samachara
www.samachara.com
72 ಗಂಟೆಗಳಲ್ಲಿ 22 ಬಲಿ: ಕಾಶ್ಮೀರಾದಲ್ಲಿ ಮುಂದುವರಿದ ಜನ- ಸೇನೆ ಮುಖಾಮುಖಿ
ಸುದ್ದಿ ಸಾಗರ

72 ಗಂಟೆಗಳಲ್ಲಿ 22 ಬಲಿ: ಕಾಶ್ಮೀರಾದಲ್ಲಿ ಮುಂದುವರಿದ ಜನ- ಸೇನೆ ಮುಖಾಮುಖಿ

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಕಣಿವೆ ರಾಜ್ಯದಲ್ಲಿ

 ಭುಗಿಲೆದ್ದ ಹಿಂಸಾಚಾರ 72 ಗಂಟೆಗಳು ಕಳೆದ ನಂತರವೂ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ.

ಮೂರನೇ ದಿನವಾದ ಸೋಮವಾರವೂ ಪ್ರತಿಭಟನಾಕಾರರು ಮತ್ತು ರಕ್ಷಣಾ ಪಡೆಗಳ ನಡುವೆ ಘರ್ಷಣೆ ಮುಂದುವರಿದಿದೆ. ಈವರೆಗೆ ಸತ್ತವರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೇರಿದ್ದ ಕರ್ಫ್ಯೂ ರೀತಿಯ ನಿರ್ಬಂಧವ್ನು ಅನಿರ್ಧಿಷ್ಟಾವಧಿಗೆ ಮುಂದೂಡಲಾಗಿದೆ.

ಶನಿವಾರ ಹಿಂಸಾಚಾರಕ್ಕೆ ಒಟ್ಟು 12 ಜನ ಸಾವನ್ನಪ್ಪಿದ್ದರೆ, ಭಾನುವಾರ ಬೆಳಗ್ಗೆಯಿಂದ ಇಲ್ಲೀವರಗೆ 10 ಜನ ಅಸುನೀಗಿದ್ದಾರೆ. ಸಾವಿಗೀಡಾದವರಲ್ಲಿ ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದಾರೆ. ಗುಂಪೊಂದು ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ್ದರೆ, ಉಳಿದವರೆಲ್ಲ ಸೇನೆಯ ಗುಂಡಿನ ದಾಳಿಗೆ ಸಾವನ್ನಪ್ಪಿದ್ದಾರೆ. ಸದ್ಯ ಹಿಂಸಾಚಾರ ಮುಂದುವರಿದಿದ್ದು ನಿಯಂತ್ರಣಕ್ಕೆ ಬರುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ.

ಇಲ್ಲೀವರೆಗೆ ಒಟ್ಟು 250 ಜನ ಗಾಯಗೊಂಡಿದ್ದು ಕಣಿವೆ ರಾಜ್ಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ.

ಶುಕ್ರವಾರ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಗೆ ಸೇರಿದ ಕೋಕೆರ್‌ ನಾಗ್‌ ಪ್ರದೇಶದಲ್ಲಿ ಹಿಜ್ಬುಲ್‌ ಮುಜಾಹಿದ್ದಿನ್‌ ಕಮಾಂಡರ್ ಬುರ್ಹಾನ್‌ ವನಿಯನ್ನು ಎನ್‍ಕೌಂಟರ್ನಲ್ಲಿ ಹೊಡೆದುರುಳಿಸಿಲಾಗಿತ್ತು. ಈತನೊಂದಿಗೆ ಇನ್ನೂ ಇಬ್ಬರು ಬಂಡುಕೋರರನ್ನು ಎನ್ಕೌಂಟರ್ನಲ್ಲಿ ಕೊಲ್ಲಲಾಯಿತು. ಇದಾದ ಬೆನ್ನಿಗೆ ರಾಜ್ಯದಾದ್ಯಂತ ಪ್ರತಿಭಟನೆಗಳು ಎದ್ದಿದ್ದವು. ಪ್ರತಿಭಟನೆಗಳು ನಿಧಾನವಾಗಿ ಹಿಂಸಾಚಾರಕ್ಕೆ ತಿರುಗುತ್ತಿದ್ದಂತೆ ಶ್ರೀನಗರದ ಕೆಲವು ಭಾಗಗಳಲ್ಲಿ ಕರ್ಫ್ಯೂ ರೀತಿಯ ನಿರ್ಬಂಧಗಳನ್ನು ಹೇರಲಾಗಿತ್ತು. ಜೊತೆಗೆ ಅಮರನಾಥ ಯಾತ್ರೆಯನ್ನೂ ಸ್ಥಗಿತಗೊಳಿಸಲಾಗಿತ್ತು.

ಇನ್ನು ಹಿಂಸಾಚಾರ ಭುಗಿಲೇಳುತ್ತಿದ್ದಂತೆ ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಇಂಟರ್ನೆಂಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಜಾಲ ತಾಣ ಸೇರಿದಂತೆ ಇತರೆಡೆಗಳಿಂದ ಸುಳ್ಳು ಸುದ್ದಿ ಹಬ್ಬಿಸುವರ ಮೇಲೆ ಸೇನಾಪಡೆಗಳು ಕಣ್ಣಿಟ್ಟಿವೆ.

ಕರ್ಪ್ಯೂ ಮುಂದುವರಿಕೆ:

ಶುಕ್ರವಾರದಿಮದ ಹೇರಲಾಗಿದ್ದ ಕರ್ಫ್ಯೂ ರೀತಿಯ ನಿಷೇದಾಜ್ಞೆಯನ್ನು ಶ್ರೀನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮುಂದುವರಿಸಲಾಗಿದೆ. ಹೆಚ್ಚಿನ ಸೇನಾ ಪಡೆಗಳನ್ನು ಕಾಶ್ಮೀರದ ಹಿಂಸಾಚಾರ ಪೀಡಿತ ಸೂಕ್ಷ್ಮ ಪ್ರದೇಶಗಳಿಗೆ ಕಳುಹಿಸಲಾಗಿದೆ.

ಪ್ರತಿಭಟನೆಗಳಿಗೆ ಬ್ರೇಕ್ ಹಾಕಲು ಪ್ರತ್ಯೇಕತಾವಾದಿ ನಾಯಕರನ್ನು ಗೃಹ ಬಂಧನ ಮುಂದುವರಿದಿದೆ. ಪ್ರಮುಖ ಪ್ರತ್ಯೇಕತಾವಾದಿ ನಾಯಕರಾದ ಸೈಯದ್ ಅಲಿ ಶಾ ಗಿಲಾನಿ, ಮಿರ್ವಾಯಿಝ್ ಉಮರ್ ಫಾರೂಕ್ ಮತ್ತು ಮೊಹಮ್ಮದ್ ಯಾಸೀನ್ ಮಲಿಕ್ ಶುಕ್ರವಾರ ರಾತ್ರಿಯಿಂದ ಗೃಹ ಬಂಧನಕ್ಕೆ ಗುರಿಯಾದವರಲ್ಲಿ ಸೇರಿದ್ದಾರೆ.

ಬಂದ್ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಮತ್ತು ಹಿಂಸಾಚಾರದ ಭೀತಿಯಿಂದ ಕಾಶ್ಮೀರದಾದ್ಯಂತ ಅಂಗಡಿ ಮುಗ್ಗಟ್ಟುಗಳ ಬಾಗಿಲು ಮುಚ್ಚಿವೆ. ಪೆಟ್ರೋಲ್ ಪಂಪ್, ಖಾಸಗಿ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸರಕಾರಿ ಕಚೇರಿಗಳು ಮತ್ತು ಬ್ಯಾಂಕ್ಗಳು ಮಾತ್ರ ತೆರೆದಿದ್ದು ಜನಸಂಚಾರ ವಿರಳವಾಗಿದೆ.

ಸರಕಾರಿ ವಾಹನಗಳೂ ರಸ್ತೆಗೆ ಇಳಿದಿಲ್ಲ ಆದರೆ ಅಲ್ಲಲ್ಲಿ ಆಟೋ ರಿಕ್ಷಾಗಳು ಮತ್ತು ಖಾಸಗೀ ವಾಹನಗಳ ಸಂಚಾರವಿದೆ. ಬೇಸಿಗೆ ರಜೆ ಇರುವುದರಿಂದ ಶಾಲೆ ಕಾಲೇಜುಗಳು ಎಂದಿನಂತೆ ತೆರೆದಿಲ್ಲ. ಇಂದಿಗೆ ನಿಗದಿಯಾಗಿದ್ದ ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಇದೇ ವೇಳೆ ಕಾಶ್ಮೀರ ಶಿಕ್ಷಣ ಇಲಾಖೆಯೂ ಪರೀಕ್ಷೆ ಮುಂದೂಡಿದೆ.

ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ ಸದ್ಯದ ಸ್ಥಿತಿಗತಿಗಳ ಪರಾಮರ್ಶೆಗಾಗಿ ಜಮ್ಮು ಮತ್ತು ಕಾಶ್ಮೀರ ಸರಕಾರ ವಿಶೇಷ ಕ್ಯಾಬಿನೆಟ್ ಸಭೆಯನ್ನು ಭಾನುವಾರ ನಡೆಸಿದೆ. ಸಭೆ ನಂತರ ಮಾತನಾಡಿದ ಸರಕಾರಿ ವಕ್ತಾರ, ಕ್ಯಾಬಿನೆಟ್ ಸಭೆಯಲ್ಲಿ ಎರಡು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರ ಮತ್ತು ಸಾವಿನ ಬಗ್ಗೆ ತೀವ್ರ ಕಾಳಜಿ ವ್ಯಕ್ತವಾಯಿತು ಎಂದು ತಿಳಿಸಿದ್ದಾರೆ.

ಚಿತ್ರ ಕೃಪೆ: ಇಂಡಿಯನ್ ಎಕ್ಸ್ ಪ್ರೆಸ್