂದುವರಿದ ದಲಿತರ ಪ್ರತಿಭಟನೆ.

ಈ ಘಟನೆ ಬೆನ್ನಿಗೇ ಗುಜರಾತ್ ರಾಜ್ಯದಾದ್ಯಂತ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಲು ಶುರುಮಾಡಿದವು. ಮಂಗಳವಾರದಂದು ಜುನಾಗಡ್ ಜಿಲ್ಲೆಗೆ ಸೇರಿದ ಬಟ್ವಾದಲ್ಲಿ ಮೂವರು ದಲಿತರು ಸೇರಿ ಒಟ್ಟು 7 ಜನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಪ್ರತಿಭಟನೆಕಾರರು ಆಕ್ರೋಷಿತರಾಗಿದ್ದು ಸೌರಾಷ್ಟ್ರದಲ್ಲಿ ಪೊಲೀಸ್ ಪೇದೆಯನ್ನು ಕೊಂದು ಹಾಕಿತು. ಅಲ್ಲೀಗ ರಾಜ್ಯ ಸಾರಿಗೆ ಬಸ್ಸುಗಳನ್ನು ಗುರಿಯಾಗಿಸಿ ಪ್ರತಿಭಟನಾಕಾರರು ದಾಳಿ ನಡೆಸುತ್ತಿದ್ದು, ರಾಜಕೋಟ್ ಮತ್ತು ಪೋರ್ ಬಂದರಿನಲ್ಲಿ ಸಾರಿಗೆ ಸಂಸ್ಥೆಯ ಬಸ್ಸನ್ನು ಸುಟ್ಟು ಹಾಕಲಾಗಿದೆ. ಇದರಿಂದ ಸಾರಿಗೆ ಇಲಾಖೆ ಗುಜರಾತಿನ ಕೆಲವು ಬಾಗಗಳಲ್ಲಿ ಬುಧವಾರ ಬಸ್ಸುಗಳನ್ನು ರಸ್ತೆಗೆ ಇಳಿಸಿಲ್ಲ.

ಪ್ರತಿಭಟನಾಕಾರು ಸತ್ತ ದನಗಳನ್ನು ಸುರೇಂದ್ರನಗರದ ಜಿಲ್ಲಾಧಿಕಾರಿ ಕಚೇರಿಯ ಮೇಲೆ ಎಸೆದಿದ್ದಾರೆ. ಮಂಗಳವಾರ ರಾತ್ರಿಯಿಂದ  ಕೆಲವು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಜುನಾಗಡ್, ಜಾಮ್ನಗರ, ರಾಜ್ ಕೋಟ್ ಮತ್ತು ಅಮ್ರೇಲಿ ಜಿಲ್ಲೆಗಳಲ್ಲಿ ಹೆದ್ದಾರಿಗಳು ಮುಚ್ಚಿವೆ. ಇದೀಗ ಪ್ರತಿಭನೆ ರಾಜಧಾನಿ ಅಹಮದಾಬಾದಿನತ್ತ ಹರಡುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ಕೆಲವು ದಲಿತ ನಾಯಕರನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಮೀಸಲು ಪೊಲೀಸರನ್ನು ಕರೆಸಿಕೊಳ್ಳಲಾಗಿದೆ.

ರಾಷ್ಟ್ರದಲ್ಲಿ ಸದ್ದು: 

ಗುಜರಾತ್ ರಾಜ್ಯದಲ್ಲಿ ನಡೆದ ದಲಿತರ ಮೇಲಿನ ಹಲ್ಲೆ ವಿಚಾರ ಇದೀಗ ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುತ್ತಿದೆ. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಚಾರವಾಗಿ ಬುಧವಾರ ಬಿಸಿ ಬಿಸಿ ಚರ್ಚೆ ನಡೆಯಿತು. ಕಾಂಗ್ರೆಸ್ ಮತ್ತು ಬಿಎಸ್ಪಿ ಗುಜರಾತ್ನಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಪ್ರತಿಭಟನೆ ಬಗ್ಗೆ ಕೇಂದ್ರ ಸರಕಾರದಿಂದ ಉತ್ತರ ಬಯಸಿ ಘೋಷಣೆ ಕೂಗಿದವು. ಸದನದ ಬಾವಿಗೆ ಆಗಮಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದವು.

ಈ ಕುರಿತು ಲೋಕಸಭೆಯಲ್ಲಿ ಸರಕಾರಕ್ಕೆ ಚಾಟಿ ಬೀಸಿದ ಪ್ರತಿಪಕ್ಷ ಕಾಂಗ್ರೆಸ್ ಸಂಸದ ಸುರೇಶ್ ಕೊಡಿಕುನ್ನಿಲ್, “ದಲಿತ ಮುಕ್ತ ಭಾರತ ಆರ್ಎಸ್ಎಸ್ ಅಜೆಂಡಾ. ಗುಜಾರಾತಿನಲ್ಲಿ ಬಿಜೆಪಿ ಪ್ರೇರಿತ ದಲಿತರ ಮೇಲಿನ ದಾಳಿಗಳು ನಡೆಯುತ್ತಿವೆ," ಎಂದು ಹರಿಹಾಯ್ದರು.


       ಗುಜರಾತಿನ ಸರಕಾರಿ ಕಚೇರಿಗಳ ಮುಂದೆ ದನಸ ಕಳೇಬರ ಹಾಕುವ ಮೂಲಕ ದಲಿತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.
ಗುಜರಾತಿನ ಸರಕಾರಿ ಕಚೇರಿಗಳ ಮುಂದೆ ದನಸ ಕಳೇಬರ ಹಾಕುವ ಮೂಲಕ ದಲಿತರು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ.

ಸದ್ಯ ಗುಜರಾತಿನಲ್ಲಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಸರಕಾರ ಹೊರಟಿದೆ. ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಮೂವರು ಪೊಲೀಸರನ್ನು ವಜಾ ಮಾಡಲಾಗಿದೆ. ಜೊತೆಗೆ ಮಂಗಳವಾರ 7 ಜರನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ. ಘಟನೆ ಬಗ್ಗೆ ಸಿಐಡಿ ತನಿಖೆಗೆ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಆದೇಶಿಸಿದ್ದಾರೆ. ಈ ಕುರಿತು ಶೀಘ್ರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಹಲ್ಲೆಗೊಳಗಾದ ದಲಿತರ ಆಸ್ಪತ್ರೆ ವೆಚ್ಚಗಳನ್ನು ಸರಕಾರವೇ ಭರಿಸಲಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.

ಸದ್ಯ ಹಲ್ಲೆಗೊಳಗಾದ ದಲಿತ ಯುವಕರು ಗುಜರಾತಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೊಂದೆಡೆ ಅಖಾಡಕ್ಕೆ ಇಳಿದಿರುವ ಎಎಪಿ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜುಲೈ 22ರಂದು ಗುಜರಾತ್ ಭೇಟಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಪಟೇಲ್ ಮೀಸಲಾತಿ ಹೊರಾಟ ಹಿಂಸಾ ರೂಪಕ್ಕೆ ತಿರುಗಿ 10 ಜನ ಸಾವನ್ನಪ್ಪಿದ್ದರು. ಇದಾದ ಬಳಿಕ ನಡೆದ ಚುನಾವಣೆಗಳಲ್ಲಿ ಬಿಜೆಪಿ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಕಳೆದುಕೊಂಡಿತ್ತು. ಇದೀಗ ಮುಂದಿನ ವರ್ಷ ಗುಜರಾತಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೋದಿ ತವರು ರಾಜ್ಯದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ರಾಜಕೀಯವಾಗಿ ಕೇಸರಿ ಪಕ್ಷಕ್ಕೆ ಹೊಡೆತ ನೀಡುವ ಸಾಧ್ಯತೆಗಳಿವೆ.

ಚಿತ್ರ ಕೃಪೆ: ಲೈವ್ ಮಿಂಟ್, ಕ್ವಿಂಟ್