samachara
www.samachara.com
ಸರಣಿ ಬಂಧನ ಭೀತಿಯಲ್ಲಿ ಚಿಕ್ಕಮಗಳೂರು ಭಜರಂಗದಳ!
ಸುದ್ದಿ ಸಾಗರ

ಸರಣಿ ಬಂಧನ ಭೀತಿಯಲ್ಲಿ ಚಿಕ್ಕಮಗಳೂರು ಭಜರಂಗದಳ!

ಭಜರಂಗದಳದ ಬುಡಕ್ಕೆ ಬಂದು ನಿಲ್ಲಲಿದೆಯೇ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣ?

ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಪ್ರಕರಣದ ತನಿಖೆ ಚಿಕ್ಕಮಗಳೂರಿನ ಭಜರಂಗದಳದ ಒಳಗೆ ಭಯದ ವಾತಾವರಣವೊಂದನ್ನು ಹುಟ್ಟು ಹಾಕಿದೆ. ಕಳೆದ ಒಂದು ವಾರದಿಂದ ಮುಖ್ಯವಾಹಿನಿಯಿಂದ ‘ಹಂಡಿಭಾಗ್ ಆತ್ಮಹತ್ಯೆ ಪ್ರಕರಣ’ ನಾಪತ್ತೆಯಾಗಿತ್ತು. ಆದರೆ, ಸ್ಥಳೀಯ ಮಟ್ಟದಲ್ಲಿ ಸಿಐಡಿ ಅಧಿಕಾರಿಗಳು ಭಜರಂಗದಳದ ಪ್ರವೀಣ್ ಖಾಂಡ್ಯನನ್ನು ಕೇಂದ್ರವಾಗಿಟ್ಟುಕೊಂಡು ತನಿಖೆ ನಡೆಸಿಕೊಂಡು ಬರುತ್ತಿದ್ದಾರೆ.

ಸದ್ಯ ಪೊಲೀಸರಿಂದ ಖಾಂಡ್ಯ ತಲೆ ಮರೆಸಿಕೊಂಡಿದ್ದಾನೆ. ಹೀಗಾಗಿ, ಆತನ ಸಹಚರರು, ಸಂಘಟನೆಯಲ್ಲಿ ಆತನ ಜತೆ ಆಪ್ತತೆ ಹೊಂದಿರುವವರನ್ನು ವಿಚಾರಣೆಗಾಗಿ ಕರೆತರಲಾಗುತ್ತಿದೆ. ಹೀಗೆ ಕರೆ ತಂದವರ ಪೈಕಿ ಎರಡು ದಿನಗಳ ಹಿಂದೆ ಭಜರಂಗದಳದಲ್ಲಿ 2 ದಶಕಗಳಿಂದ ಸಕ್ರಿಯನಾಗಿದ್ದ ಪ್ರದೀಪ್ ಎಂಬಾತನನ್ನು ಬಂಧಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭಜರಂಗದಳ ಕಾರ್ಯಕರ್ತರು, ನಾಯಕರು ಬಂಧನಕ್ಕೆ ಒಳಗಾಗಲಿದ್ದಾರೆ ಎಂಬ ಗಾಳಿಸುದ್ದಿಗೆ ಈ ಬೆಳವಣಿಗೆ ಕಾರಣವಾಗಿದೆ. ಸಹಜವಾಗಿಯೇ ದತ್ತಪೀಠದ ವಿಚಾರದಲ್ಲಿ ಜಿಲ್ಲೆಯಾದ್ಯಂತ ಹಿಡಿತ ಸಾಧಿಸಿ, ಆ ಮೂಲಕ ಬಿಜೆಪಿಯನ್ನು ಭದ್ರವಾಗಿ ನೆಲೆಯೂರಿಸಿದ್ದ ಸಂಘಟನೆ ಒಳಗೆ ಈಗ ಭಯದ ವಾತಾವರಣ ಸೃಷ್ಟಿಯಾಗಿದೆ.

ಹಿನ್ನೆಲೆ:

ಜೂ. 28ರಂದು ಚಿಕ್ಕಮಗಳೂರಿನ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ತೇಜಸ್ ಗೌಡ ಎಂಬಾತನನ್ನು ಅಪರಿಚಿತರು ಅಪಹರಿಸಿದ್ದರು. ಈ ಪ್ರಕರಣದಲ್ಲಿ ನಂತರ ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲಾಗಿತ್ತು. ಅದರ ಪ್ರಕಾರ, ಅಭಿಜಿತ್ ಹಾಗೂ ಉಳಿದ 6 ಜನ, ನವೀನ್ ಶೆಟ್ಟಿ, ನಟರಾಜ, ಪ್ರವೀಣ್ ಖಾಂಡ್ಯ ಹಾಗೂ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಅವರುಗಳನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಪ್ರಕರಣದಲ್ಲಿ ಡಿವೈಎಸ್ಪಿ ಮಟ್ಟದ ಅಧಿಕಾರಿಯೇ ಆರೋಪಿಯಾದ ವಿಚಾರ ಜು. 3ರಂದು ಹೊರಬರುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಯಿತು. ಅದಾದ ಮಾರನೇ ದಿನವೇ ಬೆಳಗಾವಿ ಮೂಲದ ಕಲ್ಲಪ್ಪ ಹಂಡಿಭಾಗ್ ತಮ್ಮ ಮಾವನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಕೊನೆಗೆ ಸರಕಾರ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಕಲ್ಲಪ್ಪ ಅವರ ಆತ್ಮಹತ್ಯೆಗೆ ಹಿನ್ನೆಲೆ ಮತ್ತು ಅಪಹರಣ ಪ್ರಕರಣದ ವೃತ್ತಾಂತವನ್ನು ಬಲಿಗೆಳೆಯುವ ಹಾದಿಯಲ್ಲಿ ತನಿಖಾಧಿಕಾರಿಗಳಿದ್ದಾರೆ.

ಎಸ್ಪಿ ನಡೆಗಳು:

“ಪ್ರಕರಣ ಬೆಳಕಿಗೆ ಬರುತ್ತಲೇ ಎಸ್ಪಿ ಸಂತೋಷ್ ತಮ್ಮ ಕೆಳಗೆ ಕೆಲಸ ಮಾಡುತ್ತಿದ್ದ ಕಲ್ಲಪ್ಪ ಅವರನ್ನು ಕರೆದು ಮಾತನಾಡಲಿಲ್ಲ. ಅವರಿಂದ ವಿವರಣೆಯನ್ನು ಕೇಳಲಿಲ್ಲ. ಬದಲಿಗೆ ಎಲ್ಲಾ ಅಧಿಕಾರಿಗಳ ಸಭೆ ಕರೆದು, ಎಲ್ಲರೆದುರೇ ಕಲ್ಲಪ್ಪ ಅವರನ್ನು ಅವಮಾನ ಮಾಡಿದರು. ಜತೆಗೆ, ಕಲ್ಲಪ್ಪ ಅವರನ್ನು ಆರೋಪಿಯನ್ನಾಗಿ ಮಾಡಿ ಪ್ರಥಮ ಮಾಹಿತಿ ವರದಿಯನ್ನೂ ದಾಖಲಿಸಿದರು. ಇದು ಕಲ್ಲಪ್ಪ ಆತ್ಮಹತ್ಯೆಗೆ ಮೂಲ ಕಾರಣ ಎಂದು ತಿಳಿದು ಬಂದಿದೆ,’’
ಸಿಐಡಿ ಮೂಲಗಳು.

ಇಡೀ ಪ್ರಕರಣದಲ್ಲಿ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಸಂತೋಷ್ ಬಾಬು ಅವರ ನಡೆಗಳ ಕುರಿತು ಸಿಐಡಿ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕಿದ್ದಾರೆ. ತೇಜಸ್ ಗೌಡ ಅಪಹರಣಕಾರರಿಗೆ ಹತ್ತು ಲಕ್ಷ ರೂಪಾಯಿ ನೀಡಿ ಹೊರಬಂದಿದ್ದ. ಈ ಹಣವನ್ನು ತೇಜಸ್ ಸ್ನೇಹಿತನಿಂದ ಪಡೆದುಕೊಂಡವರು ಅಧಿಕಾರಿ ಕಲ್ಲಪ್ಪ ಎಂಬುದು ಪ್ರಕರಣದ ತಿರುಳು. ಈ ಸಮಯದಲ್ಲಿ ಕಲ್ಲಪ್ಪ ಜತೆ ತೇಜಸ್ ಸ್ನೇಹಿತ ಪವನ್ ನಡೆಸಿದ ದೂರವಾಣಿ ಮಾತುಕತೆಯನ್ನು ರೆಕಾರ್ಡ್ ಮಾಡಿಕೊಂಡಿದ್ದ. ಇದನ್ನು ಮೊದಲು ತೆಗೆದುಕೊಂಡು ಚಿಕ್ಕಮಗಳೂರು ಶಾಸಕ ಸಿ. ಟಿ. ರವಿಗೆ ತಲುಪಿಸಲಾಗಿತ್ತು. ಅಲ್ಲಿನ ಐಬಿಯಲ್ಲಿದ್ದ ಅವರು, ಎಸ್ಪಿ ಜತೆ ಮಾತುಕತೆ ಮಾಡಿದ್ದರು ಎಂಬ ಮಾಹಿತಿ ಪ್ರಕರಣದ ಆರಂಭದಲ್ಲಿಯೇ ಹೊರಬಿದ್ದಿತ್ತು.

ಶಾಸಕರ ನೆರವಿಲ್ಲ:

“ನಮ್ಮ ಸಂಘಟನೆಯ ಕೆಲವರನ್ನು ಪೊಲೀಸರು ಟಾರ್ಗೆಟ್ ಮಾಡುತ್ತಿದ್ದಾರೆ. ಆದರೆ ಈವರೆಗೂ ಶಾಸಕ ಸಿ. ಟಿ. ರವಿ ಅವರ ನೆರವನ್ನು ಕೇಳಿಲ್ಲ. ಅವರು ಪ್ರಕರಣದಿಂದ ದೂರು ಸರಿದ ಹಾಗೆ ಕಾಣಿಸುತ್ತಿದೆ,’’
ಭಜರಂಗದಳದ ಕಾರ್ಯಕರ್ತನ ಹೇಳಿಕೆ.

ಇದೀಗ ಚಿಕ್ಕಮಗಳೂರಿನಲ್ಲಿ ಪ್ರವೀಣ್ ಖಾಂಡ್ಯನ ಜತೆಗಾರರ ಬಂಧನಗಳು ನಡೆಯುತ್ತಿವೆ. ತೇಜಸ್ ಗೌಡನ ಅಪಹರಣದಿಂದ ಪಡೆದ ಹಣ ಇದೇ ಪ್ರದೀಪ್ ಬಳಿ ಇತ್ತು ಎಂಬ ಆರೋಪದ ಮೇಲೆ ಬಂಧನ ನಡೆಸಲಾಗಿದೆ ಎಂಬುದು ಮಾಹಿತಿ. ಭಜರಂಗದಳದ ಒಳಗೆ ನಡೆಯುತ್ತಿರುವ ಈ ಸಂಚಲನಗಳ ಕುರಿತು ಶಾಸಕ ಸಿ. ಟಿ. ರವಿ ಅವರನ್ನು 'ಸಮಾಚಾರ' ಸಂಪರ್ಕಿಸಿತಾದರೂ, ಅವರಿಂದ ಪ್ರತಿಕ್ರಿಯೆ ಲಭ್ಯವಾಗುವ ಮೊದಲೇ ದೂರವಾಣಿ ಕರೆ ಸಂಪರ್ಕ ಸ್ಥಗಿತಗೊಂಡಿತು.

“ಪ್ರದೀಪ್ ಮಲ್ಲಂದೂರು ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. 20 ವರ್ಷ ಭಜರಂಗದಳಕ್ಕಾಗಿ ಕೆಲಸ ಮಾಡಿ, ಇದೀಗ ಜೀವನದಲ್ಲಿ ಸೆಟಲ್ ಆಗಬೇಕು ಅಂತಿದ್ದರು. ಮದುವೆಗೆ ಹುಡುಗಿ ಹುಡುಕುತ್ತಿದ್ದರು. ಆದರೆ, ಅವರನ್ನೇ ಪೊಲೀಸರು ಬಂಧಿಸಿದ್ದಾರೆ. ಈ ಸಮಯದಲ್ಲಿ ಏನು ಮಾಡಬೇಕು ತೋಚುತ್ತಿಲ್ಲ,’’
ಭಜರಂಗದಳದ ಮತ್ತೊಬ್ಬ ಕಾರ್ಯಕರ್ತನ ಹೇಳಿಕೆ.

ಬುಧವಾರದ ಬೆಳವಣಿಗೆ:

ಪ್ರಕರಣದ ಮೊದಲ ಆರೋಪಿ ಅಭಿಜಿತ್ ಅಲಿಯಾಸ್ ಅಭಿಲಾಷ್‍ನನ್ನು ಮಂಗಳವಾರ ತಡರಾತ್ರಿ ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಸಿಐಡಿ ಪ್ರಕಟಣೆ ತಿಳಿಸಿದೆ. ಅಭಿಜಿತ್‍ನನ್ನು ತೀವ್ರ ವಿಚಾರಣೆಗೆ ಒಳಪಡಿಸಿರುವ ಪೊಲೀಸರು ಬುಧವಾರ ಚಿಕ್ಕಮಗಳೂರಿಗೆ ಕರೆತಂದಿದ್ದಾರೆ. ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಹಾಗೂ ಸಿಐಡಿ ಎಡಿಜಿಪಿ ಪ್ರತಾಪ ರೆಡ್ಡಿ ನೇತೃತ್ವದಲ್ಲಿ ಪ್ರತ್ಯೇಕವಾಗಿ ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಇದೆ. ಜೂನ್ 28ರಂದು ಚಿಕ್ಕೊಳಲೆ ಎಸ್ಟೇಟ್‍ವೊಂದರಲ್ಲಿ ನಡೆದ ಜೂಜು ಪ್ರಕರಣದ ಆರೋಪಿಯಾದ ತೇಜಸ್ ಗೌಡನಿಗೆ ಜಾಮೀನು ನೀಡಿ ಬಿಡುಗಡೆ ಮಾಡಲು ಅಭಿಜಿತ್ ನೆರವಾಗಿದ್ದ. ಅಂದೇ ನಡುರಾತ್ರಿ ಸಂಚು ರೂಪಿಸಿ ತೇಜಸ್‍ನನ್ನು ಅಪಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂಬುದು ಆರೋಪ.